ಹದಿಮೂರು ವರ್ಷಗಳ ಹಿಂದಿನ ಆ ಹೀನ ಕೃತ್ಯ
ಶಶಾಂಕಣ
ಶಶಿಧರ ಹಾಲಾಡಿ
.@.
ಸರಿಯಾಗಿ ಹದಿಮೂರು ವರ್ಷಗಳ ಹಿಂದೆ, 26 ನವೆಂಬ್ 2008ರಂದು, ಮುಂಬಯಿಯಲ್ಲಿ ಹತ್ತು ಮಂದಿ ಭಯೋತ್ಪಾದಕರು ಮನಬಂದಂತೆ ಗುಂಡಿನದಾಳಿ ನಡೆಸಿ, 166 ಜನ ಅಮಾಯಕರನ್ನು ಕೊಂದರು. ಆ ಭಯಾನಕ ದಾಳಿಯ ಹಿಂದಿದ್ದ ಹಲವು ಸೂಕ್ಷ್ಮ ವಿವರಗಳು ಇನ್ನೂ ಹೊರಬೀಳುತ್ತಲೇ ಇವೆ!
ಇಂಥದೊಂದು ದುರ್ಭರ ಸನ್ನಿವೇಶಕ್ಕೆ ನೀವೂ ಸಾಕ್ಷಿಯಾಗಿದ್ದೀರೋ ಗೊತ್ತಿಲ್ಲ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ, ಟಿವಿ ಆನ್ ಮಾಡಿ, ಆ ಭಯೋತ್ಪಾದನೆಯ ಲೈವ್ ದೃಶ್ಯ ನೋಡುವುದು – ‘ದೇವರೇ ಈ ದಿನವಾದರೂ, ಆ ಎಲ್ಲಾ ಭಯೋತ್ಪಾದಕರನ್ನು ನಮ್ಮ ಕಮಾಂಡೋಗಳು ನಿರ್ನಾಮ ಮಾಡಲಿ, ಅಲ್ಲಿ ಸಿಕ್ಕಿಬಿದ್ದಿರುವಅಮಾಯಕರ ಜೀವ ಉಳಿಯಲಿ’ ಎಂದು ಹಾರೈಸುವುದು. ಆದರೆ, ಆ ಭಯೋತ್ಪಾದಕ ದಾಳಿ ಮೂರು ದಿನಗಳ ತನಕ ಮುಂದುವರಿದೇ ಇತ್ತು.
ನಾಲ್ಕನೆಯ ದಿನದ ಹೊತ್ತಿಗೆ ಎಲ್ಲಾ ಭಯೋತ್ಪಾದಕರನ್ನು ನಮ್ಮ ಎನ್‌ಎಸ್‌ಜಿ ಕಮಾಂಡೋಗಳು ಸಾಯಿಸಿ ದರು ಎಂಬ ಸುದ್ದಿ ಬಿತ್ತರವಾದಾಗ, ‘ಉಶ್’ ಎಂಬ ನಿಟ್ಟುಸಿರು. ಆಧುನಿಕ ಬಂದೂಕುಗಳನ್ನು ಹಿಡಿದು ಮನ ಬಂದಂತೆ ಅಸಹಾಯಕ ಜನರ ಮೇಲೆ ಗುಂಡುಹಾರಿಸುತ್ತಿದ್ದ ಆ ಭಯೋತ್ಪಾದಕರ ಪಡೆಯನ್ನು ಮಟ್ಟ ಹಾಕಲು ನಮ್ಮ ರಕ್ಷಣಾ ಸಿಬ್ಬಂದಿಗೆ ನಾಲ್ಕು ದಿನಗಳ ಕಾಲಾವಕಾಶ ಬೇಕಾಯಿತಲ್ಲ ಎಂಬ ಹತಾಶೆ; ಈ ಪ್ರಯತ್ನದಲ್ಲಿ ಹಿರಿಯ ಕಮಾಂಡೋಗಳು, ಪೊಲೀಸ್ ಅಽಕಾರಿಗಳೂ ಸೇರಿದಂತೆ ರಕ್ಷಣಾ ಪಡೆಯ ಹಲವು ಸದಸ್ಯರು ಜೀವ ಕಳೆದುಕೊಳ್ಳಬೇಕಾಯಿತಲ್ಲಾ ಎಂಬ ದುಃಖ.
ದುರಂತವೆಂದರೆ, ಮುಂಬಯಿಯ ಈ ಭೀಕರ ದಾಳಿಯನ್ನು ನಾವು ಲೈವ್ ನೋಡುತ್ತಿರುವಾಗಲೇ, ದೂರದ ಪಾಕಿಸ್ತಾನದಲ್ಲಿ ಕುಳಿತ ಸೂತ್ರದಾರರು ಸಹ ಅದನ್ನು ನೋಡುತ್ತಾ, ಯಾವ ರೀತಿಯ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಗಮನಿಸಿ, ಅದರ ವಿವರಗಳನ್ನು ಆ ಭಯೋತ್ಪಾದಕರಿಗೆ ಮೊಬೈಲ್ ಮೂಲಕ ತಿಳಿಸುತ್ತಾ, ಇನ್ನಷ್ಟು ಜೀವಹಾನಿಯನ್ನು ಮಾಡಿಸುವಲ್ಲಿ ಯಶಸ್ವಿಯಾದರು!
೨೮ ನವೆಂಬರ್ ೨೦೦೮. ನಮ್ಮ ದೇಶ ಎಂದಿಗೂ ಮರೆಯದ, ಮರೆಯಲಾಗದ ದುರ್ದಿನ. ವಾಣಿಜ್ಯ ರಾಜಧಾನಿ ಎನಿಸಿರುವ, ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಮುಂಬಯಿಯ ಮೇಲೆ ಅಂದು ಪಾಕಿಸ್ತಾನದಿಂದ ಬಂದ ಹತ್ತು ಜನ ಭಯೋತ್ಪಾದಕರು ದಾಳಿ ಮಾಡಿದರು. ಅವರ ಗುರಿ ಒಂದೇ – ಅತಿ ಹೆಚ್ಚು ಸಂಖ್ಯೆಯ ಜನಸಾಮಾನ್ಯರನ್ನು ಸಾಯಿಸುವುದು! ಎಕೆ 47 ನಂತಹ ಆಧುನಿಕ ಶಸಗಳನ್ನು ಹಿಡಿದು ಬಂದ ಆ ಹತ್ತು ಮಂದಿ, ಅಮಾಯಕ ಜನರ ಮೇಲೆಗುಂಡು ಹಾರಿಸುವುದು ಅದೆಂತಹ ಹೇಯ, ಹೇಸಿಗೆಯ, ಹೇಡಿತನದ ಕೃತ್ಯ ಅಲ್ಲವೆ? ಆದರೆ ಆ ಹತ್ತು ಪಾಕಿಸ್ತಾನಿ ಯುವಕರನ್ನು ಆ ಕೆಲಸಕ್ಕೆ ತಯಾರು ಮಾಡಿ ಕಳಿಸಿದ್ದ ಪಾಕಿಸ್ತಾನದ ಸೂತ್ರಧಾರರು, ಅದೊಂದು ಪವಿತ್ರ ಕೆಲಸ ಎಂದು ನಂಬಿಸಿ, ಸತ್ತರೆ ವೀರಸ್ವರ್ಗ ಎಂದು ಅವರನ್ನು ಬ್ರೈನ್‌ವಾಶ್ ಮಾಡಿದ್ದರು. ಅತಿ ಹೆಚ್ಚುಭಾರತೀಯ ನಾಗರಿಕರನ್ನು, ವಿದೇಶಿ ಪ್ರವಾಸಿಗರನ್ನು ಸಾಯಿಸುವ ‘ಆತ್ಮಹತ್ಯಾ ದಾಳಿ’ಯ ಹತ್ತು ಜನರ ತಂಡ ಅದಾಗಿತ್ತು.
ಅದಕ್ಕಾಗಿ ತಿಂಗಳುಗಟ್ಟಲೆ ತರಬೇತಿಯನ್ನೂ ಅವರು ಪಾಕಿಸ್ತಾನದಲ್ಲೇ ಪಡೆದಿದ್ದರು! ಆ ನಾಲ್ಕು ದಿನಗಳ ಅವಧಿಯಲ್ಲಿ ಭಯೋತ್ಪಾದಕರು ಒಟ್ಟು 166 ಜನರನ್ನು ಸಾಯಿಸಿದ್ದರು. 26 ನವೆಂಬರ್ 2008ರಂದು ರಾತ್ರಿ ದೋಣಿ ಯೊಂದರಲ್ಲಿ ಕುಳಿತು ಗೆಟ್‌ವೇ ಆಫ್ ಇಂಡಿಯಾದ ಬಳಿ ಭಾರತವನ್ನು ಪ್ರವೇಶಿಸಿದ ಆ ಹತ್ತು ಮಂದಿ, ಮೊದಲು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣವನ್ನು ಪ್ರವೇಶಿಸಿ, 9.30ರಿಂದ 10.45ರ ತನಕ ಮನಸೋ ಇಚ್ಚೆ ಗುಂಡು ಹಾರಿಸಿದರು. ರೈಲ್ವೆ ನಿಲ್ದಾಣ ದಲ್ಲಿದ್ದ 58 ಪ್ರಯಾಣಿಕರನ್ನು ಆ ಒಂದು ಗಂಟೆಯ ಅವಽಯಲ್ಲಿ ಸಾಯಿಸಿದರು ಎಂದರೆ, ಆ ಕೃತ್ಯದ ಹೀನತನವನ್ನು, ಹೇಡಿತನವನ್ನು ಊಹಿಸಿ! ಆದರೆ, ಪಾಕಿಸ್ತಾನ ದಲ್ಲಿ ಕುಳಿತು ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದ ಈ ಕೃತ್ಯದ ಸೂತ್ರದರರು, ಅವರ ಹೆಜ್ಜೆ ಹೆಜ್ಜೆಯನ್ನೂ ನಿರ್ದೇಶಿಸುತ್ತಾ, ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಶಾಂತದನಿಯಲ್ಲಿ ಹೇಳುತ್ತಿದ್ದರು!
26 ನವೆಂಬರ್ 2008ರಂದು ಮುಂಬಯಿಯಲ್ಲಿ ನಡೆದ ಈ ಭಯೋತ್ಪಾದನಾ ದಾಳಿಯ ಕುರಿತು ಸಾಕಷ್ಟು ಚರ್ಚೆಗಳಾಗಿವೆ, ವಿಶ್ಲೇಷಣೆಗಳಾಗಿವೆ. ಆಗಿನ ಕೇಂದ್ರ ಸರಕಾರವು ಈ ಕೃತ್ಯದ ಕುರಿತು ಪಾಕಿಸ್ತಾನಕ್ಕೆ ಸೂಕ್ತ ಎಚ್ಚರಿಕೆ, ಉತ್ತರವನ್ನು ಏಕೆ ನೀಡಲಿಲ್ಲ ಎಂಬುದರ ಕುರಿತು ಸಹ ಪ್ರಶ್ನೆಗಳಾಗಿವೆ. ಆ ಮುಂದಿನ ವರ್ಷ, 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪುನರಾಯ್ಕೆಗೊಂಡ ಅದೇ ಸರಕಾರ ಮತ್ತು ಅದೇ ಪ್ರಧಾನ ಮಂತ್ರಿಯವರು, ಪಾಕಿಸ್ತಾನದ ಕುರಿತು ತಮ್ಮ ಮೃದು ಧೋರಣೆಯನ್ನು ಏಕೆ ಮುಂದುವರಿಸಿದರು ಎಂಬುದರ ಕುರಿತೂ ಸಾಕಷ್ಟು ಚರ್ಚೆಗಳಗಿವೆ. ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಮತ್ತುಹಾಲಿ ಲೋಕಸಭಾ ಸದಸ್ಯ ಮನೀಶ್ತಿವಾರಿಯವರು ಸಹ, ಆ ದಾಳಿಯನ್ನು ಕೇಂದ್ರಸರಕಾರ ಮತ್ತು ಮನಮೋಹನ ಸಿಂಗ್ ಸಂಪುಟವುಮೃದು ಧೋರಣೆಯಲ್ಲೇ ಸ್ವೀಕರಿಸಿತು ಮತ್ತುಕಠಿಣ ಉತ್ತರ ನೀಡುವ ಅವಕಾಶ ಇದ್ದರೂನೀಡಲಿಲ್ಲ ಎಂಬರ್ಥದ ಮಾತುಗಳನ್ನು ತಮ್ಮ ಹೊಸ ಪುಸ್ತಕದಲ್ಲಿ ಹೇಳಿದ್ದು, ಅದು ಈ ವಾರ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮುಂಬಯಿಯ ಈ ಭಯೋತ್ಪಾದಕ ದಾಳಿಯು ಒಂದು ಬೃಹತ್ ಮಟ್ಟದ ಭದ್ರತಾ ವೈಫಲ್ಯ ಎಂದು ಋಜುವಾತಾಗಿದ್ದರೂ, ಪ್ರಧಾನಿ ಮನಮೋಹನ ಸಿಂಗ್ ಅವರು ಎರಡನೆಯ ಬಾರಿ ಅದೇ ಹುದ್ದೆಗೆ ಆಯ್ಕೆಯಾಗಲು ಅದು ಅಡ್ಡಿಯಾಗಲಿಲ್ಲವೇಕೆ ಎಂಬ ಪ್ರಶ್ನೆಯೂ ಸಾಕಷ್ಟು ಚಿಂತನೆಗಳನ್ನು ಹುಟ್ಟುಹಾಕಿದೆ.166ಜನ ಭಾರತೀಯರು ಮೃತಪಟ್ಟ ಈ ಭೀಕರ ದಾಳಿಯ ಅಂಕಿಅಂಶಗಳ ವಿವರಗಳು ಈಗಾಗಲೇ ಹಳೆಯ ವಿಚಾರ ಎನಿಸಿರುವುದರಿಂದ, ಅದನ್ನು ಚರ್ಚಿಸದೇ, ಆ ಹೀನದಾಳಿಯ ಹಿಂದಿನ ಕೆಲವು ಸೂಕ್ಷ್ಮ ಆಯಾಮಗಳನ್ನು ಮಾತ್ರ ಗಮನಿಸೋಣ.
26 ನವೆಂಬರ್ 2008ರ ದಾಳಿ ನಡೆದು, ಈಗಾಗಲೇ 13 ವರ್ಷ ಕಳೆದಿವೆ. ಈ ನಡುವೆ ಹಲವು ಹೊಸ ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಕೆಲವು ವಿಚಾರಗಳನ್ನು ‘ಹಶ್‌ಅಪ್’ ಮಾಡಲಾಗಿದೆ; ಒಳಸಂಚಿನ ಸ್ವರೂಪದ ಕೆಲವು ಸೂಕ್ಷ್ಮ ವಿಚಾರಗಳು ಹೆಚ್ಚಿನ ವಿಶ್ಲೇಷಣೆಗೆ ಒಳಪಡದಂತೆ ನೋಡಿಕೊಳ್ಳಲಾಗಿದೆ ಎಂಬ ಅನುಮಾನವೂ ಮೇಲ್ನೋಟಕ್ಕೆ ಹುಟ್ಟುತ್ತಿದೆ. ಅಂತಹ ಸೂಕ್ಷ್ಮ ವಿಚಾರಗಳಲ್ಲಿ ಒಂದೆಂದರೆ ಮುಂಬಯಿಯ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯವರಹತ್ಯೆ. ಮುಂಬಯಿಯ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆಯವರು, ಭಯೋತ್ಪಾದನಾ ದಾಳಿಯ ನಡೆದ ತಕ್ಷಣ, ಅತ್ತ  ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದಲ್ಲಿ ನಡೆದ ೫೮ ಜನರ ಮಾರಣಹೋಮದ ಸಂಪೂರ್ಣ ವಿವರಗಳು ಹೊರಬೀಳುವ ಮುಂಚೆಯೇ, ದಾಳಿಯ ಸ್ವರೂಪವನ್ನು ಪರಿಶೀಲಿಸಲು ತಾವೇ ಸ್ವತಃ ಜೀಪ್ ಹತ್ತಿ, ಘಟನೆ ನಡೆದ ಸ್ಥಳದತ್ತ ಧಾವಿಸಿದರು.
ಕ್ರೈಮ್ ಬ್ರಾಂಚ್ ಆಫೀಸ್‌ನ ಪಕ್ಕದ ಕ್ಸೇವಿಯರ್ ರಸ್ತೆಯಲ್ಲಿ ಅವರ ಜೀಪಿನ ಮೇಲೆ ಇಸ್ಮಾಯಿಲ್ ಖಾನ್ ಎಂಬಾತ ಗುಂಡಿನ ಮಳೆಗೆರೆದಾಗ, ಹೇಮಂತ್ ಕರ್ಕರೆ ಸಾಯುತ್ತಾರೆ. ಜತೆಯಲ್ಲೇ ವಿಜಯ್ ಸಲಾಸ್ಕರ್, ಅಶೋಕ್ ಕಾಮ್ತೆ ಮೊದಲಾದ ಹಿರಿಯ ಪೊಲೀಸ್ ಅಧಿಕಾರಿಗಳೂ ಭಯೋತ್ಪಾದಕನ ಗುಂಡಿಗೆ ಬಲಿಯಾಗು ತ್ತಾರೆ. ಹೇಮಂತ್ ಕರ್ಕರೆ ಅದಾಗಲೇ ಖ್ಯಾತ ಪೊಲೀಸ್ ಅಧಿಕಾರಿಯಾಗಿದ್ದರು. ಮುಖ್ಯವಾಗಿ ೨೦೦೬ರ ಮಾಲೆಗಾಂವ್ಸೋಟದ ತನಿಖೆ ನಡೆಸಿ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಕೆಲವರನ್ನು ಬಂಧಿಸಿದ್ದರು. ಆರೋಪಿಗಳ ಸ್ಥಾನದಲ್ಲಿದ್ದವರಲ್ಲಿ ಹೆಚ್ಚಿನವರು ಅಭಿನವ್ ಭಾರತ್ ಮೊದಲಾದ ಬಲಪಂಥೀಯ ಸಂಘಟನೆಗಳೊಡನೆ ಸಂಪರ್ಕ ಹೊಂದಿದ್ದವರು.
ಆದರೆ ಕಠಿಣ ವಿಚಾರಣೆಗೆ ಗುರಿಪಡಿಸಿದ ನಂತರ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಮೇಲೆ ಆರೋಪ ಸಾಬೀತಾಗದೇ ಬಿಡುಗಡೆಯಾಯಿತು. ಇವರನ್ನು ಅನವಶ್ಯಕವಾಗಿ ಬಂಧಿಸಿ, ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಬಿಜೆಪಿ, ಶಿವಸೇನೆ ಮೊದಲಾದ ಪಕ್ಷದ ರಾಜಕಾರಣಿಗಳು ಕರ್ಕರೆಯವರ ಮೇಲೆಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ, ಹೇಮಂತ್ ಕರ್ಕರೆಯವರು ಆ ರಾತ್ರಿ ಮುಂಬಯಿಯಲ್ಲಿ ಹತ್ಯೆಯಾದಾಗ, ಬಲಪಂಥೀಯ ಸಂಘಟನೆಗಳೇ ಕರ್ಕರೆಯವರ ಸಾವಿಗೆ ಕಾರಣ ಎಂದು ಕೆಲವು ರಾಜಕೀಯ ನಾಯಕರು ಅಪಪ್ರಚಾರ ಮಾಡಿದರು!
ಆ ರಾತ್ರಿ ಮತ್ತು ನಂತರ ಮೂರು ದಿನಗಳ ಕಾಲ ಪಾಕಿಸ್ತಾನದ ಭಯೋತ್ಪಾದಕರು ಮುಂಬಯಿಯ ಹಲವು ಪ್ರದೇಶಗಳಲ್ಲಿ ಗುಂಡಿನ ಮಳೆಗೆರೆದು 166 ಜನರನ್ನು ಸಾಯಿಸಿದ್ದಾರೆ ಎಂದು ತನಿಖೆಯಲ್ಲಿ ಬಯಲಾದ ನಂತರೂ, ಹೇಮಂತ್ ಕರ್ಕರೆಯವರನ್ನು ಹಿಂದೂ ಸಂಘಟನೆಗಳೇ ಸಾಯಿಸಿದ್ದು ಎಂದು ತಗಾದೆ ಮಾಡು ವವರು ಈಗಲೂ ಇದ್ದಾರೆ. ಆ ಕುರಿತು ಈಚೆಗೆ ನ್ಯಾಯಾಲಯದಲ್ಲಿ ಅರ್ಜಿ ಯನ್ನೂ ಸಲ್ಲಿಸಲಾಗಿತ್ತು. ಆದರೆ ಇದನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ ಎಂಬುದು ಬೇರೆ ಮಾತು.
ಆದರೆ, ಹೇಮಂತ್ ಕರ್ಕರೆಯವರು ಆ ರಾತ್ರಿ ಗುಂಡಿಗೆ ಬಲಿಯಾದ ರೀತಿ, ಅವರು ಗುಂಡು ನಿರೋಧಕ ಕವಚ ಧರಿಸಿದ್ದರೂ, ಅದು ಕಳಪೆ ಗುಣಮಟ್ಟದ್ದು ಎಂಬ ಆರೋಪ, ಅವರ ಮೇಲೆ ಪಾಕಿಸ್ತಾನದ ಇಸ್ಮಾಯಿಲ್ ಖಾನ್ ಎಂಬ ಭಯೋತ್ಪಾದಕ ಗುಂಡು ಹಾರಿಸಿದ ಪರಿ, ಆ ಹತ್ಯೆ ನಡೆದು ಹಲವು ವರ್ಷಗಳ ನಂತರವೂ ಆ ಸಾವಿಗೆ ಹಿಂದೂ ಸಂಘಟನೆ ಕಾರಣ ಎಂದು ಕೆಲವು ರಾಜಕೀಯ ಪ್ರೇರಿತ ವ್ಯಕ್ತಿಗಳ ವಿತಂಡವಾದ – ಇವೆಲ್ಲವೂ ಬಹು ಆಯಾಮದ ವಿಚಾರಗಳು ಮತ್ತು ಸೂಕ್ಷ್ಮಎನಿಸುವ ವಿದ್ಯಮಾನಗಳು.
ಹೇಮಂತ್ ಕರ್ಕರೆಯವರ ಆ ದಾರುಣ ಸಾವು ಮತ್ತೊಂದು ಹೊಸ ಆಯಾಮ ಪಡೆದದ್ದು 12 ವರ್ಷಗಳ ನಂತರ, 2020ರಲ್ಲಿ. ಮುಂಬಯಿಯ ಮಾಜಿ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ಎಂಬುವವರು 2020ರಲ್ಲಿ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ‘ಲೆಟ್ ಮೆ ಸೇ ಇಟ್ ನೌ’ (‘ನಾನು ಈಗಲಾದರೂ ಹೇಳುತ್ತೇನೆ’) ಎಂಬ ಹೆಸರಿನ ಆ ಪುಸ್ತಕದಲ್ಲಿ, 2008ರ ಮುಂಬಯಿ ದಾಳಿಯ ಕೆಲವು ಸೂಕ್ಷ್ಮಗಳನ್ನು, ರಹಸ್ಯಗಳನ್ನು ಬಯಲು ಮಾಡಿದ್ದೇ, ಕರ್ಕರೆಯವರ ಸಾವಿನ ವಿದ್ಯಮಾನವನ್ನು ಬೇರೊಂದು ಮಜಲಿಗೆ ಕೊಂಡೊಯ್ದಿತು. ಆ ಪುಸ್ತಕದಲ್ಲಿ ರಾಕೇಶ್ ಮಾರಿಯಾರವರು ಈ ರೀತಿ ಅರ್ಥಬರುವಂತೆ ಬರೆದಿದ್ದಾರೆ – 26.11.2008ರಂದು ಮುಂಬಯಿಯ ಪೊಲೀಸ್ ತುಕಾರಾಮ್ ಒಂಬೊಲೆ ಯವರು ತನ್ನ ಜೀವವನ್ನು ಪಣಕ್ಕಿಟ್ಟು, ಕಸಬ್ ನನ್ನು ಜೀವಂತವಾಗಿ ಹಿಡಿಯದೇ ಇದ್ದಿದ್ದರೆ, ಅಕಸ್ಮಾತ್ ಕಸಬ್‌ನು ಪೊಲೀಸರ ಗುಂಡಿಗೆ ಬಲಿಯಾಗಿದ್ದರೆ, ನಂತರದ ದಿನಗಳಲ್ಲಿ ಆತನನ್ನು ಒಬ್ಬ ಹಿಂದೂ ಭಯೋತ್ಪಾದಕನನ್ನಾಗಿ ಗುರುತಿಸುವ ಸಾಧ್ಯತೆ ದಟ್ಟವಾಗಿತ್ತು – ಏಕೆಂದರೆ ಆತನ ಬಳಿಯಿದ್ದ ಗುರುತಿನ ಪತ್ರಗಳಲ್ಲಿ ಆತನ ಹೆಸರು ‘ಸಮೀರ್ ಚೌಧುರಿ, ಹೈದರಾಬಾದ್’ ಎಂದು ಬರೆದಿತ್ತು ಮತ್ತು ಆತನ ಖಾಯಂ ವಾಸಸ್ಥಳದ ವಿಳಾಸವು ಟೀಚರ್ಸ್ ಕಾಲೊನಿ, ನಾಗರಭಾವಿ, ಬೆಂಗಳೂರು ಎಂದಿತ್ತು. ಆತ ಆತ್ಮಾಹುತಿ ಮಾಡಿಕೊಂಡಿದ್ದರೆ, ಈ ನಕಲಿ ಗುರುತುಪತ್ರಗಳೇ ಹೊರಬಿದ್ದು, ಆ ಭಯೋತ್ಪಾದಕನು ಭಾರತೀಯ ಮತ್ತು ಒಬ್ಬ ಹಿಂದೂ ಎಂದೇ ದಾಖಲಾಗುವ ಸಂಭವವಿತ್ತು.
ಈ ಸ್ಫೋಟಕ ವಿಚಾರವನ್ನು ನಿವೃತ್ತ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾರವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ! ಜತೆಗೆ, ಕಸಬ್‌ನು ತನ್ನ ಮಣಿಗಂಟಿನ ಸುತ್ತಲೂ ಸಮಾನ್ಯವಾಗಿ ಹಿಂದೂ ಜನರು ಧರಿಸುವಂತೆ, ಹಳದಿ ಬಣ್ಣದ ದಾರವನ್ನು ಕಟ್ಟಿಕೊಂಡಿದ್ದು, ಅದು ಎಲ್ಲಾ ಪೊಟೋಗಳಲ್ಲೂ ಸ್ಪಷ್ಟವಾಗಿ ದಾಖಲಾಗಿದೆ!  ಅಂದರೆ, 166 ಜನರನ್ನು ಸಾಯಿಸಿದ ಆ ‘ಆತ್ಮಹತ್ಯಾ ಭಯೋತ್ಪಾದಕ ದಾಳಿ’ಯನ್ನು ನಡೆಸಿದವರು ಭಾರತದವರು, ಹಿಂದೂ ಹೆಸರಿನವರು ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತೇ ಎಂಬ ವಿಚಾರ ನಿಜಕ್ಕೂ ಕಳವಳಕಾರಿ.
ಇತ್ತ ಹೇಮಂತ್ ಕರ್ಕರೆಯವರನ್ನು ಸಾಯಿಸಿದ್ದು ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಹೇಳುತ್ತಿದ್ದ ಕೆಲವು ರಾಜಕೀಯ ನಾಯಕರ ಅಪಪ್ರಚಾರಕ್ಕೂ, ಇತ್ತ ಕಸಬ್‌ನ ಬಳಿ ಇತ್ತೆಂದು ಆ ನಿವೃತ್ತ ಪೊಲೀಸ್ ಅಧಿಕಾರಿ ಹೇಳಿದ ಗುರುತುಪತ್ರದ ವಿವರಗಳಿಗೂ ತಾಳೆ ಮಾಡಿ ನೋಡಿದರೆ, ಈ ಭಯೋತ್ಪಾದಕ ದಾಳಿಯಬೇರೊಂದು ಆಯಾಮವನ್ನು ಪಡೆಯುತ್ತದೆ ಅಲ್ಲವೆ! ಜತೆಗೆ, ಆ ದಾಳಿ ನಡೆದ ನಂತರ ಉನ್ನತ ಸ್ಥಾನದಲ್ಲಿದ್ದ ನಮ್ಮ ದೇಶದ ನಾಯಕರು ಖಡಕ್ ಎಚ್ಚರಿಕೆ ಮತ್ತು ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಮೆದು ಮಾತಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಎನ್ ಎಸ್‌ಜಿ ಪಡೆಯು ದೆಹಲಿಯಿಂದ ಮುಂಬಯಿ ತಲುಪಿ, ಕಾರ್ಯಾಚರಣೆ ನಡೆಸುವ ಹಲವು ಹಂತದಲ್ಲಿ ಘಟಿಸಿದ ಅನಿವಾರ್ಯ ವಿಳಂಬಗಳು, ಆ ದಾಳಿಗೆ ಪರೋಕ್ಷ ಬೆಂಬಲ ನೀಡಿದ್ದರು ಎನ್ನಲಾದ ಕೆಲವು ಸ್ಥಳೀಯ ವ್ಯಕ್ತಿಗಳ ಮಾಹಿತಿ ಹೆಚ್ಚು ಪ್ರಚಾರಕ್ಕೆ ಬರದೇ ಇರುವುದು, ದಾಳಿಯ ಸಮಯದಲ್ಲಿ ಸಿಸಿಟಿವಿ ಚಿತ್ರಿಸಿದ ಚಿತ್ರಗಳಲ್ಲಿ, ಕಸಬ್ ಕೈಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದ ಹಳದಿ ಬಣ್ಣದ ದಾರ ಇವೆಲ್ಲವೂ ಒಂದು ‘ಜಿಗ್‌ಸಾ ಪಜಲ್’ ರೀತಿ ಕೆಲವರಿಗೆ ಗೋಚರಗೊಂಡರೂ ಅಚ್ಚರಿಯಿಲ್ಲ.