ದ್ರಾವಿಡ್, ಅಹಂನಿಂದ ಆಚೆ ನಿಂತ ಕಲಾತ್ಮಕ ಗೋಡೆ !
ಸಕಾಲಿಕ
ಎಲ್‌.ಪಿ.ಕುಲಕರ್ಣಿ
ದ್ರಾವಿಡ್ ಕೋಚ್ ಆಗಿದ್ದನ್ನು ಸಂಭ್ರಮಿಸಲು ಕೇವಲ ಅವರು ಕನ್ನಡಿಗರೆಂಬುದಷ್ಟೇ ಕಾರಣವಲ್ಲ. ಅನುಭವ, ವ್ಯಕ್ತಿತ್ವ, ಆಟದ ಕೌಶಲ, ಪರಿಣತಿ,ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಅವರಿಗಿರುವ ಗೌರವ…ಹೀಗೆ ಯಾವುದೇ ದೃಷ್ಟಿಯಿಂದಲೂ ರಾಹುಲ್ ಆಯ್ಕೆ ಸಂಭ್ರಮದ್ದೇ.
ಸರಳತೆ, ಸನ್ನಡತೆಯವರೆಲ್ಲ ಕ್ರಿಕೆಟ್‌ನಲ್ಲಿ ಗೆದ್ದಿದ್ದಾರೆ. ಅಥವಾ ಕ್ರಿಕೆಟ್‌ನಲ್ಲಿ ಗೆದ್ದವರದೆಲ್ಲ ಇದೇ ವ್ಯಕ್ತಿತ್ವ. ಕ್ರೀಡಾ ಪ್ರೇಮಿಗಳ ಮನದಲ್ಲಿ ದರ್ಶಪ್ರಾಯರಾಗಿ ನಿಂತವರೆನ್ನೆಲ್ಲ ಒಮ್ಮೆ ಗಮನಿಸಿ, ಮಾಜಿ ನಾಯಕ ಕಪಿಲ್ ದೇವ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಕೀನ್ಯದಂತ ಕೀನ್ಯವನ್ನೇ ಸೆಮಿಫೈನಲ್ವರೆಗೆ ತಂದು ನಿಲ್ಲಿಸಿದ ನಮ್ಮ ಸಂದೀಪ್ ಪಾಟಿಲ್… ಪಟ್ಟಿ ಮುಂದುವರಿಯುತ್ತದೆ. ಇಂತಹ ಎಲ್ಲ ದಿಗ್ಗಜರ ಸಾಲಿನಲ್ಲಿ ನಿಲ್ಲುವವರು ನಮ್ಮ ಕನ್ನಡಿಗ, ಶ್ರೇಷ್ಠ ಬ್ಯಾಟ್ಸ್‌ಮನ್ಹಾಗೂ ಭಾರತೀಯ ಕ್ರಿಕೇಟ್ ತಂಡದ ಮಾಜಿ ನಾಯಕ ಕೂಡ ಆಗಿದ್ದ, ರಾಹುಲ್ ದ್ರಾವಿಡ್.
ಗೋಡೆ ಖ್ಯಾತಿಯ, ಮನಸೆಳೆವ ಆಟಗಾರರಾಗಿದ್ದ ದ್ರಾವಿಡ್ ಈಗ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತು ದಾರ. ಬಹಳ ದಿನಗಳ ಬಳಿಕ ಬಿಸಿಸಿಐ ಒಂದೊಳ್ಳೆಯ ನಿರ್ಧಾರ ಕೈಗೊಂಡಿದೆ. ಸದ್ಯ, ಈ ಸ್ಥಾನದಲ್ಲಿ ಮಾಜಿ ಕ್ರಿಕೇಟಿಗ ರವಿ ಶಾಸ್ತ್ರ ಇದ್ದಾರೆ. ಟಿ೨೦ ವಿಶ್ವಕಪ್ ಬಳಿಕ ಅವರ ಕೋಚಿಂಗ್ ಗುತ್ತಿಗೆ ಅವಧಿ ಅಂತ್ಯವಾಗಲಿದೆ. ಅದಾದ ಬಳಿಕ ಅವರು ಕೋಚ್ ಆಗಿ ಮುಂದುವರಿಯುವ ಇಚ್ಛೆ ತೋರಿಲ್ಲ. ಅವರ ಸ್ಥಾನ ತುಂಬಲು ಬಿಸಿಸಿಐ ಇದೇ ಅಕ್ಟೋಬರ್ ೨೬ ರಂದು ಅರ್ಜಿಗಳನ್ನು ಆಹ್ವಾನಿಸಿತ್ತು. ಮುಂದಿನದೆಲ್ಲ ಎಂದಿನ ಪ್ರಕ್ರಿಯೆ. ಅವೆಲ್ಲವೂ ಮುಗಿದು ಇದೀಗ ರಾಹುಲ್ ದ್ರಾವಿಡ್ ಕೋಚ್ ಹುದ್ದೆ ಅಲಂಕರಿಸಲಿದ್ದಾರೆ.
2019 ರಲ್ಲಿ ದ್ರಾವಿಡ್ ರನ್ನು ರಾಷ್ಟ್ರೀಯ ಕ್ರಿಕೇಟ್ ಅಕಾಡೆಮಿಯ ಮುಖ್ಯಸ್ಥರನ್ನಾಗಿಯೂ ನೇಮಿಸಲಾಗಿತ್ತು. ಈ ಹಿಂದೆ ಅವರು ಭಾರತ ಎಲ್ಲಾ ಮತ್ತು 19 ವರ್ಷ ದೊಳಗಿನವರ ತಂಡಗಳಿಗೆ ಮುಖ್ಯ ಕೋಚ್ ಕೂಡ ಆಗಿದ್ದರು. ಇವಿಷ್ಟು ಅವರ ಪ್ರವರವಾಯಿತು. ದ್ರಾವಿಡ್ ಕೋಚ್ ಆಗಿದ್ದನ್ನು ಸಂಭ್ರಮಿಸಲು ಕೇವಲ ಅವರು ಕನ್ನಡಿಗ ರೆಂಬುದಷ್ಟೇ ಕಾರಣವಲ್ಲ. ಅನುಭವ, ವ್ಯಕ್ತಿತ್ವ, ಆಟದ ಕೌಶಲ, ಪರಿಣತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿ ಗಿರುವ ಗೌರವ…ಹೀಗೆ ಯಾವುದೇ ದೃಷ್ಟಿಯಿಂದಲೂ ರಾಹುಲ್ ಆಯ್ಕೆ ಸಂಭ್ರಮದ್ದೇ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಅಮೋಘ ಸಾಧನೆಯ ಹಿನ್ನೆಲೆಯನ್ನು ಪರಿಗಣಿಸಿ, ಅವರನ್ನು ಐಸಿಸಿ ‘ಹಾಲ್ ಆಫ್ ಫೇಮ್’ಗೆ ಸೇರ್ಪಡೆಗೊಳಿಸಿದೆ. ಕ್ರಿಕೆಟ್ ಜಗತ್ತಿನಲ್ಲಿ ಇದೊಂದು ಅದ್ವಿತೀಯ ಗೌರವ. ೨೦೧೮ರ ದ್ವಿತಿಯಾರ್ಧದಲ್ಲಿ ನಡೆದ ವೆಸ್ಟಿಂಡೀಸ್ ಜತೆಗಿನ ಐದನೇ ಪಂದ್ಯಕ್ಕೂ ಮೊದಲು ಸುನಿಲ್ ಗವಾಸ್ಕರ್, ದ್ರಾವಿಡ್‌ಗೆ ‘ಹಾಲ್ ಆಫ್ ಫೇಮ್’ನ ಅಧಿಕೃತ ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಿದ್ದರು. ‘ಹಾಲ್ ಆಫ್ ಫೇಮ್’ ಗೌರವ ಪಡೆದ ಐದನೇ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೆ ದ್ರಾವಿಡ್ ಭಾಜನರು. ಬಿಶನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ, ಹಾಗೂ ಅನಿಲ್ ಕುಂಬ್ಳೆ ನಂತರ ಈ ಗೌರವಕ್ಕೆ ಪಾತ್ರರಾದವರು ನಮ್ಮ ರಾಹುಲ್ ದ್ರಾವಿಡ್. ರಾಹುಲ್ ಜತೆ ಆಸ್ಟ್ರೇಲಿಯಾದಿಂದ ಈ ಗೌರವಕ್ಕೆ ಪಾತ್ರರಾಗಿದ್ದ ರಿಕಿ ಪಾಂಟಿಂಗ್, ಆದೇಶದ ೨೫ನೇ ಕ್ರೀಡಾ ಪಟು.
ಅಲ್ಲದೆ ಇಂಗ್ಲೆಂಡ್ ಮಹಿಳಾ ತಂಡದ ಮಾಜಿ ವಿಕೆಟ್ ಕೀಪರ್ ಕ್ಲ್ಯಾರಿ ಟೇಲರ್ ಸಹ ಇದೇ ಸಂದರ್ಭ ಈ ಗೌರವಕ್ಕೆ ಪಾತ್ರರಾಗಿದ್ದರು. ‘ದಿಗ್ಗಜರ ಸಾಲಿಗೆ ಸೇರ್ಪಡೆಗೊಳ್ಳುತ್ತಿರುವ ಇಂಥ ಕ್ಷಣ ನನ್ನ ಪಾಲಿಗೆ ಅತಿದೊಡ್ಡ ಗೌರವ’ ಎಂದು ದ್ರಾವಿಡ್ ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದರು. ಇದರ ಹೊರತಾಗಿಯೂ ಹೊಸ ತಲೆಮಾ ರನ್ನು ಪ್ರಭಾವಿಸುವ ಮುಖ್ಯ ಪ್ರೇರಕ ಶಕ್ತಿಯಾಗಿ ರಾಹುಲ್ ದ್ರಾವಿಡ್ ಹೊರಹೊಮ್ಮಿದ್ದ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿರುವುದಕ್ಕೆ ಕಾರಣ. ರಾಹುಲ್ ದ್ರಾವಿಡ್ ನಿಧಾನಗತಿಯ ಆಟಗಾರ ನೆಂಬ ಕಾರಣಕ್ಕೆ ಹಲವು ಬಾರಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಗಳಿಸಿದ ರನ್‌ಗಳ ಮೊತ್ತ, ದೊಡ್ಡ ಪರ್ವ ತವೇ.
ಪ್ರಚಾರದ ಹಂಗಿಗೆ ಹೋಗದೇ, ಅಬ್ಬರಕ್ಕೆ ಅವಕಾಶ ಕೊಡದೇ ತಾಳ್ಮೆಯಿಂದ ಆಡಿ ನಡೆದದ್ದು ಅವರ ಹೆಗ್ಗಳಿಕೆ. ಅವರು 164 ಟೆಸ್ಟ್‌ಗಳಲ್ಲಿ 13,228 ರನ್, ಮತ್ತು 344 ಏಕದಿನ ಪಂದ್ಯಗಳಲ್ಲಿ 10,889 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ! ಇನ್ನು ವ್ಯಕ್ತಿಯಾಗಿ ನೋಡ ಹೊರಟರೆ, ಕ್ರಿಕೆಟ್‌ನಲ್ಲಿ ದ್ರಾವಿಡ್ ಎಂದರೆ ಸಾಕು ನಮಗೆ ಅವರೊಬ್ಬ ಜಂಟಲ್ ಮನ್, ಸೌಮ್ಯ ಸ್ವಭಾವದ, ಮೃದು-ಮಿತ ಭಾಷೆಯ, ವಿವಾದಗಳಿಲ್ಲದ, ಅಪಾರ ತಾಳ್ಮೆಯ, ಶಿಸ್ತಿನ, ಒಬ್ಬ ಶ್ರೇಷ್ಠ ಆಟಗಾರ. ಆಟದ ವಿಚಾರದಲ್ಲೂ ಅಷ್ಟೆ ಕಲಾತ್ಮಕ ಶೈಲಿಯ ಬ್ಯಾಟಿಂಗ್‌ಗೆ ಹೆಸರಾದ, ತಂಡಕ್ಕಾಗಿ ಶ್ರಮಿಸುವ, ದೇಶಕ್ಕಾಗಿ ಆಡುವ ತನ್ನ ಜವಾಬ್ದಾರಿಯನ್ನೆಂದೂ ಮರೆಯದ ಆಟಗಾರ. ಗೆದ್ದಾಗ ಹಾರಾಡದೇ ಸೋತಾಗ ಕುಗ್ಗದ ಒಬ್ಬ ಸ್ಥಿತಪ್ರಜ್ಞ ಮೂರ್ತಿ. ತಾವೊಬ್ಬ ‘ಸ್ಟಾರ್’ ಎಂಬ ಅಹಂ ನಿಂದ ಆಚೆ ನಿಂತವರು. ಹೀಗಾಗಿ ರಾಹುಲ್ ದ್ರಾವಿಡ್‌ರ ಆಟ ಮತ್ತು ಅವರು ಮೈಗೂಡಿಸಿಕೊಂಡ ವಿನಯಶೀಲ ವ್ಯಕ್ತಿತ್ವವೇ ಅವರನ್ನು ಇಷ್ಟು ಎತ್ತರಕ್ಕೆ ತಂದುನಿಲ್ಲಿಸಿದೆ.
ಗೊತ್ತೇ ಇದೆ, ದ್ರಾವಿಡ್‌ರನ್ನು ಕ್ರಿಕೆಟ್ ಜಗತ್ತು ‘ದಿ ವಾಲ್’ ಎಂದು ಕರೆಯುತ್ತದೆ. ಅಂದರೆ ಪಿಚ್‌ನಲ್ಲಿ ಸುಲಭಕ್ಕೆ ವಿಕೆಟ್ ಒಪ್ಪಿಸದೇ, ಬಹಳ ಹೊತ್ತಿನವರೆಗೆ ತಾಳ್ಮೆ ಯಿಂದ ಬ್ಯಾಟ್ ಮಾಡುತ್ತ ಎದುರಾಳಿ ತಂಡದ ಆತ್ಮವಿಶ್ವಾವಾಸವನ್ನು ಸದ್ದಿಲ್ಲದೇ ಕಸಿಯುತ್ತಿದ್ದ ವ್ಯಕ್ತಿ. ಇವತ್ತಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಸರಣಿ ಯಲ್ಲಿ, ಎಲ್ಲ ವಿದೇಶಿ ತಂಡಗಳ ವಿರುದ್ಧವೂ ಸೆಂಚುರಿ ಬಾರಿಸಿದ ಏಕೈಕ ಆಟಗಾರ ಎಂಬ ದಾಖಲೆಗೆ ಒಳಗಾದವರು ಇವರೊಬ್ಬರೆ. ಟೆಸ್ಟ್ ಮತ್ತು ಏಕ ದಿನ ಕ್ರಿಕೆಟ್ ಪಂದ್ಯಗಳಲ್ಲಿ ೧೦ ಸಾವಿರ ರನ್ ಗಳಿಸಿರುವ ರಾಹುಲ್ ದ್ರಾವಿಡ್ ಸಾಧನೆಯನ್ನು ಸಾರುವ ‘ಗೋಡೆ’ಯೊಂದನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಮಿಸಿ ಗೌರವಿಸಲಾಗಿದೆ.
೧೦ ಸಾವಿರ ಇಟ್ಟಿಗೆ ಬಳಸಿ ೨೭ ಅಡಿ ಅಗಲ, ೧೫ ಅಡಿ ಎತ್ತರಕ್ಕೆ ನಿರ್ಮಿಸಿರುವ ಗೋಡೆಗೆ ‘ದಿ ವಾಲ್’ ಎಂಬ ಹೆಸರಿಟ್ಟದ್ದು ಅನ್ವರ್ಥ. ಅದರ ಮೇಲೆ ದ್ರಾವಿಡ್‌ರ ಆಟದ ಮೂರು ಗುಣಗಳಾದ ಬದ್ಧತೆ, ದೃಢತೆ, ಹಾಗೂ ಉತ್ಕೃ ಷ್ಟತೆಯನ್ನು ಬಿಂಬಿಸಲಾಗಿದೆ. ಮಗನ ಈ ಸಾಧನೆಯನ್ನು ಮೆಚ್ಚಿದ ದ್ರಾವಿಡ್ ಅವರ ತಾಯಿ ಡಾ.ಪುಷ್ಪಾ ದ್ರಾವಿಡ್ ಈ ಬೃಹತ್ ಕಲಾಕೃತಿಯನ್ನು ರಚಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾ ಜೀವನಕ್ಕೆ ನಿವೃತ್ತಿ ಘೋಷಿಸುತ್ತಿದ್ದಂತೆ ಅವರನ್ನು ಭಾರತದ ೧೯ವರ್ಷದೊಳಗಿ ನವರ ತಂಡದ ಕೋಚ್‌ನ ಗುರುತರ ಹಿzಗೆ ನೇಮಿಸಲಾಯಿತು. ಕೋಚ್ ಹುದ್ದೆಯನ್ನು ಶಿಸ್ತುಬದ್ಧವಾಗಿ ನಿರ್ವಹಿಸಿದ ದ್ರಾವಿಡ್ ಆ ವರ್ಷ ನಡೆದ ‘ಕಿರಿಯರ’ ಕ್ರಿಕೆಟ್ ವಿಶ್ವಕಪ್ ಗೆಲ್ಲುವಲ್ಲಿ ಅದರ ಹಿಂದಿರುವ ಅವರ ಶ್ರಮ ಸ್ಮರಣೀಯ. ಅವರ ಪರಿಶ್ರಮ, ಶಿಸ್ತು, ಶ್ರದ್ಧೆಗಳನ್ನು ಇಡೀ ದೇಶವೇ ಹಾಡಿ ಹೊಗಳಿತ್ತು. ಆ ಸಂದರ್ಭದಲ್ಲಿ ಬಿಸಿಸಿಐ ದ್ರಾವಿಡ್‌ರಿಗೆ ?೫೦ ಲಕ್ಷ, ಉಳಿದ ಆಟಗಾರರಿಗೆ ?೨೦ ಲಕ್ಷ ಬಹುಮಾನ ಘೋಷಿಸಿದಾಗ, ‘ತಂಡದ ಗೆಲುವಿನಲ್ಲಿ ಎಲ್ಲರದೂ ಸಮಾನ ಪಾಲಿದೆ, ಎಲ್ಲರಿಗೂ ಸಮನಾಗಿ ಹಣ ಹಂಚಿ’ ಎಂದು ಬಿಸಿಸಿಐಗೆ ವಿನಂತಿಸಿಕೊಳ್ಳುವ ಮೂಲಕ ಸಮಾನತೆಯ ಪಾಠ ಮಾಡಿದ್ದರು ದಿ ಗ್ರೇಟ್ ವಾಲ್.
ಪರಿಣಾಮ ಯುವ ಆಟಗಾರರ ಕಣ್ಣಲ್ಲಿ ನಿಜವಾದ ಹೀರೋ ಆಗಿದ್ದಲ್ಲದೇ ತಮ್ಮ ಆದರ್ಶದಿಂದ ಕಂಗೊಳಿಸಿದ್ದರು. ದ್ರಾವಿಡ್ ತಮ್ಮ ಮಕ್ಕಳ ಶಾಲೆಯ ವಿಜ್ಞಾನ ವಸ್ತುಪ್ರದರ್ಶನವೊಂದರಲ್ಲಿ ,ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ನಿಂತದ್ದು, ‘ನಾನು ಅಲ್ಲಿ ಒಬ್ಬ ಪೋಷಕ ಅಷ್ಟೆ’ ಎಂದದ್ದು ಅವರ ಸರಳತೆಗೆ ಹಿಡಿದ ಕೈಗನ್ನಡಿ. ದ್ರಾವಿಡ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದ ‘ಸೇಡಿಗಾಗಿ ನೀವು ಆಡಬೇಕಿಲ್ಲ, ಗೌರವ – ಹೆಮ್ಮೆಯ ಸಲುವಾಗಿ ಆಟವಾಡಿ’ ಎಂಬ ಮಾತನ್ನು ಮೆಚ್ಚಿದ ಖ್ಯಾತ ವಿಶ್ವ ಕುಸ್ತಿ ಚಾಂಪಿಯನ್ ‘ಜಾನ್ ಸೀನಾ’ ತಮ್ಮ ವಾಲ್‌ನಲ್ಲಿ ಶೇರ್ ಮಾಡಿದ್ದರು.
ಇದು ಜಗತ್ತಿನಾದ್ಯಂತ ಸುದ್ದಿಯಾಗಿ,ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದನ್ನು ಮರೆಯಲು ಸಾಧ್ಯವೇ?! ಆದರೆ, ಇತ್ತೀಚಿನ ದಿನಗಳಲ್ಲಿ ಮೌಲ್ಯಗಳು ಕುಸಿಯುತ್ತಿವೆ, ಐಪಿಎಲ್ ಬಂದಿಂದಂತೂ ಕ್ರಿಕೆಟ್ ಮೊದಲಿನ ಹಾಗೆ ಒಂದು ಸಭ್ಯರ ಆಟವಾಗಿ ಉಳಿದಿಲ್ಲ. ಬದಲಾಗಿ ಹಣ- ಕೀರ್ತಿಗಳನ್ನು ಗಳಿಸುವ ವ್ಯವಹಾರವಾಗಿ ಬದಲಾಗಿದೆ. ಕ್ರಿಕೆಟ್ ಆಟಗಾರ ರನ್ ಹೊಳೆ ಹರಿಸುವ, ಹೆಚ್ಚು ವಿಕೆಟ್ ಉರುಳಿಸುವ ಕ್ರೀಡಾಂಗಣದೊಳಗಣ ಮಷಿನ್ ಆಗಿದ್ದಾನೆ. ಹಣದ ದುರಾಶೆಗೆ, ಖ್ಯಾತಿಯ ಗೀಳಿಗೆ ಸಿಲುಕಿ ತನ್ನ ನಿರ್ದಿಷ್ಟ ಪರಿಧಿಯ ಮೌಲ್ಯಗಳನ್ನು ಗಾಳಿಗೆ ತೂರುತ್ತಿದ್ದಾನೆ. ಸಂಯಮವೇ ಸಂಸ್ಕೃತಿಯೆಂಬುದನ್ನು ಮರೆತ ಕ್ರೀಡಾ ಪ್ರೇಕ್ಷಕರು ಹುಚ್ಚು ಅಭಿಮಾನಿಗಳಾಗುತ್ತಿದ್ದಾರೆ.
ಗೆದ್ದರೆ ಹೊಗಳುವ, ಸೋತರೆ ಕೆರಳುವ ಪ್ರೇಕ್ಷಕ, ಅದು ಆಟ, ಅದರಲ್ಲಿ ಸೋಲು-ಗೆಲುವುಗಳು ಸಾಮಾನ್ಯ ಎಂಬ ಸಂಗತಿಯನ್ನು ಮರೆತಿದ್ದಾನೆ. ಇಂತಹ ಒತ್ತಡದಲ್ಲಿ ಆಡಬೇಕಾದ ಆಟಗಾರ ಇಂದು ತನ್ನ ಸಹಜ ಕಲಾತ್ಮಕತೆಯನ್ನು ಮರೆತು, ಹೇಗಾದರೂ ಮಾಡಿ ಪಂದ್ಯ ಗೆಲ್ಲಲೇ ಬೇಕೆಂಬ ಹಟಕ್ಕೆ ಬಿದ್ದು ನೈಜ ಆಟವನ್ನು ದೂರತಳ್ಳಿ ಗೆಲವಿಗೆ ಇರುವ ತಂತ್ರಗಾರಿಕೆಗೆ ಮಾತ್ರ ಮಾರುಹೋಗುತ್ತಿದ್ದಾನೆ. ಆಯ್ಕೆದಾರರು, ಜಾಹೀರಾತುದಾರರು, ಬೆಟ್ಟಿಂಗ್ ಕಟ್ಟುವವರಒತ್ತಡಕ್ಕೆ ಮಣಿದು ಆಟಗಾರ ಇಂದು ತನ್ನ ಜೀವ ಒತ್ತೆಯಿಟ್ಟು ಆಡುತ್ತಿರುವುದು ಮಾತ್ರ ಬಹಳ ಕೆಟ್ಟ ಬೆಳವಣಿಗೆ. ಇಂದು ಆಟಗಾರ ಸರಿಯಾಗಿ ಆಡಿ ಗೆದ್ದರೆ ಹೊಗಳಿಕೆ ಸನ್ಮಾನಗಳ ಜತೆ ತಾನೊಬ್ಬ ಸೆಲೆಬ್ರೆಟಿಯಾಗಿ ಮೆರೆಯುತ್ತಾನೆ. ಇಲ್ಲವಾದರೆ ಆತನ ಮನೆಗೆ ಕಲ್ಲು ಬೀಳುವುದಲ್ಲದೇ ಅವನ ಕುಟುಂಬವೂ ಬೀದಿಪಾಲಾ ಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಎರಡು ವರ್ಷಗಳ ಹಿಂದೆ ನಡೆದ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಚುನಾವಣಾ ಪ್ರಚಾರ ರಾಯಭಾರಿಯನ್ನಾಗಿನೇಮಿಸಿ, ರಾಜ್ಯ ಸರ್ಕಾರ ಅವರಿಗೆ ವಿಶೇಷ ಜವಾಬ್ದಾರಿ ಹೊರಿಸಿ ಗೌರವಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅಲ್ಲದೆ ಕ್ರೀಡಾ ಕ್ಷೇತ್ರದ ತರಬೇತುದಾರರಿಗೆ ನೀಡುವ ಬಹು ದೊಡ್ಡ ದ್ರೋಣಾಚಾರ್ಯ ಪ್ರಶಸ್ತಿಗೆ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆಗೆ ಪರಿಗಣಿಸುವಂತೆ ಶಿಫಾರಸು ಮಾಡಿದ್ದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಮತ್ತೊಂದು ವಿಷಯ!.
ಗೊತ್ತು ‘ಗೋಡೆ’ ಯಾವುದಕ್ಕೂ ವಿಚಲಿತರಾಗುವವರಲ್ಲ. ಅಂಥ ಗೊಡೆಯ ಭಾರತೀಯ ತಂಡ ಸುಭದ್ರತೆ ಪಡೆಯಲಿ. ಅಚ್ಚಳಿಯದ ಇನ್ನಷ್ಟು ಗೌರ್ವದ ಸಂಗತಿ ಗಳು ಅಚ್ಚಾಗಲಿ!