ಬಂಗಾಳ ದುರ್ಗೆಗೆ ಯುನೆಸ್ಕೋ ಕಿರೀಟ
ಹೆಮ್ಮೆ
ಕೀರ್ತನ ಶೆಟ್ಟಿ
ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಯುನೆಸ್ಕೋದ ಅಂತರ್ ಸರಕಾರಿ ಸಮಿತಿಯು ಕೋಲ್ಕತಾದ ದುರ್ಗಾ ಪೂಜೆ ಯನ್ನು ಸಾಂಸ್ಕೃತಿಕಪರಂಪರೆಯ ಪ್ರತಿನಿಧಿ ಪಟ್ಟಿಗೆ ಸೇರಿಸಿದೆ.
ಈ ವಿಷಯ ಬಹಿರಂಗ ಪಡಿಸಿರುವ ಯುನೆಸ್ಕೋ ನವದೆಹಲಿಯ ನಿರ್ದೇಶಕ ಎರಿಕ್ ಫಾಲ್ಟ್, ಇದರಿಂದ ಸಾಂಪ್ರದಾಯಿಕ ಕುಶಲಕರ್ಮಿಗಳು, ವಿನ್ಯಾಸಕರು,ಕಲಾವಿದರು ಮತ್ತು ದೊಡ್ಡ ಪ್ರಮಾಣದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರೂ ಸೇರಿದಂತೆ ಸ್ಥಳೀಯ ಸಮುದಾಯಗಳಿಗೆ ಇನ್ನಷ್ಟು ಉತ್ತೇಜನ ನೀಡುವ ವಿಶ್ವಾಸವಿದೆ ಎಂದಿದ್ದಾರೆ.
ಸೆಪ್ಟೆಂಬರ್- ಅಕ್ಟೋಬರ್‌ ವೇಳೆ ಪಶ್ಚಿಮ ಬಂಗಾಳದಲ್ಲಿ, ಮುಖ್ಯವಾಗಿ ಕೊಲ್ಕತ್ತಾದಲ್ಲಿ ಆಚರಿಸಲಾಗುವ ಅತಿ ದೊಡ್ಡ ಉತ್ಸವಗಳಲ್ಲಿ ಒಂದು ದುರ್ಗಾ ಪೂಜೆ. ಭಾರತದ ಇತರ ಭಾಗಗಳಲ್ಲೂ ಈ ಹಬ್ಬಕ್ಕೆ ವಿಶೇಷ ಸೊಗಡಿದೆ. ಹಬ್ಬಕ್ಕಾಗಿ ತಯಾರಿಸುವ ಮಣ್ಣಿನ ದುರ್ಗಾ ವಿಗ್ರಹ ಅತ್ಯಂತ ವಿಶಿಷ್ಟ. ಹಬ್ಬದ ಹಿಂದಿನ ತಿಂಗಳುಗಳಲ್ಲಿ, ಸ್ಥಳೀಯ ಕುಶಲಕರ್ಮಿಗಳು ಗಂಗಾ ನದಿಯಿಂದ ತೆಗೆದ ಜೇಡಿಮಣ್ಣಿನಿಂದ ಸಾಂಪ್ರದಾಯಿಕ ಮೂರ್ತಿಗಳನ್ನು ತಯಾರಿಸುತ್ತಾರೆ. ದೇವಿಯ ಆರಾಧನೆಯಿಂದ ಹಿಡಿದು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನದಿಯಲ್ಲಿ ವಿಗ್ರಹಗಳ ವಿಸರ್ಜನೆಯವರೆಗಿನ ಎಲ್ಲ ವಿಧಿವಿಧಾನಗಳೂ ವೈಶಿಷ್ಟ್ಯಪೂರ್ಣ. ವಾರ್ಷಿಕ ಈ ಉತ್ಸವಕ್ಕೆ ಬಹುದೊಡ್ಡ ಇತಿಹಾಸದೊಂದಿಗೆ ತಲೆಮಾರುಗಳ ಪರಂಪರೆಯೂ ಇದೆ.
ದುರ್ಗಾ ಪೂಜೆಯು ಧರ್ಮ ಮತ್ತು ಕಲೆಯ ಸಮ್ಮಿಳನದ ಅತ್ಯುತ್ತಮ ನಿದರ್ಶನ. ಕಲಾವಿದರು, ವಿನ್ಯಾಸಕಾ ರರಿಗೆ ತಮ್ಮ ನೈಪುಣ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯೂ ಹೌದು. ನಗರ ಪ್ರದೇಶಗಳಲ್ಲಿ ನಿರ್ಮಿಸುವ ಬೃಹತ್ ಮಂಟಪಗಳು, ಸಾಂಪ್ರದಾಯಿಕ ಬಂಗಾಳಿ ಡ್ರಮ್ಮಿಂಗ್ ಮತ್ತು ದೇವಿಯ ಆರಾಧನೆಯೇ ಪ್ರಮುಖ ಆಕರ್ಷಣೆ.
ಇದಲ್ಲದೇ ಕುಂಭಮೇಳ, ಬಂಗಾಳ ಮತ್ತು ಒಡಿಶಾದ ಚೌ ನೃತ್ಯ, ಮಣಿಪುರದ ಸಂಕೀರ್ತನ, ಯೋಗ, ರಾಮಲೀಲಾ, ಲಡಾಖ್‌ನ ಬೌದ್ಧ ಪಠಣ ಮತ್ತು ನೌರುಜ್‌ ನಂಥ ಇತರ ಭಾರತೀಯ ಸಾಂಸ್ಕೃತಿಕ ಆಚರಣೆಗಳು ಮತ್ತು ಅಭಿವ್ಯಕ್ತಿಗಳೂ ಪ್ರತಿನಿಧಿ ಪಟ್ಟಿಯಲ್ಲಿ ಸೇರಿವೆ. ದುರ್ಗಾ ಪೂಜೆಯನ್ನು ಪಾರಂಪರಿಕ ಪಟ್ಟಿಗೆ ಸೇರಿ ಸಿರುವುದನ್ನು ದೇಶಾದ್ಯಂತ ಜನರು ಸಂಭ್ರಮಿಸುತ್ತಿzರೆ ಎಂದಿರುವ ಪ್ರಧಾನಿ ಮೋದಿ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಗಣ್ಯರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.