ವಿಫಲಗೊಂಡ ಪವಾಡ
ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ರಾಜುಗೆ ಅಧ್ಯಾತ್ಮ ಎಂದರೆ ಆಸಕ್ತಿ. ಅವನಿದ್ದ ಪಕ್ಕದ ಹಳ್ಳಿಯಲ್ಲಿ ಒಬ್ಬ ಸನ್ಯಾಸಿ ಇದ್ದರು. ಆ ಸನ್ಯಾಸಿಯು ಹನುಮಂತನ ಭಕ್ತರು. ಪ್ರತಿದಿನ ಅವರು ತಮ್ಮ ಆಶ್ರಮದಲ್ಲಿ ಹನುಮಂತನ ಜತೆ ಮಾತನಾಡುತ್ತಿದ್ದರು ಎಂದು ಆ ಹಳ್ಳಿಯವರು ಹೇಳುತ್ತಿದ್ದರು.
ಇದನ್ನು ಕೇಳಿ ತಿಳಿದ ರಾಜು, ಅವರನ್ನು ಭೇಟಿ ಯಾದ. ಮೊದಲ ನೋಟಕ್ಕೇ ಆ ಸನ್ಯಾಸಿ ಇವನ ಗಮನ ಸೆಳೆದರು. ಆ ನಂತರ ಪ್ರತಿದಿನ ರಾಜು ಪಕ್ಕದ ಹಳ್ಳಿಗೆ ಹೋಗಿ, ಆ ಸನ್ಯಾಸಿಯ ಆಶ್ರಮದಲ್ಲಿ ಸ್ವಲ್ಪ ಹೊತ್ತು ಕುಳಿತು, ಅವರ ಮಾತುಗಳನ್ನು ಕೇಳುತ್ತಿದ್ದ. ಆ ಸನ್ಯಾಸಿ ಇದ್ದದ್ದು ಪಕ್ಕದ ಹಳ್ಳಿಯಾದರೂ, ರಾಜುವಿನಹಳ್ಳಿಯಿಂದ ಅಲ್ಲಿಗೆ ಹೋಗಬೇಕಿದ್ದರೆ, ಒಂದು ಪುಟ್ಟ ನದಿಯನ್ನು ದಾಟಬೇಕಿತ್ತು. ಹೆಚ್ಚು ನೀರು ಇಲ್ಲದಿದ್ದುದರಿಂದ, ರಾಜು ನಡೆದುಕೊಂಡೇ ಆ ನದಿಯನ್ನು ದಾಟುತ್ತಿದ್ದ. ಒಂದು ದಿನ ರಾಜು ಬೆಳಗ್ಗೆ ಸನ್ಯಾಸಿಯವರ ಆಶ್ರಮಕ್ಕೆ ಹೋಗಿ, ಆಶ್ರಮದ ಸುತ್ತ ತರಕಾರಿ ಬೆಳೆಯಲು ನೆಲ ಹಸನು ಮಾಡತೊಡಗಿದ. ಒಳಗಿನಿಂದ ಸನ್ಯಾಸಿಯವರ ಮಾತು ಕೇಳುತ್ತಿತ್ತು. ಹನುಮಂತನ ಜತೆ ಸನ್ಯಾಸಿಯು ಮಾತನಾಡುತ್ತಿದ್ದರು ಎಂದುಕೊಂಡ ರಾಜು.
ಒಮ್ಮೆಗೇ ಮಳೆ ಬಂತು. ರಾಜು ಆಶ್ರಮದ ಒಳಗೆ ಹೋಗಿ ಕುಳಿತ. ಅಲ್ಲಿದ್ದ ಹಣ್ಣು ಮತ್ತು ಲಘು ಆಹಾರ ಸೇವಿಸಿ, ಮಳೆ ಕಡಿಮೆಯಾದ ನಂತರ ರಾಜು ತನ್ನ ಹಳ್ಳಿಗೆ ವಾಪಸು ಹೊರಟ. ಆದರೆ, ನದಿಯಲ್ಲಿ ಪ್ರವಾಹ ಬಂದಿತ್ತು. ಕೆಂಪನೆಯ ನೀರು ಹರಿಯುತ್ತಿದ್ದುದನ್ನು ಕಂಡು ರಾಜುಗೆ ದಿಗಿಲಾಯಿತು. ನಾಲ್ಕಾರು ಅಡಿ ಆಳದ ನೀರು ಇದ್ದುದರಿಂದ, ಏನು ಮಾಡುವುದು ಎಂದು ಯೋಚಿಸಿ, ಆಶ್ರಮಕ್ಕೆ ವಾಪಸಾದ. ಗುರುಗಳೇ, ನಾನು ಇವತ್ತು ನಮ್ಮ ಹಳ್ಳಿಗೆ ಅಗತ್ಯವಾಗಿ ಹೋಗಬೇಕು. ಮನೆಯಲ್ಲಿ ಸ್ವಲ್ಪ ಕೆಲಸವಿದೆ. ಆದರೆ ನದಿಯಲ್ಲಿ ಆಕಸ್ಮಿಕ ಪ್ರವಾಹ ಬಂದಿದೆ. ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ ಎಂದ.
ಸನ್ಯಾಸಿಗಳು ತುಸು ಹೊತ್ತು ಯೋಚಿಸಿದರು. ಇವತ್ತು ಇರು ಎಂದರು. ಇಲ್ಲ, ಅಗತ್ಯವಾಗಿ ಹೋಗಲೇಬೇಕು ಎಂದ ರಾಜು. ಸನ್ಯಾಸಿಯವರು ಒಂದು ಭೋಜ ಪತ್ರವನ್ನು ತೆಗದುಕೊಂಡು, ಅದರ ಮೇಲೆ ಏನನ್ನೋ ಬರೆದು, ಅದನ್ನು ನಾಲ್ಕಾರು ಮಡಿಕೆ ಮಡಿಚಿ, ರಾಜುಗೆ ಕೊಟ್ಟರು. ಇದನ್ನು ಭದ್ರವಾಗಿ ಕೈಯಲ್ಲಿ ಹಿಡಿದು ಕೊಂಡು ನದಿಯನ್ನು ದಾಟು. ಪ್ರವಾಹ ನಿನಗೇನೂ ಮಾಡುವುದಿಲ್ಲ. ನಿನ್ನ ಊರು ಸೇರಬಹುದು ಎಂದರು. ರಾಜು ಭಕ್ತಿಯಿಂದ ಆ ಭೋಜಪತ್ರವನ್ನು ಪಡೆದು ಕೈಯಲ್ಲಿ ಭದ್ರವಾಗಿ ಹಿಡಿದು ಸನ್ಯಾಸಿಗಳಿಗೆ ನಮಸ್ಕರಿಸಿ ತನ್ನ ಹಳ್ಳಿಯ ಕಡೆ ಹೊರಟ.
ರಾಜು, ಒಂದು ನೆನಪಿಡು. ನದಿಯ ನೀರಿನಲ್ಲಿ ಬೇಗಬೇಗನೇ ನಡೆದು ದಾಟು. ಕಣ್ಣುಮುಚ್ಚಿಕೊಂಡು ದಾಟು. ಏನೂ ಭಯವಿಲ್ಲ. ಪತ್ರವನ್ನು ನಿನ್ನ ಮುಷ್ಟಿಯಲ್ಲಿಟ್ಟು ಕೊಂಡು ನಡೆ. ಎಂದು ಸನ್ಯಾಸಿಯವರು ಎಚ್ಚರಿಕೆ ನೀಡಿದರು. ಆಗಲೇ ಸಂಜೆಯಾಗತೊಡಗಿತ್ತು. ರಾಜು ಲಗುಬಗೆಯಿಂದ ನದಿಯತ್ತ ಸಾಗಿದ. ಸನ್ಯಾಸಿ ನೀಡಿದ ಭೋಜಪತ್ರವನ್ನು ಭದ್ರವಾಗಿ ಮುಷ್ಟಿಯಲ್ಲಿ ಹಿಡಿದು, ಕಣ್ಣು ಮುಚ್ಚಿಕೊಂಡು ನದಿಯನ್ನು ಪ್ರವೇಶಿಸಿದ. ನೀರು ರಭಸವಾಗಿತ್ತು. ಬೇಗಬೇಗನೆ ನೀರಿನ ನಡೆಯುತ್ತಾ, ಕಣ್ಣುಮುಚ್ಚಿಕೊಂಡೇ ಸಾಕಷ್ಟು ದೂರ ಬಂದ.
ಸೊಂಟದ ತನಕ ನೀರು ಇದ್ದರೂ, ಆತನಿಗೆ ಭಯವಾಗಲಿಲ್ಲ. ಇನ್ನೇನು ದಡದ ಹತ್ತಿರ ಬಂದೆ ಎಂಬ ಭಾವ ರಾಜುವಿನ ಮನಸ್ಸಿನಲ್ಲಿ ಮೂಡತೊಡಗಿತು. ಸೊಂಟದ ತನಕ ಇದ್ದ ನೀರು ಕಡಿಮೆಯಾಗಿ, ಮೊಣಕಾಲಿನಷ್ಟು ಇತ್ತು ಎನಿಸಿತು. ಇನ್ನೇನು ದಡ ಹತ್ತಿರ ಬಂದಾಯಿತು, ತೊಂದರೆ ಇಲ್ಲ ಎನಿಸಿದಾಗ, ಆತನಂದುಕೆಟ್ಟ ಕುತೂಹಲ ಮೂಡಿತು. ಈ ಭೋಜಪತ್ರದಲ್ಲಿ ಸನ್ಯಾಸಿ ಏನು ಬರೆದಿದ್ದಾರೆ ಎಂಬ ಕುತೂಹಲ. ನಿಧಾನವಾಗಿ ಕಣ್ಣು ಬಿಟ್ಟು, ತನ್ನ ಮುಷ್ಟಿಯಲ್ಲಿದ್ದ ಭೋಜಪತ್ರದ ಚೀಟಿಯನ್ನು ಬಿಡಿಸಿ ನೋಡಿದ. ಅದರಲ್ಲಿ ಜೈ ಹನುಮಾನ್ ಎಂದು ಬರೆದಿತ್ತು. ಶ್ಲೋಕವನ್ನು ನಿರೀಕ್ಷಿಸಿದ್ದ ರಾಜುಗೆ ನಿರಾಸೆ ಎನಿಸಿತು. ಇಷ್ಟು ಸರಳ ಶಬ್ದದಿಂದ ಇಷ್ಟು ದೊಡ್ಡ ಪವಾಡ ನಡೆಯಿತೆ ಎಂದು ಅಚ್ಚರಿಯೂ ಆಯಿತು.
ಒಮ್ಮೆಗೇ, ಆತನ ಕಾಲಿಗೆ ಕಂದು ಎಡವಿತು. ಧಡ್ ಎಂದು ನೀರಿಗೆ ಬಿದ್ದ. ತಕ್ಷಣ ಆ ನೀರಿನ ಪ್ರವಾಹವು ಅವನನ್ನು ಸೆಳೆಯತೊಡಗಿತು. ಅಯ್ಯೋ ಕಾಪಾಡಿ ಕೂಗಿಕೊಂಡ. ಅದಾಗಲೇ ನದಿಯ ದಡಕ್ಕೆ ಹತ್ತಿರ ಬಂದಿದ್ದರಿಂದ, ಅ ಸುತ್ತ ಮುತ್ತ ಇದ್ದ ಅವನ ಹಳ್ಳಿಯ ಕೆಲವರು ತಕ್ಷಣ ನೀರಿಗಿಳಿದು ಅವನನ್ನು ದಡಕ್ಕೆ ಎಳೆದು ಹಾಕಿದರು. ಬಹಳ ಹೊತ್ತು ಸುಧಾರಿಸಿಕೊಂಡು ರಾಜು ಯೋಚಿಸಿದ ಪವಾಡವು ವಿಫಲವಾಗಿಲ್ಲ, ನಾನೇ ಪವಾಡವನ್ನು ವಿಫಲಗೊಳಿಸಿದೆ. (ಅಧ್ಯಾತ್ಮ ಪಥದಲ್ಲಿ ನಂಬಿಕೆ ಮುಖ್ಯ ಎಂಬುದನ್ನು ಈ ಪುಟ್ಟ ಕಥೆ ಬಿಂಬಿಸುತ್ತದೆ.