ಹಸುವಿನ ತಲೆಯಲ್ಲಿ ಹಂಡೆ
ವೇದಾಂತಿ ಹೇಳಿದೆ ಕಥೆ
ಶಶಾಂಕ್ ಮುದೂರಿ
ಒಂದು ಹಳ್ಳಿಯಲ್ಲಿ ಒಬ್ಬ ಮಹಿಳೆಯಿದ್ದಳು. ಆಕೆಗೆ ಒಬ್ಬಳೇ ಮಗಳು. ಆ ಮಗಳೆಂದರೆ ಆ ತಾಯಿಗೆ ಬಹಳ ಪ್ರೀತಿ. ಹೀಗಿರುವಾಗ, ಮಗಳಿಗೆ ಒಮ್ಮೆ ಜ್ವರ ಬಂತು. ಮಹಿಳೆಯು ತನಗೆ ತಿಳಿದ ಕಷಾಯ, ಔಷಧ, ಗಂಜಿ ಮಾಡಿ ಕುಡಿಸಿದಳು. ಆದರೆ ಜ್ವರ ಕಡಿಮೆಯಾಗಲಿಲ್ಲ. ನಾಲ್ಕಾರು ದಿನ ಜ್ವರ ಇದ್ದುದನ್ನು ಕಂಡು ಮಹಿಳೆಗೆ ಚಿಂತೆ ಆರಂಭ ವಾಯಿತು. ಬೇರೆ ದಾರಿ ಕಾಣದೆ ದೇವರಿಗೆ ಮೊರೆಹೋದಳು.
‘ಓ ದೇವರೆ, ನನ್ನ ಮಗಳಿಗೆ ನಾಲ್ಕಾರು ದಿನಗಳಿಂದ ಜ್ವರ ಬಂದಿದೆ. ನನಗೆ ತಿಳಿದ ಔಷಧ ಎಲ್ಲವನ್ನೂ ಮಾಡಿಯಾಗಿದೆ. ಈಗ ಆಕೆಗೆ ಉಸಿರು ಹಿಡಿಯುತ್ತಿದೆ. ಆಕೆ ಸಾಯುವ ಬದಲು ನಾನಾದರೂ ಸಾಯಬಾರದಿತ್ತೇ? ನನಗೆ ಅದಾಗಲೇ ವಯಸ್ಸಾಗಿದೆ. ನನ್ನ ಜೀವನದಲ್ಲಿ ನಾನು ಎಲ್ಲಾ ಕಷ್ಟಗಳನ್ನೂ ಅನುಭವಿಸಿಯಾಗಿದೆ. ಆದರೆ ನನ್ನ ಮಗಳು ಇನ್ನೂ ಯುವತಿ. ಆದ್ದರಿಂದ, ಆಕೆಯ ಜೀವ ಉಳಿಸು. ಅಗತ್ಯ ಎನಿಸಿದರೆ, ನಾನು ಆಕೆಯ ಬದಲಿಗೆ ಸಾಯುತ್ತೇನೆ’ ಎಂದು ಆಕೆ ಪ್ರಾರ್ಥಿಸಿದಳು.
ಮತ್ತೂ ಒಂದೆರಡು ದಿನ ಕಳೆಯಿತು. ಪ್ರತಿ ರಾತ್ರಿ, ಹಗಲು ಆ ಮಹಿಳೆಯು ತನ್ನಷ್ಟಕ್ಕೇ ಪ್ರಾರ್ಥನೆ ಮಾಡುತ್ತಾ, ಮಗಳಿಗೆ ಗಂಜಿ ಮತ್ತು ಕಷಾಯ ಕುಡಿಸುತ್ತಾ ಕಾಲ ಕಳೆದಳು. ಜ್ವರ ಕಡಿಮೆಯಾಗಲಿಲ್ಲ. ರಾತ್ರಿಯಿಡೀ ಕಾದ ಜ್ವರದಿಂದಾಗಿ, ಆ ಮಹಿಳೆಗೂ ನಿದ್ದೆ ಇಲ್ಲ, ಮಗಳಿಗೂ ನಿದ್ದೆ ಇಲ್ಲ. ದೇವರಿಗೆ ತನ್ನ ಪ್ರಾರ್ಥನೆಯನ್ನು ಆಕೆ ಪದೇಪದೇ ಹೇಳಿ ಕೊಳ್ಳುತ್ತಲೇ ಇದ್ದಳು.
ಇಂತಹ ಸಂದರ್ಭದಲ್ಲಿ ಒಂದು ದಿನ, ಮಹಿಳೆಯು ತನ್ನ ಮಗಳ ಹಣೆಯ ಮೇಲೆ ಕೈ ಯಿಟ್ಟು, ದೇವರನ್ನು ಪ್ರಾರ್ಥಿಸುತ್ತಾಕುಳಿತಿದ್ದಳು. ಮನೆಯ ಬಾಗಿಲು ತೆರೆದುಕೊಂಡಿತ್ತು. ಈ ನಡುವೆ ಒಂದು ಬೀಡಾಡಿ ಹಸು ಆಕೆಯ ಅಂಗಳದಲ್ಲಿ ಓಡಾಡುತ್ತಿತ್ತು. ಮಹಿಳೆಯು ಮನೆಯ ಹೊರಗೆ ಇಟ್ಟಿದ್ದ ನೀರಿನ ಹಂಡೆಯಲ್ಲಿ ಏನಾದರೂ ಆಹಾರ ಸಿಗಬಹುದು ಎಂದು ಆ ಹಸು ಹಂಡೆಯಒಳಗೆ ತಲೆ ಹಾಕಿತು. ಒಳಗೆ ನೀರು ಖಾಲಿಯಾಗಿದ್ದರಿಂದ ಅದಕ್ಕೇನೂ ಸಿಗಲಿಲ್ಲ. ಆದರೆ, ಆ ಹಸುವಿನ ಕೊಂಬು ಹಂಡೆಯಒಳಗೆ ಸಿಕ್ಕಿಕೊಂಡು, ಇಡೀ ಮುಖಕ್ಕೆ ಆ ಹಂಡೆ ಕವಚಿಕೊಂಡಿತು.
ಹಸುವಿಗೆ ಭಯವಾಯಿತು. ಏನು ಮಾಡಿದರೂ ಹಂಡೆಯು ಅದರ ತಲೆಯಿಂದ ಬೀಳುತ್ತಿಲ್ಲ. ಜತೆಗೆ ಅದರ ಕಣ್ಣು ಮತ್ತುತಲೆಯನ್ನು ಹಂಡೆ ಆವರಿಸಿದ್ದರಿಂದಾಗಿ, ಭಯದಿಂದ ಅದು ಅತ್ತಿತ್ತ ಓಡಾಡತೊಡಗಿತು. ಅಂಗಳದಲ್ಲೇ ಮುಂದೆ ಮತ್ತು ಹಿಂದೆ ವೇಗವಾಗಿ ಓಡುತ್ತಾ, ಹೆದರಿ ಕೂಗತೊಡಗಿತು. ಅಂಗಳದಲ್ಲಿ ಆಗುತ್ತಿದ್ದ ಸದ್ದನ್ನು ಕೇಳಿದ ಮಹಿಳೆಯು, ಇದೇನಿರಬಹುದು ಎಂದು ಕುತೂಹಲದಿಂದ ಹೊರಬಂದಳು. ಆಕೆ ಅಂಗಳಕ್ಕೆ ಬರುವ ಸಮಯಕ್ಕೆ ಸರಿಯಾಗಿ, ಹಂಡೆಯನ್ನು ತಲೆಗೆ ಸಿಕ್ಕಿಸಿ ಕೊಂಡಿದ್ದ ಹಸುವು ವೇಗವಾಗಿ ಆಕೆಯ ಬಳಿ ಓಡಿಬಂತು.
ಮಗಳ ಜ್ವರದಿಂದಾಗಿ,ರಾತ್ರಿಯಿಡೀ ನಿದ್ರೆ ಬಿಟ್ಟಿದ್ದ ಆ ಮಹಿಳೆಗೆ, ತನ್ನತ್ತ ಓಡಿ ಬರುತ್ತಿರುವುದಾದರೂ ಏನು ಎಂದು ಗೊತ್ತಾಗ ಲಿಲ್ಲ. ಯಮಧರ್ಮರಾಯನ ಕೋಣವೇ ತನ್ನತ್ತ ಓಡಿ ಬರುತ್ತಿದೆ ಎಂಬ ಭ್ರಮೆ ಆಕೆಯನ್ನು ಆವರಿಸಿತು. ‘ಅಯ್ಯೋ ದೇವರೇ, ಇದೇನಿದು! ಈ ರೀತಿ ಯಮಧರ್ಮರಾಯನ ವಾಹನವನ್ನು ನನ್ನ ಬಳಿ ಕಳಿಸುತ್ತಿದ್ದೀಯಾ? ನನಗೆ ನಿಜಕ್ಕೂ ಭಯವಾಗುತ್ತಿದೆ.’ ಎಂದು ಆಕೆ ಕೂಗಿಕೊಂಡಳು.
ಆಕೆಯ ಕೂಗನ್ನು ಕೇಳಿದ ಹಸುವಿಗೆ ಇನ್ನಷ್ಟು ಭಯವಾಯಿತು. ಅದರ ಕಣ್ಣು ಕಾಣದಂತೆ ಹಂಡೆ ಕವಿದುಕೊಂಡಿದ್ದರೂ, ಕಿವಿಕೇಳುತ್ತಿತ್ತು. ಅದು ವೇಗವಾಗಿ ಮಹಿಳೆಯ ಕಡೆಗೇ ಓಡಿಬರತೊಡ ಗಿತು. ಅದನ್ನು ಕಂಡು ಮಹಿಳೆಗೆ ಇನ್ನಷ್ಟು ಗಾಬರಿಯಾಯಿತು.‘ದೇವರೇ, ಬೇಡ, ಬೇಡ. ನನ್ನನ್ನು ಕರೆದೊಯ್ಯಲು ಬಂದಿದ್ದೀಯಾ? ನಾನು ಕೇವಲ ಮುದುಕಿ. ನನ್ನನ್ನು ಬಿಟ್ಟು ಬಿಡು.
ಒಳಗೆ ನನ್ನ ಮಗಳು ಜ್ವರದಿಂದ ಮಲಗಿ, ಏದುಸಿರು ಬಿಡುತ್ತಿದ್ದಾಳೆ. ನನ್ನ ಬದಲು ಅವಳನ್ನೇ ಕರೆದುಕೊಂಡು ಹೋಗು’ ಎಂದು ಕುಸಿದು ಕುಳಿತಳು. ಅಷ್ಟರಲ್ಲಿ, ಹಸುವಿನ ತಲೆಗೆ ಮುಸುಕು ಹಾಕಿಕೊಂಡಿದ್ದ ಮಣ್ಣಿನ ಹಂಡೆಯು ಗೋಡೆ ತಾಗಿ ಒಡೆದು ಹೋಯಿತು. ಹಸುವು ತನ್ನ ದಾರಿ ಹಿಡಿದು ಓಡಿ ಹೋಯಿತು. ಇದನ್ನು ಕಂಡು ಮಹಿಳೆಯು ಗಾಬರಿಯಿಂದ ಹೊರಬಂದಳು.ಕಿಂಕರ್ತವ್ಯಮೂಢಳಾಗಿ ಏನು ಮಾಡಬೇಕೆಂದು ತಿಳಿಯದೇ, ಮಗಳ ಬಳಿ ಸಾರಿ ಔಷಧ ಕುಡಿಸಿದಳು.  ನಿಧಾನವಾಗಿ ಮಗಳು ಗುಣಮುಖಳಾದಳು.
(ಮನುಷ್ಯನ ಮನಸ್ಸು ಕೆಲವೊಮ್ಮೆ ಭ್ರಮಾಧೀನವಾಗುತ್ತದೆ. ಆ ಸ್ಥಿತಿಯನ್ನು ಗುರುತಿಸುವ ಕೌಶಲವನ್ನು ನಾವು ಬೆಳೆಸಿಕೊಂಡು, ಶಾಂತಿಯಿಂದ ವರ್ತಿಸಬೇಕು ಎಂಬುದಕ್ಕೆ ಈ ಕಥೆ ಒಂದು ಉದಾಹರಣೆ).