ಬುಡಾರ್‌ ಖುರ್ದ್: ಜಗತ್ತಿಗೇ ತಂಗುಮನೆ
ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehendale100@.
ಇಲ್ಲಿ ನಿಲ್ಲದಿದ್ದರೆ ಲೇಹ್‌ನ ಪ್ರವಾಸಿ ಕನಸು ಅಪೂರ್ಣವಾಗುತ್ತದೆ. ಹಾಗಂತ ಇಲ್ಲಿಂದ ಏಳುವುದೇ ತಡವಾದರೆ ಸಂಜೆಯ ಸುಂದರ ಲಡಾಕ್ ಕಣಿವೆಯ ದೃಶ್ಯಾ ವಳಿ ನಿಮಗೆ ದಕ್ಕದೆ ಹೋಗಬಹುದು. ಹೀಗೆ ಅನಿವಾರ್ಯಕ್ಕೂ ಅವಶ್ಯಕತೆಗೂ ಒದಗಿ ಬಂದಿದ್ದು ಬುಡಾರ್ ಖುರ್ದ್. ಹೋಗಿ ಬನ್ನಿ…
ಇಲ್ಲಿ ನೀವು ಯಾರ ಮನೆಯಲ್ಲೂ ಬೇಕಾದರೂ ಅತಿಥಿಯಾಗಬಹುದು. ಊರಿನ ಸುಮಾರು ನೂರು ಮನೆಗಳಲ್ಲಿ ಯಾವ ಹೊತ್ತಿಗೂ ಯಾರ ಮನೆಗೂ ಅಪ್ಪಣೆ ಇಲ್ಲದೆ ನುಗ್ಗಬಹುದು. ನಿಮಗೆ ಇಷ್ಟವಾದ ಮನೆಯ ವ್ಯವಸ್ಥೆ ನೋಡಿಕೊಂಡು ಅಲ್ಲಿ ಉಳಿದುಕೊಳ್ಳಬಹುದು. ಹೋದವರ ಮನೆಯಲ್ಲಿ ಜಾಗವಿಲ್ಲದಿದ್ದರೆ, ಯಾವ ಮುಲಾಜೂ ಇಲ್ಲದೆ ನಿಮ್ಮ ಲಗೇಜು ಎತ್ತಿಕೊಂಡು ಪಕ್ಕದ ಮನೆಗೆ ನುಗ್ಗಬಹುದು. ಅಲ್ಲಿರುವ ಮಧ್ಯದ ಮಂಚದ ಮೇಲೆ ನಿಮ್ಮ ಬ್ಯಾಗು ಇಳಿಸಿ ನಿಮಗೆ ಉಳಿದ ಅನುಕೂಲ ಮಾಡಿಕೊಂಡು ತಿರುಗಲು ಹೊರಬೀಳಬಹುದು.
ಹೊರಗೆಲ್ಲ ಚಳಿಚಳಿ ಕೊರೆಯುವ ಗಾಳಿ ಬೀಸುತ್ತಿದ್ದರೆ ಒಳಗೆ ಒಮ್ಮೆ ಬಂದು ನಾಲ್ಕಿಂಚು ದಪ್ಪದ ಗೋಣಿ ನೆಲದ ಮೇಲೆ ಹಾಸಿದ ದಪ್ಪನೆಯ ತಿವಾಸಿ ಮೇಲೆ ಕಾಲೂರುತ್ತಿದ್ದಂತೆ ಹಿತವಾದ ಅನುಭವಕ್ಕೆ ಈಡಾಗಿ ಮೈ ಚೆಲ್ಲು ತ್ತೀರಿ. ಇದು ಯಾವುದೇ ಭಾಗದ, ಯಾವುದೇ ಜಾತಿಯ ಧರ್ಮದ ಊರಿನ ಕೊನೆಗೆ ಗಂಡು ಹೆಣ್ಣು ಭೇದವಿಲ್ಲದೆ ಎಲ್ಲಿಂದಲೋ ಬರುವ ಎಲ್ಲ ಅತಿಥಿಗೂ ಆಶ್ರಯ ನೀಡುವ ಊರು. ಅದಕ್ಕೆ ಇಲ್ಲಿಗೆ ಜಗತ್ತಿನ ಯಾವುದೇ ಭಾಷೆಯ ಯಾವುದೇ ಜನಾಂಗದವರು ಬಂದರೂ ಇಲ್ಲಿ ಎಲ್ಲರೂ ಸಮಾನರೇ ಎಲ್ಲರೂ ಅತಿಥಿ ಗಳೇ.
ಜತೆಗೆ ಭಾಷೆ ಬಾರದವರೂ ಇಲ್ಲಿ ತಂಗಿ ಎಲ್ಲ ಅನುಕೂಲ ಪೂರೈಸಿಕೊಂಡು ಹೊರಡುತ್ತಾರೆ. ಸಂವಹನ ಎನ್ನುವುದಕ್ಕೆ ಆತ್ಮೀಯತೆ ಅಗತ್ಯವೇ ಹೊರತು ಭಾಷೆ ಇಲ್ಲ ಎನ್ನುವುದಕ್ಕೆ ಉದಾ. ಬುಡಾರ್ ಖುರ್ದು. ವರ್ಷದ ಆರು ತಿಂಗಳು ರಸ್ತೆ ಸಂಪರ್ಕ ಇzಗ ಬದುಕು ಕಟ್ಟಿಕೊಳ್ಳಲು ಇಲ್ಲಿನ ಖುರ್ದಿಗಳು ಕಂಡುಕೊಂಡಿರುವ ಉಪಾಯ ಈ ತಂಗು ಮನೆ ಎಂಬ ಆತ್ಮೀಯತೆ ಬೆರೆಸಿ ನಡೆಸುವ ವ್ಯವಹಾರ. ಒಂಥರಾ ಪೆಯಿಂಗ್ ಗೆಸ್ಟ್ ಉಪಚಾರ ವ್ಯವಸ್ಥೆ. ಶ್ರೀನಗರದಿಂದ ಲೇಹ್‌ಗೆ ಹೊರ ಡುವ ಹೆಚ್ಚಿನ ಪ್ರವಾಸಿಗರು ಯೋಜಿತ ಪ್ರವಾಸ ಮಾಡುವುದರಿಂದ ಒಂದೋ ಕಾಶ್ಮೀರದ ಆಸುಪಾಸಿನಲ್ಲಿ ತಂಗುತ್ತಾರೆ ಅಥವಾ ಅದಕ್ಕೂ ಮುಂದೆ ಮುಲ್ಬೇಕ್. ಅದಕ್ಕೂ ಹೆಚ್ಚು ಕ್ರಮಿಸುವುದೇ ಇಲ್ಲ.
ಕಾರಣ ದಾಟಿದರೆ ನುನ್‌ಕುನ್ ಸರಹದ್ದು. ಉಳಿದದ್ದೇನಿದ್ದರೂ ಅತ್ತಲಿನ ಲೇಹ್ ಗಡಿಗೆ ಸೇರಿಕೊಳ್ಳುವುದರಿಂದ ಇತ್ತಲಿನ ವ್ಯವಸ್ಥಾಪಕರು ಇದೇ ಪದ್ಧತಿ ಅನು ಸರಿಸುತ್ತಾರೆ. ಆದರೆ ಬೈಕ್ ಮೇಲೆ ತೆರಳುವವರು, ಸ್ವಂತದ ಕಾರು ಇನ್ನಿತರ ವಾಹನ ಸವಾರರು ಹೀಗೆ ಯೋಜಿತವಲ್ಲದೇ ಹೊರಡುವವರಿಗೆ ಅಲ್ಲಲ್ಲಿ ವಸತಿ ಸೌಕರ್ಯದ ನೆಪದಲ್ಲಿ, ಟೆಂಟುಗಳೂ, ಹೋಮ್ ಸ್ಟೇಗಳು ಇವೆಯಾದರೂ ಹೆಚ್ಚಿನವರು ಹೋಟೆಲ್ ಗಳಲ್ಲಿಯೇ ತಂಗುತ್ತಾರೆ. ದುಬಾರಿಯಾದರೂ ಬೆಳಗ್ಗೆ ಬಿಸಿ ನೀರು, ಕಮೋಡೇ ಬೇಕೆನ್ನುವವರೆಲ್ಲ ಮೊದಲೇ ಇದೆಲ್ಲ ಲೆಕ್ಕಿಸಿ ಕಾಯ್ದಿರಿಸಿಕೊಂಡಿರುತ್ತಾರೆ.
ಅದರೆ ಪ್ರಕೃತಿ ಪ್ರಿಯರಿಗೆ ಹೀಗೆಯೇ ಎಂದಿರುವುದೇ ಇಲ್ಲ. ಎಲ್ಲಿ ಸರಿ ಕಾಣುತ್ತೋ ಅಲ್ಲ ನಿಂತು ಮುಂದಕ್ಕೆ ಹೊರಡುತ್ತಿರುತ್ತಾರೆ. ಹಾಗೆ ಹೊರಡುವ ಸವಾರರು ಪ್ರವಾಸಿಗರಿಗೆ ಬುಡಾರ್ ಖುರ್ದ್ ಹೇಳಿ ಮಾಡಿಸಿದ ಪ್ರದೇಶ. ಸುತ್ತ ಹಿಮದ ಹೊಡೆತಕ್ಕೆ ಸಿಕ್ಕು ಬರಡೆದ್ದು ಹೋಗಿರುವ ಪರ್ವತ ಪ್ರದೇಶದ ಇಳುಕಲಿನಲ್ಲಿ ಸಮೃದ್ಧವಾಗಿ ಹರಿಯುವ ವಾಘಾ ನದಿ, ಈ ಪ್ರದೇಶವನ್ನು ಮಾತ್ರ ಹಸಿರಾಗಿಟ್ಟು ಅಚ್ಚರಿ ಹುಟ್ಟಿಸುತ್ತದೆ. ಎಲ್ಲ ಮನೆಗಳಲ್ಲಿ ಒಂದು ಅಥವಾ ಎರಡು ಹಾಲ್‌ ಗಳಿರುತ್ತವೆ. ಅದಕ್ಕೆ ತಾಗಿಯೇ ಇರುವ ಒಂದು ಖಾಸಗಿ ಕೋಣೆ ತಮಗಾಗಿ ಇರಿಸಿಕೊಂಡು ಮನೆಯವರೂ ಅದರಲ್ಲೇ ವಾಸವಿರುತ್ತಾರೆ. ಒಂದೊಂದು ಹಾಲ್‌ ನಲ್ಲೂ ಸ್ಥಳ ಲಭ್ಯತೆ ಅನುಗುಣವಾಗಿ ನಾಲ್ಕರಿಂದ ಆರು, ಎಂಟು ಮಂಚದವರೆಗೂ ಜೋಡಿಸಿ, ಬೆಚ್ಚನೆಯ ಹಾಸಿಗೆ ಹೊದಿಕೆ ಸಿದ್ಧವಿರುತ್ತದೆ. ಆರಂಭದ ಇರುವ ಕೋಣೆ ಹಾಲ್ ಕಮ್ ಡೈನಿಂಗ್ ಹಾಲ್ ತರಹ ಉಪಯೋಗ.
ಕೆಲವೊಮ್ಮೆ ಊಟೋಪಚಾರವೆಲ್ಲ ಮಂಚದ ಮೇಲೆಯೇ ನಡೆಯುತ್ತದೆ. ಬಿಸ್ಕೇಟು, ಮ್ಯಾಗಿ ಸೇರಿದಂತೆ ಟೀ, ಕಾಫಿ ಜತೆಗೆ ಊಟಕ್ಕೆ ರೋಟಿ ಮತ್ತು ದಾಲ್ ಇಲ್ಲಿನ ಕಾಮನ್ ಮೆನು. ಆಗೀಗ ಪರೋಟಾ ಸಮಾರಾಧನೆ, ಲಭ್ಯವಾಗುವ ಕಾಯಿಪಲ್ಯೆ ಮತ್ತು ವಸ್ತುಗಳ ಮೇಲೆ ನಿರ್ಧರಿತ. ಹಾಗಾಗಿ ದಿನವಹಿ ಯಾವ ಊಟ ಹೇಗಿರು ತ್ತದೆ ಊಹೆಗೆ ದಕ್ಕುವುದಿಲ್ಲ. ಹೊಟ್ಟೆ ಮಾತ್ರ ರುಚಿಶುಚಿಯಾಗಿ ತುಂಬಿಸುತ್ತಾರೆ. ನಿಮ್ಮ ಆಯ್ಕೆಗನುಗುಣವಾಗಿ ಸರ್ವೀಸು. ಮನೆಯವರು ಅಲ್ಲ ತಯಾರಿಸಿ, ಎದುರೆದುರೆ ರೊಟ್ಟಿ ಸುಟ್ಟು ಕೊಡುವುದರಿಂದ ಎರಡು ಮಾತಿಲ್ಲ. ಸಂಜೆಯ ಹೊತ್ತಿಗೆ ಬಂದು ಬೆಳಗ್ಗೆ ಹೊರಡುವ ಪ್ರವಾಸಿಗರಿಗೆ ಇದು ಹೇಳಿ ಮಾಡಿಸಿದ ತಾಣ.
ಹಾಗಾಗಿ ಪ್ರತಿ ಮನೆಯೂ ಅವರವರ ಅಳತೆಗನುಗುಣವಾಗಿ ನಾಲ್ಕರಿಂದ ಹನ್ನೆರಡು ಜನರವರೆಗೂ ಅತಿಥಿಗಳನ್ನು ನಿಭಾಯಿಸುತ್ತಾರೆ. ಐದರಿಂದ ಕೆಲವು ಕಡೆಯಲ್ಲಿ ಹತ್ತು ಜನರವರೆಗೂ ಪ್ರವಾಸಿಗರಿಗೆ ಜಾಗ ಪೂರೈಸುತ್ತಾರೆ. ಕೋರಿಕೆಯ ಮೇರೆಗೆ ಬಿಸಿನೀರು ಲಭ್ಯ. ಹೆಚ್ಚಿನವರು ಲೇಹ್ ತಲುಪುವ ನಿರೀಕ್ಷೆಯಲ್ಲಿ ಬೆಳಗ್ಗೆ ಹಾಗೇ ಬೇಗ ಹೊರಡುತ್ತಾರೆ. ಸಾಮಾನ್ಯವಾಗಿ ಮುಲ್ಬೇಕ್ ನಂತರ ಸಿಕ್ಕುವ ನಮ್ಕೀಲಾ ಪಾಸ್ ಮತ್ತು ಆಚೆಗಿನ ಲಮಾಯುರು ಮೊದಲು ಸಿಕ್ಕುವವಿಲಾಸಿ ಹೋಟೆಲುಗಳ ಆಲಚಿ ಇವೆಲ್ಲವನ್ನು ತಲುಪುವ ಮೊದಲು, ತೀರ ನಿರ್ಮಾನುಷ್ಯವಾದ ಅತಿದೊಡ್ಡ ಪ್ರದೇಶ ಮತ್ತು ಸರಣಿ ಪರ್ವತ ಪ್ರದೇಶವನ್ನು ಹಾಯ್ದು ಹೋಗಬೇಕಾಗುತ್ತದೆ.
ಎರಡೂ ಕಡೆ ಉಸಿರಿಗೆ ಬೇಕೆಂದರೂ ಮನುಷ್ಯರೇ ಸುಳಿವೆ ಇಲ್ಲದ ಅಗಾಧ ಪ್ರಪಾತ ಅಥವಾ ಅದರ ಎರಡರಷ್ಟು ಎತ್ತರದ ಅನಾಹುತಕಾರಿ ಅಳತೆಯ ಕಣಿವೆ ಪ್ರದೇಶಗಳ ಬಣ್ಣ ಬಣ್ಣದ ನೆರಳು ಬೆಳಕಿನಾಟ ದಂಗು ಬಡಿಸುತ್ತದೆ. ಇದು ಹೆಚ್ಚಿನ ಪ್ರವಾಸಿಗರಿಗೆ ಫೋಟೊಗ್ರಫಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ಸಮಯ ಕಳೆಯದ ಪ್ರವಾಸಿಗರೇ ಇಲ್ಲ. ಹಾಗಾಗಿ ಬುಡಾರ್ ಖುರ್ದ್ ಇದರ ಪಾದಕ್ಕೆ ಮೊದಲ ಮೆಟ್ಟಿಲಾಗುವುದರಿಂದ ಆಫ್ ಬೀಟ್ ಟ್ರಾವೆಲರ್‌ಗಳ ಫೇವರಿಟ್ ಇದು.ನಿರಂತರ ದಾರಿಯುದ್ದಕ್ಕೂ ಎಲ್ಲಿ ನಿಂತರೂ ಚಿತ್ರ ಜಗತ್ತಿನ ಸಂತೆಯಂತೆ ಇರುವ ನಮ್ಕೀಲಾ ಪಾಸ್ ಪಾದಕ್ಕಿಳಿಯುವ ಮುನ್ನ ಅದರ ಜತೆಗೆ ಸಾಗುವ ವಾಘಾ ನದಿಯ ಹರಿವನ್ನು ವಿಕ್ಷಿಸದಿರುವವರೇ ಇಲ್ಲ.
ಇದು ಒಮ್ಮೆ ಎಡಕ್ಕೂ ಒಮ್ಮೆ ಬಲಕ್ಕೂ ಚಲಿಸುತ್ತಾ ಹಿಮ್ಮೇಳ ಕೊಡುತ್ತಿದ್ದರೆ ಶಾರ್ಗೋಲ್ ವ್ಯಾಲಿಯ ಸಂದಿನಲ್ಲಿ ಸಾಲಾಗಿ ಸಿನೇಮಾ ಸೆಟ್ಟಿನಂತೆ ಪೇರಿಸಿಟ್ಟಮನೆಗಳ ಸಂತೆಯೇ ಬುಡಾರ್ ಖುರ್ದ್. ಇದು ಅಪ್ಪಟ ಸಾಲು ಸಾಲು ಪೆಟ್ಟಿಗೆಯ ಮನೆಯಂತಹ ರಚನೆ. ಅದಾದ ಮರುಘಳಿಗೆಯ ಪ್ರತ್ಯಕ್ಷವಾಗುತ್ತದೆ-ಟುಲಾ ಪಾಸ್. ಅದರಾಚೆಗೆ ಸಂಝಾಕ್, ಅದಕ್ಕೂ ಮೊದಲೇ ಕಂಗ್ರಾಲ್ ವ್ಯಾಲಿ. ಇಂಥ ವಿಪರೀತ ಸಂಕೀರ್ಣ ಪ್ರದೇಶಗಳ ಮೇಲೆ ಅರೆ ಬರೆ ಬಿಸಿಲು ಅನಾಹುತಕಾರಿ ಮಂಜಿನ ಹುಡಿಯ ಹೊಡೆತಕ್ಕೆ ನಲುಗುತ್ತ ಬೆಳೆದು ಕಾಲೂರಿ ನಿಂತಿರುವ ಹಳ್ಳಿ ನೇರ ಪ್ರವಾಸಿಗರಿಗೆ ಅಲ್ಲವೇ ಅಲ್ಲ.
ಜತೆಗೆ ಇಲ್ಲಿ ನಿಲ್ಲದಿದ್ದರೆ ಲೇಹ್‌ನ  ವಾಸಿ ಕನಸು ಅಪೂರ್ಣವಾಗುತ್ತದೆ ಎನ್ನುವುದು ನನ್ನ ಅನುಭವ. ಹಾಗಂತ ಇಲ್ಲಿಂದ ಏಳುವುದೇ ತಡವಾದರೆ ಸಂಜೆಯಪ್ರವೇಶಕ್ಕೂ ಮುನ್ನ ಲಭ್ಯವಾಗುವ ಲಡಾಕ್ ಕಣಿವೆಯ ದೃಶ್ಯಾವಳಿ ದಕ್ಕದೆ ಹೋಗಬಹುದು. ಹೀಗೆ ಅನಿವಾರ್ಯಕ್ಕೂ ಅವಶ್ಯಕತೆಗೂ ಒದಗಿ ಬಂದಿದ್ದು ಬುಡಾರ್ ಖುರ್ದ್. ಅಕ್ಷರಶಃ ಪ್ರವಾಸಿಗರಿಗಾಗಿಯೇ ಮೀಸಲಿಟ್ಟಂತೆ ವ್ಯವಸ್ಥೆ ಮಾಡಿಕೊಂಡಿರುವ ಸ್ಥಳೀಯರ ಈ ಆದರಾತಿಥ್ಯ, ನಮಗೆ ಬೇಕಿದೆಯೋ ಬೇಡವೋ ಅಲ್ಲಿ ತಂಗುವಂತೆ ಮಾಡುತ್ತದೆ.
ಅದರಲ್ಲೂ ಕೇವಲ ಮೂನ್ನೂರರಿಂದ ನಾಲ್ಕೂನೂರವರೆಗೆ ದರವಿರುವ ಈ ಮನೆಗಳಲ್ಲಿ ಊಟೋಪಚಾರ ಮತ್ತು ಆದರಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗಾಗಿ ಪ್ರವಾಸಿಗ ಇಲ್ಲಿ ಚೌಕಾಶಿಗಿಳಿದ ಉದಾಹರಣೆಗಳಿಲ್ಲ. ಕೆಲವೊಮ್ಮೆ ಕೊಟ್ಟಷ್ಟು ಪಡೆದು ಅದೇ ನಗುಮೊಗದಿಂದ ಪುನಃ ಬನ್ನಿ ಎಂದು ವಿದಾಯ ಹೇಳುವ ಸ್ಥಳೀಯರೂ ವ್ಯವಾಹರಕ್ಕಿಳಿದು ದುಡ್ಡು ಕೀಳಲು ನಿಂತದ್ದಿಲ್ಲ. ಕಾರಣ ಇದರ ಹಿಂದಿರುವ ನುನ್-ಕುನ್ ವ್ಯಾಲಿ ಅಥವಾ ಮುಂದಕ್ಕೆ ಹೋದರೆ ಆಲಚಿ. ಇವೆರಡ ರಿಂದ ಪ್ರವಾಸಿಗರನ್ನು ಸೆಳೆಯಬೇಕೆಂದರೆ ಆದರಾತಿಥ್ಯ ಮತ್ತು ಕಡಿಮೆ ಬೆಲೆ ಎರಡೂ ಇದರ ರಹಸ್ಯವೂ ಹೌದು. ಜತೆಗೆ ಸುಮಾರು ಮೂರ್ನಾಲ್ಕು ಕೀ.ಮೀ. ವರೆಗೂ ಅಲ್ಲಲ್ಲಿ ಬಿಸಾಕಿದಂತೆ ಬೆಳೆದಿರುವ ಗದ್ದೆಯ ಬದಿಯ, ಬದುವಿನ ಮೇಲಿರುವ ಗುಂಪು ಮನೆಗಳಲ್ಲಿ ತಂಗುವ, ಚಳಿಗೆ ಬಿಸಿ ಚಹ ಹೀರುತ್ತ ಬಿಸಿಲಿಗೆ ಪ್ರತಿ-ಲಿಸುವ ಬೋಳುಗುಡ್ಡಗಳ ನೋಡುತ್ತ ಕಾಲು ಮಡಚಿ ಹರಟೆಗೆ ಬೀಳುವ, ಮಣ್ಣು ಕೆದರಿ ಗುಡ್ಡೆ ಹಾಕುತ್ತ ಕೂರುವ ಆಮೋದವೇ ಬೇರೆ.
ಇದೆಲ್ಲದರ ಜೊತೆಗೆ ನೇರವಾಗಿ ಶ್ರೀನಗರದಿಂದ ಎತ್ತರದ ಪ್ರದೇಶವಾದ ಲೇಹ್ ಪ್ರವೇಶಿಸಲು ಯತ್ನಿಸಿದರೆ ದೇಹ ಸಮತೋಲನಕಳೆದುಳ್ಳುವಮತ್ತು ಅದರಿಂದಾಗಿ ಪ್ರವಾಸ ಮೊಟಕುಗೊಳಿಸಿ ತತಕ್ಷಣ ಕೆಳಗಿಳಿಯಬೇಕಾದ ಅನಿವಾರ್ಯವೂ ಎಷ್ಟೊ ಜನರಿಗೆ ತಲೆದೋರಿದ್ದಿದೆ. ಅದಕ್ಕಾಗಿ ಇಂತಹ ಮಧ್ಯಂತರ ವಸತಿ ಅಗತ್ಯವಾಗುತ್ತದೆ. ಅದರಲ್ಲೂ ದರದಲ್ಲೂ, ವ್ಯವಸ್ಥೆಯಲ್ಲೂ ತುಂಬ ಅನುಕೂಲವಾಗುವುದಾದರೆ ಯಾಕಾಗಬಾರದು..? ಆಫ್ ಬೀಟ್ ಟ್ರೆಕ್ ಮತ್ತು ಪ್ರವಾಸದ ಮಧ್ಯವರ್ತಿ ಸ್ಥಳವಾಗಿ ಕಾಲಿಗಡರುವ ಖುರ್ದ್ ನೇರವಾಗಿ ಮೇಲಿಂದ ನೋಡುವವರಿಗೆ ಅದೊಂದು ವಸತಿ ಗೃಹಗಳ ಸಮುಚ್ಛಯ ಎನ್ನಿಸುವುದೇ ಇಲ್ಲ. ಹಾಗಾಗಿ ಒಳಗೆ ಗಾಡಿ ತಿರುಗಿಸದಿದ್ದರೆ ಲಢಾಕ್ ಪ್ರದೇಶದ ಪ್ರಮುಖ ಅನುಭೂತಿಯೊಂದು ಮಿಸ್ ಆಗುವುದರಲ್ಲಿ ಸಂಶಯವೇ ಇಲ್ಲ.
ಖುರ್ದ್ ಒಳಭಾಗದ ಮನೆಗಳ ಅಂಗಳದಲ್ಲಿ ನಿಂತಾಗ ಸುತ್ತುವರೆದ ಪರ್ವತಗಳ ಮಧ್ಯೆ ಬಟ್ಟಲಿನಲ್ಲಿ ನಿಂತಂತೆ ಆಗುವ ಅನುಭವ ದೃಶ್ಯಾವಳಿ ಬರಹಕ್ಕೆ ನಿಲುಕದ್ದು.