ಪುಣ್ಯೋ ಗಂಧಃ ಪೃಥಿವ್ಯಾಂ ಚ… ಇದೇ ಮಣ್ಣಿನ ಪರಿಮಳ
ತಿಳಿರುತೋರಣ
ಶ್ರೀವತ್ಸ ಜೋಶಿ
@.
ಅಣುರೇಣುವಿನಲ್ಲೂ ಭಗವಂತನಿರುತ್ತಾನೆ ತಾನೆ? ಹಾಗಾದರೆ ಆಕ್ಟಿನೊಮೈಸಿಟಿಸ್ ಬ್ಯಾಕ್ಟೀರಿಯಾದಲ್ಲೂ ಇರುತ್ತಾ ನೆಂದಾಯಿತು. ಆ ಬ್ಯಾಕ್ಟೀರಿಯಾದಿಂದ ಬರುವ ಪರಿಮಳವೂ ಭಗವಂತನೇ. ‘ಪುಣ್ಯೋ ಗಂಧಃ ಪೃಥಿವ್ಯಾಂ…’ ಅಂದರೆ ಮಣ್ಣಿನ ಪರಿಮಳವೇ. ಅರ್ಥಾತ್ ಭೂಮಿಯ ಪರಿಮಳವೇ!
ಅಣು ರೇಣು ತೃಣ ಕಾಷ್ಠ ಎಲ್ಲದರಲ್ಲೂ ಭಗವಂತನನ್ನು ಕಾಣುವ, ಭಗವಂತನ ಸ್ವರೂಪವಾದ ಅವೆಲ್ಲವನ್ನೂ ಆರಾಧಿಸುವ ಮಾನಸಿಕತೆ ನಮ್ಮದು. ಮಾನಸಿಕತೆಯೇನು, ಅದೇ ನಮ್ಮ ನಂಬಿಕೆ. ಅದೇ ನಮ್ಮ ಸನಾತನ ಸಂಸ್ಕೃತಿಯ ಹಿರಿಮೆ-ಗರಿಮೆ ಕೂಡ. ವಿಷ್ಣು ಎಂಬ ಹೆಸರು ಬಂದದ್ದೇ ವಿಷತಿ = ಪ್ರವೇಶಿಸುವನು ಎಂಬ ಅರ್ಥದಲ್ಲಿ. ಯಾರು ಎಲ್ಲರ/ ಎಲ್ಲದರ ಒಳಗೆ ಪ್ರವೇಶಿಸ ಬಲ್ಲನೋ ಅವನೇ ವಿಷ್ಣು.
‘ಸಜೀವ ನಿರ್ಜೀವ ವಸ್ತುಗಳೆಲ್ಲದರಲ್ಲೂ ನಾನಿದ್ದೇನೆ. ಅವೆಲ್ಲವೂ ನನ್ನಿಂದಲೇ ಆಗಿವೆ. ದಾರದಲ್ಲಿ ಮಣಿಗಳನ್ನು ಪೋಣಿಸಿದಂತೆ ಎಲ್ಲವನ್ನೂ ವ್ಯವಸ್ಥಿತವಾಗಿಟ್ಟಿದ್ದೇನೆ’ ಎಂದು ಕೃಷ್ಣ ಪರಮಾತ್ಮನೇ ಹೇಳಿಕೊಂಡಿರುವ ಶ್ಲೋಕಗಳು ಬರುತ್ತವೆ ಭಗವದ್ಗೀತೆ ಯಲ್ಲಿ. ಗೀತಾ ಪರಿವಾರದ ಆನ್‌ಲೈನ್ ಭಗವದ್ಗೀತೆ ಕಲಿಕೆ ತರಗತಿಯಲ್ಲಿ ಮೊನ್ನೆಯಿಂದ ಏಳನೆಯ ಅಧ್ಯಾಯ (ಜ್ಞಾನವಿಜ್ಞಾನ ಯೋಗ)ಆರಂಭವಾಗಿದೆ.
ಅದರಲ್ಲಿ ಒಂಬತ್ತನೆಯ ಶ್ಲೋಕವನ್ನು, ಅದರಲ್ಲೂ ಮೊದಲನೆಯ ಚರಣವನ್ನು ಓದುತ್ತಿದ್ದಂತೆ ನನಗೆ ಥಟ್ಟಂತ ಏನೋ ಒಂದು ವಿಚಾರ ಹೊಳೆಯಿತು. ಅದೊಂಥರದ ತರ್ಕ ಎಂದರೂ ಸರಿಯೇ. ‘ಯುರೇಕಾ!’ ಕ್ಷಣ ಎಂಬಂತೆ ಹೊಳೆದ ಆಲೋಚನೆ ಎಂದರೂ ಸರಿಯೇ. ಆರ್ಕಿಮಿಡಿಸ್‌ನಂತೆ ಬೆತ್ತಲೆಯಾಗಿ ಬೀದಿಯಲ್ಲಿ ಓಡಿಹೋಗಿಲ್ಲ ಅಷ್ಟೇ.
ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ|
ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು||ಎಂದು ಇರುವುದು ಆ ಶ್ಲೋಕ. ‘ಭೂಮಿಯ ಮೂಲ
ಪರಿಮಳವು ನಾನು; ಅಗ್ನಿಯಲ್ಲಿರುವ ತೇಜಸ್ಸು ಕೂಡ ನಾನೇ. ಎಲ್ಲ ಜೀವಿಗಳಲ್ಲಿರುವ ಜೀವ ನಾನು; ಎಲ್ಲ ತಪಸ್ವಿಗಳ ತಪಸ್ಸೂನಾನೇ’ – ಇದು ಶ್ಲೋಕದ ಅರ್ಥಾನುವಾದ. ಅದಕ್ಕಿಂತ ಹಿಂದಿನ ಅಂದರೆ ಎಂಟನೆಯ ಶ್ಲೋಕದಲ್ಲೂ ಕೃಷ್ಣ ಪರಮಾತ್ಮ ‘ನಾನುನೀರಿನಲ್ಲಿ ರುಚಿಯೂ, ಸೂರ್ಯಚಂದ್ರರಲ್ಲಿ ಬೆಳಕೂ, ವೇದದ ಮಂತ್ರಗಳಲ್ಲಿ ಓಂಕಾರವೂ ಆಗಿದ್ದೇನೆ. ನಾನು ಆಕಾಶದಲ್ಲಿಶಬ್ದವೂ, ಮನುಷ್ಯರಲ್ಲಿ ಪೌರುಷವೂ ಆಗಿದ್ದೇನೆ’ ಅಂತೆಲ್ಲ ಹೇಳುತ್ತಾನೆ.
ಅದೇ, ಭಗವಂತ ಸರ್ವಾಂತರ್ಯಾಮಿ ಆಗಿರುತ್ತಾನೆ ಎಂಬ ತತ್ತ್ವ . ಆದರೆ ನನ್ನ ಗಮನವನ್ನು ತೀವ್ರವಾಗಿ ಸೆಳೆದದ್ದು ‘ಪುಣ್ಯೋ ಗಂಧಃ ಪೃಥಿವ್ಯಾಂ ಚ’ ಭಾಗ. ‘ಭೂಮಿಯ ಮೂಲ ಪರಿಮಳವು ನಾನು’ ಎಂಬ ಭಗವಂತನ ಹೇಳಿಕೆ. ಪೃಥಿವೀ ಅಂದರೆ ಭೂಮಿ, ಗಂಧ ಅಂದರೆ ಪರಿಮಳ ಅಂತ ಗೊತ್ತು. ಪುಣ್ಯ ಗಂಧ ಅಂದರೆ? ಇಲ್ಲಿ ಪುಣ್ಯ ಪದಕ್ಕೆ ಪರಿಶುದ್ಧವಾದ, ಪವಿತ್ರವಾದ, ಸುಂದರವಾದ, ಮೂಲ ರೂಪದ, ಯಾವುದೇ ರೀತಿಯ ಕೊಳೆಯನ್ನು ತಾಗಿಸಿಕೊಳ್ಳದ ಮುಂತಾದ ಅರ್ಥಗಳು. ಈ ಭೂಮಿಯಲ್ಲಿ ಹುಟ್ಟುವ ಗಿಡಬಳ್ಳಿಗಳು, ವನಸ್ಪತಿಗಳು, ಬಗೆಬಗೆಯ ಹೂವುಗಳು, ಹಣ್ಣುಗಳು… ಎಲ್ಲವುಗಳಿಗೂ ಒಂದೊಂದು ತೆರನಾದ ಕಂಪುಇದ್ದೇ ಇರುತ್ತದೆಯಷ್ಟೆ? ಭಗವಂತ ‘ಪುಣ್ಯ ಗಂಧ’ ಎಂದು ಹೇಳಿದ್ದು ಈ ಕಂಪುಗಳ ಬಗ್ಗೆಯೇ?
‘ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ವಸ್ತುವಿಗೆ ಸುಗಂಧ ಕೊಟ್ಟವನು ಪುಣ್ಯ ನಾಮಕ ಭಗವಂತ. ಆತ ತನ್ನ ವಿಶೇಷ ರೂಪದಲ್ಲಿ ಗಂಧ ನಾಮಕನಾಗಿ ಆ ವಸ್ತುವಿನಲ್ಲಿ ಸೇರಿಕೊಂಡಿರುವುದರಿಂದ ವಸ್ತುವಿಗೆ ಒಂದು ವಿಶೇಷ ಗುಣ ಬರುತ್ತದೆ. ನೆಲ ಎಲ್ಲದಕ್ಕೂ ನೆಲೆ. ಭಗವಂತ ನೆಲದಲ್ಲಿ ನೆಲೆ ನಿಂತಿರುವುದರಿಂದ ನೆಲದಲ್ಲಿ ಮೂಡಿಬರುವ ಪ್ರತಿಯೊಂದು ವಸ್ತುವೂ ಒಂದೊಂದು ಬಗೆಯ ವಿಶಿಷ್ಟ ಸುಗಂಧವನ್ನು ಹೊತ್ತು ತರುತ್ತದೆ.
ಭಗವಂತ ತನ್ನ ಸೃಷ್ಟಿಯಲ್ಲಿ ಸೌಂದರ್ಯಭರಿತ ವಿಶಿಷ್ಟ ಗಂಧದ ಪ್ರಪಂಚವನ್ನೇ ನಮ್ಮ ಮೂಗಿನ ಮುಂದೆ ತೆರೆದಿಡುತ್ತಾನೆ. ಬರೀ ಹೂವುಗಳನ್ನಷ್ಟೇ ಪರಿಗಣಿಸಿದರೂ-ಒಂದು ಹೂವಿನ ಪರಿಮಳ ಇನ್ನೊಂದಕ್ಕಿಂತ ಭಿನ್ನ. ಎಲ್ಲ ಹೂಗಿಡಗಳೂ ಒಂದೇ ಮಣ್ಣಿನಿಂದ ಬೆಳೆಯುವುದಾದರೂ ಭಗವಂತ ಒಂದೊಂದು ವಿಧದ ಹೂವಿನಲ್ಲಿ ಒಂದೊಂದು ವಿಶಿಷ್ಟ ಪರಿಮಳವನ್ನು ತುಂಬಿ ದ್ದಾನೆ. ಕೆಲವು ಹೂವುಗಳಲ್ಲಿ ನಾವು ಗುರುತಿಸಲು ಸಾಧ್ಯವಾಗುವ ಸುವಾಸನೆ ಇರುವುದಿಲ್ಲ.
ಸಾಮಾನ್ಯವಾಗಿ ಅಂತಹ ಹೂವುಗಳನ್ನು ನಾವು ಪೂಜೆಯಲ್ಲಿ ದೇವರಿಗೆ ಅರ್ಪಿಸುವುದಿಲ್ಲ. ಇದಕ್ಕೆ ಕಾರಣ ದೇವರ ಪೂಜೆಯಪ್ರತಿಯೊಂದು ಕ್ರಿಯೆಯೂ ಆನಂದಮಯವಾಗಿ ಇರಬೇಕು ಎನ್ನುವ ಭಾವನೆ. ಪೂಜೆ ಮಾಡುವಾಗ ಆ ಹೂವಿನ ಆಹ್ಲಾದಕರಕಂಪು ಮೂಗಿಗೆ ಬಡಿದಾಗ ನಮಗೆ ‘ಪುಣ್ಯ’ ಅಥವಾ ‘ಗಂಧ’ ನಾಮಕ ಭಗವಂತನ ಅರಿವು ಮೂಡಬೇಕು.’ – ಈ ಬಗೆಯ ವಿವರಣೆ ಯನ್ನು ‘ಪುಣ್ಯೋ ಗಂಧಃ ಪೃಥಿವ್ಯಾಂ ಚ…’ ಶ್ಲೋಕಭಾಗಕ್ಕೆ ಕೊಟ್ಟಿರುವುದನ್ನು ನಾನು ಅಲ್ಲಿ ಇಲ್ಲಿ ಓದಿದ್ದೇನೆ.
ಈ ವಿವರಣೆಯೇನೋ ಚೆನ್ನಾಗಿಯೇ ಇದೆ. ಇದರ ಬಗ್ಗೆ ನನ್ನ ತಕರಾರೇನಿಲ್ಲ. ಅಥವಾ ಇದಕ್ಕಿಂತ ಒಳ್ಳೆಯದಾದ ವಿವರಣೆಕೊಡಲಿಕ್ಕೆ ನಾನಾವ ಮಹಾeನಿಯೂ ಅಲ್ಲ. ಆದರೆ ನನ್ನ ಜಿಜ್ಞಾಸೆಯೇನೆಂದರೆ ‘ಪುಣ್ಯೋ ಗಂಧಃ ಪೃಥಿವ್ಯಾಂ…’ ಎಂದು ಕೃಷ್ಣ ಪರಮಾತ್ಮ ಹೇಳಿದ್ದು ಭೂಮಿಯ ಮೇಲಿನ ವಿಧವಿಧದ ಪುಷ್ಪ-ಪತ್ರ-ಫಲಗಳ ಸುಗಂಧದ ಬಗ್ಗೆಯೋ ಅಥವಾ ಭೂಮಿಗೇ ಒಂದು ತನ್ನದೇ ಆದ ವಿಶಿಷ್ಟ ಪರಿಮಳ ಇರುತ್ತದಲ್ಲ, ಆ ಪರಿಮಳದ ಬಗ್ಗೆಯೋ? ಭಗವಂತ ಸರ್ವಾಂತರ್ಯಾಮಿ ಎಂಬುದನ್ನು ನಾವು ಒಪ್ಪುತ್ತೇವಾದ್ದರಿಂದ ಭೂಮಿಯ ಮೇಲಿನ ವಿವಿಧ ವಸ್ತುಗಳ ಸುಗಂಧವು ಆ ಭಗವಂತನೇ ಎಂದು ಅರ್ಥ ಮಾಡಿಕೊಳ್ಳುವುದು ಸುಲಭವೇ ಇದೆ. ಆದರೆ ಭೂಮಿಯನ್ನೂ ನಾವು ದೇವರೆಂದೇ ಪರಿಗಣಿಸುತ್ತೇವೆ.
‘ವಿಷ್ಣುಪತ್ನೀ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ’ ಎಂದು ದಿನಾ ಬೆಳಗ್ಗೆ ಕ್ಷಮಾಪಣೆ ಕೇಳಿಯೇ ಭೂಮಿಯ ಮೇಲೆ ಕಾಲೂ ರುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಷ್ಟೇ ಅಲ್ಲ, ಗ್ರೀಕ್ ದೇವತೆ ‘ಗಾಯ್ಯಾ’ ಅಂದರೆ ಭೂದೇವಿಯೇ. ರೋಮನ್ ದೇವತೆ ‘ಟೆಲ್ಲಸ್’ (ಅಥವಾ ‘ಟೆರ್ರಾ’) ಅಂದರೂ ಭೂದೇವಿಯೇ. ಭೂಮಿಯನ್ನು ಮಾತೃದೇವತೆ ಎಂದು ಪರಿಗಣಿಸುವುದು ಪ್ರಪಂಚ ದೆಲ್ಲೆಡೆಯೂ ಇದೆ. ಅಂದಮೇಲೆ ‘ಪುಣ್ಯೋ ಗಂಧಃ ಪೃಥಿವ್ಯಾಂ…’ ಎಂದು ಕೃಷ್ಣ ಪರಮಾತ್ಮ ಹೇಳಿದ್ದು ಭೂಮಿಗೇ ಇರುವ ವಿಶಿಷ್ಟ ಪರಿಮಳದ ಬಗ್ಗೆಯೇ ಏಕಿರಬಾರದು? ‘ಯುರೇಕಾ!’ ಎಂದು ನನಗೆ ಅನಿಸಲಿಕ್ಕೆ ಕಾರಣ ಹಿಂದೊಮ್ಮೆ ವಿಚಿತ್ರಾನ್ನ ಅಂಕಣದಲ್ಲಿ ನಾನು ಬರೆದಿದ್ದ ‘ಮಣ್ಣಿನ ವಾಸನೆಯ ಹಿತಾನುಭವ’ ಲೇಖನದ ನೆನಪು.
ಹದಿನೇಳು ವರ್ಷಗಳ ಹಿಂದೆ ಅದನ್ನು ಬರೆದಿದ್ದಾಗ, ದೇವರಾಣೆಗೂ ನಾನು ಭಗವದ್ಗೀತೆಯ ಶ್ಲೋಕಗಳನ್ನು ಕಲಿತಿರಲಿಲ್ಲ. ಭಗವದ್ಗೀತೆಯ ಪುಸ್ತಕ ತೆರೆದು ಓದತೊಡಗಿದ್ದಿರಬಹುದಾದರೂ ಧೃತರಾಷ್ಟ್ರ ಉವಾಚ…ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ|ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ||
ಅಥವಾ ಹೆಚ್ಚೆಂದರೆ ಇನ್ನೊಂದೆರಡು ಶ್ಲೋಕಗಳನ್ನು ದಾಟಿ ಮುಂದೆ ಸಾಗಿದ್ದೇ ಇಲ್ಲ. ಆದರೆ ಈಗ, ಏಳನೆಯ ಅಧ್ಯಾಯದಒಂಬತ್ತನೆಯ ಶ್ಲೋಕದ ಮೊದಲ ಒಂದು ಚರಣ ಓದಿದೊಡನೆಯೇ ‘ಓಹೋ! ಹಾಗಿದ್ದರೆ ಇದೇ ಅದು!’ ಎಂದು ಕನೆಕ್ಟ್ ಮಾಡು ವುದಕ್ಕೆ ಸಾಧ್ಯವಾಗುತ್ತಿದೆ. ಅಸ್ಪಷ್ಟವಾದರೂ ಒಂದಿಷ್ಟು ತಿಳಿವಳಿಕೆಯ ಹೊಳಹುಗಳು ಕಾಣಿಸುತ್ತಿವೆ.
ಇದು ತೀರ ಅಸಂಬದ್ಧ ವಿಚಾರಲಹರಿ ಇರಲಿಕ್ಕಿಲ್ಲ ಎಂದು ನನ್ನ ಅಂಬೋಣ. ಯಾವುದಕ್ಕೂ ಆ ಲೇಖನದ ಕೆಲ ಮುಖ್ಯಾಂಶ ಗಳನ್ನು ಇಲ್ಲಿ ನಿಮ್ಮ ಓದಿಗಾಗಿ ದಾಖಲಿಸುತ್ತೇನೆ. ‘ಪುಣ್ಯೋ ಗಂಧಃ ಪೃಥಿವ್ಯಾಂ…’ ಬಗೆಗೆ ನನ್ನ ತರ್ಕದಲ್ಲಿ ತೂಕವಿದೆಯೇ, ಸಮಂಜಸವಾಗಿದೆಯೇ ಎಂದು ನೀವೂ ನಿರ್ಧರಿಸುವುದಕ್ಕಾಗುತ್ತದೆ.
 (ಉಚ್ಚರಿಸುವ ರೀತಿ ‘ಪೆಟ್ರಿಕರ್’) ಎಂಬ ಪದದ ಅರ್ಥ ನಮ್ಮಲ್ಲಿ ಬಹುಮಂದಿಗೆ ಗೊತ್ತಿಲ್ಲದಿರುವ ಸಾಧ್ಯತೆಯೇ ಹೆಚ್ಚು. ಅಂಥದೊಂದು ಪದದೊಡನೆ ನಮ್ಮ ಮುಖಾಮುಖಿಯಾಗಿರುವ ಸಂಭವನೀಯತೆ ಕಡಿಮೆ. ಮೇಲಾಗಿ ಸದ್ರಿ ಪದವು ಸುಮಾರು 40 ವರ್ಷಗಳಿಂದೀಚೆಗಷ್ಟೇ ಇಂಗ್ಲಿಷ್ ಭಾಷೆಯಲ್ಲಿ ಸೇರಿಕೊಂಡಿರುವುದು. ಆದ್ದರಿಂದ ಇಂಗ್ಲಿಷ್ ಮಾತೃಭಾಷೆ ಯಾಗುಳ್ಳವರಿಗೂ ಈ ಪದದ ಪರಿಚಯ ಇರುತ್ತದೆಂದು ಹೇಳಲಿಕ್ಕಾಗದು. ಅಷ್ಟಾಗಿ, ಪೆಟ್ರಿಕರ್ ಎಂಬ ಪದವನ್ನು ಇದುವರೆಗೂ ನಾವು-ನೀವು ಕೇಳಿರಲಿಕ್ಕಿಲ್ಲವಾದರೂ ಅದು ಏನನ್ನು ಪ್ರತಿನಿಧಿಸುತ್ತದೆಯೋ ಆ ಹಿತಾನುಭವವನ್ನು ಮಾತ್ರ ನಾವೆಲ್ಲರೂ ಅನು ಭವಿಸಿಯೇ ಇದ್ದೇವೆ; ಪ್ರತಿಬಾರಿ ಅನುಭವಿಸಿದಾಗಲೂ ದಿವ್ಯಾನಂದವನ್ನು ಹೊಂದಿಯೂ ಇದ್ದೇವೆ.
 ಮತ್ತು  ಎಂಬೆರಡು ಗ್ರೀಕ್ ಪದಗಳ ಸಂಗಮದಿಂದ ಆಗಿರುವ ಪದವೇ . ಅದರಲ್ಲಿ  ಪೂರ್ವಾ ರ್ಧದ ಪೆಟ್ರೋಸ್ ಪದದ ಅರ್ಥ ಶಿಲೆ ಅಥವಾ ಕಲ್ಲು ಎಂದು (ಆದ್ದರಿಂದಲೇ ಪೆಟ್ರೋಲ್ ಅಂದರೆ ಕಲ್ಲೆಣ್ಣೆ). ಉತ್ತರಾರ್ಧದ ಪದ ಐಕರ್ ತುಂಬ ಸ್ವಾರಸ್ಯದ್ದು. ಈ ಪದದ ಅರ್ಥ, ಗ್ರೀಕ್ ದೇವತೆಗಳ ಧಮನಿಗಳಲ್ಲಿ ಹರಿಯುತ್ತಿರುತ್ತದೆಯೆಂದು ನಂಬಲಾಗಿರುವ ಮತ್ತು ಅದರಿಂದ ಆ ದೇವತೆಗಳಿಗೆ ಅತಿ ವಿಶಿಷ್ಟ ಪರಮದೈವಿಕ ಪರಿಮಳ ಇರುತ್ತದೆಯೆಂದು ತಿಳಿದಿರಲಾಗಿರುವ ದ್ರವ. ಈ ಎರಡು ಗ್ರೀಕ್ ಪದಗಳನ್ನು ಕಸಿ ಕಟ್ಟಿ ಇಂಗ್ಲಿಷ್ ಭಾಷೆಗೊಂದು ಪದವನ್ನು ಸೇರಿಸಿದವರು ಆಸ್ಟ್ರೇಲಿಯಾದ ಐ.ಜೆ.ಬೇರ್ ಮತ್ತು ಆರ್.ಜಿ. ಥೋಮಸ್ ಎಂಬ ಸಂಶೋಧಕರು.
ಹಾಗಂತ ಅವರಿಬ್ಬರೇನೂ ಭಾಷಾಶಾಸ್ತ್ರಜ್ಞರಲ್ಲ, ಮಾನವ ಇತಿಹಾಸಜ್ಞರೂ ಅಲ್ಲ. ಪ್ರಕೃತಿ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋ ಧನೆಗಳಷ್ಟೇ ಅವರ ವೃತ್ತಿ ಮತ್ತು ಪ್ರವೃತ್ತಿ. ಪ್ರಕೃತಿಯಲ್ಲಿ ಗಮನಿಸಿದ ಯಾವುದೋ ಒಂದು ಅದ್ಭುತ ಪ್ರಕ್ರಿಯೆಯನ್ನು ಬಣ್ಣಿಸ ಲಿಕ್ಕೆ ಅವರು ಇಂಥದೊಂದು ಪದವನ್ನು ಟಂಕಿಸಿದ್ದಾರೆ.
ಆ ಅದ್ಭುತ ಪ್ರಕ್ರಿಯೆ ಯಾವುದೆಂದರೆ- ಒಣಗಿದ ಭೂಮಿಯ ಮೇಲೆ ಮೊದಲ ಮಳೆಯ ತುಂತುರು ಹನಿಗಳು ಉದುರಿದಾಗ ಆ ಮುತ್ತುಗಳಿಂದಾಗಿ ಮತ್ತೇರತೊಡಗಿದ ಭೂದೇವಿಯು ಒಂದು ಅನಿರ್ವಚನೀಯ ಪರಿಮಳವನ್ನು ಹೊರಸೂಸುವುದು. ಅದನ್ನು ಬಣ್ಣಿಸಲಿಕ್ಕೇ ಆ ವಿಜ್ಞಾನಿಗಳು ಪೆಟ್ರಿಕರ್ ಎಂಬ ಪದವನ್ನು ಹುಟ್ಟುಹಾಕಿದ್ದಾರೆ. ಕಲ್ಲುಮಣ್ಣುಗಳಿಂದ ಹೊರಡುವ ಆ ಪರಿಮಳಕ್ಕೆ, ಗ್ರೀಕ್ ದೇವತೆಗಳ ಧಮನಿಗಳ ದ್ರವದ ದಿವ್ಯತೆಯನ್ನು ಕೊಟ್ಟ ಬೇರ್ ಮತ್ತು ಥೋಮಸ್1964ರಲ್ಲಿ ‘ನೇಚರ್’ ಪತ್ರಿಕೆಯಲ್ಲಿ ಜಂಟಿಯಾಗಿ ಮಂಡಿಸಿದ ಒಂದು ಪ್ರಬಂಧದಲ್ಲಿ ಮೊದಲ ಬಾರಿಗೆ ಪೆಟ್ರಿಕರ್ ಪದವನ್ನು ಬಳಸಿದರು.
ಮೊದಲ ಮಳೆಯ ಮಣ್ಣಿನ ವಾಸನೆಯ ಬಣ್ಣನೆಗೆ ಬಳಕೆಯಾದ ಪೆಟ್ರಿಕರ್ ಕ್ರಮೇಣ ಒಂದು ಉಪಮೆಯಾಗಿ, ಒಂದು ರೂಪಕ ವಾಗಿ ಇಂಗ್ಲಿಷ್ ಸಾಹಿತ್ಯದಲ್ಲಿ ಕಾಣಿಸಿಕೊಳ್ಳತೊಡಗಿತು. ಸಾಹಿತ್ಯ ವಿಮರ್ಶೆಗಳಲ್ಲೂ, ಉದಾ: `,     ,                        .’ ಮುಂತಾದೆಡೆಗಳಲ್ಲಿ, ಬಳಕೆಯಾಯಿತು.
ಈಗೊಮ್ಮೆ ನೀವು ನೆನಪಿಸಿಕೊಳ್ಳಿ ಮೊದಲ ಮಳೆ ತರುವ ‘ಮಣ್ಣಿನ ಪರಿಮಳ’ವನ್ನು. ಚಾತಕಪಕ್ಷಿಯಂತೆ ಸಕಲ ಜೀವರಾಶಿಯೆಲ್ಲ ಮಳೆಗಾಗಿ ಕಾಯುತ್ತ ಕಾಯುತ್ತ (ನಿಜವಾಗಿಯೂ ‘ಕಾಯುತ್ತ’) ಇರುವಾಗ ಇಗೋ ಬಂದೇ ಬಿಟ್ಟೆ ಎಂದು ಸುರಿಯತೊಡಗುವ ಹನಿಗಳು ಎಬ್ಬಿಸುವ ಮಣ್ಣಿನ ಸುವಾಸನೆಯನ್ನು. ಆ ನೆನಪಿನೊಂದಿಗೇ ಬರುವ ಇತರ ದೃಶ್ಯಾವಳಿಯ ಮೆರವಣಿಗೆಯನ್ನು- ಒಣಗಲು ಹಾಕಿರುವ ಬಟ್ಟೆಗಳು, ಟೆರೇಸ್ ಮೇಲಿನ ಹಪ್ಪಳ-ಸಂಡಿಗೆಗಳನ್ನೆಲ್ಲ ಒಳತರುವ ಧಾವಂತದಿಂದ ಹಿಡಿದು, ತಟಪಟ ಹನಿಯಪ್ಪ… ಬಾಯಲಿ ಉದುರಪ್ಪ… ಎನ್ನುತ್ತ ಕುಣಿಯುವ ಮಕ್ಕಳ ಕೇಕೆಯವರೆಗೆ, ಅದರ ಮಧ್ಯೆಯೂ ಪ್ರಥಮ ವರ್ಷಾ ಗಮನದ ಹರ್ಷೋಲ್ಲಾಸವನ್ನು. ಅನುಭವಿಸಿ ಆನಂದಿಸಿಲ್ಲವೇ ನಾವೆಲ್ಲ ಇದನ್ನು? ವಿಪರ್ಯಾಸವೆಂದರೆ ಆ ಅದ್ಭುತ ಪ್ರಕ್ರಿಯೆ ಯನ್ನು ಬಣ್ಣಿಸಲಿಕ್ಕೆ, ಆ ದಿವ್ಯಾನುಭವವನ್ನು ಅಕ್ಷರಗಳಲ್ಲಿ ಮೂಡಿಸಲಿಕ್ಕೆ ನಮ್ಮ ಕನ್ನಡ ಭಾಷೆಯಲ್ಲಿ ಸೂಕ್ತವಾದ ಪದವಿಲ್ಲ.
ಅದೇನೂ ಚಿಂತೆಯ ವಿಷಯವಲ್ಲ ಬಿಡಿ. ಕೆಲವೊಂದು ಅನುಭವಗಳು ಅನಿರ್ವಚನೀಯ ಎನಿಸುವುದು ಅದಕ್ಕೇ ಅಲ್ಲವೆ?ಹಾಗೆ ನೋಡಿದರೆ ಕನ್ನಡದ ಸೋದರಭಾಷೆಯಾದ ತೆಲುಗಿನಲ್ಲಿ, ಪ್ರಕೃತಿಯ ಈ ಪ್ರಕ್ರಿಯೆ-ಪ್ರತಿಕ್ರಿಯೆಗೆ ಒಂದು ಸುಂದರವಾದ ಪದವಿದೆ, ‘ತೊಲಕರಿ’ ಎಂದು. ತೆಲುಗು ಸಾಹಿತ್ಯ ಪ್ರಕಾರಗಳಲ್ಲಿ, ಪ್ರೇಮಕಾವ್ಯಗಳಲ್ಲಿ, ಅದೆಷ್ಟೋ ಚಿತ್ರಗೀತೆಗಳಲ್ಲಿ ಸಹ ತೊಲಕರಿ ಶಬ್ದದ ಬಳಕೆ ಸರ್ವೇಸಾಮಾನ್ಯವಾಗಿದೆ. ತೊಲಕರಿ ಮೆರುಪುಲು, ತೊಲಕರಿ ಚಿನುಕುಲು, ತೊಲಕರಿ ಜಲ್ಲಲು… ಹೀಗೆ ಮೊದಲ ಮಳೆಯನ್ನು, ಅದು ಹೊತ್ತು ತರುವ ಮಣ್ಣಿನ ವಾಸನೆಯನ್ನು ಮತ್ತದರ ಹಿತಾನುಭವವನ್ನು ತೆಲುಗು ಕವಿಗಳು, ಸಾಹಿತಿಗಳು ಬಹಳ ರಮ್ಯವಾಗಿ ಸೆರೆಹಿಡಿದಿದ್ದಾರೆ.
ಸಾಹಿತ್ಯಿಕ ಅಭಿರುಚಿಯ ತೆಲುಗು ಸ್ನೇಹಿತರಾರಾದರೂ ನಿಮಗಿದ್ದರೆ ಅವರ ಬಳಿ ತೊಲಕರಿ ಬಗ್ಗೆ ಪ್ರಸ್ತಾಪಿಸಿ ನೋಡಿ, ಪುಳಕದಿಂದ ವಿವರಿಸುತ್ತಾರೆ! ಅದು ಸಹಜ ಕೂಡ. ಎಷ್ಟೆಂದರೂ ಅಕ್ಷರಗಳನ್ನು ಜೋಡಿಸಿ ಉಂಟಾದ ಒಂದು ಪದಕ್ಕೆ ನಿಜವಾದ ಸೌಂದರ್ಯ ಬರುವುದು ಅರ್ಥದಿಂದ. ಆ ಅರ್ಥವನ್ನು ಅನುಭವಿಸುವುದರಿಂದ. ಇದಕ್ಕೆ ಉತ್ತಮ ನಿದರ್ಶನವೇ ಪೆಟ್ರಿಕರ್, ತೊಲಕರಿ ಮೊದ ಲಾದ ಪದಗಳು. ಅವು ನಮ್ಮ ಮನಸ್ಸಿನಲ್ಲಿ ಉಂಟುಮಾಡುವ ಮಧುರ ಭಾವನೆಗಳು, ಮೆದುಳಲ್ಲಿ ಮೂಡಿಸುವ ಚಿತ್ರಚಿತ್ತಾರಗಳು ಅದ್ಭುತ ರೋಮಾಂಚನ ತರಿಸುವಂಥವು.
ಭಾವುಕ ಜೀವಿಗಳಿಗೆ, ಕಥೆ-ಕವನಗಳನ್ನು ಹೆಣೆಯುವವರಿಗೆ, ಕಲ್ಪನಾಲೋಕದಲ್ಲಿ ವಿಹರಿಸುವವರಿಗೆ ಮೊದಲ ಮಳೆಯ ಮಣ್ಣಿನ ಪರಿಮಳ ಒಂದು ಅತ್ಯುತ್ತಮ, ಆಪ್ಯಾಯಮಾನ ವಿಷಯವಾಗುವುದು ಅದೇ ಕಾರಣಕ್ಕೆ. ಅದೆಲ್ಲ ಇರಲಿ, ಮೊದಲ ಮಳೆಯ ಮಣ್ಣಿನ ಪರಿಮಳದ ಹಿಂದಿರುವ ವೈಜ್ಞಾನಿಕ ಕಾರಣವೇನು? ನಮ್ಮ ಸುತ್ತಮುತ್ತಲಿನ ಮಣ್ಣಿನಲ್ಲಿ ನಮ್ಮ ಕಣ್ಣಿಗೆ ಕಾಣದಂಥ ಸೂಕ್ಷ್ಮಜೀವಿಗಳು- ಪ್ರಮುಖವಾಗಿ ಬಾಕ್ಟೀರಿಯಾ- ಅನೇಕವಿರುತ್ತವೆ.
ಆಕಾರ, ಗಾತ್ರ, ಮತ್ತು ಸ್ವಭಾವದ ಆಧಾರದಲ್ಲಿ ವಿಂಗಡಿಸಿದರೆ ಅವುಗಳಲ್ಲೇ ಹಲವಾರು ನಮೂನೆಗಳಿವೆ. ಸೂಕ್ಷ್ಮಜೀವಿ ಅಂದ ಮಾತ್ರಕ್ಕೇ ಎಲ್ಲವೂ ಹಾನಿಕಾರಕ ಎಂದು ತಿಳಿಯಬೇಕಿಲ್ಲ. ಮನುಷ್ಯನಿಗೆ ಉಪಕಾರಿ ಸೂಕ್ಷ್ಮಜೀವಿಗಳೂ ಇರುತ್ತವೆ. ಉಪಕಾರಿ ಯಲ್ಲದಿದ್ದರೂ ನಿರುಪದ್ರವಿ ಆಗಿರುವಂಥವು ಎಷ್ಟೋ ಇವೆ. ಅಥವಾ, ಮುಳ್ಳನ್ನು ಮುಳ್ಳಿನಿಂದಲೇ ತೆಗೆ ಎನ್ನುವಂತೆ ಒಂದು ಸೂಕ್ಷ್ಮಜೀವಿಯಿಂದ ಉಂಟಾಗುವ ರೋಗಗಳ ನಿವಾರಣೆಗೆ ಇನ್ನೊಂದು ಸೂಕ್ಷ್ಮಜೀವಿಯನ್ನೇ ಬಳಸುವಷ್ಟು ಮನುಷ್ಯನ ಬುದ್ಧಿ ವಂತಿಕೆ, ಸಂಶೋಧನಾ ಪ್ರವೃತ್ತಿಯೂ ಮುಂದುವರಿದಿದೆಯೆನ್ನಿ.
ಇರಲಿ, ಬ್ಯಾಕ್ಟೀರಿಯಾದಲ್ಲಿ ಒಂದು ಪ್ರಮುಖವಾದ ಪ್ರಭೇದದ ಹೆಸರು ಆಕ್ಟಿನೊಮೈಸಿಟಿಸ್ ಎಂದು. ಮಣ್ಣಿನಲ್ಲಿ ಆರ್ದ್ರತೆ ಯಿರುವಾಗ ಯಾವ ತೊಂದರೆಯೂ ಇಲ್ಲದೆ ಆರಾಮಾಗಿ ಬದುಕುವ ಈ ಸೂಕ್ಷ್ಮಜೀವಿಗೆ, ಮಣ್ಣು ಶುಷ್ಕವಾಗ ತೊಡಗಿದಂತೆ ಜೀವನ ದುರ್ಭರವಾಗುತ್ತದೆ. ಆಗ ಅದು ಒಂದು ವಿಶೇಷ ರಕ್ಷಣಾಕವಚವನ್ನು ಕಟ್ಟಿಕೊಂಡುಮಣ್ಣಿನಡಿಗೆ ಸೇರಿಕೊಳ್ಳುತ್ತದೆ. ಬಹುಶಃ ಜೀವದ್ರವ ಸರಬರಾಜಿನ ವ್ಯವಸ್ಥೆಯನ್ನೂ ಮಾಡಿಕೊಂಡಿರುತ್ತದೆ. ಒಂದು ನಮೂನೆಯಲ್ಲಿ ಆ ಬ್ಯಾಕ್ಟೀರಿಯಾ ನಿಶ್ಚೇಷ್ಟತೆಯಲ್ಲಿ ಇರುತ್ತದೆ ಎನ್ನಬಹುದು. ಆಕ್ಟಿನೊಮೈಸಿಟಿಸ್ ಬಾಕ್ಟೀರಿಯಾದ ಈ ರಕ್ಷಣಾ ಕವಚಗಳಲ್ಲಿನ ತೈಲಾಂಶದ ಮೇಲೆ ನೀರು ಬಿದ್ದಾಗ ಉಂಟಾಗುವ ಜೀವರಾಸಾಯನಿಕ ಕ್ರಿಯೆಯಿಂದ ಹೊರಹೊಮ್ಮುವುದು ನಮಗೆಲ್ಲ ಚಿರಪರಿಚಿತವಾದ ‘ಮಣ್ಣಿನ ವಾಸನೆ’! ತಟಪಟ ಉದುರುವ ಮಳೆಹನಿಗಳು ಆ ಪ್ರಕ್ರಿಯೆಯನ್ನು ಉತ್ಕರ್ಷಗೊಳಿಸುತ್ತವೆ.
ಹವಾಮಾನದಲ್ಲಿನ ತೇವಾಂಶವು ಆ ಪರಿಮಳಕ್ಕೆ ಸರಿಯಾದ ವಾಹಕವಾಗಿ ನಮ್ಮ ಮೂಗಿನವರೆಗೂ ಅದು ತಲುಪುವಂತೆ ಮಾಡುತ್ತದೆ. ಪರಿಮಳವನ್ನುಆಘ್ರಾಣಿಸಿದ ನಮಗೆ ಹಿತಾನುಭವವಾಗುತ್ತದೆ. ಭಾವಜೀವಿಗಳು ಕಲ್ಪನಾಲೋಕದಲ್ಲಿ ವಿಹರಿಸು ವಂತಾಗುತ್ತದೆ. ಅಣುರೇಣುವಿನಲ್ಲೂ ಭಗವಂತನಿರುತ್ತಾನೆ ತಾನೆ? ಹಾಗಾದರೆ ಆಕ್ಟಿನೊಮೈಸಿಟಿಸ್ ಬ್ಯಾಕ್ಟೀರಿಯಾ ದಲ್ಲೂ ಇರುತ್ತಾನೆಂದಾಯಿತು. ಆ ಬ್ಯಾಕ್ಟೀರಿಯಾದಿಂದ ಬರುವ ಪರಿಮಳವೂ ಭಗವಂತನೇ.
‘ಪುಣ್ಯೋ ಗಂಧಃ ಪೃಥಿವ್ಯಾಂ…’ ಅಂದರೆ ಮಣ್ಣಿನ ಪರಿಮಳವೇ. ಅರ್ಥಾತ್ ಭೂಮಿಯ ಪರಿಮಳವೇ! ಅದೇ ಅಂತಲ್ಲದಿದ್ದರೂ ಅದೂ ಹೌದು ಎನ್ನಲಿಕ್ಕಂತೂ ಏನೂ ತೊಂದರೆಯಿಲ್ಲ.