ಜೆಆರ್‌ಡಿ ಟಾಟಾ ಹೇಳಿದ ಮೂರು ಸರಳ ಪಾಠಗಳು
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
@.
ಜೆಆರ್‌ಡಿ ಅವರು ಕನಿಷ್ಠ ಹದಿನೈದು ದಿನಗಳ ತಯಾರಿ ಸಾಧ್ಯವಾಗದ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅಲ್ಲದೇ ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಅವರ ಪಾಲಿಗೆ ಯಾವ ಕಾರ್ಯಕ್ರಮವೂ ಸಣ್ಣದು ಎಂಬುದಿರಲಿಲ್ಲ. ಎಲ್ಲವೂ ಮಹತ್ವದ ಕಾರ್ಯಕ್ರಮಗಳೇ ಎಂದು ಭಾವಿಸುತ್ತಿದ್ದರು.
ಟಾಟಾ ಗ್ರುಪ್ ಅಧ್ಯಕ್ಷ ಜಹಾಂಗೀರ್ ರತನ್ ಜೀ ದಾದಾಭಾಯ್ ಟಾಟಾ ಅರ್ಥಾತ್ ಜೆಆರ್‌ಡಿ ಅವರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಡಿ.ಆರ್.ಪೆಂಡ್ಸೆ ಎನ್ನುವವರಿಗೆ ಲಂಡನ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಮಾತಾಡಲು ಆಹ್ವಾನ ಬಂದಿದೆ ಎಂಬ ಸಂಗತಿ ತಿಳಿಯಿತು.
ಪೆಂಡ್ಸೆ ಟಾಟಾ ಗ್ರುಪ್‌ನಲ್ಲಿ ಕಿರಿಯ ಆರ್ಥಿಕ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ತಮ್ಮನ್ನು ಬಂದು ಕಾಣುವಂತೆ, ಜೆಆರ್‌ಡಿ ಕಚೇರಿಯಿಂದ ಪೆಂಡ್ಸೆ ಅವರಿಗೆ ಸೂಚನೆ ಹೋಯಿತು. ‘ಮಿಸ್ಟರ್ ಪೆಂಡ್ಸೆ, ನಿಮಗೆ ಈ ಆಹ್ವಾನ ಬಂದಿರುವುದು ನನಗೆ ನಿಜಕ್ಕೂ ಸಂತೋಷವಾಗಿದೆ. ನೀವು ಕೇವಲ ಟಾಟಾ ಸಮೂಹ ವನ್ನು ಮಾತ್ರ ಪ್ರತಿನಿಽಸುತ್ತಿಲ್ಲ. ಇಡೀ ದೇಶವನ್ನು ಪ್ರತಿನಿಧಿಸುತ್ತಿದ್ದೀರಿ. ಹೀಗಾಗಿ ನೀವು ಏನು ಭಾಷಣ ಮಾಡುತ್ತೀರಿ ಎಂಬುದನ್ನು ತಿಳಿಯ ಬಯಸುತ್ತೇನೆ. ನಿಮ್ಮ ಭಾಷಣದ ಸಿದ್ಧ ಪ್ರತಿಯನ್ನು ನೋಡಬಹುದೇ?’ ಎಂದು ಜೆಆರ್‌ಡಿ ಕೇಳಿದರು. ಇದನ್ನು ಪೆಂಡ್ಸೆ ನಿರೀಕ್ಷಿಸಿರಲಿಲ್ಲ. ಒಮ್ಮೆಗೆ ಕಕ್ಕಾಬಿಕ್ಕಿಯಾದರು.
‘ಸರ್, ನಾನು ಎಂದೂ ಭಾಷಣವನ್ನು ಓದುವುದಿಲ್ಲ. ಸಾಮಾನ್ಯವಾಗಿ ನಾನು ಆಶುಭಾಷಣ ಮಾಡುತ್ತೇನೆ, ಆಗಬಹುದಲ್ಲವೇ?’ ಎಂದು ಪೆಂಡ್ಸೆ ಹೇಳಿದರು. ಜೆಆರ್‌ಡಿ ಅವರಿಗೆ ಆ ಉತ್ತರ ಸಮಾಧಾನವಾಗಲಿಲ್ಲ ಎಂಬುದು ಪೆಂಡ್ಸೆ ಅವರಿಗೆ ಗೊತ್ತಾಯಿತು. ‘ಮಿಸ್ಟರ್ ಪೆಂಡ್ಸೆ, ನೀವು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಮಾತಾಡಲಿದ್ದೀರಿ. ಅಲ್ಲಿ ಸಾವಿರಾರು ಗಣ್ಯರು, ವಿಷಯ ಪರಿಣತರು, ಜ್ಞಾನವಂತರು, ಬುದ್ಧಿಜೀವಿಗಳು ಭಾಗವಹಿಸುತ್ತಾರೆ. ಅಂಥ ಸಮಾವೇಶದಲ್ಲಿ ಮಾತಾಡು ವಾಗ ಸಿದ್ಧತೆ ಅಗತ್ಯ. ಸಿದ್ಧ ಭಾಷಣ ಓದದಿದ್ದರೂ, ಏನು ಮಾತಾಡಲಿದ್ದೀರಿ ಎಂಬುದಾದರೂ ಗೊತ್ತಿರಬೇಕು.
ಕನಿಷ್ಠ ರಿಹರ್ಸಲ್ಲನ್ನಾದರೂ ಮಾಡಿರಬೇಕು. ನಮಗೆ ಎಲ್ಲ ಗೊತ್ತಿದೆ ಎಂದು ಮಾತಾಡಲು ಹೋಗಬಾರದು. ಅದರಿಂದ ಆಭಾಸವಾಗುತ್ತದೆ. ಭಾಷಣ ಅಂದ್ರೆ ನಮ್ಮ ಪ್ರೌಢಿಮೆಯನ್ನು, ಅಭಿಪ್ರಾಯವನ್ನು ಹೇಳಲು ಸಿಗುವ ಅತ್ಯುತ್ತಮ ಅವಕಾಶ. ಅಂಥ ಅವಕಾಶವನ್ನು ಯಾವತ್ತೂ ಕಳೆದುಕೊಳ್ಳಬಾರದು’ ಎಂದರು ಜೆಆರ್‌ಡಿ.‘ಸರ್, ಕ್ಷಮಿಸಿ.. ನಾನು ನನ್ನ ಭಾಷಣವನ್ನು ರಿಹರ್ಸಲ್ ಮಾಡಿಲ್ಲ. ನನಗೆ ಭಾಷಣ ರಿಹರ್ಸಲ್ ಮಾಡಿ ರೂಢಿಯಿಲ್ಲ. ಆದರೂ ನೀವು ಸೂಚಿಸಿದ್ದರಿಂದ, ನನ್ನ ಭಾಷಣದ ಹಿಂದಿನದಿನ, ನಾನು ಉಳಿದುಕೊಳ್ಳುವ ಲಂಡನ್ ಹೋಟೆಲಿನಲ್ಲಿ ರಿಹರ್ಸಲ್ ಮಾಡುತ್ತೇನೆ’ ಎಂದರು ಪೆಂಡ್ಸೆ ವಿನೀತರಾಗಿ.
ಜೆಆರ್‌ಡಿ ಅವರಿಗೆ ಆ ಉತ್ತರದಿಂದ ಸಮಾಧಾನವಾಗಲಿಲ್ಲ. ‘ಮಿಸ್ಟರ್ ಪೆಂಡ್ಸೆ, ನಾನು ನಿಮ್ಮ ಆತ್ಮವಿಶ್ವಾಸವನ್ನು ಪ್ರಶ್ನಿಸುತ್ತಿಲ್ಲ. ಆದರೆ ಅದು ಸರಿಯಾದ ಕ್ರಮವಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ನೀವು ಏನು ಮಾತಾಡಲಿದ್ದೀರಿ ಎಂಬುದು ನಿಮಗೆ ಗೊತ್ತಿರಬೇಕು. ಹೀಗಾಗಿ ಭಾಷಣವನ್ನುಸಿದ್ಧಪಡಿಸಿಕೊಳ್ಳಬೇಕು. ಅದನ್ನು ಓದಲೇಬೇಕೆಂದಿಲ್ಲ. ಆದರೆ ಮಾತಾಡಲಿರುವ ವಿಷಯದ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಯಾವತ್ತೂ ಭಾಷಣವನ್ನು ಸಿದ್ಧ ಪಡಿಸಿಕೊಳ್ಳುವುದರಿಂದ, ಮಾತಾಡುವ ಮೊದಲೇ, ನಾವು ಹೇಳುವ ವಿಷಯ ನಮಗೆ ಗೊತ್ತಿರುತ್ತದೆ.
ನಮ್ಮ ಭಾಷಣ ನೀರಸವೋ, ಉತ್ತಮವೋ ಎಂಬುದೂ ಗೊತ್ತಾಗುತ್ತದೆ. ಸುಧಾರಣೆಗೆ ಅವಕಾಶವಿರುತ್ತದೆ. ನಮ್ಮ ಮಾತಿಗೊಂದು ಚೌಕಟ್ಟು ಮೊದಲೇ ಸಿಗುತ್ತದೆ. ಅದನ್ನು ಓದಬೇಕೆಂದಿಲ್ಲ. ನೀವು ಭಾಷಣವನ್ನು ಸಿದ್ಧಪಡಿಸಿಕೊಂಡಿಲ್ಲ ಮತ್ತು ರಿಹರ್ಸಲ್ಲನ್ನೂ ಮಾಡಿಲ್ಲವಲ್ಲ’ ಎಂದರು ಜೆಆರ್‌ಡಿ. ಪೆಂಡ್ಸೆ ನಿರುತ್ತರ ರಾದರು. ‘ಒಂದು ಕೆಲಸ ಮಾಡಿ, ನಿಮಗೆ ನಾನೊಂದು ಟೇಪ್ ರೆಕಾರ್ಡರ್ ಕೊಡುತ್ತೇನೆ. ನೀವು ಮಾಡಲಿರುವ ಭಾಷಣವನ್ನು ರೆಕಾರ್ಡ್ ಮಾಡಿ, ನೀವೇ ಎರಡು ಸಲ ಕೇಳಿ. ನಿಮಗೆ ಸಮಾಧಾನವಾದರೆ ಪರವಾಗಿಲ್ಲ, ಆಗದಿದ್ದರೆ ಸಮಾಧಾನವಾಗುವ ತನಕ ರಿಹರ್ಸಲ್ ಮಾಡಿ. ಪ್ರೇಕ್ಷಕರನ್ನು ಯಾವತ್ತೂ ಲಘುವಾಗಿ ಪರಿಗಣಿಸಬಾರದು’ ಎಂದು ತಮ್ಮ ಬಳಿಯಿರುವ ಟೇಪ್ ರೆಕಾರ್ಡರನ್ನು ಕೊಟ್ಟರು. ಅದನ್ನು ಕೊಡುವಾಗ, ’ಮಿಸ್ಟರ್ ಪೆಂಡ್ಸೆ, ಲಂಡನ್ ನಿಂದ ವಾಪಸ್ ಬಂದ ಮೇಲೆ ನನಗೆ ಈ ರೆಕಾರ್ಡರನ್ನು ಹಿಂದಿರುಗಿಸಲು ಮರೆಯಬೇಡಿ. ಸಾಧ್ಯವಾದರೆ ಸಮಾವೇಶದ ನಿಮ್ಮ ಭಾಷಣವನ್ನು ರೆಕಾರ್ಡ್ ಮಾಡಿ. ನಾನೂ ಕೇಳುತ್ತೇನೆ’ ಎಂದರು ಜೆಆಡಿರ್.
ಒಂದು ಕ್ಷಣ ಪೆಂಡ್ಸೆ ತದೇಕಚಿತ್ತದಿಂದ ಜೆಆರ್‌ಡಿಯವರನ್ನು ನೋಡುತ್ತ ನಿಂತುಬಿಟ್ಟರು. ತಾನು ಅದೆಷ್ಟೇ ದೊಡ್ಡ ಆರ್ಥಿಕ ಸಲಹೆಗಾರನಾಗಿರಬಹುದು, ಆದರೆ ಈಪಾಠವನ್ನು ಅವರಿಗೆ ಯಾರೂ ಹೇಳಿಕೊಟ್ಟಿರಲಿಲ್ಲ. ಜೆಆರ್‌ಡಿಯವರು ಹೇಳಿದಂತೆ, ಮೊದಲ ಬಾರಿಗೆ ತಮ್ಮ ಭಾಷಣವನ್ನು ಸಿದ್ಧಪಡಿಸಿಕೊಂಡು,  ತ್ತಾರು ಬಾರಿ ಅದನ್ನು ಬದಲಿಸಿ, ನಂತರ ಆ ಭಾಷಣವನ್ನು ಹದಿನೈದು ಅಂಶಗಳನ್ನಾಗಿ ವಿಂಗಡಿಸಿಕೊಂಡು, ಭಾಷಣದ ಪ್ರತಿಯಿಲ್ಲದೇ, ಆಶುಭಾಷಣವೆನಿಸುವಂತೆ ರಿಹರ್ಸಲ್ ಮಾಡಿ, ತಮ್ಮ ಮಾತುಗಳನ್ನೇ ಪದೇ ಪದೆ ಕೇಳಿ, ಸೂಕ್ತ ಮಾರ್ಪಾಟುಗಳನ್ನು ಮಾಡಿಕೊಂಡು, ಆ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಮಾತಾಡಿದರು.
ಪೆಂಡ್ಸೆ ಮಾತಿಗೆ ಸಭಿಕರೆಲ್ಲ ಎದ್ದು ನಿಂತು ಕರತಾಡನ ಮಾಡಿದರು. ಭಾವೋತ್ಕರ್ಷಿತರಾದ ಪೆಂಡ್ಸೆ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಆ ಸಂದರ್ಭದಲ್ಲಿ ಅವರಮನಸ್ಸಿನಲ್ಲಿ ತೇಲುತ್ತಿದ್ದವರು ಜೆಆರ್‌ಡಿ. ನಂತರದ ವರ್ಷಗಳಲ್ಲಿ ಪೆಂಡ್ಸೆ ಸಮಸ್ತ ಟಾಟಾ ಸಮೂಹಕ್ಕೆ ಆರ್ಥಿಕ ಸಲಹೆಗಾರರಾದರು. ಅದೇ ಪೆಂಡ್ಸೆ ಒಂದೆಡೆ ಬರೆಯುತ್ತಾರೆ – ‘ಅಂದು ಜೆಆರ್‌ಡಿ ಕಲಿಸಿದ ಪಾಠವನ್ನು ನಾನು ನನ್ನ ಜೀವನದುದ್ದಕ್ಕೂ ಪಾಲಿಸಿದೆ. ಪ್ರತಿ ಭಾಷಣವನ್ನೂ ನಾನು ಅತ್ಯಂತ ಮಹತ್ವದ್ದೊಂದು ಭಾವಿಸುತ್ತಿದ್ದೆ.
ಅದರಿಂದ ನಾನು ಮಾತಾಡಿದ್ದು ಗಾಳಿಯಲ್ಲಿ ಹಾರಿ ಹೋಗಲಿಲ್ಲ. ಅವೆಲ್ಲ ಪುಸ್ತಕ ರೂಪದಲ್ಲಿ ಸಂಗ್ರಹಿಸಿಡಲು ಸಾಧ್ಯವಾಯಿತು. ಅಂದಿನಿಂದ ನಾನು ಯಾವ ಭಾಷಣವನ್ನೂ ಉದಾಸೀನ ಮಾಡಲಿಲ್ಲ. ನಾನು ಪ್ರತಿ ಸಲ ಮಾತಾಡುವಾಗಲೂ, ಆರಂಭದಲ್ಲಿ ಅಯಾಚಿತವಾಗಿ ಜೆಆರ್‌ಡಿ ಕಣ್ಣ ಮುಂದೆ ಬರುತ್ತಿದ್ದರು.ಅವರು ನನಗೆ ಕಲಿಸಿದ ಆ ಪಾಠವನ್ನು ನಾನು ನೂರಾರು ಜನರಿಗೆ ಹೇಳಿದ್ದೇನೆ. ಇದು ಸಣ್ಣ ವಿಷಯವಾಗಿರಬಹುದು, ಜೆಆರ್‌ಡಿ ಅಂಥ ಸಣ್ಣ ವಿಷಯಗಳ ಬಗ್ಗೆಯೂಕಾಳಜಿವಹಿಸುತ್ತಿದ್ದರು. ನಾನು ಹೇಗೆ ಭಾಷಣ ಮಾಡಿದರೇನು ಎಂದು ಅವರು ಭಾವಿಸಲಿಲ್ಲ.
ನಾನು ಹೀಗೆಯೇ ಭಾಷಣ ಮಾಡಬೇಕು ಎಂದು ತಿದ್ದಿದರು. ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರೊಬ್ಬರಿಗೆ ತಲೆಕೆಡಿಸಿಕೊಳ್ಳಲು ಸಾವಿರಾರು ವಿಷಯ ಗಳಿರುತ್ತವೆ. ಆದರೆ ಅವರು ಈ ಸಣ್ಣ-ಪುಟ್ಟ ಸಂಗತಿಯ ಬಗ್ಗೆಯೂ ಲಕ್ಷ್ಯವಹಿಸುತ್ತಿದ್ದರು.’ ‘ಜೆಆರ್‌ಡಿ ಅವರನ್ನು ಯಾವ ಕಾರ್ಯಕ್ರಮಕ್ಕೆ ಕರೆದರೂ ಅವರೇ ಖುದ್ದಾಗಿ ಭಾಷಣವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಭಾಷಣದ ಪ್ರತಿ ಅವರ ಕೋಟಿನ ಜೇಬಿನಲ್ಲಿ ಇರುತ್ತಿತ್ತು. ಆದರೆ ಅವರು ಅದನ್ನು ಓದುತ್ತಿರಲಿಲ್ಲ. ಒಮ್ಮೆ ಜೆಆರ್ಡಿಯವರು ಮುಂಬೈನ ಶಾಲಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಗಲೂ ಅವರ ಕೋಟಿನ ಜೇಬಿನಲ್ಲಿ ಅವರ ಹಸ್ತಾಕ್ಷರದ ಭಾಷಣದ ಪ್ರತಿಯಿತ್ತು.
ಭಾಷಣವನ್ನು ಸಿದ್ಧಪಡಿಸಿಕೊಳ್ಳಲು ಅವರಿಗೆ ಕೆಲ ಸಮಯ ಬೇಕಾಗುತ್ತಿತ್ತು. ಹೀಗಾಗಿ ಅವರು ಕನಿಷ್ಠ ಹದಿನೈದು ದಿನಗಳ ತಯಾರಿ ಸಾಧ್ಯವಾಗದ ಕಾರ್ಯಕ್ರಮ ಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅಲ್ಲದೇ ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಅವರ ಪಾಲಿಗೆ ಯಾವ ಕಾರ್ಯಕ್ರಮವೂ ಸಣ್ಣದು ಎಂಬುದಿರಲಿಲ್ಲ. ಎಲ್ಲವೂ ಮಹತ್ವದ ಕಾರ್ಯಕ್ರಮಗಳೇ ಎಂದು ಭಾವಿಸುತ್ತಿದ್ದರು’ ಎಂದು ಪೆಂಡ್ಸೆ ಬರೆಯುತ್ತಾರೆ.
ಮತ್ತೊಂದು ಪ್ರಸಂಗ. ೧೯೯೨ ಅಕ್ಟೋಬರ್ ೧೫. ಏರ್ ಇಂಡಿಯಾದ ಅರವತ್ತನೇ ವಾರ್ಷಿಕೋತ್ಸವದ ಸಮಾರಂಭ. ಮುಂಬೈನ ಒಬೆರಾಯ್ ಹೋಟೆಲ್‌ನಲ್ಲಿ ದೊಡ್ಡ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜೆಆರ್‌ಡಿ ಮುಖ್ಯ ಅತಿಥಿಗಳಬ್ಬರು. ಕಾರ್ಯಕ್ರಮ ಸರಿಯಾಗಿ ರಾತ್ರಿ ೯.೩೦ಕ್ಕೆ ಆರಂಭವಾಗುವು ದಾಗಿ ಆಹ್ವಾನ ಪತ್ರಿಕೆಯಲ್ಲಿ ನಮೂದಿಸಲಾಗಿತ್ತು. ಆದರೆ ಅಂದು ಜೆಆರ್‌ಡಿ ಮೂರು ನಿಮಿಷ ತಡವಾಗಿ ಆಗಮಿಸಿದರು. ಅವರ ಆಗಮನಕ್ಕೆ ಕಾಯುತ್ತಿದ್ದವರಿಗೆ, ‘ದಯವಿಟ್ಟು ಕ್ಷಮಿಸಿ, ನನ್ನಿಂದ ತಡವಾಯಿತು’ ಎಂದರು. ಅವರ ಸ್ವಾಗತಕ್ಕೆ ಕಾದಿದ್ದವರು, ‘ಇಲ್ಲ, ಪರವಾಗಿಲ್ಲ.. ಮಾನ್ಯ ಸಚಿವರು ಇನ್ನೂ ಆಗಮಿಸಿಲ್ಲ’ ಎಂದರು.
ಆಗ ಜೆಆರ್‌ಡಿ, ‘ನಾನು ಮೂರು ನಿಮಿಷ ತಡವಾಗಿ ಬಂದಿದ್ದೇನೆ. ಮೂರು ನಿಮಿಷಕ್ಕೆ ಬೆಲೆ ಇಲ್ಲವೇ? ಸಚಿವರು ಎಷ್ಟು ಹೊತ್ತಿಗಾದರೂ ಬರಲಿ, ಆದರೆ ನಾನು ಸರಿಯಾದ ಸಮಯಕ್ಕೆ ಬರಬೇಕು. ಬೇರೆಯವರಿಗೆ ಕಾದರೂ ಪರವಾಗಿಲ್ಲ, ಆದರೆ ನಮಗಾಗಿ ಬೇರೆಯವರು ಕಾಯಬಾರದು’ ಎಂದರು. ಅಲ್ಲಿದ್ದವರಿಗೆ ಸಣ್ಣ ಅಚ್ಚರಿ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಮೂರು ದಿನಗಳ ನಂತರ, ಕಾರ್ಯಕ್ರಮದ ಸಂಘಟಕರಿಗೆ ಜೆಆರ್‌ಡಿಯವರಿಂದ ಪತ್ರ ಬಂತು – ‘ಕಾರ್ಯಕ್ರಮಕ್ಕೆ ತಡವಾಗಿ ಬಂದೆ. ಕ್ಷಮಿಸಿ. ನಾನು ತಡವಾಗಿ ಹೋದಾಗಲೆಲ್ಲ ತೀರಾ ಸಣ್ಣವನಾಗುತ್ತೇನೆ. ಆ ದಿನವೆಲ್ಲ ನಾನು ಕೊರಗುತ್ತಿರುತ್ತೇನೆ.’ ಜೆಆರ್‌ಡಿ ತಡವಾಗಿ ಯಾವ ಕಾರ್ಯಕ್ರಮಕ್ಕೂ ಹೋಗುತ್ತಿರಲಿಲ್ಲ. ಕಚೇರಿಯಲ್ಲಿ ಮೀಟಿಂಗ್ ಕರೆದರೂ, ಸಿಬ್ಬಂದಿ ಆಗಮಿಸುವುದಕ್ಕಿಂತ ಒಂದು ನಿಮಿಷ ಮುಂಚಿತವಾಗಿ ಬರುತ್ತಿದ್ದರು. ಅವರು ತಡವಾಗಿ ಹೋದ ನಿದರ್ಶನಗಳು ತೀರಾ ಅಪರೂಪ.
ಇನ್ನೊಂದು ಪ್ರಸಂಗ. ಜೆಆರ್‌ಡಿ ತಮ್ಮ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ ಅಂದ್ರೆ ಗಗನಸಖಿಯರಿಗೆ ಮತ್ತು ಪೈಲಟ್‌ಗಳಿಗೆ ರೋಮಾಂಚನ ಮತ್ತು ಒಳಗೊಳಗೇ ಸಣ್ಣ ಅಳುಕು. ಜೆಆರ್‌ಡಿ ಏರ್ ಇಂಡಿಯಾ ಅಧ್ಯಕ್ಷರಾದವರು ಮತ್ತು ಮೂಲತಃ ಪೈಲಟ್ ಆಗಿದ್ದವರು. ಒಮ್ಮೆ ಅವರು ಏರ್ ಇಂಡಿಯಾ ವಿಮಾನ ಮೂಲಕ ಮುಂಬೈಯಿಂದ ದಿಲ್ಲಿಗೆ ಪ್ರಯಾಣ ಮಾಡುತ್ತಿದ್ದರು. ಅವರ ಜತೆ ಹಿರಿಯ ಐಎಎಸ್ ಅಧಿಕಾರಿ ಎಲ.ಕೆ.ಝಾ ಕೂಡ ಇದ್ದರು. ಜೆಆರ್‌ಡಿ ವಿಮಾನ ವೇರುತ್ತಿದ್ದಂತೆ, ಎಲ್ಲ ಸಿಬ್ಬಂದಿಯನ್ನು ಹೆಸರು ಹಿಡಿದು ಮಾತಾಡಿಸಿದರು.
ಪೈಲಟ್ಗಳು ಯಾರಿದ್ದಾರೆ ಎಂಬುದನ್ನು ವಿಚಾರಿಸಿಕೊಂಡರು. ಸೀಟಿನಲ್ಲಿ ಕುಳಿತು ಕೊಳ್ಳುತ್ತಿದ್ದಂತೆ, ಅವರಿಗೆ ರಾಜಾತಿಥ್ಯ. ಆಗ ಜೆಆರ್‌ಡಿ, ‘ನಾನು ಈ ಸಂಸ್ಥೆಯ ನೌಕರ ಎಂಬುದನ್ನು ಮರೆಯಬೇಡಿ. ನನಗೆ ಈ ಉಪಚಾರ ಬೇಡ. ನಾನು ಹೇಗಿದ್ದರೂ ಏರ್ ಇಂಡಿಯಾದ ಪ್ರಯಾಣಿಸುವೆ. ಬೇರೆ ಪ್ರಯಾಣಿಕರ ಕಡೆ ಗಮನ ಹರಿಸಿ’ ಎಂದು ಹೇಳಿ, ವಿಮಾನದ ಹಿಂಬದಿಗೆ ಹೋದರು.
ಹತ್ತು ನಿಮಿಷವಾದರೂ ಆಸಾಮಿ ಪತ್ತೆ ಇಲ್ಲ. ಗಗನಸಖಿಯನ್ನು ಕರೆದು ಜೆಆರ್‌ಡಿ ಎಲ್ಲಿ ಹೋದರು ಎಂದು ಝಾ ಅವರು ಕೇಳಿದರು. ಗಗನಸಖಿ ಹೋಗಿ ನೋಡಿ ದರೆ, ಜೆಆರ್‌ಡಿ ವಿಮಾನದ ಟಾಯ್ಲೆಟ್ ಅನ್ನು ಪರೀಕ್ಷಿಸುತ್ತಿದ್ದರು. ನೀರು ಸರಿಯಾಗಿ ಫ್ಲಶ್ಆಗುತ್ತಿದೆಯಾ ಎಂದು ನೋಡುತ್ತಿದ್ದರು. ಆಕೆ ಬಂದಾಗ ಎಲ್ಲ ಗಗನಸಖಿ ಯರನ್ನು ಕರೆಯುವಂತೆ ಹೇಳಿದರು. ‘ನೋಡಿ, ಕಾಲಕಾಲಕ್ಕೆ ಟಾಯ್ಲೆಟ್ ಪೇಪರ್ ಇದೆಯಾ ಎಂದು ನೋಡಬೇಕು. ಟಾಯ್ಲೆಟ್ ಪೇಪರ್ ಇಲ್ಲದಿದ್ದರೆ, ವಿಮಾನ ಕೊಳೆಯಾಗುತ್ತದೆ, ವಾಸನೆ ಬರುತ್ತದೆ. ಅದಕ್ಕೆ ಪ್ರಯಾಣಿಕರು ಕಾರಣರಲ್ಲ, ನಾವೇ ಕಾರಣ. ಟಾಯ್ಲೆಟ್ ಕ್ಲೀನ್ ಆಗಿದ್ದರೆ ಇಡೀ ವಿಮಾನ ಕ್ಲೀನ್ ಆಗಿರುತ್ತದೆ’ ಎಂದು ಎಲ್ಲ ಗಗನಸಖಿಯರಿಗೂ ಅಲ್ಲಿಯೇ ಒಂದು ಪಾಠ ಮಾಡಿದರು.
ಗಗನಸಖಿಯರ ಡ್ರೆಸ್‌ನಲ್ಲಿ ಸಣ್ಣ ಲೋಪವಿದ್ದರೂ ಅವರನ್ನು ಕರೆದು ಹೇಳುತ್ತಿದ್ದರು. ಅಷ್ಟು ದೊಡ್ಡ ಸಂಸ್ಥೆಯ ಮುಖ್ಯಸ್ಥರಾದರೂ, ಅವರು ಎಕಾನಮಿ ಕ್ಲಾಸಿನಲ್ಲೂ ಆಗಾಗ ಪ್ರಯಾಣಿಸುತ್ತಿದ್ದರು. ಬಿಜಿನೆಸ್ ಕ್ಲಾಸಿನಲ್ಲಿ ಪ್ರಯಾಣಿಸುವಾಗಲೂ, ಎಕಾನಮಿ ಕ್ಲಾಸಿಗೆ ಹೋಗಿ, ಕಣ್ಣು ಹಾಯಿಸುತ್ತಿದ್ದರು. ಧ್ವನಿವರ್ಧಕದಲ್ಲಿ ಅನೌ ಮಾಡುವಾಗ, ಸಣ್ಣ ಲೋಪವಾದರೂ ಕರೆದು, ಹಾಗಲ್ಲ ಹೀಗೆ ಎಂದು ಹೇಳುತ್ತಿದ್ದರು.
ಟಾಟಾ ಸಂಸ್ಥೆಯಲ್ಲಿ ಕಳೆದ ಮೂವತ್ನಾಲ್ಕು ವರ್ಷಗಳಿಂದ ಬೇರೆ ಬೇರೆ ಜವಾಬ್ದಾರಿಗಳಲ್ಲಿ ಕೆಲಸ ಮಾಡುತ್ತಿರುವ, ಆತ್ಮೀಯರಾದ ಹರೀಶ್ ಭಟ್ ಇತ್ತೀಚೆಗೆ   : 40      ಪುಸ್ತಕ ಹೊರತಂದಿದ್ದಾರೆ. ಅವರು ಜೆಆರ್‌ಡಿಯವರ ಹಲವು ಸ್ವಾರಸ್ಯಕರ ಪ್ರಸಂಗ ಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ. ಜೆಆರ್‌ಡಿ ಬಗ್ಗೆ ನಾನು ಸಾಕಷ್ಟು ಬರೆದಿದ್ದೇನೆ. ಪ್ರತಿ ಸಲ ಅವರ ಬಗ್ಗೆ ಓದಿದಾಗಲೂ ಅವರಿಂದ ಒಂದಷ್ಟು ಜೀವನ ಉತ್ಸಾಹ ಪಡೆದು ಧನ್ಯತೆ ಪಡೆಯುತ್ತೇನೆ, ಛಾರ್ಜ್ ಆಗುತ್ತೇನೆ.