ತಾಯಿ ಹೆಸರು ಜೀವದುಸಿರು !!
ಸಾಂಪ್ರತ
ಹಿರೇಮಗಳೂರು ಕಣ್ಣನ್
ಜಗತ್ತಿನಲ್ಲಿ ಯಾರ ಋಣಬೇಕಾದರೂ ತೀರಿಸಬಹುದು. ‘ತಾಯಿ’ ಋಣ ಮಾತ್ರ ಏಳು ಜನುಮವೆತ್ತಿದರೂ ತೀರಿಸಲಾಗದು. ಹಾಗಾಗಿ ಬದುಕಿನ ಪರ್ಯಂತ ಹೆತ್ತತಾಯಿಗೆ ಮಕ್ಕಳು ಎಂದೂ ಋಣಿಗಳು. ನಮಗೆ ಜನುಮಕೊಟ್ಟ ವೇಳೆ ಆಕೆ ಅನುಭವಿಸಿರುವ ಯಾತನೆ ಯನ್ನು ನಾವು ಶಿಶುವಿನಾವಸ್ಥೆಯಲ್ಲಿದ್ದಿದ್ದರಿಂದ ನಮಗೆ ನಮ್ಮ ಅರಿವಿಗೆ ಆ ನೋವು ತಿಳಿದಿಲ್ಲ. ಆ ಕಾರಣದಿಂದಾಗಿಯೇ ಕನ್ನಡ ಭಾಷೆಯಲ್ಲಿ ಗಾದೆ ಮಾತು ಇಂದಿಗೂ ನೆನಪಿಸುತ್ತಿರುವುದು ‘ಹೆತ್ತವಳಿಗೇಗೊತ್ತು ಹೆರಿಗೆ ಬೇನೆ!.
ಕವಿಯ ಮಾತಿನಲ್ಲಿ ಹೇಳುವುದಾದರೆ ‘ಹೊರಲಾರದೇ ಹೊತ್ತು, ಹೆರಲಾರದೆ ಹೆತ್ತು, ಅಳುವುದೆ ಅತ್ತು, ನಗುವುದೆ ನುಂಗಿ ತೇದಷ್ಟೂ ತಂಪುಕೊಡುವ ಚಂದನ ತಾಯಿ.. ತಾಯಿ… ತಾಯಿ…. ’ ಈ ಕಾರಣದಿಂದಾಗಿಯೇ ವೇದನೆಯ ಕೊಳದಲ್ಲಿ ಮುಳುಗೆದ್ದ ಈಕೆಗೆ ವೇದದಲ್ಲಿ ನೀಡಿದೆ ‘ಮಾತೃದೇವೋ ಭವ’ ಎಂಬ ಪ್ರಥಮಸ್ಥಾನ!
ಜಗತ್ತಿನಲ್ಲಿ ಸೂರ್ಯ-ಚಂದ್ರರಿರುವವರೆಗೂ ಈ ಸ್ಥಾನವೇ ಅವಳ ಶಿಖರ ತುದಿಯ ಆಸ್ಥಾನ. ‘ಹತ್ತು ದೇವರ ಪೂಜಿಸುವ ಮುನ್ನ ಹೆತ್ತ ತಾಯಿಯ ಪೂಜಿಸು’ ಎನ್ನುವ ನಾಣ್ಣುಡಿ ಸತ್ಯವೇ ಹೌದು. ನಾವು ಜಗತ್ತಿಗೆ ಪ್ರವೇಶಿಸುವ ಮೊದಲು ತಾಯಿಯ ಗರ್ಭಗುಡಿ ಯಲ್ಲಿ ಒಂಬತ್ತು ತಿಂಗಳು ಆಕೆ ನಮಗಾಗಿ ನಮ್ಮ ಜೀವರಕ್ಷಣೆಗಾಗಿ ಪಾಲಿಸುವ ಕಟ್ಟುನಿಟ್ಟಾದ ಕ್ರಮ ಹಾಗೂ ಜನಿಸಿದ ನಮ್ಮವ ತಾರದ ನಂತರ ಮೂರು ನಾಲ್ಕು ತಿಂಗಳ ಅವಳ ಆಹಾರ ಸೇವನೆ ಮತ್ತು ಆರೋಗ್ಯದ ರಕ್ಷಣೆಗೆ ಈಕೆ ಪಾಲಿಸುವ ಕಠಿಣ ವ್ರತ ಆಕೆ ಯಷ್ಟೇ ಬಲ್ಲಳು. ಯತಿ ಧರ್ಮದಂತೆ ಬಾಣಂತಿ ಧರ್ಮದ ಪಾಲನೆ ಪೋಷಣೆ ಅತಿ ಸೂಕ್ಷ್ಮವೋ ಸೂಕ್ಷ್ಮ, ಇದೆಲ್ಲವನ್ನು ಇಂತೆಲ್ಲ ಕಷ್ಟವನ್ನು ತಾನು ಅನುಭವಿಸಿ ಕೂಡ ತನ್ನ ಮಗುವನ್ನು ತಾನೇ ಪಿಡಿದೆತ್ತಿ ಮೊಗದೆತ್ತರದಲ್ಲಿ ಚುಂಬಿಸಿ ಮುದ್ದಾಡುವ ಅವಳ ನಿಷ್ಕಪಟ ಮನಸ್ಸಿನ ಮುಗ್ಧ ಪ್ರೇಮಕ್ಕೆ ಬಣ್ಣಿಸಲು ಪದಗಳೇ ಇಲ್ಲವೆನ್ನಬೇಕು.
ಸಂಸಾರ ಭಾರವನ್ನು ತನ್ನ ಪತಿಯಂತೆ ನೊಗದಂತೆ ಭುಜದಲ್ಲಿ ಹೊತ್ತು ಸಂಸ್ಕಾರವನ್ನೂ ನೀಡಿ ಜೀವನ ಯಾತ್ರೆಯಲ್ಲಿ ಉಸಿರಿರು ವವರೆಗೂ ಸಾಗಿ ಬರುವ ಮಮತಾಮೂರ್ತಿ, ವಾತ್ಸಲ್ಯಪೂರ್ಣೇ, ಜೀವಂತ ಚೈತನ್ಯ ತಾಯಿ. ಅಷ್ಟೇ ಅಲ್ಲ ಕಾಂತಿ ರೂಪದ ಶಾಂತಿರೂಪದ ವಿದ್ಯಾರೂಪದ ಮಾತೃರೂಪದ ಪ್ರತ್ಯಕ್ಷ ದೇವಿ. ತನ್ನ ಕಣ್ಣಮುಂದೆ ತನ್ನ ಯಜಮಾನರ ನೇತೃತ್ವದಲ್ಲಿ ಮಕ್ಕಳು ಬಾಳಿ ಬೆಳಗಿ ಕೀರ್ತಿ ಸಂಪಾದಿಸಬೇಕೆಂಬ ಆಸೆಯ ಈಕೆ ತನ್ನಾಸೆಗಳನ್ನೆ ಕನಸಿನ ಕೈಗೆಟುಕದ ಕುಸುಮವಾಗಿ ಕರಗಿಸಿಕೊಂಡು ನೀರಾಗಿಸಿ ಬಿಡುವ ನೀರೆ ಈ ಧೀರೆ.
ಅಮ್ಮಾ! ನಿನಗೇನು ಆಸೆ? ಎಂದು ಕೇಳಿದರೆ ‘ನೀನು ಚೆನ್ನಾಗಿ ಬಾಳಪ್ಪ, ತಂದೆಯ ಗೌರವ ಕಾಪಾಡು, ಮನೆತನಕ್ಕೆ ಒಳ್ಳೆಯ ಹೆಸರನ್ನು ತಾ’ ಎನ್ನುವ ಇವಳಿಗೆ ಸ್ವಾರ್ಥವೇ ಇಲ್ಲ. ಕಣ್ಣಮುಂದೆ ಚಿಣ್ಣರ ಕೀರ್ತಿಯನ್ನಷ್ಟೇ ಬಯಸುವ ಇವಳ ಹೃದಯ ಶ್ರೀಮಂತ ಹೃದಯ. ತಾನು ತನ್ನ ಕಂದನಿಗೆ ಎದೆಹಾಲು ಉಣಿಸುವಾಗಲೂ ಆಕೆಯಿಂದ ಕಂದನ ಕಿವಿಗೆ ಉಸುರುವ ಮಾತು ಗಳನ್ನು ಕೇಳಿದರೆ ನಮ್ಮ ಮೈಮನಗಳಿಗೆ ರೋಮಾಂಚನವಾಗುತ್ತದೆ.
ನೀತಿಯ ಮಾತನ್ನು ಹೇಳುವ ರೀತಿ, ತೋರುವ ಪ್ರೀತಿ, ಅರುಹುವ ಜ್ಞಾನ, ಆಶ್ಚರ್ಯವನು ಉಂಟುಮಾಡುತ್ತದೆ. ನಮ್ಮ ನಾಡಿನ ವಿಜಯನಗರದ ಒಂದನೇ ದೇವರಾಯನ ಆಸ್ಥಾನದ ಮುಖ್ಯಮಂತ್ರಿ ಲಕ್ಷೀಧರಾಮಾತ್ಯನಿಗೆ ಅವರ ತಾಯಿ ಹೇಳಿದ ಮಾತು; ಮಾತೃಸ್ಥಾನದ ಹಿರಿಮೆಯನ್ನು ತಿಳಿಸುತ್ತದೆ.
‘ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸು, ಧರೆಯೊಳ್ ಸಿಲ್ಕಿರ್ದ ಅನಾಥರಂ ಬಿಡಿಸು, ಮಿತ್ರರ್ಗೆ ಇಂಬುಗಯ, ನಂಬಿದರ್ಗೆ ಎರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ ಇಂತೆಲ್ಲಮಂ ಪಿಂತೆ ತಾನೆರದಲ್ ಪಾಲೆರೆವಂದು ತೊಟ್ಟು ಕಿವಿಯೊಳ್ ಲಕ್ಷೀಧರಾಮಾತ್ಯನ’.
ಸ್ವಾರ್ಥಮುಖಿಯಾಗದೆ ಸಮಾಜಮುಖಿಯಾಗಿ ಮಕ್ಕಳು ನಡೆದುಕೊಳ್ಳಬೇಕೆಂಬ ಇಂತಹ ಉತ್ತಮೋತ್ತಮ ಜನೋಪಯೋಗಿ ಯೋಚನೆಗಳು ಅವಳ ಜೀವನದ ಧ್ಯೇಯೋದ್ದೇಶಗಳಾಗಿ ಎದೆಯಲ್ಲಿ ಮಡುಗಟ್ಟಿದ್ದು, ಮಡಿಲಿಗೆ ಕಂದ ಬಂದ ತಕ್ಷಣದಿಂದಲೇ ಬಾಲಬೋಧೆಯನ್ನು ಹೇಳಿ ಎದೆಗವಚಿಕೊಂಡು ನುಡಿವನುಡಿ ಇವಳೆದೆಯ ದೇವಗುಡಿ, ದೇವನುಡಿ. ಇವಳು ನೀಡುವ ಶಿಕ್ಷಣ,ಇವಳಿತ್ತ ಲಕ್ಷಣ, ಜತೆ ಜತೆಗೆ ಕಾಪಿಡುವ ಸಂರಕ್ಷಣಕ್ಕೆ ನಾವು ಋಣ ತೀರಿಸಲಾಗದು.
ಕನ್ನಡದ ನಮ್ಮ ಚೆನ್ನುಡಿಯ ಮುನ್ನುಡಿಯಲ್ಲಿ ಹೆತ್ತವರು ಇಷ್ಟೆಲ್ಲ ತಮ್ಮ ಕಷ್ಟನಷ್ಟಗಳನ್ನು ಇಷ್ಟದಿಂದ ಸಹಿಸಿ ಸ್ಪಷ್ಟವಾಗಿ ಮಕ್ಕಳಿಂದ ಅಪೇಕ್ಷಿಸಿದಲ್ಲಿ ಆ ಅಪೇಕ್ಷೆಯಾದರೂ ಏನು ಎಂದು ಆಲೋಚಿಸಿದರೆ ದೊರಕುವ ಉತ್ತರವಾದರೂ ಇಷ್ಟೆ, ‘ಹೆತ್ತ ತಂದೆ ತಾಯಿಗಳು ಹೆಚ್ಚು ನಲಿವರು ತಮ್ಮ ಹೆತ್ತಮಕ್ಕಳ ಹೆತ್ತವೇಳೆಗಿಂತ ಹತ್ತು ಜನ ಪೊಗಳಿದಾಗ’. ಇಂತಹ ತಾಯಿಯನ್ನು ಐದು ಹೆಸರುಗಳಿಂದ ಕರೆಯುತ್ತೇವೆ. ಜನನಿ, ಮಾತಾ, ಸವಿತ್ರೀ, ಧಾತ್ರೀ, ಅಂಬಾ. ‘ಜನನಿ’ ಎಂದರೆ ತಂದೆಯಿಂದ ತಾಯಿ ಶರೀರದಲ್ಲಿ ಜೀವ ಚಿಹ್ನೆಯಿಂದ ಕಾಣಿಸುವವಳು.
‘ಮಾತಾ’ ಎಂದರೆ ಗರ್ಭದಲ್ಲಿ ರಕ್ಷಿಸುವವಳು, ‘ಸವಿತ್ರೀ’ ಎಂದರೆ ಸಕಾಲಕ್ಕೆ ಜನ್ಮ ನೀಡುವವಳು. ‘ಧಾತ್ರೀ’ ಎಂದರೆ ಶಿಶುವಾ ವಸ್ಥೆಯಿಂದ ಸಲಹುವವಳು. ‘ಅಂಬಾ’ ಎಂದರೆ ಆಪತ್ಕಾಲದಲ್ಲಿ ಬಂದು ರಕ್ಷಿಸುವವಳು. ಹೀಗೆ ಐದು ಪ್ರಧಾನಗುಣಗಳಿಂದ ಯಶೋವಂತನನ್ನಾಗಿ ತನ್ನ ಮಗುವನ್ನು ರಕ್ಷಿಸುವ ಈಕೆಗೆ ಈ ಕಾರಣದಿಂದಲೂ ‘ಮುತ್ತೈದೆ’ ಎಂದು ಹೆಸರು. ಇವಳು ನಮ್ಮ ಜೀವದುಸಿರು. ‘ಜೀವ ಜೀವಕ್ಕೆ ಕೆಸರಿಲ್ಲದ ಹಸಿರು’. ಹಾಗಾಗಿ ತಾಯಿಯೇ ನಮ್ಮ ಬದುಕಿಗೆ ಪ್ರತ್ಯಕ್ಷ ದೇವರು, ಪ್ರತ್ಯಕ್ಷ ಜೀವಬೇರು.ಕುಟುಂಬದಲ್ಲಿ ಈಕೆಗೇ ಮೊದಲಸ್ಥಾನ!!
ಸುಭಾಷಿತದ ಪ್ರಕಾರ ‘ಸತ್ಯಂ ಮಾತಾ ಪಿತಾ ಜ್ಞಾನಂ ಧರ್ಮೊ ಭ್ರಾತಾ ದಯಾ ಸಖಾಃ, ಶಾಂತಿ ಪತ್ನಿ ಕ್ಷಮಾ ಪುತ್ರಾಃ ಷಡೈತೇ ಮಮ ಬಾಂಧವಾಃ’ ಎನ್ನುವಲ್ಲಿ ಗಮನಿಸಿದರೆ ಸಂಸ್ಕೃತದ ಭಾಷೆಯ ಉಕ್ತಿಯಲ್ಲಿಯೂ ಭಕ್ತಿಸ್ಥಾನ ಅದಮ್ಯ ಶಕ್ತಿ ಸ್ಥಾನ, ಅಗ್ರಸ್ಥಾನ ತಾಯಿಗೇ ಮೀಸಲು! ಇವಳ ಗುಣಗಳನ್ನು ವರ್ಣಿಸಲು ಆದಿಶೇಷನಿಗೂ ಸಾಧ್ಯವಿಲ್ಲವೆಂಬುದೇ ಆ ಭಗವಂತನ ಕರುಳಿನ ತಿರುಳು.ತಾಯಿನಿತ್ಯ ಪ್ರಕಾಶಿಸುವ ಹರಳು. ಆಂಗ್ಲಭಾಷೆಯ ನಾಡಿನಲ್ಲೂ ‘ತಾಯಿ’ ಎಂಬ ಶಬ್ದಕ್ಕೆ ಮಿಡಿವುದು ಇದೇ ಕರುಳು!!!
 ’      .
 ’      . ’       . ’      . ’      . ’      .  ’       .
ಈ ಅರ್ಥಕ್ಕೆ ಅನುಗುಣವಾಗಿ ದಶಕಗಳ ಕಾಲ ಬಾಳಿ, ತನ್ನ ಮಕ್ಕಳನ್ನು ಸಾಕಿ-ಸಲಹುವ ತಾಯಿ ಸರ್ವ ಮಾನ್ಯಳು… ಹೊತ್ತಾರೆ ಎದ್ದಾಗ ರಾತ್ರಿ ಮಲಗುವ ಮುನ್ನ ನೆನೆ ಮೊದಲು ಬಾಳಿನಲಿ ಬೆಳಕತಂದವರ ಅವರಿತ್ತ ದೋಣಿಯಲಿ ಪಯಣ ನಿನ್ನದು ಇಂದುನಮಿಸು ತಲೆಬಾಗಿ ನೀ – ಮುದ್ದುರಾಮ.
ಜನುಮವಿತ್ತವರಾರೊ! ಅನ್ನವಿತ್ತವರಾರೊ!ಅರಿವ ನಿನಗುಣಬಡಿಸಿ ಸಾಕಿದವರಾರೋ!ನಿನ್ನ ಸುಖ ಸಂಚಯಕೆ ಬೆವರ ಸುರಿದವರಾರೊ!ನೀ ಋಣದ ಸರಮಾಲೆ – ಮುದ್ದುರಾಮ.