ಶಿಷ್ಯನನ್ನು ರಕ್ಷಿಸಿದ ಗುರು
ವೇದಾಂತಿ ಹೇಳಿದ ಕಥೆ
ಶಶಾಂಕ್ ಮುದೂರಿ
ಸಿಖ್ಖರ ಎಂಟನೆಯ ಗುರುವಾಗಿದ್ದ ಹರಕಿಶನ್ ಅವರು ದೇಹಾಂತ್ಯವಾಗುವ ಸಮಯದಲ್ಲಿ, ಶಿಷ್ಯರು ಸುತ್ತಲೂ ನೆರೆದರು. ತಮ್ಮನ್ನು ಅಗಲುತ್ತಿರುವ ಗುರುವನ್ನು ಕಂಡು, ಕೇಳಿದರು ‘ಗುರುಗಳೇ, ನಿಮ್ಮ ನಂತರ ನಮಗೆ ಮಾರ್ಗದರ್ಶನ ನೀಡುವವರು ಯಾರು?’ ‘ನನ್ನ ನಂತರ ನಿಮಗೆ ಮಾರ್ಗದರ್ಶನ ನೀಡುವವನು ಬಾಬಾಬಕಾಲ ಗ್ರಾಮದಲ್ಲಿದ್ದಾನೆ.’ ಎಂದರು ಗುರುಗಳು.
ಗುರುಗಳ ದೇಹಾಂತ್ಯವಾಯಿತು. ಅಮೃತಸರದ ಸಮೀಪದಲ್ಲಿದ್ದ ಬಾಬಾ ಬಕಾಲ ಗ್ರಾಮದಲ್ಲಿ ಅವರ ಉತ್ತರಾಧಿಕಾರಿಗಾಗಿ ಹುಡುಕಾಟ ಆರಂಭವಾಯಿತು. ಆದರೆ, ಗುರುವಿನ ಸ್ಥಾನ ತುಂಬಬಲ್ಲ ಯಾವ ವ್ಯಕ್ತಿಯೂ ಅಲ್ಲಿ ಕಾಣಿಸಲಿಲ್ಲ. ಹಲವು ದಿನಗಳ ಹುಡುಕಾಟದ ನಂತರ ಶಿಷ್ಯರು ನಿರಾಸೆಗೊಂಡರು. ಈ ಪರಿಸ್ಥಿತಿಯ ಲಾಭ ಪಡೆಯಲು ಕೆಲವರು ಪ್ರಯತ್ನಿಸಿದರು. ಮುಂದಿನ ಗುರು ಯಾರು ಎಂಬುದೇ ದೊಡ್ಡ ಪ್ರಶ್ನೆ. ಆ ಗ್ರಾಮದ ಇಪ್ಪತ್ತೆರಡು ಭಕ್ತರು ತಾನೇ ಮುಂದಿನ ಗುರು ಎಂದು ಹೇಳಿಕೊಂಡು, ತಿರುಗಾಡತೊಡಗಿದರು.
ಇದೇ ಸಮಯದಲ್ಲಿ, ಮಖನ್ ಶಾ ಎಂಬ ಶಿಷ್ಯನೊಬ್ಬನು ಪರ್ಷಿಯಾ ದೇಶಕ್ಕೆ ವ್ಯಾಪಾರಕ್ಕೆ ಹೋಗಿದ್ದ. ಅಲ್ಲಿ ವ್ಯಾಪಾರ ಮುಗಿಸಿಕೊಂಡು, ಅಪಾರ ಲಾಭ ಗಳಿಸಿ, ಹಡಗು ಹತ್ತಿ ಸಮುದ್ರದಲ್ಲಿ ಮುಂಬಯಿಯತ್ತ ಬರುತ್ತಿರ ಬೇಕಾದರೆ, ಸಮುದ್ರದಲ್ಲಿ ಬಿರುಗಾಳಿ ಎದ್ದಿತು. ಹಡಗು ಮುಳುಗಿದರೆ, ಆತ ಪರ್ಷಿಯಾದಲ್ಲಿ ಗಳಿಸಿದಲಾಭವೆಲ್ಲವೂ ಮುಳುಗಿಹೋಗುತ್ತಿತ್ತು! ಬಿರುಗಾಳಿಯ ಶಕ್ತಿ ಹೆಚ್ಚುತ್ತಾ ಹೋಯಿತು. ಮಖನ್ ಶಾನು ಹಡಗಿನ ಮುಂಭಾಗದಲ್ಲಿ ಕುಳಿತು, ಸಮುದ್ರವನ್ನೇ ನೋಡುತ್ತಾ, ಕೈಮುಗಿದು ದೇವರಲ್ಲಿ ಬೇಡಿಕೊಳ್ಳಲು ಆರಂಭಿಸಿದ. ಜತೆಗೆ ತನ್ನ ಗುರುವನ್ನು ಸಹ ಪ್ರಾರ್ಥಿಸಿದ.
‘ಗುರುಗಳೇ, ಇದು ನಿನ್ನದೇ ಹಡಗು. ನನ್ನನ್ನು ಮುಂಬಯಿಯ ತನಕ ಸುರಕ್ಷಿತವಾಗಿ ಕರೆದೊಯ್ಯುವ ಕೃಪೆ ಮಾಡು. ನಾನು500ಚಿನ್ನದ ನಾಣ್ಯಗಳ ಕಾಣಿಕೆ ಕೊಡುತ್ತೇನೆ’. ಅದಾಗಿ ಸ್ವಲ್ಪ ಹೊತ್ತಿನಲ್ಲಿ ಬಿರುಗಾಳಿ ಕಡಿಮೆಯಾಯಿತು, ಹಡಗು ತನ್ನ ಸಮತೋಲನವನ್ನು ಪಡೆದುಕೊಂಡು, ಗುರಿಯತ್ತ ಸಾಗಿತು.ಮುಂಬಯಿಯನ್ನು ತಲುಪಿತು. ಮುಂಬಯಿಯಲ್ಲಿ ಇಳಿದ ಮಖನ್ ಶಾನು,ಅಮೃತಸರದತ್ತ ಧಾವಿಸಿದ. ಗುರು ಹರ್ ಕಿಷನ್ ಅವರಿಗೆ ಗೌರವ ಸಲ್ಲಿಸಿ, ಕಾಣಿಕೆ ನೀಡುವುದು ಆತನ ಉದ್ದೇಶವಾಗಿತ್ತು. ಆದರೆ, ಬಹಳ ದಿನಗಳ ಮುಂಚೆಯೇ ಗುರುಗಳು ದೇಹತ್ಯಾಗ ಮಾಡಿದ್ದರು. ಗುರುಗಳಉತ್ತರಾಽಕಾರಿಯು ಬಾಬಾ ಬಾಕಲ ಎಂಬ ಗ್ರಾಮದಲ್ಲಿರುವರೆಂದು ಗೊತ್ತಾಗಿ, ಆತ ಅಲ್ಲಿ ಹೋಗಿ ನೋಡಿದ.
ಆದರೆ, ಆ ಹಳ್ಳಿಯಲ್ಲಿ 22 ಮಂದಿ ಶಿಷ್ಯರು ತಾನೇ ಮುಂದಿನ ಉತ್ತರಾಧಿಕಾರಿ ಎಂದು ಹೇಳುತ್ತಿದ್ದರು! ಇದನ್ನು ಕಂಡು ಆ ವರ್ತಕನಿಗೆ ಅಚ್ಚರಿಯಾಯಿತು. ತಾನು ಯಾರಿಗೆ 500 ಚಿನ್ನದ ನಾಣ್ಯಗಳನ್ನು ಸಮರ್ಪಿಸಲಿ ಎಂದು ಯೋಚಿಸಿ, ಕೊನೆಗೆ ಒಂದು ಉಪಾಯ ಮಾಡಿದ. ತನ್ನ ಹಡಗಿನ ವಿಚಾರ, ಬಿರುಗಾಳಿಯ ವಿಚಾರ ವನ್ನು ರಹಸ್ಯವಾಗಿಟ್ಟ. ಹೆಚ್ಚು ಪ್ರಚಾರ ಮಾಡಿಕೊಂಡಿದ್ದ ಇಪ್ಪತ್ತೆರಡೂ ಜನ ಶಿಷ್ಯರಿಗೆ ತಲಾ ೫ ಚಿನ್ನದ ನಾಣ್ಯಗಳನ್ನು ಸಮರ್ಪಿಸಿ, ನಮಸ್ಕರಿಸಿದ. ಅವರು ಮೌನವಾಗಿ ಆ ನಾಣ್ಯಗಳನ್ನು ಸ್ವೀಕರಿಸಿದರು. ‘ಈ ಗ್ರಾಮದಲ್ಲಿ ಇನ್ನೂ ಯಾರಾದರೂ ಇಂತಹವರು ಇರುವರೆ?’ ಎಂದು ವಿಚಾರಿಸಿದ.
‘ಊರಿಂದಾಚೆ ಇರುವ ಸಣ್ಣ ಮನೆಯಲ್ಲಿ ಒಬ್ಬ ಗುರು ಇದ್ದಾರೆ. ಅವರ ಹೆಸರು ತೇಜ್ ಬಹಾದೂರ್. ಆದರೆ, ಅವರು ತನ್ನನ್ನು ಮುಂದಿನ ಗುರು ಎಂದು ಘೋಷಣೆ ಮಾಡಿಕೊಂಡಿಲ್ಲ. ಅವರ ಪಾಡಿಗೆ ಅವರು ಧ್ಯಾನದಲ್ಲಿದ್ದಾರೆ’ ಎಂದು ಊರಿನ ಹಿರಿಯರು ಹೇಳಿದರು. 23 ವ್ಯಕ್ತಿಯನ್ನೂ ನೋಡೋಣ ಎಂದು, ಮಖನ್ ಶಾನು ಅವರ ಬಳಿ ಹೋಗಿ ನಮಸ್ಕರಿಸಿ, ೫ ಚಿನ್ನದ ನಾಣ್ಯಗಳನ್ನು ಅವರ ಮುಂದಿಟ್ಟು, ‘ದಯವಿಟ್ಟು ಸ್ವೀಕರಿಸಬೇಕು’ ಎಂದ. ಧ್ಯಾನದಲ್ಲಿದ್ದ ಗುರುಗಳು ಕಣ್ಣು ತೆರೆದು ಇವನನ್ನೇ ನೋಡಿದರು.  ನಸುನಕ್ಕು, ‘ಏನಪ್ಪಾ ಶಿಷ್ಯ, ಗಾಳಿ ಬೀಸುವಾಗ ೫೦೦ ವರಹ, ಈಗ ಮಾತ್ರ ೫ ವರಹವೇ? ನೀನು ಈ ರೀತಿ ಸುಳ್ಳು ಹೇಳುವುದು ಸರಿಯಾ?’ ಎಂದು ಕೇಳಿದರು.
ಶಾಗೆ ಬಹಳ ಖುಷಿಯಾಯಿತು. 500 ನಾಣ್ಯಗಳನ್ನು ಅವರಿಗೆ ಸಮರ್ಪಿಸಿ, ಹೊರಗೆ ಬಂದು, ‘ನಾನು ನಿಜವಾದ ಗುರುಗಳನ್ನು ಹುಡುಕಿದ್ದೇನೆ.. ಎಲ್ಲಾ ಬನ್ನಿ’ ಎಂದು ಕೂಗಿ ಹೇಳಿದ. ಹಳ್ಳಿಯ ಜನರೆಲ್ಲರೂ ಧಾವಿಸಿ ಬಂದು, ಗುರು ತೇಜ್ ಬಹಾದೂರ್ ಅವರಿಗೆ ವಂದಿಸಿದರು. ಈ ರೀತಿ ಸಿಖ್ಖರ ಒಂಬತ್ತನೆಯ ಗುರು ತೇಜ್ಬಹಾದೂರ್ ಅವರು ಪ್ರಕಟಗೊಂಡರು. ನಿಜವಾದ ಗುರುವು, ಶಿಷ್ಯನಿಗೆ ಅರಿವಿಲ್ಲದಂತೆ ಸಹಾಯ ಮಾಡುತ್ತಾ, ಮಾರ್ಗದರ್ಶನ ನೀಡುತ್ತಾರೆ ಎಂಬುದಕ್ಕೆ ಈ ಕಥೆಯನ್ನು ಉದಹರಿಸುತ್ತಾರೆ.