ರ‍್ಯಾಲಿಗಳಿಗಿಲ್ಲದ ಭಯ ಅಧಿವೇಶನಕ್ಕೇಕೆ ?
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@.
ಯುದ್ಧ ಭೂಮಿಯಲ್ಲಿ ರಾಜ ಮತ್ತು ಸೇನಾಧಿಪತಿಯೇ ಎದುರಾಳಿ ಸೈನ್ಯವನ್ನು ನೋಡಿ ಕಂಗಾಲಾಗಿ ಕೂತರೆ ಸೈನಿಕರ ಗತಿಯೇನು? ಸುರಕ್ಷಿತ ಕ್ರಮಗಳೊಂದಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಪ್ರಜೆಗಳಲ್ಲಿ ಆತ್ಮವಿಶ್ವಾಸ ತುಂಬ ಬೇಕಾದ ಹೊಣೆಗಾರಿಕೆ ಆಡಳಿತ ಯಂತ್ರಕ್ಕಿದೆ.
ರಾಜ್ಯವನ್ನು ಆಳಬೇಕೆಂದರೆ ಪ್ರಜಾಪ್ರತಿನಿಧಿಗಳು ಸದೃಢವಾಗಿರಬೇಕು. ದೇಶಕ್ಕೆ ರಾಜ್ಯಕ್ಕೆ ಎಂಥ ಪರಿಸ್ಥಿತಿ ಎದುರಾದರೂ ದಿಟ್ಟವಾಗಿ ಎದುರಿಸಬೇಕಾದ ಮೊದಲಿಗರವರು. ಶಾಲೆಯಲ್ಲಿ ಎಂಥ ಅಪಾಯ ಬಂದರೂ ಶಿಕ್ಷಕರು ನಿವಾರಿಸಿಬಿಡುತ್ತಾರೆ ಎಂಬ ನಂಬಿಕೆ ಮಕ್ಕಳಲ್ಲಿ ಇರುತ್ತದೆಯಲ್ಲವೇ ಅಂಥದೇ ನಂಬಿಕೆಸಮಾಜದ ಪ್ರಜೆಗಳಲ್ಲಿವೆ. ಪ್ರವಾಹ, ನೆರೆ ಬರ ಭೂಕಂಪ ಸಾಂಕ್ರಾಮಿಕವಾಗಿ ನಾಡಿನ ಪ್ರಜೆಗಳು ಕೆಂಗೆಟ್ಟು ಕುಳಿತಾಗ ಆ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ನೊಬ್ಬ ಕೂಡಲೇ ಧಾವಿಸಿ ಅವರೊಂದಿಗೆ ನಿಂತಾಗ ಆ ಜನಗಳಿಗೆ ಸಿಗುವ ಒಂದು ಧೈರ್ಯ ಭರವಸೆ ವಿಶ್ವಾಸವಿದೆಯ ಅದು ಆ ಕ್ಷಣಕ್ಕೆ ಬೇಕೇಬೇಕು. ಒಂದೊಮ್ಮೆ ತಾನು ನಂಬಿರುವ ಆ ದೊಡ್ಡ ಮನುಷ್ಯ ಸ್ಥಳಕ್ಕೆ ಧಾವಿಸದೇ ಅಸಡ್ಡೆ ತೋರಿದರೆ ಅದಕ್ಕಿಂತ ದೊಡ್ಡ ಹೊಣೆ ಗೇಡಿತನ ಬೇರೊಂದಿಲ್ಲ.
ಹೀಗಿರುವಾಗ ಮಂತ್ರಿಗಳು ಶಾಸಕರು ಸಂಸದರು ಬಂದು ಅವರ ಕಷ್ಟಕಾರ್ಪಣ್ಯವನ್ನು ಆಲಿಸಿದರಂತೂ ಆ ನಾಗರಿಕರಿಗಾಗುವ ಸಮಾಧಾನದಂಥ ಸಾರ್ಥಕ ಕ್ಷಣ ಮತ್ತೊಂದಿಲ್ಲ. ಕಳೆದ ಎರಡು ವರ್ಷಗಳಿಂದ ಕರೋನಾ ಕಂಟಕದಿಂದಾಗಿ ಬಹುಪಾಲು ಜನಪ್ರತಿನಿಧಿಗಳು ಜನರೊಂದಿಗೆ ನಿಂತು ಅವರಿಗೆ ಆತ್ಮವಿಶ್ವಾಸ ತುಂಬವ ಕೆಲಸವನ್ನು ಮಾಡಲೇ ಇಲ್ಲ. ಅಗತ್ಯಕ್ಕಿಂತ ಹೆಚ್ಚು ಕ್ವಾರೆಂಟೈನ್ ಆಗಿ ಅವಿತುಕೊಂಡಿದ್ದೇ ಹೆಚ್ಚು. ಅದರಲ್ಲೂ ಈ ವರ್ಷದ ಏಪ್ರಿಲ್ ನಂತರದ ಭಯಾನಕ ಸರಣಿ ಸಾವುನೋವು ಗಳಿವೆಯಲ್ಲ ಅಂಥ ಸಂದರ್ಭದಲ್ಲಿ ಜನಪ್ರತಿ ನಿಧಿಗಳಿಗೆ ಜನಗಳು ಹಾಕಿದ ಶಾಪ ಅಷ್ಟಿಷ್ಟಲ್ಲ. ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜನರನ್ನು ಜಾಗೃತಿ ಮೂಡಿಸಲು ಪೊಲೀಸರಿಗಂತೂ ಸಾಕುಬೇಕಾಯಿತು.
ಸರಕಾರದ ಪ್ರಮುಖ ಇಲಾಖೆಯ ಒಂದೈದು ಮಂತ್ರಿಗಳ ಜತೆಗೆ, ತನ್ನ ಕ್ಷೇತ್ರದ ಜನಗಳಿಗಾಗಿ ಬೀದಿಗಿಳಿದು ಸ್ವತಃ ಆಂಬುಲೆನ್ಸ್ ಚಾಲನೆ ಮಾಡಿ, ಕರೋನಾಸೋಂಕಿತರೊಂದಿಗೆ ಕುಣಿದಾಡಿ ಆತ್ಮಸ್ಥೈರ್ಯ ತುಂಬವಂಥ ಪ್ರಜ್ಞಾಪೂರ್ವಕ ನಡೆ ತೋರಿದ ರೇಣುಕಾಚಾರ್ಯರಂಥ ಶಾಸಕರನ್ನು ಹೊರತುಪಡಿಸಿದರೆ ಇನ್ನೂಳಿದ ಶಾಸಕರು ಸಂಸದರು ತಲೆಮರೆಸಿಕೊಂಡಿದ್ದರು. ಚುನಾವಣಾ ಪ್ರಚಾರ ದಲ್ಲಿ ಬೀದಿಬೀದಿ ಮನೆಮನೆಗೆ ಸುತ್ತಿ ಪ್ರತಿಯೊಬ್ಬ ಮತದಾರನಿಗೂ ಕೈ ಮುಗಿದು ಕಾಲಿಡಿದು ಮತ ಭಿಕ್ಷೆ ಯಾಚಿಸಿ ಹೊರಡುವ ರಾಜಕಾರಣಿ ಅಥವಾ ಜನಪ್ರತಿನಿಧಿಗಳು ಇಂಥ ಸಂಕಟ ಸಮಯದಲ್ಲಿ  ನರಿಗೆ ಸ್ಪಂದಿಸದಿದ್ದರೆ ಊಟ ಕ್ಕಿಲ್ಲದ್ದು ಗೂಟಕ್ಕೆ ಯಾಕೆ ಎಂದು ಕೇಳುವಂತ್ತಾಗುತ್ತದೆ.
ಆಯ್ತು, ಕರೋನಾವನ್ನು ಹೇಗೋ ಎದುರಿಸಿ ಅದರೊಂದಿಗೆ ಬಡಿದಾಡುತ್ತ ಹೊರಬಂದದ್ದಾಯ್ತು. ಅಂದಿನ ಯಡಿಯೂರಪ್ಪನವರ ಸರಕಾರಕ್ಕೂ ಕರೋನಾ ದೊಡ್ಡ ಹೊಡೆತಗಳನ್ನೇ ನೀಡಿದ್ದವು. ಇದರ ಜತೆಯ ಪ್ರತಿಪಕ್ಷಗಳ ಆಕ್ರಮಣ, ಆಪಾದನೆ, ಸುದ್ದಿವಾಹಿನಿಗಳ ಸಮ್ಮೋಹನ, ತಮ್ಮವರನ್ನು ಕಳೆದುಕೊಂಡವರ ಆಕ್ರಂದನ, ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ಖಾಸಗಿ ಆಸ್ಪತ್ರೆಗಳ ದಬ್ಬಾಳಿಕೆ, ಶವಗಳನ್ನು ಸುಡಲೂ ಆಗದಂಥ ದಯನೀಯ ಸ್ಥಿತಿ ಇಡೀ ನಾಡನ್ನು ನರಕಸದೃಶ ಮಾಡಿತ್ತು. ಇನ್ನು ಸರಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಎರಡು ಮೂರು ಬಾರಿ ಸೋಂಕಿತರಾಗಿಯೂ ಗುಣಮುಖರಾಗಿದ್ದಲ್ಲದೇ, ಸಚಿವ ಸುಧಾಕರ್, ಶ್ರೀರಾಮುಲು, ಸೋಮಶೇಖರ್, ಸುರೇಶಕುಮಾರ್, ಸರಕಾರಿ ಅಧಿಕಾರಿಗಳು, ವೈದ್ಯರ ತಂಡ, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ಪೊಲೀಸ್,ಗೃಹದಳ ಹೀಗೆ ಎಲ್ಲರೂ ನಿರಂತರ ಕಾರ್ಯನಿರ್ವಹಿಸಿದ್ದರಿಂದ ಕರೋನಾ ಎರಡನೇ ಅಲೆಯನ್ನು ದಾಟಿ ಇಂದು ಎಂದಿನ ಸಹಜ ಜೀವನವನ್ನು ನಡೆಸು ವಂತಾಗಿದೆ.
ಆದರೆ ಇಂದು ಮೇಲಿನಂಥ ಯಾವ ಕೆಟ್ಟ ಪರಿಸ್ಥಿತಿಯೂ ಇಲ್ಲ. ದೇಶದ ಪ್ರಧಾನಿಗಳ ಬಲವಾದ ಇಚ್ಛಾಶಕ್ತಿಯಿಂದಾಗಿ ಸರಿಯಾದ ಸಮಯದಲ್ಲಿ ಲಸಿಕೆಗಳು ಸಂಶೋಧನೆಯಾಗಿ ಪ್ರಜೆಗಳಿಗೆ ನೀಡಿದ್ದರ ಪರಿಣಾಮವಾಗಿ ಜಾಹೀರಾತುಗೊಳ್ಳುತ್ತಿದ್ದ ‘ಮೂರನೇ ಅಲೆ’ ಸಧ್ಯಕ್ಕಂತೂ ಅಪ್ಪಳಿಸಿಲ್ಲ. ಆದರೆ ಒಮಿಕ್ರಾನ್ ಎಂಬ ತಳಿಯ ಕುರಿತು ಜಾಗೃತರಾಗಿರಬೇಕಿದೆ. ಹೀಗಿರುವಾಗ ಇಡೀ ರಾಜ್ಯದ ಏಳಿಗೆಗಾಗಿ ಪ್ರಜೆಗಳ ಉದ್ಧಾರಕ್ಕಾಗಿ ಆಡಳಿತದ ದಿಕ್ಸೂಚಿಗಾಗಿ ನಡೆಸಲಾಗುವ ‘ಪುಟ ಗೋಸಿ’ (ಎಚ್.ಡಿ. ರೇವಣ್ಣನವರ ಭಾಷೆ) ಹದಿನೈದು ದಿನಗಳ ವಿಧಾನಸಭಾ ಅಧಿವೇಶನವನ್ನು ನಡೆಸಲು ಕಳ್ಳನಿಗೊಂದು ಪಿಳ್ಳೆನೆಪ ಎಂಬಂತೆ ಕಳೆದ ಒಂದು ವಾರದಿಂದ ನಡೆಸಲು ಚೌಕಾಸಿ ಮಾಡುತ್ತಿರು ವುದು ನಿಜಕ್ಕೂ ನಾಚಿಗೇಡಿನ ವಿಷಯ.
ಒಂದು ಅಧಿವೇಶನ ನಡೆಯುತ್ತದೆಂದರೆ ಅದು ನಾಡಿನ ಮುಂದಿನ ದಿಕ್ಕನ್ನು ನಿರ್ಧರಿಸಿದಂತೆ. ಪ್ರತಿಯೊಬ್ಬ ಶಾಸಕನ ದನಿ ಇಲ್ಲಿ ಹೊರಬರಲೇ ಬೇಕು, ನಡೆಯು ತ್ತಿರುವ ಮತ್ತು ಮುಂದೆ ನಡೆಯಬೇಕಾದ ಸರಕಾರದ ನಡೆಗಳು ಆಡಳಿತದ ಕ್ರಮಗಳು ಇಲ್ಲಿ ನಿರ್ಧಾರವಾಗಿ ಮುಂದೆ ಸಾಗಬೇಕು. ಇದೊಂಥರಾ ಯುದ್ಧ ಭೂಮಿ ಯಲ್ಲಿ ಸೇನಾ ಮುಖ್ಯಸ್ಥರು ಅಧಿಕಾರಿಗಳು ತುರ್ತು ಸಭೆಯನ್ನು ನಡೆಸಿ ಮುಂದಿನ ರಣತಂತ್ರವನ್ನು ಸಜ್ಜುಗೊಳಿಸಿ ಮುನ್ನಡೆದಂತೆ. ಆದರೆ ‘ಅಯ್ಯೋ ಯುದ್ಧ ನಡೆಯೋದು ನಡೆಯುತ್ತದೆ. ನಾವುಗಳು ಸುರಕ್ಷತವಾಗಿದ್ದರೆ ಸಾಕು. ಬಡಿದಾಡುವವರು ಬಡಿದಾಡಿ ಸಾಯಲಿ’ ಎಂದು ಸೈನ್ಯಾಧಿಕಾರಿಗಳು ಕಚೇರಿ ಯೊಳಗೆ ಮನೆಯೊಳಗೆ ಕೂತರೆ ಏನಾಗುತ್ತದೆ ಹೇಳಿ.
ದೇಶದ ಭರವಸೆ ಸೈನ್ಯವಾಗಿದ್ದರೆ, ನಾಡಿನ ಭರವಸೆ ವಿಧಾನಸೌಧವಾಗಿರುತ್ತದೆ. ಪರೀಕ್ಷೆ ಬರೆಯಲು ಹೆದರಿ ಶಾಲೆಗೆ ಹೋಗುವುದಕ್ಕೆ ನೆಪ ಹೇಳುವ ಮಕ್ಕಳಂತೆ ಸೋಂಕಿನ ನೆಪವಿಟ್ಟುಕೊಂಡು ಜನಪ್ರತಿನಿಧಿಗಳು, ಸರಕಾರಿ ನೌಕರರು ಅಧಿವೇಶನವನ್ನೇ ರದ್ದುಗೊಳಿಸಿ ಕೂರುವುದು ಸಂವಿಧಾನಕ್ಕೆ ಮಾಡಿದ ಅಪಚಾರ ವಲ್ಲವೇ? ಅದರಲ್ಲೂ ನಾಡಿನ ಬಹುದೊಡ್ಡ ಪಾಲನ್ನು ಹೊಂದಿರುವ ಉತ್ತರ ಕರ್ನಾಟಕದ ಬೆಳಗಾವಿ ಅಽವೇಶನವಂತೂ ಇಂದು ಬಹಳ ಅನಿವಾರ್ಯವಿದೆ. ಈಗಾಗಲೇ ಬೆಳಗಾವಿ ಸೇರಿದಂತೆ ಅನೇಕ ಜಿಲ್ಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಭಾವನೆ ಆ ಭಾಗದ ಜನರಲ್ಲಿ ಮೂಡಿದೆ.
ಪ್ರತ್ಯೇಕ ಜಿಲ್ಲೆ ಪ್ರತ್ಯೇಕ ರಾಜ್ಯ ಎಂಬ ಅಸಮಾಧಾನದ ಕೂಗು ಆಗಾಗ ಕೇಳಿ ಬರುತ್ತಲೇ ಇದೆ.ಬರ ನೆರೆಪ್ರವಾಹದಿಂದ ಉತ್ತರಕರ್ನಾಟಕ ಬಹಳಷ್ಟು ನೊಂದಿದೆ. ಇಂಥದ್ದನೆಲ್ಲ ನಿಭಾಯಿಸಲೆಂದೇ ಬೆಳಗಾವಿಯಲ್ಲಿ ಮತ್ತೊಂದು ಆಡಳಿತದ ಭಾಗವಾಗಿ ಸುವರ್ಣಸೌಧವನ್ನು ನಿರ್ಮಿಸಲಾಯ್ತು. ಹೀಗಿರುವಾಗ ವರ್ಷಕ್ಕೆ ಒಂದುಅಧಿವೇಶನವನ್ನಾದರೂ ನಡೆಸಿ ಆ ಭಾಗದ ಜನತೆಯ ಜತೆ ಸರಕಾರ ಮತ್ತು ಆಡಳಿತ ಬಲವಾಗಿದೆ ಎಂಬ ಭರವಸೆಯನ್ನು ನೀಡಲೇಬೇಕಿದೆ.
ಇಂದು ಎದುರಾಗುತ್ತಿರುವ ವೈರಾಣುವನ್ನು ಎದುರಿಸುವ ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ಕೈಗೊಳ್ಳಲೇಬೇಕು. ಪ್ರತಿಯೊಬ್ಬ ನಾಗರಿಕರೂ ಎಚ್ಚೆತ್ತುಕೊಂಡು ಸುರಕ್ಷಿತ ಕ್ರಮಗಳನ್ನು ಅನುಸರಿಸಿ ತನ್ನನ್ನು ತಾನು ರಕ್ಷಿಸಿ ಕೊಳ್ಳಲೇಬೇಕು. ಸರಕಾರದ ಮಾರ್ಗಸೂಚಿಯಂತೆಯೇ ಎರಡು ಡೋಸ್‌ಗಳ ಲಸಿಕೆ ಪ್ರಮಾಣಪತ್ರ ತೋರಿಸಿ ಎರಡುವರೆ ಗಂಟೆ ಟಾಕೀಸಿನಲ್ಲಿ ಸಿನಿಮಾ ನೋಡಬಹುದು, ಶಾಲೆಯಲ್ಲಿ ಶಿಕ್ಷಕರು ಅದೇ ಪ್ರಮಾಣಪತ್ರ ಇಟ್ಟುಕೊಂಡು ಲಸಿಕೆಯಾಗದ ಮಕ್ಕಳನ್ನು ದಿನಕ್ಕೆ ಆರುಗಂಟೆಗಳ ಕಾಲ ಕೂರಿಸಿಕೊಂಡು ಪಾಠ ಮಾಡಬಹುದು, ತಿರುಪತಿಯಂಥ ಜನಜಾತ್ರೆಯಲ್ಲಿ ದೇವರ ದರುಶನ ಮಾಡಬಹುದು.
ಇಡೀದೇಶ ಸುತ್ತಾಡಬಹುದು. ಏನೂ ಇಲ್ಲದಿದ್ದರೂ ರಾಜಕೀಯ ಪಕ್ಷಗಳ ಸಭೆಗೆ, ಸಮಾವೇಶಕ್ಕೆ, ಚುನಾವಣಾ ಪ್ರಚಾರಕ್ಕೆ ಕುರಿಮಂದೆಯಂತೆ ಜನಗಳು ಸೇರ ಬಹುದು, ಜೈಕಾರ ಕೂಗಬಹುದು. ಕೆಲಸಕ್ಕೆ ಬಾರದ ಪ್ರತಿಭಟನೆಗಳನ್ನು ಮಾಡಬಹುದು. ಮದುವೆ-ಮುಂಜಿ, ಜನ್ಮದಿನಾಚಣೆ, ರಾಜ್ಯೋತ್ಸವ ಸಾಂಸ್ಕೃತಿಕ ವೇದಿಕೆಗಳು ಜನದಟ್ಟಣೆ ಮಾಡಬಹುದು.ಆದರೆ ರಾಜ್ಯದ ಒಳಿತಿಗಾಗಿ ಸಂವಿಧಾನದ ಅನುಷ್ಠಾನಕ್ಕಾಗಿ ಹದಿನೈದು ದಿನಗಳ ಅಧಿವೇಶನವನ್ನು ನಡೆಸಲು ಮಾತ್ರ ಯಾರಿಗೂ ಇಲ್ಲದ ಆತಂಕ ಆಡಳಿತ ಯಂತ್ರಕ್ಕೆ ಕಾಡುತ್ತದೆ.
ಹಾಗೆ ನೋಡಿದರೆ ಸಾಮಾನ್ಯ ಪ್ರಜೆಗಿಂತ ಶಾಸಕರು, ಸಚಿವರೇ ಅಗತ್ಯಕ್ಕಿಂತಲೂ ಹೆಚ್ಚು ಸುರಕ್ಷಿತ ಕ್ರಮಗಳನ್ನು, ದುಬಾರಿ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹು ದಾದ ಅವಕಾಶವಿದೆ. ಸಣ್ಣ ಸೀನು, ನೆಗಡಿ, ಕೆಮ್ಮು ಬಂದಕೂಡಲೇ ಐಷರಾಮಿ ಆಸ್ಪತ್ರೆಯ ಮಂಚದ ಮೇಲೆ ಹೋಗಿ ಮಲಗುವ ಅವಕಾಶಗಳಿವೆ. ಹೀಗೆ ಯಾವುದೇ ವೈರಾಣು ಎದುರಾದರೂ ಪ್ರಜಾಪ್ರತಿನಿಽಗಳು ಮೊದಲು ಅದನ್ನು ಎದುರಿಸಿ ಗೆದ್ದು ತೋರಿಸ ಬೇಕಾದ್ದು ಲೋಕನೀತಿ. ಹೀಗಿರುವಾಗ ನಡೆಯ ಬೇಕಾದ್ದ ಪವಿತ್ರವಾದ ಅಧಿವೇಶನ ಬೆಳಗಾವಿ ಯಲ್ಲಿ ನಡೆದೇ ತೀರಲಿ.
ಕಳೆದ ಅಧಿವೇಶನದಲ್ಲಿ ಗೂಳಿಹಟ್ಟಿಯಂಥವರ ಗೋಳಾಟ ಇಡೀ ದೇಶದ ಗಮನಸೆಳೆದಿತ್ತು. ಅಽವೇಶನ ನಡೆದರೆ ಯಾವ ಶಾಸಕನಿಗೆ ಎಷ್ಟು ಹೊಣೆಗಾರಿಕೆ ಗಳಿವೆ, ಯಾವ ಶಾಸಕ ಎಷ್ಟು ಬದ್ಧತೆ ಮೆರೆಯುತ್ತಾನೆ, ತನ್ನ ಕ್ಷೇತ್ರಕ್ಕಾಗಿ ಏನೇನು ಮಾತನಾಡುತ್ತಾನೆ ಎಂಬುದು ಮತದಾರರಿಗೆ ತಿಳಿಯುತ್ತದೆ. ಪ್ರತಿಪಕ್ಷಗಳಪ್ರಶ್ನೆಗಳು ಅದಕ್ಕಾಗಿ ಕಾರ್ಯಾಂಗ ಚುರುಕಾಗಿ ಕಾರ್ಯನಿರ್ವಹಿಸಿ ಉತ್ತರಗಳನ್ನು ಕಲೆಹಾಕುವುದು, ಶಾಸಕರ ನಡೆನುಡಿಗಳು, ಪ್ರಬುದ್ಧತೆ, ಯೋಗ್ಯತೆ ಅಯೋಗ್ಯತೆ ಎಲ್ಲವೂ ಪ್ರಜೆಗಳಿಗೆ ಪರಿಚಯವಾಗಬೇಕಿದೆ.
ನೆನಪಿರಲಿ, ರಾಜ್ಯದಲ್ಲಿ ಮುಗ್ಧ ಕಂದಮ್ಮಗಳು ಸುರಕ್ಷಿತವಾಗಿ ಪ್ರತಿನಿತ್ಯ ಅಂಗನವಾಡಿಗೆ ಮತ್ತು ಶಾಲೆಗೆ ತೆರಳಿ ತನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಎಂಥ ಭಯಾನಕ ಪರಿಸ್ಥಿತಿ ಇದ್ದರೂ ಕನ್ನಡದ ಯಾವ ದಿನಪತ್ರಿಕೆಗಳೂ ಕರೋನಾ ನೆಪಹೇಳಿ ಒಂದೇ ಒಂದು ದಿನದ ಸಂಚಿಕೆಯ ಮುದ್ರಣವನ್ನೂ ನಿಲ್ಲಿಸಿಲ್ಲ. ಕಡಿಮೆ ಮುದ್ರಣಗೊಂಡರೂ ಯಥಾಪ್ರಕಾರ ಪತ್ರಕರ್ತರ ಸೈನ್ಯ ತಮ್ಮ ಹೊಣೆಗಾರಿಕೆಗಳನ್ನು ನಿಭಾಯಿಸಿಕೊಂಡು ಬಂದಿದೆ.
ಇದಕ್ಕಿಂತ ಆತ್ಮವಿಶ್ವಾಸ ಇನ್ನೇನು ಬೇಕಿದೆ ಹೇಳಿ? ಆದ್ದರಿಂದ ಜನಪ್ರತಿನಿಧಿಗಳು ಯಾವುದೇ ಅಳುಕಿಲ್ಲದೆ ನೆಪಹೇಳದೇ ಸುವರ್ಣಸೌಧಕ್ಕೆ ತೆರಳಿ ಸುರಕ್ಷಿತ ಕ್ರಮಗಳೊಂದಿಗೆ ಪಾಲ್ಗೊಂಡು ಅಧಿವೇಶನವನ್ನು ಯಶಸ್ವಿಗೊಳಿಸುವಂತ್ತಾಗಲಿ. ಏಳಿ ಶಾಸಕರೇ ಎದ್ದೇಳಿ, ನಿಮ್ಮ ಕ್ಷೇತ್ರಗಳಲ್ಲಿ ನಿಮ್ಮ ಚುನಾವಣಾ ಪ್ರಚಾರ ವೆಂದು ಭಾವಿಸಿ ಅಧಿವೇಶನಕ್ಕೆ ಬನ್ನಿ. ನಿಮ್ಮ ಪಕ್ಷದ ಹೈಕಮಾಂಡ್ ಆದೇಶವೆಂಬಂತೆ ಧಾವಿಸಿ ಬನ್ನಿ, ನಿಮ್ಮ ಜಾತಿಗಳ ಮಠಾಧೀಶರಆಜ್ಞೆಎಂದು ಪರಿಗಣಿಸಿ ಎದ್ದುಬಿದ್ದು ಬಂದು ಅಧಿವೇಶನದಲ್ಲಿ ಪಾಲ್ಗೊಳ್ಳಿ.
ಮುಂದಿನ  ಚುನಾವಣೆಯಲ್ಲಿ ವೋಟ್‌ಬ್ಯಾಂಕ್ ವೃದ್ಧಿಸಿಕೊಳ್ಳಲು ನಿಮ್ಮನಿಮ್ಮ ಜಾತಿಗಳ ಸಮಾವೇಶ ವನ್ನು ನಡೆಸುತ್ತಿದ್ದೇನೆಂದುಕೊಂಡು ಕುಣಿದಾಡುತ್ತ ಬನ್ನಿ, ಡ್ರಾಮಾ ಸೀನಿಯರ್‌ಗಳಾಗಿ ನಕಲಿ ನಾಯಕರ ಪ್ರತಿಭಟನೆಗಳನ್ನು ಬೆಂಬಲಿಸುವವರಂತೆ ಸಾಗಿಬನ್ನಿ, ಜೈಲಿಗೆ ಹೋಗಿಬಂದ ಕಳ್ಳ ಕಳಪೆ ಮತ್ತು ಅಯೋಗ್ಯನಾಯಕರ ಮೆರವಣಿಗೆ ರೋಡ್ ಶೋದಂತೆ ಮೆರೆದು ಬನ್ನಿ, ಬೇಕಾದರೆ ಪ್ರತಿನಿತ್ಯ ಆಂಬ್ಯೂಲೆನ್ ನ ಬಂದು ಆಂಬ್ಯುಲನ್ಸ್‌ನಲ್ಲೇ ಹೋಗಿ. ಒಟ್ಟಿನಲ್ಲಿ ಅಧಿವೇಶನ ನಡೆಸಿ. ಉತ್ತರ ಕರ್ನಾಟಕ ಮಂದಿ ಸುವರ್ಣಸೌಧವನ್ನು ದಶಕಗಳ ಕಾಲ ತಪಸ್ಸು ಮಾಡಿ ಪಡೆದಿದ್ದಾರೆ.
ಅದೊಂದು ದೇವಾಲಯದಂತೆ. ನಿತ್ಯ ಗಂಟಾನಾದದಲ್ಲಿ ಆ ಭಾಗದ ಜನರ ಹೆಮ್ಮೆಯ ಸೌಧವಾಗಿ ಸಂಭ್ರಮಿಸುವಂತ್ತಾಗಲಿ. ಪರಂತೂ, ಐಷರಾಮಿ ವ್ಯಕ್ತಿಗೆ ಕಟ್ಟಿದ ದುಬಾರಿ ಸಮಾಧಿಯಾಗಿ ಕಂಗೊಳಿಸುವಂತೆ ಮಾಡದಿರಿ.