ಎಚ್ಚರಿಕೆ; ರಿಮೋಟು- ಡಾಟಾ ಎರಡೂ ವೀಕ್ಷಕನದ್ದು !
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@.
ಜೀವನದ ದೊಡ್ಡ ಸಾಧನೆ ಎಂಬಂತೆ ಭಾವಿಸಿ ಇಂಥ ರಿಯಾಲಿಟಿ ವೇದಿಕೆಗಳ ಮೇಲೆ ಪ್ರದರ್ಶನ ನೀಡಿದಾಗ ಅದರ ತಕ್ಕಂತೆ ತೀರ್ಪುಗಾರರೂ ಯೋಗ್ಯರಾಗಿರ ಬೇಕಲ್ಲವೇ? ತೀರ್ಪುಗಾರರೇ ನಾಲಾಯಕ್ಕುಗಳಾದಲ್ಲಿ ವೇದಿಕೆಯನ್ನು ಮಹಾಪವಿತ್ರವೆಂದು ಭಾವಿಸಿ ಬರುವ ಮಕ್ಕಳು ಮತ್ತು ಸ್ಪರ್ಧಿಗಳಿಗೆ ದ್ರೋಹ ಬಗೆದಂತ ಲ್ಲವೇ?
ಯಾವುದೇ ಸ್ಪರ್ಧಾತ್ಮಕ ವೇದಿಕೆಗಳ ಆಯ್ಕೆಗಾರರು, ತೀರ್ಪುಗಾರರು ಸಾಕಷ್ಟು ಪ್ರಾಮಾಣಿಕತೆ, ನೇರವಂತಿಕೆ, ಬದ್ಧತೆ ಯುಳ್ಳವರಾಗಿರಬೇಕು. ಮಿಗಿಲಾಗಿ ಆಯಾ ಕ್ಷೇತ್ರಗಳ ಪರಿಣಿತರೂ ಅನುಭವಿಗಳೂ ಆಗಿರಬೇಕು. ಅದಕ್ಕೂ ಮಿಗಿಲಾಗಿ ಸಂಬಂಧಿಸಿದ ವೇದಿಕೆಯಲ್ಲಿ ಪೂರ್ವಗ್ರಹರಹಿತರಾಗಿರಬೇಕು.
ಹೀಗಾಗಿ ನಮ್ಮ ದೇಶದಲ್ಲಿ ನ್ಯಾಯಾಧೀಶ ಹುದ್ದೆಗೆ, ವೈಯಕ್ತಿಕ ನೆಲೆಗಟ್ಟಿನಲ್ಲಿ ಪರಿಶುದ್ಧರಾಗಿದ್ದು ನ್ಯಾಯ-ನೀತಿ- ಧರ್ಮದ ಕುರಿತು ಅಗಾಧ ಅನುಭವ ಮತ್ತು ಸಂವಿಧಾನಾತ್ಮಕ ಕಾನೂನಿನ ಕುರಿತು ಸ್ಪಷ್ಟ ನಿಲುವನ್ನು ಹೊಂದಿ ರುವ ವ್ಯಕ್ತಿಗಳು ಮಾತ್ರ ಯೋಗ್ಯರಾಗುತ್ತಾರೆ. ಇಂಥವರಿಂದ ಮಾತ್ರ ಸಮರ್ಥ, ನ್ಯಾಯಬದ್ಧ ತೀರ್ಪುಗಳನ್ನು ನಿರೀಕ್ಷಿಸಬಹುದು. ಹಾಗಾಗದೇ, ಅಯೋಗ್ಯರು, ಅಸಮರ್ಥರು, ಅವಕಾಶವಾದಿಗಳು ಆಯ್ಕೆ ಸಮಿತಿ ಅಥವಾ ತೀರ್ಪುಗಾರ ಸಂಸ್ಥೆಗಳಲ್ಲಿ ತಗಲಿ ಕೊಂಡರೆ? ತಮ್ಮ ತಮ್ಮಲ್ಲೇ ಭಾರತರತ್ನವನ್ನು ಕೊಡು-ಕೊಳ್ಳುವುದು, ರಾಜಕೀಯ ಸಿದ್ಧಾಂತಗಳಿಗೆ ಹೊಂದಿಕೊಂಡು ಚಮಚಾಗಿರಿ ಮಾಡಿದವರಿಗೆ ಜ್ಞಾನಪೀಠ ಸಲ್ಲುವುದು, ಸಾಹಿತ್ಯಿಕವಾಗಿ ಅಯೋಗ್ಯರಾದವರಿಗೂ ಸರಸ್ವತಿ ಸಮ್ಮಾನ್ ಕೊಟ್ಟು ಪ್ರಶಸ್ತಿಯ ಮೌಲ್ಯವನ್ನು ಕುಸಿಯು ವಂತೆ ಮಾಡುವುದು ಇತ್ಯಾದಿ ನಡೆದು ಬಿಡುತ್ತದೆ.
ನ್ಯಾಯದಾನ ಸ್ಥಾನಗಳಿಗೆ, ತೀರ್ಪುಗಾರ, ಆಯ್ಕೆದಾರ ಎಷ್ಟು ಸ್ವಚ್ಛವಾಗಿರುತ್ತಾನೋ ಎಷ್ಟು ಅನುಭವಿಯಾಗಿ ರುತ್ತಾನೋ ಮತ್ತು ಎಷ್ಟು ನಿಷ್ಕಲ್ಮಶನಾಗಿರು ತ್ತಾನೋ ಅಷ್ಟೂ ಆ ಸ್ಥಾನಕ್ಕೆ ಗಂಭೀರ ಮೌಲ್ಯ ತಂದುಕೊಡು ತ್ತಾನೆ. ಅದರಲ್ಲೂ ಅಂಥ ಆಯಕಟ್ಟಿನ ಸ್ಥಳದಲ್ಲಿ ಕುಳಿತ ವ್ಯಕ್ತಿಯಲ್ಲಿ ಧರ್ಮ, ಜಾತಿ ಭೇದ, ಸ್ವಜಾತಿ ಪ್ರೇಮ ಗಳಂಥ ಪೂರ್ವಗ್ರಹಗಳು ಇದ್ದರಂತೂ ಅಂಥ ಸಂಸ್ಥೆ ಅಥವಾ ವೇದಿಕೆಗಳು ತೀರಾ ಅಪಾಯಕಾರಿ.
ಇಷ್ಟೆಲ್ಲ ಪೀಠಿಕೆ ಹಾಕಿದ್ದು ಇತ್ತೀಚಿನ ಟಿವಿ ವಾಹಿನಿಗಳಲ್ಲಿನ ಅಪಸವ್ಯದ ಹಿನ್ನೆಲೆಯಲ್ಲಿ. ಮೂರ್ನಾಲ್ಕು ದಶಕಗಳ ಹಿಂದೆ ದೂರದರ್ಶನದಲ್ಲಿ ಗುರುವಾರದ ಚಿತ್ರ ಮಂಜರಿ ಮತ್ತು ಭಾನುವಾರದ ಒಂದು ಸಿನಿಮಾ, ನಟಿ ಆರತಿಯವರ ನಮ್ಮ ನಮ್ಮಲ್ಲಿ, ಕುವೆಂಪು ಅವರ ಮಲೆಯಲ್ಲಿ ಮದುಮಗಳು, ಮಾಲ್ಗುಡಿಡೇಸ್, ಗುಡ್ಡದ ಭೂತ, ಕೇಳಿದಿರಾ ಕೇಳಿದಿರಾ, ಬಿಸಿಲು ಕುದುರೆಯಂಥ ಧಾರವಾಹಿಗಳಿಗಾಗಿ ಕನ್ನಡಿಗರು ಕಾದುಕುಳಿತು ನೋಡುತ್ತಿದ್ದರು.
ನಂತರದಲ್ಲಿ ಉದಯಟಿವಿ, ನಿರ್ದೇಶಕ ನಂಜುಂಡೇಗೌಡರ ಸುಪ್ರಭಾತ ಟಿವಿ ಆರಂಭಗೊಂಡಾಗ ಕನ್ನಡಿಗರಿಗೆ ಕಿರುತೆರೆ ಲೋಕದಲ್ಲಿ ಬೆರಗು ಮೂಡಿತ್ತು. ಅಲ್ಲಿಂದ ಆರಂಭಗೊಂಡ ಕಿರುತೆರೆಯ ಜಾತ್ರೆ ಇಂದು ಥರಾವರಿ ಕಾರ್ಯಕ್ರಮಗಳು, ಸರ್ಕಸ್ಸನ್ನೂ ಮೀರಿಸುವಂಥ ಭಯಾನಕ ರಿಯಾಲಿಟಿ ಷೋಗಳು, ಸಿನಿಮಾವನ್ನೇಮೀರಿಸುವಂಥ ಅದ್ದೂರಿ ಧಾರವಾಹಿಗಳು, ಐಷರಾಮಿ ಡಬ್ಬಿಂಗ್ ಸೀರಿಯಲ್‌ಗಳು, ಪ್ರತಿಯೊಂದು ವಾಹಿನಿಗಳಲ್ಲೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಧಾವಂತ-ಹಪಾಹಪಿಗಳಿಂದ ಟಿಆರ್‌ಪಿ ‘ಗುಡ್ಡದ ಭೂತ’ಗಳಿಂದಾಗಿ ಕಿರುತೆರೆ ವಿಚಿತ್ರ ವಿಕೃತ ಸಮ್ಮೋಹನದಲ್ಲಿ ಮುಳಗಿದೆ.
ಅದರಲ್ಲೂ ವೀಕೆಂಡ್ ದಿನಗಳಂದು ಒಂದಷ್ಟು ಮನೋರಂಜನೆ ಪಡೆಯಲು ಟಿವಿಯನ್ನೇ ನೆಚ್ಚಿಕೊಂಡಿರುವ ಮಂದಿಯನ್ನು ‘ಆಕ್ರಮಿಸಿಕೊಳ್ಳಲು’ ಎಲ್ಲ ವಾಹಿನಿಗಳೂ ತಮ್ಮದೇ ಆದ ಷೋಗಳನ್ನು ಆರಂಭಿಸಿವೆ. ಇರಲಿ, ಎಲ್ಲವೂ ಅಲ್ಲದಿದ್ದರೂ ಮೇರುಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಆರಂಭಿಸಿದ ಎದೆತುಂಬಿ ಹಾಡು ವೆನು, ಟಿ.ಎನ್.ಸೀತಾರಾಮ್ ಅವರ ‘ಮ’ ಕಾರಾದಿ ಧಾರವಾಹಿಗಳು ಕಿರುತೆರೆಗೆ ಸದಭಿರುಚಿ ಸ್ಥಾನವನ್ನು ತಂದುಕೊಟ್ಟಿತ್ತು. ವೀಕೆಂಡ್ ವಿತ್ ರಮೇಶ್ ಆರಂಭಿಕ ಸಂಚಿಕೆಗಳು ನಿಜಕ್ಕೂ ಸಾರ್ಥಕ ಸಾಧಕರನ್ನು ತೆರದಿಟ್ಟರೂ, ಬರಬರುತ್ತ ಅನನುಭವಿಗಳು, ಎಳಸುಗಳನ್ನೆಲ್ಲ ಸಾಧಕರ ಕುರ್ಚಿಯಲ್ಲಿ ತಂದು ಕೂರಿಸ ಲಾಯಿತು.
ಇನ್ನು ಸಂಗೀತ ಷೋಗಳ ತೀರ್ಪುಗಾರರಾಗಿ ರಾಜೇಶ್ಕೃಷ್ಣನ್, ಸಾಧುಕೋಕಿಲ, ವಿಜಯಪ್ರಕಾಶ್‌ರಂಥ ನುರಿತ ಸಂಗೀತಗಾರರು ಅವರೊಂದಿಗೆ ಹಂಸಲೇಖ ರಂಥ ಮೇದಾವಿಗಳೂ ಬಂದು ಕುಳಿತ ಮೇಲೆ ಕಿರುತೆರೆ ಒಂದು ಗಾಂಭೀರ್ಯವನ್ನು ಕಂಡಿದ್ದು ಸುಳ್ಳಲ್ಲ. ಆದರೆ ಅದ್ಯಾರ ಸಹವಾಸ ದೋಷದಿಂದಲೋ ಏನೋ ಪೇಜಾವರ ಶ್ರೀಗಳ ಕುರಿತು ಹಂಸಲೇಖ ಅವರು ಆಡಿದ ಆ ಮಾತುಗಳು ಅವರ ಅಷ್ಟೂ ಸಾಧನೆಗಳನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿಬಿಟ್ಟಿತು. ಹಂಸಲೇಖ ಅವರೇನೋ ವೈಯಕ್ತಿವಾಗಿ ಪಶ್ಚಾತಾಪ ಪಟ್ಟು ತಮ್ಮ ಎಡವಟ್ಟನ್ನು ಅರ್ಥ ಮಾಡಿಕೊಂಡಿರಬಹುದು.
ಆದರೆ ಕೆಲ ನಾಲಾಯಕ್ಕು ಡೋಂಗಿಗಳು ಅವರಿಗೆ ತಗಲಾಕಿಕೊಂಡು ‘ಹಿಂಸಾತ್ಮಕ’ ಮಾರ್ಗಕ್ಕಿಳಿದು, ಪ್ರಚೋದಿಸಿ ಅವರನ್ನೊಬ್ಬ ‘ಬ್ರಾಹ್ಮಣ ವಿರೋಧಿ’ಎಂಬಂತೆ ಬಿಂಬಿಸಿ ಪೇಟತೊಡಿಸಿ ಕೈಗೆ ಕತ್ತಿಗುರಾಣಿ ಕೊಟ್ಟು ಕುದುರೆಯನ್ನೇರಿಸುತ್ತಿರುವ ರೀತಿ ಮಾತ್ರ ಶೋಚನೀಯ. ಇರಲಿ, ಪೇಜಾವರ ಶ್ರೀಗಳನ್ನು ಅಳೆ ಯುವ ಹಂಸಲೇಖ ಅವರಿಗೆ ತಮ್ಮನ್ನು ಬೆಂಬಲಿಸುತ್ತಿರುವವರ ಅಯೋಗ್ಯತೆಗಳನ್ನು ಅಳೆಯಲು ಕಷ್ಟವೇನಲ್ಲ. ಖಂಡಿತಾ ಇದನ್ನೆಲ್ಲ ಆತ್ಮಾವಲೋಕ ಮಾಡಿ ಕೊಳ್ಳುತ್ತಾರೆ ಬಿಡಿ.
ಹಿಂದೆ ‘ಡ್ರಾಮಾ ಜೂನಿಯರ್ಸ್’ ಎಂಬ ಕಾರ್ಯಕ್ರಮದಲ್ಲಿ ಮಕ್ಕಳು ನಾಟಕವೊಂದರಲ್ಲಿ ಬ್ರಾಹ್ಮಣರನ್ನು ಅಣುಕಿಸಿ ನೀಡಿದ ಪ್ರದರ್ಶನವನ್ನು ಪ್ರೇಕ್ಷಕರು ವಿರೋಧಿ ಸಿದ್ದರು. ಆಗ ತೀರ್ಪುಗಾರನ ಸ್ಥಾನದಲ್ಲಿದ್ದ ಟಿ.ಎನ್.ಸೀತಾರಾಂ ಮತ್ತು ನಟಿ ಲಕ್ಷ್ಮೀಯವರು ಸ್ವತ: ಬ್ರಾಹ್ಮಣರಾಗಿದ್ದರೂ ಮಕ್ಕಳ ನಾಟಕವನ್ನು ಕೇವಲ ಪ್ರತಿಭೆ ಯನ್ನಾಗಿ ಕಂಡಿದ್ದರು. ಆದರೆ ಹೊರಗಡೆ ಸಾರ್ವಜನಿಕರಿಂದ ದೊಡ್ಡಮಟ್ಟದ ವಿರೋಧ ವ್ಯಕ್ತವಾದಾಗ ಸೀತಾರಾಮ್ ಅವರು ತೀರ್ಪುಗಾರ ಸ್ಥಾನದಿಂದ ಸ್ವಯಂ ಹೊರಬಂದು ಕ್ಷಮೆಯಾಚಿಸಿದರು. ಕಾರಣ ಮುಂದೆ ನಡೆಯುವ ಷೋಗಳಲ್ಲಿ ತನ್ನಿಂದ ಜಾತೀಯತೆಯ ಪೂರ್ವಗ್ರಹಗಳು ನುಸುಳದಿರಲಿ ಎಂಬ ಪ್ರಾಮಾಣಿಕ ಚಿಂತನೆ ಅವರದ್ದಾಗಿತ್ತು. ಇನ್ನು ಕೆಲ ಜಾತಿ ಭೂತಗಳು ಬಿಗ್‌ಬಾಸ್ ವಿಜೇತನ ಜಾತಿಯನ್ನು ಸುದೀಪ್ ಅವರ ಜಾತಿಯೊಂದಿಗೆ ತಾಳೆಮಾಡಿ ಸ್ವಜಾತಿ ಮೋಹ ಎಂದು ಜರೆದಿದ್ದರು. ಸಂಜಿತ್ ಹೆಗಡೆಯಂಥ ಗಾಯಕನನ್ನು ಜಾತಿಯ ಕಾರಣದಿಂದ ವಿಜೇತ ಸ್ಥಾನದಿಂದ ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ರಘುದೀಕ್ಷಿತ್ ಎಂಬ ಗಾಯಕ ದೇಶಾದ್ಯಂತ ಹೆಣ್ಣುಮಕ್ಕಳ ಮೇಲೆ ಪೈಶಾಚಿಕ ಅತ್ಯಾಚಾರವಾದಾಗ ಮೌನವಾಗಿದ್ದು, ನಮ್ಮ ನಾಡಿನ ಸೌಜನ್ಯ, ದಾನಮ್ಮ, ನಂದಿತಾಳಂಥ ಅಮಾಯಕ ಹೆಣ್ಣು ಮಕ್ಕಳಮೇಲೆ ಅತ್ಯಾಚಾರವಾದಾಗ ಅಂದಿನ ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸದೇ ಸುಮ್ಮನಿದ್ದು ಆಸಿಫ್ ಎಂಬ ಅಲ್ಪ ಸಂಖ್ಯಾತ ಹೆಣ್ಣುಮಗುವಿನ ಮೇಲೆ ಅತ್ಯಾಚಾರವಾದಾಗ ಮಾತ್ರ ದಿಢೀರನೆ ಕೈಲಿ ಫಲಕ ಹಿಡಿದು ನೇರ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದಾಗಲೇ ಸಾರ್ವ ಜನಿಕರು ಇದು ಮತ್ತೊಂದು ಪ್ರಕಾಶ್ ರೈ ಬ್ರಾಂಡ್ ಎಂದು ನಿರ್ಧರಿಸಿ ಸಮಾನತೆಯ ಪಾಠ ಹೇಳಿದ್ದರು.
ಇಂಥ ಮನಸ್ಥಿತಿಯವರಲ್ಲದೇ, ವೈಯಕ್ತಿಕ ಬದುಕಿನಲ್ಲೂ ನೈತಿಕತೆ ಕಳೆದುಕೊಂಡ ಕಳಪೆಗಳೆಲ್ಲ ತೀರ್ಪುಗಾರರ ಸ್ಥಾನದಲ್ಲಿ ಕೂರುವುದು ಅದೆಂಥಾ ನೈತಿಕತೆ? ಜತೆಗೆ ವೇದಿಕೆಗೆ ಬರುವ ಇಂಥ ತೀರ್ಪುಗಾರರನ್ನು ಉತ್ಪ್ರೇಕ್ಷಿತವಾಗಿ, ಅತಿರಂಜಿತವಾಗಿ ಬಹುಪಾರಕ್ ಹೇಳಿ ಆಹ್ವಾನಿಸುವ ನಿರೂಪಕರ ವರ್ತನೆಯಂತೂನೋಡುಗರಲ್ಲಿ ಅಸಹ್ಯ ಹುಟ್ಟಿಸುವುದು ಸುಳ್ಳಲ್ಲ. ಇಂಥ ಷೋಗಳಿಗೆ ಅನನುಭವಿಯಾದರೂ ಪರವಾಗಿಲ್ಲ ಸೆಲೆಬ್ರಿಟಿಗಳೇ ಬೇಕೆಂಬ ತಿಕ್ಕಲು ಇತ್ತೀಚೆಗೆ ಹೆಚ್ಚಾಗಿದೆ. ಪರಿಣಾಮ ಎಡಗೈಗೆ ಅದೇನೋ ಹತ್ತಿರವೆಂಬಂತೆ ಡಾಲಿ ಪೋಲಿಗಳಂಥವರೆಲ್ಲ ಮಹಾತೀರ್ಪುಗಾರಾಗಿ ಬಂದು ಕೂರುವಂತಾಗಿದೆ.
ಡ್ಯಾನ್ಸ್‌ಗೆ ಸಂಬಂಧಿಸಿದ ಷೋಗಳಿಗೆ ಹಿರಿಯ ಮಾಸ್ಟರ್ ಚಿನ್ನಿಪ್ರಕಾಶ್, ಎ. ಹರ್ಷ ಅಂಥವರು ಓಕೆ. ಆದರೆ ಹರಿಪ್ರಿಯಾ, ಧನಂಜಯ, ಅರ್ಜುನಜನ್ಯರಂಥವರು ಏಕೆ? ಇದೇ ವಿಚಾರವಾಗಿ ಅವಕಾಶ ವಂಚಿತ ಅನೇಕ ನೃತ್ಯ ನಿರ್ದೇಶಕರಿಂದ ವಿರೋಧವೂ ವ್ಯಕ್ತವಾಗಿತ್ತು. ಆಯಾ ಕ್ಷೇತ್ರದ ಷೋಗಳಿಗೆ ಆಯಾ ಕ್ಷೇತ್ರದ ಅನುಭವಿಗಳನ್ನು ಕೂರಿಸಬೇಕೆಂಬ ಕೂಗು ಸಿನಿಮಾ ಮಾಧ್ಯಮದಿಂದಲೇ ಎದ್ದಿತ್ತು.
ಹಾಸ್ಯಕ್ಕೆ ಸಂಬಂಧಿಸಿದಂತೆ ಹಿರಿಯನಟ ಜಗ್ಗೇಶ್, ಸೃಜನ್‌ ಲೋಕೇಶ್, ಯೋಗರಾಜಭಟ್ ಓಕೆ. ಫ್ಯಾಮಿಲಿ ಷೋಗಳಿಗೆ ತಾರಾ ಅನುರಾಧಾ, ರಕ್ಷಿತಾ, ಅನು ಪ್ರಭಾಕರ್ ಅಂಥವರೂ ಓಕೆ. ಆದರೆ ಪ್ರೈಂಟೈಂ ಪೈಪೋಟಿಗಿಳಿದು ಕೇವಲ ಸೆಲೆಬ್ರಿಟಿ ಎಂಬ ಒಂದೇ ಕಾರಣಕ್ಕೆ ಸ್ಪಽಗಳಲ್ಲಿನ ಸೂಕ್ಷ್ಮತೆ, ಕಲಾ ಪ್ರತಿಭೆ ಗ್ರಹಿಸದ ನಟನಟಿಯರನ್ನು, ಕಾಮಿಡಿಯ ಹೆಸರಿನಲ್ಲಿ ಅಶ್ಲೀಲತೆಯ, ಡಬಲ್ ಮೀನಿಂಗ್ ಡೈಲಾಗ್‌ಗಳಿಗೆ ವಿಕಾರವಾಗಿ ನಗಾಡುತ್ತ ಕೂರುವ ನಟಿಯರನ್ನು ತಂದು ಕೂರಿಸು ವುದು ಎಷ್ಟು ಸರಿ? ಚೋರ ಗುರು ಚಾಂಡಾಲ ಶಿಷ್ಯರೆಂಬಂತೆ ಇಂಥ ತೀರ್ಪು ಗಾರರನ್ನು ಮೆಚ್ಚಿಸಲೆಂದೇ ಪ್ರತಿಭಾವಂತ ಕಲಾವಿದರು ಅಡ್ಡದಾರಿ ಹಿಡಿದು ಇಂಥ ಕೆಳಮಟ್ಟದ ಕಾಮಿಡಿಗಳನ್ನು ನೀಡಲೇ ಬೇಕಾದ ಅನಿವಾರ್ಯ ಬೆಳೆದಿದೆ.
ಒಮ್ಮೆ ಕಲ್ಪಿಸಿಕೊಳ್ಳಿ ಇಂಥ ಕಾಮಿಡಿ ಷೋಗಳಿಗೆ ಒಂದೊಮ್ಮೆ ಹಿರಿಯ ಹಾಸ್ಯ ನಟ ಉಮೇಶ್, ಹೊನ್ನವಳ್ಳಿಕೃಷ್ಣ, ದೊಡ್ಡಣ್ಣರಂಥವರನ್ನು ಕೂರಿಸಿದರೆ ಇವರ ‘ಕಾಮಡಿ’ ಅವರನ್ನು ಮುಜಗರಕ್ಕೆ ಒಳಪಡಿಸದಿದ್ದರೆ ಕೇಳಿ. ರಿಯಾಲಿಟಿ ಷೋನಲ್ಲಿ ಸ್ಪಽಸಿ ತಮ್ಮ ಪ್ರತಿಭೆಯನ್ನು ತೋರಲು ದೂರದ ಹಳ್ಳಿಗಳಿಂದ ವಿದ್ಯಾಭ್ಯಾಸ, ದುಡಿಮೆಯನ್ನು ಬಿಟ್ಟು ಬಂದಿರುತ್ತಾರೆ. ಹಗಲಿರುಳೂ ಶ್ರಮಿಸಿ ಆಹಾರ ಪಥ್ಯೆ, ದೈಹಿಕ ದಂಡನೆ, ಮಾನಸಿಕ ಹಿಂಸೆ, ಸಾಲ ಮಾಡಿ ಹಣ ಸಂಗ್ರಹಿಸಿ ಮನೆ ಬಿಟ್ಟು ಬರುವ ನೃತ್ಯ ಸಂಗೀತಗಳಲ್ಲಿ ಸಾಧನೆ ಮಾಡಬೇಕೆಂದು ತರಬೇತಿ ಪಡೆದು ಜೀವನದ ದೊಡ್ಡ ಸಾಧನೆ ಮಾಡುತ್ತಿದ್ದೇವೆಂದು ಭಾವಿಸಿ ಇಂಥ ವೇದಿಕೆಗಳ ಮೇಲೆ ಪ್ರದರ್ಶನಕ್ಕೆ ನಿಲ್ಲುತ್ತಾರೆ.
ಅದಕ್ಕೆ ತಕ್ಕಂತೆ ತೀರ್ಪುಗಾರರೂ ಯೋಗ್ಯರಾಗಿರಬೇಕಲ್ಲವೇ? ತೀರ್ಪುಗಾರರೇ ನಾಲಾಯಕ್ಕುಗಳಾದಲ್ಲಿ ವೇದಿಕೆಯನ್ನು ಮಹಾಪವಿತ್ರವೆಂದು ಭಾವಿಸಿ ಬರುವ ಮಕ್ಕಳು ಮತ್ತುಸಽಗಳಿಗೆ ದ್ರೋಹ ಬಗೆದಂತಲ್ಲವೇ? ಕೋಟ್ಯಂತರ ರುಪಾಯಿಗಳನ್ನು ಸುರಿದು ಮಾಡುವ ಚಲನಚಿತ್ರಗಳ ಬಗ್ಗೆ ವಸ್ತುನಿಷ್ಠ ವಿಮರ್ಶೆ ಪ್ರತಿವಾರ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಪ್ರೇಕ್ಷರಿಲ್ಲದೇ ಬಡವಾಗುತ್ತಿರುವ ಕನ್ನಡ ಸಿನಿಮಾಕ್ಕೆ ತೊಂದರೆಯಾಗದಂತೆ ದಿನಪತ್ರಿಕೆಗಳು ಸಹಕರಿಸಿ ಸಿನಿಮಾ ವಿಮರ್ಶೆಗಳನ್ನೇ ನಿಲ್ಲಿಸಿಬಿಟ್ಟಿತು. ಆದರೆ ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೂ ಕಿರುತೆರೆ ಎಂಬುದು ಹತ್ತಿರವಾಗಿರುತ್ತದೆ.
ಕಿರುತೆರೆಯ ಇಂಥ ಅವಿವೇಕ, ಅಸಂಬದ್ಧಗಳು ನಡೆಯುತ್ತಿರುವಾಗ ಚಿತ್ರರಂಗದ ಹಿರಿಯರು ಸುಮ್ಮನಿರುವುದು ಎಷ್ಟು ಸರಿ? ಇಂಥದ್ದನ್ನು ಪ್ರಶ್ನಿಸುವ ಹಕ್ಕು ವೀಕ್ಷಕ ರಿಗೂ ಇರಬೇಕಲ್ಲವೇ? ಇನ್ನು ಗಂಭೀರತೆಯ ಪರಮಾವಧಿಯಲ್ಲಿರಬೇಕಾದ ಕೆಲ ಸುದ್ದಿವಾಹಿನಿಗಳಂತೂ ಇದಕ್ಕೆ ಹೊರತಲ್ಲ. ಕೇವಲ ಪತ್ರಿಕೋದ್ಯಮದ ಪ್ರಮಾಣ ಪತ್ರ ಪಡೆದ ಕೂಡಲೇ ಎಳೆ ನಿಂಬಿಕಾಯಿ ಅತ್ಲಾಗಿರಲಿ, ಇನ್ನೂ ಪೀಚು ನಲ್ಲಿಕಾಯಿಗಳೆಲ್ಲ ಹಿರಿಯ ಸಂಪಾದಕರಿಗೇ ಕೌಂಟರ್ ಕೊಡಲು ಯತ್ನಿಸುತ್ತಿವೆ. ಇಂಥ ಯಡವಟ್ಟುಗಳಿಗೆ ಸಂಬಂಧಿಸಿದ ಸಂಪಾದಕರು, ಆಡಳಿತ ಮಂಡಳಿಯವರು ಪತ್ರಿಕೋದ್ಯಮದ ಗಂಭೀರತೆಯನ್ನು ಮನನ ಮಾಡಿಸಬೇಕಾದ ಅನಿವಾರ್ಯ ಇದೆ.
ಇಲ್ಲದೇ ಹೋದರೆ ಟಿವಿ ರಿಮೋಟ್ ವೀಕ್ಷಕನ ಕೈಲಿರುತ್ತದೆ, ನೆಟ್ಟಿಗರು ಟ್ರೋಲಿಗರು ತಮ್ಮ ಸ್ವಂತ ದುಡಿಮೆಯ ಮೊಬೈಲ್ ಡಾಟಾ ತುಂಬಿಸಿಕೊಂಡಿರುತ್ತಾರೆ. ಯಾವುದು ಟಿಆಪಿರ್, ಯಾವುದು ‘ಎಂಆರ್‌ಪಿ’ ಎಂಬುದನ್ನು ಆತನೇ ನಿರ್ಧರಿಸುತ್ತಾನೆ.