ಸಂತತ್ವ ಎಂಬುದು ಮಾನವರಿಗುಂಟೆ ?
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಮೊದಲೆಲ್ಲ ಸ್ವಾಮಿಗಳು, ಸಂತರು, ಯೋಗಿಗಳೆಂದರೆ ಆ ಗೌರವವೇ ಬೇರೆ ಇತ್ತು. ಈಗ ಸ್ವಾಮಿಗಳನ್ನು ಕಂಡರೆ ಅಟ್ಟಾಡಿಸಿಕೊಂಡು ಹೊಡೆಯಲು ತಯಾರಾಗಿರುವ ಜನರೇ ಹೆಚ್ಚು. ಯೋಗಿಗಳೆಂದರೂ ಯೋಗಾಸನ, ಸೌಂದರ್ಯ ವರ್ಧನೆ, ಜೋತಿಷ್ಯ ಹೇಳುತ್ತೇವೆ, ನಮ್ಮದೇ ಫಿಟ್‌ನೆಸ್ ಸೆಂಟರ್ ಇದೆ ಒಂದು ವಾರ ಬಂದಿದ್ದು ರಿಲ್ಯಾಕ್ಸ್ ಆಗಿ ಎಂದು ಹೇಳುವವರೇ ಯೋಗಿ ಎನಿಸಿಕೊಳ್ಳುತ್ತಿದ್ದಾರೆ.
ಇನ್ನು ಬಾಬಾಗಳಂತೂ ಓಣಿಗೊಬ್ಬರು, ಕಂಡವರನ್ನೆಲ್ಲ ಬಾ, ಬಾ ಎಂದು ಕರೆಯುವವರೆಲ್ಲ ಬಾಬಾಗಳೇ! ಇನ್ನು ದಾದಾಗಳಂತೂ ಮನೆಗೊಬ್ಬರು, ಪ್ರತಿ ಮನೆಯಲ್ಲೂ ಸ್ವಲ್ಪ ಹಠ ಮಾರಿ, ಸಿಟ್ಟಿನ, ಬಂದವರ ಮುಂದೆ ಎದೆ ಸೆಟೆಸಿ ನಿಲ್ಲುತ್ತಾ, ಜಿಮ್‌ಗೆ ಹೋಗುವ ಹುಡುಗನಿದ್ದರೆ ಅವನನ್ನು ನಮ್ಮನೆ ದಾದಾ ಇವನೇ ಎಂದು ಹೆಮ್ಮೆ ಯಿಂದ ಪರಿಚಯಿಸುತ್ತಾರೆ. ಆದರೆ, ಈಗ ಸಂತರು ಮಾತ್ರ ವಿರಳವಾಗಿದ್ದಾರೆ. ಸಂತತ್ವ ಎಂಬುದು ಶಾಂತತ್ವವೂ ಹೌದು. ತಮ್ಮ ಪಾಡಿಗೆ ತಾವಿರುತ್ತಾ, ತಮ್ಮ ಕೈಲಾದದ್ದನ್ನು ಮಾಡುತ್ತ, ಬಂದದ್ದನ್ನೆಲ್ಲಾ ಸಹಿಸುತ್ತಾ, ದೇಹ ವನ್ನು ಬೆಳೆಸದೇ ಒಳಗೊಳಗೇ ಸದ್ಗುಣಗಳನ್ನು ರೂಢಿಸಿಕೊಳ್ಳುವದೇ ಸಂತರ ನಿಜ ಕುರುಹು.
ವಿವೇಕಾನಂದ, ರಮಣ ಮಹರ್ಷಿ, ಶಿರಡಿ ಸಾಯಿಬಾಬಾ, ವರದಹಳ್ಳಿ ಶ್ರೀಧರ ಸ್ವಾಮೀಜಿ ಇವರೆಲ್ಲ ಮಹಾನ್ ಸಂತರು, ದೇಹ ದಂಡಿಸಿದರಾಗಲಿ, ಕೊಬ್ಬಿಸಲಿಲ್ಲ. ಸ್ನಾಯುಗಳನ್ನು ಮರೆಮಾಚಿದರಾಗಲಿ, ಉಬ್ಬಿಸಲಿಲ್ಲ, ಹೀಗಾಗಿ ಮುಖದಲ್ಲಿ ಗೌರವ ಹುಟ್ಟುವ ಕಳೆ, ಶಾಂತತೆಗಳು ತಾವಾಗಿಯೇ ಹೊರ ಹೊಮ್ಮಿದವು. ಕಾಯ ಕೃಶ ವಾದರೆ, ತೇಜಸ್ಸು ದೃಶ್ಯವಾಗುತ್ತದೆ. ಅದಕ್ಕೇ ಅಕ್ಕ ‘ಕಾಯ ಕರ್ರನೇ ಕಂದಿದರೇನು, ಮಿರ್ರನೇ ಮಿಂಚಿದ ರೇನು’ ಎಂದಿರುವರು.
ಇಂದು ಮಠ ಕಟ್ಟಿ, ಮಠಾಧೀಶರಾಗಲು ಹವಣಿಸುತ್ತಿದ್ದಾರಾಗಲಿ, ಹಠ ತೊಟ್ಟು ಕಾರ್ಯ ಸಾಧಕರಾಗುತ್ತಿಲ್ಲ. ಸಮಯ ಸಾಧಕತನವನ್ನು ಮಾತ್ರ ಮರೆಯತ್ತಿಲ್ಲ, ಸದ್ಯಕ್ಕೆ ಭಾರತಕ್ಕೆ ಬೇಕಾಗಿರುವವರು ಸಂತರು, ನಾವು ಸಂತರನ್ನು ಹುಡುಕಬೇಕಿದೆ, ಅವರ ಬೆನ್ನು ಹತ್ತಬೇಕಿದೆ, ಬಾಬಾ, ಸ್ವಾಮಿಗಳನ್ನು ದೂರವಿಡಬೇಕಾಗಿದೆ. ಸಂತರನ್ನು ಹುಡುಕುವದೂ ಕಷ್ಟ, ಹುಡುಕಿದ ಮೇಲೆ ಅವರ ಬೆನ್ನು ಬೀಳುವದೂ ಕಷ್ಟ. ಏಕೆಂದರೆ, ನಿಜವಾದ ಸಂತರು ಶಿಷ್ಯರನ್ನು, ಹಿಂಬಾಲಕರನ್ನು ಬಯಸುವದಿಲ್ಲ. ಅವರು ಒಂಟಿ ಸಲಗ.
ಗುರುಗಳನ್ನು, ಸಂತರನ್ನು ಸರ್ವನಾಶ ಮಾಡುವವರು ಅವರ ಶಿಷ್ಯರೇ. ಗುರುಗಳ ದಾರಿಯಲ್ಲಿ ಇಂದು ಯಾವ ಶಿಷ್ಯನೂ ಹೋಗುತ್ತಿಲ್ಲ. ಅದು ಬಿಟ್ಟು ತಮ್ಮ ದಾರಿಗೇ ಅವರನ್ನು ಎಳೆಯುತ್ತಿರುವದಕ್ಕೆ ಗುರುತ್ವವೆಂಬುದು ಗುರುತ್ವಾಕರ್ಷಣೆಯನ್ನು ಕಳೆದುಕೊಂಡಿದೆ, ಕಳೆದುಕೊಳ್ಳುತ್ತಿದೆ. ನಾನು ನನ್ನಕಾಯಕವಾದ ಹಾಸ್ಯ ಸಂಜೆಗಳಿಂದಾಗಿ ಕರ್ನಾಟಕದ ಎಲ್ಲ ಮಠ ಮಾನ್ಯಗಳಿಗೂ ಹೋಗಿದ್ದೇನೆ. ಮಠ ಕಟ್ಟಿಸಲು ೩೦ ಬೈ ೪೦ ಸೈಟ್ ಗಾಗಿ ವಿಧಾನಸೌಧದ ಮುಂದೆ ನಿಂತಿರುವ ಜಗದ್ಗುರುಗಳನ್ನು ಕಂಡಿದ್ದೇನೆ, ಅವರ ಹೆಸರ ಮುಂದೆ ಮಾತ್ರ ಜಗದ್ಗುರು, ಅವರು ಬೇಡುತ್ತಿರುವುದು ೩೦ಬೈ೪೦ ಜಾಗ.
ಪ್ರಸಿದ್ಧ ಮಠಗಳ ಕಾರ್ಯಕ್ರಮಕ್ಕೆ ನಾನು ಹೋದಾಗ ಆ ಮಠದ, ಸ್ವಾಮಿಗಳ ಖ್ಯಾತಿ, ತಪಸ್ಸಿನ ಬಗ್ಗೆ ಕೇಳುವದಕ್ಕಿಂತ ಹೆಚ್ಚು ದೇವೇಗೌಡರು ಪ್ರಧಾನಿ ಯಾದದ್ದೇ ಈ ಮಠದಿಂದ, ಈ ಗುರುಗಳ ಆಶೀರ್ವಾದದಿಂದ, ಕುಮಾರಸ್ವಾಮಿ ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿಯಾದದ್ದೂ ಈ ಮಠದಿಂದಲೇ, ಡಿಕೆಶಿ ಕೋರ್ಟ್‌ಕೇಸ್, ತೆರಿಗೆದಾಳಿಗಳಿಂದ ಪಾರಾದದ್ದು ಇದೇ ಮಠದ ಆಶೀರ್ವಾದದಿಂದ, ಮಲ್ಯ ಲಂಡನ್‌ಗೆ ಹೋಗುವದಕ್ಕಿಂತ ಮೊದಲು ಅವಿತು ಕೊಂಡಿದ್ದು ಈ ಮಠದಲ್ಲೇ, ಜ್ಞಾನಪೀಠ, ನೊಬೆಲ್ ಪ್ರಶಸ್ತಿ ಆ ಸಾಹಿತಿಗೆ ಕೊಡಿಸಿದ್ದು ಈ ಸ್ವಾಮಿಗಳೇ, ದಾವೂದ್ ಇಬ್ರಾಹಿಂ, ಭಿಂದ್ರನ್‌ವಾಲೆ, ಲಾಡೆನ್ ಇವರೆಲ್ಲ ಈ ಮಠದ ಜಾತ್ರೆಗೆ ಹಣ ಕೊಡುತ್ತಾರೆ. ಮಠದ ನೆಲಮಾಳಿಗೆಯಲ್ಲಿ ಬಂದೂಕಗಳಿವೆ, ಪಾಕಿಸ್ತಾನದವರೂ ಆಗಾಗ ಇಲ್ಲಿಗೆ ಮಾರುವೇಷದಲ್ಲಿ ಬಂದು ಸ್ವಾಮಿಗಳ ಸಲಹೆ ಕೇಳುತ್ತಾರೆ, ಮೋದಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ಈ ಮಠ ದುಡಿಯುತ್ತಿದೆ, ರಾಹುಲ್ ಗಾಂಧಿಗೆ ಭಾಷಣ ಕಲಿಸಿ, ಆತನನ್ನು ಪ್ರಧಾನಿ ಮಾಡಲು ಈ ಸ್ವಾಮಿಗಳೇ ಆತನಿಗೆ ‘ಸರಸ್ವತಿ ತೊಪ್ಪಲು ಔಷಧಿ’ ಕೊಡುತ್ತಿದ್ದಾರೆ ಇತ್ಯಾದಿ ಇತ್ಯಾದಿ ಸ್ಥಳ ಮಹಿಮೆ, ಸ್ಥಳ ಪುರಾಣಗಳನ್ನು ಹೇಳುತ್ತಾರಾಗಲಿ ಪೌರಾಣಿಕ ಮಹಿಮೆ, ಕ್ಷೇತ್ರ ಪುರಾಣಗಳನ್ನಲ್ಲ.
ಅರೆಬೆತ್ತಲೆ ನಟಿಯರ ಜತೆ, ಬೇಲ್ ಮೇಲೆ ಹೊರಬಂದ ಕೂಡಲೇ ಜೇಲಿನ ಬಾಗಿಲಲ್ಲೇ ಅವರಿಗೆ ಹಾರ ಹಾಕಿ ಸ್ವಾಗತಿಸುವ ಸ್ವಾಮಿಗಳ ಫೋಟೋಗಳು ಮಠದಲ್ಲಿ ರಾರಾಜಿಸುತ್ತಿರುತ್ತವೆ. ಇನ್ನು ಆ ಮಠದ ಆವರಣದಲ್ಲಿ ಸಿನಿಮಾ ಶೂಟಿಂಗೋ, ಸೀರಿಯಲ್ ಶೂಟಿಂಗೋ ಆದರಂತೂ ಮುಗಿದೇ ಹೋಯಿತು.ಬಸ್ಸು ಮಾಡಿಕೊಂಡು ಜನ ಆ ಮಠದ ಮುಂದೆ ಇಳಿಯುತ್ತಾರೆ. ಇಲ್ಲೇ, ಇಲ್ಲೇ ಆ ವಿಲನ್, ಹಿರೋಯಿನ್‌ನ್ನು ರೇಪ್‌ಮಾಡಿದ್ದು, ಇದೋ, ಇದೋ ಈ ಕಾರಂಜಿ ಹತ್ತಿರವೇ, ಹೀರೋ ಹಿರೋಯಿನ್ ಮೈಗೆ ನೀರು ಎರಚಿ ಅಪ್ಪಿಕೊಳ್ಳೋದು, ಇದೋ, ಇದೋ ಈ ಗದ್ದಿಗೆಯ ಮುಂದೆಯೇ ಹೀರೋ ಎಂಟು ಜನ ರೌಡಿಗಳನ್ನ ಕೊಚ್ಚಿ ಕೊಚ್ಚಿ ಕೊಲ್ಲುವದು ಎಂದೆಲ್ಲ ಆ ಸ್ಥಳಗಳನ್ನು ಗುರುತಿಸುತ್ತಾರೆ.
ಶತಶತಮಾನಗಳ ಇತಿಹಾಸವಿರುವ ಹಂಪೆ, ಮೈಸೂರು, ಶೃಂಗೇರಿ, ಬದರಿ, ಶ್ರೀರಂಗಪಟ್ಟಣ, ಬಿಜಾಪುರ, ತಾಜಮಹಲ್ ಎಲ್ಲ ಗುರುತಿಸುವಿಕೆಯೂ ಸಿನಿಮಾ, ಸೀರಿಯಲ್ ಶೂಟಿಂಗ್ ಗಳಿಂದಲೇ ಎಂಬಂತಾಗಿದೆ. ಆ ಮಠದ ಹೆಸರು ಉಳಿದಿರುವುದು ಹಿಂದಿನ ತಪಸ್ವಿಗಳ ಫಲದಿಂದಲ್ಲ, ಅಲ್ಲಿ ಮಾಡಿದ ಸಿನಿಮಾ, ಸೀರಿಯಲ್‌ಗಳ ಶೂಟಿಂಗ್‌ಗಳಿಂದ ಎನ್ನುವಷ್ಟು ಅವುಗಳ ಆಕರ್ಷಣೆ. ಅದಕ್ಕೇ ಇಂದು ಪತಿತರೆಲ್ಲ ಮಠದ ಬಳಿ ಹೋಗುವದು ಪಾವನ ರಾಗಲು ಅಲ್ಲ ಅವುಗಳನ್ನು ಪತಿತ ಮಾಡಲು ಎನಿಸುತ್ತಿದೆ. ಇವೆಲ್ಲವೂ ಆಗುತ್ತಿರುವದು ಗುರುವಿನ ಹಿಂದೆ ಬಂದು ಸೇರುತ್ತಿರುವ ಅವರ ಅನುಯಾಯಿಗಳೆಂಬ ಸ್ವಾರ್ಥಿ ಶಿಷ್ಯರಿಂದ.
ಶ್ರೀಧರ ಸ್ವಾಮಿಗಳು ‘ಸಾಧಕರಿಗೆ ಎಚ್ಚರಿಕೆ’ ಎಂಬ ಶೀರ್ಷಿಕೆಯಲ್ಲಿ ಹೀಗೆ ಬರೆಯುತ್ತಾರೆ ‘ಶಿಷ್ಯ ಮಂಡಳಿಯನ್ನು ಸಾಧಕರು ಬೆಳೆಸಬಾರದು, ಶಿಷ್ಯರು ಅಜ್ಞಾನಿಗಳೇ ಇರುತ್ತಾರೆ. ಮೋಹ, ಮಮತೆ, ಅಹಂಕಾರ, ವಿಷಯವಾಸನೆ ಅವರಲ್ಲಿ ಮನೆ ಮಾಡಿರುತ್ತವೆ. ಅವು ಸಾಧನೆ ಮಾಡುವದಿಲ್ಲ. ಅವರ ಬಗ್ಗೆ ಯೋಚಿಸಿ, ಯೋಚಿಸಿ ನಮ್ಮ ಸಾಧನೆಯೇ ನಿಂತು ಹೋಗುತ್ತದೆ. ಕೆಲವರು ಗುರುಸೇವೆ ಹೆಸರಿನಲ್ಲಿ ಅವರಿಗೆ ಜರತಾರಿ ವಸ, ಮಲಗಲು ಗಾದಿ, ದಿಂಬು, ವಜ್ರದ ಆಭರಣ, ಬೆಳ್ಳಿ-ಬಂಗಾರದ ಪಾದುಕೆಗಳನ್ನು ನೀಡಿ ಊಟದಲ್ಲೂ ಷಡ್ರಸಗಳನ್ನು ಉಣಿಸುತ್ತಾರೆ. ಆಗ ಸಾಧಕನ ಬಳಿ ದೃಢ ವೈರಾಗ್ಯ ಉಳಿಯು ವದಿಲ್ಲ.
ಸಾಧಕರು ಬಾಹ್ಯ ಉಪಾಧಿಗಳನ್ನೆಲ್ಲ ತ್ಯಜಿಸಿದಾಗ ಮಾತ್ರ ಆತನನ್ನು ಜಗತ್ತು, ಇತಿಹಾಸ ತಪಸ್ವಿ, ಸಂತ ಎಂದು ಗುರುತಿಸುತ್ತದೆ. ಇಂದು ರಾಜಕಾರಣಿ ಯಾಗುವದು ಇಲ್ಲವೇ ಸ್ವಾಮಿಗಳಾಗುವದು ಕೇವಲ ಬಾಹ್ಯ ಸುಖ ಪಡೆಯಲೇ ವಿನಃ ಸೇವೆ, ಸದ್ಧರ್ಮಗಳಿಗಾಗಿ ಅಲ್ಲವೆಂಬದು ನಿತ್ಯ ಕಾಣುತ್ತಿರುವ ದೃಶ್ಯ.ಅದಕ್ಕೇ ಈಗ ಕಾವಿಯನ್ನು ಕಂಡೊಡನೆ ಕೈಮುಗಿಯಬೇಡಯ್ಯ, ‘ಕಾವಿಯೊಳಗಿರುವವನು ಕಾಮಿಯೋ, ಕೊಲೆಗಾರನೋ, ಕಾಮಿನಿ, ಕಾಂಚಾಣಕ್ಕೆ ನಾಲಗೆ ಚಾಚಿರುವ ನಾಯಿಯೋ ನೋಡಯ್ಯ’ ಎನ್ನುವಂತಾಗಿದೆ. ನನಗಂತೂ ಇತ್ತಿಚೆಗೆ ರಾಜಕಾರಣಿಗಳ, ಸ್ವಾಮಿಗಳ ಜೊತೆ ವೇದಿಕೆ ಹಂಚಿಕೊಳ್ಳಲೂಬೇಡವಾಗುತ್ತಿದೆ-ಅವರದೆಲ್ಲ ಮುಗಿದ ಮೇಲೆ ಕೊನೆಗೆ ಕರೆಯಿರಿ ಎಂದೇ ದೂರದಲ್ಲಿ ಕುಳಿತಿರುತ್ತೇನೆ.
ಶ್ಲೋಕವೊಂದರಲ್ಲಿ ‘ದ್ವೇರೂಪೇ ವಾಸುದೇವಸ್ಯ ಚಲಂಚಾಚಲಮೇವ ಚ| ಚಲಂ ಸನ್ಯಾಸಿನಃ ಪ್ರೋಕ್ತಂ ಅಚಲಂ ಪ್ರತಿಮಾದಿಕಂ||’ ಎಂದಿದೆ. ಅಂದರೆ, ದೇವರಿಗೆ ಎರಡು ಸ್ವರೂಪಗಳು ಒಂದು ಚಲ ಇನ್ನೊಂದು ಅಚಲ , ಚಲ ರೂಪವೇ ಸ್ವಾಮಿಗಳು, ಅಚಲ ರೂಪವೇ ಮೂರ್ತಿ, ಪ್ರತಿಮಾದಿಗಳು ಎಂದು ಅರ್ಥ.
ಅಲ್ಲದೇ ‘ಯತಿರ್ನಾರಾಯಣ ಸಾಕ್ಷಾತ್’ ಅರ್ಥಾತ್, ಸನ್ಯಾಸಿಗಳು, ಯತಿಗಳು ನಡೆದಾಡುವ ದೇವರೇ ಎಂದು ನಂಬಿದ ಕಾಲವೊಂದಿತ್ತು ಎನಿಸುವದಿಲ್ಲವೆ ಈ ಶ್ಲೋಕಗಳನ್ನು ನೋಡಿದಾಗ? ಪ್ರಚಾರವೆಂದರಂತೂ ಈಗಿನ ಸ್ವಾಮಿಗಳಿಗೆ ಅತೀವ ಮೋಹ. ಪತ್ರಿಕೆಯ ವರದಿಗಾರರು, ಚಾನೆಲ್‌ಗಳ ಕ್ಯಾಮೆರಾಗಳು ಬರುವ ವರೆಗೂ ಇವರು ವೇದಿಕೆಗೆ ಬರುವದಿಲ್ಲ. ಕೆಲ ಸ್ವಾಮಿಗಳಂತೂ ವೇದಿಕೆ ಮೇಲೆ ಮೇಕಪ್ ಮಾಡಿಸಿಕೊಳ್ಳುವದೂ ಉಂಟು.
ಪ್ರವಚನ ಮಾಡುವಾಗ ಪುಸ್ತಕ, ಆಧಾರ ಗ್ರಂಥನೋಡುವದಕ್ಕಿಂತ ಹೆಚ್ಚು ತಮ್ಮ ಕೈ ಕಡಗಗಳು, ಕೊರಳ ಸರಗಳು, ಹೊದ್ದಿರುವ ಜರತಾರಿ ಶಲ್ಯಗಳ ಕಡೆಗೇ ಆಗಾಗ ನೋಡುತ್ತಾ, ಸರಿಪಡಿಸಿಕೊಳ್ಳುತ್ತಾ ಮಾತನಾಡುತ್ತಾರೆ- ಇವರು ಮಾತಾಡುವ ವಿಷಯ, ನಮ್ಮ ದುರ್ದೈವಕ್ಕೆ ‘ಸರಳ-ನಿರಾ ಡಂಬರ ಜೀವನ’ ಎಂಬ ವಿಷಯವಾಗಿರುತ್ತದೆ. ಕೇಳಿದ ಜನ ಸರಳವಾಗುತ್ತಾರೆ, ಹೇಳುವ ಸ್ವಾಮಿಗಳು ಕಬ್ಬಿಣದ ಕಡಲೆಯಂತಾಗುತ್ತಾರೆ.
ನಿಮ್ಮ ಬಗ್ಗೆ ಪ್ರಚಾರ ಮಾಡಬೇಕೆಂದಿದ್ದೇನೆ ಎಂದ ಭಕ್ತನೊಬ್ಬನಿಗೆ ಶ್ರೀಧರ ಸ್ವಾಮಿಗಳು ಹೇಳಿದ್ದು ಹೀಗೆ ‘ಪ್ರಚಾರವೆಂದರೆ ಒಂದಕ್ಕೆ ಎರಡು ಮಾಡಿ ಹೇಳಬೇಕಾಗುತ್ತದೆ. ಹೀಗಾಗಿ ನಿನಗೆ ಸುಳ್ಳು ಹೇಳಿದ ಪಾಪ ಬರುತ್ತದೆ. ನಾನು ಪ್ರಚಾರ ಮಾಡಿದ್ದರಿಂದಲೇ ಇವನು ಬೆಳೆದ ಎಂಬ ಅಹಂಕಾರ ನಿನಗೆ ಬರುತ್ತದೆ, ಆ ಮೇಲೆ ಗುರುವಾದ ನಾನೇ ನಿನ್ನ ಮಾತು ಕೇಳಬೇಕಾಗುತ್ತದೆ, ನಿಮಗೆ ಗೊತ್ತಿಲ್ಲ, ಸುಮ್ಮನಿರಿ ಎಂದು ನನಗೇ ಗದರುವ ಮಟ್ಟಿಗೆ ನನ್ನ ಮೇಲೆ ನಿನಗೆ ಅಧಿಕಾರ ಬರುತ್ತದೆ. ಅದೇ ನಿನಗೆ ಶಾಪವಾಗಿ ನಿನ್ನ ಏಳಿಗೆ ಕುಂಠಿತವಾಗುತ್ತದೆ.
ಸೂರ್ಯನಿಗೆ ಹೇಗೆ ಪ್ರಚಾರ ಬೇಕಿಲ್ಲವೋ ತೇಜಸ್ವಿ ಮಹಾತ್ಮರಿಗೂ ಪ್ರಚಾರ ಬೇಕಿಲ್ಲ. ನನ್ನಿಂದಾಗಿ ನಿನಗಾದ ಒಳ್ಳೆ ಅನುಭವ, ನೋಡಿದ್ದನ್ನು ಆಪ್ತರಾದಕೆಲವರಿಗೆ ಹೇಳಿದರೆ ಸಾಕು. ಅವರ, ನಿನ್ನ ನಿಷ್ಠೆ ಬಲಿತು ಅದೇ ಮುಕ್ತಿಗೆ ಕಾರಣವಾಗುತ್ತದೆ’ ಎಂದರಂತೆ ಎಂಥ ಮಾತಲ್ಲವೆ? ಇದನ್ನು ಅರ್ಥ ಮಾಡಿ ಕೊಳ್ಳುವ ಗುರು-ಶಿಷ್ಯರು ಎಲ್ಲಿದ್ದಾರೆ? ಆ ನೇಮ ಈ ನೇಮ, ಆ ವ್ರತ, ಈ ವ್ರತ ಎಂದು ಎಲ್ಲರೂ ಒಲೆಗೆ ಬೆಂಕಿ ಹಾಕಿದವರೇ, ನೀರು ಕಾಯಿಸಿದವರೇ ಎಲ್ಲ, ಮೀರಿದವರೊಬ್ಬರನೂ ಕಾಣೆ ಎಂದಿದ್ದಾರೆ ಶರಣರು ಹಾಗೆಯೇ, ‘ಕ್ಷಣವಾದರೂ ಆಗಲಿ ನಿಜದ ನೆನಪೇ ಸಾಕು| ಬೆಂಕಿಯೊಳಗಿನ ಗುಣ ಬಿಸಿನೀರಲುಂಟೆ ದೇವಾ||’ ಎನ್ನುವಂತೆ, ಪರಾತ್ಪರ, ನಿತ್ಯಸತ್ಯ ತತ್ವ ಗಳೆಂಬುವುಗಳು ನಮಗೆ ಬೇಡ, ಕೇವಲ ಆಡಂಬರ ಬೇಕು ಎಂಬುದು ಎಲ್ಲ ಕಡೆ ವ್ಯಾಪಿಸಿದೆ. ಈ ಆಡಂಬರವೇ ಬಿಸಿನೀರು, ಪರಾತ್ಪರ ತತ್ವವೇ ಬೆಂಕಿ. ಬಿಸಿನೀರು ಮತ್ತೆ ತಣ್ಣಗಾಗುತ್ತದೆ. ಬೆಂಕಿ ಸದಾ ಪ್ರಜ್ವಲಿಸುತ್ತಿರುತ್ತದೆ, ಅದೂ ಮೇಲ್ಮುಖವಾಗಿ!