ಮತ್ತೆ ನೆನಪಾದ ಒಮಾನ್…ಸುಲ್ತಾನ್…
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ರಾಜ ಮನೆತನಕ್ಕೆ ಬಳಸಲಾಗುತ್ತಿದ್ದ ತೈಲೋತ್ಪನ್ನದ ಆಮದನಿಯನ್ನು ದೇಶದ ಅಭಿವೃದ್ಧಿಗೆ ಬಳಸಿದವರು. ದೇಶದ ಖರ್ಚಿನಲ್ಲಿ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಕಳಿಸಿದವರು. ತಾವು ಅಧಿಕಾರ ವಹಿಸಿಕೊಂಡಾಗ ಬಳಸಿದ ವಾಹನದ ತನ್ನ ಅಂತಿಮ ಪ್ರಯಾಣವೂ ಆಗಬೇಕೆಂದು ಆಶಿಸಿದವರು. ಮರಣಾ ನಂತರ ಭವ್ಯವಾದ ಗೋರಿಯಲ್ಲಿ ಮಲಗಬೇಕು ಎಂದು ಬಯಸುವವರ ನಡುವೆ, ಸ್ಮಶಾನದಲ್ಲಿ ಇತರರಂತೆ ಸಾಧಾರಣವಾಗಿಯೇ ಮಣ್ಣಾಗಬೇಕು ಎಂದು ಬಯಸಿದವರು.
ಮೊನ್ನೆ ಪ್ರೊ.ಕೃಷ್ಣೇಗೌಡರ ಜತೆ ಮಾತಾಡುತ್ತಿದ್ದೆ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಅದೊಂದು ಅನೂಹ್ಯ ಅನುಭವ, ಅರಿವಿನ ಅನುಭೂತಿ. ಅವರೊಂದಿಗೆ ಮೂರೇ ನಿಮಿಷದ ಮಾತುಕತೆ ಆದರೂ, ಹಳೆಯ ಮೆಲುಕು, ಹೊಸತನದ ಹೊಳಹು, ವರ್ತಮಾನದ ವಾರ್ತೆ ಗಳಿಗೆ ಬರವಿಲ್ಲ. ಮೊನ್ನೆ ಮಾತುಕತೆಯಲ್ಲಿ ಅವರುನೆನಪಿಸಿಕೊಂಡದ್ದು ಒಮಾನ್ ದೇಶದ ಅನಭಿಷಿಕ್ತ ದೊರೆ ಸುಲ್ತಾನ್ ಖಾಬೂಸ್ ಬಿನ್ ಸಯಿದ್ ಮತ್ತು ಅವರು ಭಾರತೀಯರ ಕುರಿತು ಆಡಿದ ಹೆಮ್ಮೆಯ ನುಡಿ. ‘ಒಮಾನ್ ದೇಶದ ಪ್ರತಿಯೊಂದು ಗಿಡದ ಹಸಿರು ಎಲೆಯಲ್ಲಿ ಭಾರತೀಯರ ಬೆವರು ಸೇರಿಕೊಂಡಿದೆ.’
ಒಂದು ದೇಶವನ್ನಾಳುವ ದೊರೆಯ ಬಾಯಿಂದ ಭಾರತೀಯರ ಕುರಿತು ಈ ಮಾತು ಬರುತ್ತದೆ ಎಂದಾದರೆ, ಭಾರತೀಯರಿಗೆ, ಅದರಲ್ಲೂ ಒಮಾನ್‌ನಲ್ಲಿ ನೆಲೆಸಿದ ಭಾರತೀಯರಿಗೆ ಬಹುಶಃ ಇದಕ್ಕಿಂತೆ ಹೆಚ್ಚಿನ ಗೌರವ ಬೇಕಿಲ್ಲ. ಅದು ಸುಲ್ತಾನ್ ತೋರಿಕೆಗೆಗಾಗಲೀ, ಮುಖಸ್ತುತಿಗಾಗಲಿ ಹೇಳಿದ ಮಾತಲ್ಲ, ಅವರ ಎದೆಯ ತಳದಿಂದ ಬಂದ ಮಾತು ಅದು. ಅವರು ಕೊನೆಯವರೆಗೂ ಭಾರತ ದೊಂದಿಗೆ, ಭಾರತೀಯರೊಂದಿಗೆ ಅದೇ ಬಾಂಧವ್ಯ ಬೆಳೆಸಿಕೊಂಡು, ಉಳಿಸಿಕೊಂಡು ಬಂದರು. ಅದಕ್ಕೇ ಇಂದಿಗೂ ಒಮಾನ್‌ನಲ್ಲಿ ನೆಲೆಸಿರುವ ಭಾರತೀಯರ ಹೃದಯದಲ್ಲಿ ಸುಲ್ತಾನ್ ಖಬೂಸ್‌ಗೆ ಮಾತೃಸ್ಥಾನ. ಇದು ಕೇವಲ ಭಾರತೀಯರು ಎಂದಲ್ಲ, ಅನ್ಯ ದೇಶೀಯರಿಗೂ, ಒಮಾನ್ ಪ್ರಜೆಗಳಿಗೂ ಅನ್ವಯ. ಸುಲ್ತಾನ್ ಎಂಬ ಶಕ್ತಿಯ ಸೂರ್ತಿ ಇಂದಿಗೂ ಜೀವಂತವಾಗಿದೆ.
ಜನರ ಚಿತ್ತ ಭಿತ್ತಿಯಲ್ಲಿ ಸ್ಥಿರವಾಗಿ ಕುಂತಿದೆ. ಕಚೇರಿಯ ದೀವಾರಿನಲ್ಲಿ, ಮನೆಯ ಗೋಡೆಯಲ್ಲಿ ಸುಲ್ತಾನ್ ಭಾವಚಿತ್ರ ಅಚಲವಾಗಿ ನಿಂತಿದೆ. ಅದು ಕಾಟಾಚಾರಕ್ಕಾಗಿ, ತೋರಿಕೆಗಾಗಲಿ, ಶಿಷ್ಟಾಚಾರ ಕ್ಕಾಗಲಿ, ನಿಯಮ ಕ್ಕಾಗಲಿ ಅಲ್ಲ. ಪ್ರೀತಿಯಿಂದ! ಆರು ಕೊಲ್ಲಿ ರಾಷ್ಟ್ರಗಳಲ್ಲಿ ಒಮಾನ್ ಕೂಡ ಒಂದು. ಮೇಲ್ನೋಟಕ್ಕೆ ಇತರ ಕೊಲ್ಲಿ ರಾಷ್ಟ್ರಗಳಂತೆ ಕಂಡರೂ, ಉಳಿದ ಐದು ರಾಷ್ಟ್ರಗಳಿಗಿಂತ ಇದು ವಿಭಿನ್ನ. ಕೊಲ್ಲಿ ಸಮೂಹರಾಷ್ಟ್ರಗಳ ಪೈಕಿ ಭೂಪಟದಲ್ಲಿ ಕೆಳಗೆ ಇದ್ದರೂ, ರಾಜತಾಂತ್ರಿಕ, ಸಾಮಾಜಿಕ, ಆರ್ಥಿಕತೆ, ಅಭಿವೃದ್ಧಿ, ಪರಿಸರ ಇತ್ಯಾದಿಗಳಲ್ಲಿ  ತರ ರಾಷ್ಟ್ರಗಳಿಗೆ ಒಮಾನ್ ಕಮ್ಮಿ ಇಲ್ಲ. ಕೆಲವು ಕ್ಷೇತ್ರಗಳಲ್ಲಿ ಒಮಾನ್ ಉಳಿದ ಕೊಲ್ಲಿ ರಾಷ್ಟ್ರಗಳಿಗಿಂತ ಒಂದು ಹೆಜ್ಜೆ ಮುಂದೆ ಎಂದರೂ ಸರಿಯೇ.
ಅದು ಅರ್ಥವಾಗಬೇಕಾದರೆ ದೇಶದ ಉದ್ದ ಅಗಲಕ್ಕೆ ಓಡಾಡಬೇಕು. ಅದರಲ್ಲೂ, ಭೂ ಮಾರ್ಗವಾಗಿ ದೇಶ ಸುತ್ತಿದಷ್ಟೂ ಒಳಿತು. ಯಾವ ದೇಶವನ್ನೇ ಆದರೂ ವಿಮಾನದಲ್ಲಿ ಹೋಗಿ ಒಂದೆರಡು ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿಕೊಟ್ಟು ಬರುವುದರ ಬದಲಾಗಿ ಆ ದೇಶದ ನೆಲದ, ಜಲದ, ಜನರ ಸಂಪರ್ಕ ಮಾಡಿದರೆ ಹೆಚ್ಚುಅರಿಯಲು ಸಾಧ್ಯ. ಅದಕ್ಕೆ ಒಮಾನ್‌ಗಿಂತ ಒಳ್ಳೆಯ ಉದಾಹರಣೆ ಸಿಗಲಿಕ್ಕಿಲ್ಲ. ಯುಎಇಯಿಂದ ಭೂ ಮಾರ್ಗವಾಗಿ ಒಮಾನ್ ರಾಜಧಾನಿ ಮಸ್ಕತ್ ಕಡೆಗೆ ಹೊರಟರೆ, ಇಕ್ಕೆಲದಲ್ಲೂ ಗುಡ್ಡಗಳು. ವಿಶೇಷವೆಂದರೆ ಪ್ರತಿ ಹತ್ತು ಹದಿನೈದು ಕಿಲೋಮೀಟರ್‌ಗೆ ಬಿಳಿ, ಹಳದಿ, ಕಪ್ಪು, ಗುಲಾಬಿ ಹೀಗೆ ಬೋಳು ಗುಡ್ಡದಬಣ್ಣ ಬದಲಾಗುತ್ತದೆ. ಹಾಗೆಯೇ ಮುಂದೆ ಸಾಗಿದರೆ ತೆಂಗಿನ ತೋಟ, ಹಣ್ಣಿನ ತೋಪು, ಕಬ್ಬಿನ ಗದ್ದೆ, ಕದಳೀವನ, ತರಕಾರಿಯ ಅಂಗಳ ಎಲ್ಲವೂ ಒಂದಾದ ಮೇಲೆ ಒಂದು, ಸಾಲಿನಲ್ಲಿ ಪೈಟಾಗಿ ಕುಂತಿವೆ. ರಾಜಧಾನಿ ಮಸ್ಕತ್‌ನಿಂದ ಸಲಾಲಾಕ್ಕೆ ಹೋಗುವವರೆಗಿನ ಭಯಾನಕ ಮರುಭೂಮಿ ಸಲಾಲಾ ತಲುಪುತ್ತಿದ್ದಂತೆಹರಿದ್ವರ್ಣವಾಗಿ ಮಾರ್ಪಡುತ್ತದೆ. ಹಾಗೆಯೇ ಮುಂದೆ ಸಾಗಿದರೆ ಯೆಮನ್ ಗಡಿಯವರೆಗೂ ಹಸಿರುಟ್ಟ ಭೂಮಿ.
ದುಬೈನಲ್ಲಿ ಇರುವಂತೆ ಮುಗಿಲೆತ್ತರದ ಕಟ್ಟಡಗಳಿಲ್ಲ ದಿದ್ದರೂ ಮಸ್ಕತ್ ನಲ್ಲಿ ಎಲ್ಲ ಸೌಕರ್ಯ, ಸೌಲಭ್ಯ, ಸಂಪರ್ಕಗಳೂ ಲಭ್ಯ. ದೈವ ದತ್ತ ಮತ್ತು ಮನುಷ್ಯ ಪರಿಶ್ರಮದ ಪರಿಪೂರ್ಣ ಮಿಶ್ರಣ, ಒಮಾನ್. ಅದನ್ನು ರೂಪಿಸಿದ ಶಿಲ್ಪಿ, ಐದು ದಶಕಗಳವರೆಗೆ ನಿರಂತರ ಆಡಳಿತ ನಡೆಸಿದ ಸುಲ್ತಾನ್ ಖಾಬೂಸ್ ಬಿನ್ಸಯಿದ್ ಅಲ್ ಸಯಿದ್. ಸಯಿದ್ ರಾಜಮನೆತನದಲ್ಲಿ ೧೯೪೦ರಲ್ಲಿ ತಂದೆಯ ಒಬ್ಬನೇ ಮಗನಾಗಿ ಹುಟ್ಟಿದ ಖಾಬೂಸ್ ತಮ್ಮ ಆಡಳಿತದ ವೈಖರಿಗಷ್ಟೇಅಲ್ಲದೆ, ಸರಳತೆಗೂ ಹೆಸರಾದವರು. ಅದುವರೆಗೂ ರಾಜ ಮನೆತನಕ್ಕೆ ಬಳಸಲಾಗುತ್ತಿದ್ದ ತೈಲೋತ್ಪನ್ನದ ಆಮದನಿಯನ್ನು ದೇಶದ ಅಭಿವೃದ್ಧಿಗೆ ಬಳಸಿದವರು.
ದೇಶದ ಖರ್ಚಿನಲ್ಲಿ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಕಳಿಸಿದವರು. ತಾವು ಅಧಿಕಾರ ವಹಿಸಿಕೊಂಡಾಗ ಬಳಸಿದ ವಾಹನದ ತನ್ನ ಅಂತಿಮಪ್ರಯಾಣವೂ ಆಗಬೇಕೆಂದು ಆಶಿಸಿದವರು. ಮರಣಾನಂತರವೂ ಭವ್ಯವಾದ ಗೋರಿಯಲ್ಲಿ ಮಲಗಬೇಕು ಎಂದು ಬಯಸುವವರ ನಡುವೆ, ಸ್ಮಶಾನದಲ್ಲಿ ಇತರರಂತೆ ಸಾಧಾರಣವಾಗಿಯೇ ಮಣ್ಣಾಗಬೇಕು ಎಂದು ಬಯಸಿದವರು. ಸಾಮಾನ್ಯ ಜನರ ಜತೆ ನಿಂತು ದೇಶವನ್ನು ಕಟ್ಟಿದವರು. ಅಮೆರಿಕ ಮತ್ತು ಇರಾನ್, ಸೌದಿ ಅರೇಬಿಯಾ ಮತ್ತು ಕತಾರ್ ಅಥವಾ ಯೆಮನ್ ದೇಶದ ಎರಡು ಬಣಗಳ ನಡುವೆ ಇರುವ ಘರ್ಷಣೆ ಹತ್ತಿಕ್ಕಲು ಮಧ್ಯಸ್ತಿಕೆ ವಹಿಸಿದವರು.
ತಮ್ಮ ಸುದೀರ್ಘ ಆಡಳಿತಾವಽಯಲ್ಲಿ ಯಾವ ದೇಶದೊಂದಿಗೂ ತಿಕ್ಕಾಟಕ್ಕಿಳಿಯದೆ, ಇರಾನ್, ಇಸ್ರೇಲ್‌ನಂತಹ ದೇಶದೊಂದಿಗೂ ಉತ್ತಮ ಬಾಂಧವ್ಯ ಇಟ್ಟು ಕೊಂಡವರು. ತಮ್ಮ ದೇಶದಲ್ಲಿ ರುವ ಇತರ ಧರ್ಮದ ಜನರ ಧಾರ್ಮಿಕ ಭಾವನೆಗೆ ಬೆಲೆ ಕೊಟ್ಟು, ಚರ್ಚು, ದೇವಸ್ಥಾನಗಳ ನಿರ್ಮಾ ಣಕ್ಕೆ ಅನುವು ಮಾಡಿ ಕೊಟ್ಟವರು. ಉಳಿದ ಕೊಲ್ಲಿ ರಾಷ್ಟ್ರಗಳ ಪೈಕಿ ಅನೇಕ ವಿಷಯಗಳಲ್ಲಿ ಒಮಾನ್ ದೇಶವನ್ನು ಮೇಲ್ಪಂಕ್ತಿಯಲ್ಲಿ ಕುಳ್ಳಿರಿಸಿದವರು ಖಾಬೂಸ್. ಆದರೆ ಇದಿಷ್ಟೂ ಮಾಡಲು ಅವರು ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ಅರಮನೆಯಲ್ಲಿ ಸುಮಾರು ನಾಲ್ಕು ವರ್ಷ ಬಂಧನದಲ್ಲಿಟ್ಟಿದ್ದ ತಂದೆಯನ್ನು ಎದುರಿಸಿಗದ್ದುಗೆ ಏರಬೇಕಾಯಿತು.
ಸುಲ್ತಾನ್ ಖಾಬೂಸ್ ತಂದೆ ಸಯಿದ್ ಬಿನ್ ತೈಮೂರ್ ೧೯೩೨ರಲ್ಲಿ, ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿಯೇ ಒಮಾನ್ ಮತ್ತು ಮಸ್ಕತ್‌ನ ದೊರೆ ಯಾಗಿದ್ದರು. ಭಾರತದ ಅಜ್ಮೇರ್‌ನಲ್ಲಿ ಐದು ವರ್ಷ ಓದಿ, ಇಂಗ್ಲೀಷ್ ಮತ್ತು ಉರ್ದು ಭಾಷೆಯಲ್ಲಿ ಪರಿಣಿತಿ ಪಡೆದವರಾಗಿದ್ದರು. ಮುಂದಿನ ಓದಿಗೆ ಬೈರೂತ್‌ಗೆ ಹೋಗಬೇಕೆಂದು ಕೊಂಡಿದ್ದರು. ಮೊದಲಿಂದಲೂ ಇಂಗ್ಲೀಷ್ ಭಾಷೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಎಂದರೆ ಅಷ್ಟಕ್ಕಷ್ಟೇ ಆಗಿದ್ದ ತಂದೆಗೆ, ಮಗನನ್ನು ಬೈರೂತ್‌ಗೆ ಕಳಿಸಿದರೆ ಕ್ರಿಶ್ಚನ್ ಧರ್ಮದ ಪ್ರಭಾವಕ್ಕೆ ಒಳಗಾಗಬಹುದೆಂಬ ಆತಂಕದಿಂದ ಬಾಗ್ದಾದ್‌ಗೆ ಕಳುಹಿಸಿದ್ದರು.
ಇಂಗ್ಲೀಷ್ ಕುರಿತಂತೆ ಅವರ ಒಲವು ಹೇಗಿತ್ತು ಎಂದರೆ, ಸಯಿದ್ ಭಾರತದಿಂದ ಕೊಂಡು ಹೋಗಿದ್ದ ಇಂಗ್ಲೀಷ್ ಪುಸ್ತಕಗಳನ್ನು ಸುಟ್ಟು ಹಾಕುವಷ್ಟಿತ್ತು! ಹಾಗೆ ಒಮಾನ್ ಇತಿಹಾಸ ನೋಡಿದರೆ, ಬಹಳ ಹಿಂದಿನಿಂದ ದೇಶ ಪೋರ್ಚುಗೀಸರ ಮುಷ್ಟಿಯಲ್ಲಿತ್ತು. ೧೬೫೦ ರಲ್ಲಿ ಬ್ರಿಟೀಷರ ಸಹಾಯ ಪಡೆದು ಪೊರ್ಚುಗೀಸರನ್ನು ತೊಲಗಿಸಿದರು. ಆದರೆ ಬ್ರಿಟೀಷರ ಸಹಾಯ, ಪ್ರಭಾವ ಮತ್ತು ಹಿಡಿತ ಒಮಾನ್ ಮೇಲೆ ಇತ್ತು. ಆದಾಗ್ಯೂ ಇಂಗ್ಲೀಷನ್ನು ಅಷ್ಟು ದ್ವೇಷಿಸುತ್ತಿದ್ದರು ತೈಮೂರ್.ಬಾಗ್ದಾದ್‌ನಲ್ಲಿ ಓದು ಮುಗಿಸಿದ ನಂತರ ತಂದೆ ತೈಮೂರ್ ಬಿನ್ ಫೈಸಲ್ ಅವರ ಉತ್ತರಾಧಿಕಾರಿಯಾದರು ಸಯಿದ್. ಆಡಳಿತ ಆನುವಂಶಿಕಾವಾಗಿ ಬಂದರೂ ಸಯಿದ್ ಆಡಳಿತ ವಹಿಸಿಕೊಂಡಾಗ ದೇಶ ಸಾಲದಲ್ಲಿ ಮುಳುಗಿ, ಆರ್ಥಿಕವಾಗಿ ಕಂಗಾಲಾಗಿತ್ತು.
ಬ್ರಿಟೀಷರ ಸಹಾಯ ಪಡೆದು ಮೊದಲು ಆರ್ಥಿಕವಾಗಿ ಬಲಗೊಳ್ಳಿಸುವಲ್ಲಿ, ನಂತರ ಸೌದಿ ಅರೇಬಿಯಾ ಮತ್ತು ಈಜಿ ಬೆಂಬಲದಿಂದ ದಂಗೆ ಏಳುತ್ತಿದ್ದ ಧಾರ್ಮಿಕ ಗುರು ಇಮಾಮ್ ಗಾಲಿಬ್ ಅನ್ನು ನಿಗ್ರಹಿಸುವಲ್ಲಿ ಯಶಸ್ವಿಯಾದರು. ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಬ್ರಿಟೀಷರಿಗೆ ಸಹಾಯ ಮಾಡುವುದರೊಂದಿಗೆ ಸ್ವಲ್ಪಮಟ್ಟಿನ ಋಣ ಸಂದಾಯವನ್ನೂ ಮಾಡಿದರು. ಅವರು ಸುಮಾರು ಮೂವತ್ತೆಂಟು ವರ್ಷ ಒಮಾನ್ ದೇಶವನ್ನು ಆಳಿದರು. ಸಮಸ್ಯೆಯೆಂದರೆ, ಸಯಿದ್ ದೇಶದ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸಲಿಲ್ಲ.
ಚೀನಾ ಮತ್ತು ಕೆಲವು ಅರಬ್ ರಾಷ್ಟ್ರಗಳು ಸೇರಿಕೊಂಡು ತನ್ನನ್ನು ಹತ್ಯೆಗೈಯಲು ಪ್ರಯತ್ನಿಸುತ್ತಿವೆ ಎಂದು ತಿಳಿದ ನಂತರವಂತೂ ಬುದ್ಧಿಭ್ರಮಣೆಗೆ ಒಳಗಾಗಿದ್ದರು ಸಯಿದ್. ತೀರಾ ವಿಚಿತ್ರ ಕಾನೂನುಗಳನ್ನು ಜಾರಿಗೆ ತಂದರು. ಸಾರ್ವಜನಿಕ ಧೂಮಪಾನ ನಿಷೇಧಿಸಿದರು. ಅದಾದರೂ ಅಡ್ಡಿಯಿಲ್ಲ ಎನ್ನಬಹುದು, ಅರಬರಪ್ರೀತಿಯ ಫುಟ್‌ಬಾಲ್ ಆಟ, ಬಿಸಿಲಿನಲ್ಲಿ ತಂಪು ಕನ್ನಡಕ ಧರಿಸುವುದನ್ನೂ ನಿಷೇಧಿಸಿದರು. ಅವರ ಮತಿ ವಿಕಲ್ಪ ಹೇಗಿತ್ತು ಎಂದರೆ, ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಪರಸ್ಪರ ಭೇಟಿಯಾದರೆ ಹದಿನೈದು ನಿಮಿಷಕ್ಕಿಂತ ಹೆಚ್ಚು ಮಾತನಾಡುವಂತಿರಲಿಲ್ಲ!
ಚಿತ್ತಭ್ರಾಂತಿಯಿಂದ ಅವರು ಸ್ವಂತ ಮಗನಾದ ಖಾಬೂಸ್ ಅವರನ್ನೇ ಗೃಹ ಬಂಧನದಲ್ಲಿ ಇಟ್ಟಿದ್ದರು! ತಂದೆಯನ್ನು ಸಿಂಹಾಸನದಿಂದ ಇಳಿಸಿ, ಇಂಗ್ಲೆಂಡಿಗೆ ಕಳಿಸಿ, ಸುಲ್ತಾನ್ ಖಾಬೂಸ್ ಆಡಳಿತದ ರಥವೇರಿದಾಗ ಕೇವಲ ಮೂರು ಶಾಲೆಗಳಿದ್ದವು, ಹತ್ತು ಕಿಲೋಮೀಟರ್ ಮಾತ್ರ ಟಾರ್ ಹಾಕಿದ ಪಕ್ಕಾ ರಸ್ತೆಯಿತ್ತು. ಇದು ಒಂದು ಗ್ರಾಮದಲ್ಲಿ ಅಥವಾ ಪಟ್ಟಣದಲ್ಲಲ್ಲ, ಇಡೀ ದೇಶದಲ್ಲಿ! ಆ ಕಾಲದಲ್ಲಿ ಮೀನುಗಾರಿಕೆ ಮತ್ತು ಕೃಷಿಯನ್ನು ಆಧರಿಸಿಕೊಂಡಿದ್ದ ದೇಶದ ಯಾವುದೇ ಭಾಗದಲ್ಲಿ ಸರಿಯಾದ ಒಂದು ಮಾರುಕಟ್ಟೆ ಎಂಬುದೇ ಇರಲಿಲ್ಲ. ವಿದ್ಯುತ್ ದೀಪದ ಭಾಗ್ಯ, ಕುಡಿಯುವ ನೀರಿನ ಸಂಸ್ಕರಣಾ ಘಟಕಗಳು ಇರಲಿಲ್ಲ.
ಆಸ್ಪತ್ರೆಗಳಿಲ್ಲದೆ, ರೋಗ ರುಜಿನದಿಂದ ಜನ ಆತಂಕಕ್ಕೊಳಗಾಗಿದ್ದರು. ಅಂತಹ ದೇಶ ಕಳೆದ ಐದು ದಶಕದಲ್ಲಿ ಬದಲಾದ ರೀತಿ ವಿಸ್ಮಯವೇ ಸರಿ. ಆಧುನಿಕ ತಂತ್ರಜ್ಞಾನ, ಗಗನಚುಂಬಿ ಕಟ್ಟಡಗಳು, ಕಾಂಕ್ರೀಟ್ ಕಾಡಿನ ಯುಎಇ ಮಾಯಾನಗರಿಯಾದರೆ, ಒಮಾನ್ ಕೊಲ್ಲಿ ರಾಷ್ಟ್ರದ ಸ್ವರ್ಗ. ಅದರ ನಿರ್ಮಾತೃ, ಕೊಲ್ಲಿ ರಾಷ್ಟ್ರಗಳಂದು ನಾಕ ನಿರ್ಮಾಣಕ್ಕೆ ಕಾರಣೀಭೂತರಾದ, ಮೂಲ ಪುರುಷ ಸುಲ್ತಾನ್ ಖಾಬೂಸ್.
ಖಾಬೂಸ್ ಪ್ರಾಥಮಿಕ ಶಿಕ್ಷಣವನ್ನು ಸಲಾಲಾದಲ್ಲಿ ಮುಗಿಸಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಹೆಚ್ಚಿನ ಶಿಕ್ಷಣಕ್ಕೆ ಇಂಗ್ಲೆಂಡಿಗೆ ತೆರಳಿದರು. ಅಲ್ಲಿ ಆರುವರ್ಷ ಓದಿದ ನಂತರ ಬ್ರಿಟೀಷ್ ಸೇನೆಯಲ್ಲಿ, ಒಂದು ವರ್ಷ ಜರ್ಮನಿಯಲ್ಲಿ ಸೇವೆ ಸಲ್ಲಿಸಿದರು. ಇಪ್ಪತ್ತಾರನೆಯ ವರ್ಷಕ್ಕೆ ಒಮಾನ್‌ಗೆ ಹಿಂದುರಿಗಿ, ತಂದೆಯೊಡನೆ ಸಹಕರಿಸಬೇಕು ಎನ್ನುವಾಗ ತಂದೆ ಮಗನನ್ನು ಆಡಳಿತ ಯಂತ್ರದಿಂದ ದೂರವಿಟ್ಟರು. ನಾಲ್ಕು ವರ್ಷದ ನಂತರ ಗದ್ದುಗೆ ಏರಿ ಆಡಳಿತಆರಂಭಿಸಿದಾಗ ಅಲ್ಲಲ್ಲಿ ಸಾಕಷ್ಟು ದಂಗೆಗಳಾಗುತ್ತಿದ್ದವು. ಅದರಲ್ಲೂ ದೇಶದ ದಕ್ಷಿಣ ಭಾಗದಲ್ಲಿ ಕಮ್ಯುನಿ ಬೆಂಬಲಿತ ಯೆಮನ್ ದಂಗೆಕೋರರ ಉಪಟಳ ಹೆಚ್ಚಾಗಿತ್ತು. ಆಗ ಇರಾನ್, ಬ್ರಿಟಿಷ್ ಮತ್ತು ಜೋರ್ಡಾನ್ ಸಹಾಯದಿಂದ ಅವರನ್ನು ಮಣಿಸಿದರು.
ದೇಶದ ರಕ್ಷಣೆ, ಹಣಕಾಸು, ಕಾನೂನು ಮೊದಲಾದ ಎಲ್ಲ ಮಹತ್ವದ ಹುದ್ದೆಗಳನ್ನೂ ಖಾಬೂಸ್ ತಮ್ಮ ಬಳಿಯೇ ಇಟ್ಟುಕೊಂಡು ಅಚ್ಚುಕಟ್ಟಾಗಿ ನಿಭಾಯಿಸಿದರು.೧೯೭೦ ರಿಂದ ೨೦೨೦ ರವರೆಗೆ ಖಾಬೂಸ್ ಒಮಾನ್ ದೇಶವನ್ನು ಮುನ್ನಡೆಸಿದರು. ಮಧ್ಯಪ್ರಾಂತ್ಯ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಅತಿ ಹೆಚ್ಚಿನ ಸಮಯದವರೆಗೆ ಆಡಳಿತ ನಡೆಸಿದ ದಾಖಲೆ ಇದು. ಅಂತಿಮ ದಿನಗಳಲ್ಲಿ ಅವರಿಗೆ ಕ್ಯಾನ್ಸರ್ ರೋಗ ಅಂಟುಕೊಂಡಿತ್ತು. ಬೆಲ್ಜಿಯಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇನ್ನು ಬದುಕಲು ಸಾಧ್ಯವಿಲ್ಲವೆಂದು ತಿಳಿದಾಗ, ತನ್ನ ದೇಶದಲ್ಲಿಯೇ ಕೊನೆಯುಸಿರು ಎಳೆಯಬೇಕೆಂಬ ಆಸೆಯಿಂದ, ಸಾಯುವುದಕ್ಕೆ ಒಂದು ತಿಂಗಳು ಮೊದಲು ಸ್ವದೇಶಕ್ಕೆ ಹಿಂತಿರುಗಿದ್ದರು. ಅವರು ಗತಿಸಿ ಹೋದಾಗ ದೇಶ ನಲವತ್ತು ದಿನಗಳ ಶೋಕ ಆಚರಿಸಿತು.
ಭಾರತವೂ ಒಂದು ದಿನದ ಶೋಕ ಆಚರಿಸಿತು. ಕೇವಲ ಮೂರು ವರ್ಷ ಮಾತ್ರ ದಾಂಪತ್ಯ ಜೀವನ ನಡೆಸಿದ ಖಾಬೂಸ್‌ಗೆ ಮಕ್ಕಳಿರಲಿಲ್ಲ. ಮರಣಾನಂತರ ಆಡಳಿತ ನಡೆಸುವವರು ಯಾರೆಂಬ ಗೊಂದಲ ಆಗಬಾರದು ಎಂದು ಮೊದಲೇ ನಿರ್ಧರಿಸಿದ್ದರು. ಮೊದಲೇ ತಿಳಿಸಿದರೆ ತೊಂದರೆಯಾದೀತು ಎಂದು ಅದನ್ನುಗುಪ್ತವಾಗಿಟ್ಟಿದ್ದರು. ಖಾಬೂಸ್ ಮರಣಾನಂತರ ಅವರ ಸಂಬಂಽ ಹೈತಮ್ ಬಿನ್ ತಾರಿಕ್ ಇಂದು ದೇಶವನ್ನು ಮುನ್ನಡೆಸುತ್ತಿದ್ದಾರೆ. ಸುಲ್ತಾನ್ ಖಾಬೂಸ್ ಈಗ ಬದುಕಿದ್ದರೆ, ಕಳೆದ ನವೆಂಬರ್ ಹದಿನೆಂಟರಂದು ೮೫ ವರ್ಷ ಪೂರೈಸುತ್ತಿದ್ದರು. ಅಂದಹಾಗೆ ಆ ದಿವಸ ಒಮಾನ್ ರಾಷ್ಟ್ರೀಯ ದಿನವೂ ಹೌದು. ಅದೇ ದಿನ ಕೃಷ್ಣೇಗೌಡರು ಅವರನ್ನು ನೆನೆಸಿಕೊಂಡದ್ದು ಕಾಕತಾಳೀಯವೇ ಆದರೂ, ಒಮಾನ್ ಮತ್ತು ಸುಲ್ತಾನ್ ಖಾಬೂಸ್ ನೆನಪಿನ ಸುರುಳಿ ಬಿಚ್ಚಿಕೊಂಡದ್ದು, ಅಹು ದಹುದು.