ಕೃಷಿಕರಿಗೆ ಅಗತ್ಯವಿರುವುದು ಮಾನವೀಯತೆಯ ಸ್ಪಂದನೆ
ಅಭಿಪ್ರಾಯ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
@.
ಕರ್ನಾಟಕ ರಾಜ್ಯವೊಂದರಲ್ಲಿಯೇ 1072 ಮಂದಿ ಜೀವ ಬಲಿದಾನ ಮಾಡಿದರು. ಇತ್ತೀಚಿನ ಕೆಲ ವರ್ಷಗಳಲ್ಲಿ ಕೃಷಿಯನ್ನು ತ್ಯಜಿಸಿ ಊರು ಬಿಟ್ಟವರು ಅನೇಕಾ ನೇಕರು. ಇದು ಕೃಷಿ ಕ್ಷೇತ್ರದ ದುರಂತವಲ್ಲವೇ?
‘ಕೃಷಿತೋನಾಸ್ತಿ ದುರ್ಬಿಕ್ಷಂ’ ಎಂಬ ಮಾತಿಗೆ ಮರು ಜೀವನ ತುಂಬ ಬೇಕಾಗಿದೆ. ಲಾಲ್ ಬಹದ್ದೂರ್ಶಾಸ್ತ್ರಿಪ್ರಧಾನಿಯಾಗಿದ್ದಾಗ ಆಹಾರ ಕ್ಷಾಮ ಬಂದಾಗಲೂ ರೈತ ಸಂತೋಷವಾಗಿದ್ದ. ಭೂತಾಯಿಯ ಒಡಲಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ದುಡಿದು ‘ಪ್ರಾಚೀನ ಸಂಸ್ಕೃತಿಯೊಂದಿಗೆ ಬಂಗಾರದ ಬದುಕನ್ನು ಸಾಗಿಸು ತ್ತಿದ್ದ’. ಕೃಷಿಕನ ಬದುಕು ಕಷ್ಟ ಕಾರ್ಪಣ್ಯಗಳ ನಡುವೆಯೂ ಆನಂದಮಯವಾಗಿತ್ತು, ಸ್ವರ್ಗವಾಗಿತ್ತು.
ಹಸಿರುಕ್ರಾಂತಿ ಮತ್ತು ಆಧುನಿಕ ಕೃಷಿ ಪದ್ಧತಿಯಿಂದ ಆಹಾರ ಕೊರತೆ ಇಲ್ಲದಿದ್ದ ಈ ಸಮಯದಲ್ಲಿ ರೈತರ ಅದರಲ್ಲೂ ಮಧ್ಯಮ ಮತ್ತು ಸಣ್ಣ ರೈತರ ಬದುಕು ಕೆಲವು ಅನೀತಿ, ವಿವಿಧ ಪ್ರಕೃತಿಯ ವಿಕೋಪಗಳಾದ ಬರ, ಕ್ಷಾಮ, ಅತಿವೃಷ್ಠಿ, ಅನಾವೃಷ್ಠಿಗೆ ಬಲಿಯಾದ ರೈತರು ಊರು ಬಿಡಲೇ -ಪ್ರಾಣ ಬಿಡಲೇ ಎಂಬ ಪರಿಸ್ಥಿತಿಯನ್ನು ಯಾವತ್ತೋ ತಲುಪಿಯಾಗಿದೆ. ಕೆಲವರು ಪ್ರಾಣ ತೆತ್ತಿದ್ದಾರೆ. 2020ರಲ್ಲಿ 5567 ರೈತರು ಆತ್ಮಹತ್ಯೆಗೆ ಶರಣಾ ದರು. ಕರ್ನಾಟಕ ರಾಜ್ಯ ವೊಂದರಲ್ಲಿಯೇ 1072 ಮಂದಿ ಜೀವ ಬಲಿದಾನ ಮಾಡಿದರು.
ಇತ್ತೀಚಿನ ಕೆಲ ವರ್ಷಗಳಲ್ಲಿ ಕೃಷಿಯನ್ನು ತ್ಯಜಿಸಿ ಊರು ಬಿಟ್ಟವರು ಅನೇಕಾನೇಕರು. ಇದು ಕೃಷಿ ಕ್ಷೇತ್ರದ ದುರಂತವಲ್ಲವೇ? ಕೋವಿಡ್ ಪೀಡಿತ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಮತ್ತು ಲಾಕ್‌ಡೌನ್ ವೇಳೆ ಕೃಷಿ ಕ್ಷೇತ್ರವು ಆರ್ಥಿಕತೆಯ ಮೇಲಿನ ಒತ್ತಡವನ್ನು ತಿಳಿಗೊಳಿಸಿ ಗೌರವಯುತ ಕೊಡುಗೆಯನ್ನು ನೀಡಿದೆ. ಆದರೆ ಕೃಷಿಕರ ಬವಣೆ ತಿಳಿಯಾಗಿಲ್ಲ.
‘ಹಳ್ಳಿಯ ಕೃಷಿಕ ಭಾರತೀಯ ಸಂಸ್ಕೃತಿಯ ಜನಕ’. ಸರಕಾರಗಳು ಕೃಷಿಕನಿಗೆ ಮಾನವೀಯತೆ ಮೆರುಗನ್ನು ಕೊಡಬೇಕು. ಅನ್ನದಾತನಿಗೆ ಸಿಕ್ಕಿದ ಆಶ್ವಾಸನೆಗಳು ಈಡೇರಲಿಲ್ಲ, ಅದೂ ಕೂಡ ಪ್ರಸಕ್ತ ಸನ್ನಿವೇಶದ ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯಗಳಿಗೆ ಎಲ್ಲರೂ ಕಾರಣರು ಆದರೆ ಅದರಿಂದ ಅತ್ಯಂತ ಹೊಡೆತ ಅನುಭವಿಸಿದವರು ಹಳ್ಳಿಯ ಬಡ ರೈತರೇ ಆಗಿದ್ದಾರೆ. ರೈತರ ಆದಾಯವು ಕುಸಿಯುತ್ತಿದೆ. ರಾಷ್ಟ್ರೀಯ ಆದಾಯ ಹೆಚ್ಚಳದಲ್ಲಿದ್ದರೂ ತಲಾ ಆದಾಯ ಅದರಲ್ಲೂ ರೈತರ ಆದಾಯ ಹೆಚ್ಚದಿರುವುದು ವಿಷಾದದ ಸಂಗತಿ. ದೇಶದ ವಾರ್ಷಿಕ ಸರಾಸರಿ ತಲಾ ಆದಾಯ ಕೇವಲ 1.2ಲಕ್ಷ ರು. ಗಿಂತ ಕಡಿಮೆ. ಕೆಲವೊಂದು ರೈತ ಕುಟುಂಬದ ತಲಾ ಆದಾಯ 30 ಸಾವಿರಕ್ಕಿಂತಲೂ ಕಡಿಮೆ.
ನಮ್ಮಲ್ಲಿ ಟ್ರಿಲಿಯನರ್ ಸಂಖ್ಯೆ ಹೆಚ್ಚುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ರೈತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಕರೋನಾ ಹಾವಳಿ ಮತ್ತು ನೈಸರ್ಗಿಕ ವಿಕೋಪಗಳು ಬಡ ರೈತರ ಬದುಕನ್ನು ಹೀರಿ, ಹಿಂಡಿ ಹಿಪ್ಪೆ ಮಾಡಿದೆ. ‘ಕೃಷಿ ಕ್ಷೇತ್ರಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು’. ಇದೀಗ ರೈತಾಪಿ ಜನ ಕೃಷಿಯಲ್ಲಿನ ಆಸಕ್ತಿಯನ್ನು ಕಳಕೊಂಡಿದ್ದಾರೆ. ಹೊಸ ಪೀಳಿಗೆ ಕೃಷಿಯಲ್ಲಿ ತಮ್ಮ ಭವಿಷ್ಯ ಮತ್ತು ಬದುಕನ್ನು ಕಟ್ಟಿಕೊಳ್ಳಲು ಸುತಾರಾಂ ಒಪ್ಪುತ್ತಿಲ್ಲ. ಇದು ಒಂದು ದಿನ ದೇಶದ ಪ್ರಗತಿಗೆ ಮಾರಕವಾಗುವುದರಲ್ಲಿ ಸಂದೇಹವಿಲ್ಲ. ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲೂ ದೇಶದ ಏಕೈಕ ಆಶಾಕಿರಣವಾಗಿ ಮೂಡಿ ಬಂದದ್ದು ಕೃಷಿ ಕ್ಷೇತ್ರ ಎಂಬು ದನ್ನು ಮರೆಬಾರದು.
ಪ್ರಸಕ್ತ ಭಾರತದ ಜನಸಂಖ್ಯೆ ಅಸುಪಾಸು 138 ಕೋಟಿ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶೇ. 60 ರಿಂದ ಶೇ. 63 ರಷ್ಟು ಜನಸಂಖ್ಯೆ ಒಂದಲ್ಲ ಒಂದು ವಿಧಾನ ದಲ್ಲಿ ಕೃಷಿ ಕ್ಷೇತ್ರವನ್ನೇ ಅವಲಂಬಿಸಿಕೊಂಡಿದ್ದಾರೆ. ನಿರ್ಬಂದಿತ ಮಾರುಕಟ್ಟೆ, ಪರ್ಯಾಯ ಮಾರುಕಟ್ಟೆಯ ಆಯ್ಕೆಯ ಕೊರತೆ, ಉತ್ಪಾದನೆಯ ನಂತರ ಸಾಗಾಣೆ, ಸಂಸ್ಕರಣೆ, ದಾಸ್ತಾನು, ಶಿಥೀಲೀಕರಣ ಘಟಕಗಳು, ರಾಜ್ಯ ಮತ್ತು ಅಂತರ್‌ರಾಜ್ಯ ಮಾರಾಟ ಮತ್ತು ರಫ್ತಿನ ಅನಾನುಕೂಲ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಅಭಾವ, ಅಗತ್ಯಕ್ಕಿಂತ ಹೆಚ್ಚಿನವರು ಕೃಷಿ ವಲಯವನ್ನು ಅವಲಂಬಿಸಿರುವುದರಿಂದ ಉಂಟಾಗುವ ಒತ್ತಡಗಳಿಂದ ರೈತರ ಆದಾಯ ಹೆಚ್ಚದೇ ಅವರ ಬದುಕು ದುಸ್ತರವಾಗಿದೆ.
ಕೃಷಿ ಕ್ಷೇತ್ರ ಮತ್ತು ರೈತ ಕೇವಲ ರಾಷ್ಟ್ರದ ಬೆನ್ನೆಲುಬು ಮಾತ್ರವಲ್ಲ ದೇಶದ, ರಾಷ್ಟ್ರ ರಾಜಕಾರಣದ ಬೆನ್ನೆಲುಬು ಮತ್ತು ಸರಕಾರಗಳ ಅಳಿವು ಉಳಿವಿನ ರೂವಾರಿಯು ಹೌದು. ದೇಶದ ಸಣ್ಣ ಹಿಡುವಳಿದಾರರ ಭೂಮಾಲಿಕತ್ವ 1.1 ಹೆಕ್ಟೇರ್‌ಗಿಂತ ಕಡಿಮೆಯಿದೆ. ಅತಿ ಚಿಕ್ಕ ಭೂಹಿಡುವಳಿದಾರರ ಭೂ ಒಡೆತನ 0.38 ಹೆಕ್ಟೇರ್. ಆದಾಯ ಮತ್ತು ಭೂ ಒಡೆತನ ಎರಡನ್ನು ದೃಷ್ಟಿ ಯಲ್ಲಿಟ್ಟುಕೊಂಡು, ಪ್ರಕೃತಿ ವಿಕೋಪಗಳನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಮತ್ತು ತ್ವರಿತ ಪರಿಹಾರ ಆದ್ಯತೆಯಾಗಲೇ ಬೇಕು. ವಿಮಾ ಯೋಜನೆ ಮತ್ತು ಬೆಳೆ ಹಾಗೂ ಆಸ್ತಿ ಹಾನಿಯ ವಿಮಾ ನಿರ್ಧರಿತ ಮೌಲ್ಯವನ್ನು ತುರ್ತು ಪಾವತಿಗೊಳಿಸಬೇಕು. ಪಾರ ದರ್ಶಕವಾಗಿ ಸ್ಪಷ್ಟತೆಯಿಂದ ಅವರಿಗೆ ಪರ್ಯಾಯ ಬೆಳೆ, ವರ್ಷಪೂರ್ತಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದಲ್ಲದೆ ಕೃಷಿಯಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ಏಕೈಕ ಮಾರ್ಗವೆಂದರೆ ಕೃಷಿ ಬೆಳವಣಿಗೆಯಲ್ಲಿ ವೇಗವರ್ಧನೆ.
ದೇಶದ ಅಗತ್ಯಗಳನ್ನು ಪೂರೈಸಲು ಈಗಾಗಲೇ ಸಾಕಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸಲಾಗುತ್ತಿದೆಯಾದರೂ ಉತ್ಪಾದನೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗಲು ರಫ್ತು ಮಾರುಕಟ್ಟೆಯನ್ನು ಹುಡುಕಬೆಕು. ಆಮದು ಪ್ರತಿಬಂಧಕ ಮತ್ತು ಸುಂಕ ವಿಧಿಸಬೇಕು. ರೈತರ ಆದಾಯವನ್ನು ಪರಿಪೂರ್ಣ ಆದಾಯ ಹೆಚ್ಚಿಸಲು ಪೂರಕ ಉದ್ಯಮ ಮತ್ತು ಸೇವೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕಾಗಿದೆ ಮತ್ತು ಉದ್ಯೋಗ ಸೃಷ್ಠಿಗೆ ಮತ್ತು ಆದಾಯ ವೃದ್ಧಿಗೆ ಪೂರಕವಾಗಬೇಕು. “ಕೃಷಿ ಕ್ಷೇತ್ರ ಮತ್ತು ರೈತರ ಆದಾಯ ವೃದ್ಧಿಗೆ ಮಾರುಕಟ್ಟೆ ಸುಧಾರಣೆ ನಿಟ್ಟಿನಲ್ಲಿ ಎಲ್ಲಾ ರಾಜ ಕೀಯ ಪಕ್ಷಗಳ ವಿಶ್ವಾಸದೊಂದಿಗೆ, ಚರ್ಚೆ ಸಂವಾದಗಳ ಮೂಲಕ ಪ್ರತಿಪಕ್ಷಗಳು ಮತ್ತು ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ವಿರೋಧಾಬಾಸಗಳು ಮತ್ತು ದ್ವಂದ್ವಗಳನ್ನು ಕೈಬಿಡಬೇಕು ಮತ್ತು ಬದಲಾವಣೆಗಳು ವಸ್ತು ನಿಷ್ಠವಾ ಗಿರಬೇಕು.”
ಕೃಷಿ ವಲಯದ ಸುಧಾರಣೆಗೆ ತಾಳ್ಮೆ, ಸಮಾಲೋಚನೆ, ಪೂರ್ವಸಿದ್ಧತೆ, ರಚನಾತ್ಮಕ ಒಗ್ಗಟ್ಟು, ಸಹಮತ ಮತ್ತು ಸಂಯಮದ ಅಗತ್ಯವಿದೆ. ಯಾವುದು ಏನೇ ಇರಲಿ, ವಿಷಯ, ವಿವೇಚನೆ ಮತ್ತು ಆಚರಣೆ ಪಾರದರ್ಶಕವಾಗಿರಬೇಕು. ಕೃಷಿಕರು ಅದೂ ಕೂಡಾ ಕೃಷಿ ಕ್ಷೇತ್ರದ ವಿಚಾರದಲ್ಲಿ ‘ವಿರೋಧಕ್ಕಾಗಿ ವಿರೋಧಿಸುವುದು ತರವಲ್ಲ’. ಕೇಂದ್ರ ಸರಕಾರದ ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ಕಾಯಿದೆಗಳಾದ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯಿದೆ ೨೦೨೦, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಕಾಯಿದೆ ೨೦೨೦ ಮತ್ತು ಅಗತ್ಯ ವಸ್ತುಗಳ ತಿದ್ದುಪಡಿಕಾಯಿದೆ ೨೦೨೦ ಎಂಬ ಮೂರು ಕಾಯಿದೆಗಳನ್ನು ಹಿಂಪಡೆಯಲಾಯಿತು.
ದೇಶದ ಹಿತದೃಷ್ಠಿಯಿಂದ ಕಾಯಿದೆಯನ್ನು ಹಿಂಪಡೆಯಲಾಗಿದೆ ಎನ್ನುವುದು ಮೂಲವಾದವೆಂದರೆ ತಪ್ಪಿಲ್ಲ. “ಪ್ರಧಾನಿಯವರು ಒಂದು ಗುಂಪಿನ ರೈತರಿಗೆ ಈ ಕೃಷಿ ಕಾಯಿದೆಯನ್ನು ಮನವರಿಗೆ ಮಾಡಿಕೊಡುವಲ್ಲಿ ತಮ್ಮ ಸರಕಾರಕ್ಕೆ ಸಾಧ್ಯವಾಗಲಿಲ್ಲವೆಂಬ ವ್ಯಾಖ್ಯಾನದೊಂದಿಗೆ ದೇಶದ ಜನತೆಯ ಕ್ಷಮೆಯಾಚಿಸಿ ಕಾಯಿದೆ ಗಳನ್ನು ಹಿಂಪಡೆದುಕೊಂಡಿದ್ದಾರೆ.” ತಪ್ಪು, ಒಪ್ಪು, ವಿರೋಧ, ಪ್ರತಿರೋಧಗಳ ನಡುವೆಯೂ ಪ್ರಮುಖ ವಿಚಾರ ರೈತರ ಹಿತದೃಷ್ಠಿಯಲ್ಲವೇ? ‘ಎಲ್ಲಾ ಕ್ಷೇತ್ರ ಗಳಲ್ಲಿಯೂ ಉತ್ಪನ್ನಗಳ ಮಾರುವಿಕೆಯೂ ಉತ್ಪಾದನಾ ವ್ಯವಸ್ಥೆಯ ಪ್ರಮುಖ ಮತ್ತು ಕೊನೆಯ ಹಂತ’ ರೈತರ ಬೆಳೆಗಳಿಗೆ ಉತ್ಪದನಾ ವೆಚ್ಚಕ್ಕೆ ತಕ್ಕ ಬೆಲೆಸಿಗದಿರುವುದೇ ಕೃಷಿ ಕ್ಷೇತ್ರದ ಮೂಲ ಸಮಸ್ಯೆ.
‘ಅರ್ಥಶಾಸ್ತ್ರದಮೂಲ ಸಿದ್ಧಾಂತದ ಪ್ರಕಾರ ಪೂರೈಕೆಯು ಯಥೇಚ್ಛವಾಗಿರುವಾಗ ಬೆಲೆಯು ಕುಸಿಯುತ್ತದೆ. ರೈತರಿಗೆ ಉತ್ತಮ ಬೆಲೆ ಸಿಗುವ ಮಾರುಕಟ್ಟೆ ಸೃಷ್ಠಿಸಬೇಕು. ದಲ್ಲಾಳಿಗಳ ಹಾವಳಿ, ತೂಕ ಮತ್ತು ಅಳತೆಯ ಮೋಸ ಇವೆಲ್ಲವೂ ರೈತರ ಆರ್ಥಿಕ ದುರ್ಬಲತೆಯ ಧಾರುಣ ಪರಿಸ್ಥಿತಿಗೆ ಕಾರಣ’. ರೈತರು ಹಲವಾರು ಕಷ್ಟ ಕಾರ್ಪಣ್ಯಗಳು, ಮಾರುಕಟ್ಟೆ, ಕೃತ್ರಿಮಗಳು, ಮದ್ಯವರ್ತಿಗಳಿಂದಾಗಿ ಸಂಕಷ್ಟದ ಸಂಕೋಲೆಯಲ್ಲಿ ಸಿಲುಕಿದ್ದಾರೆ. ಕೃಷಿಕರಲ್ಲಿ ಕೃಷಿ ಆಚರಣೆ ಯಲ್ಲಿನ ನೈತಿಕ ಉತ್ಸಾಹವು ಕಡಿಮೆಯಾಗಿದೆ.
ಇದರಿಂದಾಗಿ ಆದಾಯ ಕಡಿಮೆಯಾಗಿ ಬಂಡವಾಳದ ಕೊರತೆ ಸಂಭವಿಸಿದೆ. ‘ದಲ್ಲಾಳಿಗಳು ಮತ್ತು ವ್ಯಾಪಾರಿಗಳು ಸಶಕ್ತರಾಗುತ್ತಲೇ ಇದ್ದಾರೆ.’ ಎಲ್ಲಿಯವರೆಗೆ ದೇಶದ ರೈತರಿಗೆ ಆತ್ಮಾಭಿಮಾನ ಮತ್ತು ಸ್ವಾಭಿಮಾನದಿಂದ ಬದುಕು ನಿರ್ವಹಿಸಲು ಅಸಾಧ್ಯವಾಗುವುದೋ ಅಲ್ಲಿಯವರೆಗೆ ದೇಶದ ಪ್ರಗತಿ ಅಸಾಧ್ಯ. ನಾವುಉಣ್ಣುವ ಅನ್ನಕ್ಕೆ ಕೈ ನೀಡುವ ಮೊದಲು ರೈತನಿಗೆ ಗೌರವಪೂರ್ವಕ ಅಭಿನಂದನೆ ಸಲ್ಲಿಸಬೇಕು. ರೈತರ ಸಮಸ್ಯೆಗಳಿಗೆ ಸಂಬಂಧಪಟ್ಟವರು ಸ್ಪಂದಿಸಲೇಬೇಕು.