ಬ್ರಹ್ಮನಿಗೇಕೆ ಗುಡಿಯಿಲ್ಲ: ಅಷ್ಟಕ್ಕೂ ಯಾರು ಈ ನಾದ ಬ್ರಹ್ಮನೆಂಬುದು ?
ಸಕಾಲಿಕ
ಅರವಿಂದತಯನ
ಇತ್ತೀಚೆಗೆ ನಾದಬ್ರಹ್ಮ, ಬ್ರಾಹ್ಮಣ, ಮನುವಾದಿ ಇತ್ಯಾದಿ ಪದಗಳು ಸುದ್ದಿವಾಹಿನಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅತಿ ಯಾಗಿ ಪ್ರಯೋಗವಾಗುತ್ತಿವೆ. ಬ್ರಹ್ಮ, ಬ್ರಾಹ್ಮಣ ಎಂಬ ವಿಚಾರದಲ್ಲಿ ಸಿಕ್ಕಸಿಕ್ಕ ಜನರೆಲ್ಲ ತಮಗೆ ತೋಚಿದಂತೆ ಅರಚುತ್ತಿದ್ದಾರೆ.ಬ್ರಹ್ಮ ಎಂಬುದನ್ನು ತಿಳಿಯಬೇಕು. ನಾದಬ್ರಹ್ಮ, ಸ್ವರಬ್ರಹ್ಮ, ಶಬ್ದಬ್ರಹ್ಮ ಎಂಬ ಪ್ರಯೋಗಗಳು ನಮಗೆ ಸಾಕಷ್ಟು ಬರಹಗಳಲ್ಲಿಕಾಣಸಿಗುತ್ತದೆ ಮತ್ತು ಕೇಳಸಿಗುತ್ತದೆ.
ಬ್ರಹ್ಮಪದವು ಸೃಷ್ಟಿಕರ್ತ  ಎಂಬ ಆಂಗ್ಲಪದಕ್ಕೆ ಸಮಾನಾಂತರವಾಗಿ ಪ್ರಯೋಗ ವಾಗುತ್ತದೆ. ಏನು ಈ ಬ್ರಹ್ಮ, ಇದನ್ನು ತಿಳಿಯಲು ಅರಿಯಲು ಶತಮಾನಗಳಿಂದ ಚಿಂತಕರು, ದಾರ್ಶನಿಕರು ಪಡಬಾರದ ಪಾಡು ಪಟ್ಟಿದ್ದಾರೆ. ತಮ್ಮ ಚಿಂತನೆಯಿಂದ ಗೋಚರವಾದುದ್ದನ್ನು ದಾಖಲಿಸಿದ್ದಾರೆ. ಈ ಬ್ರಹ್ಮನನ್ನು ತಿಳಿಯುವ ಪ್ರಯಾಸದಿಂದ ಅನೇಕಮತಗಳು ಎಂದರೆ ಅಭಿಪ್ರಾಯ ಗಳು ಹುಟ್ಟಿಕೊಂಡಿವೆ. ಹಾಗೆಯೇ ಈ ಮತಗಳಿಗೆ ಪರ, ವಿರೋಧ ವ್ಯಾಖ್ಯಾನಗಳೂ ಹುಟ್ಟಿಕೊಂಡಿವೆ. ಬ್ರಹ್ಮಋಷಿ, ಬ್ರಹ್ಮ ಜ್ಞಾನಿ ಎಂಬ ಪದಗಳೂ ವಿಶೇಷಣ ರೂಪದಲ್ಲಿ ಜ್ಞಾನಿ, ಚಿಂತಕರಿಗೆ ಅನ್ವಯಿಸಿ ಅವರನ್ನುಸಂಭೋದಿಸುವ ಸಂಪ್ರದಾಯ ಸಹ ನಮ್ಮಲ್ಲಿದೆ.
ಸಹಜವಾಗಿಯೇ ಈ ಬ್ರಹ್ಮ ಎಂಬುದು ಕುತೂಹಲವನ್ನೂ ಚಿಂತನೆಯನ್ನೂ ಉಂಟು ಮಾಡಿ ನಮ್ಮನ್ನು ಅಧ್ಯಯನ ಮತ್ತು ಜಿಜ್ಞಾಸೆಗೆ ಒಳಪಡಿಸುತ್ತದೆ. ಈ ಬ್ರಹ್ಮನನ್ನೇ ಅಲ್ಲವೇ ಜಗತ್ತಿನ ಎ ಅಧ್ಯಾತ್ಮಿಕ ಚಿಂತಕರೂ ಅರಸಿಕೊಂಡು ಹೋಗಿದ್ದು. ಅಂದರೆ ಬಾಹ್ಯದಲ್ಲಿ ಯಾವುದೋ ಬೆಟ್ಟವನ್ನು ಹತ್ತಿ ಕುಳಿತುಕೊಂಡೋ ಅಥವಾ ಯಾವುದೊ ಮರದ ಬುಡದಲ್ಲಿ ಕುಳಿತೋ ಬ್ರಹ್ಮನನ್ನು ಅರಿತರೇ? ಅದು ಹಾಗಲ್ಲ, ಪ್ರಶಾಂತ ವಾತಾವರಣದಲ್ಲಿ ಚಿಂತಿಸುವುದು, ಬ್ರಹ್ಮನನ್ನು ಕುರಿತು ಮನದಾಳದಲ್ಲಿ ವಿಚಾರ ಮಂಥನ ಮಾಡುವುದು, ಎಂಬುದನ್ನು ಸೂಚಿಸುವುದಕ್ಕಾಗಿಯೇ ಈ ಬೆಟ್ಟ, ಮರ, ಮುಂತಾದವುಗಳನ್ನುಸೂಚಿಸಿದ್ದಾರೆ.
ಮನದಾಳದಲ್ಲಿ ಆಳವಾದ ಅರ್ಥ ಪೂರ್ಣವಾದ ಮಂಥನ ಇಲ್ಲದೇ ಹೋದರೆ, ಬೆಟ್ಟದ ಮೇಲಿರುವ ಕಲ್ಲು ಬಂಡೆಗೂ, ಮರದಬುಡದ ತರಗಲೆಗೂ, ನಮಗೂ ವ್ಯತ್ಯಾಸವಿರುವುದಿಲ್ಲ. ಬ್ರಹ್ಮ ಎಂದರೆ ಇಷ್ಟೊಂದು ಕಠಿಣವಾದ, ಕ್ಲಿಷ್ಟವಾದ ವಿಚಾರ ಎಂಬು ದಂತೂ ತಿಳಿಯಬರುತ್ತದೆ. ಬ್ರಹ್ಮ ಎಂದರೆ ಏನು, ಅದರ ಸ್ವರೂಪ ಮತ್ತುಅರ್ಥ ಯಾವುದು ಎಂದು ಅರಿಯಲು ಸುಲಭ ಮಾರ್ಗ ಇಲ್ಲ. ಅವರವರ ಮನಃ ಪಟಲದಲ್ಲಿ ರೂಪುಗೊಂಡು ಬುದ್ಧಿಯಲ್ಲಿ ಗೋಚರವಾಗುವ ಒಂದು ರೂಪರಹಿತ ಪರಮ ಜ್ಞಾನ ಎಂದು ಸ್ಥೂಲವಾಗಿತಿಳಿದು ಕೊಳ್ಳಬಹುದು. ಈ ಬ್ರಹ್ಮನನ್ನು ನಾಲ್ಕು ಗೋಡೆಗಳ ಮಧ್ಯೆ ಕಟ್ಟಿ ಹಾಕಲು ಸಾಧ್ಯವಿಲ್ಲ. ಅದಲ್ಲದೇ ಬ್ರಹ್ಮ ಎಂದರೆ ಇದಿಷ್ಟೇ ಎಂದು ನಿರ್ದಿಷ್ಟವಾಗಿ ಹೇಳಲೂ ಸಹ ಅಸಾಧ್ಯ.
ಆದಿಶಂಕರರು ತಮ್ಮ ಆತ್ಮಬೋಧ ಎಂಬ ಕೃತಿಯಲ್ಲಿ ಬ್ರಹ್ಮ ಎಂದರೆ ಏನು ಎಂದು ಈ ಶ್ಲೋಕದಲ್ಲಿ ಹೀಗೆ ಹೇಳಿದ್ದಾರೆ:ಯಭಾನ್ನ ಪರಂ ಲಾಭೋ ಯತ್ಸುಖಾನ್ನಾ ಪರಂ ಸುಖಂ|ಯಜ್ಞಾನಾನ್ನಾ ಪರಂಜ್ಞಾನಂತದ್ ಬ್ರಹ್ಮೇತ್ ಅವಧಾರೆಯೇತ್||ಯದೃಷ್ಟ್ವಾನಾ ಪರಂದೃಶ್ಯಂ ಯದ್ಭೂತ್ವಾನಪುನರ್ಭವಃ|ಯಜ್ಞಾತ್ವಾನಾ ಪರಂ ಜ್ಞಾಯಂತದ್‌ಬ್ರಹ್ಮೇತ್ಅವಧಾರೆಯೇತ್||ಬ್ರಹ್ಮ ಎಂದರೆ ಯಾವುದನ್ನೂ ಹೇಳುತ್ತಾರೆ ಅಂದರೆ, ಎಲ್ಲ ಲಾಭಗಳಿಗಿಂತ ಮಿಗಿಲಾದ ಲಾಭ ಬೇರೊಂದಿಲ್ಲವೋ, ಅಂದರೆ ಅದನ್ನು ಪಡೆದ ಮೇಲೆ, ಪಡೆಯಲು ಬೇರೋಂದಿಲ್ಲವೋ, ಯಾವ ಸುಖವನ್ನು ಅನುಭವಿಸಿದರೆ ಬೇರೊಂದು ಸುಖವೆಂಬುದುಇಲ್ಲವೋ, ಯಾವ ಜ್ಞಾನವನ್ನು ಹೊಂದಿದ ಮೇಲೆ ಬೇರೊಂದು ಜ್ಞಾನವಿಲ್ಲವೋ,ಯಾವುದನ್ನು ನೋಡಿದ ಮೇಲೆ ಅದಕ್ಕಿಂತ ಬೇರೆ ನೋಟವಿರುವುದಿಲ್ಲವೋ, ಯಾವುದು ಗೋಚರಿಸಿದರೆ ಪುನಃ ಗೋಚರಿಸುವುದಿಲ್ಲವೋ ಯಾವುದನ್ನು ತಿಳಿದರೆ ಮತ್ತೇನ ನ್ನೂ ತಿಳಿಯಬೇಕಿಲ್ಲವೋ, ಅದು ಬ್ರಹ್ಮ ಹೀಗಿರುವಾಗ ಬ್ರಹ್ಮನಿಗೆ ಗುಡಿ ಯಾವುದು, ಪೂಜೆ ಯಾವುದು? ಗೋಪುರ, ಕಳಶ, ಗರ್ಭ ಗುಡಿಗೆ ಒಳ ಪಡುವವನಲ್ಲ ಬ್ರಹ್ಮ.
ತೆಂಗಿನ ಕಾಯಿ ಕರ್ಪೂರ ಹಣ್ಣುಗಳಿಗೆ ಒಲಿಯುವವನಲ್ಲ ಬ್ರಹ್ಮ. ಹಾಡು ಹಸೆ ಭಜನೆಗೆ ಕರಗುವವನೂ ಅಲ್ಲ, ಪಂಥಾಚರಣೆ ಗಳಿಗೂ, ಕಟ್ಟುಪಾಡುಗಳಿಗೂ ಒಳಪಡುವುವವನಲ್ಲ. ಬ್ರಹ್ಮನೆಂದರೆ ಅಂತರ್ಮುಖಿಯಾಗಿ ಮಂಥನ ಚಿಂತನಗಳಿಂದ ಮನಃ ಪಟಲದಲ್ಲಿ ದರ್ಶನ ಮಾಡಲು ಮಾತ್ರ ಸಾಧ್ಯ. ಪದಪದ್ಯಗಳಿಂದ ವರ್ಣಿಸಲಂತೂ ಸಾಧ್ಯವೇ ಇಲ್ಲ. ಬ್ರಹ್ಮಸಾಕ್ಷಾತ್ಕಾರದ ಮೇಲೆ ಬೇರೇನೂ ಬೇಕಿಲ್ಲ.
ಈ ಧರ್ಮ ಸೂಕ್ಷ್ಮವನ್ನು ಪಾಮರರಿಗೆ ತಿಳಿಸಲು ಬ್ರಹ್ಮನಿಗೆ ಗುಡಿ, ಪೂಜೆ, ಪುನಸ್ಕಾರಗಳಿಲ್ಲ ಎಂದು ಪುರಾಣಕಥೆಗಳ ಮೂಲಕ ಮಾರ್ಮಿಕವಾಗಿ ತಿಳಿಸಿದ್ದಾರೆ. ಬ್ರಹ್ಮನನ್ನು ಅರಿತವನು ಮಾತ್ರ ಬ್ರಾಹ್ಮಣ. ಕೇವಲ ಜನ್ಮದಿಂದ ಯಾರೂ ಬ್ರಾಹ್ಮಣರಾಗಿ ಹುಟ್ಟುವುದಿಲ್ಲ. ಬ್ರಾಹ್ಮಣತ್ವವನ್ನು ಚಿಂತನೆಯಿಂದ, ಆಚರಣೆಯಿಂದ, ನಿಷ್ಠೆಯಿಂದ ಪಡೆಯಬೇಕು. ವರ್ಣವು ಜನ್ಮ ನಿರ್ಧಾರಿತವಲ್ಲ, ಕರ್ಮ ನಿರ್ಣೀತವೆಂದು ಡಾ||ವಿ.ಕೃ.ಗೋಕಾಕರು ತಮ್ಮ ಭಾರತ ಸಿಂಧು ರಶ್ಮಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಆದರೆ ವರ್ಣ ಜನ್ಮನಿರ್ಧಾರಿತವಾಗಿ ಬಿಟ್ಟಿದ್ದು ನಮ್ಮ ಸಮಾಜದ ದುರ್ವಿಧಿ. ಇನ್ನು ನಾದಬ್ರಹ್ಮ ಎಂದರೆ ಏನು ಎಂಬ ವಿಚಾರಕ್ಕೆಬಂದರೆ, ಇಡೀ ವಿಶ್ವಕ್ಕೆ ಅಸಲಿ ನಾದಬ್ರಹ್ಮ ಎಂದರೆ ಅದು ಪರಮಶಿವ ಮಾತ್ರ. ಇದರ ಕುರಿತಾಗಿ ತಮಿಳುನಾಡಿನಲ್ಲಿ ಒಂದು ಸಂಗತಿಯನ್ನು ಪುರಾಣ ಪ್ರವಚನಗಳಲ್ಲಿ ಉಲ್ಲೇಖಿಸುತ್ತಾರೆ.
ಅದು ಹೀಗಿದೆ: ಮಧುರೆಯಲ್ಲಿ ಸುಂದರೇಶ್ವರ ಮತ್ತು ಮೀನಾಕ್ಷಿ ದೇವಿಯ ಕಲ್ಯಾಣ ವಿಜೃಂಭಣೆಯಿಂದ ಏರ್ಪಾಟಾಗಿದೆ. ನಾರದ ಮಹಾಮುನಿಯೇ ಮುಖ್ಯಪುರೋಹಿತ. ಮದುವೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳೂ ಬಹಳ ಅಚ್ಚುಕಟ್ಟಾಗಿ ನೆರವೇರು ತ್ತಿರುವಾಗ ಕನ್ಯಾದಾನ / ಧಾರೆಯ ಸಂಧರ್ಭದಲ್ಲಿ ನಾರದ ಮುನಿಯು ವರನ ಗೋತ್ರವೇನು ಎಂದು ಕೇಳುತ್ತಾನೆ.
ಅಲ್ಲಿ ನೆರೆದಿದ್ದ ದೇವಾದಿ ದೇವರುಗಳು ಮತ್ತು ಇತರ ಸಂತ ಮಹಾಶಯರುಗಳು ತಬ್ಬಿಬ್ಬಾಗಿ ಬೆಪ್ಪುಬೆಪ್ಪಾಗಿ ಒಬ್ಬರನ್ನೊಬ್ಬರು ನೋಡುತ್ತಾ ನಿಂತು ಬಿಡುತ್ತಾರೆ. ಆಗ ಅಲ್ಲಿದ್ದ ಒಬ್ಬ ಸಂತ ನಾದ ಬಿಂದು ಕಲಾದಿ ನಮೋ ನಮ ವೇದ ಮಂತ್ರ ಸ್ವರೂಪ ನಮೋ ನಮಃ ಎಂದು ಸುಶ್ರಾವ್ಯವಾಗಿ ಹಾಡಲು ಪ್ರಾರಂಭ ಮಾಡಿದಾಗ, ನಾರದಮುನಿ ಆಹಾ ವರನ ಗೋತ್ರ ತಿಳಿಯಿತು ನಾದವೇ ಪರಮಶಿವನ ಗೋತ್ರ, ಎಂದು ಮದುವೆಯನ್ನು ಮುಂದುವರಿಸಿ ಮೀನಾಕ್ಷಿ ಕಲ್ಯಾಣ ವನ್ನು ನೆರವೇರಿಸುತ್ತಾನೆ.
ಅಂದರೆ ನಾದವೇ ಶಿವನ ಗೋತ್ರ-ಸೂತ್ರ ಎಲ್ಲ. ಅವನೇ ನಾದಬ್ರಹ್ಮ. ಬೇರಾರೂ ನಾದ ಬ್ರಹ್ಮರಾಗಲು ಸಾಧ್ಯವಿಲ್ಲ. ಆ ರೀತಿ ಯಾದ ಬಿರುದನ್ನೂ ತಮ್ಮ ಹೆಸರಿನ ಹಿಂದೆ ಬರೆದುಕೊಂಡರೆ ಅಥವಾ ಆ ರೀತಿ ಸಂಭೋದಿಸಲು ಅನುಮತಿಸಿದವರೆ ಅಸಲಿನಾದ ಬ್ರಹ್ಮ ಅಲ್ಲ. ಬರೀ ನಕಲಿ ಕಸುಬು ಕಲಿತವರು ಎಂದು ಹೇಳಬೇಕಾಗುತ್ತದೆ. ನಾವು ನಮ್ಮ ಸಕಾರಾತ್ಮಕ ಚಿಂತನೆಯಿಂದ ಆ ಪರಮೇಶ್ವರನ ಅನಾಹತ ನಾದ ಬ್ರಹ್ಮನಲ್ಲಿ ತಲ್ಲೀನರಾಗೋಣ.