ಜೀನ್ ಶಾರ್ಪ್‌‌ ತಂತ್ರಗಳೂ ಭಾರತದ ಸನ್ನಿವೇಶಗಳೂ…
ಕುಮಾರ್ ಶೇಣಿ
ದಶಕದ ಹಿಂದೆ ಅರಬ್ ದೇಶಗಳಲ್ಲಿ ಬದಲಾವಣೆಯ ಪರ್ವವೊಂದು ಆರಂಭವಾಗಿತ್ತು. ‘ಅರಬ್ ವಸಂತ’ ಎಂದು ಕರೆಯಲ್ಪಟ್ಟ ಈ ಆಂದೋಲನದ ಹಾದಿ ಅರಬ್ ದೇಶಗಳಲ್ಲಿ ಹೊಸತೊಂದು ಕನಸುಗಳನ್ನು ಬಿತ್ತತೊಡಗಿತು. ಇದು ಅಲ್ಲಿ ಹಲವು ದಶಕಗಳಿಂದ ನೆಲೆಯೂರಿದ್ದ ಸರ್ವಾಧಿಕಾರಿಗಳ ಬೇರನ್ನು ಕಿತ್ತೊಗೆಯಲು ಆರಂಭಿಸಿತು. ಪ್ರಜಾಪ್ರಭುತ್ವದ ಕನಸನ್ನು ಜನರಲ್ಲಿ ಬಿತ್ತತೊಡಗಿದ ಅರಬ್ ವಸಂತ, ಗುರಿಯನ್ನು ತಲುಪಿದ್ದು ಟ್ಯುನೇಷಿಯಾದಲ್ಲಿ ಮಾತ್ರ.
ಉಳಿದೆಲ್ಲೆಡೆ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ಅಷ್ಟೇ. ಮತ್ತದೇ ಸರ್ವಾಽಕಾರಿ ನಡೆಗಳು ಅರಬ್ ದೇಶಗಳಲ್ಲಿ ಉಳಿದುಕೊಂಡವು. ಸದುದ್ದೇಶ ಇಟ್ಟುಕೊಂಡು ಆರಂಭವಾಗಿದ್ದ ಪ್ರತಿಭಟನೆಯೊಂದು ವೈಫಲ್ಯ ಕಂಡದ್ದು, ಅದರ ಹಿಂದೆ ಇದ್ದ ಕಾಣದ ಕೈಗಳಿಂದ. ಕಳೆದ ಏಳೆಂಟು ವರುಷಗಳಲ್ಲಿ ಭಾರತದಲ್ಲಿ ಮಹತ್ವ ಎನಿಸುವ ಹಲವು ಯೋಜನೆಗಳು ಮತ್ತು ಶಾಸನಗಳು ಜಾರಿಗೆ ಬಂದವು. ಪ್ರತಿಯೊಂದೂ ಅನುಷ್ಠಾನಕ್ಕೆ ಬಂದಾಗಲೂ ಪ್ರತಿಭಟನೆಯ ಅಸ್ತ್ರವನ್ನು ಪ್ರಯೋಗಿಸಲಾಯಿತು. ಜಿಎಸ್‌ಟಿ, ಕಾಶ್ಮೀರದ 370ನೇ ವಿಧಿ ರದ್ಧತಿ, ಪೌರತ್ವ ತಿದ್ದುಪಡಿ ಕಾಯ್ದೆ ಹೀಗೆ ಪ್ರತಿಯೊಂದನ್ನೂ ವಿರೋಧಿಸಿ ಹೋರಾಟ ನಡೆಯಿತು. ಜಿಎಸ್‌ಟಿ ವಿರೋಧಿಹೋರಾಟ ಕೆಲ ಸಮಯದಲ್ಲಿ ಸ್ತಬ್ಧಗೊಡಿತು.
ಕಾಶ್ಮೀರದ 370ನೇ ವಿಧಿಯ ರದ್ಧತಿ ಮಾಡಿದಾಗ ಹೋರಾಟದ ಪ್ರಯತ್ನಗಳು ನಡೆದರೂ, ಅದನ್ನು ನಿಯಂತ್ರಿ ಸುವಲ್ಲಿ ಸರ್ಕಾರ ಅದ್ಭುತ ಯಶಸ್ಸನ್ನು ಕಂಡಿತು. ಹೀಗೆ ಎಲ್ಲ ಪ್ರತಿಭಟನೆಗಳೂ ಅಂತ್ಯ ಕಂಡವು. ಆದರೆ ಪ್ರತಿಭಟನೆಯ ಹಿಂದಿನ ಉದ್ದೇಶಗಳು ಸೃಷ್ಟವಾಗಲಿಲ್ಲ. ಕಾಶ್ಮೀರ ಮುಂದಿನ ದಿನಗಳಲ್ಲಿ ಶಾಂತವಾದಾಗ ಹೋರಾಟಗಾರರು ಶಾಂತವಾದರು. ಮುಂದೆ ಸರಕಾರ ಹೆಜ್ಜೆ ಇಟ್ಟಿದ್ದು ಕೃಷಿ ಕಾಯಿದೆಯ ಕಡೆಗೆ. ಸಂಸತ್ತಿನಲ್ಲಿ ಹೆಚ್ಚಿನ ಚರ್ಚೆಗೆ ಗುರಿಯಾಗದ ಕೃಷಿ ಕಾಯಿದೆ, ಸಂಸತ್ತಿನ ಹೊರಗೆ ದೊಡ್ಡದೊಂದು ಹೋರಾಟಕ್ಕೆ ಕಾರಣ ವಾಯಿತು.
ಸಾಂವಿಧಾನಿಕವಾಗಿ ನಡೆಯಬೇಕಾದ ಚರ್ಚೆಗಳು, ಅದಕ್ಕೆ ವಿರುದ್ಧವಾಗಿ ನಡೆಯತೊಡಗಿದವು. ಗಣರಾಜ್ಯೋತ್ಸವದ ದಿನವಂತೂ ದೆಹಲಿ ರಣಾಂಗಣವಾಯಿತು. ಸರಕಾರ ಮತ್ತು ಹೋರಾಟಗಾರರ ನಡುವಿನ ಮಾತುಕತೆಗಳು ಸರಿಯಾದ ಅಂತ್ಯ ಕಾಣಲಿಲ್ಲ. ಪ್ರತಿಭಟನೆ ಮುಂದುವರಿಯಿತು. ಸಂಸತ್ತಿನಲ್ಲಿ ಮಾತನಾಡದ ಹಲವು ಜನಪ್ರತಿನಿಧಿಗಳು, ಬೀದಿ ಬದಿಯ ಹೋರಾಟಗಳಲ್ಲಿ ಮಾತನಾಡತೊಡಗಿದರು. ಕೊನೆಯ ಹಂತವಾಗಿ ಸರಕಾರ ಕೃಷಿ ಕಾಯದೆಯನ್ನು ಹಿಂಪಡೆಯಿತು. ಪ್ರಜೆಗಳನ್ನು ಪ್ರತಿನಿಧಿಸುವ ಸಂಸತ್ತಿನಲ್ಲಿ ಅಂಗೀಕಾರಗೊಂಡ ಕಾಯಿದೆಯೊಂದು, ಪ್ರತಿಭಟನೆಯ ಅಸಕ್ಕೆ ಬಲಿಯಾಗಿದ್ದು ಹೀಗೆ.
ಪ್ರಜಾಪ್ರಭುತ್ವ ಪ್ರತಿನಿಽಸುವ ಸಂಸತ್ತಿನಲ್ಲಿ ಅಂಗೀಕಾರಗೊಂಡ ಕಾಯಿದೆ, ಬೀದಿ ಹೋರಾಟಕ್ಕೆ ಬಲಿಯಾದರೇ ಅದಕ್ಕೆ ಹೊಣೆ ಯಾರು? ಅದರ ವೈಫಲ್ಯಕ್ಕೆ ಕಾರಣ ಯಾರು? ಸಂಸತ್ತಿನಲ್ಲಿ ಅದರ ಪರವಾಗಿ ನಿಂತವರೇ? ಅಥವಾ ಸಂಸತ್ತಿನಲ್ಲಿ ಮೌನವಾಗಿದ್ದ ವಿರೋಧಿಗಳೇ? ಸರಕಾಋವನ್ನು ಆರಿಸಿದ ಜನರೇ?ಅಥವಾ ಕಾಯಿದೆಯನ್ನು ಜನರಿಗೆ ಅರ್ಥ ಮಾಡಿಸಲು ವಿಫಲರಾದ ಜನಪ್ರತಿನಿಧಿಗಳೇ? ದೇಶದಲ್ಲಿ ಕಾನೂನು ರಚನೆಯ ಹಾದಿಯೊಂದಿದೆ.
ಸಂಸತ್ತಿನಲ್ಲಿ ಅದನ್ನು ಮಂಡಿಸಿ, ಎರಡೂ ಸದನಗಳಲ್ಲಿ ಅಂಗೀಕಾರಗೊಂಡು, ರಾಷ್ಟ್ರಪತಿಯ ಸಹಿಯ ನಂತರ ಅದು ಅನುಷ್ಠಾನಕ್ಕೆ ಬರುತ್ತದೆ. ಈ ಹಾದಿಯಲ್ಲಿಕಾಯಿದೆಯ ಕುರಿತು ಸುದೀರ್ಘ ಚರ್ಚೆ ನಡೆಯುತ್ತದೆ. ಕಾಯಿದೆಯ ಉಪಯೋಗ ಮತ್ತು ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಯುತ್ತದೆ. ಕೃಷಿ ಕಾಯಿದೆ ಸಾಗಿದ್ದೂ ಇದೇ ಹಾದಿಯಲ್ಲಿ. ಚರ್ಚೆಯ ಅವಧಿಯಲ್ಲಿ ಒಂದೆರಡು ಸಂಸದರು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದರಾದರೂ, ಅದೇನು ಅಷ್ಟು ಗಂಭೀರ ವಿಚಾರ ಆಗಿರಲಿಲ್ಲ. ಅದಕ್ಕೆ ಸರಕಾರ ಉತ್ತರ ನೀಡಿತ್ತು. ಒಂದೊಮ್ಮೆ ಪ್ರತಿ ಪಕ್ಷಗಳು ಒಪ್ಪಿಕೊಂಡಿದ್ದರೆ, ಮುಂದಿನ ಪ್ರತಿಭಟನೆಯ ಹಾದಿಯಲ್ಲಿ ಕೆಲಸ ಮಾಡಿದ ಕಾಣದ ಕೈಗಳು ಯಾವುವು ಎಂಬುದು ಯಕ್ಷ ಪ್ರಶ್ನೆ. ಜೀನ್ ಶಾರ್ಪ್ ಎಂಬ ಅಮೆರಿಕದ ರಾಜ್ಯಶಾಸಜ್ಞಒಂದು ಸರಕಾರವನ್ನು ಬೀಳಿ ಸುವುದು ಹೇಗೆ ಎಂಬ ಪುಸ್ತಕವೊಂದನ್ನು ಬರೆದಿದ್ದಾನೆ.
ಸದೃಢ ಸರ್ಕಾರವನ್ನು ಹಿಂಸಾತ್ಮಾಕ ಮಾರ್ಗವಲ್ಲದೇ, ಪ್ರಜಾತಾಂತ್ರಿಕ ಮಾರ್ಗದಲ್ಲಿಯೂ ಹೇಗೆ ಉರುಳಿಸಬಹುದು ಎಂಬುದರ ಕುರಿತು 198 ತಂತ್ರಗಳನ್ನು ತನ್ನ ಪುಸ್ತಕದಲ್ಲಿ ತಿಳಿಸಿದ್ದಾನೆ. ಮೊದಲ ಹಂತದಲ್ಲಿ ಶಾಂತಿ, ನೆಮ್ಮದೆ, ಸಹಿಷ್ಣುತೆ, ಪ್ರಜಾಪ್ರಭುತ್ವ ಎಂಬ ಹಾದಿಯಲ್ಲಿ ತಮ್ಮ ಹೋರಾಟವನ್ನು ಆರಂಭಿಸಬೇಕು. ಅದು ತೀವ್ರ ಮಟ್ಟಕ್ಕೆ ತಲುಪಿದಾಗ ಸರಕಾರ ಗೊಂದಲಕ್ಕೆ ಬೀಳುತ್ತದೆ. ಆಗ ಅಪಪ್ರಚಾರ ಸುಲಭ. ಹೀಗೆ ಸಲೀಸಾಗಿ ಸರಕಾರವೊಂದನ್ನು ಬೀಳಿಸಬಹುದು. ಇಂದು ಭಾರತದ ಪ್ರತಿಭಟನೆಗಳನ್ನು ಗಮನಿಸಿದಾಗ ಈ ತಂತ್ರಗಳನ್ನು ಪ್ರಯೋಗಿಸಲಾಗುತ್ತಿದೆಯೇ ಎಂಬ ಅನುಮಾನವೊಂದು ಹುಟ್ಟಿಕೊಳ್ಳುತ್ತಿದೆ. ಕ್ರಾಂತಿಯ ಕನಸು ನಮ್ಮ ಭವಿಷ್ಯತ್ತನ್ನು ನಾಶಗೊಳಿಸಬಾರದು ಅಷ್ಟೇ.
ಕೃಷಿ ಕಾಯಿದೆ ಹಿಂಪಡೆದುದರ ಹಿಂದೆ ಅನೇಕ ಕಾರಣ ಗಳು ಇರಬಹುದು. ಆದರೆ ವಿಸ್ಕೃತವಾಗಿ ಚರ್ಚೆಯಾಗ ಬೇಕಿತ್ತಲ್ಲವೇ? ಸರಕಾರ ಪ್ರತಿಭಟನೆಯ ಅಸಕ್ಕೆತಲೆಬಾಗುತ್ತದೆ ಎಂದರೆ, ಸಂಸತ್ತಿನಲ್ಲಿ ಪ್ರತಿಪಕ್ಷ ಎಂಬುದು ಅನವಶ್ಯಕ ಎನಿಸುತ್ತದೆ. ಕೊನೆಗೊಂದು ದಿನ ಪ್ರಜಾ ಪ್ರಭುತ್ವ ವ್ಯವಸ್ಥೆಯೇ ಅಗತ್ಯ ಇಲ್ಲ ಎನಿಸಿ ಬಿಟ್ಟರೆ? ಒಟ್ಟಿನಲ್ಲಿ ಸಂಸತ್ತಿನಲ್ಲಿ ಅಭಿವೃದ್ಧಿಯ ಕನಸು ಬಿತ್ತುವ ಕಾಯಿದೆಗಳ ಕುರಿತು ಉತ್ತಮ ಚರ್ಚೆಗಳು ನಡೆಯುವ ಅವಶ್ಯಕತೆ ಇದೆ. ಇಲ್ಲವೆಂದರೆ ಮುಂದೊಂದು ದಿನ ಪ್ರಜಾಪ್ರಭುತ್ವದ ಅವಶ್ಯಕತೆ ಇದೆಯೇ ಎಂದು ನಾವೆಲ್ಲರೂ ಚರ್ಚಿಸುವ ಸಮಯವೊಂದು ಬರಬಹುದು.
(ಲೇಖಕರು ರಾಜ್ಯಶಾಸ್ತ್ರ ಉಪನ್ಯಾಸಕರು)