ಉಚಿತವಾಗಿ ಬಲೆಗೆ ಬಿದ್ದರೆ, ಮೋಸ ಖಚಿತ !
ಅಭಿಪ್ರಾಯ
ಇಂಧುದರ ಹಳೆಯಂಗಡಿ
ಚುನಾವಣೆಗಳು ಬಂತೆಂದರೆ ಸಾಕು. ದೊಡ್ಡ ದೊಡ್ಡ ಘೋಷಣೆಗಳು ಪ್ರಾರಂಭವಾಗುತ್ತದೆ. ಅದು ಎಷ್ಟರ ಮಟ್ಟಿಗೆ ಕಾರ್ಯ ಸಾಧ್ಯವಾಗಬಲ್ಲದು, ಅದರಿಂದ ಯಾರಿಗೇನು ಪ್ರಯೋಜನ ಎಂದೆ ಯಾರೂ ಲೆಕ್ಕ ಹಾಕುವುದಿಲ್ಲ. ಕೇಳುವುದಕ್ಕೇ ಮಾತ್ರ ಮನೋಹರವಾಗಿರುತ್ತದೆ. ಎಲ್ಲವೂ ದುಬಾರಿಯಾಗಿರುವ ಈ ಕಾಲದಲ್ಲಿ ಉಚಿತ ನೀಡುವವರೇ ದೊಡ್ಡಜನ ಎನಿಸಿಕೊಳ್ಳುತ್ತಾರೆ.ಅದರ ಹಿಂದೆ ಎಷ್ಟೇ ಹಣ ಪೋಲಾಗಲಿ, ಜನಸಾಮಾನ್ಯರಿಗೆ ಅದು ‘ಉಚಿತ’!
ಇಡೀ ವಿಶ್ವದಲ್ಲಿ ಯಾವುದೂ ಉಚಿತವಲ್ಲ. ಒಬ್ಬರಿಗೆ ಉಚಿತವಾಗಿ ಸಿಗುತ್ತಿದೆ ಎಂದರೆ, ಅದರ ಖರ್ಚು ಮತ್ಯಾರೋ ನೋಡ್ಕೊಳ್ಳು ತ್ತಿದ್ದಾರೆ ಎಂದರ್ಥ. ಕೋವಿಡ್ ಲಸಿಕೆ ಸರಕಾರ ಉಚಿತವಾಗಿ ನೀಡುತ್ತಿದೆ. ಆದರೆ, ಲಸಿಕೆ ಉತ್ಪಾದಕ ಸಂಸ್ಥೆಗೆ ಲಸಿಕೆಯ ಮೊತ್ತ ಪಾವತಿಯಾಗುತ್ತದೆ. ಹೀಗಿ ದ್ದರೂ ಉಚಿತ ಎಂದು ಘೋಷಿಸಿ ಸಾಧಿಸುವುದಾದರೂ ಏನು? ಇದೀಗ ೫ ರಾಜ್ಯಗಳ ವಿಧಾನ ಸಭಾ ಚುನಾವಣೆ ಹತ್ತಿರದಲ್ಲಿದೆ.
ರಾಜಕೀಯ ಪಕ್ಷಗಳು ಪ್ರಚಾರ ಕೆಲಸದಲ್ಲಿ ಸಕ್ರಿಯವಾಗಿದೆ. ಇಲ್ಲೂ ಪ್ರಮುಖ ಆಕರ್ಷಣೆಯೇ ಉಚಿತ ಯೋಜನೆಗಳು. ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಎಲ್‌ಪಿಜಿ ಸಿಲಿಂಡರ್, ಹುಡುಗಿಯರಿಗೆ ಉಚಿತ ಸ್ಕೂಟಿ  ಕೊಡುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ. ಅದೇ ರೀತಿ ವಿದ್ಯಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಕೊಡುವುದಾಗಿ ಸಮಾಜ ವಾದಿ ಪಕ್ಷದ ಅಖಿಲೇಶ್ ಯಾದವ್ ಘೋಷಿಸಿzರೆ. ಆಮ್ ಆದ್ಮೀ ಪಕ್ಷದ ಅರವಿಂದ ಕೇಜ್ರಿವಾಲ್ ಗೋವಾದ ಜನತೆಗೆ ಉಚಿತ ತೀರ್ಥ ಯಾತ್ರೆಯ ಬಗ್ಗೆ ಭರವಸೆ ನೀಡಿದ್ದಾರೆ: ಹಿಂದೂಗಳಿಗೆ ಅಯೋಧ್ಯೆ, ಸಾಯಿಬಾಬಾ ಭಕ್ತರಿಗೆ ಶಿರಡಿ, ಮುಸ್ಲಿಮರಿಗೆ ಅಜ್ಮೀರ್ ಶರೀಫ, ಕ್ರೈಸ್ತರಿಗೆ ವೇಲಂಕಣಿ!
ಉತ್ತರಾಖಂಡದಲ್ಲಿ ಬಿಜೆಪಿ ಪುನಃ ಅಧಿಕಾರದ ಗದ್ದುಗೆ ಹಿಡಿದರೆ ಎಲ್ಲರಿಗೂ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಘೋಷಿಸಿದೆ! ಉಚಿತ ವಿದ್ಯುತ್ ಕೊಡುವುದೇ ಆದರೆ, ಈಗ ಅಧಿಕಾರದಲ್ಲಿ ಇರುವಾಗಲೇ ಕೊಡಬಹುದಿತ್ತು. ಸುಮ್ಮನೆ ಘೋಷಣೆಗೆ ಮಾತ್ರ ಸೀಮಿತ ಬಹುತೇಕ ಉಚಿತಗಳು. ಮತದಾರರು ಇಂತಹ ಉಚಿತಗಳ ಬಲೆಗೆ ಬೀಳಬಾರದು. ಜನರಿಗೆ ಉಚಿತ ಸಿಕ್ಕಿದಷ್ಟು, ಅದು ಸರಕಾರಕ್ಕೆ, ಆರ್ಥಿಕತೆಗೆ ದೊಡ್ಡ ಹೊಡೆತವೇ ಸರಿ.