ಪರಿಪೂರ್ಣ ವ್ಯಕ್ತಿಯ ಅಪೂರ್ಣ ಬದುಕಿನ ದಾರುಣ ಕತೆ
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
@.
ಇಂದು ತಾವೇ ಕಟ್ಟಿದ ಸಂಸ್ಥೆಯೊಳಗೆ ಸಿಂಘಾನಿಯಾ ಕಾಲಿಡುವಂತಿಲ್ಲ. ರೇಮಾಂಡ್ಸ್ ಸಂಸ್ಥೆಯ ಯಾವ ಸಿಬ್ಬಂದಿಯೂ ಅವರ ಜತೆ ಮಾತಾಡುತ್ತಿಲ್ಲ. ಅಂಥವ ರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಅವರ ಬಹಳ ಕಾಲದ ಕಾರ್ಯದರ್ಶಿಯನ್ನು ವಜಾ ಮಾಡಲಾಗಿದೆ. ಮುಂಬೈಯಲ್ಲಿದ್ದ ಕಾರನ್ನು ಹಿಂಪಡೆಯಲಾಗಿದೆ ಮತ್ತು ಲಂಡನ್‌ನಲ್ಲಿದ್ದ ಮನೆಗೆ ಬೀಗ ಹಾಕಲಾಗಿದೆ.
ಕಳೆದ ಮೂರು ದಿನಗಳಿಂದ ವಿಜಯಪತ್ ಸಿಂಘಾನಿಯಾ ಅವರ ಆತ್ಮಕಥೆ    ಓದುತ್ತಿದ್ದೇನೆ. ಒಬ್ಬನ ಬದುಕು ಇಷ್ಟು ನಿರ್ದಯಿ ಆಗಲುಸಾಧ್ಯವಾ, ಹುಟ್ಟಿಸಿದ ಮಗನೇ ಇಷ್ಟೊಂದು ದ್ರೋಹಿಯಾಗಬಹುದಾ, ಆಸ್ತಿ, ಅಂತಸ್ತಿನ ಮುಂದೆ ತಂದೆ-ತಾಯಿ ತೃಣ ಸಮಾನರಾಗಬಹುದಾ, ಹಣಕ್ಕಾಗಿ ಮನುಷ್ಯ ಎಂಥ ಹ್ಯೇಯ ಕೆಲಸವನ್ನಾದರೂ ಮಾಡುತ್ತಾ ನಲ್ಲ, ಜನ್ಮ ನೀಡಿದ ತಂದೆಯನ್ನೇ ಬೀದಿಗೆ ಅಟ್ಟುತ್ತಾನಲ್ಲ, ಹಾಗಾದರೆ ಮಾನವೀಯತೆ, ಮೌಲ್ಯ, ನಂಬಿಕೆ, ವಿಶ್ವಾಸಕ್ಕೇನು ಬೆಲೆ… ಈ ಎಲ್ಲ ಪ್ರಶ್ನೆಗಳು ಕತ್ತಲಿನಲ್ಲಿ ಕಣ್ಣ ಮುಂದೆ ಹಾರಿ ಹೋಗುವ ಮಿಂಚು ಹುಳುಗಳಂತೆ ಭಾಸವಾ ಗುತ್ತಿದೆ. ಎಲ್ಲರಿಗೂ ವಿಜಯಪತ್ ಸಿಂಘಾನಿಯಾ ಅವರಂಥ ತಂದೆ ಇರಬೇಕು, ಆದರೆ ಯಾರಿಗೂ ಗೌತಮ್ ಸಿಂಘಾನಿಯಾನಂಥ ಮಗ ಇರಬಾರದು.
ಕೆಲವೊಮ್ಮೆ ಬದುಕು ನಾವು ಎಣಿಸಿದ್ದಕ್ಕಿಂತ ಬಹಳ ಅಮಾನವೀಯವಾಗಿ, ಕ್ರೂರವಾಗಿ, ಭೀಕರವಾಗಿ, ನಿರ್ಭಾವುಕವಾಗಿ, ಲಜ್ಜೆಗೆಟ್ಟು ನಮ್ಮ ಜತೆ ವರ್ತಿಸುತ್ತದೆ. ನಾವೇ ಸಾಕಿದ ಗಿಣಿ, ಹದ್ದಾಗಿ ಕುಕ್ಕುತ್ತದೆ. ನಾವು ಜನ್ಮ ನೀಡಿದವರೇ ವಿಷವುಣಿಸುತ್ತಾರೆ. ಕೆಲವೊಮ್ಮೆ ಒಳ್ಳೆಯವರಾಗುವುದೇ ತಪ್ಪಾ, ಜನರನ್ನು ನಂಬುವುದೇ ಪ್ರಮಾದವಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದೇ ಜೀವನವನ್ನು ರೂಪಿಸಿದ ಮೌಲ್ಯ, ಪಾಲಿಸಿಕೊಂಡು ಬಂದ ಸಂಪ್ರದಾಯ, ಸಿದ್ಧಾಂತಗಳ ಬಗ್ಗೆಯೇ ಸಂದೇಹ ಮೂಡಲಾರಂಭಿಸುತ್ತವೆ.
ಮನುಷ್ಯ- ಮನುಷ್ಯರ ಸಂಬಂಧ ಮತ್ತು ತಂದೆ-ಮಗನ ಕಕ್ಕುಲಾತಿಯ ಬಗ್ಗೆಯೇ ಗುಮಾನಿಗಳು ಆವರಿಸಿಕೊಳ್ಳ ಲಾರಂಭಿಸುತ್ತವೆ. ಹೀಗಾಗಿ ಜೀವನದಲ್ಲಿ ಹೆಂಡತಿ-ಮಕ್ಕಳು ಸೇರಿದಂತೆ ಯಾರನ್ನೂ ನಂಬಬಾರದು ಎಂಬ ಕಠೋರ ನಿರ್ಧಾರಕ್ಕೆ ಅನೇಕರು ಬರುವಂತೆ ಮಾಡಿಬಿಡುತ್ತದೆ. ನೀವು ರೇಮಾಂಡ್ಸ್ ಕಂಪನಿಯ ಹೆಸರನ್ನು ಕೇಳಿರುತ್ತೀರಿ. ಇಂದಿಗೂ ಆ ಹೆಸರನ್ನು ಕೇಳಿದಾಗ, ತಕ್ಷಣ ನಮ್ಮ ಮುಂದೆ ಬರುವ ಅದರ ಘೋಷವಾಕ್ಯ –   . ಆ ಕಂಪನಿ ಬಟ್ಟೆ ಧರಿಸಿದರೆ, ‘ಆತ ಪರಿಪೂರ್ಣ ಮನುಷ್ಯ’ ಎಂಬ ವಿಶಿಷ್ಟ ಭಾವನೆಯನ್ನು, ಕಳೆದ ಐವತ್ತು ವರ್ಷಗಳಲ್ಲಿ ಭಾರತದಲ್ಲಿ ಹುಟ್ಟಿದವರೆಲ್ಲರ ಮನಸ್ಸಿನಲ್ಲಿ ಗಾಢವಾಗಿ ಅಚ್ಚೊತ್ತಿದ ಯಾವುದಾದರೂ ಪ್ರಬಲ ಬ್ರಾಂಡ್ ಇದ್ದರೆ ಅದು ರೇಮಾಂಡ್ಸ್.
ಇಂದಿಗೂ ಆ ಭಾವನೆ ಅಸಂಖ್ಯ ಜನರ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿಂತಿದೆ.      ,       ಎಂಬ ಮಾತಿದೆ. ಅಂಥ ಒಂದು ಶಕ್ತಿಶಾಲಿ ಬ್ರಾಂಡ್ ಅನ್ನು ಕಟ್ಟಿ, ಆ ಕಂಪನಿ ತಯಾರಿಸಿದ ಬಟ್ಟೆಯನ್ನು ಧರಿಸುವುದೇ ಒಂದು ಅಭಿಮಾನದ, ಪ್ರತಿಷ್ಠೆಯ ಸಂಕೇತ ಎಂಬಂತೆ ರೂಪಿಸಿ, ಅದನ್ನು ಮನೆ ಮಾತಾಗಿಸಿದವರು ವಿಜಯಪತ್ ಸಿಂಘಾನಿಯಾ. ಇಷ್ಟೇ ಆಗಿದ್ದರೆ, ವಿಜಯಪತ್ ಸಿಂಘಾನಿಯಾ ಅವರನ್ನು ಒಬ್ಬ ‘ಬಟ್ಟೆ ವ್ಯಾಪಾರಿ’ ಎಂದಷ್ಟೇ ಪರಿಗಣಿಸಬಹುದಿತ್ತು. ಆದರೆ ಸಿಂಘಾನಿಯಾ, ಭಾರತೀಯ ಉದ್ಯಮಿಗಳಿಗೆಲ್ಲ ಆದರ್ಶ ಎನಿಸುವ, ಬೇರೆ ಯಾವ ಉದ್ಯಮಿಗೂ ಸಾಧ್ಯ ವಾಗದ ವಿಕ್ರಮ ಬರೆದ, ವಿಲಕ್ಷಣ ಅಭಿರುಚಿ ಮತ್ತು ಹವ್ಯಾಸ ಬೆಳೆಸಿಕೊಂಡ ಒಬ್ಬ ಅಪರೂಪದ ಉದ್ದಿಮೆದಾರ. ಇದಕ್ಕಿಂತ ಮುಖ್ಯವಾಗಿ ಸಿಂಘಾನಿಯಾ ಒಬ್ಬ ಅಪ್ರತಿಮ ಸಾಹಸಿ. ಎಲ್ಲ ವಿಷಯಗಳಲ್ಲೂ ಆಸಕ್ತಿ ಹೊಂದಿರುವ ಜೀವನ್ಮುಖಿ ಚೇತನ.
ಸಿಂಘಾನಿಯಾ ಅವರನ್ನು ಭಾರತದ ರಿಚರ್ಡ ಬ್ರಾನ್ಸನ್ ಎಂದು ಕರೆಯುವುದುಂಟು. ಕಾರಣ ಅವರು ಕೇವಲ ಹಣ ಮಾಡುವುದೇ ಮುಖ್ಯ ಧ್ಯೇಯವಾಗಿಸಿಕೊಂಡ ಉದ್ಯಮಿ ಯಲ್ಲ. ತಮ್ಮ ಉದ್ಯಮವನ್ನೂ ಮೀರಿದ ಜೀವನಾಸಕ್ತಿಯಲ್ಲಿ ಅವರು ಅಭಿರುಚಿ ಬೆಳೆಸಿಕೊಂಡವರು. ಸಿಂಘಾನಿಯಾ ತಮ್ಮ ಜೀವನದಲ್ಲಿ ತರೇಹವಾರಿಹ್ಯಾಟುಗಳನ್ನು ಧರಿಸಿದವರು. ರೇಮಾಂಡ್ಸ್ ಗ್ರುಪ್‌ನ ಅಧ್ಯಕ್ಷರಾಗಿದ್ದ ಅವರು ಮುಂಬೈನ ಶೆರೀಫ್ ಆಗಿದ್ದರು. ಅನೇಕ ಮ್ಯಾನೇಜಮೆಂಟ್ ಸಂಸ್ಥೆಗಳಲ್ಲಿ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮ್ಯಾನೇಜಮೆಂಟ್ ಪ್ರೊಫೆಸರ್ ಆಗಿದ್ದರು. ಈಸ್ಟ್ ವೆಸ್ಟ್ ಏರ್ ಲೈನ್ಸ್, ದಮಾನಿಯ ಏರ್ ವೇಸ್, ಅಲಯ ಏರ್, ಸಹರಾ ಏರ್ ಲೈ ಕಮರ್ಷಿಯಲ್ ವಿಮಾನ ಸಂಸ್ಥೆಗಳ ಪೈಲಟ್ ಕೂಡ ಆಗಿದ್ದರು.
ಹಣಕ್ಕಾಗಿ ಅವರು ವಿಮಾನ ಹಾರಿಸುತ್ತಿರಲಿಲ್ಲ. ಖುಷಿ ಮತ್ತು ಮಜಾಕ್ಕಾಗಿ ಉಚಿತವಾಗಿ ಪೈಲಟ್ ಆಗಿ ಕೆಲಸ ಮಾಡಿದವರು.1980ಮಧ್ಯಭಾಗದಲ್ಲಿ ಅವರು ‘ದಿ ಇಂಡಿಯನ್ ಪೋಸ್ಟ್’ ಎಂಬ ಚೆಂದದ ಇಂಗ್ಲಿಷ್ ದಿನಪತ್ರಿಕೆಯನ್ನು ಆರಂಭಿಸಿದ್ದರು. ಅವರು ಲಂಡನ್ ನಿಂದ ಮುಂಬೈವರೆಗೆ ಏಕಾಂಗಿಯಾಗಿ ಮೈಕ್ರೋಲೈಟ್ ಏರ್ ಕ್ರಾಫ್ಟ್ ಹಾರಿಸಿಕೊಂಡು ಬಂದಿದ್ದು ಇಂದಿಗೂ ದಾಖಲೆಯೇ. ಹಾಗೆಯೇ ಅತಿ ಹೆಚ್ಚು ಎತ್ತರದಲ್ಲಿ ಹಾಟ್ – ಏರ್ ಬಲೂನಿನಲ್ಲಿ ಪ್ರಯಾಣಿಸಿದವರೂ ಇವರೇ. ಇದಕ್ಕಾಗಿ ಇವರಿಗೆ ಎರಡು ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
೨೦೦೬ರಲ್ಲಿಯೇ ಅವರು ಭಾರತ ಸರಕಾರ ರಾಷ್ಟ್ರದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ -ಪದ್ಮಭೂಷಣಕ್ಕೆ ಭಾಜನರಾಗಿದ್ದಾರೆ. ಸಿಂಘಾನಿಯಾ ಅವರಲ್ಲಿ ಒಂದು ವಸ್ತು ಸಂಗ್ರಹಾಲಯವಿದೆ, ಅದು ನಮ್ಮ ದೇಶದ ಬೃಹತ್ ಖಾಸಗಿ ವಸ್ತು ಸಂಗ್ರಹಾಲಯಗಳಂದು. ಅಷ್ಟೇ ಅಲ್ಲ, ಅವರು ಒಳ್ಳೆಯ ಕೊಳಲುವಾದಕರೂ ಹೌದು. ಕುದುರೆ ಸಾಕುವುದು ಅವರ ಹವ್ಯಾಸಗಳಂದು. ಒಂದು ಕಾಲಕ್ಕೆ ಅವರಲ್ಲಿ ಉತ್ತಮ ತಳಿಯ ಐವತ್ತಕ್ಕೂ ಹೆಚ್ಚು ಕುದುರೆಗಳಿದ್ದವು. ಅವರು ಹಲವು ವರ್ಷ ಗಳ ಕಾಲ ಮುಂಬೈ ಟರ್ಫ್ ಕ್ಲಬ್‌ನ ಅಧ್ಯಕ್ಷರೂ ಆಗಿದ್ದರು.
ಎಂಬತ್ತಮೂರು ವರ್ಷ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿರುವ, ಈಗಲೂ ದಿನಕ್ಕೆ ಹದಿನೈದು ಗಂಟೆ ಕೆಲಸ ಮಾಡುವ ಸಿಂಘಾನಿಯಾ ಅವರ ಜತೆ, ಹೂವು, ಉದ್ಯಾನ, ಎಲೆ, ಮರ, ಹಕ್ಕಿ, ಪ್ರಾಣಿ, ನೀರು, ಕಾಡು, ಸಂಗೀತ, ಸಾಗರ, ವಿeನ, ಪುಸ್ತಕ, ತಂತ್ರಜ್ಞಾನ, ವಿಮಾನ, ಉಪಗ್ರಹ, ಅಡುಗೆ, ವಿಸ್ಕಿ, ರಮ… ಹೀಗೆ ಯಾವ ವಿಷಯಗಳ ಬಗ್ಗೆ ಕೇಳಿದರೂ, ಅವರು ರೋಚಕವಾಗಿ, ಆಸಕ್ತಿಯುತವಾಗಿ ಮಾತಾಡಬಲ್ಲರು. ರೇಮಾಂಡ್ಸ್ ಸಂಸ್ಥೆ ಅಧ್ಯಕ್ಷರಾಗಿರುವಾಗಲೇ ಅವರು ಈ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಹಣ ಮಾಡುವುದಕ್ಕಿಂತ ಬದುಕು ಇನ್ನಷ್ಟು ವಿಶಾಲವಾಗಿದೆ, ಅದರ ವ್ಯಾಪ್ತಿ ಅಗಾಧವಾಗಿದೆ ಎಂಬುದನ್ನು ತೋರಿಸಿಕೊಟ್ಟ ಅಪರೂಪದ ಜೀವಪ್ರೇಮಿ.
ಒಂದು ಕಾಲಕ್ಕೆ ನಮ್ಮ ದೇಶದ ಇಪ್ಪತ್ತೈದು ಪ್ರಮುಖ ಪರಿಚಿತ ಬ್ರಾಂಡ್ ಗಳಲ್ಲಿ ರೇಮಾಂಡ್ಸ್ ಕೂಡ ಒಂದಾಗಿತ್ತು ಮತ್ತು ಸಿಂಘಾನಿಯಾ ದೇಶದ ಐವತ್ತು ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಒಂದು ಕಾಲಕ್ಕೆ ನಮ್ಮ ದೇಶದ ಅಭಿಮಾನದ ಉದ್ಯಮಿಯಾಗಿದ್ದ ಸಿಂಘಾನಿಯಾ, ಇಂದು ಅತ್ಯಂತ ದಯನೀಯ, ದಾರುಣ ಮತ್ತು ದಟ್ಟ ದರಿದ್ರ ಬದುಕನ್ನು ಬದುಕುತ್ತಿದ್ದಾರೆ ಅಂದರೆ ನಂಬಬೇಕು. ದೇಶಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ರೇಮಾಂಡ್ಸ್ ಮಳಿಗೆಗಳನ್ನು ಹೊಂದಿದ,ರೇಮಾಂಡ್ಸ್ ಸಂಸ್ಥೆಯ ಮೆಜಾರಿಟಿ ಷೇರುಗಳನ್ನು ಹೊಂದಿದ್ದ, ಹತ್ತು ಸಾವಿರ ಕೋಟಿ ರುಪಾಯಿಗಿಂತ ಹೆಚ್ಚು ಆಸ್ತಿ ಹೊಂದಿದ್ದ, ಮುಂಬೈಯ ಪ್ರತಿಷ್ಠಿತ ಬಡಾವಣೆ ಗಳಲ್ಲಿ ಹತ್ತಕ್ಕೂ ಹೆಚ್ಚು ಐಷಾರಾಮಿ ಮನೆಗಳನ್ನು ಹೊಂದಿದ್ದ, ಲಂಡನ್ ನಗರದಲ್ಲಿ ನೂರಾರು ಕೋಟಿ ರುಪಾಯಿ ಬೆಲೆಬಾಳುವ ಅರಮನೆಯಂಥ ಮಹಲನ್ನು ಹೊಂದಿದ್ದ, ಒಂದು ಕಾಲಕ್ಕೆ ಸ್ವಂತ ಓಡಾಟಕ್ಕೆಂದು ಖಾಸಗಿ ವಿಮಾನವನ್ನು ಇಟ್ಟುಕೊಂಡಿದ್ದ ಸಿಂಘಾನಿಯಾ ಒಂದು ಪುಟ್ಟ ಫ್ಲ್ಯಾಟ್‌ನಲ್ಲಿ ತಿಂಗಳು ತಿಂಗಳು ಬಾಡಿಗೆ ಕಟ್ಟುತ್ತ, ಯಾವ ವರಮಾನವಿಲ್ಲದೇ, ದೈನೇಸಿ ಬದುಕನ್ನು ಬಾಳುತ್ತಿದ್ದಾರೆ.
ಅವರಿಗೆ ಔಷಧ, ಡಾಕ್ಟರ್ ಫೀಸಿಗೆ ಹಣ ಹೊಂದಿಸಲು ಆಗುತ್ತಿಲ್ಲ. ಒಂದು ಕಾಲಕ್ಕೆ ಬಾಟಲಿಗೆ ಲಕ್ಷಗಟ್ಟಲೆ ರೂಪಾಯಿ ಕೊಟ್ಟು, ಪ್ರತಿ ರಾತ್ರಿ ಒಂದೆರಡು ಪೆಗ್ ಏರಿಸುತ್ತಿದ್ದವರು, ಆಗ ಅತಿ ಅಗ್ಗದ ಓಲ್ಡ್ ಮಾಂಕ್ ರಮ್ಮಿಗೆ ತೃಪ್ತರಾಗುವಂತಾಗಿದೆ. ಪ್ರತಿದಿನ ದೇಶಾದ್ಯಂತ ಸಾವಿರಾರು ಜನ ತಮ್ಮ ಮನೆಗೆ ಬಂದು ಉಳಿದು ಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ ಜೀವನವಿಡೀ ರಾಜನಂತೆ ಬದುಕಿದ್ದ, ಕಿಂಗ್ ಸೈಜ್ ಬದುಕು ಬಾಳಿದ ಸ್ವಾಭಿಮಾನಿಗೆ ಯಾರz ಮನೆಯಲ್ಲಿರಲು, ಅನ್ಯರಮುಂದೆ ಕೈಯೊಡ್ಡಲು ಮನಸ್ಸಿಲ್ಲ.
ಹಾಗಂತ ರೇಮಾಂಡ್ಸ್ ಕಂಪನಿ ದಿವಾಳಿಯೆದ್ದು ಹೋಗಿಲ್ಲ. ಇಂದಿಗೂ ಅದು ಅಪರೆಲ್ (ಸಿದ್ಧ ಉಡುಪು) ವಿಭಾಗದಲ್ಲಿ ಭಾರತದ ಪ್ರಮುಖ ಬ್ರಾಂಡ್‌ಗಳಂದು. ಸಿಂಘಾನಿಯಾ ತಮ್ಮ ಕಂಪನಿಯನ್ನು ಮಾರಾಟ ಮಾಡಿಕೊಂಡು ಹೋಗಿಲ್ಲ ಅಥವಾ ಮಲ್ಯ ಥರಾ ಸಮಸ್ಯೆಗಳ ಸಂಕೋಲೆಗೆ ಸಿಲುಕಿ ಒದ್ದಾಡುತ್ತಿಲ್ಲ. ಅವರು ಮಾಡಿದ್ದು ಒಂದೇ ಒಂದು ಮಹಾಪರಾಧ! ಅದೇನೆಂದರೆ, ರೇಮಾಂಡ್ಸ ಗ್ರುಪ್ ಸಂಸ್ಥೆಯ ತಮ್ಮ ಹೆಸರಿನಲ್ಲಿದ್ದ ಎಲ್ಲಾ ಷೇರುಗಳನ್ನು ತಮ್ಮ ಪ್ರೀತಿಯ ಮಗನಾದ ಗೌತಮ ಸಿಂಘಾನಿಯಾ ಹೆಸರಿಗೆ ವರ್ಗಾಯಿಸಿದ್ದು, ತಮ್ಮ ಉಳಿದ ಆಸ್ತಿಗಳನ್ನೆ ಮಗನ ಹೆಸರಿಗೆ ಬರೆದಿದ್ದು. ಅಷ್ಟೇ. ‘ಕೊಡಲಿಯ ಕಾವು ಕುಲಕ್ಕೆ ಮೃತ್ಯು’ ಎಂಬಂತೆ ಹುಟ್ಟಿಸಿದ ಅಪ್ಪನನ್ನೇ ಅದೇ ಮಗ ಬಿಕನಾಸಿ ಮಾಡಿ ನಿವಾಳಿಸಿಬಿಟ್ಟಿದ್ದಾನೆ !
ಇಂದು ತಾವೇ ಕಟ್ಟಿದ ಸಂಸ್ಥೆಯೊಳಗೆ ಸಿಂಘಾನಿಯಾ ಕಾಲಿಡುವಂತಿಲ್ಲ. ರೇಮಾಂಡ್ಸ್ ಸಂಸ್ಥೆಯ ಯಾವ ಸಿಬ್ಬಂದಿಯೂ ಅವರ ಜತೆ ಮಾತಾಡುತ್ತಿಲ್ಲ. ಅವರ ಜತೆ ಸಂಬಂಧ ಇರಿಸಿಕೊಳ್ಳುವವರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಅವರ ಬಹಳ ಕಾಲದ ಕಾರ್ಯದರ್ಶಿಯನ್ನು ವಜಾ ಮಾಡಲಾಗಿದೆ. ಮುಂಬೈಯಲ್ಲಿದ್ದ ಕಾರನ್ನು ಹಿಂಪಡೆಯಲಾಗಿದೆ ಮತ್ತು ಲಂಡನ್ ನಲ್ಲಿದ್ದ ಮನೆಗೆ ಬೀಗ ಹಾಕಲಾಗಿದೆ. ಅಲ್ಲಿ ಯೂ ಅವರಿಗೆ ಕಾರನ್ನು ಕೊಡಕೂಡದೆಂದು ಸೂಚಿಸಲಾಗಿದೆ. ಅವರು ಬಹಳ ವರ್ಷಗಳಿಂದ ಬಳಸುತ್ತಿದ್ದ, ಕಂಪನಿಯ ಹೆಸರಿನಲ್ಲಿದ್ದ, ಮೊಬೈಲ್ ಫೋನನ್ನು ಕಸಿದುಕೊಳ್ಳಲಾಗಿದೆ.
ರೇಮಾಂಡ್ಸ ಕಚೇರಿಯಲ್ಲಿದ್ದ ಅವರ ಪುಸ್ತಕ, ಕಾಗದ-ಪತ್ರ ಮತ್ತು ಇನ್ನಿತರ ವಸ್ತುಗಳನ್ನು ಮುಟ್ಟಲೂ ಬಿಡುತ್ತಿಲ್ಲ. ಒಮ್ಮೆ ಸಿಂಘಾನಿಯಾರನ್ನು ಕಚೇರಿಯ ಆವರಣ ದೊಳಗೆ ಬಿಟ್ಟ ಭದ್ರತಾ ಸಿಬ್ಬಂದಿಗೆ ಥಳಿಸಲಾಯಿತು. ಅದೇ ಕೊನೆ, ಯಾರೂ ಅವರನ್ನು ಹತ್ತಿರ ಸುಳಿಯಲೂ ಬಿಡುತ್ತಿಲ್ಲ. ಅವರ ಜತೆ ಐವತ್ತು ವರ್ಷ ಗಳಿಂದ ಇದ್ದ ಸಿಬ್ಬಂದಿಗೆಲ್ಲ ಗೇಟ್ ಪಾಸ್! ಯಾರಾದರೂ ಅವರನ್ನು ಭೇಟಿ ಮಾಡಿ ಬಂದರೆ, ಅವರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಎರಡು ವರ್ಷಗಳ ಹಿಂದೆ, ಸಿಂಘಾನಿಯಾರನ್ನು ಭೇಟಿ ಮಾಡಿ ಬಂದ, ಅವರ ದೀರ್ಘ ಕಾಲದ ಸ್ನೇಹಿತನ ವಿರುದ್ಧ ಆ ಬಾಡಿಗೆ ಫ್ಲ್ಯಾಟ್ ನಲ್ಲಿದ್ದ ಕಾವಲುಗಾರ ಜಾತಿ ನಿಂದನೆ ಆರೋಪ ದಡಿ ಜೈಲಿಗೆ ಹಾಕಿಸಿದ ಪ್ರಸಂಗವೂ ನಡೆಯಿತು.
ಹೀಗಾಗಿ ಇಂದು ಸಿಂಘಾನಿಯಾರನ್ನು ಭೇಟಿಯಾಗಲು ಎಲ್ಲರೂ ಭಯ ಬೀಳುತ್ತಿದ್ದಾರೆ. ತನ್ನ ಸ್ಥಿತಿ ನೋಡಿ ಮರುಕಪಡಲು ಯಾರೂ ಬರುವುದು ಬೇಡ ಎಂದೂ ಸಿಂಘಾನಿಯಾ ಅಂಗಲಾಚುತ್ತಿದ್ದಾರೆ. ಅವರ ಮಗ ಪರಮವೈರಿಯಂತೆ, ಅವರನ್ನು ಕಾಡುತ್ತಿದ್ದಾನೆ. ಕ್ಷಣಕ್ಷಣವೂ ಅವರು ಅವಮಾನ, ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಈ ಪುಸ್ತಕದಲ್ಲಿ ಅವರು ಹೇಳುತ್ತಾರೆ – ‘ನನ್ನ ಜೀವನ ನಿರ್ವಹಣೆಗೆ, ಮನೆ ಬಾಡಿಗೆಗೆ ಹಣ ಕೊಡಿಸುವಂತೆ ಕೋರ್ಟ್ ಮೊರೆ ಹೋಗಿದ್ದೇನೆ. ನನಗೆ ನನ್ನ ಆಸ್ತಿ ಬೇಡ. ಎರಡು ಹೊತ್ತಿನ ಊಟಕ್ಕೂ ನನಗೆ ತತ್ವಾರವಾಗಿದೆ. ನಾನು ಎಲ್ಲ ಪಾಲಕರಿಗೂ ಮನವಿ ಮಾಡಿಕೊಳ್ಳುತ್ತೇನೆ. ನಾವು ನಮ್ಮ ಜೀವನದಲ್ಲಿನಮಗೊಂದೇ ಅಲ್ಲ, ನಮ್ಮ ಮಕ್ಕಳಿಗಾಗಿ ದುಡಿಯುತ್ತೇವೆ, ಅವರಿಗಾಗಿ ಆಸ್ತಿ ಮಾಡಿಡುತ್ತೇವೆ. ಆದರೆ ನಮ್ಮ ಮಕ್ಕಳು ಅದಕ್ಕೆ ಯೋಗ್ಯರಾ ಎಂದು ಯೋಚಿಸುವು ದಿಲ್ಲ.
ಸರಿ, ಯೋಗ್ಯರು ಎಂದೇ ಭಾವಿಸೋಣ. ಆದರೆ ನೀವು ಬದುಕಿರುವಾಗಲೇ ನಿಮ್ಮ ಆಸ್ತಿಯನ್ನೆಲ್ಲ ಅವರ ಹೆಸರಿಗೆ ಬರೆಯಬೇಡಿ. ನಿಮ್ಮ ಆಸ್ತಿಯೆಲ್ಲ ನಿಮ್ಮ ಮಕ್ಕಳಿಗೆ ಹೋಗಬೇಕಾದುದು ನ್ಯಾಯಯುತವೇ. ಆದರೆ ಅದು ಯಾವಾಗ ಅಂದ್ರೆ ನೀವು ತೀರಿಕೊಂಡ ನಂತರ. ನೀವು ಬದುಕಿದ್ದಾಗಲೇ ನಿಮ್ಮ ಆಸ್ತಿಯನ್ನು ಅವರ ಹೆಸರಿಗೆ ಬರೆದರೆ, ನಿಮ್ಮನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಬಹುದು. ಅವರಿಗೆ ನಿಮ್ಮ ಅಗತ್ಯ ಕೊನೆ ತನಕ ಇರಬೇಕೆಂದರೆ, ಮೊದಲೇ ಆಸ್ತಿ ಬರೆಯಬಾರದು. ಕೊನೆಗಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಅಂದ್ರೆ, ನಿಮ್ಮ ಮೇಲಿನ ಪ್ರೀತಿಯಿಂದ ಅಂತ ಭಾವಿಸಬೇಡಿ. ನಿಮ್ಮ ಆಸ್ತಿಗಾಗಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನಗೆ ಮನುಷ್ಯರ ಮೇಲೆಯೇ ನಂಬಿಕೆ ಹೊರಟು ಹೋಗಿದೆ.
ನಾನು ಅನುಭವಿಸುತ್ತಿರುವ ಅವಮಾನ, ತೊಳಲಾಟ, ಮಾನಸಿಕ ವೇದನೆ, ಹಿಂಸೆಯನ್ನು ಯಾವ ಪಾಲಕರೂ ತಮ್ಮ ಜನ್ಮದಲ್ಲಿ ಅನುಭವಿಸುವುದು ಬೇಡ ಎಂದು ಇವೆಲ್ಲವನ್ನೂ ಬರೆಯುತ್ತಿದ್ದೇನೆ. ಜೀವನವಿಡೀ    ಎಂಬ ಬ್ರಾಂಡ್ ಕಟ್ಟಿದ ಒಬ್ಬ ಸಾಹಸಿ ಉದ್ಯಮಿಯ    ಎಂಬ ಆತ್ಮಕಥೆ ಓದಿ ಕೆಳಗಿಟ್ಟಾಗ, ಯಾಕೋ ಕರುಳು ಚುರ್ರ್ ಎಂದಿತು. ಟಯರ್ ಹಾದು ಹೋದ ನಾಯಿಯಂತೆ ಮನಸ್ಸು ನರಳುತ್ತಿತ್ತು.