ನ್ಯೂಯಾರ್ಕ್‌‌ನ ರಾತ್ರಿಗಳನ್ನು ಆಳುವವರು ?!
ಶಿಶಿರ ಕಾಲ
ಶಿಶಿರ‍್ ಹೆಗಡೆ
@.
ಇದು ನ್ಯೂಯಾರ್ಕ್‌ವೊಂದರದ್ದೇ ಸಮಸ್ಯೆಯಲ್ಲ. ಅಮೆರಿಕ, ಚೈನಾ, ಲಂಡನ್, ಮುಂಬಯಿಯ ಹೀಗೆ ಜಗತ್ತಿನ ಎಲ್ಲ ದೊಡ್ಡ ನಗರಗಳದ್ದೂ ಇದೇ ವ್ಯಥೆ. ಮನುಷ್ಯರು ವರ್ಸಸ್ ಇಲಿಯ ಕಥೆ. ಒಂದು ಕಡೆ ಅಳಿವಿನಂಚಿನಲ್ಲಿ ಇರುವ ಜೀವ ವೈವಿಧ್ಯ, ಇನ್ನೊಂದು ಕಡೆ ಇಲಿಗಳು. ಇದೆಂತಹ ವ್ಯಂಗ್ಯ?
ನ್ಯೂಯಾರ್ಕ್ ನಗರ – ಇಲ್ಲಿನ ಟೈಮ್ಸ್ ಸ್ಕ್ವೇರ್‌ನ ಚಿತ್ರ, ವಿಡಿಯೋವನ್ನು ನೀವು ನೋಡಿಯೇ ಇರುತ್ತೀರಿ. ಬ್ರಾಡ್‌ವೆ ಮತ್ತು ಸೆವೆನ್ತ್ ಅವೆನ್ಯೂ ಸೇರುವ ಈ ಮ್ಯಾನ್ಹಟ್ಟನ್ ನ ಜಾಗ, ಬಹುತೇಕ ಕಟ್ಟಡಗಳಲ್ಲಿ ವಿದ್ಯುದಾಲಂಕಾರ, ದೊಡ್ಡ ದೊಡ್ಡ ಟಿವಿಯಂಥ ಪರದೆಯಲ್ಲಿ ಸದಾ ಜಾಹೀರಾತುಗಳು ಹರಿದಾಡುತ್ತಿರುತ್ತವೆ. ನ್ಯೂಯಾರ್ಕ್ ನಗರವನ್ನು ತೋರಿಸುವಾಗ ಜಗತ್ತಿನ ಯಾವುದೇ ಟಿವಿ ವಾಹಿನಿಯಿರಲಿ, ಈ ಝಗಮಗಿಸುವ ಟೈಮ್ಸ ಸ್ಕ್ವೇರ್ ಅನ್ನೇ ತೋರಿಸುವುದು.
ಇಲ್ಲಿ ಒಂದು ಪ್ರತೀತಿಯಿದೆ; ನೀವು ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆದು ಹೋಗುತ್ತಿದ್ದೀರಿ ಎಂದರೆ ಜಗತ್ತಿನ ಎಲ್ಲ ದೇಶದವರನ್ನು ೫ ನಿಮಿಷದಲ್ಲಿ ಹಾದಿರುತ್ತೀರಿ ಎಂದು. ಇದು ಅತಿಶಯವಲ್ಲ. ನ್ಯೂಯಾರ್ಕ್ ನಗರವೇ ಹಾಗೆ. ಅದು ಜಗತ್ತಿನ ಎಲ್ಲ ದೇಶ, ನಗರದ ಜನರನ್ನೂ ಹೊಂದಿರುವ ಮಿನಿ ಸಾಗರ. ಮಾಯಾನಗರಿ ಎಂದು ಯಾವು ದಾದರೂ ನಗರವನ್ನು ಕರೆಯುವುದಾದರೆ ಅದು ನ್ಯೂಯಾರ್ಕ್. ಇಲ್ಲಿ ಎಲ್ಲವೂ ಇದೆ. ಸುಮಾರು ಮುನ್ನೂರು ಚದರ ಮೈಲಿ – 89ಲಕ್ಷ ಮಂದಿ. ನ್ಯೂಯಾರ್ಕ್ ಎಂದಿಗೂ ನಿದ್ರಿಸದ ನಗರ. ಜನರೇ ಕಾಣಿಸದ, ರಸ್ತೆಯಲ್ಲಿ ಕಾರು ಓಡಾಡದ ಸಮಯವಿಲ್ಲ. ಆದರೆ ರಾತ್ರಿ ಸುಮಾರು ಹನ್ನೆರಡು – ಒಂದು ಗಂಟೆ ನಂತರ ಜನರ ಓಡಾಟ ಕ್ರಮೇಣ ಕಡಿಮೆಯಾಗುತ್ತದೆ. ಆಗ ಬೇರೆಯದೇ ಜೀವಿಗಳು ಬೀದಿಗಳನ್ನು ತುಂಬಿಕೊಳ್ಳುತ್ತವೆ; ಇಲಿಗಳು.
ನ್ಯೂಯಾರ್ಕ್ ಎಂದರೆ ಅಲ್ಲಿ ಎಷ್ಟು ಜನರಿದ್ದಾರೋ ಅದಕ್ಕಿಂತ ಜಾಸ್ತಿ, ಮೂರ್ನಾಲ್ಕು ಪಟ್ಟು ಇಲಿಗಳಿವೆ. ಇವು ರಾತ್ರಿಯಾಯಿತೆಂದರೆ ಹೊರಬಿದ್ದು ಕಂಡಕಂಡಲ್ಲಿ ಲಗ್ಗೆಯಿಡುತ್ತವೆ. ರಸ್ತೆ, ಕಾಲ್ದಾರಿಗಳು, ನಗರದ ಅಡಿಯಲ್ಲಿ ಓಡಾಡುವ ಸಬ್‌ವೇ ರೈಲುಗಳು, ರೈಲ್ವೆ ಸ್ಟೇಷನ್ನುಗಳು, ಮನೆ-ಅಪಾರ್ಟ್ಮೆಂಟುಗಳು, ಕಸದ ತೊಟ್ಟಿ ಗಳು, ಆಸ್ಪತ್ರೆ, ಶಾಲೆ, ಹೋಟೆಲ್ಲುಗಳು ಹೀಗೆ ಕಂಡಕಂಡಲ್ಲ ನುಗ್ಗಿ, ಸಿಕ್ಕದ್ದನ್ನೆಲ್ಲ ತಿನ್ನುತ್ತ, ಇದ್ದ ಬದ್ದ ಕಸವನ್ನೆಲ್ಲ ರಸ್ತೆಗಳಿಗೆಳೆತಂದು ಬೆಳಗ್ಗೆಯಾಗುವವ ರೆಗೆ ರಾದ್ಧಾಂತವೆಬ್ಬಿಸಿಬಿಡುತ್ತವೆ. ಕೆಲವೊಂದು ರಸ್ತೆಗಳು ದೀಪಾ ವಳಿಯ ಮಾರನೆಯ ದಿನದ ಬೆಂಗಳೂರಿನ ರಸ್ತೆಗಳಂತೆ.
ಇವು ಎಲೆಕ್ಟ್ರಿಕ್ ವೈರ್, ಟೆಲಿಫೋನ್, ಟಿವಿ ಕೇಬಲ್‌ಗಳನ್ನೂ ಬಿಡುವುದಿಲ್ಲ. ಈ ಫಜೀತಿ ಪ್ರತೀ ದಿನ – ವರ್ಷಪೂರ್ತಿ ನಡೆಯುವಂಥದ್ದು. ಇಲಿ ಹೊಕ್ಕದ ಮನೆನ್ಯೂಯಾರ್ಕ್‌ನಲ್ಲಿ ಇಲ್ಲವೇ ಇಲ್ಲ. ಅವೆಷ್ಟು ವ್ಯಾಪಿಯೆಂದರೆ – ನ್ಯೂಯಾರ್ಕ್‌ನ ಬ್ಯಾಂಕ್ ಸೇಫ್ಗಳಲ್ಲೂ ಇಲಿಗಳು ಹೊಕ್ಕುವುದು ಆಗೀಗ ಸುದ್ದಿಯಾಗುತ್ತಿರುತ್ತವೆ. ಇಷ್ಟು ಜನ ನಿಭಿಡ ಪ್ರದೇಶದಲ್ಲಿ ರುವ ಇಲಿಗಳು ಆಚೀಚೆ ಕಟ್ಟಡಗಳಲ್ಲಿ ರೋಗವಾಹಕಗಳು ಕೂಡ. ಎಮರ್ಜನ್ಸಿ ಅಲ್ಲದ ವಿಚಾರಗಳಿಗೆ ಕರೆ ಮಾಡಲು ನ್ಯೂಯಾರ್ಕ್ ಸಿಟಿ311ಎನ್ನುವ ಫೋನ್ ಸಂಖ್ಯೆ ನಿಗದಿಮಾಡಿದೆ. ಅದಕ್ಕೆ ಬರುವ ಬಹುತೇಕ ಕರೆಗಳು ಇಲಿ ಸಂಬಂಧಿ ಕರೆಗಳೇ. ರಾತ್ರಿ ನ್ಯೂಯಾರ್ಕ್ಅನ್ನು ಅನಾಮತ್ತು ಇಲಿ ತನ್ನ ತೆಕ್ಕೆಗೆ ತೆಗೆದುಕೊಂಡು ಬಿಡುತ್ತದೆ.
ಇಲ್ಲಿನ ಪಾಲಿಕೆಗೆ ಇಲಿಯದೇ ತಲೆಬಿಸಿ. ಕಸ ಎಸೆಯುವುದು ಹೇಗೆ, ಎಲ್ಲಿ? ಆಹಾರ ತ್ಯಾಜ್ಯ ಹೇಗೆ ಎಸೆಯಬೇಕು ಎಂಬಿತ್ಯಾದಿಯ ಸುತ್ತ ರೂಪುಗೊಂಡ ಕಾನೂನು ಕೂಡ ಇಲಿಯನ್ನು ಆಧರಿಸಿದಂಥದ್ದು. ಇಲಿಗೆ ಜಿಯೋ ಟ್ಯಾಗಿಂಗ್ ಮಾಡಿ ಅದು ಹೇಗೆ ಎಲ್ಲಿ ಸಂಚರಿಸುತ್ತದೆ, ನೆಲದೊಳಕ್ಕೆ, ನಗರದ ಅಂಡರ್‌ಗ್ರೌಂಡ್‌ಗಳಲ್ಲಿ ಎಲ್ಲ ತನ್ನ ವಸಾಹತು ಸ್ಥಾಪಿಸುತ್ತದೆ ಎಂದೆಲ್ಲ ತಿಳಿದು ಸ್ಟ್ರಾಟೆಜಿಕ್ ಆಗಿ ಯುದ್ಧಕ್ಕೆ ಇಳಿಯುವ ತಂತ್ರಗಾರಿಕೆಯಿಂದ ಹಿಡಿದು ರೋಡೆಂಟ್ ಕಂಟ್ರೋಲ್ ಅಕಾಡೆಮಿ ಎಂದೆಲ್ಲ ಸ್ಥಾಪಿಸಿ ನಗರ ಪಾಲಿಕೆಯ ನೌಕರಿಗೆ ಟ್ರೇನಿಂಗ ಕೊಡುವ ಮಟ್ಟಿಗೆ!
ಹೀಗೆ ಜಪ್ಪಯ್ಯ ಎಂದರೂ ಇಲಿ ಉಪಟಳ ಕಡಿಮೆ ಮಾಡುವುದು ಸಾಧ್ಯವಾಗುವುದಿಲ್ಲ. ವಾರ್ಷಿಕ ಸುಮಾರು 2ಮಿಲಿಯನ್ ಡಾಲರ್, ಸುಮಾರು ೧೫ ಕೋಟಿ ರು.ನಷ್ಟು ಮೊತ್ತವನ್ನು ನ್ಯೂಯಾರ್ಕ್ ನಗರ ಇಲಿ ನಿಯಂತ್ರಣಕ್ಕೆಂದೇ ತೆಗೆದಿರಿಸುತ್ತದೆಯೆಂದರೆ ಬಾಕಿ ಸಂಗ್ತಿಯನ್ನು ನೀವೇ ಅಂದಾಜಿಸಿಕೊಳ್ಳಿ. ಅದಲ್ಲದೇಇಲ್ಲಿ ಒಂದು ಸ್ವಯಂ ಸೇವಕರ ಗುಂಪು    &   () ಎಂದಿದೆ. ಇದು 1990 ರ ಸ್ಥಾಪಿತವಾದದ್ದು. ರಾತ್ರಿ ಇಲಿ ಹಿಡಿಯಲೆಂದೇ ಸಾಕು ನಾಯಿಗಳನ್ನು ಕರೆದುಕೊಂಡು ಹೋಗುವ ಗುಂಪು ಇದು.
ನಮ್ಮಲ್ಲಿ ಹೊಲಕ್ಕೆ (ಬೇಟೆಗೆ) ಹೋಗುವಂತೆ ನ್ಯೂಯಾರ್ಕ್ ಸ್ವಯಂ ಸೇವಕರು ನಾಯಿಗಳನ್ನು ಕಟ್ಟಿಕೊಂಡು ಗುಂಪಿನಲ್ಲಿ ಪಾರ್ಕುಗಳಲ್ಲಿ, ರಸ್ತೆಗಳಲ್ಲಿ ಅಡ್ಡಾಡು ತ್ತಾರೆ. ಇಂತಿಷ್ಟು ಇಲಿಯನ್ನು ತಮ್ಮ ನಾಯಿ ಹಿಡಿಯಿತು ಎಂಬ ಸ್ಪರ್ಧೆಯೂ ಇರುತ್ತದೆ. ನ್ಯೂಯಾರ್ಕ್‌ನಿಂದ ಇಲಿಯನ್ನು ಸರ್ವನಾಶ ಮಾಡಲೆಂದೇ ಹುಟ್ಟಿಕೊಂಡ ಗುಂಪು ಇದು. ಇಷ್ಟೆಲ್ಲ ಮಾಡಿದರೂ ಇಂದಿಗೂ ಸುಮಾರು ಒಂದು ಕೋಟಿ ಇಲಿಗಳು ನ್ಯೂಯಾರ್ಕ್ ನಲ್ಲಿವೆ ಎನ್ನುವುದು ಅಜಮಾಸು ಲೆಕ್ಕ. ಇದು ನ್ಯೂಯಾರ್ಕ್ ನಗರವೊಂದರದ್ದೇ ಸಮಸ್ಯೆಯಲ್ಲ.
ಅಮೆರಿಕದ, ಚೈನಾದ, ಲಂಡನ್ನಿನ, ಮುಂಬಯಿಯ ಹೀಗೆ ಜಗತ್ತಿನ ಎಲ್ಲ ದೊಡ್ಡ ನಗರಗಳದ್ದೂ ಇದೇ ವ್ಯಥೆಯ ಕಥೆ. ನಗರವೆಂದರೆ ಮನುಷ್ಯರು ವರ್ಸಸ್ ಇಲಿಯ ಘರ್ಷಣೆಯ ಬದುಕು. ಇದೇ ವರ್ಷ ಆಸ್ಟ್ರೇಲಿಯಾದಿಂದ ಒಂದು ಸುದ್ದಿ ಬಂದಿತ್ತು.      ! ಇದು ಆ ಸುದ್ದಿಯ ಶೀರ್ಷಿಕೆ. ಲಕ್ಷ ಲಕ್ಷ ಇಲಿಗಳು ಎಂದರಲ್ಲಿ ಮನುಷ್ಯನ ವಿರುದ್ಧ ಯುದ್ಧಕ್ಕೆ ಇಳಿದ ಸುದ್ದಿ ಅದು. ಆದದ್ದು ಇಷ್ಟು. ಇಡೀ ಜಗತ್ತು ಕರೋನಾದಿಂದ ಬಳಲುತ್ತಿದ್ದಾಗ ಅತ್ತ ಕಡೆ ಆಸ್ಟ್ರೇಲಿಯಾ ದಲ್ಲಿ ಹಿಂದಿನ ವರ್ಷ ಎಲ್ಲಿಲ್ಲದಷ್ಟು ಮಳೆಯಾಯಿತು. ಹಿಂದಿನ ಎರಡು ವರ್ಷದಷ್ಟು ಮಳೆ ಒಂದೇ ವರ್ಷದಲ್ಲಿ ಹೊಯ್ದಿತ್ತು. ಆಸ್ಟ್ರೇಲಿಯಾದ ಕೃಷಿಕರಿಗೆ ಇದರಿಂದ ಬಂಪರ್ ಲಾಟರಿಯ ಬೆಳೆ. ಕೃಷಿಯಲ್ಲದೆ ಉಳಿದ ಗಿಡಗಳೆಲ್ಲ ಯಥೇಚ್ಛ ಬೆಳೆದು ಕಾಳುಗಳನ್ನು ಬಿಟ್ಟವು.
ಅಂತೆಯೇ ಇಲಿ ಸಂಖ್ಯೆ ಅದಕ್ಕನುಗುಣವಾಗಿ ಬೆಳೆಯಿತು. ಗದ್ದೆಗಳಿಗೆ ನಂತರದಲ್ಲಿ ದಾರಿಯಲ್ಲಿ ಸಿಗುವ ಹೋಟೆಲ್ಲುಗಳಿಗೆ, ಬೇಕರಿಗಳಿಗೆ, ಮನೆಗಳಿಗೆಲ್ಲ ದಾಳಿ ಯಿಟ್ಟವು. ಇದು ಕರೋನಾ ಸಮಯದಲ್ಲಿ ಬೇರೆ ಸುದ್ದಿಗಳಿಲ್ಲದ್ದರಿಂದ ಸುದ್ದಿ ಯಾದ ಸುದ್ದಿಯಲ್ಲ. ಈ ದಾಳಿಗಳು, ಇಲಿಯ ಪ್ರವಾಹ ಆಸ್ಟ್ರೇಲಿಯಾ ಅಷ್ಟೇ ಅಲ್ಲ, ಜಗತ್ತಿನ ಬಹುತೇಕ ಅಂತಾರಾಷ್ಟ್ರೀಯ ವಾಹಿನಿಗಳಲ್ಲಿ, ಸುದ್ದಿಪತ್ರಿಕೆಗಳಲ್ಲಿ ವರದಿಯಾದವು. ಸ್ಥಳೀಯ ಕೃಷಿಕರು ರಾತ್ರಿ ನೆಲವೇ ಚಲಿಸುತ್ತದೆ ಎಂದು ಟಿವಿಗಳ ಮುಂದೆ ಬಂದು ಸಮಸ್ಯೆಯ ಭೀಕರತೆಯನ್ನು ವಿವರಿಸಿದರು. ಆಸ್ಟ್ರೇಲಿಯಾದಲ್ಲಿ ಜನರೇ ವಾಸಿಸದ ಬಹು ದೊಡ್ಡ ಭೂಭಾಗವಿದೆ – ಆದರೆ ಇಲಿಯಿಲ್ಲದ ಜಾಗವಿಲ್ಲಎಂದಾಯಿತು. ಇಲಿಗಳು ದಾರಿಯಲ್ಲಿ ಸಿಗುವ ವಿದ್ಯುತ್ ಕೇಬಲ್‌ಗಳನ್ನೆಲ್ಲ ತುಂಡುಮಾಡಿದವು.
ಆಸ್ಪತ್ರೆ ಕೋವಿಡ್ ರೋಗಿಗಳಿಂದ ತುಂಬಿದ್ದರೆ ಅಲ್ಲಿ ಕೂಡ ದಾಳಿಗಿಳಿದು ರೋಗಿಗಳನ್ನೇ ಕಡಿಯಲು ಶುರುಮಾಡಿದ್ದವು. ಸಮಸ್ಯೆ ಪ್ರಮಾಣ ಎಷ್ಟಿತ್ತೆಂದರೆ ಆಸ್ಟ್ರೇಲಿ ಯಾದ ಸರಕಾರ ೧೫ ಮಿಲಿಯನ್ ಡಾಲರ್ (ಶತಕೋಟಿ ರು.) ಖರ್ಚುಮಾಡಬೇಕಾಯಿತು. ಒಂದು ಕಡೆ ಈ ಜಗತ್ತಿನಲ್ಲಿ ಮನುಷ್ಯನ ಇರುವು ಮತ್ತು ಆಕ್ರಮಣ ಶೀಲತೆಯಿಂದಾಗಿ ಅಳಿವಿನಂಚಿನಲ್ಲಿ ಇರುವ, ಅಳಿದು ಹೋದ ಅವೆಷ್ಟೋ ಪ್ರಾಣಿಗಳು, ಜೀವ ವೈವಿಧ್ಯ. ಅದೆಲ್ಲದಕ್ಕೆ ವಿರುದ್ಧವೆನ್ನುವ ಇಲಿಗಳು ಇನ್ನೊಂದು ಕಡೆ. ಇದೆಂತಹ ವ್ಯಂಗ್ಯವಲ್ಲವೇ? ನಮ್ಮ ನಿಮ್ಮೆಲ್ಲರ ಮನೆ ಬಿಡಿ – ಅಮೆರಿಕದ ಅಧ್ಯಕ್ಷ ಬೈಡನ್ ಮನೆ – ವೈಟ್ ಹೌಸ್‌ನಲ್ಲೂ ಇಲಿಯ ಕಾಟ ತಪ್ಪಿದ್ದಲ್ಲ. ವೈಟ್ ಹೌಸ್‌ಗೆ ಯಾರೇ ಅಧ್ಯಕ್ಷರಾಗಿ ಬರಲಿ, ಬಂದವರು ನಾಲ್ಕು ಅಥವಾ ಎಂಟು ವರ್ಷಕ್ಕೆ ಹೊರನಡೆಯಬೇಕು ಎನ್ನುವುದು ಅಲ್ಲಿನ ಕಾನೂನು.
ಆದರೆ ಇಲಿ ಅಲ್ಲಿನ ಕಾಯಂ ಪುಕ್ಸಟ್ಟೆ ನೆಂಟ. 1886ರಲ್ಲಿ ಅಂದಿನ ಫಸ್ಟ್ ಲೇಡಿ, ಕೆರೊಲಿನಾ ಹ್ಯಾರಿಸನ್‌ನಿಂದ ಹಿಡಿದು ಇಂದಿನ ಫಸ್ಟ್ ಲೇಡಿಯ ತನಕ ಎಲ್ಲರದ್ದೂ ಪುಕಾರು ಇದುವೇ. ಇಲಿ ಅಸಾಮಾನ್ಯ ಜೀವಿ. ಅತಿಶಯೋಕ್ತಿಯಲ್ಲ. ಸಾವಿರ ಸಾವಿರ ವರ್ಷದಿಂದ ಮನುಷ್ಯನ ಜತೆ ಜತೆ ಬೆಳೆದ ವಿಕಾಸನವಾದದ್ದು ಇಲಿ. ಇಲಿಯ ಗುಣವಿಶೇಷಣ ಒಂದೆರಡಲ್ಲ. ಇಲಿ ಐವತ್ತು ಫ್ಲ್ಯಾಟ್ ಮೇಲಿಂದ ಹಾರಬಲ್ಲದು, ತನ್ನ ಉದ್ದದ ನಾಲ್ಕಾರು ಪಟ್ಟು ನೆಗೆಯಬಲ್ಲದು. ವೈರ್‌ಗಳ ಮೇಲೆ ಇಲಿ ಹೂಗುವು ದನ್ನು ನೋಡಿದ್ದರೆ ಅದು ಬ್ಯಾಲನ್ಸ್ ಮಾಡುವುದನ್ನು ನೋಡಿಯೇ ಇರುತ್ತೀರಿ. ಇಲಿಯ ಬಾಲ ವಿಶೇಷ.
ಸಮತೋಲನದ ಜತೆಗೆ ದೇಹದ ಉಷ್ಣತೆಯ ಸಮತೋಲನ ಕಾಪಾಡುವುದು ಇದೇ ಬಾಲ. ಇಂಥ ವಿಶಿಷ್ಟ ಬಾಲದಿಂದಲೇ ಇಲಿ ಅತ್ಯಂತ ಚಳಿಯ ಸೈಬೀರಿಯಾ ದಲ್ಲೂ ಬದುಕಬಲ್ಲದು; ಅತ್ಯಂತ ಉಷ್ಣತೆಯ ಮರುಭೂಮಿಯಲ್ಲಿ ಕೂಡ. ಇಲಿ ತನ್ನ ದೇಹ ಗಾತ್ರದ ಒಂದು ನಾಲ್ಕಾಂಶದಷ್ಟು ಚಿಕ್ಕ ರಂಧ್ರದಲ್ಲೂ ನುಸುಳಲ್ಲದು. ಇದೆಲ್ಲ ಗೊತ್ತಿದ್ದದ್ದೇ ನಿಮಗೆ. ಆದರೆ ಇದಷ್ಟೇ ಇಲಿಯನ್ನು ಅಷ್ಟು ಖತರ್ನಾಕ್ ಜೀವಿಯನ್ನಾಗಿಸಿದ್ದಲ್ಲ. ಇಲಿ ಅತ್ಯಂತ ಬುದ್ಧಿವಂತ! ಆಹಾರವನ್ನು ಎಲ್ಲಿಯೋ ಇಟ್ಟು ಸಂಕೀರ್ಣ ಸಮಸ್ಯೆಯನ್ನು ಪರಿಹರಿಸಿ ಆಹಾರ ಪಡೆಯುವ ಪ್ರಯೋಗಗಳನ್ನು ಭೇದಿಸುವಲ್ಲಿ ಚಿಂಪಾಂಜಿಯ ನಂತರದ ಪ್ರಾಣಿ ಇಲಿ. ಸಾಮಾನ್ಯವಾಗಿ ನೀವು ಇಲಿಯನ್ನು ಮರೆಯಲ್ಲಿ ನಿಂತು ಗಮನಿಸಿದರೆ ಅವು ಅತ್ಯಂತ ಗೊಂದಲದಲ್ಲಿ ಇತ್ತಿಂದತ್ತ ಅತ್ತಿಂದಿತ್ತ ಓಡಾಡುತ್ತಿರುವಂತೆ ಕಾಣಿಸುತ್ತವೆ.
ಆದರೆ ಅವು ನಿಜವಾಗಿ ಸುತ್ತಲಿನ ಜಗತ್ತನ್ನು ಅನ್ವೇಷಿಸುವ ಪರಿ ಅದು. ಒಂದು ಇಲಿಯನ್ನು ಹಿಡಿದು ಒಂದು ಕೋಣೆಯಲ್ಲಿ ಬಿಟ್ಟರೆ ಅದು ಕೆಲವೇ ನಿಮಿಷದಲ್ಲಿ ಆಕೋಣೆಯ ನಕ್ಷೆಯನ್ನು ಮನಸ್ಸಿನ ಕಲ್ಪಿಸಿಕೊಂಡು ಕೊಣೆಯಾಚೆ ಅನ್ವೇಷಿಸಲು ತಯಾರಾಗುತ್ತವೆ. ಅಲ್ಲಿಯೊ ಒಂದು ತೂತಿನಲ್ಲಿ ತೂರಿ ಒಳ ಹೋಗಿ, ಪುನಃ ಬಂದು ಹೀಗೆ ಅದರ ಮನಸ್ಸಿನ ಒಂದು ಮ್ಯಾಪ್ ತಯಾರಾಗುತ್ತ ಹೋಗುತ್ತದೆ. ಅವು ಒಮ್ಮೆ ಅನ್ವೇಷಿಸಿದ ದಾರಿ ತಮ್ಮ ಜೀವನ ಪರ್ಯಂತ ಮರೆಯುವುದಿಲ್ಲ. ಆ ಮಾರ್ಗದಲ್ಲಿ ಅಡ್ಡಲಾಗಿ ಏನೋ ಇಟ್ಟರೆ ಅದಕ್ಕೆ ಪರ್ಯಾಯ ಮಾರ್ಗ ನಿಮಿಷಗಳಲ್ಲಿ ಕಂಡಿಹಿಡಿದಾಗಿರುತ್ತದೆ.
ನೀವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕೆಂದರೆ ಅಲ್ಲಿ ಅನುಕ್ರಮ ನಿರ್ಧಾರ – ಎಡಕ್ಕೆ, ಬಲಕ್ಕೆ, ಮೂರನೆಯ ಬಲಕ್ಕೆ, ಎರಡನೆಯ ಎಡಕ್ಕೆ ಹೀಗೆ ಹತ್ತಾರು ನಿರ್ಧಾರಗಳನ್ನು ನೆನಪಿಟ್ಟುಕೊಳ್ಳಬೇಕಲ್ಲ! ಇಲಿ ಇಂತಹ ಐವತ್ತಕ್ಕೂ ಜಾಸ್ತಿ ತಿರುವುಗಳನ್ನು ನೆನಪಿಟ್ಟುಕೊಳ್ಳಬಲ್ಲದು. ನ್ಯೂಯಾರ್ಕ್ ನಗರದಲ್ಲಿ ಅಲ್ಲಿ ವಾಸಿಸುವ ಮನುಷ್ಯರು ದಾರಿ ತಪ್ಪುವುದು, ಮೊಬೈಲ್ ತೆರೆದು ಗೂಗಲ್ ಮ್ಯಾಪ್ ಹಾಕಿ ಮನೆ ತಲುಪುವುದು ಸಾಮಾನ್ಯ. ಆದರೆ ಅಲ್ಲಿನ ಇಲಿ ದಾರಿ ತಪ್ಪುವುದಿಲ್ಲ. ನೆನಪು, ವಾಸನೆ ಹೀಗೆ ಕೆಲವು ಸಲಕರಣಗಳಿಂದ ಇಲಿ ಕರಾರುವಕ್ಕಾಗಿ ನ್ಯೂಯಾರ್ಕ್ ಅಥವಾ ಇನ್ಯಾವುದೇ ನಗರದಲ್ಲಿ ಓಡಾಡಿಕೊಂಡಿರುತ್ತದೆ. ಅದಲ್ಲದೇ ಒಂದು ಕೆಲಸವನ್ನು ಗುಂಪಿನಲ್ಲಿ ನಿರ್ದೇಶಿಸಿ ಸಾಽಸುವುದು ಇಲಿಗಳ ಗುಂಪಿನ ಶಕ್ತಿ ಮತ್ತು ಸಂತಾನೋತ್ಪತ್ತಿಯ ವೇಗ.
ಕಂಡದ್ದನ್ನೆಲ್ಲ ಕೊರೆದು ತಿನ್ನುವ ಇಲಿ ನಮ್ಮೆಲ್ಲರಿಗೆ ಸಹಜವೆನ್ನಿಸಿದರೂ ಅದೂ ಒಂದು ವಿಶೇಷ, ಜಗತ್ತಿನ ಅತ್ಯಂತ ಯಶಸ್ವಿ ಜೀವಿ. ಇಲಿ ಪ್ರಾಣಿ ಜಗತ್ತಿನ ರಜನೀ ಕಾಂತ್. ಇಲಿ ಭೇದಿಸದ ಚಕ್ರವ್ಯೂಹವಿಲ್ಲ, ದಾರಿ ತಪ್ಪುವ ಮಾತಿಲ್ಲ – ಇನ್ ಬಿಲ್ಟ ಜಿಪಿಎಸ್ ಕಾರಿನಂತೆ. ಗಣಪತಿ ಇದೇ ಕಾರಣಕ್ಕೆ ಇಲಿಯನ್ನು ವಾಹನವಾಗಿಸಿ ಕೊಂಡದ್ದೇ? ಗೊತ್ತಿಲ್ಲಪ್ಪ !!