ಮನುಕುಲಕ್ಕೆ ಸ್ವಚ್ಛತೆ ಪಾಠ ಕಲಿಸಿದವರು !
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಪ್ರತಿ ಮನೆಯಲ್ಲಿ ಶೌಚಾಲಯವಿರುತ್ತಿತ್ತು. ಇವು ಆಧುನಿಕ ಶೌಚಾಲಯದ ಹಾಗೇ ಇದ್ದವು. ಆದರೆ ಮಲಮೂತ್ರ ಹೊರಸಾಗಿಸುವ ವ್ಯವಸ್ಥೆ ಇರಲಿಲ್ಲ. ಬದಲಿಗೆ ಶೌಚಾಲಯದ ಕೆಳಗಿದ್ದ ಇಂಗುಗುಂಡಿಯಲ್ಲಿ ಶೇಖರವಾಗುತ್ತಿದ್ದವು. ಇದನ್ನು ನಿಯಮಿತವಾಗಿ ಬಾಚಿ ಸ್ವಚ್ಛಗೊಳಿಸಬೇಕಾಗಿತ್ತು.
ಒಬ್ಬ ಮನುಷ್ಯನು ಆರೋಗ್ಯಕರವಾಗಿ ಇರಬೇಕಾದರೆ, ಮೊದಲು ಅವನು ಸಮತೋಲಿತ ಆಹಾರವನ್ನು ಸೇವಿಸಬೇಕು. ಎರಡನೆ ಯದಾಗಿ ಹಿತ-ಮಿತ ಪ್ರಮಾಣದ ಶಾರೀರಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಹಾಗೂ ಮೂರನೆಯದಾಗಿ ಸ್ವಚ್ಛತೆ ಯನ್ನು ಪರಿ ಪಾಲಿಸಬೇಕು. ಪ್ರಾಚೀನ ನಾಗರೀಕತೆಗಳಲ್ಲಿ ಸ್ವಚ್ಛತೆಯು ತನ್ನ ಗರಿಷ್ಠ ಮಟ್ಟವನ್ನು ಸಿಂಧು-ಸರಸ್ವತಿ ಸಂಸ್ಕತಿಯಲ್ಲಿ ತಲುಪಿತ್ತು ಎಂದರೆ ಅದು ಅತಿಶಯೋಕ್ತಿಯಾಗ ಲಾರದು.
ಸ್ವಚ್ಛತೆ ಎನ್ನುವುದು 3 ಆಯಾಮ ಒಳಗೊಂಡಿದೆ. ಮೊದಲನೆಯದು ವಾಸ ಸ್ಥಳದಲ್ಲಿ ಧಾರಾಳವಾಗಿ ಗಾಳಿ- ಬೆಳಕಿನ ಲಭ್ಯತೆ. ಎರಡನೆಯದು ಅತ್ಯುತ್ತಮ ಕುಡಿಯುವ ನೀರಿನ ಸೌಲಭ್ಯ ಹಾಗೂ ಒಳಚರಂಡಿ ವ್ಯವಸ್ಥೆ, ಮೂರನೆಯದು ವೈಯುಕ್ತಿಕ ಸ್ವಚ್ಛತೆ. ಈ 3 ವಿಚಾರದಲ್ಲಿ ಸಿಂಧು- ಸರಸ್ವತಿ ಸಂಸ್ಕೃತಿಯ ನಾಗರಿಕರು ಅದ್ವಿತೀಯರಾಗಿದ್ದರು. ಆದರೆ ಅವರ ಸ್ವಚ್ಛತಾ ಪರಂಪರೆಯು ಮುಂದಿನ ವೇದಕಾಲದ ಭಾರತದಲ್ಲಾಗಲಿ, ನಂತರ ಮಧ್ಯ ಯುಗದ ಭಾರತದಲ್ಲಿ ಕಂಡುಬರುವುದಿಲ್ಲ. ಇದಕ್ಕೆ ಕಾರಣ ಮಾತ್ರ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಸಿಂಧು-ಸರಸ್ವತಿ ಸಂಸ್ಕತಿಯು ಸುಮಾರು 1500 ಚ.ಕಿ.ಮೀ ವ್ಯಾಪ್ತಿಯಲ್ಲಿದ್ದ 1052ನಗರಗಳಲ್ಲಿ ಬೆಳೆದಿತ್ತು. ಇವುಗಳಲ್ಲಿ ಸುಮಾರು 100 ಸ್ಥಳಗಳಲ್ಲಿ ಮಾತ್ರ ಉತ್ಖನನವನ್ನು ಮಾಡಿ, ಅಂದಿನ ಸಂಸ್ಕೃತಿಯ ವೈಭವದ ಬಗ್ಗೆ ದಾಖಲೆಗಳನ್ನು ನಡೆಸಿರುವರು. ಈ ನೂರು ನಗರಗಳಲ್ಲಿ ಅತ್ಯಂತ ಮುಖ್ಯವಾದವು ರಾಖಿಗರ್ಹಿ (ಕ್ರಿ.ಪೂ.4000), ಹರಪ್ಪ (ಕ್ರಿ.ಪೂ.2600), ಧೋಲಾವೀರ (ಕ್ರಿ.ಪೂ. 2650) ಮತ್ತು ಮೊಹೆಂಜೋದಾರೊ (ಕ್ರಿ.ಪೂ.2500).
ರಾಖಿಗರ್ಹಿ ನಗರವು ಹರ್ಯಾಣ ರಾಜ್ಯದ ಹಿಸ್ಸಾರ್ ಜಿಲ್ಲೆಯ ಘಗ್ಗರ್-ಹಕ್ರಾ ನದಿ ಕಣಿವೆಯಲ್ಲಿ ವ್ಯಾಪಿಸಿದೆ. ಇದು ಕ್ರಿ.ಪೂ.6500 ವರ್ಷಗಳಷ್ಟು ಹಿಂದೆ ಆರಂಭವಾಗಿದ್ದ ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಬೃಹತ್ ನಗರ. ಇಂದು ಸುಮಾರು 550 ಹೆಕ್ಟೇರ್ ಪ್ರದೇಶದಲ್ಲಿ ರಾಖಿಗರ್ಹಿ ಅವಶೇಷಗಳನ್ನು ಕಾಣಬಹುದು. ಸಿಂಧು-ಸರಸ್ವತಿ ನಗರಗಳ ಕಾಲಮಾನವನ್ನು ನಿರ್ಧರಿಸುವಾಗ ಹರಪ್ಪ ನಗರದ ಕಾಲವನ್ನು ಮಾದರಿಯಾಗಿ ಪರಿಗಣಿಸುವುದುಂಟು. ಹಾಗಾಗಿ ರಾಖಿಗರ್ಹಿಯಲ್ಲಿ ಹರಪ್ಪ ಪೂರ್ವ ಕಾಲದ ಎರಡು ಹಂತಗಳು ಕಂಡುಬರುತ್ತವೆ. ನಂತರ ಪ್ರಾರಂಭಿಕ ಹರಪ್ಪಾ ಹಂತವು ಹಾಗೂ ಪ್ರಬುದ್ಧ ಹರಪ್ಪ ಹಂತವನ್ನು ನೋಡಬಹುದು. ಈ ಪ್ರಬುದ್ಧ ಹರಪ್ಪಾ ಹಂತವು ಕ್ರಿ.ಪೂ. 4040-3900 ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬಂದಿತ್ತು.
ಸಿಂಧೂ-ಸರಸ್ವತಿ ನಗರಗಳ ವೈಶಿಷ್ಟ್ಯವೆಂದರೆ ಎಲ್ಲವೂ ಯೋಜಿತ ನಗರಗಳಾಗಿದ್ದವು. ಎಲ್ಲ ನಗರಗಳಲ್ಲಿ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಒಳಚರಂಡಿ ವ್ಯವಸ್ಥೆಗಳಿದ್ದವು. ಜಲಚಾಲಿತ (ಹೈಡ್ರಾಲಿಕ್ ಎಂಜಿನಿರಿಂಗ್) ತಂತ್ರಜ್ಞಾನವನ್ನು ಬಳಸುತ್ತಿದ್ದರು. ಸಾಮಾನ್ಯವಾಗಿ ಕೋಟೆ ಗೋಡೆಯಿಂದ ಸುತ್ತುವರೆದಿದ್ದವು. ಕೆಲವು ಕಡೆ ಕೋಟೆ ಗೋಡೆಯ ಹೊರಗೆ ಅಗಳಿ ಗಳಿರುತ್ತಿದ್ದವು.
ಸಿಂಧು ಸರಸ್ವತಿ ನಗರದ ಪ್ರಧಾನ ರಸ್ತೆಗಳು ಉತ್ತರ ದಕ್ಷಿಣಾಭಿಮುಖವಾಗಿ ಇದ್ದವು. ಹಾಗಾಗಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಬೆಳಕು ಮನೆಗಳ ಒಳಗೆ ಬೀಳುತ್ತಿ ದ್ದವು. ಪೂರ್ವ ಪಶ್ಚಿಮಾಭಿಮುಖವಾಗಿ ಸಣ್ಣ ಅಡ್ಡರಸ್ತೆಗಳು ಸಾಗುತ್ತಿದ್ದವು. ಹಾಗಾಗಿ ಇಡೀ ನಗರವು ಚೌಕಾಕೃತಿಯ ಗ್ರಿಡ್ ವ್ಯವಸ್ಥೆಯನ್ನು ಒಳಗೊಂಡಿತ್ತು ಎನ್ನಬಹುದು. ಮನೆಗಳು ಒಂದು ಅಂತಸ್ತು, ಎರಡು ಅಂತಸ್ತು ಅಥವಾ ಹೆಚ್ಚಿನ ಅಂತಸ್ತುಗಳನ್ನು ಒಳಗೊಂಡಿದ್ದವು. ಮನೆಗಳಲ್ಲಿ ಸುಟ್ಟ ಇಟ್ಟಿಗೆಗಳಲ್ಲಿ ಕಟ್ಟುತ್ತಿದ್ದರು. ಮನೆಯಲ್ಲಿ ಹಲವು ಕೋಣೆಗಳು ಇರುತ್ತಿದ್ದವು.
ಅವುಗಳಲ್ಲಿ ಸ್ನಾನಕ್ಕೆ ಪ್ರತ್ಯೇಕವಾದ ಕೋಣೆಯಿರುತಿತ್ತು ಹಾಗೂ ಶೌಚಾಲಯವೂ ಇರುತ್ತಿತ್ತು. ನಮ್ಮ ಇಂದಿನ ಈಜುಕೊಳ ಗಳನ್ನು ನೆನಪಿಸುವ ಸಾರ್ವಜನಿಕ ಸ್ನಾನಕೊಳಗಳು ಇರುತ್ತಿದ್ದವು. ಮೊಹೆಂಜೋದಾರೊವಿನ ದಿ ಗ್ರೇಟ್ ಬಾತ್ ಸ್ನಾನಕೊಳವು ಇಂದಿನ ಮಧ್ಯಮ ಪ್ರಮಾಣದ ಈಜುಕೊಳದಷ್ಟು ವಿಸ್ತಾರವಾಗಿತ್ತು. ಈಜುಕೊಳದ ಒಳಗೆ ಇಳಿಯಲ್ಲಿ ಕೊಳದ ಎರಡೂ ಅಂಚಿನಲ್ಲಿ ಮೆಟ್ಟಿಲುಗಳು ಇರುತ್ತಿದ್ದವು. ಇಡೀ ಕೊಳವು ನಯವಾದ ಇಟ್ಟಿಗೆಗಳಿಂದ ರಚನೆಯಾಗಿದ್ದು, ನೀರು ಎಲ್ಲಿಯೋ ಸೋರುತ್ತಿರಲಿಲ್ಲ.
ಇಟ್ಟಿಗೆಗಳ ನಡುವೆ ಜಿಪ್ಸಂ ಆಧಾರಿತ ಗಾರೆಯನ್ನು ಬಳಸುತ್ತಿದ್ದ ಕಾರಣ ವಾಟರ್ ಪ್ರೂಫ್ ಸಾಮರ್ಥ್ಯವು ಬರುತ್ತಿತ್ತು. ಜತೆಗೆ ಬಳಸಿದ ನೀರನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಅತ್ಯುತ್ತಮ ವ್ಯವಸ್ಥೆಯಿತ್ತು. ಬಹುಶಃ ಸಿಂಧು-ಸರಸ್ವತಿ ನಾಗರಿಕತೆಯ ಜನರು ಪ್ರತಿ ದಿನವೂ ಸ್ನಾನ ಮಾಡುತ್ತಿದ್ದರು ಎಂದು ಕಾಣುತ್ತದೆ. ಹಬ್ಬ-ಉತ್ಸವಗಳಲ್ಲಿ ಸಾರ್ವಜನಿಕ ಕೊಳಗಳಲ್ಲಿ ಸ್ನಾನವನ್ನುಮಾಡುತ್ತಿದ್ದಿರಬಹುದು. ಹರಪ್ಪಾಪೂರ್ವ ಬನವಾಲಿಯಲ್ಲಿ (ಕ್ರಿ.ಪೂ.2700-2500) ಸೀಗೆಕಾಯಿ, ಅಂಟುವಾಳದಕಾಯಿಹಾಗೂ ಒಣನೆಲ್ಲಿಯಿಂದ ತಯಾರಿಸಿದ ಶಾಂಪೂ ದೊರೆತಿದೆ.
ಭಾರತೀಯರು ಸಾವಿರಾರು ವರ್ಷಗಳ ಹಿಂದೆಯೇ ಹರ್ಬಲ್ ಶಾಂಪು ಬಳಸುತ್ತಿದ್ದರು ಎನ್ನುವುದಕ್ಕೆ ಇದು ಪುರಾವೆಯನ್ನು ಒದಗಿಸುವುದರ ಜೊತೆಯಲ್ಲಿ, ಅವರು ಸ್ವಚ್ಛತೆಗೆ ನೀಡಿದ್ದ ಆದ್ಯತೆಗೆ ಪ್ರತೀಕವಾಗಿದೆ. ಸಿಂಧು-ಸರಸ್ವತಿಯ ಜನರು ಹಲ್ಲನ್ನು ಉಜ್ಜಲು ಯಾವ ದಂತದಾವನವನ್ನು ಬಳಸುತ್ತಿದ್ದರು ಎಂಬುದು ನಮಗೆ ತಿಳಿದಿಲ್ಲ. ಆದರೆ ಅವರ ಹಲ್ಲುಗಳು ಹುಳುಕು ಹಿಡಿಯುತ್ತಿದ್ದವು ಎನ್ನುವುದಕ್ಕೆ ಪುರಾವೆಯಿದೆ. ಇಂತಹ ಹುಳುಕುಹಲ್ಲುಗಳ ಹುಳುಕನ್ನು ಬೋಡ್ರಿಲ್ ಮೂಲಕ ಕೊರೆದು ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ವೈವಿದ್ಯಮಯ ವಸ್ತುಗಳನ್ನು ತುಂಬಿ, ಹಲ್ಲನ್ನು ಉಳಿಸುತ್ತಿದ್ದರು. (ಬೋಡ್ರಿಲ್ ಎಂದರೆ ವೇದಗಳ ಕಾಲದಲ್ಲಿ ಕಂಡುಬಂದ ಆರಣಿಯ ಪ್ರಾಚೀನ ರೂಪ. ಯಜ್ಞಯಾಗಾದಿಗಳಲ್ಲಿ ಅಗ್ನಿಯನ್ನು ಸೃಜಿಸಲು ಶಮಿವೃಕ್ಷದ ಹಲಗೆಯಲ್ಲಿಶಮೀವೃಕ್ಷದ ಬೆಣೆಯನ್ನು ಇಟ್ಟು ಅದನ್ನು ಹಗ್ಗದಿಂದ/ ಅಂಗೈಗಳಿಂದ ಕಡೆದು/ಅಗ್ನಿಯನ್ನು ಉತ್ಪಾದಿಸುತ್ತಿದ್ದರು.)
ಸಿಂಧು-ಸರಸ್ವತಿಯ ಜನರು ಮಿಶ್ರಾಹಾರಿಗಳಾಗಿದ್ದರು. ದನ, ಹಂದಿ, ಕುರಿ, ಮೇಕೆ, ಕೋಳಿ, ಮೀನು ಮುಂತಾದವನ್ನು ತಿನ್ನುತ್ತಿದ್ದರು. ದನಗಳನ್ನು ಹಾಲಿಗಾಗಿ ಹಾಗೂ ಮಾಂಸಕ್ಕಾಗಿ ಸಾಕುತ್ತಿದ್ದರು. ಖರ್ಜೂರ, ದ್ರಾಕ್ಷಿ, ಕಲ್ಲಂಗಡಿ ಹಣ್ಣುಗಳನ್ನುಬೆಳೆಯುತ್ತಿದ್ದರು. ಭತ್ತ, ಗೋಽ, ಬಾರ್ಲಿ, ರಾಗಿ, ಜೋಳದ ಜತೆಯಲ್ಲಿ ತೊಗರಿ, ಕಡಲೆ, ಹುರಳಿ, ಹೆಸರು, ಬಟಾಣಿ, ಸಾಸಿವೆ, ಬದನೆ, ಸೌತೆ, ಕುಂಬಳಗಳನ್ನು ಬೆಳೆಯುತ್ತಿದ್ದರು. ಮಾಂಸಾಹಾರಕ್ಕಿಂತ ಸಸ್ಯಾಹಾರವನ್ನು ಹೆಚ್ಚು ಬಳಸುತ್ತಿದ್ದಿರಬಹುದು. ಗಂಡಸರು ದಷ್ಟುಪುಷ್ಟವಾಗಿದ್ದರು. ಅವರ ಹಲ್ಲುಗಳು ಸದೃಢವಾಗಿದ್ದವು.
ಪ್ರತಿಯೊಂದು ಮನೆಯ ಸ್ನಾನ, ಬಚ್ಚಲುಮನೆಯ ನೀರು, ಅದು ಕೆಳ ಅಂತಸ್ತಿನಲ್ಲಿರಲಿ ಅಥವ ಮೇಲಿನ ಅಂತಸ್ತಿನಲ್ಲಿರಲು ಒಂದು ಟೆರ್ರಾಕೊಟ್ಟ ಕೊಳವೆಯ ಮೂಲಕ ಹೊರಬರುತ್ತಿತ್ತು. ಈ ಕೊಳವೆಯು ಮನೆಯ ಅಂಗಳದ ಮೂಲಕ ನೆಲದಲ್ಲಿಯೇ ಹಾದುಹೋಗುತ್ತಿತ್ತು. ರಸ್ತೆಯ ನಡುವೆಯಿದ್ದ ಸಾರ್ವಜನಿಕ ಚರಂಡಿಮಾರ್ಗವನ್ನು ಸೇರುತ್ತಿತ್ತು. ಪ್ರತಿಯೊಂದು ಬೀದಿಯ ಸಾರ್ವಜನಿಕ ಚರಂಡಿಯು ದೊಡ್ಡ ದೊಡ್ಡ ಚರಂಡಿಗಳನ್ನು ಸೇರಿ, ಕೊನೆಗೆ ಊರಿನ ಹೊರಗೆ ಸಾಗುತ್ತಿತ್ತು. ಊರಿನ ಎಲ್ಲ ಚರಂಡಿ ನೀರನ್ನು ಹೊರಸಾಗಿಸುವ ಚರಂಡಿಯಲ್ಲಿ ಒಬ್ಬ ವ್ಯಕ್ತಿ ಆರಾಮವಾಗಿ ನಡೆದುಹೋಗುವಷ್ಟು ದೊಡ್ಡದಾಗಿರುತ್ತಿತ್ತು.
ಈ ಚರಂಡಿ ಮಾರ್ಗಗಳನ್ನು ಸೋರದ ಇಟ್ಟಿಗೆಗಳಿಂದ ಒತ್ತಾಗಿ ನಿರ್ಮಿಸುತ್ತಿದ್ದರು. ಒಂದು ವಿಶೇಷವನ್ನು ಗಮನಿಸಬೇಕು. ಇಡೀ ಚರಂಡಿ ವ್ಯವಸ್ಥೆಯು ಗುರುತ್ವಾಕರ್ಷಣೆಯ ತತ್ತ್ವವನ್ನು ಅಳವಡಿಸಿಕೊಂಡಿತ್ತು. ಹಾಗಾಗಿ ಇಡೀ ನಗರದ ಕೊಳೆಯು ಹೆಚ್ಚುಶ್ರಮವಿಲ್ಲದೆ ನಗರದ ಹೊರಗಡೆಗೆ ವಿಲೇವಾರಿಯಾಗುತ್ತಿತ್ತು. ರಸ್ತೆಯ ಪ್ರತಿಯೊಂದು ಆಯಕಟ್ಟಿನ ಮೂಲೆಗಳಲ್ಲಿ, ಇಟ್ಟಿಗೆಗಳಿಂದ ಮಾಡಿದ ಸಾರ್ವಜನಿಕ ತ್ಯಾಜ್ಯ ಸಂಗ್ರಹ ರಚನೆಗಳಿ ರುತ್ತಿದ್ದವು. ಬಹುಶಃ ಪ್ರತಿದಿನವೂ ಈ ತ್ಯಾಜವನ್ನು ಸಂಗ್ರಹಿಸಿ, ಊರಿನಿಂದ ಹೊರಗೆ ಸುರಿಯುತ್ತಿದ್ದರೆಂದು ಕಾಣುತ್ತದೆ.
ಪ್ರತಿಯೊಂದು ಮನೆಯಲ್ಲಿ ಶೌಚಾಲಯವಿರುತ್ತಿತ್ತು. ಇವು ಆಧುನಿಕ ಶೌಚಾಲಯದ ಹಾಗೇ ಇದ್ದವು. ಆದರೆ ಮಲಮೂತ್ರಗಳನ್ನು ಹೊರಸಾಗಿಸುವ ವ್ಯವಸ್ಥೆ ಇರಲಿಲ್ಲ. ಬದಲಿಗೆ ಶೌಚಾಲಯದ ಕೆಳಗಿದ್ದ ಇಂಗುಗುಂಡಿಯಲ್ಲಿ ಶೇಖರವಾಗುತ್ತಿದ್ದವು. ಇದನ್ನು ನಿಯಮಿತವಾಗಿ (ಹಲವು ವರ್ಷಗಳಿಗೊಮ್ಮೆ) ಬಾಚಿ ಸ್ವಚ್ಛಗೊಳಿಸಬೇಕಾಗಿತ್ತು. ಇಂತಹುದ್ದೇ ಶೌಚಾಲಯವನ್ನು ವಿಜಯ ನಗರದ ರಾಣೀವಾಸದವರೂ ಬಳಸುತ್ತಿದ್ದುದನ್ನು ಹಂಪೆಯಲ್ಲಿ ಇಂದು ನಾವು ನೋಡಬಹುದು.
ಧೋಲಾವೀರ ನಗರವು ಗುಜರಾತಿನ ಕಚ್ ಪ್ರದೇಶದಲ್ಲಿದೆ. ಇದು ಮರುಭೂಮಿ ಒಣಪ್ರದೇಶ. ಮಳೆಯು ಕಡಿಮೆ ಪ್ರಮಾಣದಲ್ಲಿ ಬೀಳುತ್ತಿದ್ದ ಕಾರಣ, ಮಳೆಕುಯ್ಲನ್ನು ಇಲ್ಲಿ ನಿಯಮಿತವಾಗಿ ನಡೆಸುತ್ತಿದ್ದರು. ಮಳೆಯ ನೀರನ್ನು ಸಂಗ್ರಹಿಸುವ ಮೂರು ದೊಡ್ಡ ಕೊಳಗಳು ಇಲ್ಲಿವೆ. ಹಾಗೆಯೇ ಹತ್ತಿರದಲ್ಲಿ ಹರಿಯುವ ಎರಡು ಕಿರುತೊರೆಯಲ್ಲಿ ನೀರು ಅಧಿಕವಾಗಿ ಹರಿಯುವಾಗ, ಅದನ್ನೂ ಸಂಗ್ರಹಿಸುವ ವ್ಯವಸ್ಥೆಯಿದೆ. ಈ ಕಾಲುವೆ ಹಾಗೂ ಕೊಳಗಳನ್ನು ಕಲ್ಲಿನಿಂದ ಕಟ್ಟಿದ್ದರು. ಹಾಗಾಗಿ ನೀರು ಸೋರಿ ನಷ್ಟವಾಗಲು ಅವಕಾಶವೇ ಇರಲಿಲ್ಲ.
16ಕ್ಕೂ ಹೆಚ್ಚು ಸಾರ್ವಜನಿಕ ಕೊಳಗಳನ್ನು ಇಲ್ಲಿ ನೋಡಬಹುದು. ಸಿಂಧು-ಸರಸ್ವತಿ ಸಂಸ್ಕ ತಿಗೆ ಜನ್ಮನೀಡಿದ ಸಂಸ್ಕೃತಿಯುಇಂದಿನ ಬಲೂಚಿಸ್ತಾನದಲ್ಲಿರುವ ಮೆಹರ್ಘಡ ಸಂಸ್ಕೃತಿ (ಕ್ರಿ.ಪೂ.7000-3200). ಬಲೂಚಿಸ್ತಾನದ ಬೆಟ್ಟಗಳಿಂದ ಹರಿದು ಬರುವ ಬೋಲಾನ್ ನದಿಯ ನೀರನ್ನು ಸಂಗ್ರಹಿಸಲು ಕಲ್ಲಿನ ಅಣೆಕಟ್ಟನ್ನು ಕಟ್ಟಿದ್ದರು. ಈ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ಕಾಲುವೆಗಳ ಮೂಲಕ ಹೊಲಗದ್ದೆಗಳಿಗೆ ಸಾಗಿಸುತ್ತಿದ್ದರು.
ನಗರಗಳಲ್ಲಿ ಸಾರ್ವಜನಿಕ ಬಾವಿಗಳಿರುತ್ತಿದ್ದವು. ಹಾಗೆಯೇ ಕೆಲವರು ತಮ್ಮ ಮನೆಯ ಹಿತ್ತಿಲಿನಲ್ಲಿ ಬಾವಿಗಳನ್ನು ತೋಡಿ ಕೊಂಡಿದ್ದು, ಅದನ್ನು ದೈನಂದಿನ ಬಳಕೆಗೆ ಉಪಯೋಗಿಸುತ್ತಿದ್ದರು. ಮನೆಯ ಹಿಂಭಾಗದಲ್ಲಿಯೇ ಬಟ್ಟೆಗಳನ್ನು ಒಗೆಯಲು ಒಂದು ಕಲ್ಲಿನ ಹಾಸು ಇರುತ್ತಿತ್ತು. ಕೆರೆಗಳಲ್ಲಿ ಮತ್ತು ದೊಡ್ಡ ಬಾವಿಗಳಲ್ಲಿ ಇರುವ ನೀರನ್ನು ಮೇಲಕ್ಕೆತ್ತಿ ಹೊಲಗದ್ದೆಗಳಿಗೆ ಹರಿಸಲು ಘಟಚಕ್ರಗಳನ್ನು (ಪರ್ಷಿಯನ್ ವೀಲ್) ಹಾಗೂ ಏತಗಳನ್ನು ಬಳಸುತ್ತಿದ್ದರು. ಕರ್ನಾಟಕದಲ್ಲಿ ಪಂಪ್ ಸೆಟ್ ಅನುಕೂಲ ದೊರೆಯುವ ವರಿಗೂ ಏತ ಹಾಗೂ ಕಪಿಲೆಯಮೂಲಕವೇ ನೀರನ್ನು ಹರಿಸುತ್ತಿದ್ದೆವು ಎನ್ನುವುದನ್ನು ನೆನಪಿಗೆ ತಂದುಕೊಳ್ಳಬಹುದು.
ಘಟಚಕ್ರವು ಪರ್ಷಿಯನ್ ವೀಲ್ ಎಂಬ ಹೆಸರಿನಿಂದ ಜಗತ್ತಿಗೆ ಪರಿಚಿತವಾದದ್ದು. ಮೆಸಪೊಟೋಮಿಯದಲ್ಲಿ ಕ್ರಿ.ಪೂ.೩೦೦೦ ವರ್ಷಗಳಷ್ಟು ಹಿಂದೆಯೇ ಏತ/ಘಟಚಕ್ರವನ್ನು ಬಳಸುತ್ತಿದ್ದರು. ಯಾರಿಂದ ಯಾರು ಕಲಿತರೂ ಎನ್ನುವ ಸತ್ಯ ಕಾಲಕ್ಕೆ ಮಾತ್ರ ತಿಳಿಯಲು ಸಾಧ್ಯ. ಸಿಂಧು-ಸರಸ್ವತಿ ನಾಗರಿಕತೆಯನ್ನು ನಿರ್ಮಿಸಿದ ಜನರು ಇಡೀ ಜಗತ್ತಿಗೆ ಸ್ವಚ್ಛತೆಯ ಮಹತ್ವವನ್ನು ತಿಳಿಸಿದ ಮೊದಲ ಜನರು ಎಂದರೆ ಅದು ಅತಿಶಯೋಕ್ತಿಯಾಗಲಾರದು.