ಪತ್ರಗಳಿಗಾಗಿ ಕಾಯುತ್ತಿದ್ದ ಸುಂದರ ದಿನಗಳು !
ಯಶೋ ಬೆಳಗು
ಯಶೋಮತಿ ಬೆಳಗೆರೆ
@.
ಇತ್ತೀಚೆಗೆ ನನ್ನ ಅಂಕಣ ಬರಹಗಳಿಗೆ ಅಪರಿಚಿತರಿಂದ ಮೆಚ್ಚುಗೆಯ ಮಾತುಗಳು ಎಲೆಕ್ಟ್ರಾನಿಕ್ ಮೇಲ್ ಮುಖಾಂತರ ಬರುವಾಗ ಆದ ಸಂತೋಷಕ್ಕೆ ಪಾರವೇ ಇಲ್ಲ. ಪರಿಚಿತರಿಗೆ ನಾವೇನು ಅನ್ನುವುದು ಚೆನ್ನಾಗಿ ಗೊತ್ತಿರುತ್ತದೆ. ಕೆಲ ವೊಮ್ಮೆ ಅವರ ಮೆಚ್ಚುಗೆಯ ಮಾತುಗಳು ಮುಖಸ್ತುತಿ ಇರಬಹುದೇನೋ ಅನ್ನುವ ಅನುಮಾನವನ್ನೂ ಮೂಡಿಸು ತ್ತದೆ.
ಪದಗಳೇ ತುಂಬಿದ ಕವನವಿದಲ್ಲ ಹೃದಯವೇ ಅಡಗಿದೆ ಇದರಲಿ ಅದರ ಒಡೆತನ ನಿನದೇ ಎಲ್ಲ ಕೋಮಲ ಎಚ್ಚರ ಇರಲಿ…ಎನ್ನುವ ಸಾಲುಗಳು ತುಂಬಿದ ಪತ್ರದಲ್ಲಿ ತನ್ನ ಮನದ ಮಧುರ ಭಾವನೆಗಳನ್ನೆಲ್ಲ ಪದಗಳ ಮೂಲಕ ನಿವೇದಿಸಿಕೊಳ್ಳುವಹೆಣ್ಣಿನ ಸಂಭ್ರಮವನ್ನು ಪ್ರತಿ ಅಕ್ಷರದ ಪ್ರತಿ ಸಾಲುಗಳಲ್ಲಿ ಕಾಣಬಹುದು.
ಪತ್ರಗಳ ವಿಶೇಷತೆಯೇ ಅದು. ಮನದ ಮಾತುಗಳನ್ನು ಹೇಳಿಕೊಳ್ಳಲು ಇರುವ ಅತ್ಯು ತ್ತಮ ವೇದಿಕೆ ಎಂದರೆ ಅದು ನಿಸ್ಸಂದೇಹ ವಾಗಿ ಪತ್ರಗಳು! ಅಲ್ಲಿ ಕೇವಲ ನಾವಿರುತ್ತೇವೆ. ನಡುನಡುವೆ ಮಾತನಾಡಿ ಆಲೋಚನೆಯ ಓಘಕ್ಕೆ ಭಂಗ ತರುವ ಪ್ರಮೇಯವೇ ಎದುರಾಗದೆ ಹೇಳಬೇಕೆಂದುಕೊಂಡಿದ್ದನ್ನೆಲ್ಲ ಮನಃಪೂರ್ತಿಯಾಗಿ ನಿವೇದಿಸಿಕೊಳ್ಳಲು ಅವಕಾಶವಿರುತ್ತದೆ.
ಪತ್ರವೆಂದ ಕೂಡಲೆ ಮೊದಲು ಕಣ್ಣೆದುರಿಗೆ ಬರುವ ಚಿತ್ರವೆಂದರೆ ಪ್ರೇಮ ಪತ್ರಗಳೇ! ಆದರೆ ಪತ್ರಗಳಲ್ಲಿ ಅದೆಷ್ಟೊಂದು ಬಗೆಗಳಿವೆಯೆಂದರೆ ಕೌಟುಂಬಿಕ ಪತ್ರ, ವೈಯಕ್ತಿಕ ಪತ್ರಗಳು, ವಿವಾಹ ಪತ್ರಗಳು, ವ್ಯವಹಾರ ಪತ್ರಗಳು, ದಾನ ಪತ್ರಗಳು, ಭಿತ್ತಿ ಪತ್ರಗಳು, ಮಾದರಿ ಪತ್ರಗಳು, ಸಲಹಾ ಪತ್ರಗಳು, ಪ್ರಶಸ್ತಿ ಪತ್ರಗಳು, ಔಪಚಾರಿಕ ಪತ್ರಗಳು, ಅನೌಪ ಚಾರಿಕ ಪತ್ರಗಳು, ಭದ್ರತಾ ಪತ್ರಗಳು, ಅಧಿಕೃತ ಪತ್ರ, ಮನವಿ ಪತ್ರ, ವಿಚಾರಣಾ ಪತ್ರ, ವಾಣಿಜ್ಯ ಪತ್ರ, ಸಾಗಣೆ ಪತ್ರ, ಮಾರಾಟ ಪತ್ರ, ಸಾಲ ಪತ್ರ, ಸಾಕ್ಷಿ ಪತ್ರ, ಹಕ್ಕು ಪತ್ರ ಹೀಗೆ ನೂರೆಂಟು.
ಶಾಲೆಗಳಲ್ಲಿ ನಾವೆಲ್ಲ ವ್ಯಾವಹಾರಿಕ ಪತ್ರ ಬರೆಯುವುದು ಹೇಗೆ ಅನ್ನುವುದನ್ನು ಕಲಿತಿರುತ್ತೇವೆ. ಜಾಗತೀಕರಣದ ಛಾಯೆ ಇರದ ಕಾಲದಲ್ಲಿ ದೂರದೂರುಗಳಲ್ಲಿ ನೆಲೆಸಿರುವ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರಲು ಮೂಲ ಸೌಕರ್ಯವಾಗಿದ್ದ ಪತ್ರಗಳಲ್ಲಿ ಹೆರಿಗೆಯ ವಿಷಯದಿಂದ ಹಿಡಿದು ಉಪ್ಪಿನಕಾಯಿ ಹಾಕುವುದು ಹೇಗೆ ಅನ್ನುವ ತನಕ ನಾನಾ ವಿಷಯಗಳ ವಿನಿಮಯವಾಗುತ್ತಿರುತ್ತಿತ್ತು. ಕೇವಲ ಹತ್ತಾರು ಸಾಲುಗಳನ್ನಷ್ಟೇ ಬರೆಯಲು ಸಾಧ್ಯವಿರುತ್ತಿದ್ದ ಪೋಸ್ಟ್ ಕಾರ್ಡುಗಳಲ್ಲಿ ವಿಷಯವನ್ನು ಚುಟುಕಾಗಿ ಹೇಳಲು ಬಳಸುತ್ತಿದ್ದರು.
ಅದೊಂಥರಾ ಸಾರ್ವಜನಿಕ ಪತ್ರವಿದ್ದಂತೆ. ಯಾವುದೇ ಮುಚ್ಚುಮರೆಯಿಲ್ಲದೆ ಅದರಲ್ಲಿರುವ ವಿಷಯವನ್ನು ಯಾರು ಬೇಕಾ ದರೂ ಓದಿಕೊಳ್ಳುವಂತಿರುತ್ತಿತ್ತು. ವಿಷಯವನ್ನು ವಿವರವಾಗಿ ತಿಳಿಸಲು ಹಾಗೂ ಕೆಲವು ಮುಖ್ಯವಾದ ವಿಷಯಗಳನ್ನು ಪ್ರಸ್ತಾಪಿ ಸಲು ತಿಳಿನೀಲಿ ಬಣ್ಣದ ಇನ್ ಲ್ಯಾಂಡ್ ಲೆಟರನ್ನು ಬಳಸುತ್ತಿದ್ದರು. ಶ್ರೀ, ಕ್ಷೇಮ, ದಿನಾಂಕ ಹಾಗೂ ಅ.ಈ.ಉ.ಕು. ಸಾಂಪ್ರತ (ಅದಾಗಿ ಈವರೆಗೂ ಉಭಯ ಕುಶಲೋಪರಿ ಸಾಂಪ್ರತ) ದ ಹಣೆಬರಹ ಹೊತ್ತು ಬರುತ್ತಿದ್ದ ಪತ್ರಗಳನ್ನು ಸಂಗ್ರಹಿಸಲು ಮನೆಯ ಮಾಡಿಗೆ ಉದ್ದನೆಯ ಕೊಕ್ಕೆಯಂತಹ ಕಂಬಿಯೊಳಗೆ ಚುಚ್ಚಿಡುತ್ತಿದ್ದ ರೀತಿ ಈಗ ಆಂಟಿಕ್ ಕಲೆಕ್ಷನ್ ಆಗಿ ಪರಿವರ್ತನೆ ಗೊಂಡಿದೆ.
ನಾನು ಹುಟ್ಟಿದಾಗ ವಿಷಯ ತಿಳಿಸಲು ಬರೆಸಿದ ಪತ್ರ ಅದೆಷ್ಟೋ ವರ್ಷಗಳ ನಂತರ ನನ್ನ ಕೈಗೆ ಸಿಕ್ಕು, ಆ ದಿನಗಳ ಚಿತ್ರವೆಲ್ಲ ಕಣ್ಣಮುಂದೆ ನಡೆದುಹೋದಂತಹ ಅನುಭವವಾಗಿತ್ತು. ಸೈಕಲ್ಲೇರಿ ಟ್ರಿನ್ ಟ್ರಿನ್ ಸದ್ದಿನೊಂದಿಗೆ ಬರುತ್ತಿದ್ದ ಅಂಚೆಯಣ್ಣನ ಚೀಲದಿಂದ ಆರಿಸಿ ಕೊಡುತ್ತಿದ್ದ ಪತ್ರಗಳ ಹೊರಮುಖದಲ್ಲೇ ಅದು ಶುಭ ಸಮಾಚಾರದ್ದೋ ಅಶುಭ ಸಮಾಚಾರದ್ದೋ ಎನ್ನುವ ವಿಷಯ ಪತ್ತೆಯಾಗಿ ಹೋಗು ತ್ತಿತ್ತು. ಪತ್ರದ ಅಂಚಿನಲ್ಲಿ ಅರಿಶಿಣದ ಬಣ್ಣವಿದ್ದರೆ ಅದು ಶುಭ ಸಮಾಚಾರದ ಸೂಚಕ. ಬದಲಿಗೆ ಕಪ್ಪು ಬಣ್ಣವಿದ್ದರೆ ಅದು ಅಶುಭ ಸಮಾಚಾರದ ಸೂಚಕವಾಗಿ ಪರಿಗಣಿಸಲಾಗುತ್ತಿತ್ತು.
ಇನ್‌ಲ್ಯಾಂಡ್ ಲೆಟರಿನ ಪತ್ರಗಳನ್ನು ಒಡೆದು ಓದುವಷ್ಟರಲ್ಲಿ ಅದೆಂಥಾ ಆತುರವಿರುತ್ತಿತ್ತು. ಅವರು ಬರೆದು ದಿನಾಂಕ ಯಾವುದು? ಬಂದು ತಲುಪಿದ ದಿನಾಂಕ ಯಾವುದು ಎಂದು ಅದರ ಮೇಲಿನ ಅಂಚೆ ಕಚೇರಿಯ ಮುದ್ರೆಯನ್ನು ನೋಡಿ ಅಂದಾಜಿಸುತ್ತಿದ್ದ ರೀತಿ. ಪತ್ರಕ್ಕೊಂದು ಪ್ರತ್ಯುತ್ತರ ಬರೆಯುವ ಸಡಗರ, ಬರೆಯುತ್ತ ಬರೆಯುತ್ತ ಪತ್ರದಲ್ಲಿ ಜಾಗವಿಲ್ಲದೆ ವಿಷಯ ವನ್ನು ಮೊಟಕುಗೊಳಿಸುತ್ತ ಮತ್ತೆ ಮುಂದಿನ ಪತ್ರದಲ್ಲಿ ಮತ್ತಷ್ಟು ವಿಷಯ ತಿಳಿಸುವ ಲೆಕ್ಕಾಚಾರ, ಅದರಲ್ಲಿರುತ್ತಿದ್ದ ಚಿರಂಜೀವಿ,ಸೌಭಾಗ್ಯವತಿ, ತೀರ್ಥರೂಪ, ಆಶೀರ್ವಾದಗಳು ಅನ್ನುವ ಪದಗಳೆಲ್ಲ ಈಗ ಕೇವಲ ಡಿಕ್ಷನರಿಯಲ್ಲಿ ಅಡಗಿ ಕುಳಿತಿವೆ.
ಮನೆಗೆ ಬಂದು ಬೀಳುವ ಮ್ಯಾಗಜಿನ್ ಗಳು, ಪತ್ರಿಕೆಗಳು ಅದೆಷ್ಟು ರಾಶಿ ವಿಷಯಗಳನ್ನು ಹೊತ್ತು ತರುತ್ತವೆ. ಅವರವರ ಅಭಿ ರುಚಿಗೆ ತಕ್ಕಂತೆ ಅದರಲ್ಲಿರುವ ವಿಷಯವನ್ನು ಆರಿಸಿಕೊಂಡು ಓದಿ ಖುಷಿ ಪಡುವ ನಾವು ಅದಕ್ಕೆ ಪ್ರತಿಯಾಗಿ ನಮ್ಮ ಅನಿಸಿಕೆಗಳನ್ನು ಪತ್ರದ ಮುಖಾಂತರ ತಿಳಿಸುವ ಕಾಲವಿತ್ತು. ಆದರೆ ಈಗ ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಕ್ಷಣಮಾತ್ರದಲ್ಲಿ ಜಗತ್ತಿನ ಮೂಲೆಮೂಲೆಯನ್ನು ತಲುಪುವಂತಹ ಸೋಷಿಯಲ್ ಮೀಡಿಯಾಗಳಲ್ಲೂ ಅನೇಕ ವಿಷಯಗಳನ್ನು ನಾವು ದಿನ ಬೆಳಗಾದರೆ ನೋಡುತ್ತಲೇ ಇರುತ್ತೇವೆ. ಅಲ್ಲೂ ಸಹ ನಮ್ಮ ಆಸಕ್ತಿಗೆ ಹೊಂದುವಂತಹ ಗುಂಪುಗಳ ಜೊತೆ ಗುರುತಿಸಿಕೊಳ್ಳುವುದು ಅದಕ್ಕೆ ಮೆಸೇಜುಗಳ ಮೂಲಕ ಪ್ರತಿಕ್ರಿಯಿಸುವುದನ್ನು ನಾವು ನೋಡಬಹುದು.
ಮೆಚ್ಚುಗೆ ಹಾಗೂ ಅಸೂಯೆ ತುಂಬಿದ ಮಿಶ್ರ ಪ್ರತಿಕ್ರಿಯೆಗಳನ್ನು ಕಾಣಬಹುದು. ಆದರೆ ವಿಪರ್ಯಾಸವೆಂದರೆ ಅವಾಚ್ಯ ಶಬ್ದ ಗಳನ್ನು ಬಳಸುವ ಮೂಲಕ ತಮ್ಮ ಮನದ ವಿಕಾರಗಳನ್ನು ಕಾರಿಕೊಳ್ಳುವ ಜನಸ್ತೋಮವೇ ನೆರೆದಿದೆ ಅಲ್ಲಿ. ಇದರ ನಡುವೆ ಎಲ್ಲವನ್ನೂ ತುದಿಗಣ್ಣಲ್ಲೇ ಗಮನಿಸುತ್ತ ಯಾವುದಕ್ಕೂ ಪ್ರತಿಕ್ರಿಯಿಸದೆ ಮುಗುಮ್ಮಾಗಿ ಉಳಿದು ಹೋಗುವ ಜನರೂ ಇದ್ದಾರೆ.ಆದರೆ ಇತ್ತೀಚೆಗೆ ನನ್ನ ಅಂಕಣ ಬರಹಗಳಿಗೆ ಅಪರಿಚಿತರಿಂದ ಮೆಚ್ಚುಗೆಯ ಮಾತುಗಳು ಎಲೆಕ್ಟ್ರಾನಿಕ್ ಮೇಲ್ ಮುಖಾಂತರ ಬರುವಾಗ ಆದ ಸಂತೋಷಕ್ಕೆ ಪಾರವೇ ಇಲ್ಲ. ಪರಿಚಿತರಿಗೆ ನಾವೇನು ಅನ್ನುವುದು ಚೆನ್ನಾಗಿ ಗೊತ್ತಿರುತ್ತದೆ.
ಕೆಲವೊಮ್ಮೆ ಅವರ ಮೆಚ್ಚುಗೆಯ ಮಾತುಗಳು ಮುಖಸ್ತುತಿ ಇರಬಹುದೇನೋ ಅನ್ನುವ ಅನುಮಾನವನ್ನೂ ಮೂಡಿಸುತ್ತದೆ. ಆದರೆ ಎಲ್ಲೋ ದೂರದಲ್ಲಿ ಕುಳಿತ ಅಪರಿಚಿತರಿಗೆ ನಾವು ನಮ್ಮ ಬರಹದ ಮೂಲಕವಷ್ಟೇ ಪರಿಚಯವಾಗುತ್ತೇವೆ. ಹಾಗೂ ಅವರು ಅದನ್ನು ಮೆಚ್ಚಿ ಪ್ರತಿಕ್ರಿಯಿಸಿದಾಗ ನಮ್ಮ ಶ್ರಮಕ್ಕೆ ನಿಜವಾದ ಪ್ರತಿಫಲ ಸಿಕ್ಕ ಸಾರ್ಥಕ ಭಾವ ಆವರಿಸಿಕೊಳ್ಳುತ್ತದೆ.ಹಾಗನ್ನಿಸಿದ ಕೂಡಲೇ ಇನ್ನುಮುಂದೆ ನಾನು ಓದುವ ಪ್ರತಿ ಬರಹಗಳಿಗೂ ಅದರ ಕರ್ತೃವಿಗೆ ನನ್ನ ಅನಿಸಿಕೆಯನ್ನು ತಿಳಿಸಿ ಪತ್ರ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದುಕೊಳ್ಳುತ್ತ, ನನ್ನ ಗಮನ ಬರಹದ ಜೊತೆಗೆ ಬರಹಗಾರರು ಹಾಗೂ ಅವರ ವಿಳಾಸಗಳ ಹುಡುಕಾಟಕ್ಕೆ ಆರಂಭವಾಯಿತು.
ಸಿಕ್ಕ ವಿಳಾಸಗಳನ್ನೆಲ್ಲ ಒಂದು ಪುಸ್ತಕದಲ್ಲಿ ಶೇಖರಿಸಿಟ್ಟುಕೊಂಡೆ. ನೋಡನೋಡುತ್ತ ಅದು ಪುಟಗಳನ್ನು ದಾಟುತ್ತಾ ಪುಸ್ತಕದ ಅಂಚಿಗೆ ಬಂದು ನಿಂತಾಗ ಅರೆ, ಸಂಪರ್ಕ ಸೇತುವೆಯಾಗಿ ನಿಂತ ಪತ್ರಗಳಿಂದಾಗಿ ಅದೆಷ್ಟೊಂದು ಜನರ ಒಡನಾಟ ಆರಂಭ ವಾಯಿತಲ್ಲ ಅನ್ನುವ ಖುಷಿಗೆ ಹಿರಿಹಿರಿ ಹಿಗ್ಗಿದೆ. ಯಾಕೆಂದರೆ ನನಗೀಗ ಪ್ರತಿಕ್ರಿಯೆ ನೀಡುವ ಸಂತೋಷವೇನೆಂಬುದು ಅರ್ಥವಾಗಿತ್ತು. ಹೀಗಾಗಿ ನನಗೆ ಬರುವ ಪ್ರತಿ ಪತ್ರಕ್ಕೂ, ಮೆಸೇಜಿಗೂ ತಪ್ಪದೆ ಉತ್ತರ ನೀಡುವ ಹವ್ಯಾಸ ಬೆಳೆಸಿಕೊಂಡಿದ್ದೇನೆ.
ಇತಿಹಾಸದ ಸಾಕ್ಷಿಗಳಾಗಿ ನಿಲ್ಲುವ ಪತ್ರಗಳ ಮತ್ತೊಂದು ವಿಶೇಷವೆಂದರೆ ವ್ಯಕ್ತಿತ್ವದ ಕನ್ನಡಿಯಾಗಿ ಅದರಲ್ಲಿ ಬರೆದವರ ಕೈಬರಹವನ್ನು ಕಾಣಬಹುದು. ಗಾಂಧೀಜಿ ತಮ್ಮ ತಂದೆಯ ಲೇಖನಿಯನ್ನು ಕದ್ದ ವಿಚಾರವನ್ನು ಅವರ ಎದುರು ನಿಂತು ತಪ್ಪೊಪ್ಪಿಕೊಳ್ಳಲು ಧೈರ್ಯ ಸಾಲದಾದಾಗ ಅವರು ಬಳಸಿಕೊಂಡಿದ್ದು ಇದೇ ಪತ್ರವನ್ನು. ಪತ್ರದಲ್ಲಿ ತಮ್ಮ ಮನದ ತೊಳಲಾಟ ವನ್ನು ತೋಡಿಕೊಂಡು ಕ್ಷಮೆ ಯಾಚಿಸಿದ ನಂತರ ಅವರ ಮನಸಿಗೆ ಮೂಡಿದ ನಿರಾಳ ಭಾವವನ್ನು ಅವರೇ ಹೇಳಿಕೊಂಡ ಅವರ ಬದುಕಿನ ಕತೆಯಲ್ಲಿ ಕಾಣಬಹುದು.
ಇನ್ನು ಇತ್ತೀಚೆಗೆ ಈ ಕೋವಿಡ್ ಎಂಬ ಮಹಾಮಾರಿಯಿಂದಾಗಿ ಅದೆಷ್ಟು ಸಾವು-ನೋವುಗಳನ್ನು ಕಾಣುತ್ತಿದ್ದೇವೆ. ಅಪಾರ ವೀಕ್ಷಕ ಬಳಗವನ್ನು ಹೊಂದಿರುವ ಕನ್ನಡದ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್‌ನ ನಿರೂಪಕರಾದ ಕಿಚ್ಚ ಸುದೀಪ್ ಅನಾ ರೋಗ್ಯದ ಕಾರಣದಿಂದಾಗಿ ಎಂದಿನಂತೆ ವಾರದ ಕತೆ ಕಿಚ್ಚನ ಜತೆ ಎನ್ನುತ್ತ ಸ್ಪರ್ಧಿಗಳೆದುರು ಕಾಣದಾದಗ ಪತ್ರದಮೂಲಕ ಅವರ ಆರೋಗ್ಯ ಚೇತರಿಕೆಯನ್ನು ಕೋರಿ ಸ್ಪರ್ಧಿಗಳೆಲ್ಲರೂ ಬರೆದ ಪತ್ರವನ್ನು ಕಂಡು ಮನತುಂಬಿಕೊಂಡಿತ್ತುವೀಕ್ಷಕ ವರ್ಗ.
ನಾವೆಲ್ಲ ಬೆಚ್ಚಗೆ ಮಲಗಿರಲು ನಮ್ಮ ಸುರಕ್ಷತೆಗಾಗಿ ಗಡಿಗಳಲ್ಲಿ ನಿದ್ರೆಗೆಟ್ಟು ಎಚ್ಚರದಿಂದ ಕಾಯುತ್ತ ದೇಶವನ್ನು ರಕ್ಷಿಸುವ ಸೈನಿಕರಿಗೂ ಎಲ್ಲರಂತೆ ಭಾವನೆಗಳಿರುತ್ತವೆ. ತಮ್ಮ ಮನೆಯವರೊಂದಿಗೆ ಬಾಂಧವ್ಯದ ಒಡನಾಟವಿರುತ್ತದೆ. ಆದರೆ ಅವೆಲ್ಲ ವನ್ನೂ ಮೀರಿ ದೇಶಕ್ಕಾಗಿ ಹೋರಾಡುವ ಸೈನಿಕರ ಜೀವನ ಕತ್ತಿಯ ಅಲಗಿನ ಮೇಲೆ ನಡೆದಂತೆ. ಯಾವ ಕ್ಷಣದಲ್ಲಿ ಏನಾಗುತ್ತ ದೆಂಬ ಅರಿವಿರದೆ ಅವಿರತ ದುಡಿಯುವ ಜೀವಗಳಿಗೆ ಪತ್ರಗಳು ಹೊತ್ತು ತರುವ ಸಂದೇಶಗಳು ನೆಮ್ಮದಿಯನ್ನು ನೀಡುತ್ತದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ವೀರಮರಣದ ವಾರ್ತೆಗಳನ್ನು ಹೊತ್ತು ತರುವ ಪತ್ರಗಳು ಅರಗಿಸಿಕೊಳ್ಳಲಾಗದ ನೋವನ್ನೂತಂದೊಡ್ಡುತ್ತವೆ.
ಚಿಟ್ಟಿ ನ ಕೊಯಿ ಸಂದೇಶ್ಜಾನೆ ವೊ ಕೌನ್ ಸ ದೇಶ್ಜಹಾ ತುಮ್ ಚಲೇ ಗಯೇ
ಅನ್ನುವ ಹಿಂದಿ ಗೀತೆಯನ್ನು ಕೇಳಿರುವ ಪ್ರತಿಯೊಬ್ಬರಿಗೂ ಅದರ ಹಿಂದಿರುವ ನೋವೇನೆಂಬುದನ್ನು ತಿಳಿದಿರುತ್ತದೆ. ಗಝಲ್ ಗಾಯಕರಾದ ಚಿತ್ರ ಹಾಗೂ ಜಗಜಿತ್ ದಂಪತಿ ಎದೆಯೆತ್ತರ ಬೆಳೆದು ನಿಂತ ತಮ್ಮ ಹದಿನೆಂಟು ವರುಷದ ಮಗ ವಿವೇಕ್ ನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಆಘಾತದಿಂದ ಸಾಕಷ್ಟು ವರ್ಷ ಹೊರಬರಲಾಗಲೇ ಇಲ್ಲ. ಆ ನೋವು ಅವರನ್ನುನಿರಂತರ ಕಾಡುತ್ತಲೇ ಇತ್ತು.
ಚಿತ್ರಾರಂತೂ ಆ ಘಟನೆಯ ನಂತರ ಹಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಯೇ  ಬಿಟ್ಟರು. ತಮ್ಮ ಪ್ರೀತಿಯ ಪುತ್ರನ ಅಗಲಿಕೆಯ ನೋವಿನ ಹಿನ್ನೆಲೆಯಿರುವ ಗೀತೆಯನ್ನು ಕೇಳುತ್ತ ಲಕ್ಷಾಂತರ ಜನರು ತಮ್ಮ ನೋವನ್ನು ಮರೆಯುವಂತೆ ಹಾಡಿದರು ಜಗಜಿತ್. ಹೊಸ ವರ್ಷದ ಆಗಮನದ ಸಂತೋಷವನ್ನು ಹಂಚಿಕೊಳ್ಳಲು ಗ್ರೀಟಿಂಗ್ ಕಾರ್ಡುಗಳ ಜೊತೆಗಿರುತ್ತಿದ್ದಹಾರೈಕೆಗಳಿಂದ ತುಂಬಿದ ಪುಟ್ಟ ಪುಟ್ಟ ಪತ್ರಗಳನ್ನು ಯಾರು ತಾನೆ ಮರೆಯಲು ಸಾಧ್ಯ? ಕಾಲದ ಜೊತೆಜೊತೆಗೆ ನಡೆಯುವುದು ಅನಿವಾರ್ಯ.
ನಮ್ಮ ಅಸ್ತಿತ್ವದ ಒಂದು ಭಾಗವೇ ಆಗಿದ್ದ ಪತ್ರಗಳೀಗ ರೂಪಾಂತರಗೊಂಡಿವೆಯಾದರೂ ಮೆದುಳಿಗೂ ಬೆರಳಿಗೂ ಸಂಪರ್ಕ ಸೇತುವೆಯಾಗಿದ್ದ ಕೈಬರಹದ ಪತ್ರಗಳೀಗ ಕ್ಷೀಣಿಸುತ್ತಿವೆ. ಬರೆಯುವ, ಕಾಯುವ, ಓದುವ ಸಂಭ್ರಮಗಳು ಮರಳಿ ಬಾರದ ಲೋಕಕ್ಕೆ ಹೊರಟು ಬಿಡುವ ಮುನ್ನ ನಮ್ಮಿಂದಾದಷ್ಟೂ ಉಳಿಸಿ ಬೆಳೆಸೋಣ.