ಹೋಟೆಲ್ ಮೆನು ಹೇಳಕ್ಕೆ ನೀವೇ ಬೇಕಾ ?
ಹಂಪಿ ಎಕ್ಸ್‌’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@.
ಹಂಸಲೇಖ ಎಂದರೆ ಅದು ಹಾಲುತುಪ್ಪ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಸೇರಿಸಿ ಮಾಡಿದ ಸ್ಯಾವಿಗೆ ಪಾಯಸದಂಥ ವ್ಯಕ್ತಿ ಎಂದೇ ಜನ ಭಾವಿಸಿ ದ್ದರು. ಆದರೆ ಮೊನ್ನೆ ನೀವು ಆಡಿದ ಮಾತುಗಳು ಬೇಯುತ್ತಿದ್ದ ಮಟನ್ ಧಮ್ ಬಿರಿಯಾನಿಗೆ ನಾಲ್ಕುಹನಿ ಸೀಮೆಯೆಣ್ಣೆ ಸುರಿದಂತಾಗಿ ಎಲ್ಲರೂ ವಾಕರಿಸು ವಂತಾಗಿದೆ!
ಪರಶಿವನ ಮಹಾಭಕ್ತ ರಾವಣ ತನ್ನ ದೇಹದ ನರವನ್ನೇ ಕಿತ್ತು ತಂತಿಮಾಡಿ ತಂಬೂರಿಯನ್ನು ನುಡಿಸುತ್ತಾನೆ. ಮತ್ತೊಮ್ಮೆ ತನ್ನ ತಲೆಯನ್ನೇ ಕತ್ತರಿಸಿ ಶಿವಲಿಂಗದ ಮುಂದೆ ಇಡುತ್ತಾನೆ. ಅಂಥ ಮಹಾನ್‌ಭಕ್ತ ಕಠೋರ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾನೆ. ಆಗ ಪ್ರತ್ಯೆಕ್ಷರಾದ ಶಿವಪಾರ್ವತಿಯರು ‘ರಾವಣ ನಿನಗೇನು ವರ ಬೇಕು ಕೇಳುವಂಥವನಾಗು’ ಎಂದಾಗ ರಾವಣ ಪುಣ್ಯಾತ್ಮ ಎಂಥ ವರ ಕೇಳುತ್ತಾನೆ ಗೊತ್ತೇ? ಶಿವನ ಪಕ್ಷದ ಇರುವ ಸಾಕ್ಷಾತ್ ಮಾತೃಸ್ವರೂಪಿ ಪಾರ್ವತಿ ದೇವಿಯನ್ನೇ ಕೇಳಿಬಿಡುತ್ತಾನೆ.
ಹಾಗೆ ರಾವಣ ಆ ಕ್ಷಣದಲ್ಲಿ ಮತಿಹೀನನಾಗಿ ನಾಲಿಗೆ ತಪ್ಪಿ ಮಾತನಾಡಬಾರದ್ದನ್ನು ಮಾತನಾಡಿ, ಕೇಳ ಬಾರದ್ದನ್ನು ಕೇಳಿ ದೊಡ್ಡ ಎಡವಟ್ಟು ಮಾಡಿಕೊಳ್ಳುತ್ತಾನೆ. ಅಸಲಿಗೆ ಮಹಾವಿಷ್ಣುವೇ ರಾವಣನ ತಲೆಯೊಳಗೆ ಹೊಕ್ಕು ಆತನ ನಾಲಿಗೆಯಿಂದ ಹೀಗೆ ಪಾರ್ವತಿ ದೇವಿಯನ್ನು ಕೇಳುವಂತೆ ಮಾಡಿದ್ದು, ಲೋಕ ಕಲ್ಯಾಣಾರ್ಥ ಕ್ಕಾಗಿಯಂತೆ ಹಂಸಲೇಖ ಅವರೇ, ರಾವಣನೇನೋ ಅಂದು ವಿಷ್ಣುವಿನ ಪ್ರಭಾವದಿಂದ ಹಾಗೆ ನಾಲಿಗೆ ಹೊರಳಿಸಿದ್ದಾಯ್ತು. ಆದರೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ. ಸಾಹಿತ್ಯ-ಸಂಗೀತದಲ್ಲಿ ಅಪ್ರತಿಮ ಪಾಂಡಿತ್ಯ ಮೆರೆದಿರುವ ನಿಮ್ಮಂಥ ಮೇದಾವಿಗಳು ಕಳೆದವಾರ ನಾಲಿಗೆ ಹೊರಳಿಸಿಬಿಟ್ಟಿರ? ಅಂಥ ಮಾತನಾ ಡಲು ನಿಮಗೆ ಅದ್ಯಾವ ‘ಬರಗೆಟ್ಟ’ ಸಾಹಿತಿ, ಕುಲಗೆಟ್ಟ ವಿಚಾರವ್ಯಾದಿಗಳು ಪ್ರಚೋದಿಸಿದರೋ ಆ ರಾವಣನೇ ಬಲ್ಲ.
ಮೂರು ವಾರದ ಹಿಂದೆಯಷ್ಟೇ ‘ನಾಡಗೀತೆಯ ದೃಶ್ಯರೂಪಕ್ಕೆ ಹಂಸಲೇಖರ ಹಸ್ತ ಬೇಕಿದೆ’ ಎಂಬ ಶೀರ್ಷಿಕೆಯಡಿಯಲ್ಲಿ ನಿಮ್ಮ ಪಾಂಡಿತ್ಯಕ್ಕೆ ಸಾಷ್ಟಾಂಗ ಹಾಕಿನಿಮ್ಮನ್ನು ಆಧುನಿಕ ಪುರಂದರರು ಎಂದು ಸಂಬೋಽಸಿ ಬರೆದಿದ್ದೆ. ಆದರೆ ಅದೇನಾಯಿತೋ ನಿಮಗೆ, ಸಾಕ್ಷಾತ್ ನಿಮ್ಮ ಧರ್ಮಪತ್ನಿಯವರೇ ಗಾಬರಿಯಾಗು ವಂತೆ ಮಾತನಾಡಿದಿರಲ್ಲ. ನಿಜಕ್ಕೂ ನಮ್ಮಂಥ ನಿಮ್ಮ ಅಭಿಮಾನಿಗಳಿಗೆ ನಾಚಿಕೆ ಪಡುವಂತಾಗಿದೆ. ಮೊದಲಿಗೆ, ಪೇಜಾವರ ಶ್ರೀಗಳ ಕುರಿತು ಆಕ್ಷೇಪಣಾರ್ಹ ವಿಷಯಗಳನ್ನು ಪ್ರಸ್ತಾಪಿಸುವಷ್ಟಾಗಲಿ, ಅವರ ಲೋಕಕಾರ್ಯಗಳನ್ನು ಅರಿಯದಷ್ಟಾಗಲೀ ಪಾಮರರು ತಾವಲ್ಲವೇ ಅಲ್ಲ. ಅಂದೇನೋ ‘ನೀನಾ ಭಗವಂತ, ಜಗಕುಪಕರಿಸಿ ಎನಗಪಕರಿಸಿದ ಭಗವಂತ ನೀನೇನಾ’ ಎಂದು ಭಗವಂತನಿಗೆ ಬಂಡಾಯ ಸಾರಿ ಚಿತ್ರರಂಗದಲ್ಲಿ ನೆಲೆ ಕಟ್ಟಿಕೊಂಡಿರಿ.
ಅಲ್ಲಿಂದ ಇಲ್ಲಿಯವರೆಗೂ ನಿಮ್ಮ ಕ್ಷೇತ್ರವಾಯ್ತು ನೀವಾಯ್ತು ಎಂಬಂತೆ ತಟಸ್ಥರಾಗೇ ಸಾಗಿ ಬಂದಿರಿ. ಕಳೆದ ಶನಿವಾರದವರೆಗೂ ತಾವು ನಿಜಕ್ಕೂ ಮಹಾಗುರು ಗಳಾಗೇ ಕಂಗೊಳಿಸಿದ್ದೀರಿ. ಆದರೆ ಶಿಳ್ಳೆ ಚಪ್ಪಾಳೆ ಸಿಕ್ಕಿದ್ದೇ ಸಿಕ್ಕಿದ್ದು ‘ಕೋಳಿ ಸಾರು, ರಕ್ತದ ಫ್ರೈ, ನಾಟಿಕೋಳಿ ಸಾರು, ಲಿವರ್ ಫ್ರೈ, ಬೋಟಿ ಕಾಳುಗೊಜ್ಜು, ಕಲೀಜ ಫ್ರೈ, ತಲೆಮಾಂಸ ಸಾರು, ಕಾಲುಸೂಪು, ಮೆದುಳು ರೋಷ್ಟು, ಕೈಮ ಉಂಡೆ, ತಿಲ್ಲಿ ಗೊಜ್ಜು’ ಇತ್ಯಾದಿ ಮಿಲ್ಟ್ರಿ ಹೋಟೆಲ್ ಮೆನು ಉದುರಿಸಿದಿರಲ್ಲ, ಹಂಸಲೇಖ ಅವರೇ ನಿಜಕ್ಕೂ ಇದು ನಿಮ್ಮಂಥವರ ಬಾಯಿಂದ ಬರುವಂಥ ಮಾತುಗಳೇ ಅಲ್ಲ ಬಿಡಿ.
ಅದಕ್ಕೇನಿದ್ದರೂ ಕೆಲ ತಿಕ್ಕಲು ಸ್ವಾಮೀಜಿಗಳು, ಅಯೋಗ್ಯ ಲದ್ದಿಜೀವಿಗಳು, ಮತಿಹೀನ ವಿಚಾರವ್ಯಾದಿಗಳು, ತಲೆಕೆಟ್ಟ ಅಹಿಂಸಾ ನಟಡೋಂಗಿ ಬ್ರಾಂಡ್‌ ಗಳು ಸಮಾಜದಲ್ಲಿ ಬದುಕಿದ್ದಾರೆ. ಮತ್ತೂ ಅಂಥವರಿಗೆ ಹೇಗೆ ಉತ್ತರಿಸಬೇಕೆಂದು ಇಂದಿನ ಜನಗಳಿಗೆ ಹೇಳಿಕೊಡಬೇಕಿಲ್ಲ. ಇಂಥ ತಿಪ್ಪೆಗಳನ್ನು ಸಹಿಸಿಕೊಂಡು ಕೂರುವಷ್ಟು ಗುಲಾಮಗಿರಿ ಮನಸ್ಥಿತಿಯೂ ಇಂದಿನ ಜನಗಳಿಗೆ ಇಲ್ಲ. ಆದರೆ ನೀವು, ಹಂಸಲೇಖಾ ಅವರೇ ! ನೀವು ! ಇಂಥ ಮಾತುಗಳನ್ನು ಆಡಿದ್ದು ನಿಜಕ್ಕೂ ಆಘಾತಕಾರಿ. ಅದೆಂತೆಂಥಾ ಸಾಹಿತ್ಯ, ಪದಪ್ರಾಸಗಳು, ಪದಗಳೊಂದಿಗೆ ನೀವು ಮಾಡುವ ತಂತ್ರಗಾರಿಕೆ, ಸಂಗೀತ ಮಂತ್ರಗಾರಿಕೆ, ಅಣ್ಣಾವ್ರನ್ನೂ ನೀವುಮೋಡಿ ಮಾಡಿದ್ದು, ಕನ್ನಡ ಕಾವೇರಿ, ನೀಲಿಮಲೆಯ ಜೀವದೊಡೆಯ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗಳು, ಅವಳೇ ನನ್ನ ಹೆಂಡ್ತಿಯಂಥ ಕಥೆ ಚಿತ್ರಕಥೆ ಸಂಭಾಷಣೆ, ಅಜಗಜಾಂತರದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸನ್ನಿವೇಶಗಳನ್ನು ಕೇವಲ ಒಂದು ಹಾಡಿನಲ್ಲಿ ಸಂಯೋಜಿಸಿದ್ದು,ಎಕೆ47ಚಿತ್ರದಲ್ಲಿ ಹಾಡುಗಳೇ ಚಿತ್ರೀ ಕರಣವಾಗದಿದ್ದರೂ ಇರುವ ಸನ್ನಿವೇಷಗಳನ್ನೇ ಬಳಸಿ ಅದ್ಭುತವಾದ ಗೀತೆಗಳನ್ನು ಸೃಷ್ಟಿಸಿದ್ದು, ಅಂದು ತಮಿಳಿನಿಂದ  ಬಂದ ಕನ್ನಡಿಗ ನೃತ್ಯ ನಿರ್ದೇಶಕ ರಾಜುಸುಂದರಂ ನಿಮ್ಮ ‘ಕರೆಂಟು ಬಂತು’ ಹಾಡಿನಲ್ಲಿ ಕುಣಿಸುವಷ್ಟು ತಾಳವಿಲ್ಲ ಎಂದು ಜರಿದಾಗ ಮುಂದೆ ‘ಉರುಮಿಳ..’ ಹಾಡಿನಲ್ಲಿ ನೀವು ಬಾರಿಸಿದ್ದುಇನ್ನೂ ಅನೇಕ ಪ್ರಯೋಗಶೀಲ ಕೊಡುಗೆಗಳು, ದಾಸರನ್ನು ಹೋಲುವ ಸಾಹಿತ್ಯ, ಗಾನಯೋಗಿ ಯಂಥ ಹಿಂದೂಸ್ಥಾನಿ ಸಂಗೀತ, ಶ್ರೀಮಂಜು ನಾಥದಂಥ ಪರಮಭಕ್ತಿರಸ, ನಿಮ್ಮ ಶಿಷ್ಯಂದಿರು, ಬೆಳೆಸಿದ ಗಾಯಕಗಾಯಕಿಯರು, ಸಂಗೀತಗಾರರು.. ಅಬ್ಬಬಾ, ಕನ್ನಡಕ್ಕೊಬ್ಬನೇ ಹಂಸಲೇಖ ಎನ್ನುವಷ್ಟು ನಿಮ್ಮ ಸಾಮರ್ಥ್ಯ ಸಾಧನೆಯನ್ನು ಕನ್ನಡ ನಾಡಿಗೆ ಧಾರೆಯೆರೆದಿದ್ದೀರಿ.
ಹಂಸಲೇಖ ಎಂದರೆ ಅದು ಹಾಲುತುಪ್ಪ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಸೇರಿಸಿ ಮಾಡಿದಂಥ ಶ್ರೇಷ್ಠ ಸ್ಯಾವಿಗೆ ಪಾಯಸದಂಥ ವ್ಯಕ್ತಿ ಎಂದೇ ಜನರು ಭಾವಿಸಿದ್ದರು. ಆದರೆ ಮೊನ್ನೆ ನೀವು ಆಡಿದ ಆ ಮಾತುಗಳು ದೊಡ್ಡ ಪಾತ್ರೆಯೊಂದರಲ್ಲಿ ಬೇಯುತ್ತಿದ್ದ ಮಟನ್ ಧಮ್ ಬಿರಿಯಾನಿಗೆ ನಾಲ್ಕುಹನಿ ಸೀಮೆಯೆಣ್ಣೆ ಸುರಿದಂತಾಗಿ ಎಲ್ಲರೂ ವಾಕರಿಸುವಂತಾಗಿದೆ ಮಹಾಗುರುಗಳೇ!. ನೋಡಿ, ಈಗ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿರುವ ನಿಮ್ಮ ಮಾತಿನಿಂದ ಆಗಿರುವ ಎಡವಟ್ಟುಗಳನ್ನು ನೋಡುತ್ತಿದ್ದರೆ ‘ಕೋಣ ಈದೈತಿ’ ಎನ್ನುವಂತಾಗಿದೆ.
ಒಂದೆಡೆ ಪುನೀತ್ ಅವರು ಯಾರಿಗೂ ಕಾಣದೇ ಮಾಡಿದ ಸತ್ಕಾರ್ಯಗಳು ಒಂದೊಂದೇ ಬೆಳಕಿಗೆ ಬಂದು ಕೊಂಡಾಡುತ್ತಿದ್ದರೆ, ಇನ್ನೊಂದೆಡೆ ನಿಮ್ಮ ಕುರಿತು ಅಸಹ್ಯ ಟ್ರೋಲ್‌ಗಳು, ಅಂದ ಕಾಲತ್ತಿಲ್ ಅವಾಂತರಗಳನ್ನು ಒಬ್ಬೊಬ್ಬರೇ ಹರಿಬಿಡುತ್ತಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಪಶ್ಚಾತಾಪ ಮೂಡಿಸುತ್ತಿದೆ. ಏಕೆಂದರೆ ನೀವಾಡಿದ ಮಾತುಗಳನ್ನು ಇನ್ಯಾರೇ ಆಡಿದ್ದರೂ ಸಮಾಜದಲ್ಲಿ ಅದೊಂದು ಸತ್ತಕೋಳಿ ಕಬಾಬ್ ಎಂದು ನಾಯಿಗೆ ಬಿಸಾಡುತ್ತಿದ್ದರು. ಆದರೆ ನೀವುರಾಜಕಾರಣಿಗಳಲ್ಲ, ಯಾರಿಂದಲೂ ಮತಭಿಕ್ಷೆ ಬೇಡುವವರಲ್ಲ, ಮೊಯ್ಲಿಯಂಥ ಪ್ರಶಸ್ತಿ ಗಿಟ್ಟಿಸಿ ಕೊಳ್ಳುವ ಸಾಹಿತಿಗಳಲ್ಲ, ಅನ್ನ ತಿನ್ನುವ ಬಾಯಲ್ಲಿಭಗವದ್ಗೀತೆಗೆ ಬೆಂಕಿಹಚ್ಚಿ ಎಂದು ಹೇಳುವ ವಿಚಾರವ್ಯಾದಿಗಳೂ ನೀವಲ್ಲ.
ತಮ್ಮ ತಿಕ್ಕಲುಗಳಿಗೆ ಹೊಂದಿಕೆಯಾಗುವ ರಾಜಕಾರಣಿಗಳಿಗೆ ಬಕೇಟು ಹಿಡಿದು ಸರಕಾರಿ ಪದವಿ, ಸಮಿತಿಗಳ ಅಧ್ಯಕ್ಷಗಿರಿಗಳನ್ನು ಗಿಟ್ಟಿಸುವ ‘ಬರ’ಗೆಟ್ಟದೂರಿನ ಗಂಜಿ ಗಿರಾಕಿಯೂ ತಾವಲ್ಲ. ಆದರೆ ಮೊನ್ನೆ ನೀವಾಡಿದ ಮಾತುಗಳು ಈ ಎಲ್ಲ ಅಯೋಗ್ಯರುಗಳನ್ನು ಮೀರಿಸಿ ದೊಡ್ಡ ಹೊಂಡದಲ್ಲಿ ಬಿದ್ದಂತಾಗಿದೆ. ಹಾಗಂತ ನೀವು ಯಾರ ಬಗ್ಗೆಯೂ ಪ್ರಶ್ನಾರ್ಹ ಮಾತುಗಳನ್ನು ಆಡಬಾರದು ಅಂತಲ್ಲ. ಸಾಮಾಜಿಕ ಹೊಣೆಗಾರಿಕೆಗಳುಳ್ಳ ನಿಮ್ಮಂಥವರು ಸಮಾಜದ ಅಂಕುಡೊಂಕು ಗಳನ್ನು ತಿದ್ದಲೇ ಬೇಕು.
ನಿಮ್ಮಲ್ಲೂ ಒಬ್ಬ ಪುರಂದರದಾಸರು, ಒಬ್ಬ ಬಸವಣ್ಣನವರೂ ಇzರೆ. ವೇದಿಕೆಯೊಂದು ಸಿಕ್ಕ ಕೂಡಲೇ ಪೇಜಾವರ ಶ್ರೀಗಳ ಬಗ್ಗೆ ಇಂಥ ಮಿಲ್ಟ್ರಿ ಹೋಟೆಲ್ ಮಾತುಗಳನ್ನು ನುಡಿಯದೇ, ದಲಿತರು, ಅಸ್ಪೃಶ್ಯರು, ಶೋಷಿತರ ಬಗ್ಗೆ ನೀವು ತೋರಬೇಕಾದ ನೈತಿಕತೆ ಸಾಕಷ್ಟಿದೆ. ನೀವು ಕಣ್ಣಿಗೊತ್ತಿಕೊಳ್ಳುವ ಸರಸ್ವತಿ-ಗಣೇಶ ದೇವರನ್ನು ಪೂಜಿಸುವ ಮುಗ್ಧ ದಲಿತರನ್ನು ಕುತಂತ್ರಿ ಮಿಷನರಿಗಳು ಮತಾಂತರಿಸುವುದನ್ನು ತಡೆಯುವ ಹೋರಾಟ ಆರಂಭಿಸಬಹುದಿತ್ತು. ಬೆಂಗಳೂರಿನ ಚಮ್ಮಾರರ ಪುಟ್ಟ ಪೆಟ್ಟಿಗೆ ಅಂಗಡಿಗಳನ್ನು ಒಮ್ಮೆ ನೋಡಿ ಬನ್ನಿ ಅಲ್ಲಿ ಭಾರತರತ್ನ ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರಿಗಿಂತ ಏಸುಫೋಟೋಗಳನ್ನೇ ಪೂಜಿಸುವಂತೆ ಮಾಡಿ ಕೂರಿಸಿದ್ದಾರೆ. ಆ ಮೊಸದ ಜಾಗದಲ್ಲಿ ಸರಸ್ವತಿಗೆ ಸ್ಥಾನ ದೊರಕಿಸುವ ಪ್ರಯತ್ನ ಮಾಡಬಹುದಿತ್ತಲ್ಲವೇ? ಇನ್ನು ತಮ್ಮ ದೇಸಿ ಶಾಲೆಗೆ ದಲಿತರನ್ನು ಆಹ್ವಾನಿಸಿ ಉಚಿತ ತರಗತಿ ಏರ್ಪಡಿಸಿ ಅವರಲ್ಲೂ ಸಂಗೀತ ಸರಸ್ವತಿಯನ್ನು ಸ್ಥಾಪಿಸುವ ಯೋಜನೆ ಕೈಗೊಳ್ಳಬಹುದಾಗಿತ್ತಲ್ಲವೇ? ಅಂದು ನಿಮ್ಮ ಪುತ್ರನಿಗಾಗಿ ನಿರ್ಮಿಸಿ, ಬಿಡುಗಡೆಯನ್ನೂ ಕಾಣಿಸಲಾಗದ ‘ಸುಗ್ಗಿ’ ಚಲನಚಿತ್ರ, ಪ್ರೀತಿಗಾಗಿ ಧಾರವಾಹಿ ನಿರ್ಮಿಸುವು ದಕ್ಕಿಂತ ದಲಿತರ ಕಷ್ಟ ಕಾರ್ಪಣ್ಯಗಳನ್ನು ಬಿಂಬಿಸುವ ಸಿನಿಮಾಗಳನ್ನು ಧಾರವಾಹಿಗಳನ್ನು ಮಾಡಿದ್ದರೆ ಸಮಾಜ ನಿಮ್ಮನ್ನು ‘ಅಪರಂಜೀ ಚಿನ್ನವು ನಮ್ಮ ಮನೆಯ ದೇವರು’ ಎಂದು ಹಾಡಿ ಹೊಗಳುತ್ತಿದ್ದರು.
ಅಷ್ಟೇ ಏಕೆ, ಈಗ ನೋಡಿ ದಲಿತ ಮುಖ್ಯಮಂತ್ರಿ ವಿಷಯವನ್ನಿಟ್ಟುಕೊಂಡು ಎಲ್ಲ ಪಕ್ಷದವರೂ ಅಸಹ್ಯ ರಾಜಕೀಯ ಮಾಡುತ್ತಿದ್ದಾರೆ. ಇಂಥವರಿಗೆ ತಾವುಗಳು ಸರಿಯಾದ ಚಾಟಿ ಬೀಸಿ ತಿದ್ದಿ ಬುದ್ಧಿ ಹೇಳಬಹುದಲ್ಲವೇ? ಅಂಥ ನೈತಿಕ ಶಕ್ತಿ, ಹಕ್ಕು ಸಮಾಜ ನಿಮಗೆ ನೀಡಿದೆ. ನಿಮ್ಮ ಹವಾಲ ಧ್ವನಿಸುರುಳಿಯಂತೆ ವಿಡಂಬ ನಾತ್ಮಕ ಸುರಳಿಗಳನ್ನು ತಂದು ರಾಜಕೀಯ ದುರುಳರನ್ನು, ದಲಿತ ಅಲ್ಪಸಂಖ್ಯಾತ ವೋಟ್‌ಬ್ಯಾಂಕ್ ರಾಜಕೀಯವನ್ನು ಬೆತ್ತಲು ಮಾಡುವ ಶಕ್ತಿ ಖಂಡಿತಾ ನಿಮ್ಮ ಸಾಹಿತ್ಯಕ್ಕಿದೆ ಮಹಾಗುರುಗಳೇ!
ನಿಮ್ಮ ಹವಾಲ ಗೀತೆಯ ಸುರುಳಿಯಲ್ಲಿ ನೀವೇ ಹಾಡಿದ ‘ಹಾಯ್ ಬೆಂಗಳೂರು’ ಎಂಬ ಹಾಡಿನ ಪದವನ್ನೇ ಅಂದು ರವಿಬೆಳಗೆರೆ ಪತ್ರಿಕೆಗೆ ಶೀರ್ಷಿಕೆ ಮಾಡಿ ಕೊಳ್ಳುವಷ್ಟು ದೈತ್ಯ ಪದಪುಂಜ ನಿಮ್ಮೊಳಗಿದೆಯೆಂದರೆ ಅದು ಸಾಮಾನ್ಯವೇ? ಪೋಲಿ ಹಾಡುಗಳನ್ನು ಬರೆಯುತ್ತಿದ್ದಾಗ ಕನ್ನಡ ಸಾರಸ್ವತ ಲೋಕ ನಿಮ್ಮನ್ನು ಸಾಹಿತ್ಯಿಕ ಅಸ್ಪೃಶ್ಯರಂತೆ ಕಂಡಿದ್ದರು. ಅವರಿಗೆಲ್ಲ ಸಡ್ಡು ಹೊಡೆದು ಆ ವಯಸ್ಸಿನಲ್ಲಿಯೂ ಕನ್ನಡದಲ್ಲಿ ಎಂಎ ಮಾಡಿ ಯಾವುದೇ ಸಾಹಿತಿಯನ್ನು ಮೀರಿಸುವಷ್ಟುಸಾಹಿತ್ಯ ಧಾರೆಯನ್ನು ಹರಿಸಿದಿರಲ್ಲ. ಆಗ ತಾವು ಹೃದಯ ಸಂಬಂಽ ಬಾಧೆಗೆ ಒಳಗಾದಾಗ ನಿಮ್ಮ ಅಭಿಮಾನಿಗಳು ನಿಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದು ಸುಳ್ಳಲ್ಲ. ನೀವು ವೇದಿಕೆಗಳಲ್ಲಿ ಮಾತನಾಡಿದರೆ ಕೇಳಲು ಅಭಿಮಾನಿಗಳು ಕಿವಿ ನಿಮಿರಿಸುತ್ತಾರೆ.
ಬರಲಿರುವ ನಿಮ್ಮ ಸಾಹಿತ್ಯ ಸಂಗೀತದ ಐತಿಹಾಸಿಕ ಚಿತ್ರ ‘ರಾಜ ವೀರ ಮದಕರಿನಾಯಕ’ಕ್ಕಾಗಿ ನಮ್ಮಂಥ ಸಂಗೀತ ಪ್ರೇಮಿಗಳು ಕಾತರದಿಂದ ಕಾಯು ತ್ತಿದ್ದಾರೆ. ಆದರೆ ನೀವು ಮಾತ್ರ ಇಂದು ‘ನಾವಂಗಲ್ಲಂಗಲ್ಲ’ ಎಂಬತೆ ಬದಲಾಗಿ ಹೋಗಿದ್ದೀರಿ. ಇಂದು ಸೂಕ್ಷ್ಮ ವಿಚಾರವೆಂದರೆ ನೀವುಗಳು ಮಿಲ್ಟ್ರಿ ಹೋಟೆಲ್ ಮೆನು ಹೇಳುವ ಮೂಲಕ ಪೇಜಾವರ ಶ್ರೀಗಳನ್ನು ಅವಮಾನಿಸಿದಾಗಲೂ ನಿಮ್ಮ ಪರವಾಗಿ ಸಂಘಟನೆಯೊಂದು ನಿಮ್ಮನ್ನು ಸಮರ್ಥಿಸಿಕೊಳ್ಳ ಬಹುದು. ಆಕಸ್ಮಾತ್ ನಿಮ್ಮ ಜಾತಿ ಯಾವುದೆಂದು ಸಮಾಜದಲ್ಲಿ ತಿಳಿದಿದ್ದರಂತೂ ನೀವು ಅದೆಂಥ ಮಾತನಾಡಿದ್ದರೂ, ಅದೆಂಥಾ ವ್ಯಕ್ತಿಯನ್ನು ಅವಮಾನಿಸಿ ದರೂ ಜಾತಿವಾದಿಗಳು ಬಂದು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ.
ಹೊಲಸು ವೋಟ್‌ಬ್ಯಾಂಕ್‌ಗಾಗಿ ದೇಶದ್ರೋಹಿ ಅಮೂಲ್ಯ, ಕನ್ನಯ್ಯ ಅಂಥವರ ಅಂಡುನೆಕ್ಕುವ ಕಿತ್ತುಹೋದ ರಾಜಕಾರಣಿ ಗಳಿರುವಾಗ ಬ್ರಾಹ್ಮಣ ವರ್ಗದ ಸ್ವಾಮೀಜಿಗಳನ್ನು ಅವಹೇಳನ ಮಾಡಿದ ಯುಗಪುರುಷ ಹಂಸಲೇಖ ಅವರ ಪರ ಹೇಳಿಕೆ, ಟ್ವೀಟ್, ಖಂಡನೆ, ಪ್ರತಿಭಟನೆ ಮಾಡುವ ಡೋಂಗಿಗಳು ಇನ್ನೂ ಮೇಲೆದ್ದಿಲ್ಲ ಎಂದರೆ ಅದಕ್ಕೇ ಕಾರಣ ಹಂಸಲೇಖ ಅವರಿಗೆ ಜಾತಿಯೇ ಇಲ್ಲ. ಅವರಿಗೆ ಸರಸ್ವತಿ, ಸಂಗೀತ, ಸಾಹಿತ್ಯವೇ ಜಾತಿ ಮತ್ತು ಧರ್ಮ. ಹಾಗೇ ನೋಡಿ ದರೆ ಬ್ರಾಹ್ಮಣರ ಏಕತೆ ಇಲ್ಲ. ಪೇಜಾವರ ಶ್ರೀಗಳು ವೈಷ್ಣವ ಪಂಥದವರೆಂಬ ಅಸಡ್ಡೆ ಉಳಿದ ಪಂಥದಲ್ಲಿದೆ.
ಕೊನೆಯದಾಗಿ, ನೀವು ಕ್ಷಮೆ ಕೋರುವುದರಲ್ಲೂ ತಂತ್ರಗಾರಿಕೆ ಎಡಿಟಿಂಗುಗಳಿವೆ. ಆದರೆ ನೀವು ಹೇಗೇ ಎಷ್ಟೇ ಕ್ಷಮೆ ಕೋರಿದರೂ ನಿಮ್ಮೊಳಗಿರುವ ‘ಮೋಜು ಗಾರ ಸೊಗಸುಗಾರ’ ‘ಲಾಕಪ್ ಡೆತ್’ ಆಗಿzನೆ. ತಾವೇ ಹೇಳಿದಂತೆ ದಲಿತರು ಅಸ್ಪೃಶ್ಯರೆಂಬುದು ಕೇವಲ ವೇದಿಕೆಗಳಿಗೆ ಅನ್ವಯಿಸುವುದಲ್ಲ. ಮತಾಂತರವಾಗಿ ತಮ್ಮ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದರೂ ದಲಿತರ ಹೆಸರಿನಲ್ಲಿ ಮತಪಡೆದು, ಅಧಿಕಾರ ಅನುಭವಿಸಿ ಅವರ ಪರ ಪ್ರಾಮಾಣಿಕ ಕಾಳಜಿ ಕೆಲಸಗಳನ್ನು ಮಾಡದಿರುವ ರಾಜಕಾರಣಿಗಳಿಗೆ ಮೊದಲು ಚಾಟಿ ಬೀಸಿ, ಅವರನ್ನು ಮೊದಲು ಖಂಡಿಸಿ. ದಲಿತರಿಗೆ ಅನ್ಯಾಯವಾಗುತ್ತಿರುವುದು ಇಂಥವರಿಂದ ಹೊರತು ಪೇಜಾವರ ಶ್ರೀಗಳಂಥ ‘ಹೂವು ಹಣ್ಣಿ’ನಿಂದಲ್ಲ.
ನಿಮ್ಮಲ್ಲಿ ಸಂಗೀತ ಸಾಹಿತ್ಯವೆಂಬ ಬ್ರಹ್ಮಾಸ್ತ್ರವಿದೆ. ಅದನ್ನೇ ಆಯುಧಗಳನ್ನಾಗಿಸಿ ಮಾಸ್ಟರ್ ಹಿರಣ್ಣಯ್ಯ ಬಿಟ್ಟುಹೋದ ವಿಡಂಬನೆಯ ಪರಂಪರೆಯನ್ನು ಮುಂದುವರಿಸಿದರಷ್ಟೇ ಸಾಕು ಸಮಾಜ ಪರಿವರ್ತನೆಗೊಳ್ಳುತ್ತದೆ. ಇದು ಹಳ್ಳಿಮೇಸ್ಟ್ರು ಹಂಸಲೇಖ ಅವರು ಮಾಡಬಹುದಾದ ಕೆಲಸ.