ಸಂತೋಷದ ದಾರಿ ಯಾವುದು ?
ವೇದಾಂತಿ ಹೇಳಿದ ಕತೆ
ಹಾಶ ಹೆಬ್ಬಾರ‍್
ಒಂದು ಹಳ್ಳಿಯಲ್ಲಿ ಒಬ್ಬ ಹಿರಿಯ ವ್ಯಕ್ತಿ ಇದ್ದ. ಅವನದು ಸಂತೃಪ್ತ ಜೀವನ. ಅವನಿಗೆ ಮನೆ ಇತ್ತು, ಜಮೀನು ಇತ್ತು, ಮಕ್ಕಳು ಇದ್ದರು, ಅವರಿಗೆ ಮದುವೆಯಾಗಿತಮ್ಮ ಪಾಡಿಗೆ ಪ್ರತ್ಯೇಕವಾಗಿ ನೆಮ್ಮದಿಯಿಂದ ಇದ್ದರು. ಆದರೆ ಆ ವ್ಯಕ್ತಿ ಮಾತ್ರ ಸದಾ ಗಂಟುಮುಖ ಹಾಕಿಕೊಂಡೇ ಇರುತ್ತಿದ್ದ.
ಪ್ರತಿದಿನ ಊರಿನ ದೇವಾಲಯಕ್ಕೆ ಹೋಗಿ, ದೇವರಿಗೆ ನಮಸ್ಕರಿಸುತ್ತಿದ್ದ. ಆಗಲೂ ಅವನು ಗಂಟು ಮುಖ ಹಾಕಿಕೊಂಡೇ ಹೋಗುತ್ತಿದ್ದ. ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುವಾಗ, ‘ಮಣ ಮಣ’ ಎನ್ನುತ್ತಿದ್ದ. ಅವನು ತನಗೊದಗಿದ ಕಷ್ಟದ ಕುರಿತು ದೇವರಲ್ಲಿ ದೂರು ಹೇಳುತ್ತಿದ್ದ ಎಂದು ಇತರರು ಅಂದುಕೊಂಡಿದ್ದರು. ದಾರಿ ಯಲ್ಲಿ ಯಾರಾದರೂ ಸಿಕ್ಕಿ, ‘ಏನು ಸ್ವಾಮಿ, ಆರೋಗ್ಯವೆ?’ ಎಂದು ವಿಚಾರಿಸಿದರೆ, ‘ಏನು ಆರೋಗ್ಯವೋ ಏನೊ! ನಿನಗೇನು, ನಿನ್ನ ಮಕ್ಕಳು ಎಲ್ಲಾ ದುಡಿದು ತಂದು ಹಾಕುತ್ತಾರೆ. ನನ್ನ ಕಷ್ಟ ನಿನಗೆ ಗೊತ್ತೆ?’ ಎಂದು ಬೈಯುತ್ತಿದ್ದ. ಹೆಚ್ಚು ವಿನಯದಿಂದ ಮಾತನಾಡಿಸಿದಷ್ಟೂ, ಹೆಚ್ಚು ಕೋಪದಿಂದ ಉತ್ತರಿಸುತ್ತಿದ್ದ. ಅವನ ಬಳಿ ಮಾತನಾಡುವುದು ಎಂದರೆ, ಆ ಊರಿನ ಜನರಿಗೆ ಭಯ.
ಅವನ ಬೈಗುಳ ಕೇಳಿ ಜನರು, ಅವನನ್ನು ಕಂಡರೆ ದೂರ ಹೋಗತೊಡಗಿದರು. ಅವನು ದಾರಿಯಲ್ಲಿ ಬರುವುದನ್ನು ಕಂಡ ಕೂಡಲೆ, ಹಳ್ಳಿ ಜನರು ಸಂದಿಗೊಂದಿ ಯಲ್ಲಿ ನುಸುಳುತ್ತಿದ್ದರು. ಇದನ್ನು ಗಮನಿಸಿದ ಆ ವೃದ್ಧ ವ್ಯಕ್ತಿಗೆ ಇನ್ನಷ್ಟು ಕೋಪ ಬಂದು, ದೂರದಿಂದಲೇ ಎಲ್ಲರನ್ನೂ ಸೇರಿಸಿ ಬೈಯುತ್ತಿದ್ದ. ಆ ವೃದ್ಧನಿಗೆ ಎಂಬತ್ತು ವರ್ಷ ವಾಯಿತು. ಎಲ್ಲರನ್ನೂ ಕರೆದು, ‘ನನಗೆ ಎಂಬತ್ತು ವರ್ಷ ಆಗಿದೆ, ಆದ್ದರಿಂದ ಊರಿನವರಿಗೆ ಲಾಡು ಹಂಚುತ್ತೇನೆ’ ಎಂದು ಹೇಳಿ, ತನ್ನ ಮನೆಗೆ ಆಹ್ವಾನಿಸಿದ. ಬಂದವರಿಗೆಲ್ಲಾ ಸಿಹಿ ಹಂಚಿ, ತುಂಬಾ ಸಂತೋಷದಿಂದ ಮಾತನಾಡಿದ. ನಗುನಗುತ್ತಾ, ‘ನಿಮಗೆಲ್ಲರಿಗೂ ಒಳ್ಳೆಯದಾಗಲಿ’ ಎಂದು ಹರಸಿದ.
ಆ ವೃದ್ಧನ ಸಂತಸ ಕಂಡು ಊರಿನವರಿಗೆ ಅಚ್ಚರಿ ಆಯಿತು. ಪ್ರತಿದಿನವೂ ಪಿಟಿ ಪಿಟಿ ಎಂದು ಬೇರೆಯವರನ್ನು ಟೀಕಿಸುತ್ತಿದ್ದ ಈ ವೃದ್ಧ, ಇಂದು ಹೇಗೆ ಇಷ್ಟೊಂದು ಸಂತಸದಿಂದ ಇದ್ದಾನೆ ಎಂದು ವಿಸ್ಮಯಗೊಂಡರು. ಹಳ್ಳಿಯವರು ‘ಏನು ಸ್ವಾಮಿ, ನಿನ್ನೆಯ ತನಕ ನೀವು ಯಾರನ್ನು ಕಂಡರೂ ಬೈಯ್ಯುತ್ತಿದ್ದಿರಿ, ಇವತ್ತು ಇಷ್ಟೊಂದು ಸಂತೋಷದಲ್ಲಿದ್ದೀರಿ. ಇಂತಹ ಬದಲಾವಣೆಗೆ ಕಾರಣ ಏನು ಸ್ವಾಮಿ?’ ಆ ವೃದ್ಧ ವ್ಯಕ್ತಿ ಸಂತೋಷದಿಂದ ನಸುನಗುತ್ತಾ, ‘ಅಂತಹ ವಿಶೇಷ ಏನೂ ಇಲ್ಲ. ನಿನ್ನೆ ರಾತ್ರಿ ಒಂದು ವಿಚಾರ ಮನಸ್ಸಿಗೆ ಬಂತು.
ಕಳೆದ ಎಂಬತ್ತು ವರ್ಷಗಳಿಂದ ನಾನು ಒಂದು ಗುರಿ ಯನ್ನು ನನ್ನ ಜೀವನದಲ್ಲಿ ಹಾಕಿಕೊಂಡಿದ್ದೆ. ಈ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿಯ ಮಾರ್ಗ ಯಾವುದು ಎಂಬುದರ ಬಗ್ಗೆಯೇ ಇಷ್ಟು ವರ್ಷ ಚಿಂತಿಸುತ್ತಾ ಇದ್ದೆ. ನನ್ನ ಜೀವನದಲ್ಲಿ ಸಂತೋಷಪಡಲು ಸುತ್ತಮುತ್ತಲಿನವರು, ಮನೆಯವರು ಸಹಕಾರನೀಡುತ್ತಿಲ್ಲ ಎಂಬುದೇ ನನ್ನ ಚಿಂತೆಯಾಗಿತ್ತು, ಆದ್ದರಿಂದ ಮನೆಯವರ ಮೇಲೆ, ಈ ಹಳ್ಳಿಯ ಜನರ ಮೇಲೆ ಕೋಪ ಬರುತ್ತಿತ್ತು. ‘ನಿನ್ನೆ ರಾತ್ರಿ ಒಂದು ವಿಚಾರ ಹೊಳೆಯಿತು. ಸಂತೋಷವನ್ನು ನಾನು ಅರಸುತ್ತಾ ಹೋದರೂ, ಈ ಎಂಬತ್ತು ವರ್ಷಗಳಲ್ಲಿ ಅದು ನನಗೆ ಸಿಗಲಿಲ್ಲ. ಆದ್ದರಿಂದ ನನ್ನ ಹುಡುಕಾಟ ವ್ಯರ್ಥ.ಇನ್ನುಉಳಿದ ಜೀವನದಲ್ಲಿ ಆ ಕುರಿತು ಚಿಂತಿಸುವುದರಲ್ಲಿ ಉಪಯೋಗ ಇಲ್ಲ ಎನಿಸಿತು.
ನಾನು ಹುಡುಕುತ್ತಿದ್ದ ಸಂತೋಷ ನನಗೆ ಮರೀಚಿಕೆ ಆಗಿದೆ, ಆದ್ದರಿಂದ ಆ ಸಂತೋಷ ಬೇಕಾಗಿಲ್ಲ, ಉಳಿದ ದಿನಗಳಲ್ಲಿ ಏನು ಬೇಕಾದರೂ ಮಾಡುವ ಸ್ವಾತಂತ್ರ್ಯತೆಗೆದುಕೊಳ್ಳಲು ನಿನ್ನೆ ನಿಶ್ಚಯಿಸಿದೆ. ಆದ್ದರಿಂದ ಇವತ್ತು ತುಂಬಾ ಸಂತೋಷ ಆಗುತ್ತಿದೆ.’ ಹಳ್ಳಿಯವರಿಗೆ ಖುಷಿ ಆಯಿತು. ಒಬ್ಬ ಕೇಳಿದ, ‘ಸಂತೋಷವಾಗಿರಲು ನಮಗೂ ಒಂದು ಉಪಾಯ ಹೇಳಿಕೊಡಿ’ ‘ಸಂತೋಷಕ್ಕಾಗಿ ಅರಸುತ್ತಾ, ಚಿಂತಿಸುತ್ತಾ ಕೂರಬೇಡಿ. ಜೀವನವನ್ನು ಚಿಂತೆಯಿಲ್ಲದೇ, ಸುಖವಾಗಿ ಅನುಭವಿಸಿ. ಆಗ ಸಂತೋಷ ಸಿಗುತ್ತೆ’ಎಂದ ಆ ವೃದ್ಧ ನಗುನಗುತ್ತಾ.