ರೈತ ನೆಂಟರ ಜತೆಗಿನ ರೋಚಕ ಕಥೆ
ಮಿಶ್ರಾ ಕೃಷಿ
ಕವಿತಾ ಮಿಶ್ರಾ
@.
ಕೃಷಿಯಲ್ಲಿ ಒಮ್ಮೆ ಅತಿವೃಷ್ಟಿ, ಇನ್ನೊಮ್ಮೆ ಅನಾವೃಷ್ಟಿಯಿಂದ ಬೆಳೆಹಾನಿ. ಇವೆರಡೂ ಸರಿಯಾಗಿದ್ದರೆ ಕಳ್ಳ ದಲ್ಲಾಳಿಗಳ ಹೊಡೆತಕ್ಕೆ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುವ ಅಮಾಯಕ ರೈತರು. ಅವರಾದರೂ ಪಾಪ, ಯಾರ ಹತ್ತಿರ ಹೇಳಿಕೊಂಡಾರು? ಇದನ್ನೇ ದೊಡ್ಡ ವಿಚಾರವನ್ನಾಗಿ ಮಾಡಹೋದರೆ ನಾಳೆ ಬೆಳಗ್ಗೆ ಊಟಕ್ಕೂ ಹಣವಿಲ್ಲದಂತಾಗುವ ಪರಿಸ್ಥಿತಿ!
ಯಾರಾದರೂ ಮನೆಯಲ್ಲಿ ಗಂಧವನ್ನು ಬೆಳೆದಿದ್ದಾರೆ ಅಂದರೆ ಅದನ್ನು ಎಲ್ಲರೆದುರು ಹೇಳೋಕೂ ಸಹಿತ ಭಯಪಡುತ್ತಾರೆ. ಅದು ಸರಿಯೂ ಕೂಡ. ಅನೇಕವರ್ಷಗಳ ಕಾಲ ಶ್ರೀಗಂಧದ ಆರೈಕೆ ಮಾಡಿ ಕೊನೆಗೊಂದು ದಿನ ಯಾರೋ ಬಂದು ಕಡಿದುಕೊಂಡು ಹೋದರು ಅಂದ್ರೆ ಪಟ್ಟ ಶ್ರಮ ಎಲ್ಲ ಹೊಳೆಯಲ್ಲಿ ಹುಣಸೆ ಹಣ್ಣನ್ನು ತೊಳೆದಂತೆ ಆಗಿಬಿಡುತ್ತೆ. ಕೇವಲ ಶ್ರೀಗಂಧ ಅಂತ ಅಲ್ಲ, ಯಾವುದೇ ರೈತನಾದರೂ ಈ ರೈತಾಪಿ ದಂಧೆಯಲ್ಲಿ ಮುಷ್ಟಿಯನ್ನು ಬಿಗಿ ಹಿಡಿದೇ ತನ್ನ ಕೆಲಸ ಮಾಡುತ್ತಿರುತ್ತಾನೆ.
ಇದು ರೈತಾಪಿ ಧರ್ಮ ಕೂಡ ಹೌದು. ಮುಂಬರುವ ದಿನಗಳಲ್ಲಿ ಸರಿಯಾಗಿ ಬೆಳೆ ಬರುತ್ತೆ ಅಂತ ನಂಬಿಕೊಂಡು ಶ್ರಮವಹಿಸದಿದ್ದರೆ ಅದು ಅವನ ಕರ್ಮ ಅಷ್ಟೆ. ರೈತ ಯಾವಾಗ್ಲೂ ಜೂಜುಕೋರನೇ ಆಗಿರ್ತಾನೆ. ಅದು ಚಟ ಅಂತ ಹೇಳಿಸಿಕೊಳ್ಳೋ ದಿಲ್ಲ; ಬದಲಾಗಿ ಅದು ಜೀವನಕ್ಕಾಗಿ ಮಾಡುವ ಸಾತ್ವಿಕ ಜೂಜು. 2010ರಲ್ಲಿ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಶ್ರೀಗಂಧವನ್ನು ಬೆಳೆಯೋದಕ್ಕೂ ಹಿಂಜರಿಯುತ್ತಿದ್ದರು, ಅಷ್ಟೇ ಯಾಕೆ? ಯಾವ ಜಿಲ್ಲೆಗಳಲ್ಲಿ ಎಷ್ಟು ಶ್ರೀಗಂಧವನ್ನು ಬೆಳೆಯುತ್ತಿದ್ದಾರೆ ಅನ್ನೋದು ಕೂಡ ತಿಳಿಯುತ್ತಿರಲಿಲ್ಲ.
2014ರ ಸಮಯಕ್ಕೆ ನಾನು ಹಾಕಿದ್ದ ಶ್ರೀಗಂಧ ಚೆನ್ನಾಗಿ ಬೆಳೆಯುತ್ತಿದ್ದರೂ ನನಗೆ ಹಣ್ಣಿನ ಗಿಡಗಳ ಕುರಿತು ಹೆಚ್ಚಿನ ವ್ಯಾಮೋಹ. ಅದೇನೋ ಹೇಳುತ್ತಾರಲ್ಲ, ಇರುವು ದೆಲ್ಲವ ಬಿಟ್ಟು ಇರದುದರ ಕಡೆ ಮನ ತುಡಿವುದೇ ಜೀವನ ಅಂತ. ಹೇಗಾದರೂ ಮಾಡಿ ಮಾವಿನ ಹಣ್ಣಿನ ಕೃಷಿಯಲ್ಲಿ ಯಶಸ್ವಿಯಾಗಿ ತೋರಿಸಬೇಕು ಅಂತ ತೀರ್ಮಾನ ಮಾಡಿ ಮಾವಿನ ಹಣ್ಣುಗಳನ್ನು ಬೆಳೆದು ಹೋಲ್‌ಸೇಲ್ ಬೆಲೆಗೆ ಮಂಡಿಗಳಲ್ಲಿ ಮಾರ ಹೊರಟಾಗ ಅಲ್ಲಿ ನಡೆದ ಕುತಂತ್ರಗಳೇ ಬೇರೆ.
ಹೋಲ್‌ಸೇಲ್ ಮಂಡಿಗಳೆಂದರೆ ಅಲ್ಲಿ ದಲ್ಲಾಳಿಗಳು ಮತ್ತು ರೈತರ ಮುಖವಾಡಗಳನ್ನು ಹೊರುವ ದಲ್ಲಾಳಿಗಳು ನಿಜವಾದ ರೈತನ ಶ್ರಮದ ಜತೆ ಆಟವಾಡಿ ಬಿಡ್ತಾರೆ. ಅಲ್ಲಿಗೆ ರೈತನ ಶ್ರಮ? ಕಡೆದೂ ಕಡೆದು ಬೆಣ್ಣೆ ಬರುವ ಸಮಯಕ್ಕೆ ಮಡಿಕೆ ಒಡೆದಂತಾಗಿಬಿಡುತ್ತೆ. ನನ್ನ ವಿಚಾರದಲ್ಲಿ ನಡೆದದ್ದೂ ಹೀಗೆ. ನಾನು ಒಂದು ಕಿಲೋ ಹಣ್ಣನ್ನು ಮಾರಾಟ ಮಾಡಿದ್ದು ಕಿಲೋಗೆ ಕೇವಲ ಆರು ರುಪಾಯಿಗೆ. ಹೃದಯ ಭಾರವಾಗಿತ್ತು, ಹೆಜ್ಜೆಗಳನ್ನು ಎತ್ತಿ ಇಡುವುದಕ್ಕೂ ಕಷ್ಟವೆನಿಸುತ್ತಿತ್ತು.ಕಣ್ಣುಗಳು ತುಂಬಿ ಬರುತ್ತಿದ್ದರೂ ಹಣೆ ಬರಹಕ್ಕೆ ಹೊಣೆ ಯಾರು? ಅಂತ ದುರ್ಗಮ ಹಾದಿಯಲ್ಲಿ ಬರುತ್ತಿರುವ ಸಮಯಕ್ಕೆ ಅಲ್ಲೊಬ್ಬ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ. ಆತನ ಬಳಿ, ‘ಒಂದು ಕಿಲೋ ಮಾವಿಗೆ ಎಷ್ಟಪ್ಪಾ?’ ಅಂತ ಕೇಳಿದ್ರೆ ಐವತ್ತು ರೂಪಾಯಿಗಳು ಅಂತ ಹೇಳಿದ, ಕೇವಲ ಹತ್ತು ನಿಮಿಷಗಳ ಮುನ್ನ ಅದಕ್ಕಿಂತಲೂ ಉತ್ಕೃಷ್ಟವಾದ ಹಣ್ಣುಗಳನ್ನ ಐದಾರು ಪಟ್ಟು ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದಿದ್ದೆ.
ಅಲ್ಲಿ ನಾನು ಗಮನಿಸಿದ ವಿಚಾರ, ‘ಸ್ವತಃ ರೈತನೇ ಬೆಳೆದ ಬೆಳೆಯ ಬೆಲೆಯ ನಿರ್ಧಾರವನ್ನೂ ಮಾಡಲಾರ’. ಕೃಷಿಯಲ್ಲಿ ಒಮ್ಮೆ ಅತಿವೃಷ್ಟಿಯಾಗಿ ಬೆಳೆಸರಿಯಾಗಿ ಬಾರದಿದ್ದರೆ ಇನ್ನೊಮ್ಮೆ ಅನಾವೃಷ್ಟಿಯಿಂದ ಬೆಳೆಹಾನಿ. ಇವೆರಡೂ ಸರಿಯಾಗಿದ್ದು ಉತ್ತಮ ಬೆಳೆ ಬಂತು ಅಂದರೆ ಅಲ್ಲಿ ಕಳ್ಳ ದಲ್ಲಾಳಿಗಳಹೊಡೆತಕ್ಕೆ ಸಿಲುಕಿ ಆರ್ಥಿಕ ಸಂಕಷ್ಟಗಳನ್ನು ಎದುರಿಸುವ ಅಮಾಯಕ ರೈತರು. ಅವರಾದರೂ ಪಾಪ… ಯಾರ ಹತ್ತಿರ ಅಂತ ಹೇಳಿಕೊಂಡಾರು? ಇದನ್ನೇ ದೊಡ್ಡ ವಿಚಾರವನ್ನಾಗಿ ಮಾಡಹೋದರೆ ನಾಳೆ ಬೆಳಗ್ಗೆ ಊಟಕ್ಕೂ ಹಣವಿಲ್ಲದಂತಾಗುವ ಪರಿಸ್ಥಿತಿ ಎದುರಾಗಿಬಿಡುತ್ತೆ.
ನಿಜಕ್ಕೂ ಇದೊಂದು ಮನಸ್ಸು ಕದಡುವ ಶೋಚನೀಯ ಸ್ಥಿತಿ. ಇದೊಂದು ದುರ್ಘಟನೆ ಅಂತ ಭಾವಿಸಿದ ನಾನು ಯಾವುದೇ ದಲ್ಲಾಳಿಗಳಿಗೆ ಹಣ್ಣುಗಳನ್ನುಮಾರಾಟ ಮಾಡದೆ ಸ್ವತಃ ನಾನೇ ನೇರವಾಗಿ ಮಾರುಕಟ್ಟೆಗೆ ಹಣ್ಣುಗಳನ್ನು ಕಳುಹಿಸಬೇಕು ಅಂತ ದೃಢ ನಿರ್ಧಾರ ಮಾಡಿ ಆ ಕ್ಷಣವೇ ಹೊಸ ಪ್ರಯೋಗಕ್ಕೆ ಕೈಹಾಕಿದ್ದೆ. ಈ ಪ್ರಯೋಗವನ್ನು ಮಾಡುವುದರಿಂದ ಮುಂದೇನಾಗಬಹುದು? ಅದರ ಪರಿಣಾಮಗಳು ಹೇಗಿರಬಹುದು ಅನ್ನೋದು ಕೂಡ ನನಗೆ ಗೌಪ್ಯವಾಗಿತ್ತು. ತಳಿಗಳಿಗೆ ಅನುಗುಣವಾಗಿ ನನ್ನದೇ ಆದ ಬ್ರಾಂಡ್ ಒಂದನ್ನು ಸೃಷ್ಟಿ ಮಾಡಿ 5, 10, 20 ಕೆಜಿಗಳಾಗಿ ತಳಿವಾರು ವಿಂಗಡಿಸಿ ಮಾರಾಟ ಮಾಡತೊಡಗಿದ್ದೆ. ಪ್ರಾರಂಭಿಕ ದಿನಗಳಲ್ಲಿ ಮಾರಾಟ ತುಸು ನಿಧಾನವಾಗಿದ್ದರೂ ನಂತರದ ದಿನಗಳಲ್ಲಿ ತನ್ನದೇ ಆದ ವೇಗವನ್ನು ಪಡೆದು ಕೊಂಡಿತ್ತು.
ಯಾರೂ ಹುಟ್ಟಿದ ಮಾರನೆಯ ದಿನವೇ ಬೆಳೆದು ನಿಲ್ಲುವುದಿಲ್ಲ ಎನ್ನುವ ಸತ್ಯದ ಅರಿವೂ ನನಗಿತ್ತು. ಈ ಸಮಯಕ್ಕೆ ಬೆಳೆದ ಹಣ್ಣುಗಳ ಬೆಲೆಯನ್ನು ನಾನೇ ನಿರ್ಧಾರಮಾಡತೊಡಗಿದ್ದೆ. ಮಂಡಿಗಳಿಗೆ ಹೋಗಿ ಮಾರಾಟ ಮಾಡುವುದಕ್ಕಿಂತ ನಾನೇ ನೇರ ಮಾರುಕಟ್ಟೆಗಳಿಗೆ ನೀಡಿದಾಗ ಲಾಭ ಹೆಚ್ಚಾಗಿತ್ತು. ನನ್ನ ಕಾಲುಗಳ ಮೇಲೆ ನಾನು ನಿಲ್ಲಹೊರಟಾಗ, ಕೃಷಿ ಚಟುವಟಿಕೆಗಳಲ್ಲಿ ಕಾಯಂ ಸಹಾಯ ಮಾಡುವುದಕ್ಕೆ ಒಬ್ಬನ ಅವಶ್ಯಕತೆಯಿತ್ತು. ಆ ಸಮಯಕ್ಕೆ ಸರಿಯಾಗಿ ಕೆಲಸ ಕೇಳಿಕೊಂಡು ಬಂದವನೇ ಮೌನೇಶ. ಕೃಷಿಯಲ್ಲಿ ಎಷ್ಟೇ ಪ್ರಾಮಾಣಿಕವಾಗಿದ್ದರೂ ಕಡಿಮೆಯೇ… ಆದರೆ ಈತನೊಬ್ಬ ಉತ್ತಮ ಚಾರಿತ್ರ್ಯವುಳ್ಳ, ಅನುಭವೀ, ಪ್ರಾಮಾಣಿಕದುಡಿಮೆಕಾರನಾಗಿದ್ದ. ಇಡೀ ದಿನ ತೋಟದಲ್ಲೇ ಇದ್ದು ೧೦ ಹಸುಗಳು, ೩ನಾಯಿಗಳು, ೨೦೦ ಕೋಳಿಗಳನ್ನು ನೋಡಿಕೊಳ್ಳುವುದರ ಜತೆಗೆ ತೋಟದಕೆಲಸ ಗಳನ್ನೂ ನಿಭಾಯಿಸಬಲ್ಲ ದುಡಿಮೆಗಾರನಾಗಿದ್ದ.
ಸ್ವತಃ ಮನೆಯ ಮಗನಂತೆಯೇ ಇದ್ದರೂ ಕೂಡ ಅದೊಂದು ದಿನ ಬೆಳಗ್ಗೆ ಎದ್ದಾಗ ಆತ ಇರಲಿಲ್ಲ. ಎಲ್ಲಿ ಹೋದ? ಯಾಕೆ ಹೋದ? ಅನ್ನುವ ಸತ್ಯ ಯಾರಿಗೂ ತಿಳಿದಿರಲಿಲ್ಲ. ನೂರಾರು ಕೋಳಿಗಳು, ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವುದು ಇವುಗಳ ಮಧ್ಯೆ ಮನೆಯನ್ನು ನೋಡಿಕೊಳ್ಳುವುದಕ್ಕೆ ನಾನು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಇಂಥಾ ಕಠಿಣ ದೈಹಿಕ ಶ್ರಮಕ್ಕೆ ಹೆದರಿಯೇ ಹೆಚ್ಚಿನವರು ಮಾಯಾಜಾಲದ ಷಹರಕ್ಕೆ ಹೋಗಿಬಿಡುತ್ತಾರೆ. ಯಾರು ಇರಲಿ ಬಿಡಲಿ, ಯಾವ ಕಾರ್ಯಗಳೂ ನಿಲ್ಲೋದಿಲ್ಲ ಅಂತ ತಿಳಿದಿದ್ದರಿಂದ 24ಗಂಟೆಗಳ  ಒಳಗಾಗಿ ಅವನಿದ್ದ ಜಾಗಕ್ಕೆ ಇನ್ನೊಬ್ಬರನ್ನುನೇಮಿಸಿ ‘ಅಯ್ಯ ಸತ್ತರೆ ಅಮವಾಸ್ಯೆ ನಿಲ್ಲೋದಿಲ್ಲ’ ಅನ್ನುವ ಸಂದೇಶವನ್ನು ಆತನಿಗೆ ರವಾನಿಸಿದ್ದೆ.
ದಿನಗಳು ಕಳೆದಂತೆ ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿ ಬೆಳೆಗಳನ್ನು ಅಚ್ಚುಕಟ್ಟಾಗಿ ಲಾಭದಾಯಕವಾಗಿ ಬೆಳೆಯುತ್ತಿದ್ದುದರ ಪರಿಣಾಮ ನನ್ನ ತೋಟದ ಹೆಸರು ರಾಜ್ಯದಾದ್ಯಂತ ಮಾತಾಗತೊಡಗಿ ಹೊರರಾಜ್ಯಗಳಲ್ಲೂ ಹೆಸರು ಮಾಡತೊಡಗಿತ್ತು. ಈಗೀಗ ನಮ್ಮ ತೋಟವನ್ನು ನೋಡುವುದಕ್ಕೆ, ಹೊಸದಾಗಿಕೃಷಿಯನ್ನು ಪ್ರಾರಂಭ ಮಾಡುವವರು, ಉತ್ತಮ ಸಸಿಗಳು ಸಿಗದೇ ಕಷ್ಟಪಡುತ್ತಿದ್ದವರು, ತಪ್ಪಾದ ಅಂತರದಲ್ಲಿ ಸಸಿಗಳನ್ನು ಬಿತ್ತನೆ ಮಾಡಿದಂತವರುಬರುತ್ತಿದ್ದರು. ಹೀಗೆ ಬರುತ್ತಿದ್ದವರನ್ನು ಹತ್ತಿರದಿಂದ ಗಮನಿಸಿದ್ದ ನನಗೆ, ‘ಏಕೆ ನಾನೇ ಒಂದು ನರ್ಸರಿಯನ್ನು ಪ್ರಾರಂಭ ಮಾಡಬಾರದು?’ ಎನ್ನುವ ಯೋಚನೆ ಬಂದಿತ್ತಾದರೂ ಒಂದು ನರ್ಸರಿಯನ್ನು ಪ್ರಾರಂಭ ಮಾಡುವುದು ಸುಲಭದ ಮಾತಾಗಿರಲಿಲ್ಲ.
ಅದಕ್ಕೆ ಹೆಚ್ಚಿನ ನೈಪುಣ್ಯದ ಅಗತ್ಯ ಇರುತ್ತೆ ಹಾಗೂ ತಯಾರಿಯನ್ನೂ ಬೇಡುತ್ತೆ. ಒಂದು ರೀತಿಯಲ್ಲಿ ಕಾಂಪಿಟೇಟಿವ್ ಪರೀಕ್ಷೆಗೆ ಸನ್ನದ್ಧವಾಗುವ ರೀತಿ ಅದು.ನರ್ಸರಿಯನ್ನು ಪ್ರಾರಂಭಿಸುವ ಮೊದಲು ನನ್ನ ಅಕ್ಕನ ಸಂಬಂಽಕರಾದ ಉದಯ ಕುಮಾರರನ್ನು ಭೇಟಿಯಾಗಿದ್ದೆ. ಅವರು ದೂರದ ತಮಿಳುನಾಡಿನವರು. ಆ ಪ್ರಾತ್ಯಂದಲ್ಲಿ ಅತ್ಯುತ್ತಮ ಗುಣಮಟ್ಟದ ಮಾವು ಬೆಳೆಗಾರ ಎನ್ನುವ ಹೆಗ್ಗಳಿಕೆಗೆ ಒಳಗಾಗಿದ್ದ ವ್ಯಕ್ತಿ, ಸಾಮೀಪ್ಯ ಕೃಷಿ ( ) ಮಾಡುವುದರಲ್ಲಿ ಅವರಷ್ಟು ನಿಪುಣರು ಇನ್ನಾರೂ ಇಲ್ಲ ಅಂತ ಹೇಳಲಾಗುತ್ತಿತ್ತು.
ಇವರಂತೆ ಅನೇಕ ಪರಿಣಿತ ಕೃಷಿಕರನ್ನು ಸಂಪರ್ಕಿಸಿ ಹಲವು ಬಗೆಗಳ ಹಣ್ಣು ಹಾಗೂ ಅರಣ್ಯ ಸಸಿಗಳ ಉತ್ಪಾದಕರನ್ನು ಸಂಪರ್ಕಿಸಿ ಗುಣಮಟ್ಟದ ಸಸಿಗಳಿಗೆ ಬೇಡಿಕೆಯಿಟ್ಟು ನರ್ಸರಿಯೊಂದನ್ನು ಪ್ರಾರಂಭಿಸಿದ್ದೆ. ತೋಟದ ಕೆಲಸಗಳಿಗೆ ಒಗ್ಗಿ ಹೋಗಿದ್ದ ಕೆಲಸಗಾರರಿಗೆ ನರ್ಸರಿಯಲ್ಲಿ ಮಾಡುವ ಕೆಲಸಗಳ ಬಗ್ಗೆ ಅಷ್ಟೊಂದು ಅರಿವು ಇರಲಿಲ್ಲ. ಈ ಸಮಯಕ್ಕೆ ಸರಿಯಾಗಿ, ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀ ತಿಮ್ಮನೂರು ಎನ್ನುವ ಮಹಿಳೆ ಹಲವು ದಿನಗಳ ಕಾಲ ನಮ್ಮ ನರ್ಸರಿಯ ಕಾರ್ಮಿಕರಿಗೆ ಮಾರ್ಗದರ್ಶನ ಮಾಡಿದ್ದರು.
ಕಾಲಚಕ್ರಕ್ಕೆ ನಮಸ್ಕರಿಸಿ ಶ್ರಮ ಪಡುತ್ತಿದ್ದ ನಮ್ಮ ನರ್ಸರಿಯನ್ನು ನೋಡುವುದಕ್ಕೆ ಹಲವಾರು ಭಾಗಗಳಿಂದ ಜನರು ಬರತೊಡಗಿದ್ದರು. ಕ್ರಮೇಣವಾಗಿ ಅನ್ಯ ರಾಜ್ಯಗಳಿಂದಲೂ ಗಿಡಗಳ ಸರಬರಾಜಿಗಾಗಿ ಬೇಡಿಕೆಗಳು ಬರತೊಡಗಿತ್ತು. ಈಗ ಕರ್ನಾಟಕ, ಆಂದ್ರ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದ ವರೆಗೂ ನಮ್ಮ ನರ್ಸರಿಯ ಸಸ್ಯಗಳು ಸರಬರಾಜಾಗುತ್ತಿದೆ ಅನ್ನೋದು ಒಂದು ಹೆಮ್ಮೆ. ಇದರ ಜತೆ ಅನೇಕ ಚಾಲಕರಿಗೂ ಕೆಲಸ ದೊರೆಯುತ್ತಿದೆ. ಒಮ್ಮೆ ಮಹಾರಾಷ್ಟ್ರದಿಂದ ಅಜ್ಜಿಯೊಬ್ಬಳು ತನ್ನ ಮೊಮ್ಮಕ್ಕಳೊಡನೆ ಶ್ರೀಗಂಧದ ಸಸಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದಳು. ಹಾಗೇ ಸುಮ್ಮನೆ ಮಾತನಾಡುತ್ತಿದ್ದಾಗ ‘ನೀರಿನ ಸೌಲಭ್ಯ ಹೇಗಿದೆ?’ ಅಂತ ಅವಳನ್ನ ಕೇಳಿದರೆ, ‘ನೀರೂ ಇಲ್ಲ, ಬೋರೂ ಇಲ್ಲ.
ಇನ್ನು ಬಾವಿಯಂತೂ ಕನಸು ಬಿಡಿ’ ಅಂತ ಉತ್ತರವನ್ನು ನೀಡಿದ್ದಳು. ಇನ್ನು ಆಕೆ ಸಸಿಗಳನ್ನು ತೆಗೆದುಕೊಂಡು ಏನು ಮಾಡಿಯಾಳು ಅಂತ ನನ್ನಷ್ಟಕ್ಕೆ ನಾನೇವಿಚಾರಿಸಿ ಅವಳ ಬೇಡಿಕೆಯಂತೆ 1000 ಗಿಡಗಳನ್ನು ಆಕೆಗೆ ನೀಡಿ ಒಂದಿಷ್ಟು ಮಾಹಿತಿಗಳನ್ನು ನೀಡಿದ್ದೆ. ಈ ಘಟನೆ ಕಳೆದು ಸುಮಾರು ಎರಡು ವರ್ಷಗಳಾ ಗಿರಬಹುದು. ಮಹಾರಾಷ್ಟ್ರದ ಯವತ್ ಮಾಳ ಜಿಲ್ಲೆಯಿಂದ, ೮೦ ಎಕರೆ ಪ್ರದೇಶದಲ್ಲಿ ಮೀನುಗಾರಿಕೆ, ಹೈನುಗಾರಿಕೆ, ತೋಟಗಾರಿಕೆ, ಅರಣ್ಯ ಕೃಷಿ, ಬೊಟಾ ನಿಕಲ್ ಗಾರ್ಡನ್ ಸೇರಿದಂತೆ ಹಲವು ರೀತಿಯ ಮಾದರಿ ತೋಟಗಳನ್ನು ಅಧ್ಯಯನ ಮಾಡುವುದಕ್ಕಾಗಿ ದೇಶಪಾಂಡೆ ಎನ್ನುವವರು ಬಂದಿದ್ದರು. ತಾವು ಮಾಡುತ್ತಿರುವ ಯೋಜನೆಯ ಕುರಿತು ತಿಳಿಸಿ, ‘ಇನ್ನೂ ಉತ್ತಮ ಕೃಷಿಯನ್ನು ಮಾಡಬೇಕೆಂದಿದ್ದೇನೆ. ಅದಕ್ಕೆ ನೀವು ಯವತ್‌ಮಾಳ ಜಿಲ್ಲೆಗೆ ಬರಬೇಕು’ ಅಂತಹೇಳಿದ್ದರು.
ಅದಕ್ಕೆ ಒಪ್ಪಿದ ನನಗೆ, ಆ ಜಿಲ್ಲೆಗೆ ಹೋಗಬೇಕಾದರೆ ನಾಂದೇಡ ಮಾರ್ಗವಾಗಿಯೇ ಹೋಗಬೇಕು ಅನ್ನೋದು ತಿಳಿದು 1000 ಶ್ರೀಗಂಧದದ ಗಿಡಗಳನ್ನು ತೆಗೆದುಕೊಂಡಿದ್ದ ಅಜ್ಜಿ ಅದೇ ಊರಿನವಳು ಅನ್ನುವುದು ನೆನಪಾಗಿತ್ತು. ಒಂದು ಚೂರು ತಡಮಾಡದೆ ಆಕೆಗೆ ಕರೆ ಮಾಡಿ, ‘ಅದೇ ಮಾರ್ಗವಾಗಿ ಬರುತ್ತಿದ್ದೇನೆ’ ಅಂತ ಹೇಳಿದಾಗ ಆಕೆಯ ಸಂತೋಷಕ್ಕೆ ಎಲ್ಲೆ ಇರಲಿಲ್ಲ, ಆಕೆಯ ಮಾತುಗಳು ನನ್ನ ಹೃದಯಕ್ಕೆ ನಾಟುವಷ್ಟು ಭಾವನಾತ್ಮಕವಾಗಿ ಮಾತನಾಡುತ್ತಿದ್ದಳು.
ನಿಗದಿಪಡಿಸಿದಂತೆ ಆಕೆಯ ಲಂಬಾಗೋತಾಂಡಾ ಊರಿಗೆ ತಲುಪಿ ಅವಳ ತೋಟವನ್ನು ನೋಡಿದರೆ ಶ್ರೀಗಂಧ ಸುಮಾರು ಹತ್ತು ಅಡಿಗಳಷ್ಟು ಎತ್ತರಕ್ಕೆಬೆಳೆದು ನಿಂತಿತ್ತು. ಅಷ್ಟು ಹುಲುಸಾಗಿ ಬೆಳೆದಿದ್ದ ಶ್ರೀಗಂಧದ ಗಿಡಗಳ ವೀಕ್ಷಣೆ ಮಾಡುವುದನ್ನು ಬಿಟ್ಟು, ತೋಟದ ನೀರಿನ ಮೂಲವನ್ನು ಹುಡುಕತೊಡಗಿದ್ದೆ. ಊಹುಂ… ಕುತೂಹಲವನ್ನು ತಡೆಯಲಾರದೆ, ‘ಬಿನಾ ಪಾನಿ ಯೇ ಸಬ್ ಕೈಸಾ ಹೋ ಸಕತಾ ಹೈ’ (ನೀರೇ ಇಲ್ಲದೆ ಇದೆಲ್ಲ ಹೇಗೆ ಸಾಧ್ಯವಾಗತ್ತೆ) ಅಂತ ಕೇಳಿದ್ರೆ ನನ್ನ ಮುಂದೊಂದು ಅದ್ಭುತವನ್ನೇ ತೆರೆಸಿದ್ದಳು; ಆ ಪುಣ್ಯಾತ್ಮೆ ಅಜ್ಜಿ! ಆಕೆ ತುಸು ನಗುತ್ತಾ, ಗಿಡಗಳ ಸುತ್ತ ಮಾಡಿದ್ದ ಮುಚ್ಚಿಗೆಯನ್ನು ಎತ್ತಿ ತೋರಿಸಿದ್ದಳು. ಆಮುಚ್ಚಿಗೆಯ ಒಳಗೆ, ಹೈವೇಗಳಲ್ಲಿ ಎಸೆದಿದ್ದ ನೀರಿನ ಬಾಟಲಿಗಳನ್ನು ಆಯ್ದು, ಒಂದು ಗಿಡಕ್ಕೆ ನಾಲ್ಕು ದಿಕ್ಕುಗಳಲ್ಲಿ ಹುಗಿದಿದ್ದಳು.
ತನ್ನ ಮೊಮ್ಮಕ್ಕಳ ಸಹಾಯದಿಂದ ವಾರಕ್ಕೊಮ್ಮೆ ಪಕ್ಕದ ಊರಿನಿಂದ ನೀರನ್ನು ತುಂಬಿಸಿ ಬಾಟಲಿಯ ಮೂಲಕ ಮರಗಳಿಗೆ ನೀರುಣಿಸುತ್ತಿದ್ದಳು. ವಾರಕ್ಕೊಮ್ಮೆಜೀವಾಮೃತ ವನ್ನು ನೀಡಿ ಸಲಹುತ್ತಿದ್ದಳು. ಆಕೆಯ ಪ್ರಾಚೀನ ತಂತ್ರಜ್ಞಾನವನ್ನು ನೋಡಿದ ನಾನು ಮಂತ್ರಮುಗ್ಧಳಾಗಿದ್ದೆ. ಅಷ್ಟೇ ಏಕೆ? ಮೂಕವಿಸ್ಮಿತಳಾಗಿದ್ದೆ.