ಮಳೆ ಆರ್ಭಟ: ನಿಂತ ನೀರಾದ ರಸ್ತೆ ರಿಪೇರಿ
ತುಂಟರಗಾಳಿ
ಹರಿ ಪರಾಕ್
ಲೂಸ್ ಟಾಕ್ನರೇಂದ್ರ ಮೋದಿಏನ್ ಮೋದಿ ಸಾರ್, ಇಷ್ಟ್ ದಿನ ಪಟ್ಟು ಹಿಡಿದು ಕೂತಿದ್ರಿ, ಈಗ ಇದ್ದಕ್ಕಿದ್ದಂಗೆ ರೈತ ಕಾಯಿದೆ ವಾಪಸ್ ತಗೊಂಡ್ ಬಿಟ್ರಲ್ಲ?
ಏನ್ ಮಾಡೋದು ನಮ್ಮ ಸರ್ಕಾರಕ್ಕೆ ಕಂಟಕ ತಪ್ಪಿದ್ದಲ್ಲ, ಆ ಅಣ್ಣಾ ಹಜಾರೆ ಕಾಟಕ್ಕಿಂತ ಈ ‘ಅನ್ನ’ ಹಜಾರೆಗಳ ಕಾಟನೇ ಜಾಸ್ತಿ ಆಗಿಬಿಡ್ತು.
ಇಷ್ಟ್ ದಿನ ಯಾರ ಮಾತೂ ಕೇಳಲಿಲ್ಲ, ಈಗ ನೋಡಿದ್ರೆ, ವಾಪಸ್ ತಗೊಂಡ್ರು ಅಂತ ನಿಮ್ಮ ಸಮರ್ಥಕರೂ ಕೊಂಕು ಮಾತಾಡ್ತಾ ಇದ್ದಾರಲ್ಲ?
ನಮ್ ಕಷ್ಟ ಅವರಿಗೇನು ಗೊತ್ತು. ಇಷ್ಟ್ ದಿನ ರೈತರ ಬೇಡಿಕೆಗೆ ಮನ್ನಣೆ ಕೊಡಲಿಲ್ಲ, ಈಗ ಚುನಾವಣೆ ಸಮಯ ದಲ್ಲೂ ಮಣೆ ಹಾಕದಿದ್ರೆ ಹೆಂಗೆ? ಆದ್ರೂ, ಇದು ನಿಮ್ಮ ಸರಕಾರಕ್ಕೆ ಒಂಥರಾ ಹಿನ್ನಡೆ ಅಲ್ವಾ ? ಮುಂದಿನ ಎಲೆಕ್ಷನ್ ಫಲಿತಾಂಶದ ದಿನ ಮುನ್ನಡೆ ಸಿಗಬೇಕು ಅಂದ್ರೆ ಈ ಥರ ಹಿನ್ನಡೆ ಎಲ್ಲ ಕಾಮನ್.ಸರಿ, ನಿಮ್ಮ ಈ ದೊಡ್ಡ ನಿರ್ಧಾರಕ್ಕೆ ಪಕ್ಷದ ರಿಯಾಕ್ಷನ್ ಏನಿದೆ? ಇನ್ನೇನಿರುತ್ತೆ? ಜನರತ್ರ ಮೂರೂ ಬಿಟ್ಟವರು ಅಂತ ಬೈಸಿಕೊಳ್ಳೋದ್ರ ಬದ್ಲು, ಮೂರೂ ಕಾಯ್ದೆ ಬಿಟ್ಟವರು ಅನ್ನಿಸಿಕೊಳ್ಳೋದು ವಾಸಿ ಅಲ್ವಾ ಸರಿ, ಈ ಸಮಯ ದಲ್ಲಿ ನಿಮಗೆ ಈ ನಿರ್ಧಾರ ತಗೊಳ್ಳಿ ಅಂತ ಐಡಿಯಾ ಕೊಟ್ಟಿದ್ದು ಯಾರು? ಪವನ್ ಕುಮಾರ್…’ಯೂ ಟರ್ನ’ ಸಿನಿಮಾ ಡೈರೆಕ್ಟರ್ರು.(ಕಾಲ್ಪನಿಕ ಸಂದರ್ಶನ)
ಸಿನಿಗನ್ನಡಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ಕೊಟ್ಟಿದ್ದು ಎಲ್ಲ ನೊಂದ ಮನಸ್ಸುಗಳಿಗೆ ಒಂದು ರೀತಿಯ ಸಮಾಧಾನ ಕೊಟ್ಟಿದೆ. ಆದರೆ ಮೊಸರಲ್ಲಿ ಕಲ್ಲು ಹುಡುಕುವ ಸ್ವಭಾವದ, ಅಥವಾ ಊರಿಗೇ ಒಂದು ದಾರಿ ಆದ್ರೆ, ನಂದೇ ಒಂದು ದಾರಿ ಅಂತ ತೋರಿಸಿಕೊಳ್ಳುವ ಚಟ ಇರುವ ಕೆಲವರು, ಇದಕ್ಕೂ ಕೊಂಕು ಮಾತಾಡುತ್ತಿದ್ದಾರೆ.
ಕರ್ನಾಟಕ ರತ್ನ ಕೊಡುವಂಥದ್ದು ಪುನೀತ್ ಏನು ಮಾಡಿದ್ದಾರೆ ಎಂಬುದು ಕರ್ನಾಟಕದ ಎಲ್ಲರಿಗೂ ಗೊತ್ತು. ಆದರೆ ಇಂಥ ಅತೃಪ್ತರಿಗೆ ಮಾತ್ರ ಗೊತ್ತಿಲ್ಲ. ಅಂದ ಹಾಗೆ, ನಟಿ ಕಂಗನಾ ರನಾವತ್ ಗೆ ಪದ್ಮಶ್ರೀ ಕೊಟ್ಟಾಗ ಇವರ್ಯಾರೂ ಮಾತಾಡಲಿಲ್ಲ. ಕಂಗನಾ ಕೂಡ ಕೇವಲ ಒಬ್ಬ ನಟಿ. ನಟಿಯಾಗಿ ಆಕೆಯ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಆದರೆ ಅದನ್ನು ಬಿಟ್ಟು ಪದ್ಮಶ್ರೀ ಕೊಡುವಂಥ ಯಾವ ಕೆಲಸವನ್ನೂ ಆಕೆ ಮಾಡಿಲ್ಲ. ಹಾಗೆ ಒಳ್ಳೆ ನಟಿಯರಿಗೆಲ್ಲ ಪದ್ಮಶ್ರೀ ಕೊಡಬೇಕು ಅಂದ್ರೆ ಆಕೆಗಿಂತ ಹೆಚ್ಚು ಒಳ್ಳೆಯ ಅಭಿನಯದ ಮಾಡಿದ, ಹೆಚ್ಚು ಸಿನಿಮಾ ಮಾಡಿದ ನಟಿಯರ ಸಂಖ್ಯೆ ಕಮ್ಮಿ ಇಲ್ಲ. ಆದರೆ ಇದರ ಬಗ್ಗೆ ಮಾತನಾಡದ ಕೆಲವು ಮಂದಿ, ಪುನೀತ್ ಗೆ ಕರ್ನಾಟಕ ರತ್ನ ಕೊಟ್ಟಿದ್ದಕ್ಕೆ ಮಾತ್ರ ಒಳಗೊಳಗೇ ಗೊಣಗುತ್ತಿದ್ದಾರೆ.
ಇವರಲ್ಲಿ ಡಾ.ವಿಷ್ಣುವರ್ಧನ್ ಅವರ ಕೆಲವು ಅಭಿಮಾನಿಗಳೂ ಇದ್ದಾರೆ ಅನ್ನೋದು ಬೇಸರದ ಸಂಗತಿ. ಭಾರತಿ ವಿಷ್ಣುವರ್ಧನ್ ಅವರ ಕೈ ಮೀರಿ, ಕೆಲಸಕ್ಕೆ ಬಾರದವರ ಕೈಗೆ ಸಿಕ್ಕು ವಿಷ್ಣು ಎನ್ನುವ ಕರ್ನಾಟಕದ ಆಸ್ತಿಯ ದುರ್ಬಳಕೆ ಆಗುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತು. ಹತ್ತು ವರ್ಷಗಳ ಹಿಂದೆ ಲಾಟರಿ ಹೊಡೆಯು ತ್ತಿದ್ದವರು ಇವತ್ತು ವಿಷ್ಣು ಹೆಸರು ಹೇಳಿಕೊಂಡು, ಅಭಿಮಾನಿಗಳ ಭಾವನೆಗಳನ್ನು ಬಳಸಿಕೊಂಡು ಅದೆಷ್ಟು ಆಸ್ತಿಗೆ ಒಡೆಯರಾಗಿದ್ದಾರೆ ಅನ್ನೋದನ್ನ ವಿಷ್ಣು ಅಭಿಮಾನಿ ಸಂಘದ ಸದಸ್ಯರೇ ಹೇಳುತ್ತಾರೆ. ಇಂಥ ಸಂದರ್ಭದಲ್ಲಿ ಮತ್ತೆ, ವಿಷ್ಣು ಅವರಿಗೆ ಸಿಗದ ಪ್ರಶಸ್ತಿ ಇನ್ಯಾರಿಗೋ ಸಿಕ್ಕಿದೆ ಎಂದು ಹೇಳುತ್ತಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ನಡೆಯುತ್ತಿದೆ.
ಈ ವಿಷಯದಲ್ಲಿ ನಿಜವಾದ, ಅಪ್ಪಟ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ, ಇನ್ಯಾರಿಗೋ ಸಿಕ್ಕ ಪ್ರಶಸ್ತಿ, ನಮ್ಮ ವಿಷ್ಣುಗೆ ಸಿಗಲಿಲ್ಲವಲ್ಲ ಎಂಬ ಅನಿಸಿಕೆ ಬಂದರೆ ಅದಕ್ಕೆ ಕಾರಣ ವಿಷ್ಣು ಅವರ ಮೇಲಿನ ಅವರ ಅಭಿಮಾನ, ಪ್ರಾಮಾಣಿಕ ಪ್ರೀತಿ. ಅದರಲ್ಲಿ ತಪ್ಪಿಲ್ಲ. ಯಾರಾದ್ರೂ ನೀರು ಕುಡೀತಾ ಇರೋದನ್ನ ನೋಡಿದ್ರೆ, ನಮಗೆ ಬಾಯಾರಿಕೆ ಇಲ್ಲದಿದ್ದರೂ ಆ ಕ್ಷಣದಲ್ಲಿ ನೀರು ಕುಡಿಯಬೇಕು ಅನ್ನಿಸುತ್ತೆ. ಇದೂ ಒಂಥರಾ ಅದೇ ನಡವಳಿಕೆ. ನಿಜಕ್ಕೂ ನಮಗೆ ಬೇಕು ಅನ್ನಿಸಿದಾಗ ಮಾತ್ರ ಒಂದು ಕೆಲಸವನ್ನು ಮಾಡುವುದು ಮಾತ್ರ ಸಹಜ ಎನಿಸಿಕೊಳ್ಳುತ್ತೆ. ಆದರೆ, ಅಭಿಮಾನಿಗಳ ಹೊರತಾಗಿ ತಂದಿಟ್ಟು ತರಲೆ ನೋಡುವ ಕಿಡಿಗೇಡಿಗಳ ಬಾಯಿಗೆ ಯಾರೂ ಕಿವಿಗೊಡದಿದ್ದರೆ ಸಾಕು.
ನೆಟ್ ಪಿಕ್ಸ್ರಾತ್ರಿ ಹೊತ್ತು ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಸಿಡಿಲು, ಗುಡುಗು ಸಹಿತ ಭಾರೀ ಮಳೆ ಬಂದು ರಸ್ತೆಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಸೋಮು ತನ್ನ ಗಾಡಿ ಮೇಲೆ ಆ ಮಳೆಯ ಹೊರಗೆ ಹೊರಟ. ಗಾಡಿ ಓಡಿಸುತ್ತಿದ್ದ ಸೋಮು ಹಾಕಿಕೊಂಡಿದ್ದ ಜರ್ಕಿನ್ ನ ಜಿಪ್ ಕಿತ್ತು ಹೋಗಿತ್ತು.
ಹಾಗಾಗಿ, ಅದು ಗಾಳಿಗೆ ಅಗಲ ಆಗಿ ಹಾರಾಡುತ್ತಾ ತೊಂದರೆ ಕೊಡುತ್ತಿತ್ತು. ಅದಕ್ಕೆ ಸೋಮು ತನ್ನ ಜರ್ಕಿನ್ ಅನ್ನು ಬಿಚ್ಚಿ ಅದರ ಜಿಪ್ ಬೆನ್ನಿನ ಮೇಲೆ ಬರುವಂತೆ, ಅದರ ಹಿಂಭಾಗ ತನ್ನ ಎದೆ ಮೇಲೆ ಬರುವಂತೆ ಮಾಡಿ ಹಾಕಿಕೊಂಡು ಹೊರಟ. ಸ್ವಲ್ಪ ಹೊತ್ತಿನ ನಂತರ ರಾತ್ರಿ ಮನೆಯ ಇದ್ದ ಖೇಮುಗೆ ಒಂದ್ ಕಾಲ್ ಬಂತು. ನೋಡಿದ್ರೆ ಸೋಮುದು.
ಕಾಲ್ ಎತ್ತಿದ ತಕ್ಷಣ, ‘ಖೇಮು, ಆಕ್ಸಿಡೆಂಟ್ ಆಗಿದೆ, ಹೈವೇ ಪಕ್ಕ ಗಾಡಿ ಸ್ಕಿಡ್ ಆಗಿ ಪಕ್ಕದ ಹಳ್ಳಕ್ಕೆ ಬಿದ್ದಿದ್ದೇನೆ. ಬೇಗ ಬಾ’ ಅಂತ ಲೊಕೇಶನ್ ಹೇಳಿದ ಸೋಮು.ಮಳೆಯಲ್ಲಿ ಹೈ ವೇ ರೋಡಿನ ಪಕ್ಕದ ಮನೆಯಿದ್ದ ಖೇಮು ಅವಸರವಾಗಿ ಸುರಿಯುವ ಮಳೆಯ ಗಾಡಿ ಹತ್ತಿ ಹೈ ವೇ ನಲ್ಲಿ ಹೊರಟ. ಸೋಮು ಹೇಳಿದ ಲೊಕೇಶನ್ ತಲುಪಿದಾಗ ಅಲ್ಲಿ ಸೋಮು ಗಾಡಿ ಬಿದ್ದಿತ್ತು. ಪಕ್ಕದಲ್ಲಿ ಬಗ್ಗಿ ನೋಡಿದಾಗ ಆಳವಾದ ಹಳ್ಳದಲ್ಲಿ ಬಿದ್ದಿದ್ದ ಸೋಮು ಕಾಣಿಸಿದ. ಖೇಮು ಏನೇ ಪ್ರಯತ್ನ ಪಟ್ಟರೂ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯರು, ಆಸ್ಪತ್ರೆಗೆ ತರೋಕೆ ಮುಂಚೆನೇ ಇವರ ಪ್ರಾಣ ಹೋಗಿದೆ ಅಂತ ಹೇಳಿಬಿಟ್ಟರು.
ದುಃಖದಲ್ಲಿ ಕೂತಿದ್ದ ಖೇಮುವನ್ನು ಪೊಲೀಸರು ವಿಚಾರಿಸಲು ಬಂದರು. ಖೇಮುವನ್ನು ಕುರಿತು ಪೊಲೀಸ್ ಆಫೀಸರ್ ಕೇಳಿದ ‘ನೀವು ಅಲ್ಲಿಗೆ ಹೋದಾಗ ಅವರ ಪ್ರಾಣ ಹೋಗಿತ್ತಾ?’. ಅದಕ್ಕೆ ಖೇಮು ಹೇಳಿದ, ‘ಇಲ್ಲ ಸಾರ್, ಆಕ್ಸಿಡೆಂಟ್ ಆಗಿ ಬಿದ್ದ ರಭಸಕ್ಕೆ ಸೋಮುನ ತಲೆ ಉಲ್ಟಾ ತಿರುಗಿಕೊಂಡಿತ್ತು. ನಾನು ಅದನ್ನ ಸರಿ ಮಾಡಿದೆ. ತಕ್ಷಣ ಪ್ರಾಣ ಹೋಯ್ತು’
ಲೈನ್ ಮ್ಯಾನ್ಈ ಟೈಮಲ್ಲಿ ‘ಪಂಜಾಬ್’ ನಲ್ಲಿ ಯಾವ ಕನ್ನಡ ಸಿನಿಮಾ ರಿಲೀಸ್ ಮಾಡಬಹುದು?‘ಸೋಲಿಲ್ಲದ ಸರದಾರ’ಬೆಂಗಳೂರು ವೆದರ್ ನೋಡಿ ಐಟಿ ಉದ್ಯೋಗಿಗಳು ಏನ್ ಹೇಳ್ತಾ ಇದ್ದಾರೆ?‘ಕ್ಲೌಡ್ ಸ್ಟೋರೇಜ’ ಜಾಸ್ತಿ ಆಗಿದೆಮಳೆಯಿಂದ ನೀರು ತುಂಬಿಕೊಂಡ ಬೆಂಗಳೂರು ರಸ್ತೆಗಳು
‘ನಿಂತ ನೀರಾದ’ ರಸ್ತೆ ರಿಪೇರಿ ಕೆಲಸಗಂಡನೊಬ್ಬನ ಡೇರಿಂಗ್ ಡೈಲಾಗ್ನಾನೂ ‘ಉಕ್ಕಿನ’ ಮನುಷ್ಯನೇ, ನಮ್ಮನೇಲಿ ಹಾಲು ‘ಕಾಯಿಸೋದು’ ನಾನೇ.ರಷ್ಯನ್ ನೃತ್ಯಗಾರ್ತಿಬೆಳದಿಂಗಳ ‘ಬ್ಯಾಲೆ’ಶೌಚಾಲಯ ನಿರ್ವಹಣೆ ವಿಷಯದಲ್ಲಿ ಸರ್ಕಾರ ಕಣ್ಣು ಮುಚ್ಚಿಕೊಂಡು ಕೂತ್ರೆ ಏನಾಗುತ್ತೆ?ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತೆ.ಸರ್ಕಾರಗಳು ಶಾಲೆ ಕಟ್ಟಿಸದೆ, ಶಿಕ್ಷಣಕ್ಕೆ ಸರಿಯಾದ ವ್ಯವಸ್ಥೆ ಮಾಡದೇ ಇದ್ರೆ ಜನ ಏನ್ ಮಾಡಬೇಕುಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕುಪೊಲೀಸರಿಗೂ ಮೇಷ್ಟ್ರುಗಳಿಗೂ ಇರೋ ವ್ಯತ್ಯಾಸಪೊಲೀಸರು ಗಲಾಟೆ ಮಾಡಿದವರನ್ನ ಒದ್ದು ಒಳಗೆ ಹಾಕ್ತಾರೆ. ಮೇಷ್ಟ್ರು ಗಲಾಟೆ ಮಾಡಿದವರನ್ನ ಒದ್ದು ಹೊರಗೆ ಹಾಕ್ತಾರೆ.
ಕೆಲವು ಸಿನಿಮಾಗಳಿಗೆ ಸಿಗ್ತಾ ಇರೋ ಅಗತ್ಯಕ್ಕಿಂತ ಹೆಚ್ಚು ಪ್ಚಾರ ನೋಡಿದವರ ಅನಿಸಿಕೆಆಗ- ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲೆಸಿದ್ರಂತೆಈಗ- ಸಿನಿಮಾ ರಿಲೀಸ್ ಆಗೋಕೂ ಮುಂಚೇನೇ ವಿಮರ್ಶೆ ಬರೆಸಿದ್ರಂತೆ.