ಮತ್ತಿನ ಗಮ್ಮತ್ತಲ್ಲೇ ನಡೆದ ಮಹಾಯುದ್ದಗಳು
ಶಿಶಿರ ಕಾಲ
ಶಿಶಿರ್‌ ಹೆಗಡೆ
@.
ಎದುರಿಗೆ ಕೂತ ನಿವೃತ್ತ ಬ್ರಿಗೇಡಿಯರ್ ಬಳಿ ನನ್ನ ಪ್ರಶ್ನೆಯನ್ನಿಟ್ಟೆ. ಅರ್ಜುನನಿಗೆ ಎದ್ದ ಪ್ರಶ್ನೆಗಳು ಯುದ್ಧಕ್ಕೆ ಹೊರಟ ಪ್ರತಿಯೊಬ್ಬ ಸೈನಿಕನಲ್ಲೂ ಏಳುತ್ತದೆಯೇ? ಒಬ್ಬ ಐಡಿಯಲ್ ಸೈನಿಕ ಎಂದರೇನು? ಬ್ರಿಗೇಡಿಯರ್ ನಿಟ್ಟುಸಿರು ಬಿಟ್ಟು ಮಾತು ಆರಂಭಿಸಿದರು.
ಯುದ್ಧವೆಂದರೆ ಸಿನೆಮಾ ಹೀರೋಗಳ ಹೊಡೆದಾಟದಂತಲ್ಲ. ಅಲ್ಲಿ ಪೆಟ್ಟಾದರೆ, ಗುಂಡು ತಾಗಿದರೆ ಸಾಮಾನ್ಯವಾಗಿ ಮತ್ತೆ ಏಳಲಾಗದ ಸ್ಥಿತಿಯೇ ಇರುತ್ತದೆ.ಬಿದ್ದವನು ಹೋದ ಎನ್ನುವ ಸ್ಥಿತಿಯೇ ಜಾಸ್ತಿ. ಒಬ್ಬ ಸಾಮಾನ್ಯನಿಗೆ ಯುದ್ಧದ ನೆಲ ಅರ್ಥವಾಗಲು ಸಾಧ್ಯವೇ ಇಲ್ಲ. ಯುದ್ಧ ಕ್ರಿಕೆಟ್ ಮ್ಯಾಚ್ ಅಲ್ಲ. ಅಲ್ಲಿ ನಿದ್ದೆ, ಹಸಿವು, ಬಹಿರ್ದೆಸೆ ಇವಕ್ಕೆಲ್ಲ ನಿಗದಿತ ಸಮಯವಿಲ್ಲ. ವೈರಾಗ್ಯಕ್ಕೆ ಅವಕಾಶವಿಲ್ಲ. ದೇಶಪ್ರೇಮ ಎನ್ನುವುದು ಒಂದು ಮಹಾ ಮತ್ತು. ಅದು ಉಳಿದೆಲ್ಲ ಮತ್ತಿಗಿಂತ ಒಂದಂಶ ಜಾಸ್ತಿ. ಸೈನಿಕರ ದೇಶಪ್ರೇಮದ ನಶೆಯ ಅಂದಾಜು ಸಾಮಾನ್ಯನಿಗೆ ಅರ್ಥವಾಗುವುದಿಲ್ಲ.
ಸಾಮಾನ್ಯ ನಾಗರಿಕ ದೇಶಪ್ರೇಮ ಎಂದು ಎಷ್ಟೇ ಮಾತನಾಡಬಹುದು – ಆದರೆ ಆತ ಸೈನಿಕನ ಮನಸ್ಸನ್ನು ತಿಳಿಯೋದು ಅಸಾಧ್ಯ. ಸೈನಿಕ ರಜೆಗೆ ಮನೆಗೆ ಮರಳಿದಾಗ ಆತ ಬೇರೆಯದೇ ವ್ಯಕ್ತಿ ಯಾಗಿರುತ್ತಾನೆ. ಆತ ಸೈನ್ಯದಲ್ಲಿದ್ದಾಗ ಇನ್ನೊಬ್ಬ ವ್ಯಕ್ತಿ. ಸೈನ್ಯಕ್ಕೆ ಸೇರುವ ಸಾಮಾನ್ಯ ವ್ಯಕ್ತಿಯೊಬ್ಬ ದೇಶಕ್ಕೆ ಜೀವ ಕೊಡುವ ಲೆವೆಲ್ಲಿಗೆ ಹೋಗಿ ಮುಟ್ಟಬೇಕಾದರೆ ಅದೊಂದು ದೊಡ್ಡ ಮೈಂಡ್ ಗೇಮ. ಇದನ್ನು ಪ್ರತಿ ದೇಶದ ಮಿಲಿಟರಿ ವ್ಯವಸ್ಥೆ ಕೂಡ ವ್ಯವಸ್ಥಿತವಾಗಿ ಮಾಡಲೇ ಬೇಕು. ಇದು ಎಲ್ಲ ಕಮಾಂಡರುಗಳಿಗೂ ಗೊತ್ತು. ಅವರು ಕೂಡ ಇಂಥದ್ದೇ ಒಂದು ಬದಲಾವಣೆ ಹೊಂದಿದವರೇ. ಇದೆಲ್ಲ ಅವಶ್ಯಕತೆ.
ಸುಮ್ಮನೆ ಒಬ್ಬ ಯುವಕ/ ಯುವತಿಯನ್ನು ಒಂದಿಷ್ಟು ಕವಾಯತು ಮಾಡಿಸಿ, ತಿನ್ನಿಸಿ, ಬಟ್ಟೆ – ಬೂಟ್ಸ್, ಹೆಲ್ಮೆಟ್ ಕೊಟ್ಟು, ವಿಮಾನ ಹಾರಿಸುವುದು ಹೇಗೆ, ಬಂದೂಕು ಚಲಾಯಿಸುವುದು ಹೇಗೆ ಎಂದು ಕಲಿಸಿ ಬಿಟ್ಟರೆ ಅವನು ಕೇವಲ ಒಳ್ಳೆಯ ಪೈಲೆಟ್ ಆಗುತ್ತಾನೆ ಅಥವಾ ಈಡುಗಾರನಾಗುತ್ತಾನೆ, ಸೈನಿಕ ನಾಗುವು ದಿಲ್ಲ. ಒಬ್ಬ ವ್ಯಕ್ತಿಯನ್ನು ಅದರಾಚೆ ಮಾನಸಿಕವಾಗಿ ಸೈನಿಕನಾಗಿಸು ವುದೇ ದೊಡ್ಡ ಸವಾಲು. ವ್ಯಕ್ತಿಯನ್ನು ಗುಂಪುನಿಂದ ಹೊರಗಿಟ್ಟು ಸೈನಿಕನನ್ನಾಗಿಸಲು ಸಾಧ್ಯವೇ ಇಲ್ಲ. ಒಬ್ಬ ಐಡಿಯಲ್ ಸೈನಿಕ ಎಂದರೆ ಆತನಿಗೆ ಸುಸ್ತಿಲ್ಲ. ಸೈನಿಕ ಎಂದರೆ ಅದೇ ಬೇರೆ ವರ್ಗ. ಅದು ಕಾಮನ್ ಮ್ಯಾನ್ ಗೆ ಎಷ್ಟೇ ವಿವರಿಸಿದರೂ ತಿಳಿಯುವುದಿಲ್ಲ.
ಬ್ರಿಗೇಡಿಯರ್ ಡಿ.ಎಸ್. ಸರಾವ್ ಜತೆ ಮಾತನಾಡುವಾಗ ತುಂಬಾ ಕೆದಕಿದ ಮೇಲೆ ಇವೊಂದಿಷ್ಟು ಹೊಸ ಆಯಾಮಗಳು ತೆರೆದುಕೊಂಡವು. ಅವರು ನನ್ನ ಸ್ನೇಹಿತನ ತಂದೆ – ಇಲ್ಲಿ ಮಗನ ಮನೆಗೆ ಬಂದಿದ್ದರು. ಅವರು ಜಮ್ಮು ಕಾಶ್ಮೀರದ ಮೂಲೆ ಮೂಲೆ ಬಲ್ಲವರು. ‘ಆಪರೇಷನ್ ಮೇಘದೂತ್’ ದಲ್ಲಿ ಹೋರಾಡಿ ಗಾಯಗೊಂಡವರು. ಅದರ ಜತೆ ಅವರು ಒಬ್ಬ ಪ್ರಾಧ್ಯಾಪಕರು ಮತ್ತು ಸೂಕ್ಷ್ಮವನ್ನು ಗ್ರಹಿಸಿ ಬರಹಕ್ಕಿಳಿಸುವ ಸಮರ್ಥ ಲೇಖಕರು ಕೂಡ ಹೌದು.
ದೇಶಕ್ಕೆ ಪ್ರಾಣ ಕೊಡುವವ ಸೈನಿಕ ಎಂಬ ಮಾತನ್ನು ನಾವು ಹೇಳಿ ಹೇಳಿ ಅದನ್ನು ತೀರಾ ಸಾಮಾನ್ಯವೆನ್ನುವ ಲೆವೆಲ್ಲಿಗೆ ತಂದು ನಿಲ್ಲಿಸಿ ಆಗಿದೆ. ಯಾವುದೇ ದೇಶದ ಸೈನ್ಯ ಸೇರುವವರು ಯಾವತ್ತೂ ಅಲ್ಪಸಂಖ್ಯಾತರು(ಅವರಲ್ಲ!). ಅದರಲ್ಲಿ ಹೀರೋಗಿರಿಗೆ ಅಥವಾ ಹೊಟ್ಟೆಪಾಡಿಗೆ ಸೈನ್ಯಕ್ಕೆ ಸೇರುವವರು ಕೂಡ ಇರುತ್ತಾರೆ. ಒಮ್ಮೆ ಸೈನ್ಯ ಸೇರಿದಮೇಲೆ ಅಲ್ಲಿನ ನೈಜತೆಯ ಪರಿಚಯವಾಗುತ್ತದೆ. ಆಗ ಅವರನ್ನು ಅಲ್ಲಿಯೇ ಮುಂದಿವರಿಯುವಂತೆ ಮಾಡುವುದು ಸುಲಭವಲ್ಲ. ಸೈನ್ಯ ಸೇರಿದ ಬಹುತೇಕರು ಮಧ್ಯದ ಒಮ್ಮೆ ‘ಇದೆಲ್ಲ ಬೇಕಿತ್ತಾ’ ಎಂದೆನಿಸುವ ಕ್ಷಣವೊಂದಿರುತ್ತದೆ.
ಅಂತಹ ಮನಸ್ಥಿತಿ ಪುಕ್ಕುಲುತನದಿಂದ ಉಂಟಾಗುವುದಲ್ಲ. ಅಲ್ಲಿ ಏಳುವುದು ಮೂಲಭೂತ ಪ್ರಶ್ನೆ. ಇದೆಲ್ಲ ಏಕೆ ಬೇಕು ಎನ್ನುವ ಅರ್ಜುನನ ಪ್ರಶ್ನೆ. ದೇಶಕ್ಕೆ ಸೈನ್ಯಕ್ಕೆ ಐಡಿಯಲ್ ಸೈನಿಕ ಬೇಕು. ಆತ ರೆಡಿಮೇಡ್ ಆಗಿ ಸಿಗುವ ಸರಕಲ್ಲ. ಒಬ್ಬ ಆದರ್ಶ ಸೈನಿಕ ನಲ್ಲಿ ನೋವು, ಹಸಿವು, ಕಾಮ, ಆಲಸ್ಯ, ಸುಸ್ತು, ನಿದ್ರೆ ಇವೆಲ್ಲಕ್ಕೆ ಅತಿಮಿತಿಯ ಜಾಗ. ಇತಿಹಾಸದುದ್ದಕ್ಕೂ ಆದರ್ಶ ಸೈನಿಕರನ್ನು ಹುಟ್ಟಿಹಾಕುವುದು ಪ್ರತಿಯೊಬ್ಬ ಲೀಡರ್‌ನ ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು.
ಇತಿಹಾಸದ ಪುಟ ತಿರುವುದಾಗ ಅತ್ಯಂತ ಬಲಿಷ್ಠ ಸೈನಿಕರೆಂದರೆ ಪುರಾತನ ಗ್ರೀಕ್ ನ ಸ್ಪಾರ್ಟನ್ ವಾರಿಯರ್‌ಗಳು. ಹೆದರಿಕೆಯೇ ಇಲ್ಲದ, ಸುಸ್ತಾಗದ, ನೋವಿನ ಗ್ರಹಿಕೆಯೇ ಇಲ್ಲದ, ಮನೆ, ಕುಟುಂಬ ಮರೆತ, ಅತ್ಯಲ್ಪ ತಿನ್ನುವ, ವೀರೋಚಿತವಾಗಿ ಹೋರಾಡುವ ಬಲಿಷ್ಠ ಸೈನಿಕರು ಅವರು. ಪ್ರತಿಯೊಬ್ಬ ಜನರಲ್‌ನ ಕನಸಿನ ಸೈನ್ಯ ಅದು. ಅಲೆಕ್ಸಾಂಡರ್ ಕೂಡ ತನ್ನ ಸೈನಿಕರಿಂದ ಇದನ್ನೇ ಬಯಸಿದ್ದ. ಹಾಗಾಗಿಯೇ ಗುಪ್ತವಾಗಿ ಆತನ ಸೈನಿಕರು ನೋವನ್ನು ಮರೆಯಲು,ಅಡಗಿಸಿಕೊಳ್ಳಲು ಮತ್ತು ಯುದ್ಧಕ್ಕಿಂತ ಮೊದಲು ಧೈರ್ಯಕ್ಕೆ, ಅಸಮಾನ್ಯರಾಗಲು ಓಪಿಯಂ ಅನ್ನು ಬಳಸುತ್ತಿದ್ದರು.
ಯೂರೋಪಿನ ನಾವಿಕರು ಕೂಡ ಓಪಿಯಂ ಅನ್ನು ಬಳಸುತ್ತಿದ್ದ ಮಾಹಿತಿ ಇದೆ. ಅಂತೆಯೇ ನೆಪೋಲಿಯನ್ ಸೈನಿಕರು ಕೂಡ ಹಶೀಶ್ ಅನ್ನು ಹೇರಳವಾಗಿ ಸೇವಿಸುತ್ತ ಯುದ್ಧ ಮಾಡಿದವರೇ. ಆದರೆ ಆ ಕಾಲದ ಸೈನ್ಯದ ಮುಖ್ಯಸ್ಥರಿಗೆ ಅವರ ಸೈನಿಕರ ಬಗ್ಗೆ ತುಂಬಾ ಕಾಳಜಿಯಿತ್ತು. ಹಾಗಾಗಿ ಈ ರೀತಿ ಡ್ರಗ್ಸ್ ಅನ್ನು ಸೇವಿಸಿದ್ದು ತಿಳಿದರೆ ಅವರಿಗೆ ಶಿಕ್ಷೆಯಾಗುತ್ತಿತ್ತು. ಆಗೆಲ್ಲ ಸೈನಿಕರಿಗೆ ವರ್ಷಗಟ್ಟಲೆ ತರಬೇತಿ ನೀಡಿ ಸಹಜವಾಗಿ ಅವರನ್ನು ತಯಾರು ಮಾಡಲಾಗುತ್ತಿತ್ತು.ಇವೆಲ್ಲ ನೈತಿಕತೆ ಕೊನೆಗೊಂಡದ್ದು, ಬದಲಾದದ್ದು19ನೇ ಶತಮಾನದಲ್ಲಿ ಕಡ್ಡಾಯವಾಗಿ, ಸೀಮಿತ ಸಮಯಕ್ಕೆ ಸೈನ್ಯಕ್ಕೆ ಸೇರಿಸುವ ಹೊಸ ಪದ್ಧತಿ ಜಾರಿಗೆ ಬಂದ ನಂತರ.
ಹೀಗೆ ಕಡ್ಡಾಯವಾಗಿ ಸೈನ್ಯಕ್ಕೆ ಸೇರುವ ಹೆಚ್ಚಿನವರಿಗೆ ಯಾವುದೇ ಧೈರ್ಯ, ದೇಶಪ್ರೇಮ ಇವೆಲ್ಲ ಇರುತ್ತಿರಲಿಲ್ಲ. ಎಷ್ಟೋ ಮಂದಿ ಸೇರಿದ ಬಹಳ ಕಡಿಮೆ ಸಮಯದಲ್ಲಿ ಯುದ್ಧಕ್ಕೆ ತಯಾರಾಗಿ ರಣರಂಗಕ್ಕೆ ಧುಮುಕಬೇಕಾದ ಸ್ಥಿತಿ. ಅದು ಇತಿಹಾಸದ ತೀರಾ ಆಕ್ರಮಣಶೀಲ ಸಮಯ. ಅಲ್ಲಿ ಸೈನ್ಯವೊಂದರ ತರಬೇತಿಗೆ ಸಮಯವೇ ಇರಲಿಲ್ಲ. ಅಲ್ಲದೇ ಈ ರೀತಿ ಸೈನ್ಯಕ್ಕೆ ಸೇರುವವರು ಬಹುತೇಕ ಬಡವರೇ ಆಗಿದ್ದರಿಂದ ಅವರು ಕೃಶಕಾಯದವರಾಗಿದ್ದರು ಮತ್ತು ಸೈನ್ಯವನ್ನು ಅವರು ಊಟಕ್ಕೆ, ಮತ್ತಿತರ ಅನಿವಾರ್ಯಕ್ಕೆ ಬೇಕಾಗಿ ಸೇರಿದ್ದಾಗಿರುತ್ತಿತ್ತು. ಹೀಗೆ ಸೇರಿದವರನ್ನು ಹೆದರದ ಸೂಪರ್ ಸೈನಿಕರನ್ನಾಗಿಸುವುದು ಹೇಗೆ ಎನ್ನುವುದೇ19ನೇ ಶತಮಾನದ ಜನರಲ್‌ಗಳ ಮುಂದಿದ್ದ ದೊಡ್ಡ ಸವಾಲು.
ಅದಕ್ಕೆ ಅನುಸರಿಸಿದ ಮಾರ್ಗ ಮಾತ್ರ1870ರಲ್ಲಿ ಜರ್ಮನಿ (ಅಂದಿನ ಪ್ರುಷ್ಯಾ) ಫ್ರಾನ್ಸಿನ ವಿರುದ್ಧ ಯುದ್ಧಕ್ಕಿಳಿದಾಗ ಅಲ್ಲಿ ಕೂಡ ಇಂಥದ್ದೇ ಸ್ಥಿತಿಯಿತ್ತು. ಇದು ಫ್ರಾಂಕೋ ಪ್ರುಷ್ಯನ್ ಯುದ್ಧ. ಆಗ ಯುದ್ಧದ ಮುನ್ನೆಲೆಯಲ್ಲಿ ಹತ್ಯಾರ ಹಿಡಿದು ನಿಲ್ಲುವ ಸೈನಿಕರಿಗೆ ಆಹಾರ ಮತ್ತಿತರ ಸರಂಜಾಮನ್ನು ಒದಗಿಸಲು ಬೆನ್ನ ಮೇಲೆ ಹೊತ್ತೇ ಹೋಗಬೇಕಾದ ದೊಡ್ಡ ಟ್ರೂಪಿನ ಅವಶ್ಯಕತೆಯಿತ್ತು. ಇವರದು ಪ್ರತೀ ದಿನ ಭಾರವನ್ನು ಹೊತ್ತು ಹೋಗಿ ಯುದ್ಧದ ನೆಲಕ್ಕೆ ಮುಟ್ಟಿಸಿ ವಾಪಸಾಗುವ ಕೆಲಸ. ಮಾರನೆಯ ದಿನ ಮತ್ತೆ ಅದೇ ಕಾಯಕ. ಇವರು ಸುಸ್ತಾಗುವಂತಿಲ್ಲ. ಆಗ ಇವರಿಗೆ ಮತ್ತು ಮುನ್ನೆಲೆಯ ಸೈನಿಕರಿಗೆ ಅಲ್ಲಿನ ಸೈನ್ಯ, ವಿಜ್ಞಾನಿಗಳುಅಫೀಮನ್ನು ಔಷಧವೆಂದು ಕೊಡಲು ಆರಂಭಿಸಿದರು.
ಅವರಿಗೆ ಅಫೀಮು ದೇಹದೊಳಕ್ಕೆ ಸೇರಿದ್ದೇ ಹಸಿವು, ನಿದ್ರೆ, ಭಯ, ನೋವು ಹೀಗೆ ಸೈನಿಕರಿಗೆ ಬಾಽಸುವ ಯಾವೊಂದೂ ಗ್ರಹಿಕೆಗೇ ಬರದಂತಾಯಿತು. ಫ್ರಾನ್ಸ್ ಸೈನ್ಯ ಜರ್ಮನ್ ಸೈನಿಕರ ಧೈರ್ಯ ಮತ್ತು ಆಕ್ರಮಣದಿಂದ ದಂಗಾಗಿ ಹೋಯಿತು. ಫ್ರಾನ್ಸಿಗೆ ಜರ್ಮನಿಯ ಸೈನಿಕರೆಲ್ಲ ಹೊಸಬರೆಂದು ಗೊತ್ತಿತ್ತು. ಆದರೆ ಅವರ ಅಗ್ರೇಶನ್‌ನ ಹಿನ್ನೆಲೆ ಅಂದಾಜೇ ಹತ್ತಲಿಲ್ಲ. ಜರ್ಮನಿಯ ಸೈನಿಕರ ಒಳಸೇರಿದ ಅಫೀಮು ಇಳಿದಂತೆ ಅವರಿಗೆ ನೋವು ಅನುಭವಕ್ಕೆ ಬರುತ್ತಿತ್ತು. ನೋವು ಎಷ್ಟು ಭೀಕರ ಎಂದರೆ ಅವರು ಮತ್ತೆ ಮಿಲಿಟರಿ ಡಾಕ್ಟರ್ ಹತ್ತಿರ ಓಡಿ ಹೋಗಿ ಅಫೀಮು ಚುಚ್ಚಿಸಿಕೊಳ್ಳುತ್ತಿದ್ದರು ಮತ್ತು ಕ್ಷಣಮಾತ್ರದಲ್ಲಿ ನೋವೆಲ್ಲ ಮರೆತು ಪುನಹ ಹೋರಾಟಕ್ಕೆ ತಯಾರಾಗಿ ಬಿಡುತ್ತಿದ್ದರು.
ಕ್ರಮೇಣ ಅವರಿಗೆ ಬೇಕಾಗುವ ಡೋಸೇಜ್ ಜಾಸ್ತಿಯಾಯಿತು – ‘ಮತ್ತು’ ಬೇಗ ಇಳಿಯಲು ಶುರುವಾಯಿತು. ಸೈನಿಕರೆಲ್ಲ ನಶೆದಿಯಾಗಿ ಬಿಟ್ಟಿದ್ದರು. ಜರ್ಮನಿ ಅಂದುಕೊಂಡಂತೆ ಗೆದ್ದಿತು, ಯೂರೋಪಿನ ಬಲಿಷ್ಠ ದೇಶವಾಗಿ – ಹೊಸ ಜರ್ಮನಿಯಾಗಿ ಹೊರ ಹೊಮ್ಮಿತ್ತು. ಯುದ್ಧ ಗೆದ್ದ ನಂತರ ನಾಲ್ಕು ಲಕ್ಷ ಸೈನಿಕರುಹೀರೋಗಳಾಗಿ ಮನೆಗೆ ಮರಳಿದರು. ಸೋತ ಫ್ರಾನ್ಸ್ ಜರ್ಮನಿಯನ್ನು ಸೋಲಿಸಲೇಬೇಕಿತ್ತು. ಜರ್ಮನಿಯ ಸೈನಿಕರ ಧೈರ್ಯಕ್ಕೆ ಕಾರಣ ಏನೋ ಒಂದುಇಂಜೆಕ್ಷನ್ ಎಂದಷ್ಟೇ ಫ್ರೆಂಚರಿಗೆ ತಿಳಿದಿತ್ತು. ಫ್ರೆಂಚರು ಅಲ್ಲಿನ ವಿಜ್ಞಾನಿಗಳಿಗೆ ತಮಗೂ ಇಂಥದ್ದೊಂದು ಬೇಕು – ಅದು ಸಿಕ್ಕಿದ ತಕ್ಷಣ ಜರ್ಮನಿಯ ಹೆಡೆಮುರಿಯಬೇಕು ಎಂದಾಯಿತು.
ಆಗ ಫ್ರೆಂಚರ ಕಣ್ಣು ಬಿದ್ದದ್ದು ಆಫ್ರಿಕಾದ ಒಂದು ಬಿಡಕಟ್ಟು ಜನಾಂಗದವರು ಬಳಸುತ್ತಿದ್ದ ಒಂದು ಬೀಜದ ಮೇಲೆ. ಅದು ‘ಕೋಲಾ’ ಎನ್ನುವ ಬೀಜ – ಅದನ್ನು ಫ್ರೆಂಚ್ ಬೆಟಾಲಿಯನ್‌ಗೆ ತಿನ್ನಿಸಲಾಯಿತು ಮತ್ತು ಅವರಿಗೆ ಮರಳುಗಾಡಿನಲ್ಲಿ ಹತ್ತು ತಾಸಿನಲ್ಲಿ ಐವತ್ತೈದು ಕಿಲೋ ಮೀಟರ್ ನಡೆಯಲು ಆದೇಶಿಸಲಾಯಿತು. ಇದು ಸಹಜವಾಗಿ ಸಾಧ್ಯವೇ ಆಗದ ಕೆಲಸ. ಮತ್ತಿನಲ್ಲಿ ಸೈನಿಕರು ಸುಸ್ತೇ ಇಲ್ಲದೆ ಐವತ್ತೈದು ಕಿಲೋಮೀಟರ್ ಕ್ರಮಿಸಿದ್ದಲ್ಲದೇ ಒಂದು ಚಿಕ್ಕ ವಿರಾಮದ ನಂತರ ಇನ್ನೊಂದು ಡೋಸ್ ಪಡೆದು ಅಷ್ಟೇ ದೂರವನ್ನು ಮರಳಿ ಕ್ರಮಿಸಿದರು.
ಒಂದೇ ದಿನದಲ್ಲಿ ಮರಳುಗಾಡಿನಲ್ಲಿ ನೂರಾಹತ್ತು ಕಿಲೋಮೀಟರ್ ಹತ್ತು ಕೆಜಿ ಹೊತ್ತು ಸೈನಿಕರು ಕ್ರಮಿಸಿದ್ದರು. ಆದರೆ ಮರಳಿ ಬರುತ್ತಿದ್ದಂತೆ ಎಲ್ಲಿಲ್ಲದ ಕಾಮ ತೃಷೆ ಸೈನಿಕರಲ್ಲಿ ಕಾಣಿಸಿಕೊಂಡಿತು. ಸೈನಿಕರು ಸಾಮೂಹಿಕ ಅತ್ಯಾಚಾರಕ್ಕೆ ಇಳಿದುಬಿಟ್ಟರು, ಕೆಲವರು ಆತ್ಮಹತ್ಯೆ ಮಾಡಿಕೊಂಡರು. ಹಾಗಾಗಿ ಈ ಪ್ರಯೋಗ ವನ್ನು ಅಲ್ಲಿಗೇ ನಿಲ್ಲಿಸಬೇಕಾಯಿತು. ಇತ್ತ ಜರ್ಮನಿಯಲ್ಲಿ ಹೀರೋಗಳಾಗಿ ಮರಳಿದ ಸೈನಿಕರೆಲ್ಲ ಡ್ರಗ್ ಅಡಿಕ್ಟ್‌ಗಳಾಗಿ ಜರ್ಮನಿಯ ಬೀದಿ ಬೀದಿಯಲ್ಲಿಹುಚ್ಚರಂತೆ ಅಫೀಮು ಸಿಗದೆ ಒದ್ದಾಡಿದರು. ನಂತರ ಅಫೀಮು ಎಂದರಲ್ಲಿ ಸಿಗುವಂತಾಯಿತು. ಸೈನಿಕರಲ್ಲದೇ ಜನಾಸಾಮಾನ್ಯರು, ಡಾಕ್ಟರುಗಳೂ ಅಫೀಮಿನ ದಾಸರಾದರು.
ದೇಶದ ಕಾರ್ಮಿಕರು ಆಫೀಮಿಲ್ಲದೆ ಕೆಲಸಕ್ಕೇ ಇಳಿಯದ ಸ್ಥಿತಿ ನಿರ್ಮಾಣವಾಯಿತು. ಬಹುತೇಕ ಸೈನಿಕರು ಅದಾಗಲೇ ಅಫೀಮಿನ ಮತ್ತಿನ ಮಧ್ಯವಯಸ್ಸಿನಲ್ಲಿ ಸತ್ತು ಹೋದರು. ಜರ್ಮನಿಗೆ ಜರ್ಮನಿಯೇ ಈ ಡ್ರಗ್ ದಾಸ್ಯದಲ್ಲಿ ಮುಳುಗಿದ್ದು ಅದಕ್ಕೆ ಪರಿಹಾರವೊಂದರ ಅವಶ್ಯಕತೆಯುಂಟಾಯಿತು. ಆಗ ಹುಟ್ಟಿದ್ದೇ ಹೆರೋಯಿನ್ – ಇನ್ನೊಂದು ಡ್ರಗ್. ಹೆರೋಯಿನ್ ಅಫೀಮಿಗಿಂತ ಇನ್ನಷ್ಟು ಡೇಂಜರ್ ಡ್ರಗ್. ಇದನ್ನು ಜರ್ಮನಿಯ ಅಂಗಡಿಗಳಲ್ಲಿ ಮಾರಲಾಯಿತು. ಜನರು ಇದರಿಂದ ಇನ್ನಷ್ಟು ಆಕ್ರಮಣಕಾರಿಯಾಗಿ ಬೀದಿ ಬೀದಿಗಳಲ್ಲಿ ಕೊಲೆ ಸುಲಿಗೆ ಹೆಚ್ಚಿದವು.
1914ರವರೆಗೂ ಆಸ್ಪತ್ರೆಗಳಲ್ಲಿ ಅಫೀಮಿನ ಆಡಿಕ್ಷನ್ ಬಿಡಿಸಲು ಒತ್ತಾಯದಿಂದ ಹೆರೋಯಿನ್ ಅನ್ನು ನೀಡಲಾಯಿತು. ಹೆರೋಯಿನ್‌ನ ಆಡ್ಡ ಪರಿಣಾಮ ತಿಳಿಯುವುದರೊಳಗಾಗಿ ದೇಶಕ್ಕೆ ದೇಶವೇ ಬಹುತೇಕ ಹೆರೋಯಿನ್ ದಾಸ್ಯಕ್ಕೊಳಗಾಗಿ ಬಿಟ್ಟಿತ್ತು. ಹೆದರಿಕೆ, ಆಯಾಸ, ನೋವು ಇವೆಲ್ಲದರ ಪರಿವೆಯಿಲ್ಲದ, ಕ್ರೂರ, ದಯೆರಹಿತ, ವೈರಾಗ್ಯಕ್ಕೆ ಆಸ್ಪದ ಕೊಡದ ಅಸಾಮಾನ್ಯ ಸೈನಿಕರನ್ನು ಕಡಿಮೆ ಸಮಯದಲ್ಲಿ ತಯಾರಿಸಲು ಹೋದ ಜರ್ಮನಿ ಹೆರೋಯಿನ್ ಎನ್ನುವ ಇನ್ನೊಂದು ಡ್ರಗ್ ನ ಕೂಪದೊಳಕ್ಕೆ ಸಿಕ್ಕಿಹಾಕಿಕೊಂಡಿತ್ತು. ಅದೇ ಸಮಯ ದಲ್ಲಿ ಮಹಾಯುದ್ಧದ ಹೊಸ್ತಿಲಲ್ಲಿದ್ದ ಉಳಿದ ದೇಶಗಳಿಗೂ ರ್ಮನಿಯಂಥದ್ದೇ ಅಸಾಮಾನ್ಯ ಸೈನಿಕರ ಅವಶ್ಯಕತೆ. ಇಷ್ಟಕ್ಕೇ ಮುಗಿಯುವ ಕಥೆಯೇ ಇದು?
(ಮುಂದಿನ ವಾರಕ್ಕೆ)