ಮಳೆ ಸುರಿಸಿದ ಗುರು
ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಬಹು ಹಿಂದೆ ಉಜ್ಜಯಿನಿ ಪಟ್ಟಣದ ಬೀದಿಗಳಲ್ಲಿ ಒಬ್ಬ ವ್ಯಕ್ತಿಯು ಓಡಾಡುತ್ತಾ ‘ಬಾಬಾ.. ಬಾಬಾ’ ಎಂದು ಕೂಗುತ್ತಿದ್ದ. ಆದರೆಪಟ್ಟಣದ ನಿವಾಸಿಗಳಿಗಾಗಲೀ, ಬೇರಾರಿಗೇ ಆಗಲಿ ತೊಂದರೆ ಕೊಡುತ್ತಿರಲಿಲ್ಲ. ಹಲವು ದಿನಗಳ ಕಾಲ ಆತ ‘ಬಾಬಾ ಬಾಬಾ’ ಎಂದು ಕೂಗುತ್ತ ಹೋಗುತ್ತಿದ್ದುದನ್ನು ಕಂಡು, ಕೊತ್ವಾಲನಿಗೆ ಕೋಪ ಬಂತು.
ತನ್ನ ಸಹಾಯಕರಿಗೆ ಹೇಳಿ, ಆತನ್ನು ಕರೆಸಿ, ‘ಏನದು ನಿನ್ನ ಕೂಗಾಟ?’ ಎಂದು ಕೇಳಿದ. ಆತ ಅದಕ್ಕುತ್ತರವಾಗಿ ‘ಬಾಬಾ, ಬಾಬಾ’ ಎಂದಷ್ಟೇ ಹೇಳಿದ. ಕೊತ್ವಾಲನ ಸಹಾಯಕರು ಆತನ ಬೆನ್ನಿಗೆ ಎರಡು ಬಾರಿಸಿ, ‘ಸರಿಯಾಗಿ ಹೇಳು, ಇಲ್ಲವಾದರೆ ಜೈಲಿಗೆ ಹಾಕು ತ್ತೇವೆ’ ಎಂದರು. ‘ನೀವು ಹೊಡೆದರೂ ಅಷ್ಟೆ, ಜೈಲಿಗೆ ಹಾಕಿದರೂ ಅಷ್ಟೆ.. ಬಾಬಾ ಬಾಬಾ..’ ಎಂದ ಆ ವ್ಯಕ್ತಿ. ‘ಹಾಗೆಂದ ರೇನು?’ ಎಂದು ಕೊತವಾಲ ಕೇಳಿದ.
‘ಅದು ನನ್ನ ಹೆಸರು’. ‘ನೋಡಿದರೆ ಆಶ್ರಮದ ವಾಸಿ ಥರಾ ಇದೀಯಾ. ನಿನ್ನ ಗುರುಗಳ ಹೆಸರೇನು?’ ಎಂದ ಕೊತ್ವಾಲ. ‘ಬಾಬಾ ಬಾಬಾ’ ಎಂಬ ಉತ್ತರ ಬಂತು. ‘ಅವರ ಗುರುಗಳ ಹೆಸರೇನು’ ‘ಬಾಬಾ’ ಕೊತ್ವಾಲನಿಗೆ ಕೋಪ ಬಂತು. ಇಡೀ ಪಟ್ಟಣವೇ ತನ್ನ ನಿಯಂತ್ರಣ ದಲ್ಲಿರುವಾಗ, ಈತ ಸರಿ ಉತ್ತರ ಕೊಡುವುದಿಲ್ಲವಲ್ಲ ಎಂದು, ಇನ್ನೊಂದೆರಡು ಬಡಿದು, ಆತನನ್ನು ರಾಜರ ಬಳಿಗೆ ಕರೆದೊಯ್ದ.
ಆಗ ಉಜ್ಜಯಿನಿಯಲ್ಲಿದ್ದ ರಾಜ ವಿಕ್ರಮಾದಿತ್ಯನು, ಇಂಥ ಸಣ್ಣ ಪುಟ್ಟ ದೂರುಗಳನ್ನು ಸಹ ವೈಯಕ್ತಿಕವಾಗಿ ಆಲಿಸುತ್ತಿದ್ದನು. ಕೊತ್ವಾಲನ ಸೈನಿಕರು ತಂದ ಆತನನ್ನು ಕಂಡು ‘ಏನಿದು ಗಲಾಟೆ?’ ಎಂದ ರಾಜ. ‘ಏನೇ ಕೇಳಿದರೂ ಈತ ಬಾಬಾ ಬಾಬಾ ಎನ್ನುತ್ತಾನೆ’ ಎಂದ ಕೊತ್ವಾಲ.
ವಿಕ್ರಮಾದಿತ್ಯನು ಸಮಾಧಾನದಿಂದ, ‘ಏನಪ್ಪಾ ನಿನ್ನ ಹೆಸರು? ನಿನ್ನ ಗುರುಗಳು ಯಾರು?’ ಎಂದು ಕೇಳಿದ. ‘ನನ್ನ ಗುರುಗಳು ಬಾಬಾ. ಈ ಊರಿನ ಅಂಚಿನಲ್ಲಿ ಅವರ ಆಶ್ರಮವಿದೆ. ಬಾಬಾ ಬಾಬಾ…’ ಎನ್ನತೊಡಗಿದ ಆ ಶಿಷ್ಯ. ‘ಏನಿದು ಬಾಬಾ ಎಂದರೆ?’ ಎಂದು ರಾಜ ಕೇಳಿದ. ‘ಬಾಬಾ ನನ್ನ ಸರ್ವಸ್ವ. ಅವರೇ ನನ್ನ ಗುರುಗಳು. ಅವರಿಲ್ಲದ ನನ್ನ ಬಾಳು ದೊಡ್ಡ ಸೊನ್ನೆ’ ಎಂದ ಶಿಷ್ಯ.ವಿಕ್ರಮಾದಿತ್ಯನು ಕೇಳಿದ ‘ಬಾಬಾ ನಿನ್ನ ಗುರುಗಳು. ಸರಿ. ಈಗ ರಾಜ್ಯದ ದಕ್ಷಿಣ ಭಾಗದಲ್ಲಿ ಬರಗಾಲವಿದೆ. ಅವರು ಮಳೆ ತರಿಸ ಬಲ್ಲರೆ?’ ‘ಮಹಾಸ್ವಾಮಿ, ನಾನು ಆಶ್ರಮಕ್ಕೆ ಹೋಗಿ ಗುರುಗಳನ್ನು ಕೇಳುವೆ’ ಎಂದು ಶಿಷ್ಯ ‘ಬಾಬಾ ಬಾಬಾ’ ಎಂದು ಕೂಗುತ್ತಾ, ತನ್ನ ಆಶ್ರಮದತ್ತ ಓಡಿದ. ಅದಾಗಿ ಎರಡನೇ ದಿನಕ್ಕೆ ಇಡೀ ರಾಜ್ಯದಲ್ಲಿ ಮಳೆ ಬಂತು.
ರಾಜನಿಗೆ ಸಂತಸವಾಯಿತು. ಆ ದಿನ ಸಂಜೆ ಶಿಷ್ಯ ಪುನಃ ರಾಜನ ಬಳಿ ಬಂದ. ‘ಮಹಾಸ್ವಾಮಿ, ತಮಗೆ ಸಂತಸ ಆಯಿತೆ? ಎಲ್ಲಾ ಕಡೆ ಮಳೆ ಬಂದಿದೆ’ ಎಂದು ಕೇಳಿದ. ವಿಕ್ರಮಾದಿತ್ಯನು ‘ಹೌದು, ಒಳ್ಳೆಯ ಮಳೆ ಬಂದಿದೆ. ಅದಿರಲಿ, ಈ ಬಾಬಾ ಎಂದರೆ ಯಾರು?’ ಎಂದು ಕೇಳಿದ. ‘ಮಹಾಸ್ವಾಮಿ, ಅವರು ನನ್ನ ಗುರುಗಳು. ಅವರು ಎಲ್ಲಾ ಕಡೆ ಇದ್ದಾರೆ. ಆ ಗುರುಗಳು ಸರ್ವಾಂತರ್ಯಾಮಿ’ ಎಂದ ಶಿಷ್ಯ.
‘ಸರಿ, ನಿನ್ನ ಗುರುಗಳಿಗೆ ಗುರುದಕ್ಷಿಣೆಯಾಗಿ 12 ಗ್ರಾಮಗಳನ್ನು ಕೊಡುತ್ತಿದ್ದೇನೆ ಎಂದು ಹೇಳು’ ಎಂದ ವಿಕ್ರಮಾದಿತ್ಯ. ಶಿಷ್ಯ ತಲೆ ಅಲ್ಲಾಡಿಸಿದ. ‘ಇಲ್ಲ ಸ್ವಾಮಿ, ಅವರು ಅದನ್ನು ತೆಗೆದುಕೊಳ್ಳುವುದಿಲ್ಲ. ನಮ್ಮ ಗುರುಗಳಿಗೆ ಆಸ್ತಿ, ಅಂತಸ್ತು ಎಂದರೆ ತೃಣ ಸಮಾನ’ ಎಂದು, ಆತ ‘ಬಾಬಾ ಬಾಬಾ’ ಎನ್ನುತ್ತಾ ಊರಿಂದಾಚೆ ಓಡತೊಡಗಿದ. ವಿಕ್ರಮಾದಿತ್ಯನು ತನ್ನ ಸೈನಿಕರನ್ನು ಕರೆದು, ‘ಈ ಶಿಷ್ಯನನ್ನು ಅನುಸರಿಸಿಕೊಂಡು ಹೋಗಿ. ಆ ಗುರುಗಳು ಎಲ್ಲಿದ್ದಾರೆ ನೋಡಿಕೊಂಡು ಬನ್ನಿ’ ಎಂದು ಕಳಿಸಿದ. ಸೈನಿಕರು ಆಶಿಷ್ಯನನ್ನು ಹಿಂಬಾಲಿಸಿದರು.
ಒಂದೆರಡು ಯೋಜನ ಕ್ರಮಿಸಿದ ನಂತರ, ಊರಿನ ಹೊರವಲಯದಲ್ಲಿದ್ದ ಒಂದು ಕುಟೀರವನ್ನು ಆ ಶಿಷ್ಯ ಪ್ರವೇಶಿಸಿದ. ಸೈನಿಕರು ಬಾಗಿಲ ಬಳಿ ನಿಂತು ‘ಬಾಬಾ ಎಲ್ಲಿ?’ ಎಂದು ಕೇಳಿದರು. ‘ನಾನೇ ಬಾಬಾ’ ಎಂಬ ಧ್ವನಿ ಒಳಗಿನಿಂದ ಕೇಳಿಸಿತು. ಸೈನಿಕರು ಕುಟೀರ ವನ್ನು ಪ್ರವೇಶಿಸಿ ನೋಡಿದರೆ, ಅದು ನಿರ್ಜನವಾಗಿತ್ತು, ಹಾಳುಬಿದ್ದಿತ್ತು. ಗುರು ಮತ್ತು ಶಿಷ್ಯರನ್ನು ಕಾಣದೇ, ಸೈನಿಕರು ವಾಪಸಾಗಿ, ರಾಜಾ ವಿಕ್ರಮಾದಿತ್ಯನಿಗೆ ವಿಚಾರ ತಿಳಿಸಿದರು.
ವಿಕ್ರಮಾದಿತ್ಯ ‘ಎಲ್ಲಾ ದೇವರಿಚ್ಚೆ’ ಎಂದು ನಿಟ್ಟುಸಿರಿಟ್ಟ. ಆ ವರ್ಷ ಆತನ ರಾಜ್ಯವು ಬರಗಾಲದಿಂದ ಪಾರಾಗಿ, ಆತನ ಪ್ರಜೆಗಳು ಸಾಕಷ್ಟು ಧಾನ್ಯಗಳನ್ನು ಬೆಳೆದದ್ದು ಮಾತ್ರ ವಾಸ್ತವ ಎನಿಸಿತು.