ಭರವಸೆಯ ಬೀಜ ಬಿತ್ತಿದಾಕೆಯ ಬಗೆಗಿಷ್ಟು
ಸುಪ್ತ ಸಾಗರ
ರಾಧಾಕೃಷ್ಣ ಭಡ್ತಿ
@.
ಚಿಂಪಾಂಜಿಗಳದ್ದು ಸೀ ಪ್ರಾಧಾನ್ಯ ಕುಟುಂಬ. ಗುಂಪಿನ ಪ್ರಬಲ ಹೆಣ್ಣು ಬೇರೆ ಹೆಣ್ಣು ಮರಿಗಳನ್ನು ಕೊಂದು ತಮ್ಮ ಪ್ರಾಬಲ್ಯ ಮುಂದುವರಿಸುತ್ತವಂತೆ. ಒಟ್ಟಾರೆ ಚಿಂಪಾಂಜಿಗಳು ಮನುಷ್ಯರಿಗಿಂತ ಒಳ್ಳೆಯ ಪ್ರಾಣಿ. ಹಾಗೇ ಮನುಷ್ಯರಿಗಿಂತ ಕ್ರೂರ ಎಂಬುದೂ ಸತ್ಯ.
ನನ್ನನ್ನು ಬಹು ದಿನಗಳಿಂದ ಕಾಡುತ್ತಿದ್ದಳಾಕೆ. ಆಕೆಯ ಮಾನವತೆ, ವಾತ್ಸಲ್ಯಪೂರಿತ ಕಣ್ಣುಗಳು, ಬದ್ಧತೆ, ದಿಟ್ಟತನ, ಎಲ್ಲಕ್ಕಿಂತ ಹೆಚ್ಚಾದ ಸಮರ್ಪಣಾಭಾವ ನನ್ನನ್ನು ತುಂಬ ಪ್ರಭಾವಿಸಿದೆ. ಮತ್ತೆ ಮತ್ತೆ ಆಕೆಯ ಬಗೆಗಿನ ಸೆಳೆತ ಹೆಚ್ಚುತ್ತಲೇ ಇದೆ. ಪಕ್ಕಾ ಕಾಡುಮನುಷ್ಯರಂತೆ ಕಾಡುಗಳ, ಕಾಡುಗಳಿಂದಲೇ, ಕಾಡನ್ನೇ ಜೀವಿಸಿದ ಆಕೆ ಕಾಡು ಮತ್ತು ಮನುಷ್ಯನ ಸಂಬಂಧಕ್ಕೆ ಅಪೂರ್ವ ಭಾಷ್ಯ ಬರೆದವಳು. ಇಷ್ಟೇ ಹೇಳಿಬಿಟ್ಟರೆ ಏನೂ ಹೇಳಿದಂತಾಗುವುದೇ ಇಲ್ಲ. ಹಾಗೆಂದುಆಕೆಯ ಬಗ್ಗೆ ಹೇಳಿ ಮುಗಿಯುವುದಿಲ್ಲ.
ಹೆಸರು ಜೇನ್ ಗುಡಾಲ.1934ರಲ್ಲಿ ಇಂಗ್ಲೆಂಡಿನ ಹ್ಯಾಮ್‌ಸ್ಟೆಡ್‌ನಲ್ಲಿ ಜನಿಸಿದವಳು. ತಾಂಜೇನಿಯದ ಗುಂಬೆ ಎಂಬ ಕೇವಲ35ಚದರ.ಕಿ.ಮೀ. ವಿಸ್ತೀರ್ಣದ ಪುಟ್ಟ ಕಾಡಿನ ಒಂದಿಡೀ ಜೀವ ವೈವಿಧ್ಯವನ್ನು ಬಿಟ್ಟೂ ಬಿಡ ದಂತೆ ಅಧ್ಯಯನ ಮಾಡಿ, ಅದರಲ್ಲೂ ಅಲ್ಲಿ ಅಸಂಖ್ಯವಾಗಿದ್ದ ಜಿಂಪಾಜಿಗಳ ಸಖ್ಯ ಬೆಳೆಸಿ, ಅವುಗಳ ಭಾಷೆ ಯನ್ನು ಅರ್ಥ ಮಾಡಿಕೊಂಡು, ಚಿಂಪಾಂಜಿಗಳಲ್ಲಿ ತಾನೂ ಚಿಂಪಾಂಜಿಯಾಗಿಯೇ ಬದುಕಿದ ಗುಡಾಲ್‌ಳ ಬದುಕೇ ಒಂದು ಬೃಹತ್ ಪುಸ್ತಕ.
ಚಿಂಪಾಂಜಿಗಳೊಂದಿಗಿನ ಆಕೆಯ ಸಖ್ಯ ಆರಂಭವಾದದ್ದು ಬಾಲ್ಯದ. ಎಳೆವೆಯ, ಬೆಕ್ಕು ಹೇಗೆ ಬದುಕುತ್ತದೆ; ನಾಯಿ ಹೇಗೆ ಮರಿಗಳನ್ನು ಸಾಕುತ್ತದೆ, ಕೋಳಿ ಹೇಗೆ ಮೊಟ್ಟೆ ಇಡುತ್ತದೆ ಇಂಥವೇ ಆಕೆಯನ್ನು ಕಾಡುತ್ತಿದ್ದ ಸಂಗತಿಗಳು. ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿ, ಕೋಳಿಗಳಿಗೂ ಗೊತ್ತಾಗದಂತೆ ಅವುಗಳಗೂಡಿನಲ್ಲಿ ಬಚ್ಚಿಟ್ಟುಕೊಂಡು, ಅವುಗಳು ಮೊಟ್ಟೆಯಿಡುವ ಸಮಯಕ್ಕಾಗಿ ರಾತ್ರಿಯಿಡೀ ಕಾದು ಕುಳಿತಿರುತ್ತಿದ್ದಳು!
ಅದೊಂದು ಹುಟ್ಟಿದ ಹಬ್ಬಕ್ಕೆ ಆಕೆಗೆ ಅಪ್ಪ ಉಡುಗೊರೆಯಾಗಿ ತಂದುಕೊಟ್ಟ ಚಿಂಪಾಜಿಯ ಬೊಂಬೆಯೇ ಹಗಲೂ ರಾತ್ರಿ ಆಕೆಯ ಸಂಗಾತಿಯಾಗಿಬಿಟ್ಟಿತು. ಅದಕ್ಕೊಂದುಮುದ್ದಾದಹೆಸರಿಟ್ಟು ‘ಜ್ಯೂಬಿಲಿ’ ಎಂದು ಕರೆದಳು. ಕೊನೆಗೆ ಶಾಲೆಗೂ ಆ ಬೊಂಬೆ ಒಯ್ಯುತ್ತಿದ್ದಳು. ಆದರೂ ತೀರದ ಕುತೂಹಲ, ಮುಗಿಯದ ಹಂಬಲ ಚಿಂಪಾಜಿ ಗಳ ಸಾಂಗತ್ಯದ ಬಗೆಗೆ. ಕೊನೆಗೊಮ್ಮೆ ಅಮ್ಮ ಹೇಳಿಬಿಟ್ಟಳು; ಬೊಂಬೆಯೊಂದಿಗೆ ಆಟವಾಡಿದ ಮಾತ್ರಕ್ಕೆ ಅವುಗಳ ಬಗ್ಗೆ ತಿಳಿಯುವುದಿಲ್ಲ. ನಿನಗೆ ಅಷ್ಟೊಂದು ಆಸಕ್ತಿ ಇದ್ದರೆ ಹಿಂಜರಿಕೆಯಿಲ್ಲದೇ ಅವುಗಳ ಜತೆಗೇ ಹೋಗಿ ಅಧ್ಯಯನ ಮಾಡಬೇಕು. ಬಹುಶಃ ಹೇಗೂ ಕಾಡಿಗೆ ಹೋಗುವ ಧೈರ್ಯ ಮಾಡುವುದಿಲ್ಲ ಎಂಬ ಭರವಸೆಯ ಮೇಲೆ ಸುಮ್ಮನೇ ಹೇಳಿದ್ದರೋ, ರೇಗಿಸಲು ಹೇಳಿದ್ದರೋ, ಆಕೆಯ ಆಟದಿಂದ ರೇಜಿಗೆ ಹುಟ್ಟಿ ಹೇಳಿದ್ದರೋ ಗೊತ್ತಿಲ್ಲ.
ಆದರೆ ಗುಡಾಲ್ ಮಾತ್ರ ಅದನ್ನು ಗಂಭೀರವಾಗಿ ಪರಿಗಣಿಸಿ ಬಿಟ್ಟಳು. ಕಾಲೇಜು ಮುಗಿಯುವುದನ್ನೇ ಕಾಯುತ್ತಿದ್ದ ಆಕೆ, ಹೆಚ್ಚಿನ ಓದಿನ ಗೋಜಿಗೇ ಹೋಗದೇಸಿಕ್ಕ ಯಾವುದೋ ನೌಕರಿ ಸೇರಿಬಿಟ್ಟಳು. ಹೌದಲ್ಲ, ಕಾಡಿಗೆ ಹೋಗಿ ಅಧ್ಯಯನ ಮಾಡಲು, ಹೊಟ್ಟೆ ತುಂಬಿಸಿ ಕೊಳ್ಳಲು ಒಂದಷ್ಟು ಕಾಸು ಬೇಕೇಬೇಕಲ್ಲ?! ದೂರ ದೃಷ್ಟಿ ಆಕೆಯದ್ದು. ಕೊನೆಗೂ ಏನೇನೋ ಮಾಡಿ, ನಾಲ್ಕು ಕಾಸು ಸಂಪಾದಿಸಿಕೊಂಡು, ಕೀನ್ಯಾದ ಕಾಡಿಗೆ ಹೋಗಲು ದೋಣಿ ಏರಿಯೇಬಿಟ್ಟಳು. ಅಲ್ಲಿ ಆಕೆಗೆ ಪರಿಚಿತನಾ ದವನೇ ಆಂಥ್ರೋಪಾಲಜಿಸ್ಟ್ (ಮಾನವಶಾಸ್ತ್ರಜ್ಞ) ಪ್ರೊ.ಲೂಯಿಸ್ ಲೀಕಿ. ಆತನ ಸಹಾಯಕಿಯಾಗಿ ಕೆಲಸ ಮಾಡುತ್ತಲೇ ಪ್ರಾಣಿಗಳ ಅಧ್ಯಯನ, ಅವುಗಳ ಭಾಷೆಯ ಕಲಿಕೆಗೆ ತೊಡಗಿದಳು.
ಹೆಚ್ಚಿನ ಅಧ್ಯಯನಕ್ಕೆ ಕಾಡಿಗೇ ಹೋಗಬೇಕಿತ್ತು. ಆದರೆ ಒಂಟಿಯಾಗಿ ಕಾಡಿಗೆ ಹೋಗುವಂತಿಲ್ಲ. ಅದರಲ್ಲೂ ಆಫ್ರಿಕನ್ ಕಾಡಿಗೆ ಹೋಗುವುದೆಂದರೆ ಹುಡುಗಾಟಿಕೆಯ ಮಾತೇ? ಅಷ್ಟರಗಲೇ ಗಂಡನಿಂದ ಬೇರ್ಪಟ್ಟಿದ್ದ ಆಕೆಯ ತಾಯಿ ಅನಿವಾರ್ಯವಾಗಿ ಅವಳ ಜತೆಗೆ ಬಂದು ವಾಸಿಸಲು ಒಪ್ಪಿದಳು. ಅಲ್ಲಿಂದ ನೇರಾವಾಗಿ ಆಕೆ ಹೋಗಿದ್ದೇ ಆಫ್ರಿಕಾದ ತಾಂಜೇನಿಯಾದ ಗುಂಬೆ ಕಾಡಿಗೆ. ಕಾಡಿಗೆ ಬಂದು ದಿನಗಳು ಉರುಳುತ್ತಿದ್ದವು. ಚಿಂಪಾಂಜಿಗಳು ಕಣ್ಣಿಗೇ ಬೀಳು  ತ್ತಿರಲಿಲ್ಲ. ಕಾಡೆಲ್ಲ ಸುತ್ತಿದರೂ ಸುಳಿವಿಲ್ಲ. ಅವತ್ತು ಅದೇ ಬೇಸರದಲ್ಲಿ ಎದುರಿನ ಬೆಟ್ಟ ಹತ್ತಿ ನಿಂತು, ಉದಾಸೀನಳಾಗಿ ಬೈನಾಕ್ಯುಲರ್‌ನಲ್ಲಿ ನೋಡುತ್ತಿದ್ದಳು. ಅರೆ, ಸನಿಹದ ಇದ್ದ ಅದೊಂದು ಮರದಲ್ಲಿ ಏನೋ ಸಂಚಲನ! ಮತ್ತೆ ಮತ್ತೆ ಬೈನಾಕ್ಯುಲರ್‌ನ ತುರುಪಣಿ ಹಿಡಿದು ತಿರುಗಿಸಿ ಝೂಮ್ ಮಾಡಿ ನೋಡಿದರೆ ಹೌದು, ಚಿಂಪಾಂಜಿಗಳೇ!
ಗುಂಪಾಗಿ ಮೆಲ್ಲಗೆ ಮರದಿಂದ ಇಳಿಯುತ್ತಿದ್ದವು. ಅವತ್ತಿಂದ ಗುಡ್ಡದ ಆಕೆಯ ದಿನಚರಿ ಆರಂಭವಾಯಿತು. ಮೊದಮೊದಲು ಹತ್ತಿರ ಹೋಗಲು ಹಿಂಜರಿಕೆ.ಹೋದರೂ ಅವುಗಳನ್ನು ನೇರವಾಗಿ ನೋಡುವ ಧೈರ್ಯ ಮಾಡುತ್ತಿರಲಿಲ್ಲ. ಆದರೆ ದಿನಗಟ್ಟಲೆ ಒಂದಿನಿತೂ ಚಿಂಪಾಜಿಗಳ ಚಲನ ವಲನಗಳನ್ನು ಗಮನಿಸಿದಳು. ಹೀಗೆ ಆಕೆ ಮಾಡಿದ್ದು, ಒಂದೆರಡು ದಿನಗಳಲ್ಲ, ವಾರಗಳಲ್ಲ, ತಿಂಗಳಲ್ಲ. ಬರೋಬ್ಬರಿ ಹದಿನೈದು ವರ್ಷ!
ಮೊದಮೊದಲು ಇವಳನ್ನು ಕಂಡರೆ ಅವಕ್ಕೆ ಭಯ ಎನ್ನುವುದಕ್ಕಿಂತ ಇವಳಿಗೇ ಅವುಗಳ ಬಗ್ಗೆ ಅವ್ಯಕ್ತ ಭಯ ಇತ್ತು. ಇಬ್ಬರೂ ಪರಸ್ಪರ ದೂರದಿಂದಲೇ ನೋಡಿ ಕೊಳ್ಳುತ್ತಿದ್ದವರು ಬರಬರುತ್ತ, ಚಿಂಪಾಜಿ ಮರಿಗಳು  ಕೆಯ ಕೈಗೆಟುಕುವಷ್ಟು ಹತ್ತಿರ ಬಂದವು. ಇವಳು ತಲೆ ಸವರಿದರೆ ಅವು ಗುಡಾಲ್ ತಲೆಯನ್ನೇ ಏರಿ ಕುಳಿತವು. ಕೊನೆಗೊಂದು ದಿನ ಚಿಂಪಾಜಿ ಕುಟುಂಬದಲ್ಲಿ ಒಬ್ಬಳಾಗಿ ಬಿಟ್ಟಿದ್ದಳು. ಅವಳು ಕಾಣದ ದಿನ ಇಡೀ ಚಿಂಪಾಂಜಿ ಸಮೂಹವೇ ಚಡಪಡಿಸಿ ಇಡೀ ಕಾಡು ಅಲೆದಾಡಿ ಹುಡುಕುತ್ತಿದ್ದವು. ಅಷ್ಟೊಂದು ಆತ್ಮೀಯತೆ ಬೆಳೆದ ನಂತರ ಭಾಷೆ ಅವರ ನಡುವೆ ಒಂದು ಸಮಸ್ಯೆಯೇ ಆಗಲಿಲ್ಲ. ಈಕೆ ತನ್ನ ಭಾಷೆಯನ್ನು ಅವಕ್ಕೆ ಕಲಿಸಿದಳು, ಅವು ತಮ್ಮ ಭಾಷೆಯನ್ನು ಈಕೆಗೆ ಹೇಳಿಕೊಟ್ಟಿದ್ದವು.
ನಿಜವಾದ ಅಧ್ಯಯನ ಆರಂಭವಾದದ್ದೇ ಆಗ. ಏಕೆಂದರೆ, ಅವು ತಮ್ಮ ನೋವು, ಸಂಕಟ, ಖುಷಿ, ಸಂತೋಷ, ದುಃಖ, ದುಮ್ಮಾನ ಎಲ್ಲವನ್ನೂ ತಮ್ಮದೇಭಾಷೆಯಲ್ಲಿ ಈಕೆಯೊಡನೆ ಹಂಚಿಕೊಳ್ಳಲು ಆರಂಭಿಸಿದವು. ಈಕೆಗೆ ಅದು ಅರ್ಥವಾಗತೊಡಗಿದಾಗ, ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಳು; ಸ್ಪಂದಿಸುತ್ತಿದ್ದಳು.ಆತ್ಮೀಯರಾಗಲು ಮತ್ತೆ ಸಮಯ ಹಿಡಿಯಲಿಲ್ಲ. ಪಕ್ಕಾ ಮನುಷ್ಯರಂತೆ ಚಿಂಪಾಜಿಗಳಿಗೂ ಎಲ್ಲ ರೀತಿಯ ಭಾವನೆಗಳಿವೆ. ಪ್ರಚೋದನೆಗಳಿವೆ. ಅವೂ ಅಳುತ್ತವೆ,ನಗುತ್ತವೆ, ಖಿನ್ನತೆಗೊಳಗಾಗುತ್ತವೆ. ನಲಿದಾಡುತ್ತವೆ, ಸಂಭ್ರಮಿಸುತ್ತವೆ. ಸಂಗಾತಿಗಳೊಂದಿಗೆ ಕಲೆತು ಸುಖವನ್ನು ಅನುಭವಿಸುತ್ತವೆ ಎಂಬಿತ್ಯಾದಿ ಎಲ್ಲವೂ ಗೊತ್ತಾದದ್ದು ಅದರಿಂದಲೇ.
ಅವೆಷ್ಟು ಬುದ್ಧಿವಂತಿಕೆಯಿಂದ ವರ್ತಿಸುತ್ತವೆಂದರೆ ಹುತ್ತದೊಳಗಣ ಕೀಟಗಳನ್ನು, ಗೆದ್ದಲು-ಹುಳುಗಳನ್ನು ಹಿಡಿದು ತಿನ್ನಲು ಉದ್ದದ ಕಡ್ಡಿಯನ್ನು ಹುತ್ತದೊಳಕ್ಕೆ ತೂರಿಸಬೇಕೆಂಬ ತಂತ್ರ ಗೊತ್ತಿತ್ತು. ಇಂಥ ಅಮೂಲ್ಯ ಸಂಗತಿಗಳನ್ನು ಹೊರಜಗತ್ತಿಗೆ ಹೇಳಿ ತೋರಿಸಿದ್ದೇ ಗುಡಾಲ. ಅವುಗಳ ಆಹಾರ ಕ್ರಮ, ಜೀವನ, ಬೇಟೆಯ ಪರಿ, ಸಂತಾನ ಪ್ರಕ್ರಿಯೆ.. ಹೀಗೆ ಪ್ರತಿಯೊಂದನ್ನೂ ಸುದೀರ್ಘ ಅಧ್ಯಯನದಿಂದ ಗ್ರಹಿಸಿ, ನಮಗೆಲ್ಲ ಸಾರಿದಳು ಜೇನ್ ಗುಡಾಲ.
ಅಸಲಿಗೆ ಗುಡಾಲ್‌ಳಲ್ಲಿದ್ದ ಇಂಥ ಸಾಧ್ಯತೆಗಳನ್ನು ಅವತ್ತೇ ಗುರುತಿಸಿದವರು ಪ್ರೊ. ಲೀಕಿ. ಹೀಗಾಗಿ ಆಕೆಯ ಸಾಧನೆಯಲ್ಲಿ ಅವರ ಪಾತ್ರ ಹಿರಿದು. ಇಂದಿನಚಿಂಪಾಂಜಿಗಳ ಹಾಗೂ ಪುರಾತನ ಮಾನವನ ನಡವಳಿಕೆ ಸಾಮ್ಯವನ್ನು ಗುರುತಿಸುವ, ತನ್ನಂದಾಗದ ಕಾರ್ಯವನ್ನು ಈಕೆಸಾಧಿಸಿಯೇತೀರುತ್ತಾಳೆಂಬ ಭರವಸೆ ಪ್ರೊ.ಲೀಕಿಗೆ ಇತ್ತು. ಅದೇ ಕಾರಣಕ್ಕೆ ತಮ್ಮ ಸಂಶೋಧನೆಯ ತಾಣ ಓಲ್ಡುವಾಯ್ ಕೊಳ್ಳಕ್ಕೆ ಗುಡಾಲ್‌ಳನ್ನು ಕಳಿಸಿದ್ದು. ಇಷ್ಟೇ ಅಲ್ಲ.1958ರಲ್ಲಿ ಕೋತಿಗಳ ಸ್ವಭಾವ, ನಡವಳಿಕೆಗಳ ಅಧ್ಯಯನಕ್ಕೆಂದೇ ವಿeನಿಗಳಾದ ಆಸ್ಮನ್ ಹಿಲ್ ಮತ್ತು ಜೋನ್ ನೇಪಿಯರ್ ಬಳಿಗೂ ಕಳುಹಿಸಿಕೊಟ್ಟಿದ್ದರು. ಈ ಹಂತದಲ್ಲಿ ಆರ್ಥಿಕ ಸಮಸ್ಯೆಯೊಂದೇ ಅಲ್ಲ, ಅಕಾಡೆಮಿಕ್ ಪದವಿಯ ಕೊರತೆಯೂ ಗುಡಾಲ್‌ಳನ್ನು ಕಾಡಿತ್ತು.
ಮತ್ತೆ ನೆರವಿಗೆ ಬಂದವರು ಪ್ರೊ. ಲೀಕಿಯವರೇ. ಸ್ನೇಹಿತರು, ಪರಿಚಿತರಿಂದ ಧನ ಸಂಗ್ರಹಣೆ ಮಾಡಿ ಕೇಂಬ್ರಿಜ್‌ಗೆ ಕಳಿಸಿದ್ದರು.1945ರಲ್ಲಿ ಪ್ರೊ. ರಾಬರ್ಟ್ ಹಿಂಡೆ ಮಾರ್ಗದರ್ಶನದಲ್ಲಿ ಸಲ್ಲಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಬರುತ್ತದೆ. ವಿಶೇಷವೇನು ಗೊತ್ತೇ? ಈ ಪ್ರಬಂಧದಲ್ಲಿ ಆಕೆ ಬರದದ್ದು, ತಾನು ಐದು ವರ್ಷ ಕಾಡಲ್ಲಿ ಚಿಂಪಾಂಜಿಗಳ ಬಗ್ಗೆ ಮಾಡಿದ ಅಧ್ಯಯನದ ಸಾರವನ್ನೇ! ಆಗಿನ ಕಾಲದಲ್ಲಿವಿಜ್ಞಾನಿಗಳುಪ್ರಾಣಿಗಳ ಸಂಖ್ಯೆಗಳ ಆಧಾರದಲ್ಲಿ ಅಧ್ಯಯನ ನಡೆಸುತ್ತಿದ್ದರು. ಆದರೆ,ಗುಡಾಲ್ ಚಿಂಪಾಂಜಿಗಳಿಗೆ ಫಿಫಿ ಮತ್ತು ಡೇವಿಡ್ ಗ್ರೇಬಿಯರ್ಡ್ ಎಂಬ ಹೆಸರು ಕೊಟ್ಟಳು. ಇದು ಸುಲಭದ ಮಾತಾಗಿರಲಿಲ್ಲ.
ಸೋಕಾಲ್ಡ ವಿಜ್ಞಾನಲೋಕದ ನಂಬಿಕೆಗಳ ವಿರುದ್ಧ ಇದಾಗಿತ್ತು. ಚಿಂಪಾಂಜಿಗಳಿಗೆ ಪ್ರತ್ಯೇಕ ವ್ಯಕ್ತಿತ್ವವಿದೆ ಎಂದು ನಂಬಿದ್ದ ಕಾಲದಲ್ಲಿ ಗುಡಾಲ್ ತನ್ನ ಸಂಶೋಧನೆ ಆಧರಿಸಿ ಅವುಗಳೂ ಮನುಷ್ಯರಂತೆ ಸಹಜವಾಗಿ ತಬ್ಬಿಕೊಳ್ಳುವುದು, ಸರಸ ನಡೆಸುವುದು, ಮೈಥುನ ನಡೆಸುವುದು ಮಾಡಿ, ನಮ್ಮಂತೆಯೇ ವರ್ತಿಸುತ್ತವೆ ಎಂದದ್ದನ್ನು ಒಪ್ಪಲು ಅವರು ಸಿದ್ಧರಿರಲಿಲ್ಲ. ಪಕ್ಕಾ ನಮ್ಮಂತೆಯೇ ಅವುಗಳು ಸಹ ಸಂಸಾರ ನಡೆಸುತ್ತವೆ ಎಂಬುದು ಆಕೆಯ ಮಹತ್ವದ ಸಂಶೋಧನೆಯಾಗಿತ್ತು. ಅದರಲ್ಲೂ ಆಹಾರ ಸಂಗ್ರಹಕ್ಕಾಗಿ ಚಿಂಪಾಂಜಿಗಳು ಬಳಸುವ ತಂತ್ರ- ಮರಗಳ ಕೊಂಬೆಗಳನ್ನು ಮುರಿದು, ಅವುಗಳ ಎಲೆಗಳನ್ನು ಕಿತ್ತು, ಉದ್ದದ ಕೋಲು ಮಾಡಿ ಕೊಂಡು ಹುತ್ತದೊಳಕ್ಕೆ ತೂರಿ ಅದಕ್ಕಂಟಿ ಬರುವ ಗೆದ್ದಲನ್ನು ಬಾಯಲ್ಲಿ ಸೀಬಿ ತಿನ್ನುವ ಪರಿಯಂತೂ ಪಕ್ಕಾ ಮನುಷ್ಯರಂತೆಯೇ ಇತ್ತು.
ಪುರಾತನ ಮನುಷ್ಯ ಸನ್ನಿಗಳನ್ನು, ಆಯುಧಗಳನ್ನು ಕಂಡುಹಿಡಿದದ್ದೂ ಹೀಗೆಯೇ ಎಂಬುದರ ಸಾತತ್ಯವನ್ನು ಸಾರಿದ್ದಳು ಗುಡಾಲ.ವಿಜ್ಞಾನಿಗಳಿಗೆ ನಂಬದೇ ಬೇರೆ ದಾರಿ ಇರಲಿಲ್ಲ. ಈ ಹಂತದಲ್ಲೀ ಗುಡಾಲ್ ಬೆಂಬಲಕ್ಕೆ ನಿಂತದ್ದು ಪ್ರೊ.ಲೀಕಿಯವರೇ. ಇಷ್ಟಕ್ಕೇ ಗುಡಾಲ್ ಸುಮ್ಮನಾಗಲಿಲ್ಲ. ಗೊಂಬೆ ಕಾಡಿನ ಚಿಂಪಾಂಜಿಗಳ ಆಕ್ರಮಣಕಾರಿ ಪ್ರವೃತ್ತಿ, ಕೋಪ ತಾಪ, ದುಃಖ, ಖಿನ್ನತೆಯ ಸ್ಥಿತಿಯನ್ನೂ ಅಭ್ಯಸಿಸಿದಳು. ಕೊಲಬಸ್ ಎಂಬ ಚಿಕ್ಕಗಾತ್ರದ ಕೋತಿಗಳನ್ನೂ ಬೇಟೆಯಾಡಿ ತಿನ್ನುವುದನ್ನು ಸೆರೆ ಹಿಡಿದು, ಅವು ಕೇವಲ ಸಸ್ಯಹಾರಿಗಳಲ್ಲ ಎಂಬ ಸತ್ಯವನ್ನು ಪುರಾವೆ ಸಹಿತ ಸಾಬೀತುಪಡಿಸಿದಳು.
ಮಾತ್ರವಲ್ಲ ಗುಂಪಿನಲ್ಲಿರುವ ಮಂಗನ ದಿಕ್ಕು ತಪ್ಪಿಸಿ, ಒಂಟಿಯಾಗಿಸಿ ತಪ್ಪಿಸಿಕೊಳ್ಳಲಾಗದಂತೆ ತಂತ್ರ ಹೆಣೆದು ಅದನ್ನು ಚಿಂಪಾಂಜಿಗಳು ಬೇಟೆಯಾಡುವಪರಿ ನಿಜಕ್ಕೂ ಅದ್ಭುತ. ಅನಂತರ ಇಡೀ ಚಿಂಪಾಂಜಿಗಳು ಕುಟುಂಬ ಒಟ್ಟಿಗೇ ಕುಳಿತು ಆ ಕೋತಿಯ ಮಾಂಸವನ್ನು ಹಂಚಿ ತಿನ್ನುತ್ತವೆ. ಇನ್ನೂ ವಿಶೇಷವೆಂದರೆ ಚಿಂಪಾಂಜಿಗಳದ್ದುಸೀಪ್ರಾಧಾನ್ಯ ಕುಟುಂಬ ವ್ಯವಸ್ಥೆ. ಗುಂಪಿನ ಪ್ರಬಲ ಹೆಣ್ಣು ಬೇರೆ ಹೆಣ್ಣು ಮರಿಗಳನ್ನು ಕೊಂದು ತಮ್ಮ ಪ್ರಾಬಲ್ಯ ಮುಂದುವರಿಸುತ್ತವಂತೆ. ಒಟ್ಟಾರೆ ಚಿಂಪಾಂಜಿಗಳು ಮನುಷ್ಯರಿಗಿಂತ ಒಳ್ಳೆಯ ಪ್ರಾಣಿ. ಅದೇ ಸಂದರ್ಭದಲ್ಲಿ ಮನುಷ್ಯರಿಗಿಂತ ಕ್ರೂರ ಎಂಬುದೂ ಸತ್ಯ ಎನ್ನುತ್ತಾಳೆ ಗುಡಾಲ.
ಈಗ ಆಕೆಗೆ85ರ ಹರೆಯ. ಈಗಲೂ ಆಕೆ ಕಾಡಿಗೆ ಹೋಗುತ್ತಲೇ ಇರುತ್ತಾಳೆ. ಈಗಲೂ ಅದೇ ಮೊದಲ ದಿನದ ಮುಗ್ಧತೆಯೊಂದಿಗೆ, ಕುತೂಹಲದೊಂದಿಗೆ ಅವುಗಳನ್ನು ಗಮನಿಸುತ್ತಾಳೆ. ಪ್ರತಿಬಾರಿಯೂ ಒಂದಲ್ಲ ಒಂದು ಹೊಸ ಸಂಗತಿಯೊಂದಿಗೆ ಮರಳಿ ಕಾಡಿಗೆ ಬರುತ್ತಾಳೆ. ಕಾಡಿನ ಪ್ರಾಣಿಗಳು ಆಕೆಯೊಂದಿಗೆ ಅತ್ಯಂತ ನಿರ್ಭಯವಾಗಿ ಒಡನಾಡುತ್ತವೆ. ಯಾವುದೇ ಅಪರಿಚಿತತೆ ಅವರ ನಡುವೆ ಈಗ ಉಳಿದಿಲ್ಲ. ಪ್ರತಿಭಾರಿ ಕಾಡಿಗೆ ಹೋದಲಾಗಲೂ ಹೊಸದಾಗಿ ಬಂದಿರುವ ತಮ್ಮ ಕುಟುಂಬದ ಸದಸ್ಯರಿಗೆ (ಮರಿಗಳಿಗೆ) ಪ್ರಾಣಿಗಳು ಅವಳನ್ನು ಪರಿಚಯಿಸುತ್ತವೆ.
ಅದೇ ಮಮತೆ, ಅದೇ ನಂಬಿಕೆಯೊಂದಿಗೆ ಆಕೆಯೂ ಅವುಗಳೊಂದಿಗೆ ವ್ಯವಹರಿಸುತ್ತಾಳೆ. ಹಾಗೆಂದು ಅವುಗಳ ವೈಯಕ್ತಿಕ ಜೀವನದಲ್ಲಿ ಒಮ್ಮೆಯೂ ಈಕೆ ಹಸ್ತಕ್ಷೇಪ ಮಾಡಿದ್ದಿಲ್ಲ. ತನ್ನ ಮೂಗು ತೂರಿಸಿದ್ದಿಲ್ಲ. ಅವುಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಿಲ್ಲ. ಆಕೆಯ ಪ್ರಯತ್ನದ ಫಲವಾಗಿ ಈಗ ಗುಂಬೆ ಅರಣ್ಯ ಪ್ರದೇಶ ‘ರಾಷ್ಟ್ರೀಯ ಉದ್ಯಾನ’ ದ ಸ್ಥಾನಮಾನ ಪಡೆದಿದೆ. ಆಕೆಯ ಸಾಧನೆಯನ್ನು ದೇಶ ವಿದೇಶಗಳ ಮಾಧ್ಯಮಗಳು ಪ್ರಕಟಿಸಿ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿವೆ. ಖ್ಯಾತ ಅಂತಾರಾಷ್ಟ್ರೀಯ ಜರ್ನಲ್ ‘ನ್ಯಾಷನಲ್ ಜಿಯೋಗ್ರಫಿಕ್’ ಪತ್ರಿಕೆ ಆರು ಬಾರಿ ಜೇನ್ ಗುಡಾಲ್‌ಳನ್ನು ತನ್ನ ಮುಖಪುಟವಾಗಿ ಮುದ್ರಿಸಿದೆ.
ಅರ್ಧಕ್ಕೇ ಓದು ನಿಲ್ಲಿಸಿದ್ದ ಆಕೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ. ವರ್ಷಾವಧಿ ಆಕೆ ಒಂದೋ ಕಾಡಿನಲ್ಲಿರುತ್ತಾಳೆ, ಇಲ್ಲವೇ ಚಿಂಪಾಜಿಗಳನ್ನು ಸಂರಕ್ಷಿಸಿ ಎಂದು ಕರೆ ನೀಡುತ್ತಾ ದೇಶದೇಶಗಳನ್ನು ಸುತ್ತಾಡುತ್ತಾ ಅರಿವು ಮೂಡಿಸುತ್ತಿರುತ್ತಾಳೆ. ಆಕೆಗೆ ಮಕ್ಕಳು- ಮೊಮ್ಮಕ್ಕಳು ಇದ್ದರೂ ಇಂದಿಗೂ ಅಕ್ಕರೆಯ ಮಕ್ಕಳೆಂದರೆ ಚಿಂಪಾಂಜಿಗಳೇ. ಒಂದು ಜೀವಿತಾವಧಿಯಲ್ಲಿ ಅದೆಷ್ಟು ಸಾಧನೆ ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ್ದಾಳೆ. ಇಷ್ಟೆಲ್ಲ ಸಾಧಿಸಿದ ಗುಡಾಳ್ ಜಗತ್ತಿಗೆ ಸಾರಿದ ಮಹತ್ವದ ಸತ್ಯವೇನು ಗೊತ್ತೇ? ಚಿಂಪಾಂಜಿಗಳಿಗೂ ಮನುಷ್ಯರಿಗೂ ಇರುವ ವಂಶವಾಹಿವ್ಯತ್ಯಾಸ ಕೇವಲ ಶೇ.2ರಷ್ಟು ಮಾತ್ರವೇ! ತನ್ನ ಜೀವಿತದ ಅತ್ಯಮೂಲ್ಯ 55 ವರ್ಷಕ್ಕೂ ಹೆಚ್ಚು ಕಾಲ ಚಿಂಪಾಂಜಿಗಳ ಜೀವನ ಮತ್ತು ಸಾಮಾಜಿಕ ನಡವಳಿಕೆಗಳ ಅಧ್ಯಯನಕ್ಕೆ ಮೀಸಲಿಟ್ಟು ಗುಂಬೆ ಸ್ಟ್ರೀಮ್ ನ್ಯಾಷನಲ್ ಪಾರ್ಕ್‌ನ ಕಳೆದಿರುವ ಗುಡಾಲ್ ಇಂದು ಜಗತ್ತಿನ ಅತಿಮುಖ್ಯ ಪ್ರೈಮಟಾಲಜಿಸ್ಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾಳೆ.
ಇದೀಗ ಗುಡಾಲ, ತನ್ನದೇ ಹೆಸರಿನಲ್ಲಿ ಚಿಂಪಾಂಜಿಗಳ ಅಧ್ಯಯನಕ್ಕೆ ಇನ್ಸ್ಟಿಟ್ಯೂಟ್ ಸ್ಥಾಪಿಸಿದ್ದಾಳೆ. ಇಡೀ ಬದುಕನ್ನು ಚಿಂಪಾಂಜಿಗಳಿಗೆ, ಅವುಗಳ ಒಳಿತಿಗೆ, ಅಧ್ಯಯನಕ್ಕೆ ಮೀಸಲಿಟ್ಟಿದ್ದಾಳೆ. ಜೀವಿಯೊಂದರ ಉಳಿವಿಗಾಗಿ ಹೀಗೆ ತನ್ನನ್ನು ತಾನು ಸಮರ್ಪಿಸಿಕೊಂಡ ಇನ್ನೊಬ್ಬ ವ್ಯಕ್ತಿ ಇಲ್ಲ; ಅಷ್ಟು ಮಾತ್ರ ಹೇಳಬಹುದು.ಇತ್ತೀಚೆಗಷ್ಟೇ ಓದಿ ಮುಗಿಸಿದ ಆಕೆಯ ’  ’ ಹೊತ್ತಗೆ ಇಷ್ಟೆಲ್ಲ ಬರೆಯಲು ನನ್ನಲ್ಲಿ ಹುಕಿ ತುಂಬಿತು. ಮನಸ್ಸಿನ ತುಂಬೆಲ್ಲ ಆಕೆಯೇ ತುಂಬಿzಳೆ;ತುಂಬಿರುತ್ತಾಳೆ ಕೂಡ, ಇನ್ನೊಂದಿಷ್ಟು ದಿನ.