ಬಾಬಾಸಾಹೇಬರ ಕನಸಿನ್ನೂ ಏಕೆ ಕನಸಾಗಿಲ್ಲ ?
ಸ್ಮರಣೆ
ವಿಜಯ್‌ ದರ್‌ಡ
ಪ್ರತಿಯೊಬ್ಬ ಜನಸಾಮಾನ್ಯನಿಗೂ ಈ ದೇಶ ಮುಕ್ತವಾಗಿರಬೇಕು, ಸುಭದ್ರತೆಗೆ ಆದ್ಯತೆ ಇರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ವಾತಾವರಣದಲ್ಲಿ ಬದುಕುವುದನ್ನು ಜನಸಾಮಾನ್ಯ ಬಯಸುತ್ತಾನೆ. ಇವೆಲ್ಲವನ್ನೂ ನಮ್ಮ ಸಂವಿಧಾನ ನಮಗೆ ಕಲ್ಪಿಸಿದೆ. ನಮ್ಮ ಬದುಕಿನ ಹಾದಿಯನ್ನು ಸಂವಿಧಾನದ ಆಶಯಗಳು ಸುಗಮಗೊಳಿಸುತ್ತವೆ.
ಭಾರತದ ನಾಗರಿಕತೆ ಉದಾತ್ತವಾದದ್ದು. ದೇವಾನುದೇವತೆಗಳಿಗೆ ಕೂಡ ಭಾರತದ ನಾಗರಿಕರ ಜೀವನವಿಧಾನದ ಬಗ್ಗೆ ಅಸೂಯೆಇದೆ, ಅಷ್ಟು ಮಾತ್ರವಲ್ಲ ದೇವರುಗಳು ಭಾರತದಲ್ಲೇ ಜನ್ಮತಾಳಬೇಕೆಂದು ಬಯಸುತ್ತಾರೆ ಎಂಬೊಂದು ಮಾತೂ ಇದೆ. ಭಾರತ ವೆಂಬ ಪವಿತ್ರ ಭೂಮಿಯಲ್ಲಿ ಯುಗ ಯುಗಾಂತರ ಗಳಿಂದಲೂ ಅಸಂಖ್ಯ ಮಹಾನ್ ವ್ಯಕ್ತಿಗಳು, ಅಧ್ಯಾತ್ಮಿಕ ಸಂತರು ಅವತಾರ ವೆತ್ತಿದ್ದಾರೆ ಮತ್ತು ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಆದರೆ ನಾನಿಲ್ಲಿ ಇತಿಹಾಸದ ಪುಟ ಗಳಿಂದ ಇಬ್ಬರು ಮಹಾತ್ಮರ ಕುರಿತಾಗಿ ಮಾತ್ರ ಉಲ್ಲೇಖಿಸುತ್ತಿದ್ದೇನೆ.
ಒಬ್ಬರು ಮಹಾತ್ಮ ಗಾಂಧಿ, ಮತ್ತಿನ್ನೊಬ್ಬರು ಭಾರತರತ್ನ ಡಾ. ಭೀಮರಾವ್ ಅಂಬೇ ಡ್ಕರ್. ಅಂಬೇಡ್ಕರ್ ಅವರನ್ನು ಜನ ಗೌರವದಿಂದ ಬಾಬಾ ಸಾಹೇಬ್ ಎಂತಲೇ ಕರೆಯುತ್ತಾರೆ. ಗಾಂಧೀಜಿಯವರು ತಮ್ಮ ಅಹಿಂಸಾ ಚಳುವಳಿಯಿಂದ ದೇಶದಲ್ಲಿನ ಗುಲಾಮಗಿರಿಯನ್ನು ಕೊನೆಗೊಳಿಸಿದರು.  ಭಗವಾನ್ ಬುದ್ಧ ಮತ್ತು ಮಹಾವೀರರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿ ಕೊಂಡ ಮಹಾತ್ಮ ಗಾಂಧೀಜಿಯವರು ಅಹಿಂಸೆ, ಕ್ಷಮಾಗುಣ, ಅಪರಿಗ್ರಹ ಮತ್ತು ತ್ಯಾಗಗಳ ನೆಲೆಯಲ್ಲಿ ಭಾರತೀಯ ಜನ ಸಾಮಾನ್ಯರ ಬದುಕನ್ನು ಪ್ರಭಾವಿಸಿದರು.
ಇದೇ ತತ್ವವನ್ನು ಅನುಸರಿಸಿ ಅದೆಷ್ಟೋ ದೇಶಗಳು ಸ್ವಾತಂತ್ರ್ಯವನ್ನು ಪಡೆದುಕೊಂಡಿವೆ. ಚೀನಾ ಮತ್ತು ರಷ್ಯಾದ ಜನರನ್ನು ಕೇಳಿದರೆ ಇದರ ಮಹತ್ವ ಅರಿವಿಗೆ ಬರುತ್ತದೆ. ಬಾಬಾಸಾಹೇಬರು ಸ್ವಾತಂತ್ರ್ಯದ ಮಹತ್ವ ಮತ್ತು ಅಗತ್ಯವನ್ನು ಜನಸಾಮಾನ್ಯರಿಗೆ ಅರ್ಥಮಾಡಿಸಿದರು. ಜನಸಾಮಾನ್ಯರ ಅವಶ್ಯಕತೆಗಳನ್ನುಅವರು ಅರಿತಿದ್ದರು. ಪ್ರತಿಯೊಬ್ಬ ಜನಸಾಮಾನ್ಯನಿಗೂ ಈ ದೇಶಮುಕ್ತವಾಗಿರಬೇಕು ಮತ್ತು ದೇಶದ ಸುಭದ್ರತೆಗೆ ಆದ್ಯತೆ ಇರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ವಾತಾವರಣದಲ್ಲಿ ಬದುಕುವುದನ್ನು ಜನಸಾಮಾನ್ಯ ಬಯಸುತ್ತಾನೆ. ಇವೆಲ್ಲವನ್ನೂ ನಮ್ಮ ಸಂವಿಧಾನ ನಮಗೆ ಕಲ್ಪಿಸಿದೆ.
ನಮ್ಮ ಬದುಕಿನ ಹಾದಿಯನ್ನು ಸಂವಿಧಾನದ ಆಶಯಗಳು ಸುಗಮಗೊಳಿಸುತ್ತವೆ ಮತ್ತು ಅಭಿವೃದ್ಧಿಯ ಮಾರ್ಗವನ್ನೂ ತೋರಿಸಿಕೊಡುತ್ತದೆ. ಈ ಎಲ್ಲ ಅಂಶಗಳ ಕೂಲಂಕಷ ಪರಿಶೀಲನೆಯ ನಂತರವೇ ಬಾಬಾಸಾಹೇಬರು ಸಂವಿಧಾನ ರಚನೆಯನ್ನುಮಾಡಿದರು ಮತ್ತು ದ್ವೇಷವಿಲ್ಲದ ಸಮಾಜ ನಿರ್ಮಾಣಕ್ಕೆ ದಾರಿಮಾಡಿಕೊಟ್ಟರು. ಜಾತಿ, ಧರ್ಮ, ಭಾಷೆಗಳ ಆಧಾರದಲ್ಲಿ ಯಾರಿಗೂ ಅನ್ಯಾಯವಾಗಕೂಡದು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಒಬ್ಬ ವ್ಯಕ್ತಿ ಈ ಎಲ್ಲ ಅಂಶಗಳನ್ನು ಅಳವಡಿಸಿ ಕೊಂಡು ಮುಕ್ತ ವಾತಾವರಣದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಬಲ್ಲ ಎಂಬುದು ಬಾಬಾಸಾಹೇಬರ ಮನದಾಳದ ಇಂಗಿತ ವಾಗಿತ್ತು.
ಬಾಬಾಸಾಹೇಬರ ಕನಸಾಗಿದ್ದ, ಅವರೇ ರೂಪಿಸಿದ ಸಂವಿಧಾನದಲ್ಲಿ ದತ್ತವಾದ ಸಮ-ಸಮಾಜದ ಪರಿಕಲ್ಪನೆ, ಜಾತಿಗಳಿಲ್ಲದ ಮುಕ್ತಭಾರತದ ಚಿಂತನೆ ಇನ್ನೂ ಏಕೆ ಸಾಕಾರವಾಗಿಲ್ಲ ಎಂಬುದು ನಮ್ಮ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆ ಯಾರು ಹೊಣೆ? ಸರಕಾರವೇ, ಸಮಾಜವೇ ಅಥವಾ ನಮ್ಮ ಒಟ್ಟಾರೆ ವ್ಯವಸ್ಥೆಯೇ? ನಾವೀಗ ಬಾಬಾಸಾಹೇಬರ ಪರಿನಿರ್ವಾಣದ ದಿನದ ಸಂದರ್ಭದಲ್ಲಿ ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.
ಕಳೆದ ವಾರ, ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ರಾಮದಾಸ ಆಠವಲೆಯವರು ರಾಜ್ಯಸಭೆ ಯಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಇನ್ನೂ ಮಲಹೊರುವ ಪದ್ಧತಿ ಚಾಲ್ತಿಯಲ್ಲಿದೆ, ಕೆಳಜಾತಿಯ ಅಸಂಖ್ಯ ಜನರು ಇನ್ನೂ ಅಂತಹ ಕೆಲಸವನ್ನು ಮಾಡಬೇಕಾದ ಒತ್ತಡದಲ್ಲಿದ್ದಾರೆಂಬುದನ್ನು ಒತ್ತಿ ಹೇಳಿದರು. ಅದನ್ನು ಕೇಳಿದ ನಾನು ನಿಜಕ್ಕೂಗಾಬರಿಗೊಂಡಿದ್ದೇನೆ. ಅವರು ಪ್ರಸ್ತುತ ಪಡಿಸಿದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ೪೩೭೯೭ ಜನರು ಜಾಡಮಾಲಿ ಕೆಲಸ ಮಾಡುತ್ತಿದ್ದಾರೆ, ಅವರ ಪೈಕಿ ೪೨೫೯೪ ಜನರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.
ಒಬ್ಬನೇ  ಒಬ್ಬ ವ್ಯಕ್ತಿ ಅಂತಹ ಕೆಲಸ ಮಾಡಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆಂದರೆ ಸಹ, ಆ ಕೆಟ್ಟ ವ್ಯವಸ್ಥೆ ಇನ್ನೂ ಸಮಾಜ ದಿಂದ ತೊಲಗಿಲ್ಲ ಎಂದರ್ಥ. ಇದು ನಾವೆಲ್ಲರೂ ನಾಚಿಕೆ ಪಡಬೇಕಾದ ಸಂಗತಿ. ಇಂತಹ ಸಾಮಾಜಿಕ ಶೋಷಣೆಯನ್ನು ಇನ್ನೂ ಕೊನೆಗಾಣಿಸಲು ಆಗಿಲ್ಲದಿರುವುದು ನಮ್ಮ ವೈಜ್ಞಾನಿಕವಾಗಿ ಪ್ರಗತಿ ಕಂಡಿರುವ ಸಮಾಜಕ್ಕೊಂದು ಕಪ್ಪುಚುಕ್ಕೆ. ಎಲ್ಲಿಯ ವರೆಗೆ ಜಾತಿಪದ್ಧತಿ ಈ ದೇಶದಲ್ಲಿ ಜೀವಂತವಾಗಿರುತ್ತದೋ ಅಲ್ಲಿಯ ತನಕ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಬಾಬಾಸಾಹೇಬರು ಅರಿತಿದ್ದರು. ಈ ಸತ್ಯಾಂಶವನ್ನು ಯಾರಿಂದಲೂ ಮುಚ್ಚಿಡಲಾಗಿಲ್ಲ. ಇಂದಿಗೂ ದಲಿತ ಸಹೋದರರ ಮೇಲಿನ ದೌರ್ಜನ್ಯ ಪ್ರಕರಣಗಳು ಅಲ್ಲಲ್ಲಿ ಸುದ್ದಿಯಾಗುತ್ತವೆ.
ಜಾತಿಪದ್ಧತಿಯ ಕೆಟ್ಟ ಕಂಪನಗಳನ್ನು ಅಲ್ಲಲ್ಲಿ ನಾವು ಕಾಣುತ್ತೇವೆ. ನ್ಯಾಶನಲ್ ಕ್ರೈಮ್ಸ್ ರೆಕಾರ್ಡ್ ಬ್ಯೂರೋದ ಅಂಕಿಅಂಶಗಳ ಪರಾಮರ್ಶೆ ಮಾಡಿದರೆ ಕಳೆದ ೫-೭ ವರ್ಷಗಳ ಕಾಲಾವಧಿಯಲ್ಲಿ ದಿನವಹಿ ನಡೆದ ದಲಿತರ ಮೇಲಿನ ಶೋಷಣೆ ಪ್ರಕರಣಗಳು 120ಕ್ಕೂ ಅಧಿಕ ಎಂದು ಹೇಳಲಾಗಿದೆ. ಅಧಿಕೃತವಾಗಿ ದಾಖಲಾಗಿರುವ ಪ್ರಕರಣಗಳೇ ಇಷ್ಟಿರಬೇಕಾದರೆ, ದಾಖಲಾಗದ ಪ್ರಕರಣ ಗಳು ಅದೆಷ್ಟಿರಬಹುದು ಊಹಿಸಿ. ಮೇಲ್ವರ್ಗದ ಜನರ ಉಸ್ತುವಾರಿಯಲ್ಲಿರುವ ಸಾರ್ವಜನಿಕ ಬಾವಿಗಳ ನೀರನ್ನು ಬಳಸುವಲ್ಲಿ ಮತ್ತು ದೇವಸ್ಥಾನಗಳನ್ನು ಪ್ರವೇಶಿಸುವಲ್ಲಿ ದಲಿತರಿಗಿರುವ ನಿಷೇಧ- ನಿರ್ಬಂಧಗಳು ಇಂದಿಗೂ ಅಲ್ಲಲ್ಲಿ ಹಾಗೆಯೇ ಇವೆ. ಪ್ರತಿ ವರ್ಷ ಮರ್ಯಾದಾ ಹತ್ಯೆ ಪ್ರಕರಣಗಳ ಪ್ರಮಾಣ ಹೆಚ್ಚುತ್ತಲೇ ಇದೆ.
ಇಂದಿಗೂ ಉತ್ತರಭಾರತದ ಕೆಲ ಗ್ರಾಮೀಣ ಭಾಗಗಳಲ್ಲಿ ಗ್ರಾಮಗಳು ಜಾತಿ ಆಧಾರದಲ್ಲಿ ಪ್ರತ್ಯೇಕಿತವಾಗಿವೆ. ಗ್ರಾಮಗಳ ಹೊರ ವಲಯದಲ್ಲಿ ದಲಿತರ ಕೇರಿಗಳ ರಚನೆಯಾಗಿದೆ. ಬಾಬಾಸಾಹೇಬರ ಆದರ್ಶಗಳನ್ನು ಕೇವಲ ಬಾಯಿಮಾತಿಗಾದರೂ ಉದ್ಗರಿಸದ ರಾಜಕೀಯ ನಾಯಕರೇ ಇರಲಿಕ್ಕಿಲ್ಲ. ಆದರೆ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯ ಮತ್ತು ಸಮತೆಯ ಧ್ಯೇಯವನ್ನು ಸಾಧಿಸುವ ನಿಟ್ಟಿನಲ್ಲಿ ಯಾರೂ ಮುಂದೆ ಬರುತ್ತಿಲ್ಲ. ಬಾಬಾಸಾಹೇಬರ ಹೆಸರು ಹೇಳಿಕೊಂಡು ರಾಜಕೀಯ ನಾಯಕರಾದ ಹಲವಾರು ಮಂದಿ, ಕಳೆದ ಅನೇಕ ವರ್ಷಗಳಲ್ಲಿ ಬಹುಕೋಟ್ಯಧಿಪತಿಗಳಾಗಿದ್ದಾರೆ.
ಆದರೆ ಯಾವ ಜನಾಂಗದ ಮಂದಿಯನ್ನು ಮೇಲಕ್ಕೆತ್ತಲು ರಾಜಕೀಯವಾಗಿ, ಸಾಮಾಜಿಕವಾಗಿ ಶ್ರಮಿಸಬೇಕೆಂದು ಬಾಬಾ ಸಾಹೇಬರು ಕನಸುಕಂಡಿದ್ದರೋ, ಅವರ ಏಳಿಗೆ ಇನ್ನೂ ಆಗಿಲ್ಲ. ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವಿದ್ದೇವೆ. ಆದರೆ ದೇಶದ ಜನತೆಗೆ ಸಮಾನತೆಯ ಅಮೃತ ಇನ್ನೂ ಸಿಕ್ಕಿಲ್ಲವೆಂಬುದು ವಿಷಾದದ ಸಂಗತಿ.ಬಾಬಾಸಾಹೇಬರ ಹೆಸರಿನಲ್ಲಿ ನಾವು ಬೃಹತ್ ಸಂಸ್ಥಾಪನೆಗಳನ್ನು ಕಟ್ಟಿದ್ದೇವೆ, ರಸ್ತೆಗಳಿಗೆ ಅವರ ಹೆಸರಿಟ್ಟಿದ್ದೇವೆ, ಕಟ್ಟಡ ಮತ್ತು ಸಭಾಂಗಣಗಳ ನಿರ್ಮಾಣವೂ ಆಗಿದೆ. ನೂರಾರು ಹೂದೋಟಗಳು, ಸಾವಿರಾರು ಪ್ರತಿಮೆಗಳು ಬಾಬಾಸಾಹೇಬರ ಹೆಸರಿನಲ್ಲಿಪ್ರತಿಷ್ಟಾಪಿತವಾಗಿವೆ.
ಆ ಮೂಲಕವಾಗಿ ಅವರಿಗೆ ನಾವು ಕೊಡಬೇಕಾದ ಗೌರವ ಮತ್ತು ಕೃತಜ್ಞತೆ ಸಲ್ಲಿಸಿದ್ದೇವೆ ಎಂಬ ಭಾವದಲ್ಲಿ ನಾವಿದ್ದೇವೆ. ಆದರೆ ಇದು ತಪ್ಪು ಕಲ್ಪನೆ, ನಾವು ಸಲ್ಲಿಸಬೇಕಾದ ಋಣಭಾರ ಇನ್ನೂ ಹಾಗೆಯೇ ಇದೆ. ಬಾಬಾಸಾಹೇಬರ ನಾಮಾಂಕಿತ  ಸಭಾಂಗಣ ಗಳಿಗೆ ಹೋದಾಗ ಅಥವಾ ಅವರ ಪ್ರತಿಮೆಗಳಿದ್ದಲ್ಲಿಗೆ ಭೇಟಿ ಕೊಟ್ಟಾಗ ಉಸಿರುಗಟ್ಟಿದ ಅನುಭವ ಯಾಕಾಗುತ್ತದೆ? ಬಾಬಾ ಸಾಹೇಬರ ಹೆಸರಲ್ಲಿ ಕಟ್ಟಲಾಗಿರುವ ಆಸ್ಪತ್ರೆಗಳಲ್ಲಿ ಜನರು ಸೂಕ್ತ ನಿರ್ವಹಣೆ ಇಲ್ಲದೇ ಯಾಕೆ ಸಾಯುತ್ತಿದ್ದಾರೆ? ಬಾಬಾ ಸಾಹೇಬರ ಹೆಸರುಳ್ಳ ಯಾವುದಾದರೂ ಸಂಸ್ಥೆಗೆ ಹೋದಾಗ ನನಗ್ಯಾಕೆ ನಿರಾಶೆಯಾಗುತ್ತದೆ? ಸಂಸತ್ತಿನಲ್ಲಿ ಬಾಬಾಸಾಹೇಬರ ಅನುಯಾಯಿಗಳ ದನಿ ಯಾಕೆ ಕ್ಷೀಣವಾಗುತ್ತಿದೆ? ಬಾಬಾಸಾಹೇಬರ ಹೆಸರಿನ ವಿಮಾನ ನಿಲ್ದಾಣದಿಂದ ಯಾನ ಕೈಗೊಳ್ಳುವುದು ಇನ್ನೂ ಯಾಕೆ ಬಹುಮಂದಿಗೆ ಕನಸಾಗಿಯೇ ಉಳಿದಿದೆ? ಇಂತಹ ಅದೆಷ್ಟು ಉದಾಹರಣೆಗಳನ್ನೂ ಕೊಡಬಹುದು.
ಇಂತಹ ಅನೇಕ ಏಳುಬೀಳುಗಳನ್ನು ಈ ಕಣ್ಣುಗಳಿಂದ ನಾನು ಕಳೆದ ಹಲವು ವರ್ಷಗಳಿಂದ ಕಾಣುತ್ತಲೇ ಬಂದಿದ್ದೇನೆ. ಮನಸ್ಸು ಗಲಿಬಿಲಿಗೊಳಗಾಗುತ್ತದೆ. ಈ ಆಡಂಬರ, ವಂಚನೆ ಮತ್ತು ಶೋಕಿಗಳಿಂದ ಜನಸಾಮಾನ್ಯ ಮುಕ್ತನಾಗುವುದಾದರೂ ಯಾವಾಗ?ಬಾಬಾ ಸಾಹೇಬರೇ, ನಿಮ್ಮ ಕನಸಿನ ಭಾರತ ಸಾಕಾರವಾಗುವುದು ಯಾವಾಗ?
(ಲೇಖಕರು ರಾಜ್ಯಸಭೆ ಮಾಜಿ ಸದಸ್ಯರು ಹಾಗೂಖ್ಯಾತ ಪತ್ರಕರ್ತರು)