ವರ್ಷಕ್ಕೆ ಮೂರು ಬಣ್ಣ ತಳೆವ ಹರನಗುಡ್ಡೆ
ಶಶಾಂಕಣ
ಶಶಿಧರ ಹಾಲಾಡಿ
.@.
ಈ ಗುಡ್ಡದ ಒಳಗೆ ಟೊಳ್ಳಾಗಿದ್ದು, ಅಲ್ಲಿ ಚಿನ್ನ ತುಂಬಿದ ಕೊಪ್ಪರಿಗೆ ಇದೆ ಎಂಬ ನಂಬಿಕೆ ಇದೆ! ಅದೇನೇ ಇದ್ದರೂ, ಆ ಗುಡ್ಡದ ಮೇಲೆ ಸಾಗುವ ದಾರಿಯಲ್ಲಿಓಡಾಡಿದಾಗ, ಪ್ರತಿ ಹೆಜ್ಜೆ ಎತ್ತಿ ಹಾಕಿದಾಗಲೂ ‘ಧನ್ ಧನ್’ ಎಂದು ಸದ್ದಾಗುವುದಂತೂ ನಿಜ – ಟೊಳ್ಳಾದ ಕಲ್ಲಿನ ಮೇಲೆ ನಡೆದಾಗ ಆಗುವ ಸದ್ದಿನಂತೆ.
ಹಾಗೆ ನೋಡಿದರೆ, ನಮ್ಮ ಹಳ್ಳಿ ಮನೆಯ ಪೂರ್ವ ದಿಕ್ಕಿನಲ್ಲಿರುವ ಹರನಗುಡ್ಡೆಯನ್ನು, ಯಾತಕ್ಕೂ ಉಪಯೋಗಕ್ಕೆ ಬಾರದ ಪಾಳು ಜಾಗ ಎಂದು ಕರೆಬಹುದು. ಈಗಿನ ಕಾಲಮಾನದ ಸರಕಾರಿ ದೃಷ್ಟಿಯಲ್ಲಿ, ವಾಣಿಜ್ಯ ಉದ್ದೇಶಕ್ಕೆ ಜಾಗವನ್ನು ಪರಭಾರೆಮಾಡುವವರ ಪರಿಭಾಷೆಯಲ್ಲಿ, ಅದು ಪಕ್ಕಾ ಬಂಜರು ಭೂಮಿಯೇ ಸರಿ. ಆದರೆ, ನಮ್ಮ ಪರಿಸರದ ಸಮತೋಲನ ಕಾಪಾಡುವಲ್ಲಿ, ಇಕಾಲ ಜಿಲ್ಲೆಯ ಸರಪಣಿಯಲ್ಲಿ, ಹರನಗುಡ್ಡೆಯಂತಹ ಬೋಳು ಬೋಳಾದ, ಕಲ್ಲು ಮಿಶ್ರಿತಸಮತಟ್ಟು ಜಾಗಗಳಿಗೆ ತಮ್ಮದೇ ಆದ ಪ್ರಮುಖ ಸ್ಥಾನವಿದೆ.
ಜೀವವೈವಿಧ್ಯ ಶ್ರೀಮಂತವಾಗಲು ಇಂತಹ ಜಾಗಗಳ ಕೊಡುಗೆ ಮಹತ್ವದ್ದು. ಇಕಾಲಜಿಯ ಸರಪಣಿಯಲ್ಲಿ ಓತಿಕ್ಯಾತಗಳಿಗೂ ಸ್ಥಾನವಿರುವಂತೆ, ಮಳೆಹಾತೆ ಗಳಿಗೂ ಸ್ಥಾನವಿರುಂತೆ, ಬಂಜರು ಎಂದು ಕರೆಯಬಹುದಾದ ಗುಡ್ಡ, ಪಾಳು ಮೈದಾನಗಳಿಗೂ ಅವುಗಳದೇ ಆದ ಸ್ಥಾನವಿದೆ. ಹರನಗುಡ್ಡೆ ಎಂಬುದು ನಮ್ಮ ಹಳ್ಳಿಮನೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿರುವ ಗುಡ್ಡಗಾಡು ಪ್ರದೇಶ. ಮನೆಯಂಗಳಕ್ಕೆ ಅಂಟಿಕೊಂಡಿರುವ ಗದ್ದೆ ಬಯಲಿನ ನಡುವೆ ಸಾಗಿದ ದಾರಿಯಲ್ಲಿ ಸುಮಾರು ಮುಕ್ಕಾಲು ಕಿಮೀ ನಡೆದು, ಅಡ್ಡಲಾಗಿ ಸಿಗುವ ತೋಡನ್ನು (ತೊರೆ) ಮರದ ಸಂಕದ ಮೇಲೆ ನಡೆದು ದಾಟಿ, ಕಾಡು ಮರಗಳು ಬೆಳೆದಿರುವ ಹಾಡಿಯನ್ನು ಪ್ರವೇಶಿಸಿ ದಾಗ, ಇನ್ನೇನು ಹರನಗುಡ್ಡದ ಬಳಿ ಬಂದೆವೆಂದೇ ಅರ್ಥ.
ಆದರೆ, ಆ ಹಾಡಿ ದಾರಿಯಲ್ಲಿ ಒಂದು ಕಡಿದಾದ ಏರು; ಹಾಗೆ ಏರಿ ಹೋಗಲು ಮುರ ಕಲ್ಲನ್ನು ಕಟ್ಟಿ ತಯಾರಿಸಿದ ಸುಮಾರು150ಮೆಟ್ಟಿಲುಗಳಿವೆ! ಆ ಡು ಪ್ರದೇಶದಲ್ಲಿ ಈ ರೀತಿ ಕಲ್ಲಿನಮೆಟ್ಟಿಲುಗಳನ್ನು ಯಾರು, ಯಾಕೆ ಕೆತ್ತಿಸಿದರು ಎಂಬುದಕ್ಕೂ ಸ್ವಾರಸ್ಯಕರವಾದ ಒಂದು ಕಥೆ ಯಿದೆ. ಸುಮಾರು400ವರ್ಷಗಳ ಹಿಂದೆ ನಮ್ಮೂರಿನಲ್ಲಿ ಮುದ್ದಳ ಎಂಬ ರಾಜನು (ಪಾಳೆಗಾರ) ಆಳ್ವಿಕೆ ನಡೆಸುತ್ತಿದ್ದಾಗ, ಸನಿಹದ ಈಶ್ವರ ದೇಗುಲದ ಜಾತ್ರೆ ವಿಜ್ರಂಭಣೆಯಿಂದ ನಡೆಯುತ್ತಿತ್ತು. ದೇವಾಲಯದಿಂದ ಎರಡು ಕಿಮೀ ದೂರದಲ್ಲಿರುವ ಹರನಗುಡ್ಡೆಯ ತನಕ ದೇವರ ಮೆರವಣಿಗೆ ಸಾಗುತ್ತಿತ್ತು.
ಗುಡ್ಡದ ತುದಿಯಲ್ಲಿರುವ ಕಲ್ಲಿನ ಕಟ್ಟೆಯ ಮೇಲೆ ದೇವರನ್ನಿಟ್ಟು ಪೂಜಿಸಿ, ವಾಪಸು ತರುತ್ತಿದ್ದರು. ಕಾಡಿನ ನಡುವೆ ಇದ್ದ ಏರುದಾರಿಯಲ್ಲಿ ದೇವರನ್ನು ಹೊತ್ತು ಕೊಂಡು ಹೋಗಲು ಅನುಕೂಲವಾ ಗುವಂತೆ, ಆಗಿನ ಕಾಲದಲ್ಲಿದ್ದ ಓರ್ವ ವೇಶ್ಯೆ ತನ್ನ ಬಳಿ ಇದ್ದ ಚಿನ್ನದ ನಾಣ್ಯಗಳನ್ನು ನೀಡಿ, ಆ ಕಾಡಿನ ನಡುವೆ150ಮೆಟ್ಟಿಲುಗಳನ್ನು ಕಟ್ಟಿಸಿದಳಂತೆ! ಮುದ್ದಳರಾಜನ ಅರಮನೆಯಿದ್ದ ಜಾಗವು ಈಗ ಒಂದು ದಿಬ್ಬರ ದೂಪ ತಳೆದಿದೆ; ಈಶ್ವರ ದೇಗುಲ ಅನತಿ ದೂರದಲ್ಲಿದೆ. ಆಗಿನ ಕಾಲದ ಮುಂದುವರಿಕೆ ಎಂದು ಹೇಳಬಹುದಾದ ಜಾತ್ರೆ, ವಿಜ್ರಂಭಣೆಯ ಮೆರವಣಿಗೆಯ ಯಾವ ಕುರುಹುಗಳೂ ಇಂದು ಉಳಿದಿಲ್ಲ. ಆದರೆ, ಹರನಗುಡ್ಡೆ, ಅದನ್ನೇರಲು ಕಲ್ಲಿನ ಮೆಟ್ಟಿಲುಗಳು, ಗುಡ್ಡದ ತುದಿಯಲ್ಲಿ ಗೋಳಿ ಮರದ ಬುಡದಲ್ಲಿ ಒಂದು ಕಲ್ಲಿನ ಕಟ್ಟೆ, ಅಲ್ಲೇ ಪಕ್ಕದಲ್ಲಿ ಇನ್ನೊಂದು ಕಲ್ಲಿನ ಕಟ್ಟೆ ಇವೆಲ್ಲವೂ ಇಂದೂ ಇವೆ – ಕಾಲಗರ್ಭದಲ್ಲಿ ಮರೆತುಹೋದ ಕಥನಗಳ ಪಳೆಯುಳಿಕೆಗಳ ರೀತಿಯಲ್ಲಿ!
ಕಾಡಿನ ನಡುವೆ ಹರನಗುಡ್ಡೆಗೆ ಹತ್ತಿಹೋಗಲು ಇರುವ ಮೆಟ್ಟಿಲುಗಳ ಸಾಲು ನಿಜಕ್ಕೂ ಸುಂದರ. ಅಲ್ಲಲ್ಲಿ ಬೆಳೆದ ಬೋಗಿ, ದೂಪ, ಕಾಸಾನು ಮತ್ತು ಇತರ ಮರಗಳ ನಡುವೆ, ಒಪ್ಪವಾಗಿ ಕಟ್ಟಿರುವ ಮೆಟ್ಟಿಲುಗಳ ನೋಟ ಕಾವ್ಯಾತ್ಮಕ. ಅದನ್ನೇರುತ್ತಾ, ನೂರು ಮೆಟ್ಟಿಲುಗಳಾದ ನಂತರ, ಕಾಡು ತುಸು ದಟ್ಟವಾಗುತ್ತದೆ. ಹೆಚ್ಚು ಕಡಿದಾಗಿರುವ ಕೊನೆಯ ಆರೆಂಟು ಮೆಟ್ಟಿಲುಗಳನ್ನು ಉಸ್ಸಪ್ಪ ಎಂದು ಏರಿದಾಗ, ಒಮ್ಮೆಗೇ ಕಾಡು ಗವ್ವೆಂದು ತಲೆಯನ್ನೇ ಮುಚ್ಚಿಕೊಂಡಂತೆ ಅನಿಸುತ್ತದೆ. ಆ ದಟ್ಟಕಾಡಿನ ನಡುವೆ ಸಾಗಿದ ಕಾಲುದಾರಿಯಲ್ಲಿ ನೂರಿನ್ನೂ ಹೆಜ್ಜೆ ಹಾಕಿದರೆ, ಒಮ್ಮೆಗೇ ಕಾಡು ತಿಳಿಯಾಗುತ್ತದೆ, ಮರಗಳ ದಟ್ಟಣೆ ವಿರಳವಾಗುತ್ತದೆ.
ಒಂದು ವಿಶಾಲ ಬಯಲು ಭೂಮಿ ಎದುರಾಗುತ್ತದೆ. ಕಾಡಿನ ನೆರಳಿನಿಂದ ಒಮ್ಮೆಗೇ ಬಯಲಿನ ಬೆಳಕಿಗೆ ಬಂದ ಅನುಭವ. ಅಲ್ಲಿಂದಾಚೆ ಸುಮಾರು ಎರಡು ಕಿಮೀವೈಶಾಲ್ಯದ ಮಟ್ಟಸವಾದ ನೆಲ, ಅಲ್ಲಲ್ಲಿ ಮೇಲೆದ್ದ ಕಪ್ಪನೆಯ ಮುರಕಲ್ಲಿನ (ಜಂಬಿಟ್ಟಿಗೆ) ಆಕಾರಗಳು, ಅಲ್ಲೊಂದು ಇಲ್ಲೊಂದು ದೊಡ್ಡ ರ, ಕೆಲವು ಕುರುಚಲು ಗಿಡಗಳು, ಬುಕ್ಕಿ, ಕಿಸ್ಕಾರ ಗಿಡಗಳು, ಮುಳ್ಳುಬಳ್ಳಿಗಳು. ಕೆಲವೇ ಹೆಜ್ಜೆಗಳ ಹಿಂದೆ ಇದ್ದ ದಟ್ಟಕಾಡಿಗೂ, ಈ ಮಟ್ಟಸ ಮೇಲ್ಮೈಯ ಗುಡ್ಡಕ್ಕೂ ಅಥಾರ್ಥಸಂಬಂಧವಿಲ್ಲ ದಂತಹ ನೋಟ!
ಇದೇ ಹರನಗುಡ್ಡೆ. ಕುರುಚಲು ಗಿಡ, ಕಲ್ಲುಗಳು, ಮುಳ್ಳುಗಳೇ ತುಂಬಿರುವ ‘ಹರನ ಗುಡ್ಡೆ’ಯ ಹೆಸರಿನಲ್ಲಿರುವ ‘ಹರ’ ಶಬ್ದಕ್ಕೂ, ಈಶ್ವರನಿಗೂ ಸಂಬಂಧವಿಲ್ಲ. ನಮ್ಮೂರಿನ ಭಾಷೆ ಯಲ್ಲಿ ‘ಹರ’ ಎಂದರೆ ಕಡಿದಾದ ಗುಡ್ಡ ಎಂಬರ್ಥ. ಹರನ ಗುಡ್ಡೆಯ ಪಕ್ಕದಲ್ಲಿರುವುದೇ ಚೇರ್ಕಿ ಹರ, ಅದರಾಚೆ ಇರುವುದೇ ಬಳ್ಳಿ ಹರ.ಇವೆಲ್ಲಾ ಸ್ಥಳನಾಮಗಳಲ್ಲಿ ‘ಹರ’ ಎಂದು ಗುಡ್ಡ ಎಂಬರ್ಥ ಸ್ಪಷ್ಟ. ಅಂದಹಾಗೆ ಕನ್ನಡದ ‘ಅರ’ ಕಲ್ಲು) ಎಮಬ ಪದಕ್ಕೂ ‘ಹರ’ ಎಂಬ ಪದಕ್ಕೂ ತುಸು ಸಾಮ್ಯತೆ ಇದ್ದರೂ, ಅರ್ಥವ್ಯತ್ಯಾಸವಿದೆ. ಹರ ಎಂಬ ಪದವನ್ನು ಗುಡ್ಡ ಎಂಬರ್ಥದಲ್ಲಿ ಕಂಡರೆ, ‘ಹರನಗುಡ್ಡೆ’ ಎಂಬುದು ಒಂದು ದ್ವಿರುಕ್ತಿ ಎನಿಸಲೂಬಹುದು.
ಹರನಗುಡ್ಡೆಯು ಹಲವು ಕೌತುಕಗಳ ಆಗರ! ಮೊದಲನೆಯ ಕೌತುಕ ಎಂದರೆ ಆ ಗುಡ್ಡೆ ಟೊಳ್ಳು ಎಂಬ ವಿಚಾರ. ಎತ್ತರವಾದ ಪ್ರದೇಶದಲ್ಲಿ ಸಪಾಟಾಗಿ ಎರಡು ಕಿಮೀ ದೂರದ ತನಕ ಹರಡಿರುವ ಆ ಗುಡ್ಡದ ಮೇಲೆ ನಡೆಯುವಾಗ, ಪ್ರತಿ ಹೆಜ್ಜೆ ಹಾಕಿದಾಗಲೂ ಒಂದು ರೀತಿಯ ಸದ್ದು ಮೂಡುತ್ತದೆ! ಇಡೀ ಹರನಗುಡ್ಡೆ ಟೊಳ್ಳಾಗಿದೆ ಎಂದು ನಮ್ಮೂರಿನವರು ಹೇಳುವುದುಂಟು. ಗುಡ್ಡದ ಒಳಗೆ ಚಿನ್ನ ತುಂಬಿದ ಕೊಪ್ಪರಿಗೆ ಇದೆ ಎಂಬ ನಂಬಿಕೆಯೂ ಇದೆ! ಅದೇನೇ ಇದ್ದರೂ, ಆಗುಡ್ಡದ ಮೇಲೆ ಸಾಗುವ ದಾರಿಯಲ್ಲಿ ಓಡಾಡಿದಾಗ, ಪ್ರತಿ ಹೆಜ್ಜೆ ಎತ್ತಿ ಹಾಕಿದಾಗಲೂ ‘ಧನ್ ಧನ್’ ಎಂದು ಸದ್ದಾಗುವುದಂತೂ ನಿಜ – ಟೊಳ್ಳಾದ ಕಲ್ಲಿನ ಮೇಲೆ ನಡೆದಾಗ ಆಗುವ ಸದ್ದಿನಂತೆ.
ಆ ಸಪಾಟಾದ ಗುಡ್ಡದ ಅರ್ಧಕ್ಕರ್ಧ ಪ್ರದೇಶವು ಮುರಕಲ್ಲಿನ ಒಂದು ಮೈದಾನ. ಅದರ ಮೇಲೆ ಸಾಗುವ ನಾಲ್ಕಾರು ದಾರಿಗಳಿಂದ ಇದು ಸ್ಪಷ್ಟವಾಗುತ್ತದೆ. ಕಲ್ಲಿನ ಮೇಲ್ಮೈ ಮೇಲೆ ಸಾಗಿದ ದಾರಿಯ ಮೇಲೆ ಜನರು ನಿರಂತರವಾಗಿ ನಡೆದದ ದ್ದರಿಂದ ದಾರಿಯು ಬಿಳಿ ಬಣ್ಣ ಪಡೆದಿದ್ದರೆ, ಕಲ್ಲಿನಭಾಗವು ಪಾಚಿಗಟ್ಟಿ ಕಪ್ಪಾಗಿದೆ.ಆ ಗುಡ್ಡವನ್ನು ಕಲ್ಲು ಆವರಿಸಿದ್ದರಿಂದಲೇ, ಒಳ ಭಾಗ ಟೊಳ್ಳಾಗಿರಬಹುದು. ಮುರಕಲ್ಲು ಅಥವಾ ಜಂಬಿಟ್ಟಿಗೆ ಇರುವ ಪ್ರದೇಶಗಳಲ್ಲಿ ಟೊಳ್ಳು ಗುಹೆಗಳು ರೂಪು ಗೊಳ್ಳುವುದು ಕಮಲಶಿಲೆ ಮೊದಲಾದ ಬೇರೆ ಬೇರೆ ಕಡೆಗಳಲ್ಲಿ ಕಂಡುಬಂದಿದೆ.
ಹರನಗುಡ್ಡೆಯ ಸಪಾಟು ಮೇಲ್ಮೈ, ಅದರ ಅರ್ಧಕ್ಕರ್ಧ ಭಾಗವನ್ನು ಆವರಿಸಿರುವ ಮುರಕಲ್ಲಿನ ಹಾಸು, ನಡೆಯುವಾಗ ಆಗುವ ಧನ್ ಧನ್ ಸದ್ದು, ಇವೆಲ್ಲವು ಗಳಿಗಿಂತಲೂ, ಹೆಚ್ಚು ವಿಸ್ಮಯಕಾರಿ ವಿಚಾರ ಒಂದಿದೆ. ಅದೆಂದರೆ, ಆ ಇಡೀ ಗುಡ್ಡವು ಕಾಲದಿಂದ ಕಾಲಕ್ಕೆ ತಳೆಯುವ ವಿಭಿನ್ನ ಬಣ್ಣಗಳು! ಎರಡು ಕಿಮೀ ವಿಸ್ತೀರ್ಣದ ಬಯಲೊಂದು ಋತುಮಾನಕ್ಕನುಸಾರವಾಗಿ ವಿಭಿನ್ನ ಬಣ್ಣವನ್ನು ಹೊದ್ದು ಕೂರುವ ಪರಿಯೇ ಒಂದು ಪ್ರಾಕೃತಿಕ ವಿಸ್ಮಯವಲ್ಲವೆ!
ಹರನಗುಡ್ಡವು ತನ್ನ ಇಡೀ ಮೈಯನ್ನು ಹಸಿರಿನಿಂದ ತುಂಬಿಕೊಳ್ಳುವ ಕಾಲವೆಂದರೆ, ಆಷಾಢ ಕಳೆದು ಶ್ರಾವಣದ ದಿನಗಳಲ್ಲಿ. ಜೂನ್ ದ ಆರಂಭವಾಗಿ ಒಂದೆರಡು ತಿಂಗಳು ಎಡೆಬಿಡದೆ ಸುರಿದ ಮಳೆ ತುಸು ಬಿಡುವು ಕೊಟ್ಟಾಗ, ಇಡೀ ಹರನಗುಡ್ಡದ ತುಂಬಾ ಹುಲ್ಲು ಬೀಜಗಳು ಮೊಳಕೆಯಡೆದು, ನಾಲ್ಕಾರು ಇಂಚು ಚಿಗುರಿ ಬೆಳೆದು, ಇಡೀ ಗುಡ್ಡವನ್ನು ಹಸಿರಿನ ಸಿರಿಯಿಂದ ತುಂಬಿಬಿಡುತ್ತವೆ. ನೂರೈವತ್ತು ಮೆಟ್ಟಿಲು ಹತ್ತಿ, ಸಣ್ಣ ಕಾಡು ದಾಟಿ, ಹರನಗುಡ್ಡೆಗೆ ಬಂದಾಗ ಇದಿರಾಗುವ ವಿಶಾಲ ಹಸಿರು ಹುಲ್ಲು ಹಾಸು ಒಂದು ಅಪೂರ್ವ ದೃಶ್ಯವೈಭವ. ಆ ವಿಶಾಲ ಹಸಿರು ಪ್ರದೇಶದಲ್ಲಿ, ನಡುನಡುವೆ ಅಲ್ಲಲ್ಲಿ ಕೆಲವು ಮರಗಳು, ಎದ್ದು ನಿಂತ ಕಲ್ಲು ಗಳು, ಸಣ್ಣ ಪುಟ್ಟ ಕೊಳಗಳು – ಇಂತಹ ಅಲಂಕಾರದ ಜತೆ ಆ ಬೃಹತ್ ಹಸಿರು ಹಾಸಿನ ನೋಟ ಬಹು ಮೋಹಕ.
ವಿಶಾಲ ಪ್ರದೇಶದಲ್ಲಿ ಬೆಳೆದ ಹಸಿರು ಹುಲ್ಲನ್ನು ಮೇಯಲು, ನಮ್ಮೂರಿನ ಹತ್ತೈವತ್ತು ಹಸು, ಕರು, ಎತ್ತುಗಳು ಹರನಗುಡ್ಡೆಗೆ ಪಾದ ಬೆಳೆಸುತ್ತವೆ. ಮಳೆಯುಹೊಳವಾದ ದಿನಗಳಲ್ಲಿ, ಹುಲ್ಲು ಮೇಯುವ ಜಾನುವಾರುಗಳಿಗೆ ಆಶ್ರಯ ನೀಡುವ ಆ ವಿಶಾಲ ಹುಲ್ಲುಗಾವಲಿನ ನೋಟ ಅದ್ಭುತ! ಮಳೆ ಕಡಿಮೆಯಾಗಿ, ದೀಪಾವಳಿ ಕಳೆದಂತೆ, ಹರನಗುಡ್ಡದ ಬಣ್ಣವು ಪಡೆಯುವ ಸ್ವರೂಪವೇ ವಿಭಿನ್ನ. ಮಳೆಗಾಲದಲ್ಲಿ ಹಸಿರಾಗಿ ಇಡೀ ಡ್ಡವನ್ನೇ ಆವರಿಸಿದ್ದ ಹುಲ್ಲು, ಈಗ ಸುಮಾರುಒಂದಡಿ ಎತ್ತರ ಬೆಳೆದಿದ್ದು, ಹಸಿರು ಮಾಗಿ ಬೂದು ಬಣ್ಣಕ್ಕೆ ತಿರುಗುವ ಪರಿ ಅನನ್ಯ. ಪ್ರತಿ ಹುಲ್ಲುಗಿಡದ ತುದಿಯಲ್ಲೂ, ಹುಲ್ಲುಬೀಜ ತುಂಬಿದ ಕದಿರು, ಅವುಗಳ ನಸುಗೆಂಪು ಬಣ್ಣ ಎಲ್ಲವೂ ಸೇರಿ ಇಡೀ ಗುಡ್ಡಕ್ಕೆ ಬೂದುಮಿಶ್ರಿತ ಹಸಿರಿನ ಹಚ್ಚಡ ಹೊದಿಕೆ ಹಾಸಿದ ನೋಟ.
ಡಿಸೆಂಬರ್ ಬಂದಂತೆಲ್ಲಾ ಹರನಗುಡ್ಡಯು ಬೇರೊಂದೇ ಬಣ್ಣವನ್ನು ಪಡೆಯುತ್ತದೆ! ಇಂಚೂ ಬಿಡದಂತೆ ಬೆಳೆದಿರುವ ಹುಲ್ಲು ಮಾಗುತ್ತಾ ಬಂದು, ಹೊಳೆವ ಮಾಸಲು ಬಿಳಿ ಬಣ್ಣ ಪಡೆದಾಗ, ಇಡೀ ಹರನಗುಡ್ಡೆಯು ಬೆಳ್ಳಿಯ ವರ್ಣದಿಂದ ಹೊಳೆಯತೊಡಗುತ್ತದೆ! ಚಳಿಗಾಲದ ಬೆಳಗಿನ ಬಿಸಿಲಿನಲ್ಲಿ ಗಾಳಿಗೆ ತೊನೆ ದಾಡುವ ಹುಲ್ಲುಗಿಡಗಳು, ಇಡೀ ಗುಡ್ಡಕ್ಕೆ ಒಂದು ಚಲನಶೀಲ ನೋಟವನ್ನು ಒದಗಿಸುವ ರೀತಿ ವಿಸ್ಮಯಕಾರಿ. ಈ ಶ್ರಾಯದಲ್ಲಿ, ಇಡೀ ಗುಡ್ಡದ ಮೇಲೆ ಬೆಳೆದ ಹುಲ್ಲನ್ನು ‘ಕರಡ’ ಎಂದು ಕರೆಯುತ್ತಾರೆ.
ಒಂದರಿಂದ ಎರಡು ಅಡಿ ಎತ್ತರದ ಕರಡದ ಹುಲ್ಲು ಬಹೂಪಯೋಗಿ. ದನಕರುಗಳು ಸಂತಸದಿಂದ ಕರಡವನ್ನು ತಿನ್ನುವುದು ಒಂದೆಡೆಯಾದರೆ, ಊರಿನ ಮಹಿಳೆಯರು ಕರಡವನ್ನು ಕಿತ್ತು, ಸಣ್ಣ ಸಣ್ಣ ಕಟ್ಟುಗಳನ್ನಾಗಿ ಮಾಡಿ, ಮನೆಗೆ ಸಾಗಿಸಿ ಸಂಗ್ರಹಿಸುತ್ತಾರೆ. ಅದನ್ನು ಒಣಗಿಸಿಟ್ಟರೆ, ಬಹುಮಟ್ಟಿಗೆ ಬತ್ತದ ಹುಲ್ಲಿನ ರೀತಿಯೇ ಉಪಯೋಗಿಸಬಹುದು. ಕರಡವನ್ನು ಕತ್ತರಿಸಿ ಅಕ್ಕಚ್ಚು ಮಾಡಿ, ದನಕರುಗಳಿಗೆ ತಿನ್ನಿಸಬಹುದು. ಕರಡವನ್ನು ಓರಣವಾಗಿ ಗುಡಿಸಲಿನ ಮೇಲೆ ಹರವಿ,ಮಾಡನ್ನು ಭದ್ರಪಡಿಸಬಹುದು, ಗಂಟಿ ಕಾಲಡಿ ಹರವಿ, ಗೊಬ್ಬರವನ್ನೂ ಮಾಡಬಹುದು!
ಡಿಸೆಂಬರ್ – ಜನವರಿ ಸಮಯದಲ್ಲಿ ಪ್ರತಿದಿನವೂ ಹರನಗುಡ್ಡೆಗೆ ಹೋಗಿ, ಕರಡವನ್ನು ತರುವುದೇ ಹಲವು ಜನರ ಪ್ರಮುಖ ಕೆಲಸ. ಇನ್ನೇನು ಫೆಬ್ರವರಿ ಬಂತೆಂದರೆ, ಶಿವರಾತ್ರಿಯ ಕಾಲ. ಹರನಗುಡ್ಡೆಯ ಕರಡ ಒಣಗಲು ಆರಂಭ. ಒಂದೆರಡು ಅಡಿ ಎತ್ತರದ ಆ ಕರಡವು ಒಣಗಿದಾಗ ‘ಕಾಡಿನ ಬೆಂಕಿ’ಗೆ ಆಹ್ವಾನ ವಿತ್ತಂತೆ. ಹರನಗುಡ್ಡದ ಅಂಚಿನಲ್ಲಿರುವ ಯಾವುದೋ ಮನೆಯಿಂದ ಹಾರಿದ ಕಿಡಿಯೊಂದ ಕರಡಕ್ಕೆ ತಗುಲಿದರೆ, ನಿಧಾನವಾಗಿ ಇಡೀ ಗುಡ್ಡಕ್ಕೆ ಬೆಂಕಿ ಹರಡುತ್ತದೆ. ಮಾರ್ಚ್ – ಎಪ್ರಿಲ್‌ನಲ್ಲಿ ಕರಡಕ್ಕೆ ಬೆಂಕಿ ಬೀಳುವುದು ಅಥವಾ ಯಾರಾದರೂ ಬೀಡಿ ಸೇದಿ ಎಸೆದ ಕಡ್ಡಿಯಿಂದ ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯ. ಆ ತಿಂಗಳುಗಳಲ್ಲಿ ಅಲ್ಲಲ್ಲಿ ಹರನಗುಡ್ಡೆಯ ಕರಡವು ಸುಟ್ಟು ಕರಕಲಾಗುತ್ತಾ ಹೋಗುತ್ತದೆ.
ಕ್ರಮೇಣ ಇಡೀ ಗುಡ್ಡದ ಮೇಲೆನ ಕರಡ ಬೂದಿಯಾಗುತ್ತದೆ. ಈಗ ಹರನಗುಡ್ಡೆಗೆ ಬೇರೊಂದೇ ಬಣ್ಣ! ಹುಲ್ಲು ಸುಟ್ಟ ಕರಕಲು ಕರಿಯ ಬಣ್ಣದಿಂದ ತುಂಬಿದ, ಅಲ್ಲಲ್ಲಿ ಬೂದಿ ಹರಡಿದ ಹರನಗುಡ್ಡೆಯು ನೋಡಲು ಅಷ್ಟೇನೂ ಚಂದ ಕಾಣದಿರಬಹುದು. ಆದರೆ, ಕರಡ ಸುಟ್ಟ ನಂತರ ತಯಾರಾಗುವ ಬೂದಿಯು, ಮುಂದಿನ ವರ್ಷಅಲ್ಲಿ ಬೆಳೆಯುವ ಹುಲ್ಲಿಗೆ ಒಳ್ಳೆಯ ಗೊಬ್ಬರ ಎನ್ನುತ್ತಾರೆ ನಮ್ಮ ಹಳ್ಳಿಯ ಕೃಷಿಕರು. ಮಳೆಗಾಲ ಆರಂಭವಾದ ನಂತರ ಪುನಃ ಅಲ್ಲಿ ಹಸಿರು ಹುಲ್ಲು ಬೆಳೆಯುವು ದರಿಂದ, ಹಸುಕರುಗಳನ್ನು ಮೇಯಿಸಲು ಅನುಕೂಲ ಎಂಬ ಇರಾದೆ ಅವರದು.
ಬೇಸಗೆ ಕಳೆದು ಮತ್ತೆ ಮಳೆಯಾಗುತ್ತದೆ; ಪುನಃ ಇಡೀ ಗುಡ್ಡವು ಹಸಿರಿನಿಂದ ತುಂಬುತ್ತದೆ; ಮತ್ತೊಮ್ಮೆ ಹುಲ್ಲಿನ ಬೀಜಗಳು ಮೊಳೆತು, ಹರನಗುಡ್ಡೆಯ ತುಂಬಾ ಕರಡದ ಹೊದಿಕೆಯನ್ನು ಹರಡುತ್ತವೆ! ಈ ನಿಸರ್ಗದ ಸರಪಣಿ ನಿಜಕ್ಕೂ ಅದೆಂತಹ ಚೋದ್ಯ! ಅಲ್ಲವೆ? (ಕರಡ=ಬೆಳೆದ ಹುಲ್ಲು, ಬ್ಯಾಣ = ಬಯಲು ಪ್ರದೇಶ, ಶ್ರಾಯ = ಕಾಲ)