ಆಚಾರ್ಯರ ’ಕಣ್ಣು ತೆರೆಸುವ ಕೃತಿಗಳು’
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಮಹಾಭಾರತ, ರಾಮಾಯಣ ಪುಸ್ತಕಗಳ ಹೂರಣವಾದರೆ, ಇನ್ನು ಚಾಣಕ್ಯ ಎಂಬ ಪುಸ್ತಕದ ಚಾಣಕ್ಯ-ಚಂದ್ರಗುಪ್ತರ ಪುಸ್ತಕವಂತೂ ಚಾಣಕ್ಯನ ಜನನ, ಬುದ್ಧಿ ಮತ್ತೆ, ಸಂಘಟನಾ ಕೌಶಲಗಳ ಮೇರು ಕೃತಿ. ಕಾದಂಬರಿ ಶೈಲಿಯಲ್ಲಿ ಇರುವುದು ಓದಿಸಿಕೊಂಡು ಹೋದವು.
ನನ್ನ ಹರೆಯದ ವಯಸ್ಸಿಗೆ ನಾನು ಸತ್ಸಂಗದಲ್ಲಿಯೇ ಇದ್ದೆ. ಕಾರಣ, ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ರಾಷ್ಟ್ರೋತ್ಥಾನ ಬಳಗ ಮುಂತಾದ ಸಂಸ್ಥೆಗಳಲ್ಲಿ ಸದಸ್ಯನಾಗಿ ಓಡಾಡುತ್ತಾ, ಆಗಾಗ ಭಾಷಣ ಕೊಡುತ್ತಾ ಕ್ರಿಯಾಶೀಲನಾಗಿದ್ದೆ. ಭಾಷಣ ಮಾಡಲು ವಿಷಯ ಸಂಗ್ರಹಣೆಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ, ಋಷಿಮುನಿಗಳ ಕಥೆಗಳು, ರಾಮಾಯಣ, ಮಹಾಭಾರತದ ಆದರ್ಶಗಳು ಮುಂತಾದ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಬಳಗದ, ಭಾರತ ಭಾರತಿಪುಸ್ತಕ ಸಂಪದದ ಚಿಕ್ಕ ಚಿಕ್ಕ ಪುಸ್ತಕಗಳನ್ನೆ ಓದಿ ಅಲ್ಲಲ್ಲಿ ಭಾಷಣ ಮಾಡುತ್ತಿದ್ದೆ.
ಬೌದ್ಧಿಕ್ ಪ್ರಮುಖ್ ಎಂಬ ಹೆಸರಿತ್ತು ನನಗೆ. ಮಾತು, ಬಾಯಿಬಿಟ್ಟು ಬೇರೇನೂ ಬಂಡವಾಳವಿಲ್ಲದ ನನಗೆ ಬರುತ್ತಿದ್ದ ವಿದ್ಯೆ, ಕಲೆ, ಉದ್ಯೋಗವೆಂದರೆ ಮಾತು, ಭಾಷಣ ಅಷ್ಟೆ. ಅದನ್ನೇ ಆ ದೇವರು ಉದ್ಯೋಗವನ್ನೂ ಮಾಡಿ, ಹಣ, ಗೌರವ, ಹೆಸರು ಅನುಗ್ರಹಿಸಿರುವುದು ನನ್ನ ಪುಣ್ಯ. ರಾಮಾಯಣ, ಮಹಾಭಾರತ, ಭಾಗವತ, ಪುರಾಣಗಳು ಎಲ್ಲ ಮೂಲಗ್ರಂಥಗಳಲ್ಲಿನ ಕನ್ನಡ ಅನುವಾದವನ್ನು ಓದಿದ ಮೇಲೆ ಇತ್ತೀಚೆಗೆ ಸಾಹಿತ್ಯ ಭಂಡಾರದ ಹುಬ್ಬಳ್ಳಿಯ- ಬೆಂಗಳೂರಿನ ಮಾಲೀಕರಾದ ಸ್ನೇಹಿತ ಶ್ರೀಯುತ ಸುಬ್ರಹ್ಮಣ್ಯ ಮತ್ತು ಅವರ ಮಗ ಋತ್ವಿಕ್ ನನಗೆ ಹಿರಿಯ ಲೇಖಕರಾದ ಶ್ರೀಮಾನ್ ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದ ಮಹಾ ಭಾರತ, ರಾಮಾಯಣಗಳ ಭಾಗವತದ ಪುಸ್ತಕಗಳನ್ನು ಕೊಟ್ಟರು.
ಸುಮಾರು ೧೨ಪುಸ್ತಕಗಳವು. ಪುರಾಣ ಹಾಗೂ ಇತರೆ ಧಾರ್ಮಿಕ ಗ್ರಂಥಗಳನ್ನು ಕಣ್ಣಿಗೊತ್ತಿಕೊಂಡು ಓದಿದ್ದ ನನಗೆ ಶ್ರೀಯುತ ನಾರಾಯಣಾಚಾರ್ಯರ ಪುಸ್ತಕಗಳ ಕಥೆ, ಕಾದಂಬರಿ ಶೈಲಿಯಲ್ಲಿ ಇರುವುದು ಕಂಡು ಆಶ್ಚರ್ಯವಾದರೂ, ಓದಿಸಿಕೊಂಡು ಹೋದವು. ಈಗಿನ ನಮ್ಮ ದೇವರುಗಳನ್ನು, ಅವರೂ ಆ ಕಾಲದಲ್ಲಿ ಸಾಮಾನ್ಯ ವ್ಯಕ್ತಿಗಳಾಗಿ ಚಿಂತಿಸಿದ, ಬೇಸರಗೊಂಡ, ಸಿಟ್ಟಾದ, ಹತಾಶೆಗೊಂಡುದನ್ನು ಆಸೆಪಟ್ಟುದನ್ನು ಓದಿದಾಗ, ಇವರೆಲ್ಲ ದೇವರಾಗಲು, ವ್ಯಕ್ತಿಯಾಗಿ, ಮನುಷ್ಯರಾಗಿ, ಮಗನಾಗಿ, ಹೆಂಡತಿಯಾಗಿ, ಗಂಡನಾಗಿ ಅನುಭವಿಸಿದ ತೊಳಲಾಟಗಳೇ, ಕಷ್ಟಗಳೇ ಅವರನ್ನಿಂದು ದೇವರನ್ನಾಗಿ ಮಾಡಿದೆ ಎನಿಸದಿರದು.
ಹಾಗೆಯೇ ನಾವೂ ದೇವರಾಗುವ ಉಪಾಯಗಳನ್ನು ಶ್ರೀ ನಾರಾಯಣಾಚಾರ್ಯರು ಈ ಕೃತಿಗಳನ್ನು ನಮ್ಮ ಈ ಸಮಾಜಕ್ಕೆ, ಪೀಳಿಗೆಗೆ ಬರೆದಿದ್ದಾರೆ ಎನಿಸಿತು. ಬೆಳೆದು ನಿಂತ ಮಕ್ಕಳ ಕೈಯಲ್ಲೇ ನನ್ನ ತಂದೆ, ಸೀಲಂಪಟ, ಕಾಮುಕ ಎನಿಸಿಕೊಳ್ಳುವ ಶ್ರೀ ಕೃಷ್ಣನ ಅವ್ಯಕ್ತ ದುಃಖ, ಜಗದೋದ್ಧಾರನನ್ನೇ ಹೆತ್ತ ದೇವಕಿ ಕಡೆಯ ವರೆಗೂ ಕಂಸನ ಸೆರೆಯಲ್ಲಿ ಅನುಭವಿಸುವ ನೋವು, ತಲ್ಲಣಗಳು, ಆಡುವ ಮಾತುಗಳು, ಹೋಗುವ ಮೂರ್ಛೆಗಳು ಅತ್ಯಂತ ಹೃದಯಂಗಮ, ಮನೋಭೇದಕ ಗಳಾಗಿವೆ.
ರಾವ್ ಬಹದ್ದೂರರ ಗ್ರಾಮಾಯಣ, ಭೈರಪ್ಪನವರ ಗೃಹ ಭಂಗ, ನಾಯಿ ನೆರಳು, ವಂಶವೃಕ್ಷ, ಶ್ರೀನಿವಾಸ ವೈದ್ಯರ ಹಳ್ಳ ಬಂತು ಹಳ್ಳ, ಯಂಡಮೂರಿಯವರ ಅಷ್ಟಾವಕ್ರ, ಕಾದಂಬರಿಯ ಪಾತ್ರಗಳಂತೇ ಪುರಾಣದ ಈ ದೇವ, ದೇವತೆಗಳೂ ಅನುಭವಿಸುವ ಕಷ್ಟಗಳು, ಹಾಕುವ ಉಸಿರು, ತೋರುವ ಹತಾಶೆಗಳು ನಮ್ಮನ್ನು ದೇಹಧಾರಿಗಳಾರಿಗೂ ಕಷ್ಟ ತಪ್ಪಿದ್ದಲ್ಲ. ಅವರು ದೇವರಾದರೂ ಸರಿಯೇ ಎಂಬ ತತ್ವವನ್ನು ಸಾರುತ್ತವೆ.
ಇವೆಲ್ಲ ಮಹಾಭಾರತ, ರಾಮಾಯಣ ಪುಸ್ತಕಗಳ ಹೂರಣವಾದರೆ, ಇನ್ನು ಚಾಣಕ್ಯ ಎಂಬ ಪುಸ್ತಕದ ಚಾಣಕ್ಯ-ಚಂದ್ರಗುಪ್ತರ ಪುಸ್ತಕವಂತೂ ಚಾಣಕ್ಯನ ಜನನ,ಬುದ್ಧಿಮತ್ತೆ, ಸಂಘಟನಾ ಕೌಶಲಗಳ ಮೇರು ಕೃತಿ. ನಮ್ಮ ಶಾಲೆಯ ಪಠ್ಯಗಳಲ್ಲಿದ್ದ ಚಾಣಕ್ಯನಿಗೂ ಇಲ್ಲಿ ಬರುವ ಚಾಣಕ್ಯನಿಗೂ ಭೂಮಿ ಆಕಾಶಗಳ ಅಂತರ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಎಲ್ಲೋ ಕೆಲ ಅಂಶಗಳನ್ನು ಓದಿದ್ದೇವೆ ಅಷ್ಟೆ. ಅವು ಕೇವಲ ಟಿ.ವಿ ಗಳಲ್ಲಿ ಬರುವ ಜಾಹಿರಾತಿನಷ್ಟೇ ವಿಷಯಗಳನ್ನೊಳ ಗೊಂಡವು ಗಳು. ಮೂಲಸಾಮಗ್ರಿ ಮುಖ್ಯ ಗೋಡೌನ್‌ನಲ್ಲಿರುವಷ್ಟು ವಿಷಯಗಳು ನಾರಾಯಣಾಚಾರ್ಯರ ಚಂದ್ರಗುಪ್ತ ಚಾಣಕ್ಯದಲ್ಲಿವೆ.
ಕಾಮಸೂತ್ರ ಬರೆದ ವಾತ್ಸಾಯನ ಬೇರಾರೂ ಅಲ್ಲ ಅದು ಚಾಣಕ್ಯನೇ, ಅದರಲ್ಲಿರುವ ಮಾಹಿತಿ ಎಷ್ಟು? ಏನು ಕಥೆ? ಹಿಂದೂ ಸಾಮ್ರಾಜ್ಯದ ನಾಶಕ್ಕೆ ಎಲ್ಲ ರೀತಿಯ ಸಾಧನಗಳನ್ನು ಪಯೋಗಿಸುವಂತೆ, ಲಂಪಟ ರಾಜರುಗಳನ್ನು ಮಲಗಿದಲ್ಲೇ ಸಾಯಿಸಲು ವಿಷಕನ್ಯೆಯರನ್ನು ತಯಾರು ಮಾಡಲಾಗುತ್ತಿತ್ತು. ಅವರ ಅಂಗಾಂಗಳ ರಚನೆ ಮೇಲೆ ಆಕೆಯನ್ನು ವಿಷಕನ್ಯೆ ಎಂದು ಗುರುತಿಸಬಹುದಾದ ಸೂಕ್ಷ್ಮಗಳನ್ನೆಲ್ಲ ವಾತ್ಸಾಯನ ನಾಮದ ಕೌಟಿಲ್ಯ, ಚಾಣಕ್ಯ ಬರೆದಿದ್ದಾನಾಗಲಿ, ಅದು ಕೇವಲ ಕದ್ದುಮುಚ್ಚಿ ಓದಿ, ಜೊಲ್ಲು ಸುರಿಸುವ ಕಳಪೆ ರತಿವಿಜ್ಞಾನ, ರಮಣಿ ಪುಸ್ತಕಗಳಂತಲ್ಲ ಎಂಬ ಸತ್ಯ ನಮಗೆ ಚಾಣಕ್ಯನ ವಾತ್ಸಾಯನ ಕಾಮಸೂತ್ರದ ಕೃತಿಯಿಂದ ತಿಳಿಯುತ್ತದೆ. ೬೪ ವಿದ್ಯೆಗಳನ್ನೂ ಕಲಿತಿದ್ದ ತಾಮ್ರದಿಂದ ಬಂಗಾರ ಮಾಡುವ ಕಲೆ ಗೊತ್ತಿದ್ದ ಚಾಣಕ್ಯ ವಿದ್ಯೆಗಳನ್ನೆಲ್ಲ ಸ್ವಂತಕ್ಕೆಂದೂ ಬಳಸಿ ಕೊಳ್ಳ ಲಿಲ್ಲ.
ಕೇವಲ ಭಾರತೀಯ ಸಂಸ್ಕೃತಿ, ಜ್ಞಾನ ಗಳನ್ನು ಸಾರಲು ಬಳಸಿದ. ಚಾಣಕ್ಯನಿಗೆ ಕೇವಲ ಮಾಟ-ಮಂತ್ರಗಳಿಂದಲೇ ವ್ಯಕ್ತಿಗಳನ್ನು ಕೊಲ್ಲುವ ಕಲೆ ಗೊತ್ತಿದ್ದರೂ ಅದು ಹೇಡಿತನವೆಂದು ಚಂದ್ರಗುಪ್ತನನ್ನು ಹುಡುಕಿ ಅವನಿಗೆ ಶೌರ್ಯ, ಧೈರ್ಯ ತುಂಬಿ, ಹಿಂದೆ ನಿಂತು ವೈರಿಗಳನ್ನು ಯುದ್ಧದಲ್ಲಿ ಚಂದ್ರಗುಪ್ತನಿಂದಲೇ ಕೊಲ್ಲಿಸಿ ಮೌರ್ಯ ಸಾಮ್ರಾಜ್ಯ ಕಟ್ಟಿದ ಇಂತಹ ಽಮಂತನ ಚರಿತ್ರೆಯನ್ನು ನಮ್ಮ ರಾಜಕಾರಣಿಗಳು ಎಂದು ಓದುತ್ತಾರೋ ತಿಳಿಯೆ? ಇನ್ನು ಮಳೆ ಇಲ್ಲದಾಗ ನಮ್ಮ ಸರಕಾರಗಳು ಮೋಡ ಬಿತ್ತನೆ ಇತ್ಯಾದಿ ಮಾಡಿ ನಗೆ ಪಾಟಲಿಗೆ ಈಡಾಗಲಿಲ್ಲವೇ? ಅದೇ ಘಟನೆ ಚಾಣಕ್ಯ-ಚಂದ್ರಗುಪ್ತರ ಕಾಲದಲ್ಲೂ ಬಂದಾಗ ಚಾಣಕ್ಯ ಪರ್ಜನ್ಯ ಜಪ ಮಾಡಿ ಮಳೆ ತರಿಸಿದ ಘಟನೆ ನಡೆಯುತ್ತದೆ.
ಆಗ ಚಾಣಕ್ಯ ಹೇಳುವ ಮಾತು ಇಂದಿಗೂ ಪ್ರಸ್ತುತ, ‘ದೊರೆಯೇ! ಆರ್ಯ-ಅನಾರ್ಯ ಧರ್ಮಗಳ ವ್ಯತ್ಯಾಸ ಈಗಲಾದರೂ ತಿಳಿಯಿತೇ? ನಾನು ಮಾಡಿದ ಈಪರ್ಜನ್ಯ ಜಪದ ಪವಾಡ ಸದಾ ಮಾಡುವಂಥದಲ್ಲ. ದೇವರನ್ನು ಒತ್ತಾಯಿಸಿ ಪಡೆಯುವ ಫಲ ಅಧರ್ಮ ಅಧರ್ಮ. ನಮ್ಮ ಧರ್ಮ ನಾವು ನಡೆಸಿದರೆ, ಪ್ರಕೃತಿ ತನ್ನಧರ್ಮ ತಾನು ಮಾಡುತ್ತದೆ. ಇದೇ ವೇದದ ಬೋಧೆ, ಗೀತೆಯ ಬೋಧೆ’ ಎನ್ನುತ್ತಾನೆ.
ವಿಚಾರವಾದಿ ಎನಿಸಿಕೊಂಡವರು ಬುದ್ಧಿಜೀವಿಗಳೆಂದು ಎನಿಸಿಕೊಂಡು ಬಾಯಿ ಬಿಡದೆ ಇರುವವರು ಎಲ್ಲ ಕಾಲಕ್ಕೂ ಇದ್ದರು, ಇದ್ದಾರೆ, ಇರುತ್ತಾರೆ ಕೂಡ. ಅಲ್ಲಿಯೂ, ಆಗಲೂ ಇದ್ದರು. ಅವರ ವಿರೋಧಕ್ಕೆ ಚಾಣಕ್ಯ ಕೊಟ್ಟ ಉತ್ತರವನ್ನು ಗಮನಿಸಿ, ನಂದರ ರಾಜಗುರು ಹೇಳುತ್ತಾನೆ ‘ಆಚಾರ್ಯ ಚಾಣಕ್ಯರೇ, ನೀವು ಮಂತ್ರದಿಂದಲೂ, ಹೋಮದಿಂದಲೂ, ಮಳೆ ತರಿಸಿ ಬರುವಂತೆ ಮಾಡುವುದಕ್ಕೂ ಕಾಕತಾಳೀಯ ಸಂಬಂಧವೇ ಹೊರತು, ಇದೆಲ್ಲ ಯಜ್ಞ ಯಾಗದ ಮಹತ್ವವಲ್ಲ. ಹಾಗೆ, ನೀವು ಮಂತ್ರದಿಂದಲೇ ಮಳೆ ತರಿಸುವುದಾದರೆ ಭಾದ್ರಪದ ಮಾಸದಲ್ಲಿ ಮಳೆ ತರಿಸಿ ಆಗ ನಿಮ್ಮ ತಪಃ ಶಕ್ತಿ, ಮಂತ್ರ ಶಕ್ತಿಯನ್ನು ಒಪ್ಪೋಣ ಎನ್ನುತ್ತಾನೆ.
ಆಗ ಚಾಣಕ್ಯ ಕೊಡುವ ಉತ್ತರ ‘ಸಂತಾನ ಶಕ್ತಿಯಿರುವವನು ಮುದಿ ವಯಸ್ಸಿನಲ್ಲಿ ಮಕ್ಕಳನ್ನು ಹುಟ್ಟಿಸಬೇಕೆಂದೂ, ಇಲ್ಲವಾದರೆ ಅವನು ನಿರ್ವೀರ್ಯನೆಂದೂ ವಾದಿಸಿದಂತಿದೆ ನಿಮ್ಮ ಸರಣಿ” ಎನ್ನುತ್ತಾ, ಪ್ರಕೃತಿ ತನ್ನ ಧರ್ಮವನ್ನು ಬಿಟ್ಟಾಗ, ಅದನ್ನು ಮತ್ತೇ ಅದಕ್ಕೆ ಸಾಧಿಸಿಕೊಡುವುದು ಮಂತ್ರ, ಜಪ, ಯಾಗಗಳನಿಯಮ, ಸಿಕ್ಕಸಿಕ್ಕಂತೆ ಮಾಡುವುದಲ್ಲ” ಎನ್ನುತ್ತಾರೆ. ನಿತ್ಯ ನೂತನವಾದ ಈ ಮಾತು, ವಾದ ಇಂದು, ಮುಂದು, ಎಂದೆಂದೂ ನಾವಿರಲಿ, ಬಿಡಲಿ ನಡೆಯು ವಂಥವು.
ಅವರ ವಯಸ್ಸು, ರೂಪ, ಯೌವ್ವನ, ಕಾರ್ಯಧಕ್ಷತೆಗಳ ಆಧಾರದ ಮೇಲೆ ಅವರಿಗೆ ಟ್ಯಾಕ್ಸ್ ವಿಧಿಸಬೇಕೆಂದೂ, ಅವಳಿಗೆ ವಯಸ್ಸಾಗಿ, ರೂಪಹೀನಳಾದಳೆಂದರೆಅರಮನೆಯಲ್ಲಿಯೇ ಮಾತೃಸ್ಥಾನದಲ್ಲಿ ಇರಿಸಬೇಕೆಂದೂ ನಿಯಮ ರೂಪಿಸಿದ್ದ. ಅಕಾಮಳಾದ ಕುಮಾರಿ ಗಣಿಕೆಯರನ್ನು ಬಲಾತ್ಕರಿಸಿದರೆ, ಕೆಡಿಸಿದರೆ, ವಿಚಾರಣೆಇಲ್ಲದೇ ನೇರ ನೇಣುಗಂಬಕ್ಕೆ ಒಯ್ಯಬೇಕೆಂಬ ಕಾನೂನಿತ್ತು. ಒಳ್ಳೆಯ ಗಣಿಕೆಯರಿಗೆ ನಾಟ್ಯ, ಸಂಗೀತ, ವಾದ್ಯ ಕೌಶಲ, ಮಾಲಾಕರಣ, ಗಂಧ ತಯಾರಿ, ಇಂತಹ ವಿದ್ಯೆಗಳನ್ನು ಸರಕಾರಿ ಹಣದಲ್ಲಿಯೇ ಅವರಿಗೆ ಕಲಿಸಬೇಕು. ಇದಕ್ಕೆ ಸೇರುವವರು ತಮ್ಮ ತಿಂಗಳದ ಗಳಿಕೆಯ ಎರಡು ದಿನದ ಸಂಪಾದನೆಯನ್ನು ತೆರಿಗೆಯಾಗಿ ಸರಕಾರಕ್ಕೆ ಕೊಡಬೇಕು. ಈ ವೃತ್ತಿ ಆಗ ಹಿಡಿತಕ್ಕೆ ಬರುತ್ತದೆ.
ಇಲ್ಲದಿದ್ದರೆ, ಇವರೂ ಕೊಬ್ಬಿ ಹಾವಳಿ ಮಾಡುತ್ತಾರೆ. ಕುಡಿತ, ಮಾಂಸ ಸೇವನೆ, ವೇಶ್ಯಾವಾಟಿಕೆ ಇವು ಯಾವುವೂ ನಿರ್ಮೂಲವಾಗುವಂಥಹವಲ್ಲ. ಹತೋಟಿ ಯಲ್ಲಿದ್ದು, ಇವು ಯಾವೂ ಇಲ್ಲದ ಸಜ್ಜನರಿಗೆ ಉಪದ್ರವವಾಗದಂತೆ ನೋಡಿಕೊಳ್ಳಬೇಕೆಂದು ಚಾಣಕ್ಯ ಕಾನೂನು ರೂಪಿಸಿದ್ದ. ಅದಕ್ಕಲ್ಲವೇ ಇಂದಿಗೂ ಚಾಣಿಕ್ಯನ ಬುದ್ದಿ ಎನ್ನುವುದು. ಹೀಗೆ ಇಂತಹ ರೋಚಕವಾದ ವಿಷಯಗಳನ್ನೊಳಗೊಂಡ ಚಾಣಕ್ಯನ ಕೃತಿಯನ್ನು ನಮ್ಮ ರಾಜಕಾರಣಿಗಳು, ಶಿಕ್ಷಕ, ಉಪನ್ಯಾಸಕ ವೃಂದ ದವರು ಓದಲೇಬೇಕಾದಂತಹ ಕೃತಿ. ಅದಕ್ಕೆ ನಾನು ಹೇಳುವುದು, ಇವೆಲ್ಲ ‘ಕಣ್ಣು ತೆರೆಸುವ ಕೃತಿಗಳು’ ಎಂದು ಕರೆದಿದ್ದೇನೆ.