ಯುಪಿಎ ಮಾತ್ರವಲ್ಲ, ಕಾಂಗ್ರೆಸ್ ಸಹ ಉಳಿದಿಲ್ಲ !
ಪ್ರಚಲಿತ
ಮಾರುತೀಶ್ ಅಗ್ರಾರ
ದೇಶದಲ್ಲಿ ಕಾಂಗ್ರೆಸ್ ಕನಿಷ್ಠ ಒಂದು ರಾಜಕೀಯ ಪಕ್ಷವಾಗಿ ಉಳಿಯುತ್ತಾ? ಪಕ್ಷವನ್ನು ಮತ್ತೆ ಮೇಲಕ್ಕೆತ್ತುವ ಶಕ್ತಿ ಕಾಂಗ್ರೆಸ್ ಹೈಕಮಾಂಡ್ ಗೆ ಇದೆಯಾ? ಈ ಯಾವ ಪ್ರಶ್ನೆಗಳಿಗೂ ಸ್ವತಃ ಗಾಂಧಿಗಳೇ ಉತ್ತರಿಸುವ ಸ್ಥಿತಿಯಲ್ಲಿಲ್ಲ. ಮೋದಿಯವರ ಕಾಂಗ್ರೆಸ್ ಮುಕ್ತ ಭಾರತ ಘೋಷಣೆ ಜಾರಿಗೆ ಸ್ವತಃ ಕಾಂಗ್ರೆಸಿಗರೇ ಉದಾರ ಕೊಡುಗೆ ನೀಡಿರುವುದು ಸುಳ್ಳಲ್ಲ.
ಸದ್ಯಕ್ಕೆ ಕಾಂಗ್ರೆಸ್ ಗ್ರಹ-ಗತಿ ಸರಿಯಾಗಿಲ್ಲ! ಯಾವುದೇ ಚುನಾವಣೆ ನಡೆದರೂ ಅದು ಸೋಲಿನ ಕಹಿಯನ್ನೇ ಹೆಚ್ಚು ಉಣ್ಣುತ್ತಿದೆ. ಸಾಲದ್ದಕ್ಕೆ ಘಟಾನುಘಟಿ ನಾಯಕರು ಪಕ್ಷ ತೊರೆದಿದ್ದಾರೆ; ತೊರೆಯುತ್ತಿದ್ದಾರೆ. ಹಾಗಾಗಿ ತೋಳ ಹಳ್ಳಕ್ಕೆ ಬಿದ್ದರೆ ಸಾಕು ಆಳಿಗೊಂದು ಕಲ್ಲು ಎಂಬಂತೆ ಕಾಂಗ್ರೆಸ್ ಪಕ್ಷದ ಮೇಲೆ ಆದರ ಒಂದು ಕಾಲದ ‘ಆಪ್ತ ಬಂಧು‘ಗಳೇ ಈಗ ತಿರುಗಿಬಿದ್ದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿರುವ ಮಮತಾ ಬ್ಯಾನರ್ಜಿ ದೇಶದಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆಯುವ ಉತ್ಸಾಹದಲ್ಲಿದ್ದಾರೆ. ಅವರ ತಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಎದುರಾಳಿ ಪ್ರಧಾನಿ ಅಭ್ಯರ್ಥಿ ತಾನೇ ಎಂಬ ಭಾವನೆಈಗಾಗಲೇ ಚಿಗುರೊಡೆದಿದೆ! ಅದರ ಭಾಗವಾಗಿಯೇ ದೀದಿ ಗೋವಾ, ದೆಹಲಿ, ಮಹಾರಾಷ್ಟ್ರ ಹಾಗೂ ದೇಶದ ಬೇರೆ ಬೇರೆ ರಾಜ್ಯಗಳ ಬಿಜೆಪಿಯೇತರ ನಾಯಕ ರುಗಳನ್ನು ಭೇಟಿ ಮಾಡಿ ಕಾಂಗ್ರೆಸ್‌ಗೆ ಪರ್ಯಾಯ ರಂಗ ಹುಟ್ಟು ಹಾಕುವ ಮಾತನಾಡುತ್ತಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಎದುರಾಳಿ ಕಾಂಗ್ರೆಸ್ ಅಲ್ಲ, ಅದೇನಿದ್ದರೂ ಟಿಎಂಸಿ ನೇತೃತ್ವದ ತೃತೀಯ ರಂಗ ಎಂಬ ಸಂದೇಶವನ್ನು ಬಿತ್ತಲು ಹೊರಿಟಿದ್ದಾರೆ ದೀದಿ. ಇದರ ಹಿನ್ನೆಲೆಯಲ್ಲಿಯೇ ‘ಯುಪಿಎ ಹಾಗಂದ್ರೇನು?’ ಎಂದು ಪ್ರಶ್ನಿಸಿರುವುದು. ಸಾಲದ್ದಕ್ಕೆ ತೀರಾ ಮೊನ್ನೆ ಮೊನ್ನೆ ‘ದೇಶದಲ್ಲಿ ಇನ್ನು ಕಾಂಗ್ರೆಸ್ ಎಂಬುದಿರುವುದಿಲ್ಲ. ನಾವುಗಳೇ ಈಗ ಕಾಂಗ್ರೆಸಿಗರು’ ಎಂದು ನೇರವಾಗೇ ಹೇಳಿದ್ದಾರೆ.
ದೀದಿಯ ಮಾತುಗಳಲ್ಲಿ ಹುರುಳಿಲ್ಲದಿಲ್ಲ. ಯಾಕೆಂದರೆ ಕಳೆದ ಏಳೆಂಟು ವರ್ಷಗಳಲ್ಲಿ ಯುಪಿಎ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್) ಸಾಕಷ್ಟು ‘ಒಳಪೆಟ್ಟು’ ಗಳನ್ನು ತಿಂದು ಜರ್ಜರಿತವಾಗಿದೆ. ಕಾಂಗ್ರೆಸಿನ ಮಿತ್ರರಾಗಿ, ಮೈತ್ರಿಕೂಟದ ಭಾಗವಾಗಿದ್ದ ಅನೇಕ ಸಣ್ಣಪುಟ್ಟ ಪಕ್ಷಗಳು ನಿಧಾನಕ್ಕೆ ದೂರ ಸರಿದಿದ್ದಾರೆ. ಹೀಗಾಗಿ ಈಗ ಯುಪಿಎನಲ್ಲಿ ಡಿಎಂಕೆ ಮತ್ತು ಎನ್‌ಸಿಪಿ ಬಿಟ್ಟರೆ ಬೇರೆ ಯಾವ ಪಕ್ಷವೂ ಇಲ್ಲ. ಸ್ವತಃ ಕಾಂಗ್ರೆಸ್‌ನ ಸ್ಥಿತಿ ಪಾಳುಬಿದ್ದ ಖಾಲಿ ಮನೆಯಂತಾಗಿದೆ. ಇದಕ್ಕೆ ಪ್ರಮುಖ ಕಾರಣ ನಾಯಕತ್ವದ ಕೊರತೆ. ಗಾಂಽ ಕುಟುಂಬಸ್ಥರನ್ನು ಬಿಟ್ಟರೆ ಮತ್ತೆ ನಾಯಕತ್ವ ವಹಿಸಿಕೊಳ್ಳುವಂಥ ಎರಡನೇ ಸಾಲಿನ ನಾಯಕರೇ ಇಲ್ಲ.
ಇದ್ದವರೂ ರಾಹುಲ್‌ರಂಥವರ ಅಪ್ರಬುದ್ಧತೆಯಿಂದ ಬೇಸತ್ತು ನೆಪಕ್ಕೆ ಉಳಿದಿದ್ದಾರೆ. ಹೋಗಲಿ ಎಂದುಕೊಂಡರೆ ರಾಹುಲ್ ನೇತೃತ್ವದ ಕಾಂಗ್ರೆಸ್ ಮೇಲಿಂದ ಮೇಲೆ ಸೋಲುಂಡು ಕೊನೆಗೆ ಸ್ವತಃ ಅವರು ಶಸ್ತ್ರತ್ಯಾಗ ಮಾಡಿದಾಗಲೂ ಒಬ್ಬರೇ ಒಬ್ಬರೂ ಪಕ್ಷದ ನಾಯಕತ್ವಕ್ಕೆ ಮುಂದೆ ಬರಲಿಲ್ಲ. ಅಯೋಮಯ ಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ, ಪಕ್ಷ ಪುನರುತ್ಥಾನ ಸಾಧ್ಯವೇ ಇಲ್ಲ ಎಂಬ ಅರಿವು ಎಲ್ಲ ಹಿರಿಯರಲ್ಲೂ ಇದೆ. ಇದೇ ಕಾರಣಕ್ಕೆ ಗುಲಾಂ ನಬಿ ಆಜಾದ್‌ ರಂಥವರು ಸ್ವತಂತ್ರ ಪಕ್ಷ ಕಟ್ಟುವ ಯೋಚನೆಗಿಳಿದಿರುವುದು.
ಬಲಿಷ್ಠವಾಗುತ್ತಿರುವ ಬಿಜೆಪಿಯ ಸಂಘಟನಾ ವರ್ಚಸ್ಸು ಸಹ ಕಾಂಗ್ರೆಸ್ ಅನ್ನು ತಟ್ಟಿ ಮಲಗಿಸುತ್ತಿದೆ. ಎಷ್ಟೇ ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದುಬಿಂಬಿಸಿದರೂ ಮೋದಿ ವರ್ಚಸ್ಸಿನೆದರು ಅವರಾಗಲೀ, ಅವರ ಪಕ್ಷವಾಗಲೀ ನಿಲ್ಲಲಾರದು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಹೀಗಾಗಿ ಕಾಂಗ್ರೆಸ್ ದಿನೇದಿನೇಕಳೆಗುಂದುತ್ತಲೇ ಬಂದಿದೆ. ದೇಶದಲ್ಲಿ ಕಾಂಗ್ರೆಸ್ ಯಾವ ಮಟ್ಟಿಗೆ ಹೀನಾಯ ಸ್ಥಿತಿಗೆ ತಲುಪಿದೆಯೆಂದರೆ ರಾಜಸ್ಥಾನ, ಪಂಜಾಬ್ ಮತ್ತು ಛತ್ತೀಸ್‌ಗಡ ಹೊರತು ಪಡಿಸಿ ಬೇರೆಲ್ಲೂ ಸ್ವಂತ ಬಲದ ಮೇಲೆ ಅಽಕಾರ ಹಿಡಿಯುವ ಪರಿಸ್ಥಿತಿಯಲ್ಲಿ ಇಲ್ಲ.
ಅದರಲ್ಲೂ ರಾಜಾಸ್ಥಾನದಲ್ಲಿ ಸಚಿನ್ ಪೈಲೆಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ಮುಸುಕಿನ ಗುದ್ದಾಟದಿಂದ ಸರಕಾರದ ನಡೆ ಈಗಲೂ ಕತ್ತಿ ಅಲಗಿನ ಮೇಲಿನ ನಡಿಗೆ. ಪಂಜಾಬಿನಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದ ಕಾಂಗ್ರೆಸ್‌ನ ಮಾಜಿ ನಾಯಕ ಕ್ಯಾ.ಅಮರಿಂದರ್ ಸಿಂಗ್ ಈಗಾಗಲೇ ಪಕ್ಷ ತೊರೆದು ತಮ್ಮದೇ ಆದ ‘ಪಂಜಾಬ್ ಲೋಕ ಕಾಂಗ್ರೆಸ್’ ಹುಟ್ಟು ಹಾಕಿ ಲೋಕದಳದ ಜತೆ, ಆ ಮೂಲಕ ಎನ್‌ಡಿಎ ತೆಕ್ಕೆಗೆ ಜಾರುವ ಸೂಚನೆ ಕೊಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿಯೂತ್ ಐಕಾನ್ ಎಂದು ಗುರುತಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಽಯಾ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿ ಕೇಂದ್ರದಲ್ಲಿ ಮಂತ್ರಿಯಾಗಿರುವುದು ಈಗಲೂ ಅರಗಿಸಿಕೊಳ್ಳಲಾಗದ ಬೆಳವಣಿಗೆ.
ಬಿಹಾರದಲ್ಲೂ ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಜೆಡಿಯು ಸೇರುತ್ತಿರುವುದರಿಂದ ಅಲ್ಲಿಯೂ ಕೂಡ ಪಕ್ಷ ಸಂಘಟನೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಪಶ್ಚಿಮ ಬಂಗಾಳದಲ್ಲಂತೂ ಕಾಂಗ್ರೆಸ್‌ಗೆ ಮೊದಲಿಂದಲೂ ಅಸ್ತಿತ್ವ ಇರಲಿಲ್ಲ. ಈಗಂತೂ ಒಂದು ಕಾಲದ ಮಿತ್ರ ಎಡಪಕ್ಷವೂ ನಿರ್ನಾಮವಾಗಿದೆ! ಇನ್ನು ದೇಶದ ದೊಡ್ಡ ರಾಜ್ಯವಾದ ಹಾಗೂ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಪಕ್ಷ ಸಂಘಟನೆ ಮಾಡಲು ಕಾಂಗ್ರೆಸ್ ತಿಣುಕಾಡುತ್ತಿದೆ. ಉತ್ತರ ಪ್ರದೇಶ ಮುಂದಿನ ವರ್ಷ ಚುನಾವಣೆ ಎದುರಿಸುವ ರಾಜ್ಯ.
ಇಲ್ಲಿನ ಗೆಲುವು ಬಿಜೆಪಿ, ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಿಗೂ ಮಹತ್ವದ್ದಾಗಿದೆ. ಹಾಗಾಗಿ ಈ ಎಲ್ಲ ಪಕ್ಷಗಳು ಈಗಾಗಲೇ ಚುನಾವಣಾ ಕಸರತ್ತುಗಳನ್ನು ಆರಂಭಿಸಿವೆ. ವಿಪರ್ಯಾಸವೆಂದರೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಈಗಾಗಲೇ ತನ್ನ ಶಕ್ತಿಯನ್ನು ಕಳೆದುಕೊಂಡು ದಶಕಗಳೇ ಕಳೆದಿವೆ. ಆದರೂ ಈ ಬಾರಿ ಉತ್ತರಪ್ರದೇಶದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯನ್ನು ಸ್ವತಃ ಪ್ರಿಯಾಂಕಾ ವಾದ್ರಾ ವಹಿಸಿಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಮಟ್ಟಿಗೆ ಆಕ್ಸಿಜನ್ ಸಿಕ್ಕಂತಾಗಿದ್ದರೂ, ಕಾಂಗ್ರೆಸ್ಸಿನ ಘಟಾನುಘಟಿ ನಾಯಕರುಗಳು ಹಾಗೂ ಕೆಲ ಶಾಸಕರು ಚುನಾವಣಾ ಹೊಸ್ತಿಲಲ್ಲಿರುವಾಗಲೇ ಪಕ್ಷ ತೊರೆದಿರುವುದು ಪ್ರಿಯಾಂಕಾಗೆ ತಲೆಬಿಸಿ ತಂದಿದೆ.
ಒಂದು ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಎಷ್ಟೇ ಶ್ರಮ ಹಾಕಿದರೂ ಉತ್ತರಪ್ರದೇಶದಲ್ಲಿ ಎರಡಂಕಿ ಸೀಟುಗಳನ್ನು ಗೆಲ್ಲುವುದು ಕೂಡ ಕಷ್ಟವಿದೆ. ಇನ್ನು ಮಹಾ ರಾಷ್ಟ್ರದಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ದೆಹಲಿ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಗೋವಾ ಗಳಲ್ಲಿ ಪಕ್ಷದ ಸ್ಥಿತಿ ಚಿಂತಾಜನಕ. ಕರ್ನಾಟಕ ಕಾಂಗ್ರೆಸ್ ಡಿಕೆಶಿ, ಸಿದ್ದರಾಮಯ್ಯ ಬಣಗಳಾಗಿ ಒಡೆದು ತೊಳಲಾಡುತ್ತಿದೆ. ಮೈಸೂರು ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದ್ದ ಜೆಡಿಎಸ್‌ಗೆ ಬೆಂಬಲ ನೀಡಿ ಅಧಿಕಾರ ಹಂಚಿಕೊಂಡಿದ್ದರೂ, ಸ್ವಂತ ಶಾಸಕರನ್ನೇ ಉಳಿಸಿಕೊಳ್ಳುವಲ್ಲಿ ಇಬ್ಬರೂ ಸೋತರು.
ಪರಿಣಾಮ ಭಾರತೀಯ ರಾಷ್ಟ್ರೀಯ(?) ಕಾಂಗ್ರೆಸ್ ಯಾವ ರೀತಿ ಪೇಚಿಗೆ ಸಿಲುಕಿದೆಯೆಂದರೆ ರಾಹುಲ್ ಘಂಡಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ವರ್ಷಗಳೇ ಕಳೆದರೂ ಇದುವರೆಗೂ ಪರ್ಯಾಯ ಅಧ್ಯಕ್ಷರ ಆಯ್ಕೆಯೇ ಸಾಧ್ಯವಾಗಿಲ್ಲ! ಇದು ಸಹಜವಾಗಿಯೇ ಟೀಕೆಗಳಿಗೆ ಗುರಿಯಾಗಿದೆ  ಸ್ವತಃ ಕಾಂಗ್ರೆಸ್ ನ ಹಿರಿಯರ ನಾಯಕರೇ ನೂತನ ಅಧ್ಯಕ್ಷರ ಆಯ್ಕೆ ವಿಚಾರ ವಿಳಂಬವಾಗಿರುವುದರ ಬಗ್ಗೆ ತಮ್ಮ ಆಪ್ತ ವಲಯಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ವಿಧಿ ಯಿಲ್ಲದೆ ಸೋನಿಯಾ ಮೈನೋ ಅವರೇ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಆದರೂ ಇದು ಅನೇಕರಿಗೆ ಇರಿಸುಮುರಿಸು ತರಿಸಿದೆ. ಇನ್ನೂ ವಿಶೇಷವೆಂದರೆ ಒಂದು ಕಾಲದಲ್ಲಿ ರಾಹುಲ್ ಸುತ್ತಮುತ್ತ ಲಿದ್ದ ಯವನಾಯಕರ ಕೋರ್ ತಂಡದಲ್ಲಿ ಈಗ ಯಾರೊಬ್ಬರೂ ಇಲ್ಲ!
ಅಂದಹಾಗೆ ಅನಾರೋಗ್ಯದ ಕಾರಣ ಸೋನಿಯಾ ಅವರಿಗೆ ಮುಂಚಿನ ರೀತಿ ದೇಶದ ತುಂಬಾ ಓಡಾಡಿಕೊಂಡು ಪಕ್ಷ ಸಂಘಟಿಸುವ ಶಕ್ತಿಯಿಲ್ಲ ಹಾಗೂ ಅವರವರ್ಚಸ್ಸು ಕೂಡ ಕಡಿಮೆಯಾಗಿದೆ. ರಾಹುಲ್‌ಗೆ ಪಕ್ಷದ ಸಾಲು ಸಾಲು ಸೋಲುಗಳು ಅವರನ್ನು ಹತಾಶೆಗೊಳಿಸಿರುವುದರಿಂದ ರಾಜಕಾರಣದ ಮೇಲೆ ಅವರಿಗೆ ಆಸಕ್ತಿ ಕಡಿಮೆಯಾದಂತಿದೆ. ಹಾಗಾಗಿ ಅವರು ಪಕ್ಷದ ಯಾವ ಜವಾಬ್ದಾರಿಯನ್ನೂ ತನ್ನ ಹೆಗಲ ಮೇಲೆ ಹಾಕಿಕೊಂಡಿಲ್ಲ.
ಇನ್ನು ಈಗಿನ ತಲೆಮಾರಿನ ಯುವ ಕಾಂಗ್ರೆಸ್ ನಾಯಕರುಗಳು ಹಿರಿಯ ನಾಯಕರುಗಳ ಮಾತುಗಳನ್ನು ಕೇಳುತ್ತಿಲ್ಲ. ಸಲಹೆ-ಸೂಚನೆಗಳನ್ನು ಸಹ ಪಾಲಿಸು ತ್ತಿಲ್ಲ. ಇದು ಹಿರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸಿನ ಜಿ-೨೩ನಾಯಕರು ಆಗಾಗ ಪಕ್ಷದ ನಾಯಕತ್ವದ ಬಗ್ಗೆ ಬಹಿರಂಗವಾಗಿ ದನಿ ಎತ್ತಿ ಕಾಂಗ್ರೆಸ್ ಪಕ್ಷವನ್ನು ಎಚ್ಚರಿಸುವ ಕೆಲಸ ಮಾಡಿದರೂ ಅದನ್ನು ಕೇಳಿಸಿಕೊಳ್ಳುವ ವ್ಯವಧಾನವನ್ನು ಸಹ ಕಾಂಗ್ರೆಸ್ ಹೈಕಮಾಂಡ್ ಮಾಡಲಿಲ್ಲ. ಇದೆಲ್ಲವುದರ ಪರಿಣಾಮ ಇಂದು ಕಾಂಗ್ರೆಸ್ ಪಕ್ಷ ದೇಶಾದ್ಯಂತ ಅತ್ಯಂತ ಡೋಲಾಯಮಾನ ಸ್ಥಿತಿಗೆ ತಲುಪಿದೆ.
ಹಾಗಾಗಿಯೇ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಇಂದಿನ ಹೀನಾಯ ಸ್ಥಿತಿಯನ್ನು ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ. ದೇಶದಲ್ಲಿಬಿಜೆಪಿಗೆ ಪ್ರಬಲ ಪರ್ಯಾಯ ಪ್ರತಿಕೂಟ ರಚನೆ ಆಗಬೇಕಾದ ಅಗತ್ಯವಿದೆ. ಜತೆಗೆ ಪ್ರಬಲ ಪ್ರತಿ ಪಕ್ಷವನ್ನು ಕಾಂಗ್ರೆಸ್ ಪ್ರತಿನಿಧಿಸಬೇಕು ಎನ್ನುವ ಅವರ ಐಡಿಯಾ ಕೂಡ ಸರಿಯಿದೆ. ಆದರೆ ಕಾಂಗ್ರೆಸ್ ನಾಯಕತ್ವಕ್ಕೆ ಅಂತಹ ಅಧಿಕಾರವನ್ನು ಪಡೆದೇ ತೀರುವ ದೈವಿಕ ಹಕ್ಕು ಇಲ್ಲ. ಏಕೆಂದರೆ ಕಳೆದ ಹತ್ತು ವರ್ಷಗಳಲ್ಲಿ ಬರೀ ಸೋಲುಗಳನ್ನೇ ಹೊದ್ದು ಮಲಗಿರುವ ಪಕ್ಷ ಕಾಂಗ್ರೆಸ್. ಬರೋಬ್ಬರಿ ಹತ್ತು ವರ್ಷಗಳಲ್ಲಿ ಶೇ.೯೦ರಷ್ಟು ಚುನಾವಣೆ ಸೋಲುಗಳನ್ನು ಕಾಂಗ್ರೆಸ್ ಕಂಡಿದೆ. ಇಂತಹ ‘ಅಸಮರ್ಥ ಪಕ್ಷ’ವನ್ನು ಜನರು ಮುಂದಿನ ದಿನಗಳಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ ಪ್ರಶಾಂತ್ ಕಿಶೋರ್.
ಅಂದರೆ ಕಾಂಗ್ರೆಸ್ ಜನರ ವಿಶ್ವಾಸವನ್ನು ಈಗಾಗಲೇ ಕಳೆದುಕೊಂಡಿದೆ ಎನ್ನುವುದು ಅವರ ಒಟ್ಟಾರೆ ಮಾತಿನ ಅಭಿಪ್ರಾಯ. ಜತೆಗೆ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾದ ಹಾಗೂ ಜಿ-23 ಗುಂಪಿನ ಸದಸ್ಯರಾದ ಗುಲಾಂ ನಬಿ ಆಜಾದ್ ಅವರು ಕೂಡ ‘ನಮ್ಮ ಪಕ್ಷ ಎಷ್ಟೇ ಪ್ರಯತ್ನ ಪಟ್ಟರೂ 2024ರ ಲೋಕಸಭಾ ಚುನಾವಣೆ ಗೆಲ್ಲುವುದು ಕಷ್ಟ ಸಾಧ್ಯ’ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದರರ್ಥ ಕಾಂಗ್ರೆಸ್‌ಗೆ ಮುಂದಿನ ಲೋಕಸಭಾ ಚುನಾವಣೆಯನ್ನು ಗೆಲ್ಲುವ ಶಕ್ತಿ-ಸಾಮರ್ಥ್ಯವಿಲ್ಲ ಎನ್ನುವುದು ಗುಲಾಂ ನಬಿ ಅವರ ಅಭಿಪ್ರಾಯ.
ಕಾಂಗ್ರೆಸ್ ತನ್ನ ಮಗ್ಗುಲ ಇದ್ದ ಮೈತ್ರಿಕೂಟದ ಪಕ್ಷಗಳ ಬೆಂಬಲವನ್ನು ಕಡಿದುಕೊಂಡು ಏಕಾಂಗಿಯಾಗಿರುವುದರಿಂದಲೇ ಹಾಗೂ ಸಾಲು ಸಾಲು ಸೋಲುಗಳನ್ನು ಕಾಂಗ್ರೆಸ್ ಅನುಭವಿಸುತ್ತಿರುವುದರಿಂದ ದೀದಿ ಯುಪಿಎ ಎಂಬುದು ಈಗ ಎಲ್ಲಿದೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಹಾಗಾಗಿ ಈ ಸೋಲು-ನೋವು-ಅವಮಾನಗಳಿಂದ ಕಾಂಗ್ರೆಸ್ ಚೇತರಿಸಿಕೊಳ್ಳುವುದೆಂದು? ಮುಂದೆ ದೇಶದಲ್ಲಿ ಕಾಂಗ್ರೆಸ್ ಕನಿಷ್ಠ ಒಂದು ರಾಜಕೀಯ ಪಕ್ಷವಾಗಿ ಉಳಿಯುತ್ತಾ? ಪಕ್ಷವನ್ನು ಮತ್ತೆ ಮೇಲಕ್ಕೆತ್ತುವ ಶಕ್ತಿ ಕಾಂಗ್ರೆಸ್ ಹೈಕಮಾಂಡ್ ಗೆ ಇದೆಯಾ? ಈ ಯಾವ ಪ್ರಶ್ನೆಗಳಿಗೂ ಸ್ವತಃ ಗಾಂಧಿಗಳೇ ಉತ್ತರಿಸುವ ಸ್ಥಿತಿಯಲ್ಲಿಲ್ಲ. ಮೋದಿಯವರ ಕಾಂಗ್ರೆಸ್ ಮುಕ್ತ ಭಾರತ ಘೋಷಣೆ