ಚಪ್ಪಲಿಯ ಮೌಲ್ಯವೆಷ್ಟು?
ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಹದಿಮೂರನೆಯ ಶತಮಾನದಲ್ಲಿ ದೆಹಲಿಯ ಹೊರವಲಯದಲ್ಲಿ ನಿಜಾಮುದ್ದೀನ್ ಎಂಬ ಸಾಧಕರಿದ್ದರು. ತನ್ನ ಬಳಿ ಬಂದ ಎಲ್ಲಾ ಭಕ್ತರನ್ನೂ ಅವರು ಸಮಾನತೆ ಯಿಂದ ಕಾಣುತ್ತಿದ್ದರು. ಭೇಟಯಾಗಲು ಬಂದ ಭಕ್ತರು ತಮ್ಮ ಕೈಲಾದ ಕಾಣಿಕೆಯನ್ನು ನೀಡುತ್ತಿದ್ದರು. ತನ್ನ ಬಳಿಗೆ ಬಂದವರು ಏನನ್ನಾದರೂ ಕೇಳಿದರೆ, ನಿಜಾಮುದ್ದೀನ್ ಇಲ್ಲ ಎನ್ನುತ್ತಿರಲಿಲ್ಲ.
ಒಂದು ದಿನ ಒಬ್ಬ ಬಡ ವ್ಯಕ್ತಿಯು ನಿಜಾಮುದ್ದೀನ್ ಅವರ ಬಳಿ ಬಂದ. ಆತ ಮಗಳ ಮದುವೆಯನ್ನು ಮಾಡ ಬೇಕಿತ್ತು. ಆದ್ದರಿಂದ ತನಗೆ ಏನಾದರೂ ಸಹಾಯ ಮಾಡಿ ಎಂದು ಕೇಳಿಕೊಂಡ. ‘ಮಗೂ, ನೀನು ನನ್ನ ಜತೆ ಮೂರು ದಿನ ಇಲ್ಲೇ ಇರು. ಈ ಮೂರು ದಿನಗಳಲ್ಲಿ ಭಕ್ತರು ನೀಡಿದ ಕಾಣಿಕೆಗಳೆಲ್ಲವನ್ನೂ ನಿನಗೆಕೊಡುತ್ತೇನೆ’ ಎಂದರು ನಿಜಾಮುದ್ದೀನ್. ಆ ಬಡವನಿಗೆ ಖುಷಿ ಎನಿಸಿತು. ಅಲ್ಲಿಗೆ ಬರುವ ಶ್ರೀಮಂತ ಭಕ್ತರು ನೀಡುವ ಕಾಣಿಕೆಯಿಂದ, ತನ್ನ ಮಗಳ ಮದುವೆ ಯನ್ನು ಮಾಡಲು ಸಾಧ್ಯ ಎಂದು ನೆಮ್ಮದಿಯಿಂದ ಮೂರು ದಿನ ಅವರ ಕುಟೀರದಲ್ಲಿ ತಂಗಿದ.
ಆದರೆ, ಆ ಮೂರು ದಿನಗಳಲ್ಲಿ ಕೆಲವು ಭಕ್ತರು ಬಂದರೂ, ಅವರು ಸಹ ಈತನಂತೆಯೇ ಬಡವರಾಗಿದ್ದರು. ಮೂರನೆಯ ದಿನ ಸಂಜೆಯ ಹೊತ್ತಿಗೆ ಆ ಬಡವನು ಇನ್ನಷ್ಟು ಬೇಸರಗೊಂಡ. ಏಕೆಂದರೆ, ಕಾಣಿಕೆಯ ಸ್ವರೂಪದಲ್ಲಿ ಏನೂ ಸಿಕ್ಕಿರಲಿಲ್ಲ. ನಿಜಾಮುದ್ದೀನರಿಗೂ ಬೇಸರ ಎನಿಸಿತು. ಆದರೆ, ಆ ಬಡವನಿಗೆ ನೀಡಲು ಅವರ ಬಳಿ ಹಣ ಇರಲಿಲ್ಲ. ಆದ್ದರಿಂದ, ಮೂರನೆಯ ದಿನ ಸಂಜೆ ಆ ಬಡವನನ್ನು ಕರೆದು, ‘ಮಗೂ, ಈ ಮೂರು ದಿನಗಳಲ್ಲಿ ಕಾಣಿಕೆಯೇ ಸಂಗ್ರಹವಾಗಿಲ್ಲ. ನನ್ನ ಬಳಿ ಸಹ ಕೊಡಲು ಹಣ ಇಲ್ಲ. ಸದ್ಯ ನನ್ನ ಬಳಿ ಇರುವುದು ಈ ಚಪ್ಪಲಿಗಳು ಮಾತ್ರ. ಇದನ್ನು ತೆಗೆದುಕೋ, ನಿನಗೆ ಒಳ್ಳೆಯದಾಗಲಿ’ ಎಂದು ತಾನು ಧರಿಸಿದ್ದ ಚಪ್ಪಲಿಗಳನ್ನು ಆ ಬಡವನಿಗೆ ನೀಡಿದರು. ಬಡವನಿಗೆ ಬೇಸರ ಎನಿಸಿದರೂ, ಅವರಿತ್ತ ಆ ಚಪ್ಪಲಿಗಳನ್ನು ಕಾಲಿಗೆ ಹಾಕಿಕೊಂಡು, ಅವರಿಗೆ ಧನ್ಯವಾದ ಸಲ್ಲಿಸಿ, ತನ್ನ ಹಳ್ಳಿಯತ್ತ ವಾಪಸು ಹೊರಟ.
ಅವನು ಜಾಸ್ತಿ ದೂರ ಸಾಗಿರಲಿಲ್ಲ, ಅಷ್ಟರಲ್ಲಿ ಅವನಿಗೆದುರಾಗಿ ಒಂಟೆಗಳ ಸಾಲು ಬರುವುದು ಕಾಣಿಸಿತು. ಒಂಟೆಗಳ ಡುಬ್ಬದ ಮೇಲೆ ಸಾಕಷ್ಟು ಹಣವನ್ನು ಸಹ ಹೇರಲಾಗಿತ್ತು. ಆಗಿನ ದಿನಗಳಲ್ಲಿ ದೆಹಲಿಯಲ್ಲಿದ್ದ ಕವಿ ಅಮೀರ್ ಖುಸ್ರೋನು ಕಾಬೂಲಿನಿಂದ ಒಂಟೆಗಳೊಂದಿಗೆ ಬರುತ್ತಿದ್ದ. ಅಮೀರ್ ಖುಸ್ರೋ ಸಹ ನಿಜಾಮುದ್ದೀನ್ ಅವರ ಶಿಷ್ಯನಾಗಿದ್ದ. ಆ ಬಡವನ ಬಳಿ ಬರುತ್ತಿದ್ದಂತೆಯೇ, ನಿಜಾಮುದ್ದೀನ್ ಅವರ ಸುಗಂಧವು ಅತನನ್ನು ತಟ್ಟಿತು. ಬಡವನ ಬಳಿಯಿಂದಲೇ ಆ ಸುಗಂಧ ಬರುವುದನ್ನು ಕಂಡ ಅಮೀರ್ ಖುಸ್ರೋನು, ಒಂಟೆಯಿಂದ ಕೆಳಗಿಳಿದು, ಬಡವನ್ನು ಕೇಳಿದ ‘ಅಯ್ಯಾ, ನೀನು ಎಲ್ಲಿಂದ ಬರುತ್ತಿದ್ದೀಯಾ?’ ಬೇಸರದಿಂದ ಕುಗ್ಗಿದ್ದ ಬಡವನು ತನ್ನ ಕಥೆಯನ್ನು ಹೇಳಿದ.
ಮೂರು ದಿನ ನಿಜಾಮುದ್ದೀನ್ ಅವರ ಬಳಿ ಇದ್ದದ್ದು, ಕಾಣಿಕೆ ದೊರೆಯದೇ ಇದ್ದುದು ಮತ್ತು ಕೊನೆಗೆ ಚಪ್ಪಲಿಯನ್ನು ಅವರು ನೀಡಿದ್ದು ಎಲ್ಲವನ್ನೂ ಹೇಳಿದ.ಅದನ್ನು ಕೇಳಿದ ಖುಸ್ರೋ, ‘ಸರಿ, ಅದೆಲ್ಲಾ ಇರಲಿ. ಈ ಚಪ್ಪಲಿಯನ್ನು ನೀನು ನನಗೆ ಕೊಡುವೆಯಾ?’ ಎಂದು ಕೇಳಿದ. ‘ನಾನೂ ಮುಂದಿನ ಹಳ್ಳಿಯಲ್ಲಿ ಈ ಚಪ್ಪಲಿಯನ್ನು ಮಾರಿ, ರಾತ್ರಿಯ ಊಟವನ್ನು ಪಡೆಯಬೇಕೆಂದಿದ್ದೆ. ಈಗ ನೀನು ಕೇಳಿದ್ದು ಒಳ್ಳೆಯದಾಯಿತು’ ಎಂದು ಬಡವ.
‘ಸರಿ ಹಾಗಾದರೆ, ಇದಕ್ಕೆ ಪ್ರತಿಯಾಗಿ ನಿನಗೇನು ಬೇಕು?’ ‘ನನ್ನ ಮಗಳ ಮದುವೆಗೆ ಹಣ ಬೇಕು’ ಎಂದ ಬಡವ. ‘ನೀನು ನನಗೆ ಚಪ್ಪಲಿ ಕೊಡು, ನಾನು ಈ ಒಂಟೆಗಳ ಮೇಲಿರುವ ಚಿನ್ನವನ್ನು, ಹಣವನ್ನು ನಿನಗೇ ಕೊಡುವೆ.’ ಎಂದು ಅಮೀರ್ ಖುಸ್ರೋ ಹೇಳಿದಾಗ, ಆ ಬಡವನಿಗೆ ಬಹಳ ಖುಷಿ ಆಯಿತು. ಆ ಚಪ್ಪಲಿಗಳನ್ನು ಖುಸ್ರೋಗೆ ನೀಡಿ, ಸಂಪತ್ತನ್ನು ತನ್ನ ಹಳ್ಳಿಗೆ ಕೊಂಡೊಯ್ದ. ಅಮೀರ್ ಖುಸ್ರೋನು ಚಪ್ಪಲಿಗಳೊಂದಿಗೆ ನಿಜಾಮುದ್ದೀನ್ ಬಳಿ ಬಂದು, ‘ಗುರುಗಳೇ, ನಿಮ್ಮ ಚಪ್ಪಲಿಗಳು ನಿಮಗೇ ಇರಲಿ’ ಎಂದು ನಮಸ್ಕರಿಸಿದ.
‘ಮಗೂ, ಈ ಚಪ್ಪಲಿಗಾಗಿ ನೀನೆಷ್ಟು ಖರ್ಚು ಮಾಡಿದೆ?’ ‘ನನ್ನ ಎಲ್ಲಾ ಸಂಪತ್ತನ್ನು ನೀಡಿ, ಈ ಚಪ್ಪಲಿಯನ್ನು ಖರೀದಿಸಿದೆ. ಆ ಬಡವ ಮಗಳ ಮದುವೆ ಮಾಡಲಿ. ಗುರುವಿನ ಕರುಣೆಯ ಎದುರು ಯಾವ ಸಂಪತ್ತು ಸಹ ಸಾಟಿಯಲ್ಲ’ಎಂದ ಖುಸ್ರೋ, ತನ್ನ ಗುರುಗಳಿಗೆ ಮತ್ತೊಮ್ಮೆ ನಮಸ್ಕರಿಸಿದ. ನಿಜಾಮುದ್ದೀನರುನಸು ನಕ್ಕು, ಎಲ್ಲಾ ಅವನ ಕೃಪೆ ಎಂದು ಆಗಸದತ್ತ ಕೈ ತೋರಿದರು.