ವೈಕಲ್ಯವನ್ನೂ ಮೆಟ್ಟಿ ನಿಲ್ಲುವ ವಿಶೇಷ, ವಿರಾಟ್ ಚೇತನ
ತನ್ನಿಮಿತ್ತ
ಅನೀಶ್ ಬಿ.ಕೊಪ್ಪ
ವಿಶೇಷಚೇತನರಲ್ಲೂ ಅದಮ್ಯ ಚೈತನ್ಯವೊಂದು ಹುದುಗಿರುತ್ತದೆ. ಎಲ್ಲರೊಂದಿಗೆ ಸಮಾನ ಅವಕಾಶಗಳೊಂದಿಗೆ ಅವರನ್ನು ಮುನ್ನಡೆಸಿದಾಗ, ಅವರಿಂದಲೂ ಮಹತ್ತರ ಸಾಧನೆ ಹೊರ ಹೊಮ್ಮಬಲ್ಲದು. ಈ ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನ ವನ್ನು ಅವರಿಗಾಗಿ ಮೀಸಲಿಡಲಾಗುತ್ತದೆ.
ಆ ದಿನವೇ ಡಿಸೆಂಬರ್ 3.ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ದಿನವನ್ನು ವಿಶ್ವ ವಿಶೇಷ ಚೇತನರ ದಿನವನ್ನಾಗಿ ಆಚರಿಸ ಲಾಗುತ್ತದೆ. ವಿಶ್ವಸಂಸ್ಥೆಯು 1992ರಲ್ಲಿ ಈ ದಿನವನ್ನು ಆಚರಿಸಲು ಪ್ರಾರಂಭಿಸಿತು. ವಿಶೇಷಚೇತನರ ಪ್ರತಿಭೆಗಳ ಅನಾವರಣಕ್ಕೆ ದಿನದಲ್ಲಿ ಅನೇಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜತೆಗೆ ಅವರ ಸ್ವಾವಲಂಬನೆ ಮತ್ತು ಯೋಗ ಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತವೆ.
ದಿವ್ಯಾಂಗರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಜನಜಾಗೃತಿ ಮೂಡಿಸಲಾಗುತ್ತದೆ. ಪ್ರತಿ ವರ್ಷವೂ ವಿಶೇಷ ಧ್ಯೇಯ ಇಟ್ಟು ಕೊಂಡು ಕಾರ್ಯಕ್ರಮಗಳ ಆಯೋಜನೆ ನಡೆಯುತ್ತದೆ. ಸಮಾಜದ ಎಲ್ಲ ಜನರಿಗೂ ಸಿಗುವ ಸೌಲಭ್ಯ ಮತ್ತು ಅವಕಾಶಗಳು ಇವರಿಗೂ ಸಿಗುವಂತಾಗಬೇಕು ಎಂಬುದು ಈ ದಿನಾಚರಣೆಯ ಸದುದ್ದೇಶ.
‘ನಾನೇನಾದರೂ ಒಂದು ಸಾಧಿಸಬೇಕು. ಈ ಭುವಿಯಲ್ಲಿ ಒಬ್ಬ ಮನುಜನಾಗಿ ಹುಟ್ಟಿ ದ್ದಕ್ಕೆ, ಸಾರ್ಥಕ ಹೆಜ್ಜೆ ಗುರುತುಗಳನ್ನು ಪಡಿ ಮೂಡಿಸಬೇಕು’ ಎಂಬ ತುಡಿತ ಇರುವ ವರಿಗೆ ಯಾವುದೇ ಅಡ್ಡಿ ಆತಂಕಗಳೆದುರಾದರೂ ಸಮರ್ಥವಾಗಿ ಮುನ್ನಡೆಯಬಲ್ಲರು. ಶರೀರದಲ್ಲಿ ಹುಟ್ಟಿನಿಂದಲೇ ಕೆಲ ವೊಂದು ವೈಕಲ್ಯ ಅಥವಾ ಆಕಸ್ಮಿಕ ಅವಘಡಗಳಲ್ಲಿ ದೇಹದಲ್ಲಾಗುವ ಊನಗಳನ್ನು ಸಕಾರಾ ತ್ಮಕವಾಗಿ ತೆಗೆದುಕೊಂಡು, ಸಾಧನೆಯ ಶಿಖರವ್ನೇರಿದ ಅನೇಕ ಉದಾಹರಣೆಗಳು ನಮ್ಮಲ್ಲಿವೆ.
ಕೆಲವೊಮ್ಮೆ ಆಕಸ್ಮಿಕ ಅನಾಹುತಗಳು ಕೆಲವರನ್ನು ವಿಶೇಷ ಚೇತನರನ್ನಾಗಿ ಮಾಡುತ್ತವೆ. ಅಂತಹವರಿಗೆ ಜೀವನದ ಎಲ್ಲ ಸಾಧ್ಯತೆಗಳೂ ಕಮರಿಹೋದವೆಂದು ಸಾಮಾನ್ಯರು ಯೋಚಿಸುತ್ತಾರೆ. ಆದರೆ, ಅಂತಃಶಕ್ತಿ ಮತ್ತು ಆತ್ಮವಿಶ್ವಾಸಗಳೆಂಬ ಅದಮ್ಯ ಶಕ್ತಿ ಗಳಿದ್ದರೆ ಎಂತಹ ವೈಕಲ್ಯಗಳನ್ನೂ ಕೂಡ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಅರುಣಿಮಾ ಸಿನ್ಹಾ ಅವರೊಂದು ಉತ್ತಮ ಉದಾಹರಣೆ.
೨೦೧೧ರಲ್ಲಿ ಕೆಲವು ದರೋಡೆಕೋರರು ಅರುಣಿಮಾರನ್ನು ಚಾಲನೆಯಲ್ಲಿದ್ದ ರೈಲಿನಿಂದ ತಳ್ಳಿದ ಪರಿಣಾಮ, ಅವರ ಎಡಗಾಲನ್ನು ಮೊಣಕಾಲಿನ ಕೆಳಗೆ ಕತ್ತರಿಸಬೇಕಾಯಿತು. ತದನಂತರ ಕೂಡ ಅವರು ತಮ್ಮ ಸತತ ಪರಿಶ್ರಮ ಮತ್ತು ಸಾಧಿಸುವ ಛಲದಿಂದ ಸಾಗಿದ ಫಲವಾಗಿ, ಪ್ರತಿ ಖಂಡದ ಅತ್ಯುನ್ನತ ಶಿಖರಗಳನ್ನು ಏರಿ, ಭಾರತದ ರಾಷ್ಟ್ರೀಯ ಧ್ವಜವನ್ನು ಆ ಶಿಖರಗಳ  ತುತ್ತತುದಿಯಲ್ಲಿ ಹಾರಿಸುವ ಅವರ ಕನಸನ್ನು ನನಸಾಗಿಸಿಕೊಂಡರು. ಅರುಣಿಮಾರಂತಹ ದಿಟ್ಟ ಎದೆಗಾರಿಕೆ ಎಲ್ಲರಲ್ಲೂ ಬೆಳೆಸಿಕೊಂಡಾಗ ಮಾತ್ರ, ಸಾಧನೆಯ ಎವರೆಸ್ಟ್ ಅನ್ನು ಏರಲು ಸಾಧ್ಯ.
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವು7ಪದಕಗಳನ್ನು ಜಯಿಸಿದ ಹೆಮ್ಮೆಯ ಮುಕುಟಗರಿಯ ಜತೆಗೆ, ಇತ್ತೀಚೆಗಷ್ಟೇ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು19ಪದಕಗಳಿಗೆ ಕೊರಳೊಡ್ಡಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ. ದೈಹಿಕ ನ್ಯೂನತೆಯನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳದೆಯೇ, ಸಕಾರಾತ್ಮಕವಾಗಿ ಮುನ್ನುಗ್ಗಿ, ಪ್ಯಾರಾಲಿಂಪಿಕ್ಸ್‌ನಂತಹ ಅಗ್ರ ಕ್ರೀಡಾಕೂಟದಲ್ಲಿ ಪದಕದ ಬೇಟೆಯಾಡುವುದೆಂದರೆ ಅದೊಂದು ಸುಲಭದ ಮಾತೇ!? ಖಂಡಿತವಾಗಿಯೂ ಅಲ್ಲ.
ಈ ಬಾರಿಯ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳಿಗೆ ಮುತ್ತಿಕ್ಕಿದ ನಮ್ಮ ಕ್ರೀಡಾಪಟುಗಳು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಮುಖಾಂತರ ದೇಶಕ್ಕೆ ಹೆಮ್ಮೆ ಮೂಡಿಸಿದ್ದಾರೆ. ಸಾಧನೆಗೆ ಅಸಾಧ್ಯವಾದುದು ಯಾವುದೂಇಲ್ಲವೆಂಬು ದನ್ನು ತಮ್ಮ ಸಾಧನೆಯ ಮೂಲಕ ಸಾಬೀತು ಪಡಿಸಿದ್ದಾರೆ. ಇತರರಿಗೆ ಸೂರ್ತಿಯ ಕಿರಣ. ಕ್ರೀಡೆ ಮಾತ್ರವಲ್ಲದೆಯೇ, ಪ್ರತಿ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿಯಂತಹ ಪಬ್ಲಿಕ್ ಪರೀಕ್ಷೆಗಳ ಫಲಿತಾಂಶ ಬಂದಾಗ, ಸಾಮಾನ್ಯ ವಿದ್ಯಾ ರ್ಥಿಗಳ ಸಾಧನೆಗೆ ಸರಿಸಾಟಿಯಾಗಿ ನಿಲ್ಲುವ ಹುಮ್ಮಸ್ಸಿನಿಂದ, ಕೈಗಳಿಲ್ಲದಿದ್ದರೂ ಕಾಲಿನಿಂದ ಪರೀಕ್ಷೆ ಬರೆದು, ಕಣ್ಣಿಲ್ಲದಿದ್ದರೂ ಬೇರೆಯವರಿಂದ ಬರೆಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ಅಸಾಧಾರಣ ವಿಶೇಷಚೇತನರು ನಮ್ಮ ನಡುವೆಯೇ ಇದ್ದಾರೆ ಎಂಬುದು ವಿದ್ಯಾರ್ಥಿಗಳೆಲ್ಲರಿಗೂ ಪ್ರೇರಣಾ ದೀವಿಗೆಯೇ ಸರಿ.
ಜಗದ ಸೌಂದರ್ಯವನ್ನು ತಮ್ಮ ಕಣ್ತುಂಬಿಕೊಳ್ಳಲಾಗದಿದ್ದರೂ, ಸಂಗೀತ ಶಾರದೆಯನ್ನು ಹೃದಯದ ಕಣ್ಣುಗಳಲ್ಲಿಯೇ ಆರಾಧಿಸಿ, ಗಾಯನ ಲೋಕದಲ್ಲಿ ನಕ್ಷತ್ರದಂತೆ ವಿರಾಜಮಾನರಾಗಿ ಮಿನುಗಿದ ಪುಟ್ಟರಾಜ ಗವಾಯಿಗಳಂತಹ ಗಾನಗಾರುಡಿಗರು ನಮ್ಮ ಆಂತರ್ಯದ ಕಣ್ಣನ್ನು ತಮ್ಮ ಗಾಯನದ ಮೂಲಕ ತೆರೆಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ‘ವಿಶೇಷ ಚೇತನ ಮಕ್ಕಳು ಮನೆಯಲ್ಲಿದ್ದರೇ ಒಳಿತು. ಅವರನ್ನು ಸಮಾಜದ ಮುಂದೆ ತೆರೆದಿಟ್ಟರೆ ಮುಂದೆ ಸಮಾಜವು ನಮ್ಮನ್ನು ಕೀಳಾಗಿ ನೋಡ ಬಹುದೇನೋ’ ಎಂಬ ಅಂಜಿಕೆಯುಳ್ಳ ಕೆಲವು ವಿಶೇಷ ಚೇತನ ಮಕ್ಕಳ ಪೋಷಕರು ಕೂಡ ನಮ್ಮ ನಡುವೆಯೇ ಇರುವುದನ್ನೂ ಕಾಣುತ್ತೇವೆ.
ಆದರೆ, ಸೊರಗುತ್ತಿರುವ ಗಿಡವೊಂದಕ್ಕೆ ಪೌಷ್ಟಿಕಾಂಶವನ್ನು ಕೊಟ್ಟರೆ ಅದು ಸತಲವನ್ನು ನೀಡುವಂತೆ, ಮನೆಯವರ ಸಹಕಾರ, ಸೂಕ್ತ ಮಾರ್ಗದರ್ಶನ, ಆತ್ಮವಿಶ್ವಾಸ ಮತ್ತು ದೃಢತೆಗಳೆಂಬ ವಿರಾಟ್ ಶಕ್ತಿಗಳಿದ್ದರೆ ವಿಶೇಷ ಚೇತನರು ಕೂಡ ಸೋಲನ್ನೇ ಸೋಲಿಸಬಹುದಾದ ಚೈತನ್ಯದ ಚಿಲುಮೆಗಳಾಗಿ ಪುಟಿದೇಳ ಬಹುದು. ಮಾನವ ಶಕ್ತಿಯ ಅತ್ಯುನ್ನತ ಸಾಮರ್ಥ್ಯವನ್ನು ಹೊರ ಹಾಕುವ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಧನಾತ್ಮಕ ಹೆಜ್ಜೆಯನ್ನಿಡುವಂತಾಗಬೇಕಿದೆ.
ವಿಶ್ವ ಅಂಗ ವಿಕಲರ ದಿನಾಚರಣೆಯ ಸುಸಂದರ್ಭದಲ್ಲಿ ವಿಕಲ ಚೇತನರ ಸಾಧನೆಗೆ ಬೆನ್ನೆಲುಬಾಗಿ ನಿಂತು, ಸಾಧನೆಯನ್ನು ಬೆನ್ನು ತಟ್ಟುವ ದೃಢ ಸಂಕಲ್ಪವನ್ನು ನಾವು ತೊಡುವತ್ತ ಚಿತ್ತ ಬೆಳೆಸಬೇಕಿದೆ.