ನಾವು ವಿಶ್ವಗುರು ಆಗೋದೇ ಇಲ್ಲ ಬಿಡಿ !
ಅಭಿಪ್ರಾಯ
ವಿನಯ್ ಖಾನ್
vinaykhan078@.
ನಾವು ಎಷ್ಟು ಬೇರೆ ದೇಶದ ಮೇಲೆ ಅವಲಂಬಿತರಾಗಿರುತ್ತೇವೋ ಅಷ್ಟು ನಮ್ಮತನವನ್ನು ಕಳೆದುಕೊಂಡಂತೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಆತ್ಮನಿರ್ಭರಭಾರತದ ಕೂಗು ಹೆಚ್ಚುತ್ತಿರುವುದು. ಹಾಗೆಂದರೆ ಅದು ಬರೀ ಸ್ವದೇಶಿ ವಸ್ತುಗಳನ್ನು ಖರೀದಿಸುವುದಲ್ಲ. ನಮ್ಮವರನ್ನು ಬೆಳೆಸುವುದು; ನಾವೇ ಬೆಳೆಯುವುದು.
  21st    - ಈ ಮಾತನ್ನು ಹೇಳಿದ್ದು ಅಮೇಜಾನ್ ಸಂಸ್ಥಾಪಕ ಜೆಫ್ ಬೇಜೋಸ್. ಬಹುಶಃ ಸತ್ಯಾಂಶವಿರಬಹುದು. ಯಾಕೆಂದರೆ ವಿಶ್ವ, ಭಾರತವನ್ನು ನೋಡುವ ಪರಿ ಬೇರೆಯಾಗುತ್ತಿದೆ. ನಮ್ಮನ್ನೆಲ್ಲ ಅಜ್ಞಾನಿಗಳು ಎಂದವರೆಲ್ಲ ಇತ್ತೀಚೆಗೆ ಭಾರತದ ಕಡೆ ಮುಖ ಮಾಡಿದ್ದಾರೆ.ಹಾಗೆ ನಮ್ಮ ಬುದ್ಧಿವಂತರನ್ನು ಇಲ್ಲಿಂದ ಕರೆದುಕೊಂಡು ಹೋಗಿ ತಮ್ಮ ತಿಜೋರಿಯನ್ನು ತುಂಬಿಸಿಕೋಳ್ಳು ತ್ತಿರುವುದಂತೂ ನಿಜ.
‘ವಿಶ್ವಗುರು ಭಾರತ’-ಹೀಗೆಲ್ಲ ಬಹಳ ಜನ ಹೇಳುತ್ತಿರುವುದನ್ನು ಕೇಳಿರುತ್ತೀರಿ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲಂತೂ ಈ ಕೂಗು ಜಾಸ್ತಿಯಾಗು ತ್ತಿದೆ. ಆದರೇ ವಿಶ್ವಗುರು ಸ್ಥಾನಕ್ಕೆ ನಾವು ಅರ್ಹರಾ ಅಂತಾನೂ ಪ್ರಶ್ನೆ ಮಾಡಿಕೊಳ್ಳಬೇಕಿದೆ. (ಅರ್ಹತೆ ಅಂದರೆ ದೇಶದ್ದಲ್ಲ, ಇಲ್ಲಿಯ ಸಾಮಾನ್ಯ ಜನರದ್ದು) ಪ್ರಧಾನಿಯವರು ಅಮೆರಿಕಕ್ಕೆ ಹೋದಾಗ ಸೇರುವ ಜನರಿಂದ ದೇಶದ ಅಭಿವೃದ್ಧಿಯನ್ನು ನೋಡಲು ಸಾಧ್ಯವಿಲ್ಲ. ಅಭಿವೃದ್ಧಿ ಏನಿದ್ದರೂ ಇಲ್ಲಿಯ ಜನರ ಮಾನಸಿಕತೆಯ ಮೇಲೆ.
ಇನ್ನು ನಮ್ಮಲ್ಲಿ ಎಷ್ಟೋ ಜನರಿಗೆ ದೇಶದ ಬಗ್ಗೆ ಸರಿಯಾದ ಪರಿಕಲ್ಪನೆಯೇ ಇಲ್ಲ, ಇನ್ನು ಕೆಲವರು ದೇಶವನ್ನು ಒಡೆಯಲು ಹೊರಟಿದ್ದಾರೆ. ಇತ್ತೀಚೆಗಂತೂ ಯಾವುದೇ ಹೊಸ ಸಾಂವಿಧಾನಿಕ ವಿಧಿಯನ್ನು ತರಲಿ ಅದರ ವಿರುದ್ಧ ನಿಲ್ಲುವ ಬಹುದೊಡ್ಡ ಗಣ ಜೀವಂತವಾಗಿದೆ. ಇನ್ನೆಷ್ಟೋ ಜನರಿಗೆ ಎಲ್ಲ ಸರಕಾರದ ಸವಲತ್ತುಗಳು ಬೇಕು ಆದರೆ ಸರಕಾರ, ದೇಶ, ಆರ್ಥಿಕ ಪರಿಸ್ಥಿತಿ ಬೆಳೆಯುವುದು ಬೇಡ! ತೆರಿಗೆ ಕಟ್ಟುವುದು ಬೇಡ, ಆದರೇ ಸಬ್ಸಿಡಿಗಳು ಸರಿ ಯಾದ ಸಮಯದಲ್ಲಿ ಬರಬೇಕು!
ಇಡೀ ಪ್ರಪಂಚ ಭಾರತದ ಮಾತನ್ನು ಸುಖಾಸುಮ್ಮನೆಯಂತೂ ಕೇಳಲ್ಲ, ಮೊದಲು ನಾವು ನಮ್ಮ ಮೇಲೆ ಆತ್ಮನಿರ್ಭರವಾಗಿರಬೇಕು. ಒಗ್ಗಟ್ಟಾಗಿರಬೇಕು, ಆದರೇ ಭಾರತದ ರಾಜಕೀಯ ಪರಿಸ್ಥಿತಿ ಹಾಗೂ ಮಾನವನ ಮನಃಸ್ಥಿತಿಯಲ್ಲಿ ಒಗ್ಗಟ್ಟಂತೂ ಕಾಣಿಸುತ್ತಿಲ್ಲ. ಒಂದು ದೇಶ ಬೆಳೆಯಬೇಕೆಂದರೆ ಅದು, ಅಲ್ಲಿನ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಮೇಲೆ ನಿಂತಿರುತ್ತೆ. ಮೊನ್ನೆ ಭಾರತದ ಜಿಡಿಪಿಯಲ್ಲಿನ ಏರಿಕೆಯನ್ನು ಕಂಡಾಗ, ಭಾರತ ಹಲವಾರು ಕಟ್ಟುಪಾಡುಗಳನ್ನುಸಂಕಷ್ಟವನ್ನೂ ಮೆಟ್ಟಿನಿಂತು ಈ ನಿಟ್ಟಿನಲ್ಲಿ ಸಾಧನೆ ತೋರಿದ್ದಂತು ಗಮನಾರ್ಹ. ಇದರಲ್ಲಿ ಸಾರ್ವಜನಿಕ ಹಾಗೂ ವಿದೇಶೀ ಬಂಡವಾಳದ ಬಹುಪಾಲಿದೆ.
ಹಾಗೆಯೇ ಸೆನ್ಸೆಕ್ಸ್ ಸಹ. ಎರಡು ವರ್ಷದ ಹಿಂದೆ 30 ಸಾವಿರದ ಆಸುಪಾಸಿನಲ್ಲಿದ್ದ ಸೆನ್ಸೆಕ್ಸ್ ಇಂದು 60 ಸಾವಿರ ಗಡಿ ದಾಟಿದ್ದು ಸಣ್ಣ ವಿಷಯವೇನಲ್ಲ. ಪ್ರಪಂಚದ ಜನರೆಲ್ಲ ಭಾರತದತ್ತ ನೋ ಡುತ್ತಿದ್ದಾರೆ. ಹಾಗೇ ಹೂಡಿಕೆಯನ್ನೂ ಮಾಡುತ್ತಿದ್ದಾರೆ. ಚೀನಾದತ್ತ ಹೋಗುತ್ತಿದ್ದ ಎಷ್ಟೋ ಕಂಪನಿಗಳು ಭಾರತದತ್ತ ಯು ಟರ್ನ್ ಹೊಡೆದಿವೆ. ಇದಕ್ಕೆ ಕಾರಣ ಜನಸಂಖ್ಯೆ ಹಾಗೂ ನಿರುದ್ಯೋಗ. ಕೆಲವೊಂದು ಸಮಯದಲ್ಲಿ ಬೇರೆ ದೇಶದ ಕಂಪನಿಗಳು ನಿರುದ್ಯೋಗವನ್ನು ಸಹ ನೋಡುತ್ತಾರೆ. ಯಾಕೆಂದರೆ ಕಡಿಮೆ ಸಂಬಳದಲ್ಲಿ ಕೆಲಸ ಮಾಡಿಸಿಕೊಳ್ಳಲು!. ಹಾಗೆಯೇ ಭಾರತದಲ್ಲಿ ಹುಟ್ಟುತ್ತಿರುವ ಸ್ಟಾರ್ಟ್ ಅಪ್ಸ್ ಹಾಗೂ ಅವು ಬೆಳೆಯುತ್ತಿರುವ ರೀತಿ ಯಾವ ದೇಶದವನ್ನೂ ಸಹ ನಿಬ್ಬೆರೆಗಾಗಿಸುತ್ತೆ. ಯಾವ್ದೋ ಒಂದು ಸಣ್ಣ ರೂಮ್ ನಲ್ಲಿ ಹುಟ್ಟಿದ ಕಂಪನಿಗಳು ಇವತ್ತು ಪ್ರಪಂಚಾದ್ಯಂತ ತನ್ನ ರಕ್ಕೆಗಳನ್ನು ಹಾರಿಸು ತ್ತಿವೆ.
ಮೊನ್ನೆ ಮೊನ್ನೆ ನೋಡಿದ ನೈಕಾ ಕಂಪನಿಯೇ ಇರಬಹುದು, ೫೪ ವರ್ಷದಲ್ಲಿ ಕೆಲಸ ಬಿಟ್ಟು ಶುರುಮಾಡಿದಂತಹ ಫಾಲ್ಗುಣಿ ನಾಯರ್ ಕೆಲವೇ ವರ್ಷದಲ್ಲಿ ಲಕ್ಷ ಕೋಟಿಯ ಕಂಪನಿ ಕಟ್ಟಿದ್ದನ್ನು ನೋಡಿರಬಹುದು. ನಮ್ಮಲ್ಲಿ ಹುಟ್ಟಿದಂತಹ ಹಲವಾರು ಜನ ತೀರಾ ಸಾದಾ ಕುಟುಂಬದಿಂದ ಬಂದಂಥವರು ಇವತ್ತು ಪ್ರಪಂಚ ವನ್ನೇ ಬೇರೆ ದೆಶೆಯೆಡೆಗೆ ಕೊಂಡೊಯ್ಯುತ್ತಿದ್ದಾರೆ. ಒಯೋ, ಜೊಮ್ಯಾಟೋ, ಓಲಾದಂತಹ ಸಣ್ಣದಾಗಿ ಹುಟ್ಟಿದ ಕಂಪನಿಗಳು ತಾವು ಯಾರಿಗೇನು ಕಡಿಮೆ ಯವರಲ್ಲ ಅಂತ ತೋರಿಸಿದ್ದು ಸಣ್ಣ ಸಾಧನೆಯೇನಲ್ಲ. ನಮ್ಮ ದೇಶದ ಆರ್ಥಿಕತೆ ಯಾವಾಗ ಸುಧಾರಿಸುತ್ತದೆ ಎಂದರೆ ನಮ್ಮದೇ ದೇಶದ ವಸ್ತುಗಳನ್ನು ನಾವು ಖರೀದಿಸಿದಾಗ. ನಮ್ಮ ಹಣ ನಮ್ಮಲ್ಲೇ ಪೋಲಾದಾಗ.
ಅದರಿಂದ ನಮ್ಮ ದೇಶದ ಆರ್ಥಿಕತೆಯನ್ನು ಬೆಳೆಸುವುದಲ್ಲದೆ. ನಮ್ಮಲ್ಲಿನ ನಿರುದ್ಯೋಗ ಸಮಸ್ಯೆಯನ್ನೂ ನಿವಾರಿಸುತ್ತದೆ. ಮಹಾತ್ಮ ಗಾಂಧಿಯವರು ಸ್ವದೇಶಿಚಳವಳಿಯನ್ನು ಮಾಡಿದಾಗ ವಿದೇಶಿ ವಸ್ತುಗಳನ್ನು ಸಂಪೂರ್ಣ ನಿರಾಕರಿಸಿದ್ದರು. ಅವರಿಗಿಂತ ಮೊದಲು ವಿನಾಯಕ ಸಾವರ್ಕರ್, ಬಾಲ್ ಗಂಗಾಧರ ತಿಲಕರ ಜತೆ ಸೇರಿ ವಿದೇಶಿ ವಸ್ತುಗಳನ್ನು ಊರಿನ ನಡು ಮಧ್ಯೆ ಸುಟ್ಟು ಸ್ವದೇಶಿ ಚಳವಳಿಗೆ ಬೇರೆಯದೇ ಅರ್ಥ ಕೊಟ್ಟಿದ್ದರು. ಇಲ್ಲಿ ಸ್ವಾತಂತ್ರ್ಯ ಚಳವಳಿಯ ಜತೆಗೆ ಆತ್ಮ ನಿರ್ಭರತೆ ಯನ್ನೂ ತೋರಿಸಿದ್ದರು. ಅವರಿಗೆಲ್ಲ ಗೊತ್ತಿತ್ತು ನಾವು ಎಷ್ಟು ಬೇರೆ ದೇಶದ ಮೇಲೆ ಅವಲಂಬಿತರಾಗಿರುತ್ತೇವೋ ಅಷ್ಟು ನಮ್ಮತನ ವನ್ನು ಕಳೆದುಕೊಂಡಂತೆ ಅಂತ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಆತ್ಮನಿರ್ಭರ ಭಾರತದ ಕೂಗು ಹೆಚ್ಚುತ್ತಿರುವುದು.
ಹಾಗೆಂದರೆ ಅದು ಬರೀ ಸ್ವದೇಶಿ ವಸ್ತುಗಳನ್ನು ಖರೀದಿಸುವುದಲ್ಲ. ನಮ್ಮವರನ್ನು ಬೆಳೆಸುವುದು; ನಾವೇ ಬೆಳೆಯುವುದು. ನಮ್ಮಿಂದ ಪ್ರಪಂಚದ ಪವರ್ ಫುಲ್ರಾಷ್ಟ್ರಗಳೆಂದು ಕರೆಸಿಕೊಳ್ಳುವ ಅಮೆರಿಕ, ಚೀನಾ ಇತ್ತೀಚಿನ ದಿನಗಳಲ್ಲಿ ಬೇರೆ ದೇಶದ ಮುಂದೆ ಕೆ ಚಾಚಿದ್ದಿಲ್ಲ. ತಮಗೆ ಬೇಕಾದ್ದನ್ನು ಸಂಪಾದಿಸಿಕೊಳ್ಳುವ ಶಕ್ತಿ ಅವರಲ್ಲಿದೆ. ಅವರು ಬೇರೆಯವರಿಗಿಂತ ತಮ್ಮನ್ನು ತಾವು ನಂಬುತ್ತಾರೆ. ಅದಕ್ಕೊಸ್ಕರನೇ ಅವೆಲ್ಲ ಪವರ್ ಫುಲ್ ದೇಶಗಳಾದವು.
ಆದರೇ ನಮಗೆ ಹಿತ್ತಗಿಡಿ ಮದ್ದಲ್ಲ ಎಂಬುದು ಸಾರ್ವತ್ರಿಕ, ಸಾರ್ವಕಾಲಿಕ ಗಾದೆ. ಕರೋನಾ ವ್ಯಾಕ್ಸಿನ್ ಅನ್ನು ನಮ್ಮ ವಿಜ್ಞಾನಿಗಳು ಕಂಡು ಹಿಡಿದರೂ ಅದರಲ್ಲೂ ರಾಜಕೀಯ ಹುಡುಕುವ ಮಾನಸಿಕತೆ. ಎಷ್ಟರ ಮಟ್ಟಿಗಿತ್ತೆಂದರೆ ಅದನ್ನು ‘ಮೋದಿ ವ್ಯಾಕ್ಸಿನ್’ ಅಂದರು. ಬರೀ ಬಿಸಿನೀರಿದೆ ಅಂತ ಅಂದವರೂ ಇದ್ದಾರೆ. ಕರೋನಾ ವ್ಯಾಕ್ಸಿನ್ ಹಾಕಿಸಿಕೊಂಡರೆ ಗಂಡಸ್ತನ ಹೋಗುತ್ತೆ ಎಂದೆಲ್ಲ (ಅಪ)ಪ್ರಚಾರ ಮಾಡಿದವರೂ ನಮ್ಮ ದೇಶದಲ್ಲಿದ್ದಾರೆ. ಇಂತಹ ಮನಃಸ್ಥಿತಿ ದೇಶವನ್ನು ಎಲ್ಲಿಗೆ ಕೊಂಡೊಯ್ಯಬಹುದು? ನಾವು ಎಡುವುವುದು ಇಂತಲ್ಲೇ. ಇಸ್ರೇಲ್ ಮೇಲೆ ಮೊನ್ನೆ ಪ್ಯಾಲಸ್ತೀನ್ ದಾಳಿ ಮಾಡಿದಾಗ ಅಲ್ಲಿಯ ಜನರೆಲ್ಲ ಒಂದಾಗಿ ನಿಂತರು. ಅವತ್ತಿನ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದರ್ಭವೊದಗಿತ್ತು.
ದಾಳಿಯನ್ನು ಸಹಿಸದ ಜನ, ಪ್ರತಿಪಕ್ಷದವರ ಸಹಿತ ರಾಜಕೀಯನ್ನು ಬದಿಗಿಟ್ಟು ದೇಶದ ಜತೆ ನಿಂತರು. ಆದರೆ ನಮ್ಮಲ್ಲಿ ಹಾಲು ಉಕ್ಕಿಸುವುದರಿಂದ ಹಿಡಿದು, ಎಲ್ಲದರ ಮೇಲೂ ರಾಜಕೀಯ. ನಮ್ಮ ಜನ ರಾಜಕೀಯ ಎಲ್ಲಿಯ ವರೆಗೂ ಮಾಡುತ್ತಿದ್ದರೆಂದರೆ, ಪಾಕಿಸ್ತಾನದ ಉಗ್ರರು ನಮ್ಮ ದೇಶದ ಸೈನಿಕರ ಮೇಲೆ ದಾಳಿ ಮಾಡಿದರು, ಆಗ ನಮ್ಮ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಮಾಡದ್ದನ್ನು ಸುಳ್ಳೆಂದು ವಾದಿಸಿದರು. ಇಂತಹ ದಿವಾಳಿ ಬುದ್ಧಿಯನ್ನು ಹೊಂದಿದ ರಾಜಕೀಯ ನಾಯಕ ರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ನಮ್ಮಲ್ಲಿ ಎಷ್ಟೋ ಜನಕ್ಕೆ ಕೆಲಸ ಬೇಡ, ಹಣ ಬೇಕು.
ಹೊಲದಲ್ಲಿ ಹೋಗಿ ಬಿತ್ತುವ ರೈತನಿಗಿಂತ ಸಬ್ಸಿಡಿಗಾಗಿ, ಸಾಲಮನ್ನಾಕ್ಕಾಗಿ ನಿಲ್ಲುವ ಜನರ ಸಾಲೇ ದೊಡ್ಡದಾಗಿದೆ. ಸರಕಾರಿ ನೌಕರನಿಗೆ ನಾವೇ ಲಂಚ ಕೊಟ್ಟು ಕೆಲಸ ಮುಗಿಸಿಕೊಂಡು, ಆಮೇಲೆ ನಾವೇ ಹೇಳ್ತಿವಿ ಸರಕಾರಿ ನೌಕರರು ಲಂಚ ಕೋರರು ಅಂತ. ನಾವೇ ಪೊಲೀಸರಿಗೆ ಲಂಚ ಕೊಡೊದು ಆಮೇಲೆ ಹೇಳೋದು ಪೊಲೀಸರು ನಾಚಿಗೆಗೆಟ್ಟವರು ಎಂದು. ಇದೆಲ್ಲ ಯಾಕೆ? ವಿಶ್ವಗುರು ಅಂತ ಕನಸು ಕಾಣುವ ಬದಲು ಆ ಸ್ಥಾನಕ್ಕೇರಲು ದೇಶಕ್ಕಾಗಿ ನಾವು ಏನನ್ನು ಮಾಡಿದ್ದೀವಿ ಎಂದು ನಮ್ಮನ್ನು ನಾವೇ ಪ್ರಶ್ನಿಸಿ ಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ.
ನಮ್ಮಲ್ಲೆಷ್ಟು ಜನ ನಮ್ಮ ದೇಶದ ವಸ್ತುಗಳನ್ನು ಖರೀದಿ ಮಾಡ್ತಿವಿ? ನಮ್ಮ ದೇಶದ ಕಂಪನಿಗಳಿಗೆ, ನಮ್ಮ ಮನೆಯ ಪಕ್ಕದವರಿಗೆ ಎಷ್ಟು ಸಹಾಯ ಮಾಡ್ತೀವಿ? ನಮ್ಮ ದೇಶದ ಆರ್ಥಿಕತೆ, ರಕ್ಷಣೆ, ಸ್ವಾಭಿಮಾನಕ್ಕಾಗಿ ಎಷ್ಟೇಲ್ಲ ಹೆಗೆಲು ಕೊಟ್ಟಿದ್ದೀವಿ? ನಮ್ಮ ಜನಕ್ಕೆ ಬೆಳಗ್ಗೆ ಎದ್ದು ತಕ್ಷಣ ಹೋಗುವ ಟಾಯ್ಲೆಟ್ ಬೇಸಿನ್‌ನಿಂದ ಹಿಡಿದು ರಾತ್ರಿ ಮಲಗುವ ಹಾಸಿಗೆ ವರೆಗೆ ಎಲ್ಲವೂ ಇಂಪೋರ್ಟೆಟೆಡ್ ಆಗಿರಬೇಕು. ಭಾರತದಲ್ಲಿ ಅಗ್ಗದಲ್ಲಿ ಓದು ಬೇಕು, ದುಬಾರಿ ಸಂಬಳ(?)ದ ಫಾರೀನ್ ಕೆಲಸಕ್ಕೆ ಹೋಗುತ್ತಾರೆ! ಈ ರೀತಿ ಆದ್ರೆ ಯಾವ ದೇಶ ಕೂಡ ಉದ್ಧಾರವಾಗುತ್ತದೆ? ಇನ್ನು ಕೆಲವೊಂದಿಷ್ಟು ಜನರಿಗೆ ಅಂಬಾನಿ, ಅದಾನಿ ಅಂತಹ ದೊಡ್ಡ ಕಂಪನಿ ಯವರ ಬೆಳವಣಿಗೆ ಕಣ್ಣಿಗೆ ಕುಕ್ಕುತ್ತದೆ.
ತಮ್ಮ ವ್ಯಾಪಾರದ ಮೂಲಕ ತಾವು ಬೆಳೆದು ಶ್ರೀಮಂತರಾಗುವುದನ್ನೂ ಆಮೂಲಕ ದೇಶಕ್ಕೆ ತೆರಿಗೆ ಕಟ್ಟುವುದನ್ನೂ ವಿರೋಧಿಸಿದವರಿದ್ದಾರೆ! ಆದರೇ ದುರ ದೃಷ್ಟ, ರಾಜಕಾರಣಿಗಳು, ಅಧಿಕಾರ ವರ್ಗ ಲೂಟಿ ಹೊಡೆದು ಮಾಡಿದ ಸಂಪತ್ತು ನಮ್ಮಗಳ ಕಣ್ಣಿಗೆ ಕಾಣಿಸುವುದೇ ಇಲ್ಲ! ಇತ್ತೀಚೆಗೆ ಖುಷಿ ಪಟ್ಟಿದ್ದೀವಿ, ಪರಾಗ್ ಅಗರ್ ವಾಲ್ ಟ್ವೀಟರ್ ಸಿಇಒ ಆಗಿ ತಮ್ಮ ಹುದ್ದೆಯನ್ನು ಅಲಂಕರಿಸಿದರು ಅಂತ. ಹಾಗೆಯೇ ಸುಂದರ್ ಪಿಚೈ, ಸತ್ಯ ನದೆಲ್ಲರಂತಹ ಹಲವಾರು ಜನ ಬೇರೆ ದೇಶದ ಕಂಪನಿಗಳಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರು. ಸಾವಿರಾರು ಕೋಟಿ ಸಂಬಳ ಪಡೆಯುತ್ತಿದ್ದಾರೆ.
ಇದರಿಂದ ನಮಗೆ ಹೆಮ್ಮೆ ಅಷ್ಟೇ, ಬದಲಿಗೆ ದೇಶಕ್ಕಾಗಿ ಇಲ್ಲಿರುವ ಜನರಿಗಾಗಿ ಏನೂ ದಕ್ಕುವುದಿಲ್ಲ. ಆದರೇ ಅದೇ ಸುಂದರ್ ಪಿಚ್ಬೈ, ಸತ್ಯ ನದೆಲ್ಲ ನಂತವವರು ನಮ್ಮ ದೇಶದಲ್ಲೇ ಕಂಪನಿ ಕಟ್ಟಿ ಜನರಿಗೆ ಕೆಲಸ ಕೊಟ್ಟಿದ್ದರೆ ಸಾವಿರಾರು ಜನರಿಗೆ ಕೆಲಸ ದಕ್ಕುತ್ತಿತ್ತು. ನಮ್ಮ ದೇಶದ ಆರ್ಥಿಕತೆಗೂ ಸ್ವಲ್ಪ ನೆರವಾಗುತ್ತಿತ್ತು.ನಮ್ಮಲ್ಲಿ ಕಷ್ಟ ಬಂದಾಗ ಕೈ ಹಿಡಿಯುವುದು ಟಾಟಾ, ಇನೋಸಿಸ್, ವಿಪ್ರೋ ನಂತಹ ಕಂಪನಿಗಳೇ; ಹೊರತು ಗೂಗಲ್, ಮೈಕ್ರೋ ಸಾಫ್ಟ್, ಗಳಲ್ಲ. ಇದನ್ನು ಮರೆಯಬಾರದು. ನಾವೆಲ್ಲ ವಿಶ್ವಗುರು ಭಾರತದ ಕನಸು ಕಟ್ಟುವ ಮುನ್ನ ನಮ್ಮೆಲ್ಲ ನ್ಯೂನತೆಗಳನ್ನು ಅರಿಯ ಬೇಕು.
ಬೇರೆ ದೇಶದ ಸಾಧಕ ಬಾಧಕಗಳನ್ನು ಸಹ ಅರಿತು ಮುನ್ನಡೆಯಬೇಕು. ಹಾಗಿದ್ದರೇನೆ ಭಾರತ ವಿಶ್ವಗುರು ಆಗುವುದು ಇಲ್ಲವೆಂದರೇ ವಿಶ್ವಗುರು ಹಗಲು ಕನಸು ಮಾತ್ರ!