ಅಂದುಕೊಂಡಷ್ಟು ಸುಲಭವಲ್ಲ ಶ್ರೀಗಂಧ ಕೃಷಿ
ಮಿಶ್ರಾ ಕೃಷಿ
ಕವಿತಾ ಮಿಶ್ರಾ
@.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹಲವು ಕೃಷಿಕರ ದಾರಿ ತಪ್ಪಿಸುತ್ತಿರುವುದು ವಿಷಾಯದನೀಯ. ಶ್ರೀಗಂಧದ ಜತೆ ರಕ್ತಚಂದನ ಬೆಳೆದರೆ ಹೆಚ್ಚಿ ನ ಆದಾಯ ಬರುತ್ತದೆ ಎಂದು ಹೇಳಲಾಗುತ್ತಿದೆ. ಆದಾಯ ಹೆಚ್ಚಾಗಿದ್ದರೂ ವೈಜ್ಞಾನಿಕ ದೃಷ್ಟಿಯಿಂದ ಇದು ಸರಿಯಲ್ಲ.
ಕಾನನದ ಕುರಿತಾಗಿ ಅಧ್ಯಯನ ಮತ್ತು ಅಧ್ಯಾಪನ ಮಾಡುವುದೇ ಒಂದು ಅದ್ಭುತ ಕೆಲಸ. ಇದಕ್ಕಿಂತ ಹೆಚ್ಚಾಗಿ ಅವುಗಳನ್ನು ಸ್ವೀಕರಿಸುವಂಥದ್ದು ಅತ್ಯದ್ಭುತ. ಸಾಮಾನ್ಯವಾಗಿ ಕೃಷಿ ಚಟುವಟಿಕೆ ಅಂದರೇ ಬೆವರು, ಸುಸ್ತು ಇದ್ದಿದ್ದೇ! ಆದರೆ ಅವುಗಳನ್ನ ನಾವು ಆಪ್ತವಾಗಿಸಿಕೊಂಡಾಗ ನಮ್ಮ ಕೃಷಿ ಸಂಪನ್ನವಾಗುತ್ತದೆ.
ಹಿಂದಿನ ಸಂಚಿಕೆಯಲ್ಲಿ ಒಂಟಿ ಬೆಳೆಯ ಕುರಿತಾಗಿ ಕೆಲವು ವಿಚಾರಗಳನ್ನು ತಿಳಿಸಿದ್ದೆ, ಇದಕ್ಕೆ ಪೂರಕ ಎನ್ನು ವಂತೆ ಹಲವಾರು ಪ್ರತಿಕ್ರಿಯೆಗಳೂ ಬಂದಿತ್ತು. ಒಂಟಿ ಬೆಳೆ ಕೃಷಿ ಪದ್ಧತಿಯಲ್ಲಿ ಆದಾಯ ಯಾವತ್ತಿದ್ದರೂ ಅನಿಶ್ಚಿತವಾಗಿಯೇ ಇರುತ್ತದೆ ಎನ್ನುವುದು ನಿಸ್ಸಂಶಯ. ಏನಾದರೂ ಹೊಸತನ್ನು ಮಾಡಬೇಕು ಎಂದು ಕೊಂಡಾಗ, ನನ್ನ ಸೋಲುಗಳೇ ನನಗೆ ದಾರಿ ದೀಪವಾಗಿದ್ದವು, ಸೋಲೇ ನನಗೆ ಮೆಟ್ಟಿಲುಗಳಾಗಿದ್ದವು. ಆ ಸೋಲುಗಳ ಹಿಂದಿನ ಸತ್ಯವನ್ನು ಅರಿತು, ಸೋಲಿನ ವಿರುದ್ಧ ಈಜಿದ್ದರಫಲವೇಇಂದು ನಾನು ಕಂಡಿರುವ ಕೃಷಿಯ ಯಶಸ್ಸು. ಅನೇಕರು ತಮ್ಮ ಸೋಲನ್ನೇ ಮಾನದಂಡವನ್ನಾಗಿಸಿಕೊಂಡು ದೇವರ ಪಾದ ಸೇರುತ್ತಿ ರುವುದು ಹೃದಯವನ್ನು ಭಾರವಾಗಿಸುತ್ತಿದೆ.
ಸಾಮಾನ್ಯವಾಗಿ ರೈತ ಮುಗ್ಧನೇ ಆಗಿರುತ್ತಾನೆ. ಆತನ ಮನಸ್ಸೇ ಹಾಗೆ, ಯಾರು ಏನನ್ನು ಹೇಳಿದರೂ ನಂಬುವುದು ಮತ್ತು ಅನುಸರಿಸುವುದು. ಅಲ್ಲೆಲ್ಲೋ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಅಂದರೆ ಇವನೂ ಅದನ್ನೇ ಅನುಸರಿಸಿಬಿಡುತ್ತಾನೆ. ಯಶಸ್ವಿಯಾಗಿ ದಡ ಮುಟ್ಟಿದವರನ್ನು ನೋಡುವ ಪ್ರಯತ್ನಕ್ಕೇ ಹೋಗುವು ದಿಲ್ಲ. ಇದು ಕೇವಲ ರೈತನ ತಪ್ಪು ಅಂತಲ್ಲ. ಇದನ್ನ ಸೈಕಾಲಜಿ ಬಿಯಾಸ್ ಅಂತ ಕೂಡ ಹೇಳಲಾಗುತ್ತೆ. ಇದರಿಂದ ಹೊರಬಂದು ಕಾರ್ಯೋನ್ಮುಖ ರಾದಾಗ ಮಾತ್ರ ಯಾವುದೇ ಕೆಲಸದಲ್ಲಾದರೂ ಯಶಸ್ಸು ದೊರೆಯುವುದಕ್ಕೆ ಸಾಧ್ಯ.
ಒಂದೇ ಬೆಳೆಗೆ ಜೋತುಬಿದ್ದು, ಒಂಟಿ ಕೃಷಿ ಪದ್ಧತಿ ಅನುಸರಿಸಿ ಕೈಸುಟ್ಟುಕೊಂಡಿದ್ದರಿಂದಲೇ ಹಠತೊಟ್ಟ ನಾನು ಋತು ಆಧಾರಿತ ಬಹು ಬೆಳೆಗಳ ಬಗ್ಗೆ ಆಸಕ್ತಿ ತೋರಿದ್ದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಸೋತಾಗ ಅನೇಕ ಮಾರ್ಗಗಳು ಹೊಳೆಯುತ್ತವೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿ ಸೋತು ಬಿಡುತ್ತಾರೆ. ನನಗೂ ಬಹುಬೆಳೆ ಪದ್ಧತಿಯ ಕೃಷಿ ಮಾಡುವ ವಿಚಾರ ಬಂದಿತ್ತೇ ಹೊರತು ಅದನ್ನು ಕಾರ್ಯರೂಪಕ್ಕೆ ತರುವ ಕುರಿತಾಗಿ ಅಷ್ಟೊಂದು ಮಾಹಿತಿ ಇರಲಿಲ್ಲ. ನಮ್ಮ ಭೂಮಿಯಲ್ಲಿದ್ದ ಅಲ್ಪ ನೀರಿನಲ್ಲಿ ಬಹುಬೆಳೆ ಕೃಷಿಯನ್ನು ಮಾಡುವುದಾದರೂ ಹೇಗೆ? ಗುಡ್ಡದ ನೆಲ್ಲಿಕಾಯಿ ಎಲ್ಲಿ? ಬಳ್ಳಿಯ ಕುಂಬಳ ಕಾಯಿಯೆಲ್ಲಿ ?ಎನ್ನುವಂತಹಾ ಮನಸ್ಥಿತಿಗೆ ಬಂದಿದ್ದೆ.
ಎಷ್ಟೇ ಅಂದ್ರೂ ಭೂ ತಾಯಿ ನನ್ನ ಕೈ ಬಿಡುವುದಿಲ್ಲ ಎನ್ನುವ ಧೃಢವಾದ ನಂಬಿಕೆ ನನ್ನಲ್ಲಿ ಯಾವತ್ತೂ ಇದ್ದರೂ, ಅದು ನಂಬಿಕೆ ಮಾತ್ರವೇ ಆಗಿ ಉಳಿದು ಹೋದರೆ! ಎನ್ನುವ ಆತಂಕ ಮನದಾಳದ ಅಂಚಿನಲ್ಲೆಲ್ಲೋ ಆರ್ತನಾದ ಮಾಡುತ್ತಿತ್ತು. ಆ ಸಮಯದಲ್ಲಿ ಹಲವು ವಿಶ್ವವಿದ್ಯಾಲಯಗಳ ಬೆಳೆ ತಜ್ಞರುಗಳನ್ನು ಬೇಟಿ ಮಾಡಿ, ಅಲ್ಪಾವಧಿ, ಮಧ್ಯಾವಧಿ ಹಾಗೂ ದೀರ್ಘಾವಧಿ ಬೆಳೆಗಳ ಹಲವು ಕೃಷಿ ಯೋಜನೆಗಳ ಕುರಿತು ಮಾಹಿತಿಯನ್ನೂ ಪಡೆದಿದ್ದೆ. ಆದರೆ ಕೇವಲ ಮಾಹಿತಿಗಳು ಮಾತ್ರ ಸಿಕ್ಕರೂ ಅದನ್ನು ಕಾರ್ಯರೂಪಕ್ಕೆ ತರುವುದು ಬಾಳೆ ಹಣ್ಣನ್ನು ಸುಲಿದಷ್ಟು ಸುಲಭವಾಗಿರಲಿಲ್ಲ.
ಕೇವಲ ನನ್ನ ವಿಚಾರ ಮಾತ್ರ ಅಂತಲ್ಲ, ಯಾವ ರೈತನಿಗೂ ಸುಲಭವಾಗಿ ಶ್ರಮಕ್ಕೆ ಸರಿಯಾದ ಪ್ರತಿಫಲ ದೊರೆಯುವುದಿಲ್ಲ. ಕೃಷಿಕರು ಒಂದು ರೀತಿಯಲ್ಲಿವಿದ್ಯಾರ್ಥಿಗಳ ಹಾಗೆ. ಎಷ್ಟು ಹೆಚ್ಚು ಅಧ್ಯಯನವನ್ನು ಮಾಡುತ್ತಾರೋ ಅದು ಅವರ ಭವಿಷ್ಯಕ್ಕೆ ಅಷ್ಟು ಉತ್ತಮವಾದುದನ್ನೇ ನೀಡುತ್ತದೆ. ಅವರು ಕಲಿತದ್ದನ್ನು ಕಾರ್ಯರೂಪಕ್ಕೆ ತಂದಾಗ ಅವರ ಅಭಿವೃದ್ಧಿ ಇನ್ನೂ ಒಂದು ಪಟ್ಟು ಮೇಲಕ್ಕೆ ಹೋಗುವುದಕ್ಕೆ ಸಾಧ್ಯವಾಗುತ್ತೆ.
ಮಿಶ್ರ ಕೃಷಿಗಳ ಕುರಿತು ನನಗೆ ಹಲವಾರು ವಿಚಾರಗಳು ತಿಳಿದಿದ್ದರೂ ಸರಿಯಾದ ಮಾರ್ಗದರ್ಶಕರ ಅಗತ್ಯತೆ ಇತ್ತು, ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ರಾಯ ಚೂರಿನ ಎನ್.ಸಿ.ಸಿ ಕಚೇರಿಯಲ್ಲಿ, ಹಿರಿಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜು, ಶ್ರೀಗಂಧವನ್ನು ದೀರ್ಘಾವಧಿಯಲ್ಲಿ ಹೇಗೆ ಬೆಳೆಯು ವುದು ಎನ್ನುವ ಕುರಿತಾಗಿ ಮಾರ್ಗದರ್ಶನವನ್ನು ನೀಡುವುದರ ಜತೆಗೆ ನಾಟಿ ಪದ್ಧತಿಯ ಬಗ್ಗೆ ಹಲವಾರು ದಿನಗಳ ಕಾಲ ಮಾರ್ಗದರ್ಶನವನ್ನು ನೀಡಿದ್ದರು.
ಶ್ರೀಗಂಧವನ್ನೇ ಬೆಳೆಯಬೇಕು, ಅದೇ ನನ್ನ ಭವಿಷ್ಯವಾಗಬೇಕು ಅಂತ ನಿರ್ಧಾರ ಮಾಡಿದ್ದಾದರೂ ಅವುಗಳ ಸಸಿಯನ್ನು ಆಯ್ಕೆ ಮಾಡುವುದರಲ್ಲಿ ಹಲವು ಗೊಂದಲಗಳು ತಲೆದೋರಿತ್ತು. ಹಾಗೆ ನೋಡಿದರೆ ಈಗಿನ ಕಾಲಮಾನ ತುಂಬಾ ಸುಧಾರಿಸಿದೆ, ಆದರೆ ಆಗ ಕೃಷಿ ಮಾಡುವ ಸಂದರ್ಭವನ್ನು ನೆನಪಿಸಿಕೊಂಡರೆಈಗಲೂ ಒಂದು ರೀತಿಯಲ್ಲಿ ಭಯವಾಗುತ್ತೆ. ಮಾರ್ಗದರ್ಶನವನ್ನು ಕೇಳೋಣವೆಂದರೆ, ಯಾರನ್ನ ಅಂತ ಕೇಳೋದು? ಹೆಚ್ಚಿನವರು ಅಲ್ಪಾವಧಿ ಕೃಷಿಯಲ್ಲೇ ಸಂತೃಪ್ತರಾಗಿದ್ದರು.
ಈಗಿನಂತೆ ಮೊಬೈಲ್, ಇಂಟರ್ನೆಟ್‌ಗಳೂ ಇರಲಿಲ್ಲ, ಅದಕ್ಕೆ ಪಟ್ಟ ಶ್ರಮವನ್ನ ನೀವೇ ಊಹಿಸಿಕೊಳ್ಳಿ. ಈ ಸಮಯದಲ್ಲಿ, ಬೆಂಗಳೂರಿನಲ್ಲಿರುವ ‘ಭಾರತೀಯ ತಂತ್ರಜ್ಞಾನ ಮತ್ತು ಮರ ವಿಜ್ಞಾನ ಸಂಸ್ಥೆ’ಯ ಹಿರಿಯ ವಿಜ್ಞಾನಿಗಳನ್ನು ಸಂಪರ್ಕಿಸಿದೆ. ಅವರು ತರಬೇತಿ ಪಡೆಯಲು ಸಲಹೆ ನೀಡಿದ್ದರು, ಅದರಂತೆ ಒಂದು ವಾರಗಳ ಕಾಲ ತರಬೇತಿ ಪಡೆದಿದ್ದೆ. ಐಡಬ್ಲುಎಸ್‌ಟಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರನೊಬ್ಬ, ಮಹದೇಶ್ವರ ಬೆಟ್ಟದ ದಟ್ಟ ಕಾನನದಲ್ಲಿ ಉತ್ಕೃಷ್ಟ ದರ್ಜೆಯ ಗಂಧದ ಬೀಜ ಸಿಗುವ ಬಗ್ಗೆ ಮಾಹಿತಿಯನ್ನು ನೀಡಿದ್ದು ಮರುಭೂಮಿಯಲ್ಲಿ ದೊರೆತ ನೀರಿನಂತಾಗಿತ್ತು.
ಅವನು ಹೇಳಿದಂತೆ ಬುಡಕಟ್ಟು ಜನಾಂಗಗಳ ಮಂದಿಯನ್ನು ಭೇಟಿ ಮಾಡಿ ಬೀಜಗಳನ್ನೂ ತಂದಾಯಿತು. ಜಮೀನನಲ್ಲಿ ನಾಟಿ ಮಾಡುವುದಕ್ಕೆ ಸಿದ್ಧತೆಗಳನ್ನೂ ನಡೆಸಿ ಸಂಪೂರ್ಣ ಶ್ರೀಗಂಧದ ಕೃಷಿಯ ಮೇಲೆಯೇ ಗಮನಹರಿಸಿ ಕಾರ್ಯ ಪೃವೃತ್ತಳಾಗಿದ್ದೆ. ಭಾರತೀಯ ಮರ ವಿಜ್ಞಾನ ಸಂಸ್ಥೆಯಲ್ಲಿ ತರಬೇತಿ ಪಡೆಯು ತ್ತಿದ್ದಾಗ, ಶ್ರೀಗಂಧ ಒಂದು ಪರಾವಲಂಬಿ. ಹೀಗಾ ಜತೆಗೆ ಬೇರೆ ಸಸ್ಯಗಳ ಅಗತ್ಯ ಜತೆಗಿದೆ. ಶಾಶ್ವತ ಆಶ್ರಯ ಸಸ್ಯಗಳ (ಪರಾವಲಂಬಿ)ಬಗ್ಗೆ ಉಪನ್ಯಾಸಕ ವಿಜ್ಞಾನಿಗಳಲ್ಲೂ ತುಂಬಾ ಗೊಂದಲವಿತ್ತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಲಹೆಗಳನ್ನು ನೀಡಲು ಪ್ರಾರಂಭಿಸಿದರು.
ಮೋಸಂಬಿ ಮತ್ತು ಸೀಬೆಯನ್ನು ಆಯ್ಕೆ ಮಾಡಿಕೊಂಡಿದ್ದೆ.500ಮೋಸಂಬಿ ಗಿಡಗಳನ್ನು ಆಶ್ರಯ ಗಿಡಗಳನ್ನಾಗಿ ಬೆಳೆಸಿದಾಗ ಅವುಗಳು ಸಮೃದ್ಧವಾಗಿ ಬಂದವು ಆರಂಭದಲ್ಲಿ. ಇದನ್ನು ನೋಡಿದ ವಿಜ್ಞಾನಿಗಳು ಸಹ ಶಿಫಾರಸು ಮಾಡಿದ್ದು ಹೌದಾದರೂ ಕಾಲಕ್ರಮೇಣ ಮರಗಳು ಒಣಗಲು ಪ್ರಾರಂಭಿಸಿದವು. ಈ ಕುರಿತಾಗಿಹಲವು ಕ್ರಮಗಳನ್ನು ಕೈಗೊಂಡರೂ ಅವುಗಳು ವಿಫಲವಾಗಿದ್ದರಿಂದ ಮನಸ್ಸು ಭಾರವಾಗಿತ್ತು, ಆಶ್ಚರ್ಯ ಎನ್ನುವಂತೆ ಮೋಸಂಬಿ ಮರದ ನಡುವೆ ಇದ್ದ ಎರಡು ನಿಂಬೆ ಗಿಡಗಳ ಮಧ್ಯೆ ಒಂದು ಶ್ರೀಗಂಧದ ಗಿಡ ಬೆಳೆದು ನಿಂತಿತ್ತು!
ಅಲ್ಲಿಯೂ ಸಹಿತ ನಿಂಬೆಗಿಡ ಒಣಗುವುದಕ್ಕೆ ಪ್ರಾರಂಭವಾಗಿತ್ತು. ಆಗ ಅರಿವಿಗೆ ಬಂದ ವಿಷಯ, ಶ್ರೀಗಂಧದ ಆಶ್ರಯ ಗಿಡಗಳು ಸಿಟ್ರಸ್ ಅಂಶಗಳನ್ನು ಹೊಂದಿದ್ದರೆ ಅಂತಹಾ ಆಶ್ರಯ ಸಸ್ಯಗಳು ಸಾಯುತ್ತದೆ. ನಂತರ ಒಣಗಿದ ಎಲ್ಲ ಮೋಸಂಬಿ ಮತ್ತು ಲಿಂಬು ಗಿಡಗಳ ನಡುವೆ ವಿವಿಧ ಜಾತಿಯ ಆಶ್ರಯ ಸಸ್ಯಗಳನ್ನು ಹೋಸ್ಟ್ ಮಾಡಿದ್ದೆ. ಇದರಿಂದ ಶ್ರೀಗಂಧಕ್ಕೆ ಯಾವುದು ಅತ್ಯುತ್ತಮ ಆಶ್ರಯ ಸಸ್ಯವಾಘಬಲ್ಲುದು ಎಂಬುದು ತಿಳಿಯಿತು. ಆತ್ಮಸ್ಥೈರ್ಯ ಇನ್ನಷ್ಟು ಬಲವಾಗಿತ್ತು, ಕೃಷಿಯ ಕುರಿತಾಗಿನ ಹುರುಪು ದ್ವಿಗುಣಗೊಂಡಿತ್ತು.
ನಾನು ಯಾವತ್ತೂ ರೈತರಿಗಾಗಿಯೇ ಇರಬೇಕು ಎಂದು ಬಯಸುವವಳು ಮತ್ತು ರೈತರಿಗೆ ಮಾಹಿತಿಗಳ ಕೊರತೆ, ಅದೂ ಶ್ರೀಗಂಧದ ವಿಚಾರದಲ್ಲಿ ಹೆಚ್ಚಾಗಿ ಇಲ್ಲದಿರುವುದು ಗೋಚರಿಸುತ್ತದೆ. ಹೆಚ್ಚಿನವರು ಆಶ್ರಯ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಸೋತುಹೋಗುತ್ತಾರೆ ಎನ್ನುವುದು ನಾನು ಕಂಡ ಮುಖ್ಯ ವಾದ ಅಂಶ. ನವದೆಹಲಿಯಲ್ಲಿ ನಡೆದಿದ್ದ ಅಂತಾಷ್ಟ್ರೀಯ ಸಮಾವೇಶವೊಂದರಲ್ಲಿ ಅಲ್ಲೊಬ್ಬ ಎದ್ದು ನಿಂತು, ‘ಮೇಡಂ ನೀವು ಕನ್ನಡದವರಾ?’ ಅಂತ ಪ್ರಶ್ನಿಸಿದರು.
ಸಹಜವಾಗಿಯೇ ‘ಹೌದು’ ಅಂತ ಕನ್ನಡದಲ್ಲೇ ಉತ್ತರ ನೀಡಿದ್ದೆ. ಆಗ ಅವರು, ‘ನವಲಗುಂದ ತಾಲೂಕಿನಲ್ಲಿ, ದೇಶಪಾಂಡೆ ಫೌಂಡೇಶನ್‌ನವರು ಮಹಿಳಾ ಸಮಾವೇಶ ನಡೆಸುತ್ತಿದ್ದಾರೆ, ನೀವು ಆ ಕಾರ್ಯಕ್ರಮದಲ್ಲಿ ಮಾತನಾಡಿ’ ಅಂತ ಆಹ್ವಾನ ನೀಡಿದ್ದರು. ನಂತರ ಆ ಊರಿನಲ್ಲಿ ಆಡಿದ ಮಾತುಗಳು ಯೂಟ್ಯೂಬ್ನಲ್ಲಿ ಪ್ರಸಾರವಾಗಿತ್ತು ಮತ್ತು ಅದೇ ನನಗೆ ಸಾರ್ವಜನಿಕವಾಗಿ ದೊರೆತ ಮೊದಲ ಅವಕಾಶವಾಗಿತ್ತು. ಯೂಟ್ಯೂಬ್‌ನಲ್ಲಿ ನನ್ನ ಮಾತುಗಳನ್ನು ಕೇಳಿದ್ದ ಆಂಧ್ರದ ರೈತನೊಬ್ಬ ಭೇಟಿ ಮಾಡಿ, ತೋಟದ ವೀಕ್ಷಣೆಯನ್ನು ಮುಗಿಸಿ, ‘ನನ್ನದು160ಎಕರೆ ಪ್ರದೇಶದಲ್ಲಿ ಶ್ರೀಗಂಧ ಇದ್ದರೂ ನಿರೀಕ್ಷಿತ ಬೆಳೆ ಮಾತ್ರ ದೊರೆಯುತ್ತಿಲ್ಲ, ನೀವು ಒಮ್ಮೆ ನಮ್ಮ ತೋಟಕ್ಕೆ ಬರಬೇಕು’ ಅಂತ ಹೇಳಿದ್ದ.
ಅವರ ಜಾಗವೊಂದು ಅದ್ಭುತವಾದ ಪ್ರದೇಶ, ಬೆಟ್ಟ ಕಾಡುಗಳಂತಹಾ ಸುಂದರವಾದ ಪ್ರದೇಶ. ಆ ಕಾಡಿನ ಒಳಗೆ ಯಾರೂ ಭೇದಿಸಲಾಗದಂತಹಾ ಸೆಕ್ಯೂರಿಟಿ, ಅದೊಂದು ಅಬೇಧ್ಯ ಕೋಟೆಯಂತೆ ಗೋಚರಿಸುತ್ತಿತ್ತು. ವಾಹನ ಸಂಚಾರಕ್ಕೆ ಸುಮಾರು 20 ಅಡಿಗಳಷ್ಟು ವಿಶಾಲವಾದ ಮಾರ್ಗಗಳು, ಸ್ವಿಮ್ಮಿಂಗ್ ಪೂಲ್, ಗೆಸ್ಟ್ ಹೌಸ್ ಹೀಗೆ ಹತ್ತು ಹಲವು ಬಗೆಯ ಐಷಾರಾಮಿ ವ್ಯವಸ್ಥೆ. ಕೃಷಿಗೆ ಹೋಲಿಸಿದರೆ ಅದೊಂದು ರೈತಾಪಿಯ ಅಮರಾವತಿಯಷ್ಟು ಸಮ್ದೃದ್ಧ. ಅಲ್ಲಿದ್ದ ಎಲ್ಲಮರಗಳೂ, ದಷ್ಟಪುಷ್ಟವಾಗಿ ಬೆಳೆದುನಿಂತಿದ್ದವು. ಎಷ್ಟಿದ್ದರೇನು ಬಂತು? ಅವುಗಳ ಮಧ್ಯೆ ಶ್ರೀಗಂಧ ಕ್ಷೀಣಗೊಂಡಿತ್ತು. ಅದಕ್ಕೆ ಮೂಲಕಾರಣ ರಕ್ತ ಚಂದನವನ್ನು ಆಶ್ರಯ ಸಸ್ಯಗಳಾನ್ನಾಗಿಸಿದ್ದರು.
ರಕ್ತಚಂದನದ ಮರಗಳು ಶ್ರೀಗಂಧದ ಮರಕ್ಕಿಂತ ಎತ್ತರವಾಗಿ ಬೆಳೆದು ಬೃಹತ್ ಗಾತ್ರವಾಗಿತ್ತು. ಹಾಗಾಗಿ ಸೂರ್ಯನ ಕಿರಣಗಳು ಶ್ರೀಗಂಧದ ಮರಗಳ ಮೇಲೆಬೀಳುವುದು ನಿಂತು ಹೋಗಿತ್ತು. ಶ್ರೀಗಂಧದ ಮರಗಳ ಮೇಲೆ ಯಾವತ್ತೂ ಬಿಸಿಲಿನ ಕಿರಣಗಳು ಬೀಳಬೇಕು ಎನ್ನುವುದು ವೈಜ್ಞಾನಿಕವಾದ ಸತ್ಯ. ಹಾಗಂತ ರಕ್ತಚಂದನವನ್ನು ಬೆಳೆಸಲೇಬಾರದು ಅಂತೇ ನಿಲ್ಲ. ಶ್ರೀಗಂಧವನ್ನು ನಾಟಿ ಮಾಡಿದ ಐದು ವರ್ಷಗಳ ನಂತರ ರಕ್ತ ಚಂದನವನ್ನು ಆಶ್ರಯ ಸಸ್ಯವನ್ನಾಗಿ ಬೆಳೆಸ ಬಹುದು.
ಇತ್ತೀಚೆನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹಲವರ ದಾರಿ ತಪ್ಪಿಸುತ್ತಿರುವುದು ವಿಷಾಯದನೀಯವಲ್ಲದೆ ಇನ್ನೇನು? ಸಾಮಾಜಿಕ ಜಾಲತಾಣದಲ್ಲಿ ಒಂದು ಆಘಾತಕಾರಿ ಸಂಗತಿ ಹರಿದಾಡುತ್ತಿದೆ. ಶ್ರೀಗಂಧದ ಜತೆ ರಕ್ತಚಂದನವನ್ನು ಬೆಳೆದರೆ ಹೆಚ್ಚಿ ನ ಆದಾಯ ಬರುತ್ತದೆ ಎಂದು ಹೇಳಲಾಗುತ್ತಿದೆ. ಆದಾಯ ಹೆಚ್ಚಾಗಿದ್ದರೂ ವೈಜ್ಞಾನಿಕ ದೃಷ್ಟಿಯಿಂದ ಇದು ಸರಿಯಲ್ಲ. ಶ್ರೀಗಂಧವನ್ನು ಯಾರು ಬೇಕಾದರೂ ಬೆಳೆಯಬಹುದ. ಅಂದರೆ ಅದಕ್ಕೆ ಶ್ರಮವೇ ಇಲ್ಲ ಅಂತೇನೂ ತಿಳಿದುಕೊಳ್ಳಬೇಡಿ. ಅದಕ್ಕೂ ಒಂದಿಷ್ಟು ಶ್ರಮ ಇದ್ದೇ ಇರುತ್ತದೆ. ಅದಕ್ಕೆ ಅದರದ್ದೇ ಆದ ಕೆಲವು ಕೆಲಸಗಳೂ ಇರುತ್ತೆ, ಮುಂದಿನ ಸಂಚಿಕೆಯಲ್ಲಿ ರಕ್ತಚಂದನದ ಬೆಳೆಗಳ ಬಗ್ಗೆ ಕೆಲವು ರೋಚಕ ವಿಚಾರಗಳನ್ನು ಹೇಳುತ್ತೇನೆ. ನೀವು ಶ್ರೀಗಂಧವನ್ನು ಬೆಳೆಯಲೇಬೇಕು ಎನ್ನುವ ಆಸಕ್ತಿಯನ್ನು ಹೊಂದಿದ್ರೆ ಓದಲೇಬೇಕು.