ಮಾನವೀಯತೆಯ ಅನುಕಂಪ ಕಲಿಸಿದರು
ಸ್ಮರಣೆ
ಎಸ್‌.ಎಲ್‌.ಎಂ.ಪಾಟೀಲ
surendrap19@.
ಆಚಾರ್ಯರ ವಿದ್ವತ್ತಿನ ಮತ್ತೊಂದು ಮುಖ ನೋಡಿದ್ದು ಬಿ.ಎ ಮೂರನೇ ವರ್ಷದಲ್ಲಿರುವಾಗ. ಕಲೆಯೆಂದರೇನು, ಕಾವ್ಯ ಅಂದರೇನು, ವಿಮರ್ಶೆ ಎಂದರೇನು? ಹಾಗೂ ಇತರ ಪರಿಕಲ್ಪನೆಗಳನ್ನು ಯಾವುದೇ ರೆ-ರೆ ಇಲ್ಲದೆ ನಿರಾಳವಾಗಿ ಪಾಠ ಮಾಡುವು ದಷ್ಟೇ ಅಲ್ಲ, ನೋಟ್ಸ್ ಕೊಡುತ್ತಿದ್ದರು.
ಮೊನ್ನೆ ನಮ್ಮನ್ನಗಲಿದ ಪ್ರೊ. ಕೆ.ಎಸ್ ನಾರಾಯಣಾಚಾರ್ಯರನ್ನು ನಾನು ಎರಡು ತೆರನಾಗಿ ಗುರುತಿಸುತ್ತೇನೆ. ಒಂದು ಅಧ್ಯಾಪಕ- ಗುರುವಾಗಿ, ತರಗತಿಗಳಲ್ಲಿ ಸಾವಿರಾರು ವಿಧ್ಯಾರ್ಥಿಗಳಿಗೆ ಪಾಠ ಹೇಳಿದವರು ಮತ್ತು ನಿವೃತ್ತಿಯ ನಂತರ ಹೊರಜಗತ್ತಿಗೆ ತಮ್ಮ ಪ್ರವಚನ, ಪುಸ್ತಕ ಹಾಗೂ ಅಂಕಣಗಳ ಮೂಲಕ ತಮ್ಮ ಖಚಿತ ಅಭಿಪ್ರಾಯಗಳನ್ನು ಹೊಸ ಒಳನೋಟಗಳಿಂದ ‘ಪಾಠ’ ಮಾಡಿದವರು ಎಂದು.
ಮೂಲತಃ ಅವರ ವೃತ್ತಿ ಹಾಗೂ ಪ್ರವೃತ್ತಿ ಒಂದೇ ಆಗಿದ್ದವು. ಅವರ ಒಬ್ಬ ವಿದ್ಯಾರ್ಥಿಯಾಗಿ ನಾನು ಅವರ ಕೆಲವು ನೆನಪುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಧಾರವಾಡದ ಕರ್ನಾಟಕ ಕಾಲೇಜಿಗೆ ಇಂಗ್ಲೀಷ್ ಪ್ರಾಧ್ಯಾಪಕರ ಉನ್ನತ ಪರಂಪರೆ ಇದೆ. ವಿ ಕೆ ಗೋಕಾಕ್, ವಿ.ಎಂ ಇನಾಂದಾರ್ ಹಾಗೂ ಅರ್ಮ್ಯಂಡೋ ಮೇನೇಜಿಸ್ ಪ್ರಮುಖರು. ನಮ್ಮ ಆಚಾ ರ್ಯರು, ಇದೇ ಅವರಿಗೆ ಸಲ್ಲುವ ಪದ, ಆ ಪರಂಪರೆಯನ್ನು ಮುಂದೆವರೆಸಿದರು. ಆದರೆ ಇವರಿಗೆ ಅವರದೇ ಆದ ವಿಶೇಷತೆಗಳು ಇದ್ದವು.
ನಿವೃತ್ತಿಯ ನಂತರದ ಆಚಾರ್ಯರನ್ನು ಮಾತ್ರ ನೋಡಿದವರಿಗೆ ಆಚ್ಚರಿ ಆಗಬಹುದು, ಕಾಲೇಜಿಗೆ ಬರುವಾಗ ಅವರು ಯಾವಾ ಗಲೂ ಸೂಟು (ತಿಳಿ ನೀಲಿ) ಬೂಟಿನಲ್ಲಿ ಇರು ತ್ತಿದ್ದರು. ಮೇಲೆ ಕರಿಯ ಟೊಪ್ಪಿಗೆ. ಅವರ ಆನಂತರದ ವೇಷ ಭೂಷಣ ನನಗೆ ಅಚ್ಚರಿ ಮೂಡಿಸಿದರೂ ಅದೇ ಅವರಿಗೆ ಶೋಭಿಸುತಿತ್ತು. ಬರೀ ಆಚಾರ್ಯರರಾಗಿದ್ದವರು ಆಮೇಲೆ ಋಷಿ ಆಗಿಬಿಟ್ಟರು, ಎಲ್ಲ ಅರ್ಥದಲ್ಲೂ.
ಅವರು ಎರಡು ತರಹದ ವಿದ್ಯಾರ್ಥಿ ಗಳಿಗೆ ಪಾಠ ಮಾಡಬೇಕಿತ್ತು. ಇಂಗ್ಲೀಷ್ ಅನ್ನು ಕಡ್ಡಾಯವಾಗಿ ಓದುವವರು ಹಾಗೂ ಐಚ್ಛಿಕವಾಗಿ ಓದುವವರು. ಮೊದಲ ತರಹದವರಿಗೆ ದೊಡ್ಡ, ಗಂಭೀರ ವಾತಾವರಣದ ಗ್ಯಾಲರಿ ಕೋಣೆ. ಸುಮಾರು ಎರಡು ನೂರು ವಿದ್ಯಾರ್ಥಿ ಗಳು. ಬಸ್ಸಿನಲ್ಲಿ ಟಾವೆಲ್ ಇಟ್ಟು ಸೀಟು ಹಿಡಿಯುವವರ ಹಾಗೆ ಹುಡುಗರು ಕರವಸ ಹಾಸಿ ಸ್ಥಳ ಖಚಿತಪಡಿಸಿ ಕೊಳ್ಳುತ್ತಿದ್ದರು.
ನಮ್ಮ ಇಂಗ್ಲೀಷ್ ಐಚ್ಚಿಕ ಕೋಣೆಗಳು ಪುಟ್ಟವು. ಕೆಲವೇ ವಿದ್ಯಾರ್ಥಿಗಳು. ಬಿ ಎ.ಮೊದಲ ವರ್ಷ ಬಾಸ್‌ವೆಲ್ಲ ಬರೆದ ಸ್ಯಾಮ್ಯು ವೆಲ್ ಜೊನಸನ್‌ನ ಚರಿತ್ರೆ ಕಲಿಸುತ್ತಿದ್ದರು. ಮೊದಲ ದಿನ ನೀವೇಕೆ ಇಂಗ್ಲೀಷನ್ನು ಐಚ್ಛಿಕವಾಗಿ ತೆಗೆದು ಕೊಂಡಿದ್ದು? ಎಂದು ಕೇಳಿದ್ದರು. ನಮಗೆ ತೋಚಿದಂತೆ ಉತ್ತರ ನೀಡಿದ್ದೆವು. ಈ ಕ್ಲಾಸಿನಲ್ಲಿ ಒಮ್ಮೆ ಯಾವದೋ ಸಂದರ್ಭದಲ್ಲಿ ವರದಕ್ಷಿಣೆಯ ನಿಜವಾದ ಅರ್ಥ ಹೇಳಿ ಅದನ್ನು ಸಮರ್ಥಿಸಿಕೊಂಡಿದ್ದರು ಕೂಡ. ನಾವು ಸಂಪ್ರದಾಯ ಶರಣರು, ಎಂದು ಒಮ್ಮೆ ತಮ್ಮ ಬಗ್ಗೆ ಹೇಳಿ ಕೊಂಡಿದ್ದರೂ ಕೂಡ ಅವರು ಮೌಢ್ಯಕ್ಕೆ ಶರಣಾಗಿರಲಿಲ್ಲ.
ನಮ್ಮ ಎರಡನೇ ವರ್ಷದ ತರಗತಿಯಲ್ಲಿ ಅವರು ರಸ್ಕಿನ್‌ನ ಬಗ್ಗೆ ಹೇಳುತ್ತಿದ್ದರು. ‘ಆನ್ ಟು ದಿಸ್ ಲಾ’ ಕಲಿಸುತ್ತಿದ್ದರು. ತುಂಬ ಆಳವಾಗಿ, ಮಾನವೀಯ ಅನುಕಂಪದ ಹಿನ್ನೆಲೆಯಲ್ಲಿ ಕಲಿಸುತ್ತಿದ್ದರು. ಅವರ ಮಾಡಿದ ವ್ಯಾಪಕ ಟಿಪ್ಪಣಿಗಳಿಂದ ನನ್ನ ಪುಸ್ತಕ ತುಂಬಿ ಹೋಗಿದೆ. ರಸ್ಕಿನ್‌ನ ವಾದವನ್ನು ಸಮರ್ಥಿಸುತ್ತ, ನಮಗೆ ರಜೆಯಲ್ಲೂ ಸಂಬಳ ಕೊಡುತ್ತಾರೆ. ಯಾಕೆ ಕೊಡಬೇಕು,ಹೇಳಿ? ಕೊಡದಿದ್ದರೆ ನಾವು ಉಪವಾಸ ಇರಬೇಕಾಗುತ್ತದೆ ಎಂದಿದ್ದರು.
ಹತ್ತೊಂಬತ್ತನೆಯ ಶತಮಾನದ ಥ್ಯಾಕರೆ ಬರೆದ ಕಾದಂಬರಿ ’ವ್ಯಾನಿಟಿ ಫೇರ್’ ಅವರ ಅಭಿರುಚಿಗೆ ತಕ್ಕಂತೆ ಇರಲಿಲ್ಲ. ಒಮ್ಮೆ, ನನಗೆ ನೆನಪಿದೆ, ಕೆಲವು ಸಾಲುಗಳನ್ನು ಓದದೇ           ಎಂದಿದ್ದರು. ಆಚಾರ್ಯರ ವಿದ್ವತ್ತಿನ ಮತ್ತೊಂದು ಮುಖ ನೋಡಿದ್ದು ಬಿ.ಎ ಮೂರನೇ ವರ್ಷದಲ್ಲಿರುವಾಗ. ಕಲೆಯೆಂದರೇನು, ಕಾವ್ಯ ಅಂದರೇನು, ವಿಮರ್ಶೆ ಎಂದರೇನು? ಹಾಗೂ ಇತರ ಪರಿಕಲ್ಪನೆಗಳನ್ನು ಯಾವುದೇರೆಫರೆನ್ಸ್ಇಲ್ಲದೆ ನಿರಾಳವಾಗಿ ಪಾಠ ಮಾಡುವುದಷ್ಟೇ ಅಲ್ಲ, ನೋಟ್ಸ್ ಕೂಡ ಕೊಡುತ್ತಿದ್ದರು.
ಕಠಿಣ ಇದ್ದರೆ ಕನ್ನಡದಲ್ಲಿ ಎರಡು ಮೂರು ನಿಮಿಷ ವಿವರಿಸುತ್ತಿದ್ದರು. ಟಿ.ಎಸ್ ಎಲಿಯಟ್‌ನನ್ನು ತುಂಬ ಮೆಚ್ಚುತ್ತಿದ್ದರು. ಹಾಗೆಯೇ ವೈಟ್ ಹೆಡ್ ಎಂಬ ತತ್ವಜ್ಞಾನಿ ಯನ್ನೂ.ಮ್ಯಾಕ್ಸ್‌ಮುಲ್ಲರ್‌ನ ಅನುವಾದವನ್ನು ಒಪ್ಪುತ್ತಿರಲಿಲ್ಲ. ಮೂಲದ ಜ್ಞಾನವು ಅವರಿಗೆ ಇದ್ದುದರಿಂದ ಆ ಹಕ್ಕು, ದೃಢತೆ ಅವರಿಗಿದ್ದವು. ಸಿಗ್ಮಂಡ್ ಫ್ರಾಯ್ಡಮನುಷ್ಯನ ಮನಸ್ಸಿನಲ್ಲಿ ಬೇತಾಳ ಸ್ವರೂಪ ಕಂಡವನು ಎಂದು ಜರೆದಿದ್ದರು. ಬೌದ್ಧಿಕತೆಯಲ್ಲಿ ಅವರು ಬ್ರಿಟಿಷರನ್ನು ಮೆಚ್ಚುತಿದ್ದರು, ಅಮೆರಿಕನ್ನರನ್ನಲ್ಲ. ಅವರು ಏನೇ ಹೇಳಿದರೂ ಅದಕ್ಕೆ ಭಾರತೀಯ ತತ್ವಶಾಸ್ತ್ರ, ಸಂಸ್ಕೃತಿಗಳ ಹಿನ್ನೆಲೆ ಯಾವಾಗಲೂ ಇರುತ್ತಿತ್ತು. ಒಮ್ಮೊಮ್ಮೆ ಲಘು ಧಾಟಿಯಲ್ಲಿ ಮಾತನಾಡುವಾಗ ನೀವು ಕುಡಿಯುವ ಚಹಾವನ್ನು ಮೊದಲು ಚರ್ಮ ಹದ ಮಾಡಲು ಉಪಯೋಗಿಸುತಿದ್ದರು ಎಂದಿದ್ದರು.
ಹಾಗೆಯೇ ಕುವೆಂಪು ಅವರ ನಾನೇ ವೀಣೆ.. ಸಾಲಿನ ಕುರಿತು, ಒಂದು ವಯಸ್ಸಿನಲ್ಲಿ ಹಾಗೆ ಅನಿಸುತ್ತದೆ ಎಂದಿದ್ದರು. ಆ ಕಾಲದಲ್ಲಿ ನನಗೆ ಆದಿವಾಸಿ ಜನರ ಬಗ್ಗೆ ಅನಾದರ ಇತ್ತು. ಅದನ್ನು ಅವರು ನಿವಾರಿಸಿದರು. ಮತ್ತೊಮ್ಮೆ ಯಾವದೋ ವಿಷಯಕವಾಗಿ… ಅದು ಸ್ವಾಭಾವಿಕವಲ್ಲವೇ? ಎಂದು ಕೇಳಿದ್ದೆ. ಆಗ ಅವರು ಸ್ವಾಭಾವಿಕವಾಗಿ ಇರುವುದೆ ಲ್ಲವೂ ಸರಿ ಎಂದೇನಿಲ್ಲ ಎಂದಿದ್ದರು. ಹೀಗೆ ಅನೇಕ ಸಲ ಆ ಎಳೆ ವಯಸ್ಸಿನಲ್ಲಿ ನನ್ನ ಚಿಂತನೆಗಳು ಅವರಿಂದಾಗಿ ಸರಿಯಾಗಿ ರೂಪಗೊಂಡವು.
ಒಂದು ಸಲ ನನ್ನನ್ನೂ ಸೇರಿ ಕಾಲೇಜಿನ ಕ್ಯಾಂಟೀನಿಗೆ ಕರೆದುಕೊಂಡು ಹೋಗಿ ತಿಂಡಿ ಚಹಾ ಕೊಡಿಸಿ ತಾವು ಮಾತ್ರ ಏನನ್ನೂ ಮುಟ್ಟದೇ ಉಪನಿಷತ್ತಿನ ಪಕ್ಷಿಯ ಹಾಗೆ ಸುಮ್ಮನೆ ಕುಳಿತಿದ್ದರು. ಅವರು ಹೊರಗಡೆ ನೀರೂ ಕುಡಿಯುತ್ತಿರಲಿಲ್ಲ. ನಾನು ಕೇಳಿದಂತೆ ಜೀವನದ ಒಂದು ಹಂತದಲ್ಲಿ ಅವರಿಗೆ ಉಸಿರಾಟದ ಸಮಸ್ಯೆ ಇತ್ತು. ಹೀಗಾಗಿ ಎಂದೂ ಅವರು ಬೋರ್ಡ್ ಮೇಲೆ ಬರೆದವರಲ್ಲ, ಅದರ ಆವಶ್ಯಕತೆಯೂ ಅವರಿಗೆ ಇರಲಿಲ್ಲ. ಅವರ ವಿದ್ವತ್ತು, ಪಾಠ ಮಾಡುವ ಪರಿ ಅದೆಲ್ಲ ಸರಿ, ಆದರೆ ಅವರ ಒಂದು ನಡವಳಿಕೆ, ತೀರ ಸಣ್ಣ ವಿಷಯವಾದರೂ , ನನಗೆ ಇಂದೂ ಕಣ್ಣಿಗೆ ಕಟ್ಟಿದಂತಿದೆ.
ಮರೆಯದ ಪಾಠವಾಗಿದೆ. ಅದೆಂದರೆ, ಅನೇಕ ಸಲ ಅವರು ಕ್ಯಾಂಪನ್‌ನಲ್ಲಿ ಯಾರದೋ ಜತೆ ಏನೋ ಚರ್ಚೆ ಮಾಡುತ್ತಾನಿಂತಿರುತ್ತಿದ್ದರು. ನನ್ನಂಥ ಸಾಮಾನ್ಯ ವಿದ್ಯಾರ್ಥಿ ಅವರಿಗೆ ನಮಸ್ಕಾರ ಮಾಡಿದರೆ, ಅವರು ತಮ್ಮ ಚರ್ಚೆ ನಿಲ್ಲಿಸಿ, ನಮ್ಮತ್ತಹೊರಳಿ ಪ್ರತಿ ನಮಸ್ಕಾರ ಮಾಡಿ, ನಂತರ ತಮ್ಮ ಚರ್ಚೆ ಮುಂದೆವರಿಸುತ್ತಿದ್ದರು.
ಆಚಾರ್ಯರ ಎಲ್ಲ ವಿಚಾರಗಳನ್ನು ಎಲ್ಲರೂ ಮೆಚ್ಚುತ್ತಿದ್ದರು ಎಂದೇನಿಲ್ಲ. ಆದರೆ ಅಂಥವರನ್ನು ಎದುರಿಸಿ ತಮ್ಮ ವಾದವನ್ನುತಾರ್ಕಿಕವಾಗಿ ಮಂಡಿಸುತ್ತಿದ್ದರು. ಹಾಗೆಂದು ಅವರು  ಕೂಡ ಇರಲಿಲ್ಲ. ನಮ್ಮದೇ ಕಾಲೇಜಿನ ತತ್ವಶಾಸ್ತ್ರದ ಅಧ್ಯಾಪಕ ರೊಬ್ಬರು ಅವರ ಸಮಾನ ಮನಸ್ಕರಾಗಿದ್ದು, ಸದಾ ಕಾಲದ ಮಿತ್ರರಾಗಿದ್ದರು. ಅವರೊಡನೆ ಚಿಂತನ ಮಂಥನ ಸಾಮಾನ್ಯ ವಾಗಿತ್ತು. ಆಚಾರ್ಯರು ಧಾರವಾಡದಲ್ಲಿ ಇರುವಾಗಲೇ ಅಲ್ಲಲ್ಲಿ ಪ್ರವಚನ ಮಾಡುತ್ತಿದ್ದರು. ದೂರದ ಬಿಜಾಪುರದಲ್ಲಿ ಕೂಡ.
ಅಂಥ ಸಮಯದಲ್ಲಿ ಪುಸ್ತಕಗಳ ಒಂದು ತೆಕ್ಕೆಯನ್ನೇ ತಮ್ಮ ಜತೆ ಒಯ್ಯುತ್ತಿದ್ದರು. ಏಕೆ ಎಂದು ಯಾರೋ ಕೇಳಿದಾಗ ಅವರುಹೇಳಿದ್ದು, ‘ನಾನು ಹೇಳುವ ಮಾತಿಗೆ ಆಧಾರವೇನು ಎಂದು ಯಾರಾದರೂ ಕೇಳಬಹುದಲ್ಲವೆ.?’ ಆನಂತರದಲ್ಲಿ ಪುಸ್ತಕ ಬರೆಯಲು ಪ್ರಾರಂಭಿಸಿದರು. ಒಂದೆರಡನ್ನು ನನಗೆ ಕಾಣಿಕೆಯಾಗಿ ನೀಡಿದ್ದರೂ ಕೂಡ. ಏನೇ ಆದರೂ ಮುಂದೆ ಅವರು ಅಷ್ಟೊಂದು ಕ್ರಿಯಾಶೀಲರಾಗಿದ್ದದು, ಸಮಯವನ್ನು ಸಮರ್ಥವಾಗಿ ದುಡಿಸಿಕೊಂಡರು ಎನ್ನುವುದಕ್ಕೆ ಸಾಕ್ಷಿ. ಆಚಾರ್ಯರಿಗೆ ಮಹಾಭಾರತಕ್ಕಿಂತ ರಾಮಾಯಣದ ಮೇಲೆ ಒಂದು ತೂಕ ಹೆಚ್ಚೇ ಗೌರವ.
ಕಾರಣ, ಒಮ್ಮೆ ಅವರೇ ಅಂದ ಹಾಗೆ ರಾಮಾಯಣದಲ್ಲಿ ಇರುವ ಆದರ್ಶಗಳು ಹಾಗೂ ಅದರ ಕಾವ್ಯಗುಣ. ಮಹಾಭಾರತದಲ್ಲಿ ಬೋಧನೆ ಸ್ವಲ್ಪ ಜಾಸ್ತಿ. ರಾಮಾಯಣದ ಮೇಲೆ ಅವರಿಗೆ ಎಷ್ಟು ಗೌರವ ಇತ್ತು ಎನ್ನುವುದಕ್ಕೆ ಒಂದು ಘಟನೆಯ ಉದಾಹರಣೆನೀಡುತ್ತೇನೆ. ಬೆಳಗಾವಿಯ ಕಾಲೇಜೊಂದರಲ್ಲಿ ರಾಮಾಯಣದ ಮೇಲೆ ಅವರ ಉಪನ್ಯಾಸ ಇತ್ತು. ಅದನ್ನು ಶುರು ಮಾಡುವ ಮೊದಲು ಕೆಂಪು ರೇಷ್ಮೆ ಬಟ್ಟೆಯಲ್ಲಿ ಇದ್ದ ಆ ಗ್ರಂಥವನ್ನು ತೆರೆಯುತ್ತಾ ಮೊದಲು ಅದಕ್ಕೆ ಕ್ಷಮೆ ಕೇಳಿದರು. ಕಾರಣವನ್ನೂ ಹೇಳಿದರು. ಅವರು ತಮ್ಮ ಜೀವನದಲ್ಲಿ ಅದೇ ಮೊದಲ ಸಲ ಸೂಟು ಬೂಟು ಹಾಕಿಕೊಂಡು ಅದನ್ನು ಮುಟ್ಟುತ್ತಿದ್ದರು, ಅದಕ್ಕಾಗಿ ಆ ಕ್ಷಮೆ.
ಎಸ್.ಎಲ್.ಭೈರಪ್ಪನವರು ಮೈಸೂರಿನಲ್ಲಿ ಅವರ ಹಾಸ್ಟೆಲ್ ಸಂಗಾತಿಯಾಗಿದ್ದನ್ನು ಒಮ್ಮೆ ಹೇಳಿದ್ದರು.ಅವರ ‘ಪರ್ವ’ ಪ್ರಕಟ ವಾದಾಗ ಅದನ್ನು ಓದಲು ಅವರಿಗೆ ಕೊಟ್ಟಿದ್ದೆ. ಆದರೆ ಕಾರಣಾಂತರದಿಂದ ಅದನ್ನು ಬೇಗ ಮರಳಿ ಪಡೆದೆ. ಆದ್ದರಿಂದ ಅವರು ಅದನ್ನು ಇನ್ನೂ ಓದಿರಲಿಲ್ಲ.
ಮರಳಿಸುವಾಗ ಅವರು ನನ್ನನ್ನು ಕೇಳಿದ್ದು:ಮಹಾಭಾರತ ವನ್ನು ಓದುವಾಗಿನ ಗಹನತೆಯ ಅನುಭವ ಈ ಪುಸ್ತಕ ನೀಡು ತ್ತದೆಯೇ? ಆಚಾರ್ಯರ ಪ್ರಭಾವ ನನ್ನ ಮೇಲೆ ಎಷ್ಟಾಗಿತ್ತೆಂದರೆ ನಾನು ಉಪನ್ಯಾಸಕನಾದ ಮೇಲೆ ಪಾಠ ಮಾಡುವಾಗ ಅವರನ್ನೇ ಅನುಸರಿಸುತ್ತಿದ್ದೇ ನೇನೋ ಎಂದು ಅನಿಸುತಿತ್ತು. ಇವೆಲ್ಲ ನನ್ನೊಬ್ಬನ ನೆನಪುಗಳಾದರೆ ಇನ್ನೂ ಎಷ್ಟೊಂದು ವಿದ್ಯಾರ್ಥಿಗಳಲ್ಲಿ ಎಷ್ಟೊಂದು ನೆನಪುಗಳಿವೆಯೋ! ಈ ಸ್ಮೃತಿ ಚಿತ್ರದ ಮೂಲಕ ಆಚಾರ್ಯರಿಗೆ ನನ್ನ ಭಾವಪೂರ್ಣ ವಿದಾಯದ ನಮನಗಳು.