ಏಜಿ…ಓಜಿ…ಲೋಜಿ..ಪಾರ್ಲೆ-ಜಿ…
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
@.
ಪಾರ್ಲೆ-ಜಿ ಈಗಲೂ ಐದು ರೂಪಾಯಿಗೆ ಸಿಗುತ್ತಿದೆ. ಬಿಸ್ಕತ್ತಿನ ಪ್ಯಾಕೆಟ್ ತೂಕದಲ್ಲಿ ಕಮ್ಮಿಯಾಗಿ, ಗಾತ್ರದಲ್ಲಿ ಸಣ್ಣ ದಾದರೂ, ರುಚಿಯಲ್ಲಿ ಯಾವತ್ತೂ ಕಮ್ಮಿಯಾಗಲಿಲ್ಲ. ನೈರ್ಮಲ್ಯ ಕಾದುಕೊಳ್ಳುವಲ್ಲಿ, ಶುದ್ಧತೆ ಕಾಪಾಡಿ ಕೊಳ್ಳುವಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಅಂತೆಯೇ, ಬಡವನಿಗೆ ಹತ್ತರ ಬದಲು ಎಂಟು ಬಿಸ್ಕತ್ತು ಸಿಗಬಹುದು.
ಭಾರತದಲ್ಲಿ ಬಡವರಿಗೂ ಬಂಧು, ಶ್ರೀಮಂತರಿಗೂ ಸಿಂಧು ಅಂತೇನಾದರೂ ಇದ್ದರೆ ಬಹುಶಃ ಅದುಪಾರ್ಲೆ-ಜಿಬಿಸ್ಕತ್ತು. ಅದೇನೋ ಕೌರವರಿಗೂ ಭಾವ, ಪಾಂಡವರಿಗೂ ಭಾವ ಅಂತಾರಲ್ಲ, ಹಾಗೆ. ಬಡವ-ಬಲ್ಲಿದ, ಮಕ್ಕಳು-ವಯಸ್ಕರು, ಬೆಳಿಗ್ಗೆ-ರಾತ್ರಿ ಎಂಬ ಭೇದ ಭಾವವಿಲ್ಲದೇ, ವಯಸ್ಸು, ಸಮಯ ಎಲ್ಲವನ್ನೂ ಮೀರಿ, ಎಲ್ಲರಿಗೂ ಒಗ್ಗುವ, ಎಲ್ಲ ಸಮಯಕ್ಕೂ ಸಲ್ಲುವ ಬಿಸ್ಕತ್ತು ಇದು.
ಈ ಬಿಸ್ಕತ್ತು ಚಹಾದೊಂದಿಗೆ ಸೇರಿ ಭಾರತದ ಲಕ್ಷಾಂತರ ವ್ಯಾಪಾರಸ್ಥರ, ಉದ್ಯಮಿಗಳು ಮೇಜಿನ ಮೇಲೆ ಕುಳಿತು, ಅವರ ವಹಿವಾಟಿಗೆ ಸಾಕ್ಷಿಯಾದದ್ದೂ ಇದೆ, ಸ್ವಾತಂತ್ರ ಬಂದು ಏಳೂವರೆ ದಶಕದ ನಂತರವೂ, ಪ್ರತಿನಿತ್ಯ ಅದೆಷ್ಟೋ ಬಡವರ ಉದರ ಸೇರಿ, ಅವರ ಹೊಟ್ಟೆ ತಣ್ಣಗಿಡುವುದಕ್ಕೆ ಸಹಕರಿಸಿದ್ದೂ ಇದೆ.
ವಿಶ್ವದಾದ್ಯಂತ ಚಹಾದ ಪ್ರಾಮಾಣಿಕ ಜತೆಗಾರ ಬಿಸ್ಕತ್ತು. ಭಾರತವೂ ಇದರಿಂದ ಹೊರ ತಲ್ಲ. ಅದರಲ್ಲೂ ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಚಹಾದ ಜತೆ ಪಾರ್ಲೆ-ಜಿ ಬಿಸ್ಕತ್ತು ಸವೆಸಿದಷ್ಟು ಹಾದಿಯನ್ನುಇನ್ಯಾವುದೂ ಸವೆಸಿರಲಿಕ್ಕಿಲ್ಲ. ಭಾರತದಲ್ಲಿ ಪ್ರತಿ ಸೆಕೆಂಡಿಗೆ ನಾಲ್ಕೂವರೆ ಸಾವಿರ ಜನ, ಅಂದರೆ ಪ್ರತಿ ನಿಮಿಷಕ್ಕೆ ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿ ಪಾರ್ಲೆ-ಜಿ ಬಿಸ್ಕತ್ತನ್ನು ತಿನ್ನುತ್ತಿದ್ದಾರೆ ಎನ್ನುವುದೇ ಇದಕ್ಕೆ ಸಾಕ್ಷಿ.
ದೇಶದಾದ್ಯಂತ ಇಂದು ಪಾರ್ಲೆ-ಜಿ ಬಿಸ್ಕತ್ತು ತಯಾರಿಸುವ ನೂರ ಮೂವತ್ತು ಕಾರ್ಖಾನೆಗಳಿವೆ. ಏಳು ಬೇರೆ ರಾಷ್ಟ್ರಗಳಲ್ಲೂ ಇಂದು ಪಾರ್ಲೆ ಬಿಸ್ಕತ್ತು ತಯಾರಿಸುವ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳು ಪ್ರತಿ ತಿಂಗಳು ಹೆಚ್ಚು ಕಮ್ಮಿ ಭಾರತದ ಜನಸಂಖ್ಯೆ ಯಷ್ಟೇ ಪಾರ್ಲೆ ಬಿಸ್ಕತ್ತಿನ ಪ್ಯಾಕೆಟ್ ತಯಾರಿಸುತ್ತವೆ. ಇದು ದೇಶದ ಸುಮಾರು ಅರವತ್ತು ಲಕ್ಷ ಅಂಗಡಿ ಮುಂಗಟ್ಟನ್ನು ತಟ್ಟು ತ್ತಿದೆ. ಭಾರತದ ಮೂಲೆಮೂಲೆಯ ಹಳ್ಳಿಯಲ್ಲಿರುವ ಜನರ ಕೈತಲುಪುತ್ತಿದೆ. ಪ್ರತಿ ವರ್ಷ ಪಾರ್ಲೆ ಉತ್ಪಾದಿಸುವ ಬಿಸ್ಕತ್ತನ್ನು ಒಂದರ ತುದಿಗೊಂದು ಜೋಡಿಸಿ ಇಟ್ಟರೆ ಈ ಭೂ ಮಂಡಳದ ನೂರಕ್ಕೂ ಹೆಚ್ಚು ಸುತ್ತು ಬರಬಹುದಂತೆ. ಇನ್ನೇನು ಬೇಕು?
ಇನು ವ್ಯವಹಾರದ ದೃಷ್ಟಿಯಿಂದ ನೋಡುವುದಾದರೆ, ಇಂದು ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಬಿಸ್ಕತ್ತು ಪಾರ್ಲೆ-ಜಿ. ಆರಂಭವಾದಂದಿನಿಂದ ಇಂದಿನವರೆಗೆ ಕೇವಲ1947ರಲ್ಲಿ ಒಂದು ವರ್ಷ ಬಿಟ್ಟು, ಪ್ರತಿ ವರ್ಷ ಪಾರ್ಲೆ ಕಂಪನಿಯ ಲಾಭ ಹೆಚ್ಚುತ್ತಲೇ ಇದೆ. ೨೦೦೯-೧೦ರ ವೇಳೆಗೆ ಪಾರ್ಲೆ-ಜಿಯ ಉತ್ಪಾದನೆ ಚೀನಾ ದೇಶದಲ್ಲಿರುವ ಎಲ್ಲ ಕಂಪನಿ ಗಳೂ ಸೇರಿ ಉತ್ಪಾದಿ ಸುತ್ತಿರುವ ಒಟ್ಟೂ ಬಿಸ್ಕತ್ತಿಗಿಂತಲೂ ಹೆಚ್ಚಾಗಿತ್ತು.
ಆಗ ಚೀನಾ ವಿಶ್ವದಲ್ಲಿ ಅತಿ ಹೆಚ್ಚು ಬಿಸ್ಕತ್ತು ಬಳಸುವವರ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನದಲ್ಲಿತ್ತು. ಪಾರ್ಲೆ-ಜಿ ಅದನ್ನೂ ಮೀರಿಸಿತು ಎಂದರೆ ಅದು ಮಕ್ಕಳಾಟಿಕೆಯಲ್ಲ.2011ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಬಿಸ್ಕತ್ತು ಮಾರಿದ ಕೀರ್ತಿಯೂ ಪಾರ್ಲೆಕಂಪನಿಯದ್ದು. ಅದಾಗಿ ಎರಡು ವರ್ಷದಲ್ಲಿ ಎ-ಎಂಸಿಜಿ (   ) ಪಟ್ಟಿಯಲ್ಲಿ ಪಾರ್ಲೆ ಮೊದಲ ಸ್ಥಾನಕ್ಕೇರಿತು. ಕಳೆದ ವರ್ಷ,2020ರಲ್ಲಿ ಕೋವಿಡ್ ಮಹಾಮಾರಿಯಿಂದಾಗಿ ಬಹುತೇಕ ಉದ್ಯಮಗಳೆಲ್ಲ ಲಗಾಟಿ ಹೊಡೆದು ಉರುಳುರುಳಿ ಬೀಳುತ್ತಿರುವ ಸಂದರ್ಭದಲ್ಲೂ, ಭಾರತದಲ್ಲಿ ಬಿಸ್ಕತ್ತ ತಯಾರಿಸುವ ಕಂಪನಿಗಳ ಲಾಭದಲ್ಲಿ ಐದು ಪ್ರತಿಶತ ವೃದ್ಧಿಸಿತ್ತು.
ಅದರಲ್ಲಿ ಪಾರ್ಲೆ-ಜಿಯ ಪಾತ್ರವೇ ಶೇಕಡಾ ಎಂಬತ್ತರಿಂದ ತೊಂಬತ್ತರಷ್ಟಿತ್ತು. (ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಪಾರ್ಲೆ ಸಂಸ್ಥೆ ಸರಕಾರದೊಂದಿಗೆ ಸೇರಿ ಪ್ರತಿವಾರ ಮೂರು ಕೋಟಿ ಪಾರ್ಲೆ-ಜಿ ಬಿಸ್ಕತ್ತಿನ ಪೊಟ್ಟಣವನ್ನು ಜನರಿಗೆ ಉಚಿತವಾಗಿ ಹಂಚಿ ದ್ದನ್ನು ಇಲ್ಲಿನೆನಪಿಸಿಕೊಳ್ಳಬಹುದು) ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವೇ ಸಾವಿರ ರೂಪಾಯಿ ಬಂಡವಾಳ ಇಟ್ಟುಕೊಂಡು ಚಿಗು ರೊಡೆದ ಈ ಸಂಸ್ಥೆ ಇಂದು ಹತ್ತು ಸಾವಿರ ಕೋಟಿ ರೂಪಾಯಿ ಒಡೆತನದ ಹೆಮ್ಮರವಾಗಿ ಬೆಳೆದು ನಿಂತಿದೆ.
ಇಂದು ವಿಶ್ವದಾದ್ಯಂತ ತಯಾರಾಗುವ ಬಿಸ್ಕತ್ತುಗಳಲ್ಲಿ ಏಳು ಪ್ರತಿಶತ ಪಾರ್ಲೆ ಸಂಸ್ಥೆ ತಯಾರಿಸುತ್ತಿದ್ದು, ವಿಶ್ವದ ಅಗ್ರಕ್ರಮಾಂಕ ದಲ್ಲಿದೆ. ಸಂಸ್ಥೆಬಿಸ್ಕತ್ತು ಅಷ್ಟೇ ಅಲ್ಲದೆ, ಕುಕೀಸ್, ಚಾಕಲೇಟ್, ಕ್ಯಾಂಡಿಯಿಂದ ಮುಂದುವರಿದು, ತಂಪುಪಾನೀಯಗಳನ್ನೂತಯಾರಿಸುತ್ತಿದೆ. ಇಂತಿರ್ಪ ಪಾರ್ಲೆ, ಹೆಸರು ಕೇಳಲು ವಿದೇಶಿ ಕಂಪನಿ ಅನಿಸಿದರೂ, ಅಪ್ಪಟ ದೇಶೀ ಸಂಸ್ಥೆ. ನಿಜ ಸಂಗತಿ ಏನೆಂದರೆ, ಈ ಸಂಸ್ಥೆಯ ಹುಟ್ಟಿಗೆ ಕಾರಣವೇ ಸ್ವದೇಶಿ ಆಂದೋಲನ ಮತ್ತು ಆ ಆಂದೋಲನದಿಂದ ಪ್ರಭಾವಿತರಾದ ಮೋಹನ ಲಾಲ್ ದಯಾಳ್ ಚೌಹಾಣ್. ಮೋಹನ್‌ಲಾಲ್ ಮೂಲತಹಃ ಒಬ್ಬ ದರ್ಜಿ.
ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ಬಟ್ಟೆ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದರು. ಹತ್ತು ವರ್ಷದ ಅವಽಯಲ್ಲಿ ಅವರ ವ್ಯಾಪಾರ ವಿಸ್ತರಿಸಿ, ವಿದೇಶಗಳಿಂದ ರೇಷ್ಮೆ ಬಟ್ಟೆ ಆಮದು ಮಾಡಿಕೊಳ್ಳುವವರೆಗೆ ಬೆಳೆಯಿತು. ೧೯೨೭ರಲ್ಲಿಸ್ವದೇಶಿ ಆಂದೋಲನದ ವಿಷಯ ತಿಳಿದು ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮೋಹನ್‌ಲಾಲ್ ಮನಸ್ಸು ಮಾಡಿದ್ದರೆ ಬಟ್ಟೆ ಆಮದು ಮಾಡಿಕೊಳ್ಳುವುದನ್ನು ಬಿಟ್ಟು, ಖಾದಿ ಬಟ್ಟೆಯ ಬಳಕೆಗೆ ಹೆಚ್ಚು ಒತ್ತುಕೊಡಬಹುದಾಗಿತ್ತು. ಆದರೆ ಆಗಲೇಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ಸಾಕಷ್ಟು ಜನ ಖಾದಿ ಉದ್ಯಮ ಆರಂಭಿಸಿದ್ದರಿಂದ ಬೇರೆ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಆ ಕಾಲದಲ್ಲಿ ಚಾಕಲೇಟ್, ಕ್ಯಾಂಡಿ ಮತ್ತು ಬಿಸ್ಕತ್ತು ಶ್ರೀಮಂತರು ಮಾತ್ರಕೊಂಡುಕೊಳ್ಳಬಹುದಾದ ತಿನಿಸಾ ಗಿತ್ತು.
ಲಿಂಬೆ ಹುಳಿ ಪೆಪ್ಪರಮೆಂಟ್ ಮಾತ್ರ ಬಡವರ ಕೈಗೆಟುಕುವಂತಿತ್ತು. ಬಹುತೇಕ ಬಿಸ್ಕತ್ತು, ಚಾಕಲೇಟ್‌ಗಳು ವಿದೇಶದಿಂದ,ಅದರಲ್ಲೂ ಇಂಗ್ಲೆಂಡ್‌ನಿಂದ ಆಮದಾಗುತ್ತಿದ್ದವು. ಹೇಳಿಕೇಳಿ ಬ್ರಿಟಿಷರ ವಿರುದ್ಧವೇ ಹೋರಾಟ, ಇನ್ನುಆದೇಶದಿಂದ ಆಮದಾದ ವಸ್ತು ಬಳಸುವುದುಂಟೇ? ಆ ಕಾಲದಲ್ಲಿ ಕಲ್ಕತ್ತಾ ಮೂಲದ ಬ್ರಿಟಾನಿಯಾ ಬಿಸ್ಕಿತ್ತು ಕಂಪನಿ ಮತ್ತು ಸಿಂಧ್ ಪ್ರಾಂತ್ಯದ ಸುಕ್ಕೂರ್‌ನ ಜೆ. ಬಿ. ಮಂಘಾರಾಮ್ ಆಂಡ್ ಸನ್ಸ್ ಕಂಪನಿಗಳು ಬಿಸ್ಕತ್ತು ತಯಾರಿಸುತ್ತಿದ್ದವು.
ಆದರೆ, ಬ್ರಿಟಾನಿಯಾ ಸಂಸ್ಥೆಯಲ್ಲಿ ಬ್ರಿಟಿಷ್ ಪಾಲುಗಾರಿಕೆ ಇತ್ತು. ಇನ್ನು ಮಂಘಾರಾಮ್ ಬಿಸ್ಕತ್ತುಗಳು ರುಚಿಕರವಾಗಿರುತ್ತಿದ್ದವು.ಆದರೆ ಬೆಲೆ ಮಾತ್ರ ಬಹಳ ಕಹಿಯಾಗಿತ್ತು. ಸಾಮಾನ್ಯ ಬಡ ಜನರು ತಿನ್ನುವುದು ಬಿಡಿ, ಅದರೆಡೆ ನೋಡುವ ಆಟವೂ ಇರಲಿಲ್ಲ. ಬಿಸ್ಕತ್ತು, ಚಾಕಲೇಟುಗಳನ್ನು ಬಡವರೂ ತಿನ್ನುವಂತಾಗ ಬೇಕು ಎಂದು ನಿರ್ಧರಿಸಿದ ಮೋಹನ್‌ಲಾಲ್, ಅದರ ತಂತ್ರಜ್ಞಾನ ತಿಳಿಯಲು ಜರ್ಮನಿಗೆ ತೆರಳಿದರು.
ಮೋಹನ್ ಲಾಲ್ ಆರು ತಿಂಗಳು ಜರ್ಮನಿಯಲ್ಲಿ ನೆಲೆಸಿ ಕ್ಯಾಂಡಿ ಮತ್ತು ಬಿಸ್ಕತ್ತು ತಯಾರಿಸುವ ವಿಧಾನ ಕಲಿತರು. ಹಿಂತಿರುಗಿ ಭಾರತಕ್ಕೆ ಬರುವಾಗ ಅರವತ್ತು ಸಾವಿರ ರೂಪಾಯಿ ಬೆಲೆಬಾಳುವ ಕ್ಯಾಂಡಿ ತಯಾರಿಸುವ ಯಂತ್ರವನ್ನು ತಮ್ಮೊಂದಿಗೆ ತಂದರು. ಮೊದಲು ಕ್ಯಾಂಡಿ, ನಂತರ ಬಿಸ್ಕತ್ತು ತಯಾರಿಸುವುದೆಂದು ನಿರ್ಧರಿಸಿದರು. ಮುಂಬೈನ ವಿಲೆಪಾರ್ಲೆಯ ಒಂದು ಕಟ್ಟಡದಲ್ಲಿಕಾರ್ಖಾನೆ ಆರಂಭವೂ ಆಯಿತು. ಆರಂಭದಲ್ಲಿ ಅವರ ಪರಿವಾರದವರೇ ಹನ್ನೆರಡು ಜನ ಸೇರಿ ಕ್ಯಾಂಡಿ ತಯಾರಿಸುತ್ತಿದ್ದರು. ಕ್ಯಾಂಡಿ ತಯಾರಿಸಲು ಬೇಕಾದ ಸಾಮಗ್ರಿ ತರುವುದು, ಕ್ಯಾಂಡಿ ತಯಾರಿಸುವುದು, ಪ್ಯಾಕ್ ಮಾಡುವುದು, ಅದನ್ನು ಶೇಖರಿಸಿಡು ವುದು, ಸಾಗಿಸುವುದು, ಹೀಗೆ ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿ ವಹಿಸಿದ್ದರು ಮೋಹನ್‌ಲಾಲ್.
ಎಲ್ಲರೂ ಕಾರ್ಯದಲ್ಲಿ ಎಷ್ಟು ವ್ಯಸ್ಥರಾದರೆಂದರೆ ತಮ್ಮ ಸಂಸ್ಥೆಗೆ ಯಾವ ಹೆಸರಿಡಬೇಕೆಂದು ಯಾರೂ ಯೋಚಿಸಲಿಲ್ಲ. ಕೊನೆಯ ಕ್ಷಣದಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವ ಹೆಸರು ಕಾಣದಿದ್ದಾಗ, ಆ ಊರಿನ ಹೆಸರನ್ನೇ (ಪಾರ್ಲೆ) ತಮ್ಮ ಸಂಸ್ಥೆಗೆಇಟ್ಟುಕೊಂಡರು. ಹಾಗೆ ಆರಂಭವಾದ ಹೌಸ್ ಆಫ್ ಪಾರ್ಲೆ(ಈಗಿನ ಹೆಸರು- ಪಾರ್ಲೆ ಪ್ರಾಡಕ್ಟ್ಸ್) ಸಂಸ್ಥೆ1929ರಲ್ಲಿ ಮೊಟ್ಟ ಮೊದಲು ಕಿತ್ತಳೆ ಹಣ್ಣಿನ ಪರಿಮಳದ ಆರೆಂಜ್ ಬೈಟ್ ಕ್ಯಾಂಡಿ ತಯಾರಿಸಿತು.
ಒಂದು ದಶಕದವರೆಗೆ ಸಂಸ್ಥೆ ಕ್ಯಾಂಡಿ, ಟಾಫಿ, ಪೆಪ್ಪೆರ ಮೆಂಟ್ ತಯಾರಿಸಿ ಮಾರಿತು.1939ರಲ್ಲಿ ಮೊದಲ ಬಾರಿಗೆ ಪಾರ್ಲೆ ಗ್ಲುಕೋ ಬಿಸ್ಕತ್ತು ಮಾರುಕಟ್ಟೆಗೆ ಬಂತು. ಕಮ್ಮಿ ಬೆಲೆ ಮತ್ತು ಎಲ್ಲ ಕಡೆ ಲಭ್ಯವಾಗುತ್ತಿದ್ದುದರಿಂದ ಬಲುಬೇಗ ಜನಪ್ರಿಯವೂ ಆಯಿತು. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದ ಬಡವ ಮೊದಲ ಬಾರಿಗೆ ಸ್ವತಃ ತಾನೇ ಬಿಸ್ಕತ್ತು ಕೊಂಡು ತಿನ್ನುವಂತಾಯಿತು.ಎರಡನೆಯ ಮಹಾಯುದ್ಧದ ವೇಳೆಗೆ ಪಾರ್ಲೆ ಗ್ಲುಕೋ ಬ್ರಿಟಿಷ್ ಮತ್ತು ಭಾರತೀಯ ಸೈನಿಕರ ಪ್ರಮುಖ ಆಹಾರಗಳಲ್ಲಿ ಒಂದಾಯಿತು. ಪಾರ್ಲೆ ಸಂಸ್ಥೆಯ ಬಿಸ್ಕತ್ತು ರುಚಿಕರವಾಗಿರುತ್ತಿದ್ದವು ನಿಜ.
ಆದರೆ ರುಚಿಯ ಸೆಳೆತಕ್ಕಿಂತಲೂ ಭಾರತೀಯರು ಭಾವನಾತ್ಮಕ ಸೆಳೆತಕ್ಕೊಳಗಾಗಿದ್ದರು. ಪಾರ್ಲೆ-ಜಿ ನಮ್ಮ ಬಿಸ್ಕತ್ತು ಎನ್ನು ವಂತಾಗಿತ್ತು. ಸಂಸ್ಥೆ ಆರಂಭವಾದಾಗಿನಿಂದ, ಸ್ವಾತಂತ್ರ ಸಿಕ್ಕ ವರ್ಷ ಮಾತ್ರ ಲಾಭ ಕಾಣಲಿಲ್ಲ. ಆ ವರ್ಷ ಬಿಸ್ಕತ್ತು ತಯಾರಿಸಲು ಬೇಕಾದ ಗೋಧಿ ದೊರೆತಿರಲಿಲ್ಲ ಹೊರತು ಬೇರೇನೂ ಕಾರಣ ಇರಲಿಲ್ಲ. ಜನರಿಂದ ವಿವಿಧ ರೂಪದಲ್ಲಿ ಬೇಡಿಕೆ ಬರಲಾ ರಂಭಿಸಿದಾಗ ಸಂಸ್ಥೆ, ದೇಶದಾದ್ಯಂತ ಗೋಧಿಯ ಕೊರತೆ ಇರುವುದಾಗಿಯೂ, ಒಮ್ಮೆ ಪರಿಸ್ಥಿತಿ ಹತೋಟಿಗೆ ಬಂದ ತಕ್ಷಣ ಉತ್ಪಾದನೆ ಆರಂಭಿಸುವುದಾಗಿಯೂ ಅಧಿಕೃತ ಹೇಳಿಕೆ ನೀಡಿತು.
ಹೇಳಿಕೆಯಿಂದ ಜನ ತೃಪ್ತರಾಗದಿದ್ದಾಗ, ಸಂಸ್ಥೆ ಸ್ವಲ್ಪ ದಿನ ಬಾರ್ಲಿ ಮತ್ತು ಜೋಳದಿಂದ ಬಿಸ್ಕತ್ತು ತಯಾರಿಸಿ ಮಾರಿತು. ಆ ಸಂದರ್ಭದಲ್ಲೂ ಬೆಲೆ ಏರಿಸಿರಲಿಲ್ಲ! ಪಾರ್ಲೆ ಸಂಸ್ಥೆಗೆ ಬ್ರಿಟಾನಿಯಾ ಮತ್ತು ಮಂಘಾರಾಮ್ ಸಂಸ್ಥೆಗಳು ಪ್ರತಿಸ್ಪರ್ಧಿಯಾಗಿ ದ್ದವು. ಅದರಲ್ಲೂ ಮಂಘಾರಾಮ್ ವಿವಿಧ ನೂತನ ಉತ್ಪಾದನೆಯಿಂದ ಜನರನ್ನು ತಲುಪುತ್ತಿತ್ತು. ಮಂಘಾರಾಮ್‌ನ ಆರೆಂಜ್ ಕ್ರೀಮ್, ಪೈನಾಪಲ್ವೇ-ರ್, ಬಟರ್ ಕುಕೀಸ್ ಸಾಕಷ್ಟು ಜನಪ್ರಿಯವಾಗಿದ್ದವು.
ಎಲ್ಲ ಸವಾಲುಗಳಿಗೂ ಪಾರ್ಲೆ ಸಂಸ್ಥೆ ಸರಿಯಾಗೇ ಉತ್ತರ ಕೊಡುತ್ತಿತ್ತು. ಪಾರ್ಲೆ ನಲವತ್ತರ ದಶಕದಲ್ಲಿ ಭಾರತದ ಮೊದಲ ಉಪ್ಪಿನ ಬಿಸ್ಕತ್ ಮೊನಾಕೊ ತಯಾರಿಸಿತು. ಐವತ್ತರ ದಶಕದಲ್ಲಿ ಚೀಸ್ ಬಿಸ್ಕತ್, ನಂತರದ ದಶಕಗಳಲ್ಲಿ ಕ್ರಮವಾಗಿ ಕಿಸ್‌ಮಿ ಚಾಕಲೇಟ್ಮತ್ತು ಪಾಪಿನ್ಸ್, ಉಪ್ಪು ಮತ್ತು ಸಿಹಿಮಿಶ್ರಿತ ಕ್ರಾಕ್‌ಜಾಕ್, ಮೆಲೋಡಿ ಮತ್ತು ಮ್ಯಾಂಗೋಬೈಟ್, ಚಾಕಲೇಟ್ ಚೂರು ಸೇರಿಸಿದ ಹೈಡ್ ಆಂಡ್ ಸೀಕ್ ತಯಾರಿಸಿ, ಜನಪ್ರಿಯತೆಯನ್ನು ಕಾಯ್ದಿಟ್ಟುಕೊಂಡಿತು.
1983ರಲ್ಲಿ ಮಂಘಾರಾಮ್ ಬ್ರಿಟಾನಿಯಾ ಸಂಸ್ಥೆಯಲ್ಲಿ ವಿಲೀನವಾದಾಗ ಪಾರ್ಲೆಯ ಸವಾಲು ಸ್ವಲ್ಪ ಹಗುರಾಯಿತು. ಪಾರ್ಲೆ ಎದುರಿಸಿದ ಇನ್ನೊಂದು ದೊಡ್ಡ ಸವಾಲು ಹೆಸರಿನದ್ದು. ಒಂದು ಕಾಲವಿತ್ತು, ಪಾರ್ಲೆ ಗ್ಲುಕೋ ಜನಪ್ರಿಯವಾದುದ್ದರಿಂದ ಉಳಿದವರೂ ಗ್ಲುಕೋ ಅಥವಾ ಗ್ಲುಕೋಸ್ ಹೆಸರಿನಲ್ಲಿ ಬಿಸ್ಕತ್ತು ತಯಾರಿಸುತ್ತಿದ್ದರು. ಬ್ರಿಟಾನಿಯಾ ಗ್ಲುಕೋಸ್-ಡಿ ಹೆಸರಿಟ್ಟ ದ್ದರಿಂದ ಪಾರ್ಲೆ ಗ್ಲುಕೋಗೆ ಪಾರ್ಲೆ-ಜಿ ಎಂದು ಮರುನಾಮಕರಣ ಮಾಡಲಾಯಿತು.
ಎಂಬತ್ತರ ದಶಕದಲ್ಲಿ ಜಿಗೆ ಗ್ಲುಕೋಸ್ ಎಂದು ಹೆಸರಿಸಿದ್ದನ್ನು2000ನೇ ಇಸವಿಯ ಆರಂಭದಲ್ಲಿ ‘ಜಿ’ ಎಂದರೆ ಜೀನಿಯಸ್ಎಂದು ಮಾರ್ಪಡಿಸಿತು. ಹಳದಿ ಮತ್ತು ಬಿಳಿ ಬಣ್ಣದ ಪೊಟ್ಟಣದ ಮೇಲೆ ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಪಾರ್ಲೆ-ಜಿ ಲಾಂಛನ, ಜತೆಗೆ ಪುಟ್ಟ ಹುಡುಗಿಯ ಚಿತ್ರ ಮುದ್ರಿಸಲಾಯಿತು. ಇದರ ಹಿಂದಿನ ಉದ್ದೇಶ ಇಷ್ಟೇ, ತಾನು ಉತ್ಪಾದಿಸಿದ ವಸ್ತು ಯಾವಾಗಲೂ ಜನರ ಕಣ್ಣಿಗೆ ಪಕ್ಕನೆರಾಚಬೇಕು. ಇದು ಒಂದು ರೀತಿಯ ಪ್ರಚಾರತಂತ್ರ, ಅಷ್ಟೇ. ನಿಜ, ಇಂದಿನ ದಿನಮಾನದಲ್ಲಿ ಕಮ್ಮಿ ಬೆಲೆಗೆ ದೊರಕುವ ವಸ್ತುವಿಗೂ ಪ್ರಚಾರ ಅವಶ್ಯ. ಪಾರ್ಲೆ ಪ್ರಾಡಕ್ಟ್ಸ್ ಅದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದೆ.
ಇಂದಿಗೂ ಸಂಸ್ಥೆ ಬೆಲೆಯ ಕಡೆ ಹೆಚ್ಚಿನ ಗಮನಕೊಡುತ್ತಿದೆ. ಕಳೆದ ಎಂಟು ದಶಕದಲ್ಲಿ ಮೂರು ಬಾರಿಯಷ್ಟೇ ಪಾರ್ಲೆ-ಜಿಯ ಬೆಲೆ ಏರಿದೆ. ಪಾರ್ಲೆ-ಜಿ ಈಗಲೂ ಐದು ರೂಪಾಯಿಗೆ ಸಿಗುತ್ತಿದೆ. ಬಿಸ್ಕತ್ತಿನ ಪ್ಯಾಕೆಟ್ ತೂಕದಲ್ಲಿ ಕಮ್ಮಿಯಾಗಿ, ಗಾತ್ರದಲ್ಲಿ ಸಣ್ಣದಾದರೂ, ರುಚಿಯಲ್ಲಿ ಯಾವತ್ತೂ ಕಮ್ಮಿಯಾಗಲಿಲ್ಲ. ನೈರ್ಮಲ್ಯ ಕಾದುಕೊಳ್ಳುವಲ್ಲಿ, ಶುದ್ಧತೆ ಕಾಪಾಡಿಕೊಳ್ಳುವಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಕಲಿಯುವವರಿಗೆ ಇದೂ ಒಂದು ರೀತಿಯ ವ್ಯಾಪಾರದ ಪಾಠವಾಗಬಹುದು. ಅಂತೆಯೇ, ಬಡವನಿಗೆ ಹತ್ತರ ಬದಲು ಎಂಟು ಬಿಸ್ಕತ್ತು ಸಿಗಬಹುದು. ಆದರೆ ಆತ ಉಪವಾಸವಂತೂ ಮಲಗುವುದಿಲ್ಲ ಎಂಬುದನ್ನು ಪಾರ್ಲೆ-ಜಿ ಖಾತ್ರಿ ಪಡಿಸಿದೆ.