ಭ್ರಷ್ಟ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ?
ಮೂರ್ತಿ ಪೂಜೆ
ಆರ್‌.ಟಿ.ವಿಠ್ಠಲಮೂರ್ತಿ
ಮದ್ಯದ ಲಾಬಿಯ ಪ್ರಮುಖರು ತಮಗೆ ಆಪ್ತರಾಗಿದ್ದರೂ ಅದನ್ನು ಲೆಕ್ಕಿಸದೆ ಎಸ್.ಎಂ. ಕೃಷ್ಣ ಅವರು ಪಾನೀಯ ನಿಗಮ ಸ್ಥಾಪಿಸಿದರು. ಅವರ ನಿರ್ಧಾರ ರಾಜ್ಯದಲ್ಲಿ ಮದ್ಯದ ಲಾಬಿ ಉರುಳಿ ಬೀಳುವಂತೆ ಮಾಡಿದ್ದು ನಿಜ. ಮತ್ಯಾರೂ ಅದನ್ನು ಮಾಡಲಿಲ್ಲ, ಮಾಡುವುದೂ ಇಲ್ಲ ಅನಿಸುತ್ತದೆ.
ಇದು ಐದು ದಶಕಗಳಿಗೂ ಹಿಂದೆ ನಡೆದ ಘಟನೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಒಮ್ಮೆ ಆಹ್ವಾನದ ಮೇರೆಗೆ ಬೆಳಗಿನ ಉಪಹಾರಕ್ಕೆ ಹೊರಟರು. ಹೀಗೆ ಹೊರಟಾಗ ಒಬ್ಬರೇ ಹೊರಡುವುದು ಏಕೆ ಅಂತ ಅವತ್ತು ತಮ್ಮ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಚನ್ನಬಸಪ್ಪ ಅವರನ್ನು ಕರೆದರು.ಸರಿ, ಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ ಬಂದು ಕಾರಿನಲ್ಲಿ ಕುಳಿತ ಚನ್ನಬಸಪ್ಪ ಅವರು ಅದು ಇದು ಮಾತನಾಡುತ್ತ, ಈಗ ನಾವು ಯಾರ ಮನೆಗೆ ಉಪಹಾರಕ್ಕೆ ಹೋಗುತ್ತಿದ್ದೇವೆ ಗೊತ್ತಾ? ಎಂದು ಕೇಳಿದರು.
ಅವರಾಡಿದ ಮಾತಿನಿಂದ ವಿಸ್ಮಿತರಾದ ನಿಜಲಿಂಗಪ್ಪ, ಯಾರ ಮನೆಗೆ ಹೋಗುತ್ತಿದ್ದೇವೆ ಎಂದು ಪ್ರಶ್ನಿಸಿದರು. ಈ ಮಾತಿಗುತ್ತರಿಸಿದ ಚನ್ನಬಸಪ್ಪ, ಶರಾವತಿ ಯೋಜನೆಯ ಗುತ್ತಿಗೆ ಹಿಡಿದಿದ್ದಾರಲ್ಲ? ಅವರಿಗೆ ಸಂಬಂಧಿಸಿದ ಮನೆ ಅದು ಎಂದರು. ಅವರು ಅಷ್ಟು ಹೇಳಿದ್ದೇ ತಡ, ಗಾಬರಿಯಾದ ಮುಖ್ಯಮಂತ್ರಿ ನಿಜಲಿಂಗಪ್ಪ, ತಕ್ಷಣವೇ ಕಾರು ತಿರುಗಿಸು, ವಾಪಸ್ ಹೋಗೋಣ ಎಂದು ಚಾಲಕನಿಗೆ ಸೂಚನೆ ನೀಡಿದರು. ಒಬ್ಬ ಗುತ್ತಿಗೆದಾರರ ನಿವಾಸದಲ್ಲಿ ಉಪಹಾರ ಸ್ವೀಕರಿಸಿದರೆ ಏನು ಸಂದೇಶ ಹೋಗುತ್ತದೆ? ಎಂಬ ವಿಷಯದಲ್ಲಿ ನಿಜಲಿಂಗಪ್ಪ ಅವರಿಗಿದ್ದ ಕಾಳಜಿ ಅದು.***
ಈ ಘಟನೆಯನ್ನು ಏಕೆ ನೆನಪಿಸಿಕೊಳ್ಳಬೇಕೆಂದರೆ ಇವತ್ತು ಅಧಿಕಾರದಲ್ಲಿರುವವರಿಗೂ, ಸರಕಾರದ ಯೋಜನೆ ಗಳ ಗುತ್ತಿಗೆ ಹಿಡಿದವರಿಗೂ ಮಧ್ಯೆ ಬಹಳ ಅಂತರ ಉಳಿದಿಲ್ಲ. ಅಧಿಕಾರದಲ್ಲಿರುವವರು ಮತ್ತು ಗುತ್ತಿಗೆದಾರರ ನಡುವೆ ಭಿನ್ನಾಭಿಪ್ರಾಯ ಇರುವುದಿಲ್ಲವೆಂದಲ್ಲ. ಆದರೆ ಈಗ ಅದು ಬಹುದೊಡ್ಡ ವಿಷಯವಾಗಿ ಉಳಿದೇ ಇಲ್ಲ. ಯಾಕೆಂದರೆ ಇಬ್ಬರೂ ಪರಸ್ಪರ ಮಿತ್ರರಾಗಿ ಬಹುಕಾಲವೇ ಕಳೆದು ಹೋಗಿದೆ.
ಕರ್ನಾಟಕದಲ್ಲಿ ಇತ್ತೀಚಿಗೆ ನಲವತ್ತು ಪರ್ಸೆಂಟ್ ಕಮಿಷನ್ನಿನ ಮಾತು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ಸರಕಾರದ ಯೋಜನೆಗಳ ಗುತ್ತಿಗೆ ಪಡೆದವರು ಅಽಕಾರದಲ್ಲಿರುವವರಿಗೆ ನೀಡುವ ಕಮಿಷನ್ ಪ್ರಮಾಣ ಶೇಕಡಾ ನಲವತ್ತರಷ್ಟಾಗಿದೆ ಎಂದು ಗುತ್ತಿಗೆದಾರರು ದೂರು ನೀಡುವ ಮಟ್ಟಕ್ಕೆ ಹೋಗಿದೆ. ಹೀಗೆ ಗುತ್ತಿಗೆದಾರರು ದೂರು ನೀಡಿದ ಬೆಳವಣಿಗೆಯನ್ನು ಪ್ರತಿಪಕ್ಷಗಳು ಎತ್ತಿ ಆಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಮಾತನಾಡಿದ್ದಾರೆ. ಆದರೆ ಇಂತಹ ಟೀಕೆ, ಉತ್ತರಗಳಿಂದ ಈ ಸಮಸ್ಯೆಗೆ ತಾರ್ಕಿಕ ಪರಿಹಾರ ಸಿಗುತ್ತದೆ ಎಂದೇನಲ್ಲ. ಯಾಕೆಂದರೆ ಯಾರು ನಲವತ್ತು ಪಸೆಂಟ್ ಕಮೀಷನ್ ಆರೋಪವನ್ನು ಎತ್ತಿ ಹಿಡಿದು ಕೂಗು ಹಾಕುತ್ತಿದ್ದಾರೋ? ಅವರೇ ಅಧಿಕಾರದಲ್ಲಿರುವಾಗ ಇಪ್ಪತ್ತು ಪಸೆಂಟ್ ಕಮಿಷನ್ ಪಡೆಯುತ್ತಿದ್ದರು ಎಂಬ ಆರೋಪವಿತ್ತು. ಹೀಗೆ ನೋಡುತ್ತಾ ಹೋದರೆ ಇವತ್ತು ಅಧಿಕಾರ ರಾಜಕಾರಣದಲ್ಲಿರುವ ಯಾರ ಮುಖವೂ ಕಪ್ಪು ಕಲೆಯಿಂದ ಮುಕ್ತವಾಗಿಲ್ಲ.
ಹೀಗಾಗಿ ಯಾರೇನೇ ಮಾತನಾಡಿದರೂ ನಮ್ಮ ಕಾಲದಲ್ಲಿ ಇಷ್ಟು ಪ್ರಮಾಣದ ಭ್ರಷ್ಟಾಚಾರ ಇರಲಿಲ್ಲ ಎನ್ನಬಹುದೇ ಹೊರತು ಬೇರೇನಲ್ಲ. ವಸ್ತುಸ್ಥಿತಿ ಎಂದರೆ ಸರಕಾರಿ ಯೋಜನೆಗಳ ಗುತ್ತಿಗೆ ಪಡೆದವರು ನಲವತ್ತು ಪರ್ಸೆಂಟ್ ಕಮೀಷನ್ ಕೊಡಬೇಕು ಎಂಬುದು ಒಂದು ವಾದವಾದರೆ,ಮೂಲ ಸಮಸ್ಯೆ ಅದಕ್ಕಿಂತ ದೊಡ್ಡದಿದೆ. ತುಂಬ ದೂರ ಹೋಗುವುದು ಬೇಡ, ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನ ಇದೆಯಲ್ಲ? ಈ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತದೆ. ಈ ಸುವರ್ಣ ವಿಧಾನಸೌಧವನ್ನು ನಿರ್ಮಿಸುವಾಗ ಅಧಿಕಾರದಲ್ಲಿರುವವರು ಏನು ಹೇಳಿದರು? ಪ್ರಾದೇಶಿಕ ತಾರತಮ್ಯವನ್ನು ನಿವಾರಿಸಲು, ಪದೇಪದೇ ಗಡಿ ತಂಟೆಗೆ ಬರುತ್ತಿರುವ ಮರಾಠರಿಗೆ ಉತ್ತರ ನೀಡಲು ಮತ್ತು ಅದೇ ಕಾಲಕ್ಕೆ ಆಡಳಿತವನ್ನು ವಿಕೇಂದ್ರೀಕರಣಗೊಳಿಸಲು ಈ ಸೌಧ ನಿರ್ಮಿಸಲಾಗುತ್ತದೆ ಮತ್ತು ನಿರ್ಮಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಆದರೆ ಕಟ್ಟಡ ನಿರ್ಮಿಸಿ ಹಲವು ವರ್ಷಗಳೇ ಕಳೆದು ಹೋದವು. ಅವತ್ತು ಇದನ್ನು ನಿರ್ಮಿಸುವಾಗ ಅಧಿಕಾರಸ್ಥರು ಏನು ಹೇಳಿದ್ದರೋ, ಆ ಮಾತು ಈಡೇರಿದೆಯಾ ಎಂದು ನೋಡಿದರೆ ನಿಶ್ಚಿತವಾಗಿ ನಿರಾಸೆ ಆಗುತ್ತದೆ. ಈ ಕಟ್ಟಡ ನಿರ್ಮಾಣವಾದ ನಂತರ ಅದನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವ ಕೆಲಸವೇ ಆಗಿಲ್ಲ.ಆಡಳಿತದ ವಿಕೇಂದ್ರೀಕರಣಕ್ಕೆ ಮೂಲವಾಗುತ್ತದೆ ಎಂಬ ಮಾತು ನಿಜವಾಗಲಿಲ್ಲ. ಪ್ರಾದೇಶಿಕ ಅಸಮಾನತೆ ನಿವಾರಿಸಲು ಕೇಂದ್ರವೂ ಆಗಲಿಲ್ಲ. ಆದರೆ ನೆನಪಿಡಬೇಕಾದ ಸಂಗತಿ ಎಂದರೆ, ಈ ಕಟ್ಟಡ ನಿರ್ಮಿಸಲು ಶುರುವಿನಲ್ಲಿ ರೂಪಿಸಿದ ಅಂದಾಜು ವೆಚ್ಚವನ್ನು ಪದೇಪದೇ ಏರಿಕೆ ಮಾಡಲಾಯಿತು.
ಅಂತಿಮವಾಗಿ ಸುವರ್ಣ ವಿಧಾನಸೌಧ ಮೇಲೆದ್ದು ನಿಲ್ಲುವ ಕಾಲಕ್ಕೆ ಆದ ವೆಚ್ಚ ಉದ್ದೇಶಿತ ಪ್ರಮಾಣಕ್ಕಿಂತ ಬಹು ಹೆಚ್ಚಾಗಿತ್ತು. ಯಾವಾಗ ಸುವರ್ಣ ವಿಧಾನಸೌಧ ನಿರ್ಮಾಣವಾಯಿತೋ? ಇದಾದ ನಂತರ ಸರಕಾರದ ಬಹು ಮಹತ್ವದ ಯೋಜನೆಗಳ ಜಾರಿಯ ವಿಷಯದಲ್ಲಿ ಈ ಅಂಶವೇ ಬಹುಮುಖ್ಯ ಪ್ರೇರಣೆಯಾಯಿತು. ಅರ್ಥಾತ್, ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಯೋಜನೆಯನ್ನು ಜಾರಿಗೊಳಿಸಬಹುದು ಎಂದುಕೊಳ್ಳಿ. ಈ ಯೋಜನೆಯನ್ನು ರೂಪಿಸುವಾಗ ತಯಾರಾದ ಅಂದಾಜು ಪಟ್ಟಿ ಏನಿದೆ?ಅದು ಗುತ್ತಿಗೆದಾರರಿಗೆ ಮಂಜೂರಾದ ನಂತರ ಹೆಚ್ಚುವರಿ ವೆಚ್ಚದ ಹೆಸರಿನಲ್ಲಿ ಪದೇ ಪದೇ ಅದರ ಪ್ರಮಾಣವನ್ನು ಏರಿಸಲಾಗುತ್ತದೆ. ಅಲ್ಲಿಗೆ ಪ್ರಭಾವಿ ಗುತ್ತಿಗೆದಾರರು ತಮಗೆ ಸಿಗಬೇಕಾದ ಲಾಭದ ಪ್ರಮಾಣ ದಿಂದ ಹಿಡಿದು, ಉನ್ನತ ಸ್ಥಾನದಲ್ಲಿರುವವರಿಗೆ ನೀಡಬೇಕಾದ ಕಮೀಷನ್ ತನಕ ಎಲ್ಲವನ್ನೂಸಾಂಗೋಪಾಂಗವಾಗಿ ನೀಡಲು ವೇದಿಕೆ ಸಿದ್ಧವಾಗುತ್ತದೆ. ಇದೇ ಕಾರಣಕ್ಕಾಗಿ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನ ಗೊಳ್ಳಬಹುದಾದ ಒಂದು ಯೋಜನೆ ನಾಲ್ಕು ನೂರು, ಐದು ನೂರು ಕೋಟಿ ರೂಪಾಯಿಗಳಷ್ಟು ಗಾತ್ರಕ್ಕೆ ಬೆಳೆಯುವುದು.
ಇಲ್ಲಿ ಕಮೀಷನ್ ಮಾತ್ರವಲ್ಲ, ಹೆಚ್ಚುವರಿ ಮೊತ್ತವೇ ಉನ್ನತ ಸ್ಥಾನದಲ್ಲಿರುವವರಿಗೆ ಸಿಗುತ್ತದೆ. ಅದೇ ರೀತಿ ಅಧಿಕಾರದಲ್ಲಿರುವ ಹಲವರು ಪರೋಕ್ಷವಾಗಿ ತಾವೇಗುತ್ತಿಗೆದಾರರಾಗಿ ಮಾರ್ಪಾಟಾಗುತ್ತಾರೆ. ಅವರ ಕುಟುಂಬಸ್ಥರೋ? ಆಪ್ತರೋ? ಇನ್ಯಾರೋ ಈ ಯೋಜನೆಯನ್ನು ಹೆಸರಿಗೆ ಗುತ್ತಿಗೆ ಪಡೆದರೆ ಉಳಿದಂತೆಎಲ್ಲವೂ ಅಧಿಕಾರದಲ್ಲಿರುವವರ ಹಿಡಿತದಲ್ಲೇ ಇರುತ್ತದೆ. ಕಳೆದ ಒಂದೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ಈ ಪರಿಪಾಠ ಬೆಳೆದು ಬಂದಿರುವುದರಿಂದ ಇವತ್ತು ಯಾರು ಯಾರ ಮೇಲೂ ಗೂಬೆ ಕೂರಿಸುವ ಪರಿಸ್ಥಿತಿ ಇಲ್ಲ.
ಹಾಗೊಂದು ವೇಳೆ ಕೂರಿಸಿದರೆ ತಕ್ಷಣವೇ ನಿಮ್ಮ ಕಾಲದ ಟೆಂಡರ್ ವ್ಯವಹಾರಗಳನ್ನೂ ತನಿಖೆ ಮಾಡೋಣ ಎಂದು ಅಧಿಕಾರದಲ್ಲಿರುವವರು ಉದ್ಗರಿಸುತ್ತಾರೆ. ಹೀಗಾಗಿ ಇವತ್ತು ನಲವತ್ತು ಪಸೆಂಟ್ ಕಮಿಷನ್ನಿನ ಆರೋಪವೇ ನಿದೆ? ಇದು ತಾರ್ಕಿಕ ಅಂತ್ಯ ಕಾಣಲು ಸಾಧ್ಯವೇ ಇಲ್ಲ. ಕಡಿಮೆ ಭ್ರಷ್ಟರೇ ನೀತಿವಂತರು ಎನ್ನುವಂತಹ ಈ ಪರಿಸ್ಥಿತಿ ಇದೆಯಲ್ಲ? ಇದು ಪ್ರಜಾಪ್ರಭುತ್ವವನ್ನು ಲೇವಡಿ ಮಾಡುವಂತಿದೆಯೇ ಹೊರತು ಬೇರೇನಲ್ಲ. ಒಂದು ಕಾಲದಲ್ಲಿ ಅಧಿಕಾರ ವಲಯದಲ್ಲಿ ಕಮಿಷನ್ ಮಾತೇ ಇರಲಿಲ್ಲ, ಬದಲಿಗೆ ಇದ್ದ ಗುತ್ತಿಗೆದಾರರ ಬಳಿ ತುಂಬ ಪ್ರಭಾವಿಗಳಾದ ಕೆಲವರು ತಮ್ಮವರಿಗೆ ಇಂತಹ ಅನುಕೂಲ ಮಾಡಿಕೊಡಿ ಎಂದು ಶಿಫಾರಸು ಮಾಡುವ ಪದ್ಧತಿ ಇತ್ತು.
ದೇವರಾಜ ಅರಸರು ಮುಖ್ಯಮಂತ್ರಿಯಾದ ಕಾಲದಲ್ಲಿ ಗುತ್ತಿಗೆದಾರರು ಮತ್ತು ಅಬಕಾರಿ ಲಾಬಿಯ ಪ್ರಮುಖರು ಉನ್ನತ ಸ್ಥಾನದಲ್ಲಿದ್ದ ಕೆಲವೇ ಕೆಲವರಮಾತಿನಂತೆ ನಡೆದುಕೊಳ್ಳುತ್ತಿದ್ದರು. ಅವರು ಹೇಳಿದ್ದನ್ನು ಪೂರೈಸುತ್ತಿದ್ದರು. ಆದರೂ ವೀರೇಂದ್ರ ಪಾಟೀಲರಂತಹವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮದ್ಯದ ಲಾಬಿಯನ್ನು ಬಗ್ಗು ಬಡಿಯುವ ಕೆಲಸ ಮಾಡಿದರು.
ಮದ್ಯದ ಲಾಬಿಯಿಂದ ೧೯೮೯ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಅನುಕೂಲವಾಯಿತು ಎಂಬ ಮಾತು ಕೂಡಾ ವೀರೇಂದ್ರಪಾಟೀಲರಿಗೆಮುಖ್ಯವೆನ್ನಿಸಲಿಲ್ಲ. ಸರಕಾರದ ಆದಾಯ ಹೆಚ್ಚಿಸಬೇಕೆಂದರೆ ಮದ್ಯದ ಲಾಬಿಯನ್ನು ಬಡಿಯಲೇ ಬೇಕು ಎಂಬುದು ಅವರ ಧೋರಣೆಯಾಗಿತ್ತು. ಇದಾದನಂತರವೂ ಮದ್ಯದ ಲಾಬಿ ಪ್ರಬಲವಾಗಿಯೇ ಇತ್ತು.
೧೯೯೯ರ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಎಸ್.ಎಂ. ಕೃಷ್ಣ ಅವರು ಮದ್ಯದ ಲಾಬಿಯ ಪ್ರಮುಖರು ತಮಗೆ ಆಪ್ತರಾಗಿದ್ದರೂ ಅದನ್ನು ಲೆಕ್ಕಿಸದೆ ಪಾನೀಯ ನಿಗಮವನ್ನು ಸ್ಥಾಪಿಸಿದರು. ಹೀಗೆ ಪಾನೀಯ ನಿಗಮವನ್ನು ಸ್ಥಾಪಿಸುವ ಅವರ ನಿರ್ಧಾರ ರಾಜ್ಯದಲ್ಲಿ ಮದ್ಯದ ಲಾಬಿ ಉರುಳಿ ಬೀಳುವಂತೆ ಮಾಡಿದ್ದು ನಿಜ. ಅರ್ಥಾತ್, ಜನಹಿತದ ವಿಷಯ ಬಂದಾಗ ಅಽಕಾರದಲ್ಲಿರುವವರು ಕಠಿಣ ತೀರ್ಮಾನಗಳನ್ನು ಕೈಗೊಳ್ಳಲು ಸಜ್ಜಾಗಬೇಕಾಗುತ್ತದೆ ಎಂಬುದು ಕೃಷ್ಣ ಅವರಧೋರಣೆಯಾಗಿತ್ತು. ಇದಾಗಿದ್ದೇ ಕಡೆ. ನಂತರದ ದಿನಗಳಲ್ಲಿ ಗುತ್ತಿಗೆದಾರರನ್ನು, ಪ್ರಭಾವಿ ಲಾಬಿಗಳನ್ನು ಬಗ್ಗು ಬಡಿಯುವ ಇಚ್ಛಾಶಕ್ತಿಯೇ ನಮ್ಮ ಅಽಕಾರಸ್ಥರಿಂದಆಗಿಲ್ಲ.
ಕಾರಣ: ಭೂ ಮಾಫಿಯಾ, ಗಣಿ ಮಾಫಿಯಾದಿಂದ ಹಿಡಿದು ಎಲ್ಲ ಮಾಫಿಯಾಗಳ ಜನ ಈಗ ಖುದ್ದು ಜನಪ್ರತಿನಿಧಿಗಳ ಗೆಟಪ್ಪಿನಲ್ಲಿ ನಿಂತಿದ್ದಾರೆ. ಇಂತಹವರಪ್ರಭಾವ ಅಧಿಕವಾಗಿರುವ ಈ ಸಂದರ್ಭದಲ್ಲಿ ಮಾಫಿಯಾಗಳನ್ನು, ಪ್ರಭಾವಿ ಗುತ್ತಿಗೆದಾರರನ್ನು ಬಗ್ಗು ಬಡಿಯುವವರು ಯಾರು?ಸಾರ್ವಜನಿಕ ಹಣದ ಸೋರಿಕೆಯನ್ನು ತಡೆಗಟ್ಟುವವರು ಯಾರು? ಪರಿಸ್ಥಿತಿ ಹೀಗಿರುವಾಗಲೇ ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಬಾರಿಯ ವಿಧಾನಮಂಡಲಅಧಿವೇಶನ ಆರಂಭವಾಗಲಿದೆ. ಬೇಕಿದ್ದರೆ ಗಮನಿಸಿ ನೋಡಿ, ಈ ಅಽವೇಶದ ಅವಽಯಲ್ಲಿ ಸರಕಾರದ ವಿರುದ್ಧದ ಭ್ರಷ್ಟಾಚಾರದ ಹಗರಣಗಳು ತಾರ್ಕಿಕ ಅಂತ್ಯಕಾಣುತ್ತವೆಯೇ? ಎಂದು ಪರಿಶೀಲಿಸಿ.
ನಿಶ್ಚಿತವಾಗಿ ಈ ಕೆಲಸವಾಗುವುದಿಲ್ಲ. ಬದಲಿಗೆ ನೆಪ ಮಾತ್ರಕ್ಕೆ ಒಬ್ಬರು ಇನ್ನೊಬ್ಬರ ಮೇಲೆ ಆರೋಪ-ಪ್ರತ್ಯಾರೋಪ ಮಾಡಿ ಅಧಿವೇಶನವನ್ನು ಒಂದು ಅಣಕಿನಂತೆ ಮಾರ್ಪಡಿಸಿಬಿಡುತ್ತಾರೆ. ಕಾಂಗ್ರೆಸ್ ಪಕ್ಷದ ನಾಯಕರು ಭ್ರಷ್ಟಾಚಾರ ತಡೆಯ ವಿಷಯದಲ್ಲಿ ಕೂಗು ಹಾಕಿದರೆ, ಲೋಕಾಯುಕ್ತ ಸಂಸ್ಥೆಯನ್ನು ಮುಗಿಸಿದವರೇ ನೀವು ಎಂದು ಅಽಕಾರಾರೂಢ ಬಿಜೆಪಿ ಮರುಬೊಬ್ಬೆ ಹಾಕುತ್ತದೆ.
ಇತ್ತೀಚಿಗೆ ಡಜನ್ನುಗಟ್ಟಲೆ ಭ್ರಷ್ಟರ ವಿರುದ್ಧ ಎಸಿಬಿ ದಾಳಿ ನಡೆಯಿತಲ್ಲ? ಈ ಧಾಳಿಯ ಕತೆ ಏನಾಯಿತು? ಎಂದು ಕೇಳಿದರೆ ಸರಕಾರದ ಉತ್ತರ ಜನಸಾಮಾನ್ಯರಿಗೆಭ್ರಮನಿರಸನ ಉಂಟು ಮಾಡುವಂತಿರುತ್ತದೆ. ಅಂದ ಹಾಗೆ ಈ ಎಸಿಬಿ ದಾಳಿಯ ಬಗ್ಗೆ ಶುರುವಿನಲ್ಲಿ ಜನ ಖುಷಿಪಟ್ಟಿದ್ದು ಹೌದು. ತಮ್ಮ ದಿನನಿತ್ಯದ ಬದುಕು ದಿನದಿಂದ ದಿನಕ್ಕೆ ದುರ್ಭರವಾಗುತ್ತಿರುವ ಕಾಲದಲ್ಲಿ ದಾಳಿಗೊಳಗಾದ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ಹೇಗೆ ಗಳಿಸಿದರು? ಅವರಿಗೆ ಸರಿಯಾದ ಶಾಸ್ತಿಯಾಗಿದೆ ಎಂದು ಸಂಭ್ರಮಿಸಿದ್ದೂ ಹೌದು.
ಆದರೆ ದಾಳಿ ನಡೆದು ಇಷ್ಟು ದಿನಗಳಾದ ಮೇಲೆ ಸಾರ್ವಜನಿಕ ವಲಯಗಳಲ್ಲಿ ಒಂದು ಸುದ್ದಿ ಹುಟ್ಟಿಕೊಂಡಿದೆ. ಅದೆಂದರೆ, ಅಧಿಕಾರದಲ್ಲಿರುವವರಿಗೆ ಹಣಬೇಕು ಎಂದಾಗಲೆಲ್ಲ ಇಂತಹ ದಾಳಿಗಳನ್ನು ನಡೆಸಲಾಗುತ್ತದೆ. ಅವರ ಉದ್ದೇಶ ಈಡೇರಿದ ಮೇಲೆ ದಾಳಿಯ ಕತೆಯೇ ಬಣ್ಣ ಕಳೆದುಕೊಳ್ಳುತ್ತದೆ ಎಂಬುದು. ಹೀಗೆಪರಿಸ್ಥಿತಿ ಅಯೋಮಯವಾಗಿರುವ ಕಾಲದಲ್ಲಿ ನಲವತ್ತು ಪಸೆಂಟ್ ಕಮಿಷನ್ನಿನ ಆರೋಪ ಭ್ರಷ್ಟಾಚಾರ ಮುಕ್ತ ಕರ್ನಾಟಕವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂಬ ಭ್ರಮೆ ಯಾರಿಗೂ ಇಲ್ಲ. ಭ್ರಷ್ಟ ಬೆಕ್ಕುಗಳ ದಂಡಿನ ಮಧ್ಯೆ ಘಂಟೆ ನುಗ್ಗಿಸುವವರೇ ಕಾಣದಿರುವ ಈ ಸನ್ನಿವೇಶದಲ್ಲಿ ಇದು ಸಹಜ ಕೂಡ.