ಜಿಪುಣ ಕಲಾವಿದ
ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಝೆನ್ ಕಥೆಗಳಲ್ಲಿ ಕಂಡು ಬರುವ ವೈವಿಧ್ಯ ಯಾವಾಗಲೂ ವಿಸ್ಮಯಕ್ಕೆ, ಕೌತುಕಕ್ಕೆ ಈಡು ಮಾಡುತ್ತದೆ. ಜಪಾನಿನಲ್ಲಿದ್ದ ಒಬ್ಬ ಕಲಾವಿದನ ಕುರಿತಾದ ಈ ಝೆನ್ ಕಥೆ ಮೇಲ್ನೋಟಕ್ಕೆ ಒಂದು ಅರ್ಥ ನೀಡಿದರೆ, ಅದರ ಆಳಕ್ಕಿಳಿದರೆ, ಬೇರೊಂದೇ ಅರ್ಥ ಹೊಳೆಯಿಸಬಲ್ಲದು.
ಗೇಸನ್ ಎಂಬ ವ್ಯಕ್ತಿಯೊಬ್ಬರು ಸನ್ಯಾಸಿಯಾಗಿದ್ದರೂ ಲೌಕಿಕ ಜೀವನವನ್ನು ಸಂಪೂರ್ಣ ತ್ಯಜಿಸಿರಲಿಲ್ಲ. ತಮ್ಮ ಕೌಶಲದ ಬಳಕೆ ಮಾಡಿಕೊಂಡು, ಕಲಾವಿದ ರಾಗಿದ್ದುಕೊಂಡು ತಮ್ಮ ಕಲಾವೃತ್ತಿಯನ್ನು ಮುಂದುವರಿಸಿದ್ದರು. ಚಿತ್ರ ರಚಿಸುವಲ್ಲಿ ಅವರು ಸಾಕಷ್ಟು ಪ್ರಸಿದ್ಧರು. ಆದರೆ ಅವರದ್ದೊಂದು ಅಭ್ಯಾಸವಿತ್ತು. ಯಾರಾದರೂ ಚಿತ್ರವನ್ನುರಚಿಸಿಕೊಡಲು ಹೇಳಿದರೆ, ಅದಕ್ಕಾಗುವ ಶುಲ್ಕವನ್ನು ಮುಂದಾಗಿಯೇ ಪಡೆಯುತ್ತಿದ್ದರು. ಆದ್ದರಿಂದ ಇವರನ್ನು ‘ಜಿಪುಣ ಕಲಾವಿದ’ ಎಂದು ಇತರರು ತಮಾಷೆ ಮಾಡುವುದೂ ಇತ್ತು.
ಮುಂಗಡ ಹಣವನ್ನು ಪಡೆಯದೇ, ಯಾವುದೇ ಕಾರಣಕ್ಕೂ ಅವರು ಚಿತ್ರ ರಚನೆಗೆ ಕೈಹಾಕುತ್ತಿರಲಿಲ್ಲ. ಅವರದ್ದು ಅದೊಂದು ಹಠ, ಅದೊಂದು ಧ್ಯಾನ. ಕೆಲವೊಮ್ಮೆ ಅವರ ಸಹಪಾಠಿಗಳು, ಇತರ ಝೆನ್ ಶಿಷ್ಯರು ಮತ್ತು ಊರಿನವರು ಇವರ ಹಣದ ಆಸೆಯನ್ನು ಕಂಡು ಬೇಸರಪಟ್ಟುಕೊಂಡಿದ್ದೂ ಉಂಟು. ಒಮ್ಮೆ ಜಪಾನಿನ ಪ್ರಖ್ಯಾತ ಗೇಶಾ ನರ್ತಕಿಯು ಕಲಾಕೃತಿಯನ್ನು ರಚಿಸಿಕೊಡುವಂತೆ ಹೇಳಿದಳು. ಆಕೆಯ ಮನವಿಯನ್ನು ಮನ್ನಿಸಿದ ಗೇಸನ್, ‘ನಿನ್ನಿಂದ ಎಷ್ಟು ಹಣ ನೀಡಲು ಸಾಧ್ಯ?’ ಎಂದು ಆಕೆಯನ್ನು ಕೇಳಿದರು.
‘ನಿಮ್ಮ ಶುಲ್ಕ ಎಷ್ಟಾದರೂ ಪರವಾಗಿಲ್ಲ. ನಾನು ಕೊಡುತ್ತೇನೆ. ಆದರೆ ನೀವು ನನ್ನ ಎದುರಿನಲ್ಲೇ ಚಿತ್ರ ರಚಿಸಬೇಕು’ ಎಂದು ಆ ನರ್ತಕಿ ಹೇಳಿದಳು. ಗೇಸನ್ ಸರಿ ಎಂದರು. ಒಳ್ಳೆಯ ದಿನ ನೋಡಿ,  ವಳ ಎದುರಿ ನಲ್ಲೇ ಚಿತ್ರವೊಂದನ್ನು ರಚಿಸಿಕೊಟ್ಟರು ಗೇಸನ್. ‘ನಿಮ್ಮ ಶುಲ್ಕ ಎಷ್ಟು?’ ಎಂದು ಆಕೆ ಕೇಳಿದಾಗ, ಗೆಸನ್ ಅತಿ ಹೆಚ್ಚಿನ ಮೊತ್ತವನ್ನು ಕೇಳಿ ಪಡೆದರು. ದುಡ್ಡನ್ನು ಕೊಟ್ಟು, ಚಿತ್ರವನ್ನು ಪಡೆದುಕೊಂಡು ಆ ನರ್ತಕಿಯು ತನ್ನ ಮನೆಗೆ ಹೊರಟಳು. ಆದರೆ, ಹೋಗುವ ಮುಂಚೆ, ಗೇಸನ್ ಅವರನ್ನು ಎಲ್ಲರ ಎದುರು ಚುಚ್ಚು ಮಾತಿನಿಂದ ಪ್ರಶ್ನಿಸಿದಳು.
‘ನಿಮ್ಮನ್ನು ಝೆನ್ ಗುರು ಎಂದು ಹೇಳುತ್ತಾರೆ. ಆದರೆ ನೀವು ಚಿತ್ರ ಬರೆದು ಹಣ ಸಂಗ್ರಹಿಸುತ್ತಿದ್ದೀರಿ. ಯಾಕೊ ಗೊತ್ತಾಗಲಿಲ್ಲ. ಹಣಕ್ಕಾಗಿ ನೀವು ಎಲ್ಲಿಬೇಕಾದರೂ, ಯಾವ ಚಿತ್ರವನ್ನು ಬೇಕಾದರೂ ಬರೆಯುತ್ತೀರಾ?’ ಎಂದು ಅವರನ್ನು ಮೂದಲಿಸಿದಳು. ‘ಹೌದು. ಚಿತ್ರ ಬರೆದು ಹಣ ಸಂಗ್ರಹಿಸುವುದು ನನ್ನ ಗುರಿ. ಅದನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವೆ’ ಎಂದರು ಗೇಸನ್. ಆಗ ಆಕೆ, ಅವರನ್ನು ಪರೀಕ್ಷಿಸುವಂತೆ, ಅವಳ ಲಂಗವನ್ನು ತೆಗೆದು ಕೊಟ್ಟು, ಅದರ ಮೇಲೆ ಒಂದು ನಿಸರ್ಗ ದೃಶ್ಯ ಬರೆಯಲು ಹೇಳಿದಳು. ಅವಳು ಹೇಳಿದಂತೆ ಒಂದು ಸುಂದರ ನಿಸರ್ಗ ಚಿತ್ರವನ್ನು ಆ ಲಂಗದ ಮೇಲೆ ಬರೆದುಕೊಟ್ಟು, ಅತಿ ಹೆಚ್ಚಿನಮೊತ್ತ ಪಡೆದರು ಗೇಸನ್. ಆ ನರ್ತಕಿಯು ಮತ್ತೊಮ್ಮೆ ಎಲ್ಲರೆದುರು ವರನ್ನು ಅಪಹಾಸ್ಯ ಮಾಡಿದಳು.
ಆದರೆ ಗೇಸನ್ ಏನನ್ನೂ ಮಾತನಾಡದೇ, ಮೌನವಾಗಿ ತಮ್ಮ ಆಶ್ರಮಕ್ಕೆ ಹಿಂದಿರುಗಿದರು. ಆದರೆ, ಒಂದೆರಡು ತಿಂಗಳಲ್ಲೇ, ಅವರನ್ನು ತಮಾಷೆ ಮಾಡಿದವ ರೆಲ್ಲರೂ ತಮ್ಮ ಮಾತುಗಳಿಗೆ ಪಶ್ಚಾತ್ತಾಪ ಪಡುವಂತಾಯಿತು. ಆ ಬೇಸಗೆಯಲ್ಲಿ ಊರಿನ ಹಲವು ಮನೆಗಳಿಗೆ ಬೆಂಕಿ ಬಿತ್ತು. ಜನರು ಮನೆಗಳಿಂದ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡರೂ, ಹೆಚ್ಚಿನವರ ಮನೆಯೊಳಗಿನ ವಸ್ತುಗಳು ಸುಟ್ಟು ಹೋಗಿ, ನಷ್ಟ ಅನುಭವಿಸಿದರು. ಆಗ ಮನೆ ಕಳೆದುಕೊಂಡವರೆಲ್ಲರನ್ನೂ ಗೇಸನ್ ಗುರುಗಳು ತಮ್ಮ ಆಶ್ರಮಕ್ಕೆ ಬರ ಹೇಳಿದರು. ಗುಂಪಾಗಿ ಅವರ ಆಶ್ರಮಕ್ಕೆ ಬಂದ ಆ ಹಳ್ಳಿಯ ಜನರಿಗೆ ಒಂದು ಅಚ್ಚರಿ ಕಾದಿತ್ತು.
ಅವರ ಆಶ್ರಮದಲ್ಲಿ ಒಂದು ಪುಟ್ಟ ನೆಲಮಾಳಿಗೆ ಇತ್ತು. ಗೇಸನ್ ಪುಟ್ಟ ಏಣಿ ಬಳಸಿ, ಆ ನೆಲಮಾಳಿಗೆಗೆ ಇಳಿದು, ಹತ್ತೈವತ್ತು ಡಬ್ಬಿಗಳನ್ನು ತಂದರು. ಅದರಲ್ಲಿ ದವಸ, ಧಾನ್ಯ, ಹೊದಿಕೆ ಮತ್ತು ದಿನಬಳಕೆಯ ವಸಗಳಿದ್ದವು. ಎಲ್ಲವನ್ನೂ ಅಗತ್ಯವಿದ್ದವರಿಗೆ ಕೇಳಿ ಕೇಳಿ ಹಂಚಿದರು. ಕಷ್ಟದ ಸಮಯದಲ್ಲಿ ದೊರಕಿದ ಈಸಹಾಯವನ್ನು ಕಂಡು ಜನರ ಕಣ್ಣಲ್ಲಿ ನೀರು ಬಂತು. ‘ನಾನು ಚಿತ್ರ ಬರೆದು ಹಣ ಸಂಗ್ರಹಿಸುತ್ತಿದ್ದುದು ಇದಕ್ಕೆ, ಈ ರೀತಿ ಜನರಿಗೆ ಕಷ್ಟ ಬಂದಾಗ ಸಹಾಯ ಮಾಡಲು. ಇಂದು ನನ್ನ ಈ ಪುಟ್ಟ ನೆಲಮಾಳಿಗೆಯನ್ನು ಖಾಲಿ ಮಾಡುತ್ತಿದ್ದೇನೆ. ಇವೆಲ್ಲವೂ ಜನರಿಗೆ ಸೇರಿದ್ದು’ ಎಂದು ಗಂಭೀರ ಧ್ವನಿಯಲ್ಲಿ ಹೇಳಿದ ಗೆಸನ್ಎಲ್ಲಾ ವಸ್ತುಗಳನ್ನು ಹಂಚಿಬಿಟ್ಟರು. ‘ಜಿಪುಣ ಕಲಾವಿದ’ ಎಂದೇ ಹೆಸರಾದ ಆ ಗುರುವಿನ ಬೆಲೆ ಅಂದು ಊರಿನವರಿಗೆ ಗೊತ್ತಾಯಿತು.