ದಿ ಅನ್‌ಟೋಲ್ಡ್ ಸ್ಟೋರಿ ಅಟ್‌ ಎವೆರೆಸ್ಟ್‌
ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
Mehandale100@.
ಪೋರ್ಟರ್ ಒಬ್ಬಾತ ತನಗಿಂತ ಹೆಚ್ಚಿನ ಭಾರ ಹೊತ್ತು ಬೆಟ್ಟವೇರುತ್ತಲೇ ಬದುಕು ಕಳೆದು ಬಿಡುತ್ತಾನಲ್ಲ, ಆದರೂ ಜುಗುಪ್ಸೆ ಇರುವುದಿಲ್ಲ, ಭಾರ ಇಳುಕಿದ ಭಾವವಿರುವುದಿಲ್ಲ. ಬದುಕು ಸ್ವೀಕರಿಸಿ ಕಾಲೂರುವ ಛಲದಲ್ಲಿ ಮರುದಿನ ಮತ್ತೆ ಉತ್ಸಾಹ ತುಂಬಿತ್ತಾನೆ.
ಅಲೆಮಾರಿತನದ ಜತೆಗೆ ಜಗತ್ತು ಸವಿಯುವ ಹತ್ತು ಹಲವು ದೃಶ್ಯಗಳಿಗೆ ಕಣ್ಣಾಗುವ ಅಪರೂಪದ ಮನಸ್ಥಿತಿಯೂ ನಿಮಗಿದ್ದರೆ ಮಾತ್ರ ನೀವು ಅಪ್ಪಟ ಅಲೆಮಾರಿ ಗಳಾಗಲು ಸಾಧ್ಯ. ಹೆಚ್ಚಿನ ಚಾರಣ ಮತ್ತು ಅಲೆಮಾರಿತನದ ಪ್ರವಾಸದಲ್ಲಿ ಇರುವ ವ್ಯತ್ಯಾಸ ಎಂದರೆ ಚಾರಣದ ದಾರಿ ಮತ್ತು ಗಮ್ಯವೇ ಬೇರೆ. ಅಲೆಮಾರಿತನಪ್ರವಾಸಗಳು ಆಫ್ ಬೀಟ್ ದಾರಿಯ ದೃಶ್ಯ ಮತ್ತು ಪರಿಸ್ಥಿತಿಗಳ ಸಂಗಮಗಳು ಜೀವಾಳ. ನಾನು ಕೈಲಾಸ ಪರ್ವತ ಚಾರಣದಲ್ಲಿದ್ದಾಗ ಜತೆಗಿದ್ದ ರವೀಂದ್ರ ಭಾಯಿ ಎಂಬ ಹುಡುಗ ಯಾವಾಗಲೂ ಪರ್ವತದ ನೆತ್ತಿಗೆ ಕಾಲೂರಿದಾಗೆಲ್ಲ ಮತ್ತು ಹೊಸ ಚಾರಣದ ಪಾದಕ್ಕೆ ಕಾಲಿಡುವಾಗಲೆಲ್ಲ ನೆನಪಾಗುತ್ತಾನೆ.
ಕಾರಣ ಇವರಿಗೆ ನಮ್ಮಂತೆ ತಿರುಗುವ ಉಮೇದಿಯೂ, ಪರ್ವತ ಹತ್ತಿ ನಿಂತು ಈಗ ಹೆಂಗೆ ಎನ್ನುವ ಒಳಗೊ ಳಗಿನ ಹಮ್ಮು ಬಿಮ್ಮುಗಳೂ ಇರುವುದೇ ಇಲ್ಲ. ಏನಿದ್ದರೂ ಹೊರುವುದು ಮತ್ತು ಹತ್ತುವುದು ಎರಡೇ ಕೆಲಸ. ಹೆಚ್ಚಿನ ಇಂಥಾ ಪ್ರಯಾಸದ ಮತ್ತು ಪರ್ವತ ಯಾತ್ರೆಗಳಲ್ಲಿ ಅತಿ ಹೆಚ್ಚಿನ ಶ್ರಮ ಮತ್ತು ಶ್ರೇಯ ಸಲ್ಲಬೇಕಾ ಗಿದ್ದುದು ಹೆಣಭಾರದ ಸಾಮಾನು ಹೊರುವ ಕೂಲಿಗಳಿಗೆ. ಇವರನ್ನು ಪೋರ್ಟರ್ ಎನ್ನುತ್ತಾರೆ. ಇವರ ಜತೆ ಒಮ್ಮೆ ನಿಮ್ಮ ಪಯಣ ಆರಂಭವಾದರೆ ಮುಂದಿನ ಎಂಟೋ ಹತ್ತೋ ದಿನಗಳೆಲ್ಲ ನಿಮ್ಮ ನೆರಳಿನಂತೆ.
ಇನ್ನು ಕೆಲವರಿರುತ್ತಾರೆ ನಿಮಗಿಂತ ಮೊದಲು ಒಯ್ದು ನಿಮ್ಮ ಸಾಮಾನು ಸರಂಜಾಮನ್ನು ಸರಿಯಾಗಿ ನಿಮ್ಮ ಶಿಬಿರಕ್ಕೆ ಇಳಿಸಿ ನಾಪತ್ತೆಯಾಗಿ ಬಿಟ್ಟಿರುತ್ತಾರೆ. ಮತ್ತೆ ಬರುವುದು ಮರುದಿನ ನೀವು ಎದ್ದು ‘ಆಹ್ ವಾಟ್ ಅ ಮಾರ್ನಿಂಗ್’ ಎಂದು ಕ್ಯಾಮೆರ ತೆಗೆಯುವ ಉಮೇದಿಗೂ ಮೊದಲೇ. ಅಲ್ಲೆಲ್ಲೋ ಇರುವ ದುನಿಗೆ ಕೈ ಕಾಯಿಸುತ್ತ ಕೂತಿದ್ದು, ಕಂಡ ತಕ್ಷಣ ‘ನಮಸ್ತೆ ಸರ್ ಜೀ’ ಎನ್ನುತ್ತ ಎದುರು ಗೊಳ್ಳುತ್ತಾನೆ. ಮತ್ತೆ ನಮ್ಮ ನಮ್ಮ ಸಂಚಾರ ಸಾಮಾನು ಸರಂಜಾಮು ಸುಗಮ ಯಾತ್ರೆ ಶುರು.
ಆದರೆ ಯಾವೊಬ್ಬ ಯಾತ್ರಿ ಅಥವಾ ಪರ್ವತಾರೋಹಿ ಹೆಚ್ಚಾಗಿ ಈ ಪೋರ್ಟರ್‌ಗಳ ಜೀವನ ಅಥವ ಬದುಕಿನ ಬಗ್ಗೆ ತಲೆ ಕೆಡಿಸಿಕೊಂಡದ್ದು ವಿಚಾರಿಸಿಕೊಂಡಿದ್ದು ಕಮ್ಮಿ. ನಾನು ಕೈಲಾಸ ಪರ್ವತ ಚಾರಣದಲ್ಲಿದ್ದಾಗ, ನನಗೆ ದುಡ್ಡೂ ಕಡಿಮೆ ಇದ್ದಿದ್ದಕ್ಕೆ ಯಾವುದೇ ಕುದುರೆ ಮತ್ತು ಪೋರ್ಟರ್ ಏನೂ ತೆಗೆದುಕೊಳ್ಳದೆ, ನಾನೇ ನನ್ನ ಬ್ಯಾಗೇಜು ಹೊತ್ತುಕೊಂಡು ನಡೆದೇ ಹೋಗುತ್ತಿದ್ದೆ. ಅರ್ಧ ದಾರಿ ಕ್ರಮಿಸಿದಾಗ ಸಿಕ್ಕುವ ‘ಓಂ ಪರ್ವತ’ದ ಬಳಿ ಆಗಲೇ ಒಂದು ಸುತ್ತು ಮೇಲಕ್ಕೆ-ರ್ಟಿಂಗ್ಮಾಡಿ ವಾಪಸು ಬರುತ್ತಿದ್ದ ಹುಡುಗ ರವೀಂದ್ರ ಸಿಕ್ಕಿದ್ದ. ಅನಿರೀಕ್ಷಿತವಾಗಿ ನಾಭಿಡಾಂಗ್ ಪ್ರದೇಶದ ಟೀ ಅಂಗಡಿಯಲ್ಲಿ ಕೂತಿದ್ದಾಗ, ‘ಸರ್ ಮುಂದೆ ಹೋದಂತೆ ನಿಮಗೆ ಕಷ್ಟವಾಗುತ್ತದೆ. ದುಡ್ಡಿನ ವ್ಯವಹಾರವಿಲ್ಲ. ಏನು ಕೊಡುತ್ತಿರೊ ಕೊಡಿ. ನನ್ನನ್ನು ಜೊತೆಗಿರಿಸಿಕೊಳ್ಳಿ’ ಎಂದಿದ್ದ.
ಆಗಲೇ ನಾನು ಅಲ್ಲಿ ಕೂತು ಅರ್ಧ ಗಂಟೆ ಕಳೆದಿದ್ದೆ. ಸರಿ ಸುಮಾರು ಹದಿನೈದು ಸಾವಿರ ಅಡಿ ಎತ್ತರದ ಓಂ ಪರ್ವತದ ಮತ್ತು ಆಮ್ಲಜನಕದ ಕೊರತೆ ಉಸಿರು ನೆತ್ತಿಗೆ ಹತ್ತಿಸುತ್ತಿತ್ತು. ಹೌದೆನ್ನಿಸಿತು. ಅವನನ್ನು ನೋಡಿದೆ. ಏನೆಂದರೆ ಏನೂ ಇರಲಿಲ್ಲ ಕೈಯ್ಯಲ್ಲಿ. ಒಂದು ಕೆಂಪು ಸ್ವೇಟರ್ ಬಿಟ್ಟರೆ. ಆದರೆ ಅತೀವ ಆಪ್ತನಾದ. ಆಗೀಗ ನನ್ನ ಹುಡುಗಾಟಕ್ಕೆ ಕುದುರೆ ಕೊಡಿಸುತ್ತಿದ್ದ. ಪ್ರತೀ ಕ್ಯಾಂಪಿನಲ್ಲೂ ಕುದುರೆ ವಿಹಾರಕ್ಕೆ ಪೋರ್ಟಿಂಗ್ ಕುದುರೆಯನ್ನೆ ಕೊಟ್ಟು ಹೋಗುತ್ತಿದ್ದ. ಅದರೆ ಸಂಜೆಯಾಗುತ್ತಿದ್ದರೆ ನಾಪತ್ತೆ. ನಿಜಕ್ಕೂ ಉತ್ತಮ ಕಂಪೆನಿ ಅವನು.
ಲಿಪುಲೇಕ್ ಪಾಸ್‌ಗೂ ಮೊದಲೇ ನನ್ನ ಮುಖ ಮೂಗು ಒಡೆದು ರಕ್ತ ಸೋರುತ್ತಿದ್ದವು. ಆಗೆಲ್ಲ ತುಂಬ ಮುತುವರ್ಜಿ ವಹಿಸಿ, ‘ಬಾಂದ್ ಲೀಜಿಯೇ ಕುಚ ನಹೀ ಹೋಗಾ..’ ಎನ್ನುತ್ತ ಹೊರ ವಾತಾವರಣಕ್ಕೆ ಮುಖ ಎಕ್ಸ್‌ಪೊಸ್ ಆಗದಂತೆ ಹೇಳುತ್ತ, ನನ್ನ ಚಹದ ಚಟಕ್ಕಾಗಿ ಹುಡುಕಿ ಹುಡುಕಿ, ದಾಲ್ಚಿನಿ ಹಾಕಿದ ಚಹ ಮಾಡಿಸಿ ಕೊಡಿಸುತ್ತ, ಕೆಲವೆಡೆ ‘ಇಲ್ಲಿ ಫೋಟೊ ಸಖತ್ ಬರುತ್ತೆ ನೋಡಿ’ ಎನ್ನುತ್ತ ನಿಲ್ಲಿಸಿಕೊಂಡು ಹೇಳಿದಂತೆ ಕ್ಲಿಕ್ಕಿಸುತ್ತ, ಕರೆದೊಯ್ಯುತ್ತಿದ್ದ. ಎಲ್ಲಿ ಮಲಗುತ್ತಿದ್ದನೋ, ಎಲ್ಲಿಉಣ್ಣುತ್ತಿದ್ದನೋ, ಏನು ಕತೆಯೋ ಪೂರ್ತಿ ಪಯಣದ ಕೊನೆಯವರೆಗೂ ಇದ್ದವನು, ನಾವು ಹಿಂದಿರುಗುವಾಗ, ಕೈಲಾಸ ಪರ್ವತದ ಸ್ವರ್ಗದ ದಾರಿ ಎಂದೇ ಕರೆಸಿಕೊಳ್ಳುವ ಶಿಯಾಲೇಕ್ ಕ್ಯಾಂಪು ತಲುಪುತ್ತಿದ್ದಂತೆ, ‘ನಾನು ಮತ್ತೆ ವಾಪಸು ಹೋಗಬೇಕು, ನೀವು ಇನ್ನು ಆರಾಮಾಗಿ ಹೋಗಬಹುದು, ಇಲ್ಲಿಂದ ಕೆಳಗೆ ನಡೆಯುತ್ತ ಹೋಗುವುದು ಮಾತ್ರ’ ಎನ್ನುತ್ತಾ ಟೀ ಶಾಪಿನಲ್ಲಿ ಎಂದಿನಂತೆ ದಾಲ್ಚಿನಿ ಟೀ ಕುಡಿಸಿ ಯಾವ ಲೆಕ್ಕಚಾರವೂ ಮಾಡದೆ, ಕೊಟ್ಟ ನೋಟಿನ ಪುಟಿಕೆ ಜೋಬಿಗೆ ಹಾಕಿಕೊಂಡಿದ್ದ.
ಹೋಗುವಾಗಲೂ ಅದೇ ಕೆಂಪು ಸ್ವೇಟರ್‌ನಲ್ಲಿ ಕೂತಿದ್ದವನಿಗೆ, ನನ್ನ ಒಂದು ಬ್ಯಾಕ್ ಪ್ಯಾಕ್‌ನಲ್ಲಿ ಒಂದು ಜರ್ಕಿನ್, ಒಂದಷ್ಟು ಹ್ಯಾಂಡ್ ಗ್ಲೋವ್ಸ್, ತಂಪು ಕನ್ನಡಕ, ಚಾಕೋಲೆಟ್ಸ್ ಇತ್ಯಾದಿ ಹಾಕಿಕೊಟ್ಟಿದ್ದೆ. ‘ಇನ್ನು ಮೇಲೆ ಇದನ್ನು ಇಟ್ಟುಕೊಂಡೆ ಕೆಲಸ ಮಾಡಬಹುದು, ನನಗಿನ್ನು ಜರ್ಕಿನ್ ಅಗತ್ಯವಿಲ್ಲ.’ ಎಂದಿದ್ದೆ. ಕಾರಣ ಇವತ್ತಿನ ದಿನದ ಕೆಳಗಿಳಿಯುವಿಕೆ, ನಂತರದಲ್ಲಿ ಚಳಿ ತಡೆಯುವುದು ನನಗೆ ದೊಡ್ಡ ವಿಷಯವಾಗಿರಲಿಲ್ಲ. ಮೇಲ್ಭಾಗದ ಮೈನಸ್ ತಾಪಮಾನದಲ್ಲಿ ದೇಹ ಆಗಲೇಸಾಕಷ್ಟು ಆಕ್ಲಮಟೈಸ್ ಆಗಿತ್ತು. ಆವತ್ತಿನ ನಂತರ ಹಲವು ಫೋರ್ಟರ್ ನನ್ನ ಸಂಪರ್ಕಕ್ಕೆ ಬಂದಿದ್ದರೂ ಈ ರವಿ, ಕುಠಿಗೆ ಹೋಗುವಾಗ ಸಿಕ್ಕ ತೋಪರ್, ಕಾಶ್ಮೀರದ ಜಾವೇದ್, ಅಮೃತಸರದ ಈಗಲೂ ಸಂಪರ್ಕದಲ್ಲಿರುವ ರಮಣ ಕುಮಾರ್, ವಾರಾಣಸಿಯ ಕೇವಲ್ಚಂದ್, ಗುಜರಾತ್‌ನ ಕಿಶೋರ್ ಮತ್ತು ನಂದು ಭಾಯಿ ಹೀಗೆ ಹಲವರು ಆಯಾ ಪ್ರದೇಶದಲ್ಲಿ ಸಂಪರ್ಕ ಮತ್ತು ಆತ್ಮೀಯತೆ ಉಳಿಸಿಕೊಂಡವರು.
ಇವೆಲ್ಲಕ್ಕಿಂತ ಭಿನ್ನವಾಗಿ ನಿಮಗೂ ಹಿಡಿಸಬಹುದಾದ, ಈ ಕೆಲಸವನ್ನೂ ಕ್ರಿಯೇಟಿವ್ ಆಗಿ ಜಗತ್ತಿಗೆ ಪ್ರಸೆಂಟ್ ಮಾಡಿಕೊಂಡ ಪೋರ್ಟರ್ ಒಬ್ಬಾತ ಇದ್ದಾನೆ. ಗೂಗಲ್ ಮಾಡಿದರೆ ನಿಮಗೆ ‘ದಿ ಅನ್ ಟೊಲ್ಡ್ ಸ್ಟೊರಿ ಅಟ್ ಎವೆರೆಸ್ಟ್’ ಎಂಬ ಲಿಂಕ್ ಸಿಗುತ್ತದೆ. ಪೋರ್ಟರ್ ಜೀವನದ ಕತೆಯನ್ನು ಪರಿಚಯಿಸಿದ್ದು೨೮-೩೦ಹರೆಯದ ಪೊರ್ಟರ್ ನೆಥಾನಿಲ್ ಮೆನಿಂಗಾರ್ ಎಂಬಾತ. ಅಮೆರಿಕದವ, ಪೋರ್ಟರ್ ಆಗಲು ಕಾರಣ ಹಿಮಾಲಯ ಹತ್ತುವ ಹುಕಿ. ಆದರೆ ದುಡ್ಡಿರಲಿಲ್ಲ. ಅದಕ್ಕಾಗಿಮೊದಲು ನೇಪಾಳಿಯಾದ. ಆಮೇಲೆ ಪೊರ್ಟರ್ ಆಗಿ ಎತ್ತರದ ಮಟ್ಟಕ್ಕೆ ಬೇಕಾದ ದೈಹಿಕ ಕ್ಷಮತೆ ಕಾಯ್ದುಕೊಳ್ಳುವ ಎಲ್ಲ ತಂತ್ರಗಾರಿಕೆ ಕಲಿಯುತ್ತಾನೆ.
ಆತ್ಮವಿಶ್ವಾದ ಹಂತ ದಾಟಿದಾಗ ಪೊರ್ಟರ್ ಆಗಿ ಸಾಮಾನು ಹೊತ್ತು ಹಿಮಾಲಯ ಹತ್ತಿ ಬರುತ್ತಾನೆ. ಸ್ಥಳೀಯನಲ್ಲದೇಯೂ ಹಿಮಾಲಯ ಮಣಿಸಿದ ಮೊಟ್ಟ ಮೊದಲ ಪೊರ್ಟರ್ ನೆಥಾನಿಯಲ್ ಮಾಡಿದ ಇನ್ನೊಂದು ದಾಖಲೆ ಎಂದರೆ ಪೈಸೆ ಖರ್ಚಿಲ್ಲದೆ ಹಿಮಾಲಯ ಏರಿದ್ದು. ಹೇಗೆಂದರೆ ಇವನು ಕೇವಲ ಒಬ್ಬನಲ್ಲ ಇಬ್ಬರು ಅಮೆರಿಕನ್ ಪರ್ವತಾರೋಹಿಗಳಿಗೆ ಪೊರ್ಟರ್ ಆಗಿ ಒಬ್ಬನೇ ಸರಿ ಸುಮಾರು 90 ಕೆ.ಜಿ. ಭಾರ ಹೊತ್ತು ಎವೆರೆಸ್ಟ್ ಹತ್ತಿ ಕೂತಿದ್ದ, ಆದರೆ ಸ್ವತಃ ಎಪ್ಪತ್ತು ಕೆ.ಜಿ. ತೂಕ ದಾಟದ ನೆಥಾನಿಯಲ್ ಇಳಿದು ಬರುವಾಗ ಇದರೊಂದಿಗೆ ಪೋರ್ಟ ರ್ ಒಬ್ಬಾತನ ದುಕಿನ ಚಿತ್ರ ತೋರಿಸುವ ಸಂಪೂರ್ಣ ಚಿತ್ರಣವನ್ನೂ ರೀಕಾರ್ಡ್ ಮಾಡುತ್ತ ತೆಗೆದುಕೊಂಡು ಬರು ತ್ತಾನೆ.
ಅವನದೇ ಅನಿಸಿಕೆಯಂತೆ ‘ನಾವು ನೋಡುವ ಪರ್ವ ತಕ್ಕೂ, ನೀವು ನೋಡುವ ಪರ್ವತಕ್ಕೂ ವ್ಯತ್ಯಾಸವಿದೆ. ನಾವು ಬಗ್ಗಿಕೊಂಡೆ ನೋಡುತ್ತೇವೆ, ನೀವು ತಲೆ ತಗ್ಗಿಸದೆ ನೋಡುತ್ತೀರಿ. ಎರಡೂ ವಿಭಿನ್ನ ದೃಶ್ಯ ಕಾವ್ಯಗಳು..’ ಎನ್ನು ವಾಗ ಎಲ್ಲೂ ದನಿಯಲ್ಲಿ ಕೂಲಿಯಾದ ಬಗ್ಗೆ ಕಹಿ ಕಾಣುವು ದಿಲ್ಲ ಮತ್ತು ಪರ್ವತಾರೋಹಿಗಳ ಬಗ್ಗೆ ಅಸಡ್ಡೆಯೂ ಇಲ್ಲ. ಆದರೆ ಕೇಳುವ ಮನಸ್ಸು ಚುಳ್ಳೆನ್ನದಿದ್ದರೆ ಮಾನವೀಯತೆ ಬಗ್ಗೆ ಪ್ರಶ್ನೆ ಹುಟ್ಟುತ್ತದೆ.
ಅವನ ಜಾಗಕ್ಕೆ ಕಾಲಿಟ್ಟಾಗ ಮಾತ್ರ ವಿಭಿನ್ನ ಪರ್ವತ ಕಾಣುತ್ತದೆ. ಕಾರಣ ಪೋರ್ಟರ್ ಒಬ್ಬಾತ ಜೀವನ ಪೂರ್ತಿ ತನಗಿಂತ ಹೆಚ್ಚಿನ ಭಾರ ಹೊತ್ತು ಬೆಟ್ಟವೇರು ತ್ತಲೇ ಬದುಕು ಕಳೆದು ಬಿಡುತ್ತಾನಲ್ಲ, ಆದರೂ ಆಯಾಸದ ನಂತರವೂ ಮುಖದಲ್ಲಿ ಜುಗುಪ್ಸೆ ಇರುವುದಿಲ್ಲ, ಭಾರ ಇಳುಕಿದ ಭಾವವಿರುವುದಿಲ್ಲ. ಬದುಕು ಸ್ವೀಕರಿಸಿ ಕಾಲೂರುವ ಛಲದಲ್ಲಿ ಮರುದಿನ ಮತ್ತೆ ನಮ್ಮಲ್ಲೂ ಉತ್ಸಾಹ ತುಂಬಿಯೇ ಹೊರಡುತ್ತಾರೆ. ಬಹುಶಃ ಅಲೆಮಾರಿತನದ ಆಚೆಗೂ ಪ್ರತಿ ಹೆಜ್ಜೆಯಲ್ಲೂ ಒಂದು ಹೊಸ ವಿಶ್ವ ನೋಡುವ ಕಲೆಯ ಜಗತ್ತನ್ನು ಚಾರಣಿಗರಿಗೆ ತೋರುವ ನೆಥಾನಿಯಲ್ ತನ್ನ ಆಸೆ ಪೂರೈಸಿಕೊಳ್ಳಲು ಅನಿವಾರ್ಯವಾಗಿ ಪರ್ವತಾ ರೋಹಿಯಾದ ಕತೆ ಅರಹುತ್ತಾನೆ.
ಇವತ್ತಿಗೂ ಹೆಚ್ಚಿನ ಎತ್ತರ ಏರದಿದ್ದರೂ ಮೈ ಬೆವರು ಚೆಲ್ಲಿ ಬಸವಳಿದು ನಿಂತು ಹಸಿವಿಗೆ ಕಟ್ಟಿಕೊಂಡ ಊಟ ಕೈ ಗೆತ್ತಿಕೊಳ್ಳುವಾಗ, ನಮ್ಮಿಂದ ದೂರದ ಮೂಲೆಯಲ್ಲಿ ನಿಂತು ತಲೆ ಬಗ್ಗಿಸಿ ಗಬಗಬನೆ ರೊಟ್ಟಿ ತುಂಡು ತಿಂದು, ನಮಗಿಂತಲೂ ಮೊದಲು ತಯಾರಾಗಿ ನಿಲ್ಲಬೇಕೆನ್ನುವ ಧಾವಂತದಲ್ಲಿರುತ್ತಿದ್ದ ರವಿಭಾಯಿ, ಕಿಶೋರ್, ಕೇವಲ್ಚಂದ್ ಇತ್ಯಾದಿ ಯಾಕೋ ವಿನಾಕಾರಣ ನೆನಪಾಗುತ್ತಾರೆ. ಮನಸ್ಸು ಒಮ್ಮೊಮ್ಮೆ ಸಣ್ಣಗೆ ಮುದುಡುತ್ತದೆ. ಅಲೆಮಾರಿತನ ಕೇವಲ ದೇಶ ತೋರಿಸುವುದಿಲ್ಲ. ಮನಸ್ಸು ತೆರೆದಿಟ್ಟು ನೋಡುವುದಾದರೆ ಮನುಷ್ಯನನ್ನೂ ತೋರಿಸುತ್ತದೆ. ದಟ್ ಇಸ್ ಬ್ಯೂಟಿ ಆಫ್ ಬ್ಯಾಕ್‌ಪ್ಯಾಕರ‍್.