ಬ್ರಿಟಿಷ್ ಸರಕಾರ ಬೆವೆತು ಹೋದ ಆ ಕ್ಷಣ !
ಶಶಾಂಕಣ
ಶಶಿಧರ ಹಾಲಾಡಿ
.@.
ಸುಮಾರು 20000 ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಮುಷ್ಕರ ನಡೆಸಿ, ಶಸಗಳನ್ನು ವಶಪಡಿಸಿಕೊಂಡು ಹೋರಾಟ ನಡೆಸಿದ ಆ ಅಭೂತಪೂರ್ವಘಟನೆಗೆ ಹೆಚ್ಚು ಪ್ರಚಾರ ದೊರೆತಿಲ್ಲ. ಆ ಸಂದರ್ಭದಲ್ಲಿ ಬ್ರಿಟಿಷರು ನಡೆಸಿದ ಗೋಲೀಬಾರ್‌ನಲ್ಲಿ ಮೃತರಾದವರ ಸಂಖ್ಯೆ ಸುಮಾರು 250!
ಬಲಾಯ್ ಚಂದ್ರ ದತ್ ಎಂದರೆ ಯಾರು ಎಂದು ನಿಮಗೆ ಹೊಳೆಯದೇ ಇರಬಹುದು. ಬಿ.ಸಿ.ದತ್ ಎಂದರೆ ಕೆಲವರಿಗಾದರೂ ಎಲ್ಲೋ ಕೇಳಿದಂತಿದೆ ಎನಿಸ ಬಹುದು. ಆ ಒಬ್ಬ ಹೋರಾಟಗಾರನನ್ನು ನಮ್ಮ ದೇಶದ ಜನಸಾಮಾನ್ಯರು ಮರೆತ ಪರಿ ಮಾತ್ರ ಆಘಾತಕಾರಿ. ಸಾರ್ವಜನಿಕ ನೆನಪು ಅಲ್ಪಾಯುಷಿಎನ್ನುವುದಿದೆ. ಅದಕ್ಕೆ ಒಂದು ಕೆಟ್ಟ ಉದಾಹರಣೆ ಎಂದರೆ ಬಿ.ಸಿ.ದತ್ ಅವರನ್ನು ನಾವು ಮರೆತ ರೀತಿ. ಮತ್ತು ಅವರಿಂದ (ಮತ್ತು ಅವರ ರೀತಿಯ ಯುವಕರಿಂದ) ಆರಂಭಗೊಂಡ ‘ರಾಯಲ್ ಇಂಡಿಯನ್ ನೇವಲ್ ಮ್ಯುಟಿನಿ’ಯ ಹೋರಾಟವನ್ನು ಮರೆತ ರೀತಿ. ಬಿ.ಸಿ.ದತ್ ಗೌರವಾರ್ಥ ಕೊನೆಗೂ, ಅಂದರೆ 1998-99ರ ಸಮಯದಲ್ಲಿ ಒಂದು ಟಗ್ ಬೋಟನ್ನು ಹೆಸರಿಸಿ, ನೌಕಾಸೇನೆಯ ಸೇವೆ ಅರ್ಪಿಸಲಾಗಿದೆ. ಆದರೆ ದಶಕಗಳ ಕಾಲ ಬಿ.ಸಿ.ದತ್ ಮತ್ತು ಅವರ ಸಂಗಾತಿಗಳ ತ್ಯಾಗವನ್ನು ನಮ್ಮ ದೇಶ ಸಂಪೂರ್ಣ ಮರೆತು ಬಿಟ್ಟಿತ್ತು!
ಬಿ.ಸಿ.ದತ್ ಒಬ್ಬ ಸ್ವಾಭಿಮಾನಿ ನೌಕಾ ಸೈನಿಕ. ಬ್ರಿಟಿಷರು ನಮ್ಮ ದೇಶವನ್ನು ದಬ್ಬಾಳಿಕೆಗೊಳಪಡಿಸಿದ್ದ ರೀತಿಯನ್ನು ಖಂಡಿಸುತ್ತಿದ್ದ ಬಿಸಿರಕ್ತದ ಯುವಕ. ಅಂದಿನ ನಮ್ಮ ರಾಜಕೀಯ ನಾಯಕರು ಹೊರಡಿಸಿದ್ದ ‘ಕ್ವಿಟ್ ಇಂಡಿಯಾ’ ಘೋಷಣೆಯನ್ನು ನಿಜವೆಂದು ತಿಳಿದು, ಪ್ರಾಮಾಣಿಕವಾಗಿ ಅದನ್ನು ಅನುಸರಿಸಿ, ಕೆಲಸ ಕಳೆದು ಕೊಂಡು ನೌಕಾ ಸೈನಿಕ ಅವರು. ಬಿ.ಸಿ.ದತ್‌ಗೆ ಆಘಾತವಾಗಿದ್ದು ಏಕೆಂದರೆ, ರಾಜಕೀಯ ನಾಯಕರ ಘೋಷಣೆಯ ಪ್ರಭಾವದಿಂದ, ಬ್ರಿಟಿಷ್ ನೌಕೆಯ ಮೇಲೆ ‘ಕ್ವಿಟ್ ಇಂಡಿಯಾ’ ಎಂದು ಬರೆದು, ಅಽಕಾರಿಗಳ ಕೈಗೆ ಸಿಕ್ಕಿಬಿದ್ದು, ಕೆಲಸ ಕಳೆದುಕೊಂಡ ನಂತರ, ಇವರ ಸಹಾಯಕ್ಕೆ ಯಾರೂ ಬರಲಿಲ್ಲ!
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ, ಇವರನ್ನು ನಮ್ಮ ದೇಶದ ನೌಕಾದಳ ಪುನಃ ಕೆಲಸಕ್ಕೆ ಸೇರಿಸಿ ಕೊಳ್ಳಲಿಲ್ಲ. ಇವರ ರೀತಿಯೇ 476 ಸೈನಿಕರನ್ನು ಕೆಲಸದಿಂದ ವಜಾಮಾಡಿ ಮನೆಗೆ ಕಳಿಸಿದ ಬ್ರಿಟಿಷ್ ಸರಕಾರದ ಕ್ರಮವನ್ನು, ಸ್ವಾತಂತ್ರ್ಯಾನಂತರದ ಭಾರತವೂ ಪುರಸ್ಕರಿಸಿದ್ದು ಒಂದು ಪುಟ್ಟ ದುರಂತ. ಬಿ.ಸಿ.ದತ್ ಅವರನ್ನು ಮರೆತ ರೀತಿಯಲ್ಲೇ, ನಮ್ಮ ನಾಡು ‘ರಾಯಲ್ ಇಂಡಿಯನ್ ನೇವಿ ಮ್ಯೂಟಿನಿ’ಯನ್ನೂ ಮರೆತಿದೆ. ಅಂದು ಬ್ರಿಟಿಷರ ವಿರುದ್ಧ ಬಂದೂಕು ಕೈಗೆ ತೆಗೆದುಕೊಂಡವರು ಭಾರತೀಯ ಸೈನಿಕರು, ಭಾರತೀಯ ಪೈಲಟ್ ಗಳು. 18.2.1946ರಿಂದ 25.2.1946ರ ತನಕ ನಡೆದ ಆ ‘ಮಿನಿ ಸಮರ’ವನ್ನು ‘ದಂಗೆ’ ಎಂದು ಹೆಸರಿಸಿ, ಅದರ ಸಮರ ಸ್ವರೂಪವನ್ನು ಕಡೆಗಣಿಸಲಾಗಿದೆ.
ಆ ಸಮಯದಲ್ಲಿ ನೌಕಾಸೈನ್ಯದ ಸುಮಾರು 20000 ಸೈನಿಕರುಶಸಗಳನ್ನು ಮತ್ತು ಮುಂಬಯಿಯ ಬಂದರನ್ನು ವಶಪಡಿಸಿಕೊಂಡಿದ್ದರು. ಅವರು ಮನಸ್ಸು ಮಾಡಿದ್ದರೆ ಮುಂಬಯಿ ನಗರವನ್ನು ಉಡಾಯಿಸಬಹುದಿತ್ತು; ಅಷ್ಟು ಶಸಾಸ ಅವರ ಬಳಿ ಇತ್ತು. ಆದರೆ, ಸಂಯಮ ತೋರಿದರು, ರಾಜಕೀಯ ನಾಯಕರು ತಮ್ಮಬೆಂಬಲಕ್ಕೆ ಬಂದು, ಹೋರಾಟವನ್ನು ಮುಂದುವರಿಸಲಿ ಎಂದು ಕಾದರು. ನಿಜ ಹೇಳಬೇಕೆಂದರೆ, ಮುಂಬಯಿ ಬಂದರನ್ನು ವಶಪಡಿಸಿಕೊಂಡ ಆ ಸಾವಿರಾರು ಸೈನಿಕರು, ಬ್ರಿಟಿಷ್ ಸಾಮ್ರಾಜ್ಯದ ಎದೆ ಬಡಿತ ತಪ್ಪಿಸಿದ್ದರು!
1946ರಲ್ಲಿ ನಡೆದ ಈ ನೌಕಾ ಸೈನಿಕರ ಹೋರಾಟದಲ್ಲಿ ಅವರು ತೋರಿದ ಕೆಚ್ಚು, ಧೈರ್ಯದ ಸ್ವರೂಪ ನೋಡಿ. 8 ದಿನಗಳ ಆ ಹೋರಾಟದಲ್ಲಿ ಭಾಗವಹಿಸಿ ದವರು ಸುಮಾರು 20000 ನೌಕಾ ದಳದ ಸೈನಿಕರು. ಅವರು 78 ಹಡಗುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಅವುಗಳಲ್ಲಿ ಯುದ್ಧ ನೌಕೆಗಳು, ಗನ್ ಶಿಪ್‌ಗಳು, ಸರಕು ಸಾಗಣೆ ನೌಕೆಗಳು, ಸೇನಾ ಸಿಬ್ಬಂದಿ ತರಬೇತಿ ಶಾಲೆಗಳು ಸೇರಿದ್ದವು. ಮುಂಬಯಿ, ಕೊಲ್ಕೊತಾ, ಕರಾಚಿ, ವಿಶಾಖ ಪಟ್ಟಣಂ, ಮದರಾಸ್, ದೂರದ ಅಂಡಮಾನ್ ದ್ವೀಪಗಳು – ಹೀಗೆ ಹಲವು ಕಡೆ ಇದ್ದ ಭಾರತೀಯ ನೌಕಾ ಸೈನಿಕರು, ಬ್ರಿಟಿಷ್ ಮೂಲದ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದರು. ಇವರಿಗೆ ಬೆಂಬಲ ಸೂಚಿಸಲು ಸುಮಾರು 1200 ವಾಯು ಪಡೆಯ ಸೈನಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.
ಅಂದಿನ ಬ್ರಿಟಿಷ್ ಪರ ಇತಿಹಾಸಕಾರರು ಮತ್ತು ವೃತ್ತಪತ್ರಿಕೆಗಳು ಈ ಅಭೂತಪೂರ್ವ ಹೋರಾಟವನ್ನು ಬೇರೆಯದೇ ರೀತಿ ವರದಿ ಮಾಡಿ, ಆ ಹೋರಾಟದ ಗಂಭೀರತೆಯನ್ನು ಮುಚ್ಚಿಹಾಕಲು ಶಕ್ತಿಮೀರಿ ಪ್ರಯತ್ನಿಸಿದ್ದವು. ಅವರು ಬಳಸದೇ ಇದ್ದ ಒಂದು ಪದದಿಂದ ಈ ಹೋರಾಟವನ್ನು ವರ್ಣಿಸಿದರೆ ಸಮಂಜಸ ಎನಿಸುತ್ತದೆ ‘ಅಂದು ಬ್ರಿಟಿಷರು ನಿಜಕ್ಕೂ ಬೆವತುಹೋಗಿದ್ದರು.’ ಈ ಹೋರಾಟದ ಕಿಡಿ ಹೊತ್ತಿದ್ದು ಫೆಬ್ರವರಿ 2 ರಂದು. ಬಿ.ಸಿ.ದತ್ ಅವರು ಆಗ ಎಚ್‌ಎಂಎಸ್ತಲ್ವಾರ್ ಎಂಬ ತರಬೇತಿ ನೌಕೆಯಲ್ಲಿ ಉದ್ಯೋಗಿ.
ಆಗ ಅವರಿಗೆ ಐದು ವರ್ಷಗಳ ಸೇವಾನುಭವ. 1940-44ರ ಅವಧಿಯಲ್ಲಿ ಸುಭಾಷ್ ಚಂದ್ರ ಬೋಸ್ ನಡೆಸಿದ್ದ ಹೋರಾಟದ ಮಜಲುಗಳ ಪರಿಚಯ ಅವರಿಗಿತ್ತು. ಇತ್ತ, 1942ರಲ್ಲಿ ಮಹಾತ್ಮಾ ಗಾಂಧೀಜಿಯವರು ಆರಂಭಿಸಿದ್ದ ‘ಕ್ವಿಟ್ ಇಂಡಿಯಾ’ ಚಳವಳಿಯ ವಿವರಗಳೂ ಅವರಿಗೆ ಗೊತ್ತಿತ್ತು. 2ನೇ ಫೆಬ್ರವರಿಯಂದು ಆ ತರಬೇತಿ ಘಟಕದ ಕಮಾಂಡ್ ಇನ್ ಚೀಫ್ ಆಗಿದ್ದ ಆಚಿನ್‌ಲೆಕ್ ಎಂಬಾತನು, ತರಬೇತಿ ನಿರತ ಅಭ್ಯರ್ಥಿಗಳ ತಪಾಸಣೆ ಮತ್ತು ಭಾಷಣೆ ಮಾಡುವ ಕಾರ್ಯಕ್ರಮ ವಿತ್ತು. ಸಭಾಂಗಣದಲ್ಲಿ ‘ಕ್ವಿಟ್ ಇಂಡಿಯಾ’ ಮತ್ತು ‘ಜೈ ಹಿಂದ್’ ಎಂಬ ಘೋಷಣೆಗಳು ಕಾಣಿಸಿದವು. ಅದಕ್ಕೂ ಮುಂಚೆಯೂ ಹಡಗಿನ ವಿವಿಧ ಭಾಗಗಳಲ್ಲಿ ‘ಕ್ವಿಟ್ ಇಂಡಿಯಾ’ ಎಂಬ ಬರಹಗಳು ಕಂಡುಬಂದಿದ್ದವು. ಇದರ ಮೂಲವನ್ನು ಪತ್ತೆಹಚ್ಚಿದಾಗ, ಗೋಂದು ಮತ್ತು ಸ್ಟಿಕರ್ ಜತೆ ಬಿ.ಸಿ.ದತ್ ಸಿಕ್ಕಿಬಿದ್ದರು. ಅವರ ಕೊಠಡಿ ಯಲ್ಲಿ ಹೋರಾಟಕ್ಕೆ ಸಂಬಂಧಿಸಿದ ಸಾಹಿತ್ಯ ದೊರಕಿತು.
ಬಿ.ಸಿ.ದತ್‌ನ್ನು ವಿಚಾರಣೆಗೆ ಒಳಪಡಿಸಿದಾಗ, ಆ ರೀತಿ ಬರೆದದ್ದು ತಾನೇ ಎಂದು ಹೇಳಿದ್ದರ ಜತೆ, ತನ್ನನ್ನು ರಾಜಕೀಯ ಕೈದಿ ಎಂದು ಪರಿಗಣಿಸಬೇಕು ಎಂದು ಕೇಳಿಕೊಂಡರು. ಅವರಿಗೆ ಹದಿನೇಳು ದಿನಗಳ ಏಕಾಂತ ಶಿಕ್ಷೆ ವಿಧಿಸಲಾಯಿತು. ಬಿ.ಸಿ.ದತ್ ಹಚ್ಚಿದ ಕಿಡಿ ನಿಧಾನವಾಗಿ ಹಲವು ಹಡಗುಗಳಿಗೆ ಪಸರಿಸಿತು. ನೌಕಾ ಸೈನಿಕರು ತಮಗೆ ನೀಡುವ ಆಹಾರ ಕಳಪೆ ಗುಣಮಟ್ಟದ್ದು ಎಂದು ಗೊಣಗುತ್ತಿದ್ದರು. ಜತೆಗೆ, ಬ್ರಿಟಿಷ್ ಮೂಲದ ಸೈನಿಕರಿಗೆ ನೀಡುವ ಸವಲತ್ತುಗಳನ್ನು ಭಾರತೀಯ ಸೈನಿಕರಿಗೆ ನೀಡುತ್ತಿರಲಿಲ್ಲ. ಇವರ ಮೇಲೆ ದರ್ಪ ನಡೆಸುತ್ತಿದ್ದ ಬ್ರಿಟಿಷ್ಅಽಕಾರಿಗಳು ಇವರನ್ನು ‘ಕೂಲಿಗಳ ಮಕ್ಕಳು, ಬ್ಲಾಕ್ ಬಾಸ್ಟರ್ಡ್ಸ್’ ಎಂದೆಲ್ಲಾಬಾಯಿಗೆ ಬಂದಂತೆ ಬೈಯುತ್ತಿದ್ದರು. ನೂರಾರು ಸೈನಿಕರು ತಮ್ಮಲ್ಲೇ ಚರ್ಚೆ 17.2.1946ರಂದು ನಡೆಸಿ, ತಾವು ಮುಷ್ಕರ ನಡೆಸುವುದೇ ಸರಿ ಎಂದು ನಿರ್ಧರಿಸಿ ದರು.
18.2.1946ರಂದು ಮಧ್ಯಾಹ್ನ ಮುಷ್ಕರವು ತೀವ್ರ ಸ್ವರೂಪ ಪಡೆಯಿತು. ಪೆಟಿ ಆಫೀಸರ್ ಹುದ್ದೆಗಿಂತ ಕೆಳಗಿನ ಹುದ್ದೆಯ ಎಲ್ಲಾ ಸೈನಿಕರು ಹಿರಿಯಅಽಕಾರಿಗಳ ಆದೇಶವನ್ನು ತಿರಸ್ಕರಿಸಿದರು. ಮುಂಬಯಿ ಬಂದರಿನಲ್ಲಿದ್ದ ಇತರ ಹಡಗುಗಳಿಗೆ ತೆರಳಿದ ಸೈನಿಕರು, ಎಲ್ಲರನ್ನೂ ಹೋರಾಟಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು. ಈ ನಡುವೆ ಬಿ.ಸಿ.ದತ್ ಬಿಡುಗಡೆಯಾಗಿದ್ದರು. ಅವರು ಸಹ ಹೋರಾಟಕ್ಕೆ ಕೈಜೋಡಿಸಿದರು. ಸಂಜೆಯ ಹೊತ್ತಿಗೆ ಮುಂಬಯಿಯ 22 ಹಡಗುಗಳು ಮುಷ್ಕರದಲ್ಲಿ ಪಾಲ್ಗೊಂಡವು. ಸೈನಿಕರು ವೈರ್‌ಲೆಸ್ ಸಂದೇಶದ ಮೂಲಕ ಎಲ್ಲಾ ಕಡೆಗೆ ಮುಷ್ಕರದ ವಿವರ ರವಾನಿಸಿದರು. ಆದರೆ, ಇವರ ಬಳಿ ಶಸ್ತ್ರಗಳು ಇದ್ದರೂ, ಬ್ರಿಟಿಷ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಲಿಲ್ಲ.
ಮರು ದಿನ ಹಲವು ಸೈನಿಕರು ಹಾಕಿ ಸ್ಟಿಕ್, ಕಬ್ಬಿಣದ ಕೊಡಲಿ ಹಿಡಿದು, ಮುಂಬಯಿ ನಗರಕ್ಕೆ ದಾಳಿ ಇಟ್ಟರು. ಅವರ ಮೆರವಣಿಗೆಯನ್ನು ಕಂಡು ಮುಂಬಯಿ ನಗರದ ವಿದ್ಯಾರ್ಥಿಗಳು ಮತ್ತು ಜನರು ಘೋಷಣೆ ಕೂಗಿದರು. ಕ್ರಮೇಣ, ಅದೊಂದು ಮೆರವಣಿಗೆಯ ಸ್ವರೂಪ ಪಡೆದು, ನಿಧಾನವಾಗಿ ದೊಂಬಿಯ ಸ್ವರೂಪ ವನ್ನೂ ಪಡೆಯಿತು. ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಅಮೆರಿಕದ ಮಾಹಿತಿ ಕಚೇರಿಗೆ ದಾಳಿ ಮಾಡಿ, ಅಮೆರಿಕದ ಧ್ವಜವನ್ನು ಸುಟ್ಟು ಹಾಕಲಾಯಿತು.20ನೇ-ಬ್ರವರಿಯಂದು ಮುಂಬಯಿ ಬಂದರು ಸಂಪೂರ್ಣ ಹೋರಾಟಗಾರರ ವಶವಾಯಿತು.
45 ಯುದ್ಧನೌಕೆಗಳನ್ನು ಸೈನಿಕರು ವಶಪಡಿಸಿಕೊಂಡು, ಮುಂಬಯಿಯ ಪ್ರಮುಖ ಕಟ್ಟಡಗಳಿಗೆ ಫಿರಂಗಿಗಳನ್ನು ಗುರಿಯಾಗಿಸಿದ್ದರು! ಅಕಸ್ಮಾತ್ ಬ್ರಿಟಿಷ್ ಸೈನಿಕರು ತಮ್ಮ ಮೇಲೆ ಗುಂಡು ಹಾರಿಸಿದರೆ, ತಾವು ಮುಂಬಯಿಯ ಕಟ್ಟಡಗಳನ್ನು ಧ್ವಂಸ ಮಾಡುವೆವು ಎಂಬ ಬೆದರಿಕೆ ಅದು. ಹೋರಾಟಗಾರರಲ್ಲಿ ನಾಯ ಕತ್ವದ ಕೊರತೆ ಇತ್ತು. ಅವರಲ್ಲೇ ಇಬ್ಬರು ಸೈನಿಕರು (ಪೆಟ್ಟಿ ಆಫೀಸರ್ ಮದನ್ ಸಿಂಗ್, ಸಿಗ್ನಲ್ ಮ್ಯಾನ್ ಎಂ.ಎಸ್.ಖಾನ್) ತಮ್ಮ ಬೇಡಿಕೆಗಳನ್ನು ಪಟ್ಟಿ ಮಾಡಿ, ಬ್ರಿಟಿಷ್ ಅಧಿಕಾರಿಗಳಿಗೆ ಸಲ್ಲಿಸಿದರು. ಮುಖ್ಯ ಬೇಡಿಕೆಗಳೆಂದರೆ, ಬ್ರಿಟಿಷರು ಬಂಧಿಸಿದ್ದ ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು, ಸುಭಾಷ್ ಚಂದ್ರ ಬೋಸ್‌ರ ಇಂಡಿಯನ್ ನ್ಯಾಷನಲ್ ಆರ್ಮಿಯ ಎಲ್ಲಾ ಸೈನಿಕರನ್ನು ಬಂಧನದಿಂದ ಬಿಡುಗಡೆ ಮಾಡಬೇಕು, ಬ್ರಿಟಿಷ್ ಸೈನಿಕರಿಗೆ ನೀಡುವ ಸಮಾನ ಸವಲತ್ತು ಗಳು, ಹಡಗಿನಲ್ಲಿ ಉತ್ತಮ ಆಹಾರ ನೀಡಬೇಕು ಇತ್ಯಾದಿ.
ನಂತರದ ಪತ್ರಿಕಾ ವರದಿಗಳಲ್ಲಿ ಮತ್ತು ಸರಕಾರೀ ಕೃಪಾಪೋಷಿತ ವರದಿಗಳಲ್ಲಿ, ಈ ಬೃಹತ್ ಮಟ್ಟದ ಮುಷ್ಕರ ಮತ್ತು ದಂಗೆಗೆ ‘ಸೈನಿಕರಿಗೆ ಗುಣಮಟ್ಟದ ಆಹಾರ ನೀಡದೇ ಇರುವುದು ಮತ್ತು ಶಿಸ್ತಿನ ಕೊರತೆ ಕಾರಣ’ ಎಂದು ವಿಶ್ಲೇಷಿಸಲಾಗಿದೆ. ಸ್ವಾತಂತ್ರ್ಯ ನಂತರದ ಸರಕಾರವೂ ಅದನ್ನೇ ಒಪ್ಪಿಕೊಂಡಿದೆ. ಆದರೆ, ಮುಷ್ಕರ ನಿರತ ನೌಕಾ ಸೈನಿಕರು ಎಲ್ಲಾ ಹಡಗುಗಳ ಮೇಲೆ ಮೂರು ಬಾವುಟಗಳನ್ನು ಹಾರಿಸಿದ್ದರು. ಅವೆಂದರೆ, ಕಾಂಗ್ರೆಸ್ ಬಾವುಟ, ಮುಸ್ಲಿಂ ಲೀಗ್ ಬಾವುಟ ಮತ್ತು ಕಮ್ಯುನಿಸ್ಟ್ ಪಕ್ಷದ ಬಾವುಟ. ಅದರ ಅರ್ಥ ಸ್ಪಷ್ಟ. ನಾವು ಸೈನಿಕರು ಬ್ರಿಟಿಷರ ವಿರುದ್ಧ ಹೋರಾಟ ಆರಂಭಿಸಿದ್ದೇವೆ ಮಾತ್ರವಲ್ಲ, ಸ್ವಾತಂತ್ರ್ಯ ಚಳವಳಿ ಯನ್ನು ನಡೆಸುತ್ತಿದ್ದ ಕಾಂಗ್ರೆಸ್ ಮೊದಲಾದ ಪಕ್ಷಗಳ ಜತೆಗಿದ್ದೇವೆ ಎಂದು.
ಆದರೆ ಇವರಿಗೆ ಆಘಾತ ನೀಡಿದ್ದು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್. ಈ ಎರಡೂ ಪಕ್ಷಗಳು ಪರಸ್ಪರ ಮಾತನಾಡಿಕೊಂಡವರಂತೆ, ‘ನೌಕಾ ಸೈನಿಕರು ತಕ್ಷಣ ಮುಷ್ಕರವನ್ನು ಹಿಂದಕ್ಕೆ ಪಡೆಯಿರಿ’ ಎಂದು ಕರೆ ನೀಡಿದವು! ಕಮ್ಯುನಿಸ್ಟ್ ಪಕ್ಷ ಮಾತ್ರ ಇವರ ಹೋರಾಟಕ್ಕೆ ಬೆಂಬಲ ನೀಡಿತು. ಮುಷ್ಕರ ನಿರತರಿಗೆ ನೈತಿಕ ಬೆಂಬಲ ನೀಡಲು 22 ಫೆಬ್ರವರಿಯಂದು ಕಮ್ಯುನಿಸ್ಟ್ ಪಕ್ಷವು ಒಂದು ದಿನದ ಬಂದ್‌ಗೆ ಕರೆ ನೀಡಿತು. ಆ ದಿನ ಮುಂಬಯಿ ಅಕ್ಷರಶಃ ಹೊತ್ತಿ ಉರಿಯಿತು. ಒಂದು ಲಕ್ಷ ಜನರು ನೌಕಾ ಸೈನಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ, ಮೆರವಣಿಗೆ ನಡೆಸಿದರು.
ಅದನ್ನು ಮುಂಚಿತವಾಗಿ ಅರಿತಿದ್ದ ಬ್ರಿಟಿಷ್ ಪೊಲೀಸರು, ಮನಬಂದಂತೆ ಜನರ ಮೇಲೆ ಗುಂಡು ಹಾರಿಸಿದರು! ಅದೊಂದು ದಿನ ಮುಂಬಯಿಯಲ್ಲಿ ಸುಮಾರು 250 ಜನ ಸತ್ತರು, 1000 ಕ್ಕೂ ಹೆಚ್ಚು ಜನ ಗಾಯಗೊಂಡರು. ಕರಾಚಿಯಲ್ಲಿ ಸುಮಾರು 10 ರಿಂದ 20 ಜನ ಸತ್ತರು. ಆದರೆ ಅಂದು ಮುಂಬಯಿಯಲ್ಲಿ ಎಷ್ಟು ಜನ ಸತ್ತರು ಎಂಬುದರ ಸ್ಪಷ್ಟ ಲೆಕ್ಕವೇ ಇಲ್ಲ. ಬ್ರಿಟಿಷರು ನಮ್ಮ ದೇಶದವರ ಮೇಲೆ ನಡೆಸಿದ ಅತಿ ಘೋರ ಹತ್ಯಾಕಾಂಡಗಳಲ್ಲಿ ಇದೂ ಒಂದು.
ಈ ಹೋರಾಟವನ್ನು ಬ್ರಿಟಿಷ್ ಅಧಿಕಾರಶಾಹಿ ಖಂಡಿಸಿತು ಮತ್ತು ಇದು ಕಮ್ಯುನಿಸ್ಟರ್ ನಡೆಸಿದ ಕಾರಸ್ಥಾನ ಎಂದು ಹೇಳಿತು. ಅಚ್ಚರಿ ಎಂದರೆ, ಕಾಂಗ್ರೆಸ್ ಪಕ್ಷ ಸಹ ನೌಕಾ ಸೈನಿಕರ ಹೋರಾಟವನ್ನು ಬ್ರಿಟಿಷರಂತೆಯೇ ಖಂಡಿಸಿತು. ಗಾಂಧೀಜಿ ಯವರು, ಆ ಹೋರಾಟಗಾರನ್ನು ಕಠಿಣ ಶಬ್ದಗಳಲ್ಲಿ ನಿಂದಿಸಿದರು.ಸೈನಿಕರು ಮನಸ್ಸು ಮಾಡಿದ್ದರೆ ಬ್ರಿಟಿಷರ ವಿರುದ್ಧ ಇನ್ನಷ್ಟು ತೀವ್ರವಾಗಿ ದಾಳಿ ಮಾಡಬಹುದಿತ್ತು. ಆದರೆ ಅವರು ಕಾಂಗ್ರೆಸ್ ಪಕ್ಷದ ವಲ್ಲಭಬಾಯಿ ಪಟೇಲರ ಆಹ್ವಾನದಂತೆ ಮಾತುಕತೆಗೆ ಬಂದರು.
ಮುಷ್ಕರ ಸಮಿತಿಯ ಎಂ.ಎಸ್.ಖಾನ್ ಮತ್ತು ಪಟೇಲರು ನಡುವೆ ಮಾತುಕತೆ ನಡೆಯಿತು. ಗಮನಿಸಿ – ಬ್ರಿಟಿಷ್ ಸರಕಾರದ ವಿರುದ್ಧ ನಡೆಸಿದ ಈ ಹೋರಾಟ ವನ್ನು ದಮನಿಸಲು ಕಾಂಗ್ರೆಸ್‌ನ ಪಟೇಲರು ಬಂದರು! ಹೋರಾಟವನ್ನು ಹಿಂದಕ್ಕೆ ಪಡೆಯಲು ಮುಷ್ಕರಗಾರರ ಮನವೊಲಿಸಿದರು. ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆಯನ್ನೂ ನೀಡಿದರು.
ಅಂತೂ 25.2.1946ರಂದು ನೌಕಾ ಸೈನಿಕರು ತಮ್ಮ ಹೋರಾಟವನ್ನು ಹಿಂದೆಗೆದುಕೊಂಡರು. ಆದರೆ ಕಾಂಗ್ರೆಸ್ ಪಕ್ಷದ ವಾಗ್ದಾನ ಮಾತ್ರ ಹುಸಿ ಆಯಿತು. 476 ನೌಕಾ ಸೈನಿಕರು ಬಂಧಿಸಿ, ಕೆಲಸ ದಿಂದ ವಜಾ ಮಾಡಲಾಯಿತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ, ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆ ಸೈನಿಕರು ಮಾಡಿದ ಮನವಿಯನ್ನು ಸರಕಾರ ಪುರಸ್ಕರಿಸಲಿಲ್ಲ!