ಚೆಸ್ ಕುದುರೆ ನಡೆ, ಆಯ್ಲರ‍್ ಮತ್ತು ವೇದಾಂತ ದೇಶಿಕರ‍್
ತಿಳಿರು ತೋರಣ
ಶ್ರೀವತ್ಶ ಜೋಶಿ
@.
ಆಯ್ಲರ್‌ಗಿಂತ ಸುಮಾರು ಐದು ಶತಮಾನಗಳ ಹಿಂದೆಯೇ ವೇದಾಂತ ದೇಶಿಕರಿಗೆ ಚೆಸ್ ಬೋರ್ಡ್ ಕುದುರೆ ನಡೆ ಸಮಸ್ಯೆಗೊತ್ತಿತ್ತು. ಅಷ್ಟೇ ಅಲ್ಲ,ಉತ್ತರವೂ ಗೊತ್ತಿತ್ತು. ಆ ಉತ್ತರ ಗೋಚರಿಸುವಂತೆ ಶ್ಲೋಕದೊಳಗೊಂದು ಶ್ಲೋಕ ಕಟ್ಟುವ ಮಹಾಪಾಂಡಿತ್ಯವೂ ಅವರಿಗಿತ್ತು. ಅದೂ ಪಂಥ ಕಟ್ಟಿಕೊಂಡು ರಾತೋ ರಾತ್ರಿ ಕುಳಿತು ಬರೆದ ಕಾವ್ಯದಲ್ಲಿ !
ಅಶ್ವಶಕ್ತಿ ಅಥವಾ ಹಾರ್ಸ್‌ಪವರ್ ಎಂದರೆ ಸಾಮಾನ್ಯವಾಗಿ ಎಂಜಿನ್‌ಗಳ ಮತ್ತು ಮೋಟರ್ ಗಳ ಶಕ್ತಿಯ ಮಾಪನವಾಗಿ ಬಳಸುತ್ತೇವಷ್ಟೆ? ಚೆಸ್ ಆಡುವವರನ್ನು ಕೇಳಿನೋಡಿ ಅಶ್ವಶಕ್ತಿ ಏನೆಂದು. ಅವರಿಗೆ ಗೊತ್ತಿರುತ್ತದೆ ಕುದುರೆಯ ಪವರ್. ನಾನೊಬ್ಬ ಯಾವ ಮಟ್ಟದಲ್ಲೂ ಚೆಸ್ ಪರಿಣತ ಅಲ್ಲವಾದರೂ, ಆಟದ ನಿಯಮಗಳು ನಡೆಗಳು ತಕ್ಕಮಟ್ಟಿಗೆ ಗೊತ್ತಿರುವುದರಿಂದ ಹೇಳಬಲ್ಲೆ: ಚೆಸ್‌ನಲ್ಲಿ ಕುದುರೆಗೆ ಒಂಥರ ಸ್ಪೆಷಲ್ ಪವರ್ ಇರುತ್ತದೆ. ಕುದುರೆಯು ರಾಜ, ರಾಣಿ, ಆನೆ, ಒಂಟೆ, ಪದಾತಿಗಳಂತಲ್ಲದೆ ಬೇರೊಂದು ಕಾಯಿಯ ಮೇಲೆ ಜಂಪ್ ಮಾಡಿ ತನ್ನ ಗಮ್ಯಸ್ಥಾನವನ್ನು ತಲುಪಬಹುದು.
ಹಾಗಾಗಿಯೇ ಬೇಕಿದ್ದರೆ ಆಟದ ಆರಂಭದ ನಡೆಯಾಗಿ ಪದಾತಿಯ ಬದಲಿಗೆ ಕುದುರೆಯನ್ನೇ ನಡೆಸಬಹುದು. ಚೆಸ್ ನಲ್ಲಿ ಕುದುರೆಗೆ ಇನ್ನೂ ಒಂದು ವಿಶೇಷ ತಾಕತ್ತಿದೆ. ಏನೆಂದರೆ ರಾಜ, ರಾಣಿ, ಆನೆ, ಒಂಟೆ – ಇವುಗಳ ಮೇಲೆ ಪ್ರತ್ಯೇಕವಾಗಿ ದಾಳಿಯಿಡುವಾಗ ತಾನು ಆಯಕಟ್ಟಿನ ಸ್ಥಾನದಲ್ಲಿದ್ದು, ಅವುಗಳ ಪ್ರತಿ ದಾಳಿಗೆ ಒಡ್ಡಿಕೊಳ್ಳದೆ ಸುರಕ್ಷಿತವಾಗಿ ಇರಬಹುದು. ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ಬೇರೆ ಕಾಯಿಗಳಿಗೆ ಹೋಲಿಸಿದರೆ ತುಸು ವಿಚಿತ್ರ ವಾಗಿರುವ, ಇಂಗ್ಲಿಷ್‌ನಲ್ಲಿ ಔ ಅಕ್ಷರ ಬರೆದಂತೆ ಕಾಣುವ ಅದರ ನಡೆ.
ಇಂದಿನ ಲೇಖನವನ್ನು ಅರ್ಥ ಮಾಡಿಕೊಳ್ಳಲಿಕ್ಕೆ ನಿಮಗೆ ಚೆಸ್ ನಲ್ಲಿ ಕುದುರೆ ನಡೆ ಹೇಗಿರುತ್ತದೆ ಎಂದು ಗೊತ್ತಿದ್ದರೆ ಧಾರಾಳ ಸಾಕು, ನೀವೇನೂ ಚೆಸ್ ಚಾಂಪಿಯನ್ ಆಗಿರಬೇಕಿಲ್ಲ. ಏಕೆಂದರೆ ವ್ಯಾಖ್ಯಾನ ಚೆಸ್ ಬಗೆಗಲ್ಲ, ಚೆಸ್‌ನಲ್ಲಿ ಕುದುರೆಯ ನಡೆಯ ಬಗೆಗೆ. ಈಗ ಬರೀ ಒಂದು ಚೆಸ್ ಬೋರ್ಡ್ ಮತ್ತು ಕಾಯಿಗಳ ಪೈಕಿ ಒಂದು ಕುದುರೆಯನ್ನು ಮಾತ್ರ ಇಟ್ಟುಕೊಳ್ಳಿ. ಬೋರ್ಡಿನ64ಚೌಕಗಳಿಗೆ 1,2,3,4 … ಹೀಗೆ ಕ್ರಮಸಂಖ್ಯೆ ಕೊಡಲಾಗಿದೆ ಎಂದಿರಲಿ. ನೀವೀಗ ಕುದುರೆಯನ್ನು ಬೋರ್ಡ್ ಮೇಲೆ ಯಾವುದಾದರೂ ಒಂದು ಚೌಕದಿಂದ ಆರಂಭಿಸಿ ಚೆಸ್ ಆಟದಲ್ಲಿನ ಕುದುರೆ ನಡೆಯ ನಿಯಮವನ್ನು ಪಾಲಿಸುತ್ತ ಮನ್ನಡೆಸಬೇಕು.
ಬೇಕಿದ್ದರೆ ಕ್ರಮಸಂಖ್ಯೆ ೧ರ ಮೂಲೆಯ ಚೌಕದಿಂದಲೇ ನಿಮ್ಮ ಕುದುರೆಯ ನಡೆ ಆರಂಭವಾಗಲಿ. ಬೋರ್ಡಿನ ಎಲ್ಲ 64 ಚೌಕಗಳಿಗೂ ಕುದುರೆ ಭೇಟಿ ಕೊಡಬೇಕು. ಒಮ್ಮೆ ಭೇಟಿಯಿತ್ತ ಚೌಕಕ್ಕೆ ಮತ್ತೊಮ್ಮೆ (ಜಂಪ್ ಮಾಡುವುದನ್ನು ಹೊರತುಪಡಿಸಿ) ಪ್ರವೇಶಿಸುವಂತಿಲ್ಲ. ಅದೇನು ಮಹಾ ಯಾರು ಬೇಕಿದ್ದರೂ ಮಾಡಬಹುದು ಎಂದುಕೊಂಡೀರಿ ಜೋಕೆ! ಊಹಿಸಿದಷ್ಟು ಸುಲಭವಿಲ್ಲ ಈ ಚಾಲೆಂಜ್. ಒಮ್ಮೆ ಕುದುರೆ ಹತ್ತಿ ಪ್ರಯತ್ನಿಸಿ ನೋಡಿ. ಇದು ’  ಎಂಬ ಹೆಸರಿನಿಂದ ಬಹುಪ್ರಖ್ಯಾತವಾಗಿರುವ ಒಂದು ಗಣಿತ ಸಮಸ್ಯೆ.
ಪರಿಹಾರವಿಲ್ಲದ ಸಮಸ್ಯೆಯೇನಲ್ಲ. ಚೆಸ್ ಬೋರ್ಡ್‌ನಲ್ಲಿ ಈ ರೀತಿ ಕುದುರೆ ನಡೆಯಿಂದ ಎಲ್ಲ ಚೌಕಗಳನ್ನೂ ಭೇಟಿ ಮಾಡಿ ಬರುವುದು ಒಂದಕ್ಕಿಂತ ಹೆಚ್ಚು ರೀತಿ ಯಲ್ಲಿ ಸಾಧ್ಯವಿದೆ. ಸಮಸ್ಯೆಯನ್ನು ಇನ್ನೂ ಕ್ಲಿಷ್ಟವಾಗಿಸಿ ಕುದುರೆ ಮೊದಲು ಹೊರಡುವಾಗ ಇದ್ದ ಚೌಕಕ್ಕೇ ಮರಳುವಂತೆಯೂ ಮಾಡಬಹುದು, ಅಥವಾ ಹೊರಟ ಚೌಕವನ್ನು ಬಿಟ್ಟು ಉಳಿದ 63 ಚೌಕಗಳು ಕವರ್ ಆದಾಗ ಕುದುರೆ ಸವಾರಿ ಮುಗಿಯಿತು ಎಂದುಕೊಳ್ಳಲೂಬಹುದು.
ಸಾಂಪ್ರದಾಯಿಕ ಚೆಸ್ ಬೋರ್ಡ್ ಅಲ್ಲದೆ ಬೇರೆ ಸಂಖ್ಯೆಯ ಚೌಕಗಳಿಂದಾದ ಬೋರ್ಡ್‌ನಲ್ಲೂ ಪ್ರಯೋಗ ಮಾಡಿ ನೋಡಬಹುದು. ಶತಮಾನಗಳಿಂದ ಗಣಿತಜ್ಞರು ಈ ಸಮಸ್ಯೆಯನ್ನು ಗಣಿತರೀತ್ಯಾ ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಗಮನಾರ್ಹ ವಾದುದು ಪ್ರಖ್ಯಾತ ಗಣಿತಜ್ಞ ಲಿಯೊನಾರ್ಡ್ ಆಯ್ಲರ್ ಕ್ರಿ.ಶ 1759ರಲ್ಲಿ ಬರ್ಲಿನ್‌ನಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದ ವಿಶ್ಲೇಷಣೆ. ಚೆಸ್ ಬೋರ್ಡ್ ಕುದುರೆ ನಡೆಯ ಸಮಸ್ಯೆಯಲ್ಲಿ, ಹೊರಟ ಚೌಕಕ್ಕೇಮರಳುವುದಾದರೆ ಒಂದೇಒಂದು (ಅಥವಾ ಸಮಮಿತಿಯಿಂದಾಗಿ ಪ್ರದಕ್ಷಿಣಾಕಾರ ಮತ್ತು ಅಪ್ರದಕ್ಷಿಣಾಕಾರ ಪರಿಗಣಿಸಿದರೆ ಎರಡು) ನಿರ್ದಿಷ್ಟ ಪಥ ಇರುವು ದಾಗಿಯೂ, ಹೊರಟ ಚೌಕಕ್ಕೆ ಮರಳದೆ ಎಲ್ಲ ಚೌಕಗಳನ್ನು ಭೇಟಿ ಮಾಡುವುದು ಮಾತ್ರ ಗುರಿಯಾದರೆ ಅಸಂಖ್ಯ ಪಥಗಳು ಇರುವುದಾಗಿಯೂ ಆಯ್ಲರ್ ವಿವರಿಸಿ ದ್ದಾನೆ.
ಇದನ್ನು ಗಣಿತ ಸೂತ್ರಗಳೊಂದಿಗೆ, ಪ್ರಮೇಯಗಳೊಂದಿಗೆ, ಪೂರಕ ಚಿತ್ರಗಳೊಂದಿಗೆ ಪುಷ್ಟೀಕರಿಸಿದ್ದಾನೆ. ಆಶ್ಚರ್ಯವೆಂದರೆ ಸ್ವತಃ ಆಯ್ಲರ್ ಆ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ಮಾಡಿದಂತಿಲ್ಲ. ಬೇರೆ ಎಷ್ಟೋ ಗಣಿತಜ್ಞರು ಅದೇ ಸಮಸ್ಯೆಯನ್ನು ಹೊಸ ಆಯಾಮಗಳಿಂದ, ದೃಷ್ಟಿಕೋನಗಳಿಂದ ನೋಡಿದ್ದಾರೆ. ಅದರ ಅಗಾಧತೆಗೆ ಬೆರಗಾಗಿದ್ದಾರೆ. ಗ್ರಾಫ್ ಥಿಯರಿ, ಹ್ಯಾಮಿಲ್ಟೋನಿಯನ್ ಪಾತ್ ಮುಂತಾದವನ್ನು ಕಲಿಯುವ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೂ ಈ ಸಮಸ್ಯೆ ಅಚ್ಚುಮೆಚ್ಚಿನದಾಗಿದೆ. 1997ರಲ್ಲಿ ಬ್ರೆಂಡನ್ ಮೆಕ್‌ಕೇ ಎಂಬಾತ ಗಣಕ ಯಂತ್ರವನ್ನು ಉಪಯೋಗಿಸಿ ಎಂಟು ಇನ್‌ಟು ಎಂಟು ಚೆಸ್ ಬೋರ್ಡ್‌ನಲ್ಲಿ ಕುದುರೆನಡೆಯ ಎಷ್ಟು ಪಥಗಳು ಸಾಧ್ಯ ಎಂದು ಲೆಕ್ಕ ಹಾಕಿದ.
ಆ ಸಂಖ್ಯೆ ಎಷ್ಟಿರಬಹುದು ಊಹಿಸಿ? ಒಂದು ಸೂಪರ್ ಫಾಸ್ಟ್ ಕಂಪ್ಯೂಟರ್ ಉಪಯೋಗಿಸಿ ನಿಮಿಷಕ್ಕೆ ಹತ್ತು ಲಕ್ಷದಂತೆ ಎಣಿಕೆ ಮಾಡಿದರೂ ಕಂಪ್ಯೂಟರ್‌ಗೆ 25ವರ್ಷಗಳಿಗಿಂತಲೂ ಹೆಚ್ಚು ಸಮಯ ಬೇಕು ಆ ಸಂಖ್ಯೆಯನ್ನು ಎಣಿಸಲು! ಚೆಸ್ ಬೋರ್ಡ್ ಕುದುರೆ ನಡೆ ಸಮಸ್ಯೆ ಈಚಿನ ವರ್ಷಗಳಲ್ಲಿ ಮತ್ತೊಮ್ಮೆ ಸುದ್ದಿ ಮಾಡಿದ್ದು ಫೆಬ್ರವರಿ ೨೦೦೩ರಲ್ಲಿ. ಜರ್ಮನಿ ಯಲ್ಲಿ ಕ್ಸೇವರ್ ಎಂಬ ೯ ವರ್ಷದ ಪೋರನೊಬ್ಬ ಜಗತ್ತೇ ನಿಬ್ಬೆರ ಗಾಗುವಂತಹ ಒಂದು ಸಾಧನೆ ಮಾಡಿ ತೋರಿಸಿದ. ಟಿವಿ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಆತ ಚೆಸ್ ಬೋರ್ಡ್ ಕುದುರೆ ನಡೆ ಸಮಸ್ಯೆಗೆ ಚೆಸ್ ಬೋರ್ಡ್ ಆಗಲೀ ಪೆನ್ನು-ಪೇಪರ್ ಕಂಪ್ಯೂಟರ್ ಆಗಲೀ ಏನೂ ಇಲ್ಲದೆ ಬರೀ ‘ತಲೆ’ ಉಪಯೋಗಿಸಿ ಉತ್ತರ ಹೇಳಿ ವೀಕ್ಷಕರನ್ನೆಲ್ಲ ದಂಗುಬಡಿಸಿದ!
ಅಷ್ಟೇ ಅಲ್ಲ, ಅವನ ಕಣ್ಣುಗಳಿಗೆ ಬಟ್ಟೆ ಕಟ್ಟಲಾಗಿತ್ತು. ಚೆಸ್ ಬೋರ್ಡ್ ಮೇಲೆ ಕುದು ರೆಯ ಆರಂಭಿಕ ಸ್ಥಾನವನ್ನಷ್ಟೇ ಅವನಿಗೆ ಹೇಳಲಾಗಿತ್ತು. ಅಲ್ಲಿಂದ 64 ನಡೆಗಳನ್ನೂ ಟಕ್ ಟಕ್ ಟಕ್ ಎಂದು ಆತ ಒಂದೊಂದಾಗಿ ಹೇಳುತ್ತ ಹೋದ. ಅದು ಕುದುರೆ ನಡೆ ಸಮಸ್ಯೆಗೆ ಪರ್ಫೆಕ್ಟ್ ಉತ್ತರವಾಗಿತ್ತು. ಎಂಥ ಮೇಧಾವಿಯಿರ ಬೇಕು ಆ ಬಾಲಕ! ಸರಿ, ಚೆಸ್ ಬೋರ್ಡ್ ಮೇಲೆ ಕುದುರೆ ನಡೆ ಸಮಸ್ಯೆಯ ಕುರಿತು ಅಷ್ಟು ವಿವರಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಈಗ ವೇದಾಂತ ದೇಶಿಕರ್ ಎಂಬ ಹೆಸರಿನ ಭಾರತೀಯ ಸಂತ, ತತ್ವ್ತಜ್ಞಾನಿ, ಸಂಸ್ಕೃತ ಕವಿ, ಮಹಾಶಿಕ್ಷಕ ಪಂಡಿತರ ಕಿರುಪರಿಚಯ ಮಾಡಿಕೊಳ್ಳೋಣ.
ಇವರು ಕ್ರಿಸ್ತಶಕ ಹದಿಮೂರನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ ಬಾಳಿದವರು. ಶ್ರೀವೈಷ್ಣವ ಪಂಥಕ್ಕೆ ಸೇರಿದ ಈ ಮಹಾತ್ಮರು ಹುಟ್ಟಿದ್ದು ತಿರುಪತಿಯ ವೆಂಕಟೇಶ್ವರ-ಪದ್ಮಾವತಿಯರ ಅನುಗ್ರಹದಿಂದ ಎಂದು ಪ್ರತೀತಿ. ಚಿಕ್ಕ ಮಗುವಾಗಿದ್ದಾಗ ಇಟ್ಟಿದ್ದ ಹೆಸರು ‘ವೆಂಕಟನಾಥ’ ಎಂದು. ಇವರ ಜನ್ಮದ ವಿಷಯವಾಗಿ ಕುತೂಹಲಕರವಾದ ಕಥೆಗಳಿವೆ. ಈ ಜ್ಞಾನಿಗಳು, ಭಕ್ತಶ್ರೇಷ್ಠರು ಭಗವಂತನ ವಿಶೇಷ ಅನುಗ್ರಹದಿಂದ ಹುಟ್ಟಿದರು, ಇವರಲ್ಲಿ ಭಗವಂತನ ಅಂಶ ಇತ್ತು ಎಂಬು ದನ್ನು ಈ ಕಥೆಗಳು ಮನದಟ್ಟು ಮಾಡಿಕೊಡುತ್ತವೆ.
ಅಂತಹ ಒಂದು ಕಥೆ ನಾನೆಲ್ಲೋ ಓದಿದ್ದುಹೀಗಿದೆ:‘ಕಾಂಚೀಪುರದ ಹತ್ತಿರ ತೂಪ್ಪಿಲ್ ಎಂಬ ಅಗ್ರಹಾರ. ವೇದಾಂತದೇಶಿಕರ ತಂದೆತಾಯಿ ಅಲ್ಲಿನವರು. ತಂದೆಯ ಹೆಸರು ಅನಂತಸೂರಿ. ತಾಯಿ ತೋತಾರಮ್ಮ. ಅನಂತಸೂರಿ- ತೋತಾರಮ್ಮ ದಂಪತಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಅದೇ ಅವರಿಗೆ ಒಂದು ದೊಡ್ಡ ಕೊರತೆಯಾಗಿತ್ತು. ಒಂದು ದಿನ ಅವರಿಗೆ ಒಂದು ಕನಸಾಯಿತು. ತಿರುಪತಿಯ ಶ್ರೀನಿವಾಸನು ಕನಸಿನಲ್ಲಿ ಕಾಣಿಸಿಕೊಂಡು, ‘ಸೂರಿ, ನೀವು ನನ್ನ ಸೇವೆ ಮಾಡಿ’ ಎಂದನು. ಅನಂತಸೂರಿಗಳು ಇದನ್ನು ಹೆಂಡತಿಗೆ ಹೇಳಿದರು. ಅವರಿಗೂ ಹಾಗೆಯೇ ಕನಸಾಗಿತ್ತು.
ಪದ್ಮಾವತಿದೇವಿ ಕನಸಿನಲ್ಲಿ ಕಾಣಿಸಿಕೊಂಡು ಹೇಳಿದ್ದಳು. ದೇವರ ಅಪ್ಪಣೆ ಎಂದು ಅವರಿಬ್ಬರೂ ತಿರುಪತಿಗೆ ಹೋಗಿ ಸೇವೆಗೈದರು. ಮತ್ತೊಮ್ಮೆ ಕನಸಿನಲ್ಲಿ ಶ್ರೀನಿವಾಸನು ಕೊಟ್ಟ ಘಂಟೆಯನ್ನು ತೋತಾರಮ್ಮ ನುಂಗಿಬಿಟ್ಟಳು. ಆಗ ಅವರಿಗೆ ಎಚ್ಚರವಾಯಿತು. ಆ ಘಂಟೆಯ ಅಂಶವೇ ವೇದಾಂತ ದೇಶಿಕರಾಗಿ ಅವತಾರ ರೂಪದಲ್ಲಿ ಬಂದರು. ವೇದಾಂತ ದೇಶಿಕರನ್ನು ‘ಘಂಟಾವತಾರರು’ ಎಂದು ಕರೆಯುವುದುಂಟು.’
‘ಆತ್ರೇಯ ರಾಮಾನುಜರು ವೆಂಕಟನಾಥನ ಸೋದರಮಾವ. ಅವರು ಒಮ್ಮೆ ವೆಂಕಟನಾಥನನ್ನು ಕರೆದುಕೊಂಡು ತಮ್ಮ ಗುರುಗಳಾದ ವಾತ್ಸ್ಯವರದಾ ಚಾರ್ಯರ ಉಪನ್ಯಾಸ ಗೋಷ್ಠಿಗೆ ಹೋದರು. ಕಂಚಿಯ ವರದರಾಜಸ್ವಾಮಿ ದೇವಾಲಯದಲ್ಲಿ ವಾತ್ಸ್ಯವರದಾಚಾರ್ಯರು ಪಾಠ ಹೇಳುತ್ತಿದ್ದರು. ಇವರುಹೋದ ಕೂಡಲೇ ಪಾಠ ನಿಲ್ಲಿಸಿ, ‘ಈ ಬಾಲಕ ಯಾರು?’ ಎಂದು ಕೇಳಿದರು. ಆತ್ರೇಯರು, ‘ಇವನು, ನನ್ನ ಸೋದರಳಿಯ’ ಎಂದು ಉತ್ತರಿಸಿದರು. ಬಾಲಕನವರ್ಚಸ್ಸನ್ನು ನೋಡಿ ಆಚಾರ್ಯರಿಗೆ ಆಶ್ಚರ್ಯವಾಗಿತ್ತು. ಅವನನ್ನು ವಿಶ್ವಾಸದಿಂದ ಮಾತನಾಡಿಸಿದರು. ಎಲ್ಲರೂ ಕುಳಿತ ಮೇಲೆ ಆಚಾರ್ಯರು ಪಾಠ ಮುಂದು ವರಿಸಬೇಕಿತ್ತು. ಆದರೆ ಅವರಿಗೆ ಮೊದಲು ಪಾಠ ಎಲ್ಲಿ ನಿಲ್ಲಿಸಿದ್ದೆನೆಂದು ಮರೆತುಹೋಗಿತ್ತು.
ಶಿಷ್ಯರನ್ನು ಕೇಳಲಾಗಿ ಅವರೆಲ್ಲ ತಬ್ಬಿಬ್ಬಾದರು. ಆಗ ವೆಂಕಟನಾಥನು, ‘ಗುರುಗಳೇ, ನಾವು ಬಂದಾಗ ತಾವು ದೇವರ ಗುಣಗಳ ವಿಚಾರ ಹೇಳುತ್ತಿದ್ದಿರಿ. ಅವನಲ್ಲಿ ಎಲ್ಲ ಒಳ್ಳೆಯ ಗುಣಗಳಿವೆ, ದೋಷ ಯಾವುದೂ ಇಲ್ಲ ಎಂದು ತಿಳಿಸುತ್ತಿದ್ದಿರಿ’ ಅಂತ ನೆನಪಿಸಿದನು. ಹುಡುಗನ ಮಾತನ್ನು ಕೇಳಿ ಆಚಾರ್ಯರಿಗಾದ ಸಂತೋಷ ಅಷ್ಟಿಷ್ಟಲ್ಲ. ‘ಮಗು, ನೀನು ವೇದಾಂತಿಯಾಗು. ವೇದವರಿತವರು ನಿನ್ನನ್ನು ಗೌರವಿಸಲಿ. ನಿನಗೆ ಎಲ್ಲ ಮಂಗಳಗಳಾಗಲಿ. ನೂರು ವರ್ಷ ಬಾಳಪ್ಪಾ ನೀನು’ ಎಂದು ಹರಸಿದರು. ಅವರ ಹಾರೈಕೆ ಸಫಲವಾಯಿತು. ಹುಡುಗ ಬೆಳೆದು ವೇದಾಂತ ದೇಶಿಕರ್ ಎಂದು ಕೀರ್ತಿ ಪಡೆದನು.’
ಕಥೆಗಳು ಪ್ರತೀತಿಗಳು ಏನೇ ಇರಲಿ ವೇದಾಂತ ದೇಶಿಕರು ಬಾಲ್ಯದಲ್ಲಿಯೇ ವೇದ ಶಾಸ್ತ್ರ ಪುರಾಣಗಳನ್ನು ಕರತಲಾಮಲಕ ಮಾಡಿಕೊಂಡು ಇಪ್ಪತ್ತರ ವಯಸ್ಸಿಗೆಲ್ಲ ಘನವಿದ್ವಾಂಸ ಎನಿಸಿಕೊಂಡದ್ದು, ತಮಿಳು ಮತ್ತು ಸಂಸ್ಕೃತ ಭಾಷೆಗಳಲ್ಲಿ ವೇದ-ವೇದಾಂತಕ್ಕೆ ಸಂಬಂಧಿಸಿದ ಅನೇಕ ಕೃತಿಗಳನ್ನು ರಚಿಸಿದ್ದು ಹೌದು. ಅವರ ಕೃತಿಗಳಲ್ಲಿ ಅತ್ಯದ್ಭುತವೆನ್ನ ಲಾಗಿರುವುದು ‘ಶ್ರೀರಂಗನಾಥ ಪಾದುಕಾಸಹಸ್ರಂ’ ಎಂಬ ಹೆಸರಿನ, ಒಂದು ಸಾವಿರ ಶ್ಲೋಕಗಳಿರುವ ಕೃತಿ. ಶ್ರೀರಾಮಚಂದ್ರನ ಪಾದುಕೆಗಳ ವರ್ಣನೆ, ತನ್ಮೂಲಕ ಕವಿಯ ಭಕ್ತಿ, ಕಾವ್ಯಶಕ್ತಿ ಮತ್ತು ಅಕ್ಷರಾಲಂಕಾರ ಯುಕ್ತಿಗಳ ಅಪೂರ್ವ ಸಂಗಮ. ಸೋಜಿಗವೆಂದರೆ ಇಡೀ ಕೃತಿಯ ರಚನೆ ಒಂದೇ ರಾತ್ರಿಯಲ್ಲಿ ಅದೂ ಒಂದು ಜಾವದಲ್ಲಿ (ರಾತ್ರಿಯ ಕಾಲುಭಾಗ ಎಂದುಕೊಳ್ಳೋಣ) ಆದದ್ದಂತೆ. ವೇದಾಂತ ದೇಶಿಕರ ಶಿಷ್ಯಂದಿರು ಬೇರೊಂದು ಗುರುಕುಲದ ವಿದ್ಯಾರ್ಥಿಗಳೊಂದಿಗೆ ಯಾರ ಗುರು ಶ್ರೇಷ್ಠ ಎಂದು ಪಂಥ ಕಟ್ಟಿದ್ದಾಗ ಶಿಷ್ಯಂದಿರ ಒತ್ತಾಯಕ್ಕೆ ಮಣಿದು ಯೋಗನಿದ್ರೆಯಲ್ಲಿ ಈ ಕೃತಿ ಸಾಕಾರಗೊಂಡಿದ್ದಂತೆ!
ಪಾದುಕಾಸಹಸ್ರಂ ಕೃತಿಯ ಸಾವಿರ ಶ್ಲೋಕಗಳು ಒಟ್ಟು 32 ಅಧ್ಯಾಯಗಳಲ್ಲಿ ವಿಂಗಡಣೆಯಾಗಿವೆ. ಪ್ರಸ್ತಾವಪದ್ಧತಿ, ಸಮಾಖ್ಯಾಪದ್ಧತಿ, ಪ್ರಭಾವಪದ್ಧತಿ, ಸಮರ್ಪಣಪದ್ಧತಿ… ಹೀಗೆ ಒಂದೊಂದು ಅಧ್ಯಾಯಕ್ಕೂ ಒಂದೊಂದು ಹೆಸರು. ೩೦ನೆಯ ಅಧ್ಯಾಯವು ಚಿತ್ರಪದ್ಧತಿ ಎಂಬ ಹೆಸರಿನದು. ಅದರಲ್ಲಿ ಚಿತ್ರಕಾವ್ಯ ಶೈಲಿಯ ಶ್ಲೋಕಗಳು.
ಅಕ್ಷರಗಳೊಂದಿಗೆ ಆಟ. ಉದಾಹರಣೆಗೆ ‘ಪಾಪಾದಪಾಪಾದಪಾಪಾ ಪಾದಪಾದದಪಾದಪಾ| ದಪಾದಪಾಪಾದಪಾದ ಪಾದಪಾದದಪಾದಪಾ||’ ಅಂತೊಂದು ಶ್ಲೋಕ(933ನೆಯದು) ಪಾ ಮತ್ತು ದ ಎಂಬೆರಡು ಅಕ್ಷರಗಳಿಂದಷ್ಟೇಆಗಿರುವುದು; ‘ತತಾತತ್ತಾ ತಿತತ್ತೇತಾ ತಾತತೀತೇತಿತಾತಿತುತ್|ತತ್ತತ್ತತ್ತಾತತಿತತಾ ತತೇತಾತೇತತಾತುತಾ||’ ಎಂಬ ಇನ್ನೊಂದು ಶ್ಲೋಕ (935ನೆಯದು) ಬರೀ ‘ತ’ವ್ಯಂಜನದ ಕಾಗುಣಿತದಿಂದ ಆಗಿರುವುದು; ಹಾಗೆಯೇ ನಾಲ್ಕೂ ಪಾದಗಳಲ್ಲಿ ‘ಯಾಯಾಯಾಯಾ ಯಾಯಾಯಾಯಾ’ ಎಂದಷ್ಟೇ ಇರುವ, ಅಂದರೆ 32 ಸರ್ತಿ ಯಾ ಎಂಬ ಒಂದೇ ಅಕ್ಷರ ಬಳಕೆಯಾಗಿರುವ ಶ್ಲೋಕ (936ನೆಯದು).
ಇವೆಲ್ಲ ಸುಮ್ಮನೆ ಏನೇನೋ ಗೀಚಿದ್ದಲ್ಲ. ಪ್ರತಿಯೊಂದೂ ಅರ್ಥಬದ್ಧ ಶ್ಲೋಕವೇ. ಶ್ರೀರಂಗರಾಜನ (ಶ್ರೀರಾಮಚಂದ್ರನ) ಪಾದುಕೆಗಳ ಗುಣಗಾನ ಮಾಡುವಂಥದೇ. ವೇದಾಂತ ದೇಶಿಕರ ಚಿತ್ರಕವಿತ್ವ ಮೇಧಾವಿತನದ ಪರಾಕಾಷ್ಠೆಯೋ ಎಂಬಂತೆ ಇನ್ನೆರಡು ಶ್ಲೋಕಗಳು ಅದೇ ಅಧ್ಯಾಯದಲ್ಲಿ ಬರುತ್ತವೆ. ಮೊದಲಿಗೆ ಕ್ರಮಸಂಖ್ಯೆ 929ರ ಈ ಶ್ಲೋಕವನ್ನು ನೋಡೋಣ:
ಸ್ಥಿರಾಗಸಾಂ ಸದಾರಾಧ್ಯಾ ವಿಹತಾಕತತಾಮತಾ|ಸತ್ಪಾದುಕೇ ಸರಾಸಾ ಮಾ ರಂಗರಾಜಪದನ್ನಯ||
ಶ್ಲೋಕದ ಭಾವಾನುವಾದ:‘ಎಲೈ ಪರಮಪವಿತ್ರ ಪಾದುಕೆಗಳೇ, ಅಕ್ಷಮ್ಯ ಅಪರಾಧಗಳನ್ನು ಮಾಡಿದ ಪಾಪಾತ್ಮರೂ ನಿಮ್ಮನ್ನು ಸದಾ ಕೊಂಡಾಡುತ್ತಾರೆ. ದುಃಖಕಾರಕವಾದದ್ದನ್ನು, ದೋಷಪೂರಿತವಾದದ್ದನ್ನು ನಿರ್ಮೂಲನಗೊಳಿಸುವ ಶಕ್ತಿ ನಿಮಗಿದೆ. ನಿಮ್ಮ ಶಬ್ದವೇ ಒಂದು ಸಂಗೀತ. ನನ್ನನ್ನು ರಂಗರಾಜ (ಶ್ರೀರಾಮ ಚಂದ್ರ)ನ ಪಾದಗಳೆಡೆಗೆ ಒಯ್ಯುವಂಥವರಾಗಿ.’ ಈ ಶ್ಲೋಕದಲ್ಲಿ ಏನಿದೆ ಅಕ್ಷರಗಳ ಆಟ? ಮೇಲ್ನೋಟಕ್ಕೆ ಏನೂ ಕಾಣಿಸುವುದಿಲ್ಲ ಅಲ್ಲವೇ? ಈಗ ಶ್ಲೋಕದ ಒಂದೊಂದೇ ಅಕ್ಷರವನ್ನು ಚೆಸ್ ಬೋರ್ಡ್‌ನ ಚೌಕಗಳಲ್ಲಿ ಒಂದೊಂದಾಗಿ ತುಂಬಿಸೋಣ.
ಅನುಷ್ಟುಪ್ ಛಂದಸ್ಸಿನಲ್ಲಿರುವ ಶ್ಲೋಕದ ಒಟ್ಟು 32 ಅಕ್ಷರಗಳಿಂದ ಬರೋಬ್ಬರಿ ಅರ್ಧ ಚೆಸ್‌ಬೋರ್ಡ್ ತುಂಬುತ್ತದೆ. ಮತ್ತೊಮ್ಮೆ ನಮ್ಮ ಕುದುರೆ ನಡೆಸಮಸ್ಯೆಯನ್ನೆತ್ತಿಕೊಳ್ಳೋಣ. ಮೇಲಿನ ಎಡಮೂಲೆಯ ಚೌಕದಿಂದ ಕುದುರೆಯನ್ನು ಹೊರಡಿಸೋಣ. ಕುದುರೆ ತನ್ನ ನಡೆಯಲ್ಲಿ ಯಾವಯಾವ ಚೌಕಗಳನ್ನು ಪ್ರವೇಶಿಸುತ್ತದೆಯೋ ಆ ಚೌಕಗಳಲ್ಲಿರುವ ಅಕ್ಷರಗಳನ್ನು ಜೋಡಿಸುತ್ತಾ ಹೋಗೋಣ (ಚಿತ್ರದಲ್ಲಿ ಈ ಕ್ರಮವನ್ನು ಗಮನಿಸಿ). ಅದು ಒಂದು ಶ್ಲೋಕವಾಗುತ್ತದೆ. ಪರಮಾಶ್ಚರ್ಯವೆಂದರೆ ಪಾದುಕಾಸಹಸ್ರಂ ಕೃತಿಯಲ್ಲಿ ವೇದಾಂತ ದೇಶಿಕರು ಬರೆದಿರುವ ಮುಂದಿನ ಶ್ಲೋಕ, 930ನೆಯ ಕ್ರಮಾಂಕದ್ದು ಅದೇ! ಅಕ್ಷರಗಳ ಜೋಡಣೆಯಿಂದ ಆಗಿರುವ ಆ ಶ್ಲೋಕ ಹೀಗಿದೆ:
ಸ್ಥಿತಾ ಸಮಯರಾಜತ್ಪಾ ಗತಾರಾ ಮಾದಕೇ ಗವಿ|ದುರಂಹಸಾಂ ಸನ್ನತಾದಾ ಸಾಧ್ಯಾತಾಪಕರಾಸರಾ||
ಭಾವಾನುವಾದ: ‘ಆದರ್ಶ ಮನೋಧರ್ಮವುಳ್ಳವರನ್ನು ಕಾಪಾಡುವ, ಕಲ್ಯಾಣರೇಖೆಯ ಮಧ್ಯದಲ್ಲಿರುವ, ವಿಕ್ಷಿಪ್ತರ ವ್ಯಾಕುಲತೆಯನ್ನು ದೂರ ಮಾಡುವ, ಶರಣಾಗತರಿಗೆ ತೇಜಸ್ಸಿನಿಂದಲೇ ಶಾಂತಿಯೊದಗಿಸುವ, ಸರ್ವಾಂತರ್ಯಾಮಿ ಯಾದ ಶ್ರೀರಾಮಚಂದ್ರನ ಪಾದುಕೆಗಳೇ ನನ್ನನ್ನು ನೀವು ಅನುಗ್ರಹಿಸಿ.’
ನೋಡಿದಿರಾ! ಒಂದು ಶ್ಲೋಕದ ಅಕ್ಷರಗಳನ್ನೇ ನಿರ್ದಿಷ್ಟ ವಿನ್ಯಾಸದಲ್ಲಿ ಮರುಜೋಡಿಸಿ ಇನ್ನೊಂದು ಶ್ಲೋಕ ರಚಿಸಬೇಕಿದ್ದರೆ, ಅವೆರಡೂ ಅರ್ಥಪೂರ್ಣವಾಗಿಹೊರಹೊಮ್ಮಬೇಕಿದ್ದರೆ ದೇಶಿಕರ ತಲೆಯೊಳಗಿನ ಆ ಪ್ರತಿಭೆ ಎನ್ನುವುದೇನಿದೆಯೋ ಅದು ಎಷ್ಟು ಫಳಫಳ ಅಂತ ಹೊಳೆಯುತ್ತಿರಬೇಕು! ಚೆಸ್ ಬೋರ್ಡ್ ಮೇಲೆ ಕುದುರೆ ನಡೆ, ಅದೇ ಜಾಡಿನಲ್ಲಿ ಶ್ರೀರಾಮಚಂದ್ರನ ಪಾದುಕೆಗಳೊಂದಿಗೆ ಕವಿವರೇಣ್ಯನ ಅಕ್ಷರ ಚಮತ್ಕಾರದ ನಡೆ!
ಅಂದರೆ, ಆಯ್ಲರ್‌ಗಿಂತ ಸುಮಾರು ಐದು ಶತಮಾನಗಳ ಹಿಂದೆಯೇ ವೇದಾಂತ ದೇಶಿಕರಿಗೆ ಚೆಸ್ ಬೋರ್ಡ್ ಕುದುರೆ ನಡೆ ಸಮಸ್ಯೆ ಗೊತ್ತಿತ್ತು ಎಂದಾಯಿತು.ಅಷ್ಟೇಅಲ್ಲ, ಉತ್ತರವೂ ಗೊತ್ತಿತ್ತು. ಆ ಉತ್ತರ ಗೋಚರಿಸುವಂತೆ ಶ್ಲೋಕದೊಳಗೊಂದು ಶ್ಲೋಕ ಕಟ್ಟುವ ಮಹಾಪಾಂಡಿತ್ಯವೂ ಅವರಿಗಿತ್ತು. ಅದೂ ಪಂಥ ಕಟ್ಟಿಕೊಂಡು ರಾತೋರಾತ್ರಿ ಕುಳಿತು ಬರೆದ ಕಾವ್ಯದಲ್ಲಿ !