ಸೋಂಕಿತರಿಗೆ ಮತ್ತೆ ಕೋವಿಡ್‌ ಬರದೇ ?
ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
@.
ಕೋವಿಡ್ ಅಥವಾ ವ್ಯಾಕ್ಸಿನ್ ನಂತರ ಉಂಟಾಗುವ ಪ್ರತಿರೋಧ ಪ್ರಮಾಣ ಸಾಮಾನ್ಯವಾಗಿ ಉನ್ನತ ಸ್ತರದಲ್ಲಿಯೇ ಇರುತ್ತದಾದರೂ ಅದರ ನಿಖರತೆಯನ್ನೂ ಯಾರೂ ದೃಢೀಕರಿಸಿಲ್ಲ. ಹೀಗಾಗಿ ವ್ಯಾಕ್ಸಿನೇಷನ್ ಅಥವಾ ಸೋಂಕಿಗೊಳಗಾದ ನಂತರ ಪುನಃ ಕೋವಿಡ್ ಬರುವ ಸಾಧ್ಯತೆ ಇದೆ. ಆದರೆ ಅದು ತುಂಬಾ ಅಲ್ಪ ಪ್ರಮಾಣದಲ್ಲಿರುತ್ತದೆ.
ಜಗತ್ತಿನಾದ್ಯಂತ ಕೋವಿಡ್ ಸೋಂಕು ಬಂದು ಒಂದೂವರೆ ವರ್ಷಕ್ಕೂ ಜಾಸ್ತಿ ಆಗಿದೆ. ಈ ದಿನಗಳಲ್ಲಿ ಹಲವರ ಮನಸ್ಸಿನಲ್ಲಿ ಹೆಚ್ಚಾಗಿ ಕಾಡುತ್ತಿರುವ ಪ್ರಶ್ನೆ, ತಾವು ಈ ಸೋಂಕಿಗೆ ಇನ್ನೂ ಒಳಗಾಗುವ ಸಾಧ್ಯತೆ ಇದೆಯೇ? ತಮ್ಮ ದೈನಂದಿನ ಕೆಲಸಗಳಿಗೆ ಹಿಂದಿರುಗುವುದು ಎಷ್ಟು ಸುರಕ್ಷಿತ? ಈ ಪ್ರಶ್ನೆಗಳು ಸಾಮಾನ್ಯರನ್ನು ಮಾವಲ್ಲ, ವೈದ್ಯ ವಿಜ್ಞಾನಿಗಳು ಹಾಗೂ ವೈಜ್ಞಾನಿಕ ಚಿಂತಕರನ್ನು ಸಹ ಕಾಡುತ್ತಿವೆ. ಇದಕ್ಕೆ ಸ್ಪಷ್ಟ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಇದರ ಬೆನ್ನಲ್ಲೇ, ಒಬ್ಬ ವ್ಯಕ್ತಿಗೆ ಕೋವಿಡ್ ವ್ಯಾಕ್ಸಿನೇಶನ್ ಆದ ನಂತರ ಎಷ್ಟರ ಮಟ್ಟಿಗೆ ಆತ ಸುರಕ್ಷಿತ ?ಹಾಗೆಯೇ ಕೋವಿಡ್ ಬಂದು ವಾಸಿಯಾದ ನಂತರ ಆ ವ್ಯಕ್ತಿಯಲ್ಲಿ ಪ್ರತಿರೋಧ ಶಕ್ತಿ ಎಷ್ಟು ಹುಟ್ಟಿಕೊಳ್ಳುತ್ತದೆ? ಎಷ್ಟು ದಿನಗಳವರೆಗೆ ಈ ಪ್ರತಿರೋಧ ಶಕ್ತಿ ಸಕ್ರಿಯವಾಗಿರುತ್ತದೆ? ಇತ್ಯಾದಿ ಪ್ರಶ್ನೆಗಳು ಸಹ ಹುಟ್ಟಿ ಕೊಳ್ಳುತ್ತಿವೆ. ಇವಕ್ಕೆಲ್ಲ ಸ್ಪಷ್ಟ ಉತ್ತರ ಕೊಡುವುದು ಅಷ್ಟು ಸುಲಭವಲ್ಲ. ಮೇಯೋ ಕ್ಲಿನಿಕ್‌ನ ಸಂಶೋಧಕ ಡಾ ಗ್ರೆಗೊರಿ ಪೋಲಂಡ್ ಹೇಳುವ ಪ್ರಕಾರ, ಕರೋನಾ ವೈರಸ್ ನಮಗೆ ಬಹಳಷ್ಟು ಪ್ರತಿರೋಧಶಾಸ್ತ್ರವನ್ನು ಕಲಿಸುತ್ತಿದೆ. ಇದೇ ರೀತಿ ಭೂಕಂಪದ ಬಗ್ಗೆ ಚಿಂತಕರಾಲ್ಫ್ವಾಲ್ಡೋ ಎಮರ್ಸನ್ ಸಹ ಹೇಳಿದ್ದರು. ಭೂಕಂಪ ಆದ ಮರುದಿನವೇ ನಾವು ಭೂಗರ್ಭಶಾಸ್ತ್ರವನ್ನು ಹೊಸದಾಗಿ ಕಲಿಯುವುದು. ಯಾವುದೇ ವಿಷಯದಲ್ಲೂ ಇದು ಪ್ರಸ್ತುತ. ಖಂಡಿತಾ ಕರೋನಾ ವೈರಸ್ ಇನ್ನೂ ಬಹಳಷ್ಟು ಪ್ರತಿರೋಧ ಶಾಸವನ್ನು ನಮಗೆ ಭವಿಷ್ಯದಲ್ಲಿ ಕಲಿಸಲಿಕ್ಕಿದೆ.
ಒಬ್ಬ ವ್ಯಕ್ತಿಯಲ್ಲಿ ಕೋವಿಡ್ ಬಂದು ಹೋದ ತರ ದೇಹದ ಪ್ರತಿರೋಧ ರಕ್ಷಣಾ ವ್ಯೂಹವನ್ನು ಹೇಗೆ ಪುನರ್ ಸ್ಥಾಪಿಸುತ್ತದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳ ಬೇಕಿದೆ. ಇದರ ಆಧಾರದ ಮೇಲೆ ವ್ಯಾಕ್ಸಿನ್‌ಗಳನ್ನು ಅಥವಾ ಚಿಕಿತ್ಸಾ ಕ್ರಮಗಳನ್ನು ನಿಖರವಾಗಿ ರೂಪಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಮತ್ತೊಬ್ಬ ಪ್ರತಿರೋಧಶಾಸ್ತ್ರಜ್ಞ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಲಾ ಜೊ ಇನ್ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ ಸಂಸ್ಥೆಯಲ್ಲಿನ ಸಂಶೋಧಕ ಡಾ ನಿಯೆವೀಸ್ಕಾ-.ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ನಂತರ ಹಾಗೂ ವ್ಯಾಕ್ಸಿನ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡ ಬಳಿಕ ಭವಿಷ್ಯದಲ್ಲಿ ನಾವೆಷ್ಟು ಸುರಕ್ಷಿತ ಎಂಬುದು ಹಲವಾರು ವಿಷಯಗಳನ್ನು ಅವಲಂಬಿಸಿದೆ.
ಅವುಗಳಲ್ಲಿ ಮುಖ್ಯವಾದವು- ವ್ಯಕ್ತಿಯ ವಯಸ್ಸು, ಆತನಿಗೆ ಕೋವಿಡ್ ಸೋಂಕು ಬಂದು ಹೋಗಿದೆಯಾ, ಬಂದಿದ್ದರೆ ಯಾವ ಪ್ರಮಾಣದಲ್ಲಿತ್ತು? ಆತನವ್ಯಾಕ್ಸಿನ್ ಬಗೆಗಿನ ವಿವರಗಳು, ಅಲ್ಲದೆ ಆತ ಕೋವಿಡ್‌ನಿಂದ ಚೇತರಿಸಿಕೊಂಡು ಎಷ್ಟು ದಿನಗಳಾದವು? ವ್ಯಕ್ತಿಯಲ್ಲಿ ಇದ್ದಿರಬಹುದಾದ ದೈಹಿಕ ಕಾಯಿಲೆಗಳ ವಿವರ. ಯಾವ ತಳಿಯ ವೈರಸ್ ಆತನಲ್ಲಿ ಸೋಂಕು ಉಂಟು ಮಾಡಿತ್ತು? ಅದು ಅವನ ರಕ್ಷಣಾ ವ್ಯೂಹವನ್ನು ಭೇದಿಸಿ ಹೇಗೆ ಆತನ ದೇಹವನ್ನು ಆಕ್ರಮಿಸಿತ್ತು? – ಈ ಎಲ್ಲ ವಿವರಗಳು ಪ್ರತಿರೋಧ ರಕ್ಷಣೆಯನ್ನು ವಿಶ್ಲೇಷಿಸುವಾಗ ಅಗತ್ಯ.
ಕೋವಿಡ್ ಬಂದು ಹೋದ ನಂತರ ಉಂಟಾಗುವ ಪ್ರತಿರೋಧ ಶಕ್ತಿ ಹಾಗೂ ವ್ಯಾಕ್ಸಿನ್ ತೆಗೆದುಕೊಂಡಾದ ನಂತರ ಉಂಟಾಗುವ ಪ್ರತಿರೋಧ ಶಕ್ತಿ – ಇವುಗಳ ಬಗ್ಗೆ ಅಮೆರಿಕದ ಸಿಡಿಸಿ ಸಂಸ್ಥೆ ಕೆಲ ವಿವರಗಳನ್ನು ಹೊರಗೆಡವಿದೆ. ಸೋಂಕು ಬಂದು ಹೋದ ನಂತರ ಅಥವಾ ವ್ಯಾಕ್ಸಿನ್ ನಂತರ 6 ತಿಂಗಳವರೆಗೆ ಪ್ರತಿರೋಧ ಶಕ್ತಿ ಸರಿಯಾದ ಮಟ್ಟದಲ್ಲೇ ಇರುತ್ತದೆ. ಹಾಗಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಈ ಅಂತರ ಅಗತ್ಯ ಎಂಬುದು ತಜ್ಞರ ಅನಿಸಿಕೆ. ಕೋವಿಡ್ ಅಥವಾವ್ಯಾಕ್ಸಿನ್ ನಂತರ ಉಂಟಾಗುವ ಪ್ರತಿರೋಧ ಪ್ರಮಾಣ ಸಾಮಾನ್ಯವಾಗಿ ಉನ್ನತ ಸ್ತರದಲ್ಲಿಯೇ ಇರುತ್ತದಾದರೂ ಅದರ ನಿಖರತೆಯನ್ನೂ ಯಾರೂ ದೃಢೀ ಕರಿಸಿಲ್ಲ.
ಹೀಗಾಗಿ ವ್ಯಾಕ್ಸಿನೇಷನ್ ಅಥವಾ ಸೋಂಕಿಗೊಳಗಾದ ನಂತರ ಪುನಃ ಕೋವಿಡ್ ಬರುವ ಸಾಧ್ಯತೆ ಇದೆ. ಆದರೆ ಅದು ತುಂಬಾ ಅಲ್ಪ ಪ್ರಮಾಣದಲ್ಲಿರುತ್ತದೆ. ವ್ಯಕ್ತಿಆಸ್ಪತ್ರೆಗೆ ಸೇರಬೇಕಾದ ಅವಶ್ಯಕತೆ ಇರುವುದಿಲ್ಲ. ಮರಣ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಡೆಲ್ಟಾ ಪ್ರಭೇದದ ಸೋಂಕು ತುಂಬಾ ಜಾಸ್ತಿ ಇರುವ ಹೊತ್ತಿನಲ್ಲಿ, ಸರಿಯಾಗಿ ವ್ಯಾಕ್ಸಿನ್ ತೆಗೆದುಕೊಂಡ ವ್ಯಕ್ತಿಗಳಿಗೆ ಕೋವಿಡ್ ಬರುವ ಸಾಧ್ಯತೆ ವ್ಯಾಕ್ಸೀನ್ ತೆಗೆದುಕೊಳ್ಳದ ವ್ಯಕ್ತಿಗಳಿಗೆ ಹೋಲಿಸಿದಾಗ 6 ಪಟ್ಟು ಕಡಿಮೆ ಇತ್ತು. ಹಾಗೆಯೇ ಸಾವಿನ ಸಾಧ್ಯತೆ 11 ಪಟ್ಟು ಕಡಿಮೆ ಎಂದು ಲಭ್ಯ ಅಂಕಿ ಸಂಖ್ಯೆಗಳನ್ನು ಉದ್ದರಿಸಿ ಸಿಡಿಸಿ ಹೇಳುತ್ತದೆ.
ಮುಂದಿನ ಪ್ರಶ್ನೆ, ಹಾಗಿದ್ದರೆ ಸೋಂಕಿಗೊಳಗಾದ ನಂತರ ಪ್ರತಿರೋಧ ಶಕ್ತಿ ಎಷ್ಟು ಪ್ರಭಲ? ಕೋವಿಡ್ ಸೋಂಕಿನ ನಂತರ ಶೇ.90 ವ್ಯಕ್ತಿಗಳಲ್ಲಿ ದೇಹದಲ್ಲಿ ರಕ್ಷಣಾತ್ಮಕ ಆಂಟಿಬಾಡಿಗಳು ಉತ್ಪನ್ನವಾಗುತ್ತವೆ. ಅವು ಎಷ್ಟು ಅಧಿಕ ಪ್ರಮಾಣದಲ್ಲಿ ಇರುತ್ತವೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಅಧ್ಯಯನಗಳಪ್ರಕಾರ ಕೆಲವೊಮ್ಮೆ ಶೇ.200ರಷ್ಟು ಜಾಸ್ತಿ ಆಗಬಹುದು. ಈ ಸರಣಿಯಲ್ಲಿ ನೀವು ಯಾವ ರೇಂಜ್ ನಲ್ಲಿ ಇರುತ್ತೀರಿ ಎಂಬುದು ನಿಮ್ಮ ವಯಸ್ಸು, ಕೋವಿಡ್ ಕಾಯಿಲೆಯಿಂದ ನಿಮಗೆಷ್ಟು ತೊಂದರೆ ಆಗಿದೆ, ಅಲ್ಲದೆ ನಿಮಗೆ ಬೇರೆ ಯಾವುದಾದರೂ ಆರೋಗ್ಯ ಸಮಸ್ಯೆಗಳು ಇವೆಯಾ, ಅಥವಾ ಪ್ರತಿರೋಧ ಶಕ್ತಿಯನ್ನು ಕಡಿಮೆ ಮಾಡುವ ಯಾವುದಾದರೂ ಔಷಧಗಳನ್ನು ಸೇವಿಸುತ್ತಿದ್ದೀರಾ – ಎಂಬುದನ್ನು ಅವಲಂಬಿಸುತ್ತದೆ.
ದೇಹದ ಪ್ರತಿರೋಧ ವ್ಯವಸ್ಥೆ ವಯಸ್ಸಾದಂತೆ ಕ್ಷೀಣಿಸುತ್ತ ಬರುತ್ತದೆ. ಸಾಮಾನ್ಯ ೬೦ರ ವಯಸ್ಸಿನ ಸುಮಾರಿಗೆ ಆರಂಭವಾಗುವ ಈ ಪ್ರಕ್ರಿಯೆಯನ್ನುಇಮ್ಯನೋಸೆನೇಸೆನ್ಸ್ ಎನ್ನಲಾಗುತ್ತದೆ. ಆದರೆ ದೈಹಿಕವಾಗಿ ನಿಯಮಿತವಾಗಿ ವ್ಯಾಯಾಮಗಳಲ್ಲಿ ತೊಡಗಿರುವವರಲ್ಲಿ ಹಾಗೂ ಎಲ್ಲ ರೀತಿಯಲ್ಲಿ ಆರೋಗ್ಯ ವಾಗಿ ಇರುವವರಲ್ಲಿ ಪ್ರತಿರೋಧ ಶಕ್ತಿಯು ಹೆಚ್ಚು. ಒಂದೊಮ್ಮೆ ವಯಸ್ಸು ಜಾಸ್ತಿ ಆಗಿದ್ದರೂ ಅಂಥವರು ಚೆನ್ನಾಗಿಯೇ ಇರುತ್ತಾರೆ. ಆದರೆ ಸಾಮಾನ್ಯವಾಗಿ ವಯಸ್ಸಾ ಗಿರುವರಲ್ಲಿ ಕೋವಿಡ್ ಸೋಂಕಿನ ಬಳಿಕ ಪ್ರತಿರೋಧ ಶಕ್ತಿ ಸ್ವಲ್ಪ ಕಡಿಮೆಯೇ. ಹಾಗಾಗಿಯೇ ಇಂತಹವರಿಗೆ ವ್ಯಾಕ್ಸಿನ್‌ನ ಮೊದಲ ಡೋಸ್ ಬೇಗ ಕೊಡಬೇಕು ಮತ್ತು ಬೂಸ್ಟರ್ ಡೋಸ್‌ನ ಅಗತ್ಯವಿದೆ ಎನ್ನುತ್ತಾರೆ ತಜ್ಞರು.
ಥಂಡಿ, ಜ್ವರದ ರೀತಿಯ ಲಕ್ಷಣಗಳು ಇದ್ದು ಕರೋನಾ ಪಾಸಿಟಿವ್ ಬಂದು ಏನೂ ರೋಗಲಕ್ಷಣಗಳು ಇಲ್ಲದವರಿಗಿಂತ ಮನೆಯಲ್ಲಿಯೇ ಇದ್ದು ಗುಣವಾದವರಲ್ಲಿ ಹೆಚ್ಚು ಪ್ರತಿರೋಧ ಶಕ್ತಿ ಬೆಳೆದಿರುತ್ತದೆ. ಹಾಗೆಯೇ ಕಡಿಮೆ ಸೋಂಕು ಬಂದವರಿಗಿಂತ ಆಸ್ಪತ್ರೆಗೆ ಸೇರಿ ಗುಣವಾದವರಲ್ಲಿ ಹೆಚ್ಚು ಆಂಟಿಬಾಡಿಗಳ ರಕ್ಷಣೆ ಯಿರುತ್ತದೆ. ಆದರೆ ಆಸ್ಪತ್ರೆ ಸೇರಿ ಬಂದ ಹಲವರಲ್ಲಿ ಬಹಳಷ್ಟು ಕಾಯಿಲೆಯ ಲಕ್ಷಣಗಳು ಬಹು ದೀರ್ಘಕಾಲ ಇರುತ್ತವೆ. ಇನ್ನು ಸೋಂಕು ಬಂದು ಹೋದನಂತರ ಸಿಗುವ ರಕ್ಷಣೆ ಮತ್ತು ವ್ಯಾಕ್ಸಿನ್ ನಂತರ ಸಿಗುವ ರಕ್ಷಣೆ ಬಹಳಷ್ಟು ಒಂದೇ ಮಟ್ಟದ್ದು. ಈ ಸಂಬಂಧ ಹಲವಾರು ದೇಶಗಳಲ್ಲಿ 6 ದೊಡ್ಡ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಇವುಗಳಲ್ಲಿ & ಪರೀಕ್ಷೆಯನ್ನೂ ನಡೆಸಲಾಗಿತ್ತು.
ಇವುಗಳ ಪ್ರಕಾರ ಕೋವಿಡ್ ಬಂದು ಹೋಗಿ 6 ರಿಂದ 9 ತಿಂಗಳವರೆಗೆ ಒಬ್ಬ ವ್ಯಕ್ತಿಗೆ ಶೇ. 80-95ರೆಗೆ ಇನ್ನೊಮ್ಮೆ ಕೋವಿಡ್ ಬರುವ ಸಾಧ್ಯತೆ ಇಲ್ಲ.ಇನ್ನೊಂದು ಅಧ್ಯಯನದಲ್ಲಿ 25 ಸಾವಿರ ಆರೋಗ್ಯ ಕಾರ್ಯಕರ್ತರಲ್ಲಿ ಅವರಲ್ಲಿ ರೋಗ ಲಕ್ಷಣ ಇರಲಿ ಅಥವಾ ಇರದಿರಲಿ, ಪ್ರತೀ 2 ವಾರಗಳಿಗೊಮ್ಮೆ ಪರೀಕ್ಷೆ ನಡೆಸಲಾಯಿತು. ಮೊದಲು ಕರೋನಾ ಪಾಸಿಟಿವ್ ಫಲಿತಾಂಶ ಬಂದ ಶೇ.84 ಜನರಲ್ಲಿ ಮತ್ತೊಮ್ಮೆ ವೈರಸ್‌ಗೆ ಪಾಸಿಟಿವ್ ಬರುವುದಿಲ್ಲ ಎನ್ನಲಾಗಿದೆ. ತುಂಬಾಗಂಭೀರ ಪ್ರಮಾಣದ ಸೋಂಕು ಬರುವ ಸಾಧ್ಯತೆ ಶೇ.93ರಷ್ಟು ಕಡಿಮೆ ಹಾಗೂ ಏನೂ ರೋಗ ಲಕ್ಷಣಗಳಿಲ್ಲದವರಲ್ಲಿ ಸೋಂಕು ಬರುವ ಸಾಧ್ಯತೆ ಶೇ.52ರಷ್ಟು ಕಡಿಮೆ ಎನ್ನಲಾಗಿದೆ ( ಸೋಂಕು ಬಂದು ಹೋಗಿ ಕನಿಷ್ಠ 6 ತಿಂಗಳವರೆಗೆ ) ಮುಂದಿನ ಪ್ರಶ್ನೆ ಒಮ್ಮೆ ಸೋಂಕು ಬಂದು ಹೋದ ಮೇಲೆ ವ್ಯಾಕ್ಸಿನ್ ತೆಗೆದು ಕೊಳ್ಳ ಬೇಕೆ? ಬೇಡವೆ? ವ್ಯಾಕ್ಸೀನ್ ತೆಗೆದುಕೊಳ್ಳುವುದರಿಂದ ನ್ಯೂಟ್ರಲೈಸಿಂಗ್ ಆಂಟಿಬಾಡಿಗಳು ದೊಡ್ಡ ಮಟ್ಟದಲ್ಲಿ ಉತ್ಪಾದನೆ ಆಗುತ್ತವೆ.
ಅವು ವೈರಸ್ ಸೋಂಕು ಪುನಃ ಬಂದರೆ ಜೀವಕೋಶಗಳಲ್ಲಿ ಸೋಂಕು ಉಂಟು ಮಾಡಿ ವೈರಸ್‌ಗಳ ಪ್ರತಿರೂಪವನ್ನು ಪುನಃ ಸೃಷ್ಟಿದಂತೆ (ದ್ವಿಗುಣಗೊಳ್ಳದಂತೆ) ನೋಡಿಕೊಳ್ಳುತ್ತವೆ. ಇನ್ನುಳಿದ ಸಂದೇಹವೆಂದರೆ, ಕರೋನಾ ಸೋಂಕಿನ ನಂತರ ಉಂಟಾಗುವ ಆಂಟಿಬಾಡಿಗಳು ಮತ್ತು ವ್ಯಾಕ್ಸೀನ್ ಉತ್ಪಾದಿಸುವ ಆಂಟಿ ಬಾಡಿಗಳು ಭಿನ್ನವೇ? ಇದರಲ್ಲಿ ಹಲವು ಅಭಿಪ್ರಾಯಗಳಿವೆ. ಹೌದು, ಹೆಚ್ಚಿನವರು ಇವೆರಡೂ ಭಿನ್ನ ಎನ್ನುತ್ತಾರೆ. ಆದರೆ, ಸಾಮಾನ್ಯವಾ ಸೋಂಕಿನಿಂದ ಉಂಟಾ ಗುವ ಆಂಟಿಬಾಡಿಗಳಿಗಿಂತ ವ್ಯಾಕ್ಸೀನ್ ಉಂಟು ಮಾಡುವ ಆಂಟಿಬಾಡಿಗಳ ಮಟ್ಟ ಜಾಸ್ತಿ.
ಕರೋನಾ ಸೋಂಕಿಗೊಳಗಾದಾಗ ದೇಹದ ಪ್ರತಿರೋಧ ವ್ಯವಸ್ಥೆ ವೈರಸ್ ಅನ್ನು ಗುರುತಿಸಲು ಮತ್ತು ಅದರ ಎಲ್ಲ ಭಾಗಗಳನ್ನು ಆವರಿಸಲು ಪ್ರಯತ್ನಿಸುತ್ತದೆ. ಹೊರಗಿನ ವಸ್ತು ದೇಹವನ್ನು ಆಕ್ರಮಿಸಿದಾಗ ಅದರ ಎಲ್ಲ ಭಾಗಗಳನ್ನು ನೆನಪಿಟ್ಟುಕೊಳ್ಳುವ ಕೆಲಸವನ್ನು ಮೆಮೊರಿ ಬಿ ಜೀವಕೋಶಗಳು ಎಂಬ ಪ್ರತಿರೋಧಜೀವಕೋಶಗಳು ಮಾಡುತ್ತವೆ. ಈ ಮೆಮೊರಿ ಬಿ ಜೀವಕೋಶಗಳು ಪ್ಲಾಸ್ಮಾ ಜೀವಕೋಶಗಳನ್ನು ಉತ್ಪಾದಿಸುತ್ತವೆ. ಇವು ಹೊರಗಿನ ಆಕ್ರಮಣಕಾರರನ್ನು ಹಿಮ್ಮೆಟ್ಟಿಸುತ್ತವೆ. ಈ ಪ್ಲಾಸ್ಮಾ ಜೀವಕೋಶಗಳು ನಿಧಾನವಾಗಿ ಸಾಯುತ್ತ ಬಂದ ಹಾಗೆ ಆಂಟಿ ಬಾಡಿ ಮಟ್ಟ ನಿಧಾನವಾಗಿ ಕಡಿಮೆಯಾಗುತ್ತವೆ.
ಆದರೆ ಮೆಮೊರಿ ಬಿ ಜೀವಕೋಶಗಳು ಬಹಳ ಕಾಲದವರೆಗೆ ಜೀವಿಸುತ್ತವೆ. ಸಿಡುಬಿನ ವ್ಯಾಕ್ಸಿನ್ ಉತ್ಪಾದಿಸಿದ ಮೆಮೊರಿ ಬಿ ಜೀವಕೋಶಗಳು 60 ಕ್ಕೂ ಹೆಚ್ಚು ವರ್ಷ, ಕೆಲವೊಮ್ಮೆ ಜೀವಮಾನವಿಡೀ ಬದುಕುತ್ತವೆ ಎನ್ನಲಾಗಿದೆ. ಅವು ಹಾಲ್ರಸ ಗ್ರಂಥಿಗಳಲ್ಲಿ ( ) ಮತ್ತು ಅಸ್ಥಿಮಜ್ಜೆ ( ) ಗಳಲ್ಲಿ ಇರುತ್ತವೆ. ಅದೇ ವೈರಾಣು ಅಥವಾ ಬ್ಯಾಕ್ಟೀರಿಯಾ ದೇಹವನ್ನು ಆಕ್ರಮಿಸಿದರೆ ತಕ್ಷಣ ಸಕ್ರಿಯಗೊಳ್ಳುತ್ತವೆ.
ಇನ್ನೊಂದು ಅಧ್ಯಯನದ ಪ್ರಕಾರ ವ್ಯಾಕ್ಸಿನ್ ನಿಂದ ಸೂಕ್ತವಾಗಿ ತರಬೇತಿ ಪಡೆದ ಮೆಮೊರಿ ಬಿ ಜೀವಕೋಶಗಳು ಅವಿರತವಾಗಿ ಆಂಟಿಬಾಡಿಗಳನ್ನು ಪುನಃ ಪುನಃ ಉತ್ಪಾದಿಸುತ್ತ ಅದ್ಬುತ ರೀತಿಯಲ್ಲಿ ದೇಹಕ್ಕೆ ರಕ್ಷಣೆ ಕೊಡುತ್ತವೆ. ಹಾಗಾದರೆ, ನಿಮಗೆ ಕೋವಿಡ್ ಸೋಂಕು ಬಂದು ಹೋದ ನಂತರ ವ್ಯಾಕ್ಸಿನ್ ಮಾಡಿಸಿ ಕೊಂಡಾಗ ಏನಾಗುತ್ತದೆ? ಇದನ್ನು ವಿeನಿಗಳು ಹೈಬ್ರಿಡ್ ಪ್ರತಿರೋಧ ಎನ್ನುತ್ತಾರೆ. ಅಂದರೆ ಹೇಗೇ ನೋಡಿದರೂ ಉತ್ತಮವಾದದ್ದು ಎಂದು. ವ್ಯಾಕ್ಸಿನ್‌ನಿಂದತುಂಬಾ ತೀಕ್ಷ್ಣವಾದ, ಆದರೆ ಸಂಕುಚಿತ ರೀತಿಯ ಪ್ರತಿರೋಧ ಸಿಗುತ್ತದೆ. ಆದರೆ ವ್ಯಾಪಕ, ತೀಕ್ಷ್ಣವಲ್ಲದ ಪ್ರತಿರೋಧ ಕರೋನಾ ಸೋಂಕಿನಿಂದ ಸಿಗುವುದರಿಂದ ಎರಡೂ ರೀತಿಯ ಲಾಭ ಸಿಗುತ್ತದೆ ಎಂಬುದು ವಿಜ್ಞಾನಿಗಳ ಅನಿಸಿಕೆ.
ಇನ್ನೊಂದು ಅರ್ಥದಲ್ಲಿ ನಿಮ್ಮ ಪ್ರತಿರೋಧ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಎರಡೂ ರೀತಿಯಲ್ಲಿ ತರಬೇತಿಗೊಳಿಸಿಕೊಂಡಿರುತ್ತೀರಿ. ಸೋಂಕು ಬಂದು ವಾಸಿಯಾಗಿ ನಂತರ ವ್ಯಾಕ್ಸಿನ್ ತೆಗೆದುಕೊಂಡವರಲ್ಲಿ ಒಂದೇ ಡೋಸ್ ವ್ಯಾಕ್ಸೀನ್ ನಂತರವೇ, ಸಹಜ ವ್ಯಕ್ತಿಯಲ್ಲಿ ಎರಡೂ ಡೋಸ್ ವ್ಯಾಕ್ಸಿನ್ ತೆಗೆದು ಕೊಂಡಷ್ಟು ಹೆಚ್ಚಿನ ಪ್ರಮಾಣದ ಆಂಟಿಬಾಡಿಗಳು ಉತ್ಪನ್ನವಾಗುತ್ತವೆ ಎನ್ನುತ್ತವೆ ಅಧ್ಯಯನ.
ಕೊನೆಯ ಪ್ರಮುಖ ಅಂಶ, ದೇಹವನ್ನು ಸೋಂಕಿನಿಂದ ರಕ್ಷಿಸಲು ಆಂಟಿಬಾಡಿಯ ಮಟ್ಟ ಎಷ್ಟಿರಬೇಕು? ಈ ಬಗ್ಗೆ ವಿಜ್ಞಾನಿಗಳಿಗೆ ನಿಖರತೆ ಇಲ್ಲ. ಇತ್ತೀಚಿನ ಅಧ್ಯಯನದ ಪ್ರಕಾರ ಕೋವಿಡ್ ಸೋಂಕು ಉಂಟಾದ ಆಂಟಿಬಾಡಿ ಮಟ್ಟಕ್ಕಿಂತ ವ್ಯಾಕ್ಸಿನ್ ಉಂಟು ಮಾಡುವ ಆಂಟಿಬಾಡಿ ಮಟ್ಟವೇ ಜಾಸ್ತಿ ಎನ್ನಲಾಗಿದೆ.ಆದರೆ ಇಷ್ಟಂತೂ ಹೇಳಬಹುದು. ಮೇಲಿನ ಎಲ್ಲ ವಿಷಯಗಳ ಬಗ್ಗೆ ನಮಗೆ ಗೊತ್ತಿರುವ ಗೊತ್ತಾಗಬೇಕಾದ ವಿಚಾರಗಳು ಇನ್ನೂ ಬಹಳಷ್ಟಿವೆ ಎಂದು ವಿಜ್ಞಾನಿಗಳ ಅಭಿಮತ.