’ಅ’ಕಾರ ಮತ್ತು ’ಹ’ಕಾರಗಳೇ ಬೇರೆ, ಎರಡೂ ಒಂದೇ ಅಲ್ಲ !
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
@.
ಭಾಷೆಗೂ, ಜಾತಿಗೂ ಸಂಬಂಧವೂ ಇಲ್ಲ. ಭಾಷೆ ಎನ್ನುವುದು ಯಾವುದೇ ಜಾತಿಯ ಸ್ವತ್ತಲ್ಲ. ಯಾರು ಬೇಕಾದರೂ ಯಾವ ಭಾಷೆಯ ಮೇಲಾದರೂ ಪ್ರಭುತ್ವಸಾಽಸಬಹುದು. ಇದರಲ್ಲಿ ಜಾತಿ ಎಲ್ಲಿಂದ ಬಂತು? ಭಾಷಾ ಶುದ್ಧಿ ಎನ್ನುವುದು ಅಭಿರುಚಿಯ ಸಂಕೇತ. ಭಾಷೆ ಶುದ್ಧವಾಗಿರಬೇಕಿಲ್ಲ ಎಂದು ವಾದಿಸುವುದು ಹೀನ ಅಭಿರುಚಿಯ ಪ್ರತೀಕ.
ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಮಹೇಶ ಜೋಶಿಯವರು ಮೊನ್ನೆ ಕಾರ್ಯಕ್ರಮವೊಂದರಲ್ಲಿ ಮಾತಾಡಿದ್ದು ಒಂದಷ್ಟು ಚರ್ಚೆಗೆ ಕಾರಣವಾಗಿದೆ.ಅವರು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತಾಡುವಾಗ ‘ಅ’ಕಾರ, ‘ಹ’ಕಾರ ವ್ಯತ್ಯಾಸ ತಿಳಿದವರು ಕಡಿಮೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.
ಅಂದು ಜೋಶಿಯವರು ಅಷ್ಟಕ್ಕೂ ಹೇಳಿದ್ದೇನೆಂದರೆ – ರಾಜಧಾನಿ ಬೆಂಗಳೂರಿನಲ್ಲಿ ‘ಅ’ಕಾರ ಮತ್ತು ‘ಹ’ಕಾರ ವ್ಯತ್ಯಾಸ ತಿಳಿದ ಕನ್ನಡಿಗರು, ಶುದ್ಧ ಕನ್ನಡ ಗೊತ್ತಿರುವವರ ಸಂಖ್ಯೆ ಶೇ.೨೬ ರಷ್ಟು ಮಾತ್ರ. ನಮ್ಮಲ್ಲಿ ಪ್ರದೇಶ ಗಳಿಗೆ ಅನುಗುಣವಾಗಿ ಉಚ್ಚಾರ ಬದಲಾಗುತ್ತದೆ. ಆದರೆ ಶುದ್ಧ ಮತ್ತು ಸ್ಪಷ್ಟ ಕನ್ನಡವನ್ನು ನಾವು ಉಳಿಸಿ ಬೆಳೆಸಬೇಕು. ಇಡೀ ಜಗತ್ತಿನಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಮಾತ್ರ ಶುದ್ಧ ಎಂಬ ಕೀರ್ತಿಗೆ ಪಾತ್ರವಾಗಿವೆ. ನಾವು ಅದರ ವೈಶಿಷ್ಟ್ಯವನ್ನು ಕಾಪಾಡಬೇಕಿದೆ.’
ಪತ್ರಿಕೆಗಳಲ್ಲಿ ವರದಿಯಾಗಿರುವಂತೆ, ಇದು ಅವರ ಮಾತಿನ ತಾತ್ಪರ್ಯ. ಇದನ್ನೇ ಕೆಲವರು ವಿವಾದ ಮಾಡಲು ಹೊರಟಂತಿದೆ. ಬ್ರಾಹ್ಮಣರು ಮಾತ್ರ ಶುದ್ಧ ಕನ್ನಡ ಮಾತಾಡುವುದರಿಂದ, ಇದು ಸಹ ಬ್ರಾಹ್ಮಣ್ಯದ ಪಾರಮ್ಯ ಮೆರೆಯುವ ಮತ್ತು ಅನ್ಯ ಜಾತಿಯವರನ್ನು ನಿಕೃಷ್ಟವಾಗಿ ಕಾಣುವ ಕುತ್ಸಿತ ಭಾವವಿದು ಎಂದು ಕೆಲವರು ಪ್ರತಿಕ್ರಿಯಿಸಿzರೆ. ಇದರ ಬಗ್ಗೆ ಫೇಸ್ ಬುಕ್ ರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆ ನಡೆಯು ತ್ತಿದೆ. ಇಷ್ಟು ಸಾಲದೆಂಬಂತೆ, ಇದಕ್ಕೆ ಕೆಲವು ಅವಿವೇಕಿಗಳು ಎಣ್ಣೆ-ತುಪ್ಪ ಸುರಿಯುತ್ತಿದ್ದಾರೆ.
ಜೋಶಿ ಅವರು ಹೇಳದ ಮಾತುಗಳನ್ನು ಅವರ ಬಾಯಲ್ಲಿ ಹಾಕುವ ಪ್ರಯತ್ನವಿದು. ಅವರು ಎಲ್ಲೂ ಜಾತಿಯನ್ನು ಪ್ರಸ್ತಾಪಿಸಿಯೇ ಇಲ್ಲ. ಭಾಷೆಗೂ, ಜಾತಿಗೂ ಸಂಬಂಧವೂ ಇಲ್ಲ. ಭಾಷೆ ಎನ್ನುವುದು ಯಾವುದೇ ಜಾತಿಯ ಸ್ವತ್ತಲ್ಲ. ಯಾರು ಬೇಕಾದರೂ ಯಾವ ಭಾಷೆಯ ಮೇಲಾದರೂ ಪ್ರಭುತ್ವ ಸಾಧಿಸಬಹುದು. ಜೋಶಿಯವರು ಪ್ರತಿಪಾದಿಸಿದ್ದು ಶುದ್ಧ ಭಾಷೆಯ ಬಗ್ಗೆ. ಇದರಲ್ಲಿ ಜಾತಿ ಎಲ್ಲಿಂದ ಬಂತು? ಭಾಷಾ ಶುದ್ಧಿ ಎನ್ನುವುದು ಅಭಿರುಚಿಯ ಸಂಕೇತ. ಭಾಷೆ ಶುದ್ಧವಾಗಿರ ಬೇಕಿಲ್ಲ ಎಂದು ವಾದಿಸುವುದು ಹೀನ ಅಭಿರುಚಿಯ ಪ್ರತೀಕ.
‘ಅ’ಕಾರ ಮತ್ತು ‘ಹ’ಕಾರ, ‘ಲ’ಕಾರ ಮತ್ತು ‘ಳ’ಕಾರ, ‘ಶ’ಕಾರ ಮತ್ತು ‘ಷ’ಕಾರಕ್ಕೆ ಸಾಕಷ್ಟು ವ್ಯತ್ಯಾಸಗಳಿವೆ. ಎಷ್ಟೋ ಸಂದರ್ಭಗಳಲ್ಲಿ ಅವುಗಳ ಅರ್ಥವೇ ಬೇರೆ ಬೇರೆಯಾಗುತ್ತವೆ. ಹೇಳು ಎನ್ನುವುದಕ್ಕೆ ಹೇಲು ಅಂದರೆ, ಹೇಳುತ್ತಾನೆ ಎನ್ನುವ ಬದಲು ಹೇಲುತ್ತಾನೆ ಎಂದರೆ ಎಂಥ ಆಭಾಸವಾಗಬಹುದು? ಭಾಷೆಯ ಶಿಸ್ತು ಬೇರೆ, ಸೊಗಡು ಬೇರೆ. ಆದರೂ ಸೊಗಡಿನಲ್ಲೂ ಒಂದು ಶಿಸ್ತು ಇದೆ ಎನ್ನುವುದನ್ನು ಮರೆಯಬಾರದು. ಶುದ್ಧ ಕನ್ನಡ, ಅಶುದ್ಧ ಕನ್ನಡ ಎನ್ನುವುದು ಇಲ್ಲವೇ ಇಲ್ಲ, ಇರುವುದು ಕನ್ನಡ ಮಾತ್ರ ಎಂದು ವಾದಿಸುವವರೂ ಇದ್ದಾರೆ.
ಹಾಗೆಂದು ತಪ್ಪು ಭಾಷಾ ಪ್ರಯೋಗವನ್ನು ಮಾಡಿದರೆ ಅದನ್ನು ಮನ್ನಿಸಲಾದೀತೇ? ಕೆಲವರು ಮಾತಾಡುವಾಗ ಶಾಸಕ ಎನ್ನುವ ಬದಲು ಶಾಶಕ ಎಂದು ಉಚ್ಚರಿಸುತ್ತಾರೆ. ಅದು ತಪ್ಪು. ಸುಭಾಷಿತವನ್ನು ಶುಭಾಶಿತ ಎಂದರೆ ಅದನ್ನು ಒಪ್ಪಿಕೊಳ್ಳಲಾದೀತೇ? ಖಂಡಿತ ಇಲ್ಲ. ಅದರ ಅರ್ಥವೇ ಬೇರೆಯಾಗುತ್ತದೆ.ಪ್ರತಿ ವ್ಯಕ್ತಿಗೆ ಒಂದು ಸ್ವರೂಪ, ವ್ಯಕ್ತಿತ್ವ ಇರುವಂತೆ, ಪ್ರತಿ ಪದಕ್ಕೂ ಒಂದು ನಿರ್ದಿಷ್ಟ ಉಚ್ಚಾರ, ಕರಡು ಸ್ವರೂಪ, ವ್ಯಕ್ತಿತ್ವವಿದೆ. ಅದು ಹೇಗಿರಬೇಕೋ ಹಾಗೆಯೇ ಇರಬೇಕು. ಅದನ್ನು ಬಳಸುವವನ ವೈಫಲ್ಯ ಅಥವಾ ಕೊರತೆ, ಪದಗಳ ಒಟ್ಟಂದದ ಮೇಲೆ ಪರಿಣಾಮ ಬೀರಬಾರದು. ಭಾಷೆಯನ್ನು ಮನಸ್ಸಿಗೆ ಬಂದಂತೆಬಳಸಕೊಡದು. ಅದು ನನಗೆ ಯಾವ ಅರ್ಥವನ್ನು ಕೊಡುತ್ತದೋ, ಅನ್ಯರಿಗೂ ಅದೇ ಅರ್ಥವನ್ನು ಕೊಡಬೇಕು.
‘ಅ’ಕಾರ ಮತ್ತು ‘ಹ’ಕಾರ ವ್ಯತ್ಯಾಸವಾದರೆ ಅಕ್ಕಿ, ಹಕ್ಕಿಯಾಗುತ್ತದೆ. ಆಸನ ಹಾಸನವಾಗುತ್ತದೆ. ಅರವಿಂದ ಹರವಿಂದ ಆಗುತ್ತದೆ. ‘ಆದರದ’ ಸ್ವಾಗತ ಎನ್ನುವಲ್ಲಿ ‘ಹಾದರದ’ ಸ್ವಾಗತ ಎಂದರೆ ಏನಾಗಬಹುದು, ಊಹಿಸಿ. ಆದ್ದರಿಂದ ‘ಅ’ಕಾರ ಮತ್ತು ‘ಹ’ಕಾರ, ‘ಲ’ಕಾರ ಮತ್ತು ‘ಳ’ಕಾರ, ‘ಶ’ಕಾರ ಮತ್ತು ‘ಷ’ಕಾರಗಳ ನಡುವೆ ಅಂತರವಿದೆ, ವ್ಯತ್ಯಾಸವಿದೆ. ‘ಅ’ಕಾರಕ್ಕೆ ‘ಹ’ಕಾರ ಬಳಸಿದರೆ ಅದು ತಪ್ಪು. ಅದು ಮತ್ತು ಇದು ಎರಡೂ ಒಂದೇ ಅಲ್ಲ. ಅದೇ ಬೇರೆ ಮತ್ತು ಇದೇ ಬೇರೆ. ಶುದ್ಧ ಭಾಷಾ ಪ್ರಯೋಗ ಅನುಕರಣೀಯ ಮತ್ತು ಅದೊಂದು ಆದರ್ಶ.
ಇದರಲ್ಲಿ ಚೌಕಾಶಿ ಯಾಕೆ ಮಾಡಬೇಕೋ ಅರ್ಥವಾಗುವುದಿಲ್ಲ. ಸ್ವಚ್ಛತೆಯಲ್ಲಿ ರಾಜಿ ಮಾಡಿಕೊಂಡರೆ, ಗಲೀಜಿನೊಂದಿಗೆ ಸರಸ ಬಯಸಿದಂತೆ. ಇದು ಭಾಷೆಗೂ ಅನ್ವಯ. ಮಹೇಶ ಜೋಶಿ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ. ಚೆನ್ನಾಗಿ ಹೇಲಿದ್ರಿ ಅಂತ ಮಾತ್ರ ಹೇಲಬೇಡಿ!
ಹಾಸಿಗೆ, ತಲೆದಿಂಬಿನ ಕುರಿತು
‘ಕೌನ್ ನೇಗಾ ಕರೋಡ್ ಪತಿ’ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ಹಿಮಾಚಲದಿಂದ ಬಂದಿದ್ದ ಒಂಬತ್ತು ವರುಷದ ಅರುಣೋದಯ ಶರ್ಮ ಎಂಬ ಬಾಲಕ ಅಮಿತಾಭ್ ಬಚ್ಚನ್ ಗೆ, ‘ನೀವು ಬೆಳಗ್ಗೆ ಎಷ್ಟು ಗಂಟೆಗೆ ಎದ್ದೇಳುತ್ತೀರಿ?’ ಎಂದು ಕೇಳಿದ್ದ. ಅದಕ್ಕೆ ಅಮಿತಾಭ್ ‘ನಾನೀಗ ಇರುವ ವಯೋಮಾನದಲ್ಲಿ ರಾತ್ರಿ ಕನಿಷ್ಠ ಪಕ್ಷ ೩-೪ ಬಾರಿ ಏಳಬೇಕಾಗುತ್ತದೆ. ಆದರೂ ನಾನು ಬೆಳಗ್ಗೆ ೫.೩೦ರ ಹೊತ್ತಿಗೆ ಹಾಸಿಗೆಯಿಂದ ಎದ್ದು ಬಿಡುತ್ತೇನೆ’ ಎಂದಿದ್ದರು.
ಈ ಸಂವಾದದಲ್ಲಿ ನನಗೆ ಕೆಲವು ವಿಚಾರಗಳು ನೆನಪಾದವು. ನನ್ನ ೪೦ ವರುಷಗಳ ವೃತ್ತಿ ಜೀವನದಲ್ಲಿ ವಿಶ್ವದ ನಾನಾ ನಗರಗಳಲ್ಲಿ ಬೇರೆ ಬೇರೆ ಹೋಟೆಲು ಗಳಲ್ಲಿ, ಅದರಲ್ಲೂ ದುಬಾರಿ ಹೋಟೆಲುಗಳಲ್ಲಿ ಉಳಿದಿದ್ದೇನೆ. ನಿದ್ದೆಗೆ ಜಾರಿದ ನಂತರ ನಡುವೆ ನಾನು ಒಮ್ಮೆಯೂ ಎದ್ದಿದ್ದಿಲ್ಲ. ಮಲಗಿದ ತಕ್ಷಣ ಸೊಂಪಾದ ನಿದ್ದೆ ಬರುತ್ತದೆ. ಈಗಲೂ ನಾನು ಹೋಟೆಲುಗಳಲ್ಲಿ ವಾಸ್ತವ್ಯ ಹೂಡುವುದಿದೆ. ಐಷಾರಾಮಿ ಹೋಟೆಲುಗಳಲ್ಲಿ ಉಳಿದಾಗ ನನಗೆ ಚೆನ್ನಾಗಿ ನಿದೆ ಬರುತ್ತದೆ. ಯಾವತ್ತೂನಡುರಾತ್ರಿಯಲ್ಲಿ ಎಚ್ಚರವಾದದ್ದಿಲ್ಲ. ದಿನದಲ್ಲಿ ೧೪-೧೫ ಗಂಟೆ ನಿರಂತರವಾಗಿ ಕೆಲಸ ಮಾಡುತ್ತಿದ್ದ ಕಾರಣ ಅಂತಹ ಸೊಂಪಾದ ನಿದ್ದೆ ನನಗೆ ಬರುತ್ತದೆ ಎಂಬ ಅಭಿಪ್ರಾಯ ನನ್ನದಾಗಿತ್ತು.
ನಗರಗಳಿಂದ ಕೊಂಚ ದೂರದಲ್ಲಿರುವ ಊರುಗಳಲ್ಲಿ ವಾಸ್ತವ್ಯ ಮಾಡಬೇಕಾದಾಗ ಮತ್ತು ಉತ್ತಮ ವಸತಿ ಸೌಕರ್ಯ ಇಲ್ಲದೇ ಇದ್ದಾಗ ನಾನು ಬೇರೆ ವ್ಯಕ್ತಿಗಳ ಅತಿಥಿಯಾಗಿ ಮನೆಗಳಲ್ಲಿ ತಂಗಿದ್ದೂ ಇದೆ, ಅತಿಥಿಗೃಹಗಳಲ್ಲಿ ವಾಸ್ತವ್ಯ ಮಾಡಿದ್ದೂ ಇದೆ. ಆದರೆ ಅಲ್ಲೆಲ್ಲ ನನಗೆ ಚೆನ್ನಾಗಿ ನಿದ್ದೆ ಬಂದ ಪ್ರಸಂಗಗಳು ಕಡಿಮೆ. ಅಂದರೆ ಆ ಮನೆಗಳು ಹೋಟೆಲಿನಷ್ಟು ಆರಾಮದಾಯಕವಾಗಿರಲಿಲ್ಲ ಎಂದು ಇದರರ್ಥವಲ್ಲ. ಆ ಮನೆಗಳಲ್ಲಿ ಕೊಡುತ್ತಿದ್ದ ಊಟೋಪಹಾರ ದೊಡ್ಡ ಹೋಟೇಲಿನಊಟಕ್ಕಿಂತಲೂ ರುಚಿಕರವಾಗಿರುತ್ತಿತ್ತು. ಹೀಗಾಗಲು ಕಾರಣಗಳೂ ಇವೆ. ವಿಲಾಸೀ ಹೋಟೆಲುಗಳ ಹೊರತಾದ ಸಣ್ಣಪುಟ್ಟ ವಸತಿಗೃಹಗಳಲ್ಲಿ, ಅತಿಥಿಗೃಹಗಳಲ್ಲಿ,ಮತ್ತು ಮಧ್ಯಮವರ್ಗದವರ ಮನೆಗಳಲ್ಲಿ ತಲೆದಿಂಬುಗಳು, ಅದರ ಮೇಲೆ ಹಾಸಿದ ಕವರುಗಳಲ್ಲಿ ವರುಷಗಳ ಕಾಲದ ಬೆವರಿನ ವಿಲಕ್ಷಣ ಅಡ್ಡವಾಸನೆ ಇರುತ್ತದೆ. ಆ ಹಳೆಯ ಕಲೆಗಳ
ಚಿತ್ತಾರ ಮಾಡರ್ನ್ ಆರ್ಟ್‌ನಂತೆ ಕಾಣಿಸುತ್ತದೆ. ಕೆಲವೊಮ್ಮೆ ದಿಂಬಿನ ಹತ್ತಿ ಗಟ್ಟಿಯಾಗಿಬಿಟ್ಟಿರುತ್ತದೆ. ಅತಿಥಿಗೃಹಗಳಿಗೆ ಬರುವ ಅತಿಥಿಗಳ ಸತ್ಕಾರದ ವ್ಯಸ್ತರಾದ ಸಿಬ್ಬಂದಿಗೆ ಇಂತಹ ಕೆಲವು ಸಂಗತಿಗಳತ್ತ ಗಮನ ಹರಿಯುವುದೇ ಇಲ್ಲ. ಒಮ್ಮೆ ಖರೀದಿ ಮಾಡಿ ಹಾಸಿದ ದಿಂಬು, ಹಾಸಿಗೆ ಜೀವಮಾನ ಪರ್ಯಂತ ಹಾಗೆಯೇ ಬಳಕೆಯಲ್ಲಿ ಇರುತ್ತದೆ. ಕೆಲವು ದೊಡ್ಡ ವ್ಯಕ್ತಿಗಳು ಎಲ್ಲಿಗಾದರೂ ಪ್ರವಾಸ ಹೋದಾಗ ಅವರ ಟೀಮ್ ಇಂತಹ ಸಣ್ಣಪುಟ್ಟ ಸಂಗತಿಗಳತ್ತ ವಿಶೇಷ ಗಮನ ವಹಿಸಿ ಉತ್ತಮ ವ್ಯವಸ್ಥೆ ದೊರಕುವಂತೆ ಮಾಡುತ್ತಾರೆ. ತಮ್ಮ ಅಂತಸ್ತನ್ನು ಇತರರ ಮುಂದೆ ಪ್ರದರ್ಶಿಸಲು ಇದನ್ನೆಲ್ಲ ಮಾಡುತ್ತಾರೆಂದು ಭಾವಿಸುವವರಿದ್ದಾರೆ.
ಅವರು ತಮ್ಮ ಸುಖನಿದ್ರೆಗಾಗಿ, ಆರಾಮದ ಖಾತ್ರಿಗಾಗಿ ಇವನ್ನೆಲ್ಲ ಮಾಡುತ್ತಾರೆ ಎಂಬುದು ಬಹಳ ಜನಕ್ಕೆ ಗೊತ್ತಿರುವುದಿಲ್ಲ. ಅನೇಕ ವಸ್ತುಗಳ ತರಹ ಹಾಸಿಗೆ-ದಿಂಬುಗಳಿಗೂ ಒಂದು ಎಕ್ಸ್ ಪೈರಿ ಡೇಟ್ ಇರುತ್ತದೆ. ಅವುಗಳನ್ನು ನಿರಂತರ ಬಳಸುತ್ತಲೇ ಇರಲಾಗದು. ದಿಂಬು ಯಾವಾಗಲೂ ಮೃದುವಾಗಿರಬೇಕು,ಗಟ್ಟಿ ಯಾಗಬಾರದು. ಅದು ಶುಭ್ರವಾಗಿರಬೇಕು, ಬಣ್ಣಗೆಡಬಾರದು. ಹಾಸಿಗೆ ದಿಂಬು ಸರಿ ಇಲ್ಲದಿದ್ದರೆ ನಿದ್ದೆ ಸರಿಬಾರದು. ಕೆಲವರಿಗೆ ಬೆನ್ನುಮೂಳೆಯಲ್ಲಿ ನೋವು ಕಾಣಿಸಿಕೊಳ್ಳಲೂಬಹುದು. ನಾನಂತೂ ವರ್ಷಕ್ಕೊಮ್ಮೆ ಅವನ್ನೆಲ್ಲ ಬದಲಿಸುವ ಅಭ್ಯಾಸವಿಟ್ಟುಕೊಂಡಿದ್ದೇನೆ. ನನಗೆ ನಿದ್ದೆ ಸರಿಬರುತ್ತಿಲ್ಲ ಎಂಬ ಅನುಭವ ವಾದಾಗಲೆಲ್ಲ ನಾನು ಈ ಬಗ್ಗೆ ಗಮನ ಹರಿಸುತ್ತೇನೆ.
ಗಮನಿಸಬೇಕಾದ ಅಂಶವೆಂದರೆ – ಹಾಸಿಗೆ, ದಿಂಬು, ಚಾದರ, ಟವಲ್ ಗಳಿಗೂ ಒಂದು ಎಕ್ಸ್‌ಪೈರಿ ಡೇಟ್ ಅಂತ ಇರುತ್ತದೆ. ನಿಮಗೆ ನಿದ್ದೆ ಸರಿಬರುತ್ತಿಲ್ಲ, ವಿಶ್ರಾಂತಿಗೆ ಅಡಚಣೆ ಆಗುತ್ತಿದ್ದರೆ ತಕ್ಷಣ ಅದನ್ನು ಬದಲಿಸಿ. ಅಂದ ಹಾಗೆ ಇದನ್ನು ಹೇಳಿದವರು ಮ್ಯಾನೇಜಮೆಂಟ್ ಗುರು ಎನ್.ರಘುರಾಮನ್ . ನನ್ನ ಅಭಿಪ್ರಾಯವೂ ಇದೇ.
ನನ್ನ ಗುರುಗಳು ಯಾರು?ಇತ್ತೀಚೆಗೆ ನನಗೆ ‘ಪ್ರಜಾಮತ’ ಪತ್ರಿಕೆಯ ಹಳೆಯ ಸಂಚಿಕೆಯೊಂದು ಸಿಕ್ಕಿತು. ಸುಮಾರು ನಲವತ್ತೆಂಟು ವರ್ಷಗಳ (೧೯೭೩) ಹಿಂದಿನ ಹಳೆಯ ಸಂಚಿಕೆಯದು. ಕನ್ನಡದ ಖ್ಯಾತ ಹಾಸ್ಯ ಸಾಹಿತಿ ಬೀಚಿ, ತಮಗೆ ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ, ತಮ್ಮ ಬಗ್ಗೆಯೇ ಬರೆದ ಲೇಖನವೊಂದು ಕಣ್ಣಿಗೆ ಬಿದ್ದಿತು. ಅದರಲ್ಲಿ ಬೀಚಿ ತಮ್ಮ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ.
‘ನನಗೆ ಗುರುಗಳೂ ಇಲ್ಲ, ಶಿಷ್ಯರೂ ಇಲ್ಲ. ನನ್ನ ಬದುಕೇ ನನಗೆ ಗುರು. ನಾನು ಜೀವನದಲ್ಲಿ ಕಂಡಿದ್ದು, ಕೇಳಿದ್ದು, ನಾನು ಅನುಭವಿಸಿದ ಕಷ್ಟ-ಸುಖ, ನನ್ನ ಕಣ್ಣಿಗೆ ಬಿದ್ದವರ ಸಣ್ಣತನ, ಸಣ್ಣವರ ದೊಡ್ಡತನ, ಶ್ರೀಮಂತರ ಮೂರ್ಖತನ, ಅವಿದ್ಯಾವಂತರ ಜಾಣತನ, ಸನ್ಯಾಸಿಗಳ ಕಪಟತನ, ಸೂಳೆಯರ ನಿರ್ಮಲ ಚಿತ್ತ, ಇವೆಲ್ಲ ನನ್ನ ಗುರುಗಳೇ!’
ಕತ್ತೆಯ ದುಡಿಮೆ, ನಾಯಿಯ ಪ್ರಾಮಾಣಿಕತೆ, ಕಾಗೆಯ ಸಹ ಜೀವಿಗಳ ಪ್ರೇಮ ಇವುಗಳಿಂದಲೂ ಕಲಿತಿದ್ದೇನೆ, ಕಲಿಯುತ್ತಿದ್ದೇನೆ. ನಾನು ಓದುವಂಥದ್ದು ಕನ್ನಡದನಿದೆ ಎಂದು ತಪ್ಪು ತಿಳಿದಿದ್ದಾಗ, ನನ್ನ ಹಿರಿಯ ಮಿತ್ರರಾದ ದಿವಂಗತ ಅ.ನ.ಕೃಷ್ಣರಾಯರ ಸಂಧ್ಯಾರಾಗ, ಡಿವಿಜಿಯ ‘ಮಂಕುತಿಮ್ಮನ ಕಗ್ಗ’ನನ್ನ ಪಾರಾಯಣ ಗ್ರಂಥವಾಯಿತು. ಪ್ರಾಜ್ಞರೂ, ಹಿರಿಯರೂ ಆದ ವೀರಕೇಸರಿ ಸೀತಾರಾಮ ಶಾಸ್ತ್ರೀಯವರು…  ಈ ಎಲ್ಲರಲ್ಲಿ ಯಾರು ಗುರುಗಳು? ಯಾರು ಗುರುಗಳಲ್ಲ? ಹೀಗೆ ಬೀಚಿ ಬರೆಯುತ್ತಾ ಹೋಗುತ್ತಾರೆ.
ನಂಬಿಕೆಯನ್ನು ಸುಳ್ಳು ಮಾಡಬೇಕು‘ಯಾವ ಕೆಲಸವನ್ನು ಮಾಡುವುದು ಸಾಧ್ಯವೇ ಇಲ್ಲ ಎಂದು ಜನರು ಭಾವಿಸಿರುತ್ತಾರೋ, ಆ ಕೆಲಸವನ್ನು ಮಾಡುವ ಯತ್ನಕ್ಕೆ ಕೈ ಹಾಕಿ ಯಶಸ್ವಿಯಾದ ಖುಷಿ ನನಗಿದೆ. ಈ ಕೆಲಸ ನನ್ನಿಂದ ಆಗದು ಎಂದು ಜನ ಅಂದುಕೊಳ್ಳುತ್ತಾರಲ್ಲ, ಆ ನಂಬಿಕೆಯನ್ನು ಸುಳ್ಳು ಮಾಡುವುದು ನನಗೆ ಇಷ್ಟ. ನಾನು ಆಗಾಗ ಇಂಥಸಂಗತಿಗಳಿಂದ ಖುಷಿಪಡುತ್ತೇನೆ.
ಹೀಗೆಂದು ಹೇಳಿದವರು ಪ್ರಸಿದ್ಧ ಉದ್ಯಮಿ ರತನ್ ಟಾಟಾ. ಪತ್ರಿಕಾ ಸಂದರ್ಶನವೊಂದರಲ್ಲಿ ಟಾಟಾ ಹೇಳುತ್ತಾರೆ – ನಮ್ಮ ಕಂಪನಿ ಇಂಡಿಕಾ ಕಾರು ತಯಾರಿ ಸುವ ನಿರ್ಣಯ ತೆಗೆದುಕೊಂಡಿತು. ಈ ಕಾರು ಸಂಪೂರ್ಣವಾಗಿ ಭಾರತದ ತಯಾರಾದ ಬಿಡಿಭಾಗಗಳಿಂದ ಸಿದ್ಧವಾಗಿತ್ತು. ಈ ಕಾರನ್ನು ನಾನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ನನ್ನ ಅನೇಕ ಭಾರತೀಯ ಮಿತ್ರರಿಗೆ ಈ ಕಾರು ಸಫಲವಾಗುವುದಿಲ್ಲವೆಂಬ ಅನುಮಾನವಿತ್ತು. ಹೀಗಾಗಿ ಅವರೆಲ್ಲ ನನ್ನಿಂದ ಅಂತರ ಕಾಯ್ದುಕೊಂಡಿದ್ದರು.
ಕಾರು ಬಿಡುಗಡೆಯ ಸಂದರ್ಭದಲ್ಲಿ ಬಹುತೇಕ ನಾನು ಏಕಾಂಗಿಯಾಗಿದ್ದೆ. ಈ ಕಾರು ಬಿಡುಗಡೆ ಆಗುತ್ತಿದ್ದಂತೆ, ಮಾರುಕಟ್ಟೆಯಲ್ಲಿದ್ದ ಎಲ್ಲ ತಪ್ಪುಕಲ್ಪನೆಗಳೂ ದೂರವಾದವು ಮತ್ತು ಆ ಕಾರು ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡಿತು. ಯಾರಲ್ಲಿ ದೂರದರ್ಶಿತ್ವವಿದೆಯೋ, ಯಾರು ಭವಿಷ್ಯದ ಗರ್ಭದಲ್ಲಡಗಿರುವ ಅವಕಾಶವನ್ನು ಹುಡುಕಿ ತೆಗೆಯಬಲ್ಲರೋ ಮತ್ತು ಅದಕ್ಕೆ ತಕ್ಕಂತೆ ಕಾರ್ಯೋನ್ಮುಖನಾಗುತ್ತಾರೋ, ಅವರು ನಾಯಕರೆನಿಸಿಕೊಳ್ಳುತ್ತಾರೆ, ಇದು ನನ್ನ ವೈಯ್ಯಕ್ತಿಕ ಅಭಿಪ್ರಾಯ. ಎಲ್ಲ ಬಗೆಯ ಊಹಾಪೋಹಗಳನ್ನು ದೂರಮಾಡಿ ಕೆಲಸವನ್ನು ಯಶಸ್ಸಿನತ್ತ ಒಯ್ಯುವ ಗುಣವನು ಬೆಳೆಸಿಕೊಳ್ಳಬೇಕು.
ಸುತ್ತಲ ಜಗದತ್ತ ಒಮ್ಮೆ ಕಣ್ಣುಹಾಯಿಸಿ. ಬಹಳ ಉದ್ಯಮಿಗಳು ಹೇಗೆ ತಮ್ಮ ಉದ್ಯಮವನ್ನು ಆರಂಭಿಸಿದ್ದಾರೆ ಎಂಬುದನ್ನು ನೋಡಿ. ಅನೇಕರಿಗೆ ಆರಂಭದಲ್ಲಿ ಚೆಂದವಾದ ಆಫೀಸು ಕೂಡ ಇರಲಿಲ್ಲ. ಆಫೀಸಿನ ಬಾಡಿಗೆ ಉಳಿಸಲು ತಮ್ಮ ಮನೆಯ ಗ್ಯಾರೇಜುಗಳಲ್ಲಿಯೇ ಮಹತ್ತರವಾದ ಕೆಲಸಗಳ ಆರಂಭವನ್ನು ಮಾಡಿದವರಿದ್ದಾರೆ. ಮೈಕ್ರೋಸಾಫ್ಟ್, ಆಪಲ, ಅಮೆಜಾನ್, ಗೂಗಲ, ಫೇಸ್ ಬುಕ್, ಬಯೋಕಾನ್ ಮುಂತಾದ ಸಂಸ್ಥೆಗಳು ಆರಂಭವಾಗಿದ್ದು ಹೇಗೆ?ಇವೆಲ್ಲ ಶುರುವಾಗಿದ್ದು ಗ್ಯಾರೇಜಿನಿಂದ. ಇವೆಲ್ಲವೂ ಸಾಕಾರವಾಗಿದ್ದು ಒಂದು ಪರಿಕಲ್ಪನೆಯ ಮೂಸೆಯಿಂದ.
ಏನನ್ನಾದರೂ ಮಾಡಬಹುದು ಎಂಬ ನಿಚ್ಚಳವಾದ ಅಭಿಪ್ರಾಯ ಮೂಡಿದ್ದರಿಂದ ಇವೆಲ್ಲವೂ ಅಸ್ತಿತ್ವಕ್ಕೆ ಬಂದವು. ತಂತ್ರಜ್ಞಾನದ ಸ್ಥಾಪನೆಗೆ ಕೋಟಿಗಟ್ಟಲೆ ದುಡ್ಡಾಗಲೀ, ಎಕರೆಗಟ್ಟಲೆ ಜಮೀನಾಗಲೀ ಬೇಕಿಲ್ಲ. ಆವಿಷ್ಕಾರವನ್ನು ಹುಟ್ಟು ಹಾಕಬಲ್ಲ ಉದ್ಯಮದ ಪರಿಕಲ್ಪನೆ ನಿಮ್ಮ ಮಿದುಳಿನಲ್ಲಿ ಅಂತರ್ಗತವಾಗಿಇದ್ದರೆ ಸಾಕು. ನಿಮ್ಮ ಕಲ್ಪನೆ, ಕನಸಿಗೆ ಕಾವು ಕೊಡುವ, ಅವನ್ನು ಸಾಕಾರಗೊಳಿಸುವ ಪರಿಶ್ರಮ, ಶ್ರದ್ಧೆ, ಕಾಳಜಿ ನಿಮ್ಮಲ್ಲಿ ಇರಬೇಕು. ಎಲ್ಲವೂ ಹಣದಿಂದಲೇ ಆಗುವುದಿಲ್ಲ ಎಂಬುದೂ ಗೊತ್ತಿರಬೇಕು. ಪ್ರತಿ ಉದ್ಯಮಕ್ಕೂ ಹಣ ಬೇಕೇ ಬೇಕು. ಆದರೆ ಹಣ ನಿಮ್ಮ ಕಲ್ಪನೆ ಸಾಕಾರಕ್ಕೆ ನೆರವಾಗಬೇಕು. ಹಣದ ಜತೆಕಲ್ಪನೆ, ಕನಸು ಇನ್ನೂ ಮುಖ್ಯ. ಆಗ ಯಾವುದೇ ಉದ್ಯಮವಾದರೂ ಯಶಸ್ಸಿನತ್ತ ಮುಖ ಮಾಡುತ್ತದೆ. ಈ ಮಾತನ್ನು ರತನ್ ಟಾಟಾ ಅವರಂಥವರು ಹೇಳಿದರೆಮಾತ್ರ ಅದಕ್ಕೆ ಹೆಚ್ಚು ಅರ್ಥ ಮತ್ತು ಮಹತ್ವ.
ಹೀಗೊಂದು ತಮಾಷೆಯ ಪ್ರಸಂಗವಾಟ್ಸಾಪ್ ನಲ್ಲಿ ಹರಿದು ಬಂದ ಒಂದು ತಮಾಷೆಯ ಪ್ರಸಂಗ. ನಮ್ಮ ದೇಶದ ಎರಡು ಪ್ರಮುಖ ವ್ಯಾಪಾರಿ ಸಮೂದಾಯವಾದ ಮಾರವಾಡಿ ಮತ್ತು ಸಿಂಧಿಗಳಿಗೆ ಸಂಬಂಧಿಸಿದ್ದು. ಇದನ್ನು ಒಂದು ಲಘು ತಮಾಷೆಯಾಗಿಯಷ್ಟೇ ಸ್ವೀಕರಿಸೋಣ. ಸೇಠಜೀ (ಮಾರವಾಡಿ) ಮತ್ತು ಸಿಂಧಿಗಳ ಬದಲು ಕೋಲ್ಯ ಮತ್ತು ಕೇಮು ಎಂಬ ಪಾತ್ರಗಳ ಮೂಲಕ ಹೇಳಬಹುದಿತ್ತು.
ಮಾರವಾಡಿ ಮತ್ತು ಸಿಂಧಿ ಎಂದು ಬಳಸಿದ್ದಕ್ಕೆ, ಇದರಲ್ಲಿ ಜಾತಿ, ಬದನೇಕಾಯಿ, ಬೊಜ್ಜ ಅಂತ ಕಾದಾಟಕ್ಕೆ ನಿಲ್ಲುವುದು ಬೇಡ. ತಮಾಷೆಯಾಗಿಯಷ್ಟೇ ನೋಡೋಣ. ಒಮ್ಮೆ ಸಿಂಧಿ, ಸೇಠಜೀಯಿಂದ ಒಂದು ಬಾವಿಯನ್ನು ಖರೀದಿಸಿದ. ಮರುದಿನ ಮಾರುಕಟ್ಟೆಗೆ ಹೋಗುವಾಗ ಸಿಂಧಿಗೆ, ಮಾರವಾಡಿ ಸಿಕ್ಕಿದ. ಅವರಿಬ್ಬರ ನಡುವಿನ ಮಾತುಕತೆ.
ಸೇಠಜೀ – ‘ನಾನು ನಿಮಗೆ ನಿನ್ನೆ ಮಾರಾಟ ಮಾಡಿದ್ದು ಕೇವಲ ಬಾವಿಯನ್ನು, ಹೊರತು ಅದರಲ್ಲಿರುವ ನೀರನ್ನಲ್ಲ ಎಂಬುದು ನಿಮಗೆ ಗೊತ್ತಿರಲಿ.’
ಸಿಂಧಿ – ‘ನಾನೇ ಇಂದು ಬೆಳಗ್ಗೆ ನಿಮ್ಮನ್ನು ಭೇಟಿ ಮಾಡಬೇಕು ಅಂತ ಯೋಚಿಸುತ್ತಿದ್ದೆ. ನೀವು ಸಿಕ್ಕಿದ್ದು ಒಳ್ಳೆಯದೇ ಆಯಿತು. ನೀವು ಆದಷ್ಟು ಬೇಗ ಬಾವಿಯಲ್ಲಿರುವ ನೀರನ್ನು ಖಾಲಿ ಮಾಡಿ. ಇಲ್ಲದಿದ್ದರೆ ಬಾವಿಯಲ್ಲಿ ನೀರನ್ನು ಇಟ್ಟುಕೊಂಡಿದ್ದಕ್ಕೆ ನಾಳೆಯಿಂದ ನೀವು ಬಾಡಿಗೆ ಕೊಡಬೇಕಾಗುತ್ತದೆ.’