ಸುಶಾಸನ ದಿನ: ಆಚರಣೆಗೋ, ಅನುಸರಣೆಗೋ ?
ತನ್ನಿಮಿತ್ತ
ಡಾ.ಬಸವರಾಜು ಆರ್‌.ಶ್ರೇಷ್ಠ
ಅಟಲ್‌ಜಿ ದೂರದರ್ಶಿ ರಾಜತಾಂತ್ರಿಕ ಕ್ರಮಗಳು ಇಂದಿನವರೆಗೂ ಸುಶಾಸನಕ್ಕೆ ಬುನಾದಿ ಹಾಕಿಕೊಟ್ಟಿತು. ಸುಶಾಸನ ಅವಲೋಕಿಸಲು, ಅರ್ಥೈಸಿಕೊಳ್ಳಲು ಮತ್ತು ಅನುಷ್ಠಾನ ಕ್ರಮಗಳನ್ನು ರೂಪಿಸಲು ಅಟಲ್‌ಜಿ ಜನುಮ ದಿನಕ್ಕಿಂತ ಸುದಿನ ಬೇರೆ ಇರಲಿಕ್ಕೆ ಸಾಧ್ಯವೇ?
2014ರಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಡಿಸೆಂಬರ್ 25ನ್ನು ‘ಸುಶಾಸನ ದಿನ’ವನ್ನಾಗಿ ಆಚರಿಸಬೇಕೆಂದು ಸಂಕಲ್ಪ ತೊಟ್ಟಾಗ ದಿನಂಪ್ರತಿ ಒಂದಿಲ್ಲೊಂದು ಆಚರಣೆ, ಹಬ್ಬ-ಹರಿದಿನ ಇರುವ ನಮ್ಮ ದೇಶಕ್ಕೆ ಇನ್ನೊಂದು ಆಚರಣಾ ದಿನವಿರಲಿ ಎನ್ನುವ ಉದ್ದೇಶ ಇರಲಿಕ್ಕೆ ಖಂಡಿತಾ ಸಾಧ್ಯವಿಲ್ಲ.
‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಪ್ರಧಾನಿಗಳ ಘೋಷ ಮಂತ್ರವಾಗಿತ್ತು. ‘ಸಬ್ ಕಾ ಸಾಥ್ ವಿಕಾಸ್‘ ಆಗಬೇಕಾದರೆ ಗರಿಷ್ಠ ಆಡಳಿತ ಅನಿವಾರ್ಯ. ಶಾಸನಗಳ ರಚನೆಗೆ ಶಾಸಕಾಂಗ, ನ್ಯಾಯದಾನ ಮತ್ತು ವ್ಯಾಖ್ಯಾನಕ್ಕಾಗಿ ನ್ಯಾಯಾಂಗ, ಶಾಸನದ ಅನುಷ್ಠಾನಕ್ಕೆ ನೇಮಿತ ಆಡಳಿತಗಾರರು ಮತ್ತು ಚುನಾಯಿತರಾಜಕೀಯ ಪ್ರತಿನಿಧಿಗಳು ನಮ್ಮ ಆಡಳಿತ ವ್ಯವಸ್ಥೆಯ ಅಂಗಗಳು. ಈ ಮೂರರಲ್ಲಿ ಕಾರ್ಯಾಂಗ ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತಿ ಮುಖ್ಯ ಎನ್ನುವುದಕ್ಕೆ ಇತಿಹಾಸ ನಮಗೆ ಪುರಾವೆ.
ಯಾವ ಯಾವ ಸಂದರ್ಭದಲ್ಲಿ ಕಾರ್ಯಂಗ ಬಹುಜನರ ಹಿತ ಕಾಯುವ ಜವಬ್ದಾರಿ ನಿಭಾಯಿಸುವಲ್ಲಿ ಸೋತಿ ದೆಯೋ, ಆಗೆಲ್ಲ ನಾಗರಿಕತೆಯ ಮತ್ತು ವ್ಯವಸ್ಥೆಯ ಅವಸಾನವಾಗಿರುವುದನ್ನು ನಾವು ಅನುಭವಿಸಿದ್ದೇವೆ. ಸುಶಾಸನವನ್ನು ಸಾಧ್ಯವಾಗಿಸಲು ಆಡಳಿತ ಯಂತ್ರದ ಬಗ್ಗೆ ಆಗಿಂದಾಗ್ಗೆ ಗಮನಹರಿಸುವುದು ಅತ್ಯವಶ್ಯ.ಅಭಿವೃದ್ಧಿ ಕಾರ್ಯಗಳು ಸಮರ್ಥವಾಗಿ ನಡೆಯದಿದ್ದ ಸಂದರ್ಭದಲ್ಲಿ ನಾವು ರಾಜಕೀಯ ಅಥವಾ ಸರಕಾರದ ಹಿತಾಸಕ್ತಿಯ ಕೊರತೆ ಎಂದು ಸುಲಭವಾಗಿ ಹೇಳಿಬಿಡುತ್ತೇವೆ. ಸಮರ್ಥ ಕಾರ್ಯಾಂಗವಿಲ್ಲದಿದ್ದರೆ ಶಾಸಕಾಂಗ ಒಂಟೆತ್ತಿನ ಗಾಡಿಯಂತೆ. ಸಾಕಷ್ಟು ಸಂದರ್ಭದಲ್ಲಿ ಆಡಳಿತ ಯಂತ್ರಕ್ಕೆ ಸುಶಾಸನದ ತೈಲ ಎರೆದಿದ್ದರೆ ಅದರ ಚಕ್ರಗಳು ವಕ್ರವಾಗಿ ಸುತ್ತಲು ಶುರುವಿಡುತ್ತದೆ.  ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ಅಸಮರ್ಪಕತೆ, ಕೊರತೆ ಮತ್ತು ಸಂಕೀರ್ಣತೆಗಳ ಅವಲೋಕನಕ್ಕಾಗಿ, ಸುಶಾಸನದ ಅನುಸರಣೆಗಾಗಿ ಆಡಳಿತದ ಉತ್ತಮ ಮಾದರಿ ಗಳು, ನೀತಿಗಳು, ಅನುಷ್ಠಾನ ಸೂತ್ರಗಳು ಮತ್ತು ಪ್ರಕ್ರಿಯೆಗಳ ಚಿಂತನ-ಮಂಥನಕ್ಕಾದರೂ ಈ ದಿನ ವೇದಿಕೆ ಯಾದರೆ ಆಳುವ ಸರಕಾರಗಳ ಸಾಕ್ಷಿಪ್ರಜ್ಞೆ ಕೊಂಚ ಜಾಗೃತಾವಸ್ಥೆಗೆ ಬರಲು ಸಾಧ್ಯ.
ಸರಕಾರ – ಆಡಳಿತ:ಸರಕಾರ ಅಥವಾ ಆಡಳಿತ ಹೊಸ ಪರಿಕಲ್ಪನೆಯೇನೂ ಅಲ್ಲ, ಸದು ನಾಗರಿಕತೆಯಷ್ಟೆ ಹಳೆಯದು. ಸರಕಾರ ಪ್ರಜಾತಂತ್ರ ಅಥವಾ ಇನ್ಯಾವುದೇ ಪ್ರಕ್ರಿಯೆ ಮೂಲಕ ಜಾರಿಗೆ ಬಂದ ಆಡಳಿತ ನಡೆಸುವ ವ್ಯವಸ್ಥೆ. ಸರಕಾರ ವಿವಿಧ ಸ್ಥರ ಮತ್ತು ಪ್ರಕಾರಗಳಲ್ಲಿ ಇರುವುದನ್ನು ನಾವು ಕಾಣಬಹುದು. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಸರಕಾರಗಳು ಚಾಲ್ತಿಯಲ್ಲಿವೆ.
‘ಸರಕಾರ ಮತ್ತು ಆಡಳಿತ ಒಂದು ಜವಾಬ್ದಾರಿ. ಅದನ್ನು ಸಂಪೂರ್ಣ ಸದ್ಭಾವನೆಯಿಂದ ನೆರವೇರಿಸಬೇಕು’ ಎಂದು ಚಾಣಕ್ಯ ಬಹಳ ಗಮ್ಯವಾಗಿ ವ್ಯಾಖ್ಯಾನಿಸಿ ದ್ದಾರೆ. ದೇಶದ ನಿರ್ವಹಣೆ, ಅಭಿವೃದ್ಧಿ, ಔನ್ನತ್ಯಕ್ಕಾಗಿ ಸರ್ಕಾರ ರಚಿಸುವ ಶಾಸನಗಳು ನೀತಿಗಳು ಮತ್ತು ಅದರ ಅನುಷ್ಠಾನಕ್ಕಾಗಿ ಕೈಗೊಳ್ಳುವ ಕ್ರಮ ನಿರ್ಧಾರ ಗಳ ಪ್ರಕ್ರಿಯೆ ಹಾಗೂ ವ್ಯವಸ್ಥೆಗೆ ಆಡಳಿತ ಎಂದು ವ್ಯಾಖ್ಯಾನಿಸಬಹುದು. ಆದರೆ ಆಡಳಿತದ ದುರುಪಯೋಗ ಅಥವಾ ದುರಾಡಳಿತವೂ ಕೇವಲ ಇಂದಿನ ಸಮಸ್ಯೆಯಲ್ಲ.
2400ವರ್ಷಗಳ ಹಿಂದೆಯೇ ಚಾಣಕ್ಯ ಈ ಮಾತನ್ನು ಹೇಳಿರುವುದು ಅದಕ್ಕೆ ಪುರಾವೆ. ‘ನಾವೆಷ್ಟೇ ಕಾಯಿದೆ, ಕಾನೂನು, ನಿಯಮಗಳು ಅಥವಾ ಲೆಕ್ಕ ಪರಿಶೋಧನಾ ವ್ಯವಸ್ಥೆ ಜಾರಿಗೆ ತಂದರೂ ಆಡಳಿತಗಾರನ ಅನೈತಿಕ ವರ್ತನೆಯನ್ನು ತಡೆಯಲು ಸಾಧ್ಯವಿಲ್ಲ. ವ್ಯಕ್ತಿತ್ವ ನಿರ್ಮಾಣ ಮತ್ತು ಅನುಷ್ಠಾನ ಸಾಧ್ಯ. ನೈತಿಕ ಮೌಲ್ಯಗಳ ಬುನಾದಿಕರಣ ಮಾತ್ರ ಮಾಶಾಸನಕ್ಕೆ ಸೋಪಾನ’. ಉತ್ತಮ ಆಡಳಿತ ವ್ಯವಸ್ಥೆ ಸಾಧಿಸಲು ಆಡಳಿತಗಾರರಲ್ಲಿ ನೈತಿಕತೆ ಅತಿಮುಖ್ಯ. ಕೌಟಿಲ್ಯ ಧರ್ಮ ಎನ್ನುವ ಪದ ಬಳಸುತ್ತಾರೆ. ಅಂದರೆ ಕರ್ತವ್ಯ ನಿರ್ವಹಿಸುವಲ್ಲಿ ಮತ್ತು ವೈಯುಕ್ತಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಆಡಳಿತಗಾರನ ಸದಾ ಚಾರಿಯಾಗಿರುವುದು ಅತಿಮುಖ್ಯ. ಕರ್ತವ್ಯ, ಸದಾಚಾರ, ಅಹಿಂಸೆ, ಸತ್ಯ, ಸದುದ್ದೇಶ, ಸಹಾನುಭೂತಿ ಮತ್ತು ಸಹಿಷ್ಣತೆ ಸುಶಾಸನ ಅನುಷ್ಠಾನಕ್ಕೆ ಅವಶ್ಯವಿರುವ ನೈತಿಕ ಮೌಲ್ಯಗಳು.
ಉತ್ತಮ ಆಡಳಿತ ವ್ಯವಸ್ಥೆ ನಿರ್ಮಿಸುವಲ್ಲಿ ಆಡಳಿತಗಾರರ ಪಾತ್ರ ಎಷ್ಟು ಪ್ರಮುಖ ಎಂಬುದನ್ನು ಬಾಬಾ ಸಾಹೇಬ ಅಂಬೇಡ್ಕರರ ಈ ಮಾತಿನಿಂದ ಅರ್ಥ ಮಾಡಿಕೊಳ್ಳಬಹುದು. ‘ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಅದನ್ನು ಜಾರಿಗೊಳಿಸುವವರು ಒಳ್ಳೆಯವರಲ್ಲದಿದ್ದರೆ ಅದು ಕೆಟ್ಟದ್ದೆಂದು ಸಾಬೀತಾಗುತ್ತದೆ.ಸಂವಿಧಾನವು ಎಷ್ಟೇ ಕೆಟ್ಟದಾದರೂ ಅದನ್ನು ಜಾರಿಗೊಳಿಸುವವರು ಒಳ್ಳೆಯವರಾಗದಿದ್ದರೆ ಅದು ಒಳ್ಳೆಯದೆಂದು ಸಾಬೀತಾಗುತ್ತದೆ’.
ಒಂದು ಜವಾಬ್ದಾರಿಯುತ ಸರಕಾರ ಉತ್ತಮ ಆಡಳಿತ ನೀಡಲು ಕೆಲವು ಗುಣಾತ್ಮಕ ಅಂಶಗಳನ್ನು ಪ್ರಜ್ಞಾ ಪೂರ್ವಕವಾಗಿ ಜಾರಿಗೆ ತರಬೇಕಾಗುತ್ತದೆ. ಆಡಳಿತ ದಲ್ಲಿ ಭಾಗವಹಿಸುವಿಕೆ-ಸಮತೆ-ಒಳಗೊಳ್ಳುವಿಕೆ. ಕಾನೂನು ಶಾಸನ, ಅಧಿಕಾರದ ವಿಕೇಂದ್ರೀಕರಣ, ಮುಕ್ತ ಸ್ವತಂತ್ರ ಮತ್ತು ಜವಾಬ್ದಾರಿಯುತ ಮಾಧ್ಯಮ ವ್ಯವಸ್ಥೆ, ಅಧಿಕೃತ (ಮೇಲಾಟ)ದ ನಿಯಂತ್ರಣ ಸುಶಾಸನ ಪ್ರಮುಖ ಲಕ್ಷಣಗಳು.
ವಾಜಪೇಯಿ ಮತ್ತು ಸುಶಾಸನ:ಅಟಲ್‌ಜಿ ಅವರ ದೂರದರ್ಶಿ ರಾಜತಾಂತ್ರಿಕ ಕ್ರಮಗಳು ಕೇವಲ ಅವರ ಕಾಲದಕಷ್ಟೇ ಅಲ್ಲದೆ ಇಂದಿನವರೆಗೂ ಸುಶಾಸನಕ್ಕೆ ಬುನಾದಿ ಮತ್ತು ಹಾದಿ ಹಾಕಿಕೊಟ್ಟಿತು ಎಂದರೆ ಅತಿಶಯೋಕ್ತಿಯಲ್ಲ. ದೇಶದ ಪ್ರತಿ ನಾಗರಿಕನಿಗೆ ಮಾಹಿತಿ ಹಕ್ಕನ್ನು ನೀಡಿ ನೈಜ ಸಬಲೀಕರಣಕ್ಕೆ ಬುನಾದಿ ಯಾದದ್ದು ವಾಜಪೇಯಿ ಸರಕಾರದ ಅವಧಿಯಲ್ಲಿ ಬಂದ ಮಾಹಿತಿ ಸ್ವಾತಂತ್ರ್ಯ ಕಾಯಿದೆ-2002. ಉತ್ತರದಾಯಿತ್ವ ಆಡಳಿತದ ಮೇರು ಲಕ್ಷಣ. ವಿತ್ತೀಯ ಶಿಸ್ತು ಮತ್ತು ವಿತ್ತೀಯ ಕೊರತೆಯ ಪ್ರಮಾಣವನ್ನು ಕಡಿಮೆಗೊಳಿಸಲು ವಾಜಪೇಯಿ ಸರ್ಕಾರ ‘ವಿತ್ತೀಯ ಜವಾಬ್ದಾರಿ ಮತ್ತು ಆಯವ್ಯ ನಿರ್ವಹಣಾ ಕಾಯಿದೆ’ ಯನ್ನು ಜಾರಿಗೆ ತಂದಿತು.
ರಸ್ತೆಗಳು ಕೇವಲ ಮೂಲಭೂತ ಸೌಕರ್ಯವಲ್ಲ ಬದಲಿಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪಥ ಎಂದು ಅವರು ‘ಸುವರ್ಣ ಚತುಷ್ಪಥ’ ಯೋಜನೆಯ ಮೂಲಕ ಸಾಧಿಸಿ ತೋರಿಸಿದರು. ಕೇವಲ 500 ಜನಸಂಖ್ಯೆ ಇರುವ (ಗುಡ್ಡಗಾಡು ಪ್ರದೇಶದಲ್ಲಿ 250) ಪುಟ್ಟ ಹಳ್ಳಿಗಳಿಗೂ ‘ಪ್ರಧಾನಮಂತ್ರಿ ಗ್ರಾಮ ಸಡಕ್’ ಯೋಜನೆಯ ಮೂಲಕ ಸಂಪರ್ಕ ಕಲ್ಪಿಸಿ ಗ್ರಾಮೀಣಾಭಿವೃದ್ಧಿಗೆ ರಹದಾರಿ ಕಲ್ಪಿಸಿದವರು ಅಟಲ್ ಜೀ. ಇನ್ನು ವಿಶ್ವದ ಪ್ರಭಾವಿ ರಾಷ್ಟ್ರಗಳ ವಿರೋಧಕ್ಕೆ ಮಣಿ ಯದೇ ಪೋಕ್ರಾನಿನಲ್ಲಿ ಅಣು ಪರೀಕ್ಷೆ ನಡೆಸಿದ ಅವರ ದಿಟ್ಟತನ ಭಾರತದ ಪ್ರತಿ ನಾಗರಿಕನ ಸ್ವಾಭಿಮಾನದ ಆಚರಣೆ.
‘ಮಕ್ಕಳು ಶಾಲೆಯತ್ತ ತೆರಳಲಾಗದೆ ಇದ್ದರೆ ಶಾಲೆಯೇ ಮಕ್ಕಳ ಬಳಿ ತೆರಳಬೇಕು’ ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯನ್ನು ಸಾಧಿಸಿದ್ದು ಅಟಲ್ ಜಿ ಸರಕಾರ ತಂದ ಸರ್ವಶಿಕ್ಷಣ ಅಭಿಯಾನ. ಸುಶಾಸನವನ್ನು ಅವಲೋಕಿಸಲು, ಅರ್ಥೈಸಿಕೊಳ್ಳಲು ಮತ್ತು ಅನುಷ್ಠಾನ ಕ್ರಮಗಳನ್ನು ರೂಪಿಸಲು ಅಟಲ್ ಜಿಅವರ ಜನುಮ ದಿನಕ್ಕಿಂತ ಸುದಿನ ಬೇರೆ ಇರಲಿಕ್ಕೆ ಸಾಧ್ಯವೇ? ‘ಸುಶಾಸನ ಸರಕಾರಗಳ ಮತ್ತು ಸಮುದಾಯದ ಜವಾಬ್ದಾರಿ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ನರೇಂದ್ರ ಮೋದಿ ಅವರು ಹೇಳಿದಂತೆ ಸುಶಾನ ಸಾಧ್ಯವಾಗುವುದು ಪ್ರತಿ ನಾಗರಿಕನೂ ತನ್ನ ಹಕ್ಕುಗಳಿಗಿಂತ ಮಿಗಿಲಾಗಿ ಜವಾಬ್ದಾರಿಗಳನ್ನು ನಿಭಾಯಿಸಲು ಹೆಮ್ಮೆಯ ಭಾರತೀಯನಾದಾಗ. ಸುಶಾಸನ ದಿನದ ಶುಭಾಶಯಗಳು.
(ಲೇಖಕರು ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿಮೋಮೆಂಟ್‌ನ ಕಾರ್ಯನಿರ್ವಾಹಕ ನಿರ್ದೇಶಕರು)