ಕಾಯಿದೆ ಬೇಕಿರುವುದು ಸಮಾಜಕ್ಕೆ; ಪುಢಾರಿಗಳಿಗಲ್ಲ !
ಹಂಪಿ ಎಕ್ಸ್‌’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@.
ಅಷ್ಟೊಂದು ಭಯವಿದ್ದರೆ ವಿಧಾನಸಭೆ ಮತ್ತು ಪರಿಷತ್ತು ಜತೆಗೆ ಕೆಲ ಪ್ರಾಮಾಣಿಕೆ ಪಾದ್ರಿಗಳನ್ನೊಳಗೊಂಡ ಸಮಿತಿ ರಚಿಸಿ ಮತಾಂತರದ ಬಗ್ಗೆ ಒಂದುಪಾರದರ್ಶಕ ತನಿಖೆ ಮಾಡಿ ವರದಿಯೊಪ್ಪಿಸಲಿ. ರಾಜ್ಯದಲ್ಲಿ ಮತಾಂತರವೇ ನಡೆದಿಲ್ಲ ಮತ್ತು ನಡೆಯುತ್ತಿಲ್ಲವೆಂದು ಸಾಬೀತುಪಡಿಸಲಿ.
ಎಲ್‌ಎಲ್‌ಬಿ ಮಾಡಿಕೊಂಡು ಸಂವಿಧಾನವನ್ನು ಒಂದಷ್ಟರ ಮಟ್ಟಿಗೆ ಅರ್ಥೈಸಿಕೊಂಡು ಎಲ್ಲ ಜಾತಿ ಧರ್ಮದವರ ಮನೆಬಾಗಿಲಿಗೆ ಎಡತಾಕಿ, ಕೈಮುಗಿದು,ಕಾಲುಹಿಡಿದು ಮತ ಭಿಕ್ಷೆ ಗಳಿಸಿ ಶಾಸನಬದ್ಧ ಪ್ರಮಾಣವಚನ ಸ್ವೀಕರಿಸಿ ವಿಧಾನಸಭೆಯಲ್ಲಿ ದಡ್ಡರಂತೆ ವರ್ತಿಸುವುದಿದೆಯಲ್ಲ, ಆಗಲೇ ಇವರುಗಳ ಪ್ರಭಾವಳಿ ಯಂತಿರುವ ಪ್ರಜಾಪ್ರಭುತ್ವದ ‘ಸಂವಿಧಾನ ಸಮಾನತೆ’ ಎಂಬುದು ಸತ್ತುಬಿದ್ದಿರುತ್ತದೆ.
ಇಂಥವರ ಬಾಯಲ್ಲಿ ಸಂವಿಧಾನದ ಪರ ಹೇಳಿಕೆಗಳನ್ನು ಕೇಳುತ್ತಿದ್ದರೆ ನಿಜಕ್ಕೂ ಹೇಸಿಗೆಯಾಗುತ್ತದೆ. ಶಾಸ ಕಾಂಗದಲ್ಲಿ ಒಂದು ಕಾಯಿದೆ ಮಂಡನೆಯಾಗುತ್ತದೆ ಎಂದರೆ ಅದು ಒಂದಿಬ್ಬರ ಸ್ವಾರ್ಥಕ್ಕೆ ಏಕಾಏಕಿ ದಿಢೀರ್ ಸೃಷ್ಟಿಯಾಗುವುದಲ್ಲ. ಒಂದು ಹೊಸ ಅಥವಾ ಪರಿಷ್ಕೃತ ಕಾಯಿದೆ ಜಾರಿ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ ಎಂದರೆ ಅದರ ಹಿಂದಿನ ಆಗುಹೋಗುಗಳು, ಸಮಾಜದಲ್ಲಿ ಆಗಬಹುದಾದ, ಆಗಿರಬಹುದಾದ ದುಷ್ಪರಿಣಾಮಗಳು, ಸಂವಿಧಾನದ ಆಶಯ ಎಲ್ಲವನ್ನೂ ಗಮನಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಅರ್ಥ ಕಳೆದುಕೊಂಡಿರುವ ‘ಜಾತ್ಯಾತೀತ’ ಎಂಬ ಎಡಬಿಡಂಗಿಗಳ ಪದ ಪ್ರಯೋಗದಲ್ಲಿ ಸಮಾನತೆ ಸರ್ವನಾಶವಾಗಿದೆ.
ಇಂಥ ಸನ್ನಿವೇಶದಲ್ಲಿ ಜಾತಿ, ವರ್ಗ, ಧರ್ಮದ ಮೇಲೆ ಆಗುತ್ತಿರುವ ಪರೋಕ್ಷ ಆಕ್ರಮಣವನ್ನು, ಅನೈತಿಕತೆ ಅಕ್ರಮಗಳನ್ನು ಸಹಜ ಕಾನೂನುಗಳಿಂದ ತಡೆಯಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ರಾಮಬಾಣವಾಗಬಲ್ಲ ‘ಕಾಯಿದೆ’ ಯೊಂದನ್ನು ಜಾರಿಗೆ ತರಲೇಬೇಕಾದ ಸಂದರ್ಭ ಕೂಡಿಬಂದಿದೆ. ಇದು ಇವತ್ತಿನ ಆಧಾರದಲ್ಲಿಅನಿವಾರ್ಯವೆನಿಸಿದ್ದಲ್ಲ. ಅನೇಕ ಕಾಲದಿಂದ ನಿರಂತರ ಕಾಡುತ್ತ ಬಂದಿರುವ ಸಮಸ್ಯೆಗಳನ್ನು ಈಗಾದರೂ ತಡೆದು ಸರಿಪಡಿಸಲೋಸಗ ಆಗಬೇಕಿರುವುದು. ಇಂಥ ಅನಿವಾರ್ಯ ಪಕ್ಷಗಳ ಮತ್ತು ನಾಯಕರ ಅಜೆಂಡಾ ಗಳನ್ನು ಮೀರಿದ್ದಾಗಿರುತ್ತದೆ.
ದಶಕಗಳಿಂದ ಬಾಧಿಸಿದ ಸಾಮಾಜಿಕ ಪಿಡುಗನ್ನು ಮಟ್ಟಹಾಕಲು, ಆ ಮೂಲಕ ಸಂವಿಧಾನದ ಆಶೋತ್ತರಗಳನ್ನು ರಕ್ಷಿಸಲು, ಸಮಾನತೆ ಕಾಪಾಡಲು ಕಾಲ ಕಾಲಕ್ಕೆ ಕಾಯಿದೆಗಳ ಅಸ್ತ್ರವನ್ನೇ ಪ್ರಯೋಗಿಸಬೇಕಾಗುತ್ತದೆ. ಬೇಲಿ ಹಾಕುತ್ತಿರಲೇ ಬೇಕಾಗುತ್ತದೆ. ಇದು ಎಲ್ಲ ಪಕ್ಷಗಳ ಅನಿವಾರ್ಯ. ಕಾಯಿದೆ ಜಾರಿ ಎಂಬುದು ಸಾಧಕಬಾಧಕಗಳನ್ನು ಪರಮಾರ್ಶಿಸಿ ಅದರ ಅನುಷ್ಠಾನಕ್ಕೆ ಸಹಕರಿಸಬೇಕಾದ ಸಂವಿಧಾನಾತ್ಮಕ ಹೊಣೆಗಾರಿಕೆ ಪ್ರತಿಪಕ್ಷ ಸೇರಿದಂತೆ ಪ್ರತೀ ಪಕ್ಷಗಳಿಗೂ ಇರುತ್ತದೆ. ಅದನ್ನು ಬಿಟ್ಟು ವಿಧೇಯಕ ಮಂಡನೆಗೇ ಬಿಡುವುದಿಲ್ಲ, ಜಾರಿಗೆ ತರಲು ಕೊಡುವುದಿಲ್ಲ ಎಂದು ನಾಟಕ ಮಾಡುವುದು ಅವಿವೇಕತನ ವಾಗುತ್ತದೆ.
ಪ್ರತಿಪಕ್ಷಗಳೆಂಬುದು ಪಾಕಿಸ್ತಾನ, ಚೀನಾ, ಬಾಂಗ್ಲಾದಿಂದ(!?) ಬಂದದ್ದೇನಲ್ಲ. ಪ್ರತಿಪಕ್ಷ ಗಳೂ ಇಲ್ಲಿನ ಬಹುಸಂಖ್ಯಾತ ಹಿಂದೂಗಳ ಮತಗಳನ್ನು ಪಡದೇ ಆಯ್ಕೆಯಾದವೇ. ಹಾಗಿದ್ದ ಮೇಲೆ ಕೇವಲ ಅಲ್ಪಸಂಖ್ಯಾತರ ನಕಲಿ ಓಲೈಕೆಗಳಿಗಾಗಿ ಇಂಥ ರಾಜಕಾರಣ ಏಕೆ? ಬೆಳಗಾವಿ ಅಧಿವೇಶನದಲ್ಲಿ ಅಂಗೀಕಾರವಾಗಿರುವ ಮತಾಂತರ ನಿಷೇಧ ವಿಧೇಯಕದ ಬಗೆಗಿನ ವಿರೋಧವೂ ಇಂಥದೇ ರಾಜಕೀಯ ಸೋಗಿನ ಭಾಗ. ಅಸಲಿಗೆ ಇಂಥದೊಂದು ಕಾಯಿದೆ ದೇಶಕ್ಕೆ ಸ್ವಾತಂತ್ರ ಬಂದಾಗಲೇ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರೆ ಇಂದು ಇಂಥ ದುರ್ಗತಿ ಬರುತ್ತಿರಲಿಲ್ಲ.
ನಮ್ಮಲ್ಲಿ ಸತ್ಯ ನ್ಯಾಯ ಸದಾಚಾರದಿಂದ ಬಾಳುವುದೇ ಧರ್ಮ. ಅನ್ಯಾಯ ಅನಾಚಾರದಿಂದ ಬದುಕುವುದೇ ಅಧರ್ಮ. ಇಂಥ ಅಧರ್ಮವನ್ನು ನಾಶ ಮಾಡಲು ಯುಗಯುಗದಲ್ಲೂ ಅವತರಿಸುವೆ ಎಂದು ಶ್ರೀಕೃಷ್ಣ ಸಾರಿದ್ದೇ ಪರಂತು, ಮೂರ್ತಿ ಆರಾಧಕರನ್ನು ಬಲಿಹಾಕಿ, ಕಾಫೀರರನ್ನು ಕೊಲ್ಲಿ, ಹಿಂಸೆ ಮೋಸದಿಂದ ಧರ್ಮ ಪರಿವರ್ತನೆ ಮಾಡಿ ಎಂದು ಎಲ್ಲಿಯೂ ಹೇಳಲಿಲ್ಲ. ಏಕೆಂದರೆ ಸನಾತನಯುಗ ಆರಂಭಗೊಂಡಾಗ ಇನ್ನೊಂದು ಧರ್ಮವೇ ಹುಟ್ಟಿರಲಿಲ್ಲ. ಅದನ್ನೇ ನಮ್ಮ ಸರ್ವೋಚ್ಚ ನ್ಯಾಯಾಲಯ ‘ಹಿಂದೂ ಎಂದರೆ ಒಂದು ಧರ್ಮವಲ್ಲ ಅದು ನಾಗರಿಕತೆಯ ಶೈಲಿ’ ಎಂದು ಹೇಳಿದ್ದು.
ಇಂಥ ಪುರಾತನ ಧರ್ಮವನ್ನು ನಾಶ ಮಾಡಲು ಭಾರತದೊಳಗೆ ಕಾಲಿಟ್ಟ ಇಸ್ಲಾಂ ದಾಳಿಕೋರರು (ಗುಲಾಮರಿಗೆ ರಾಜರು), ದೌರ್ಜನ್ಯದ ಮೂಲಕ ತಮ್ಮ ಧರ್ಮವನ್ನು ಸ್ಥಾಪಿಸಿದರು. ಇನ್ನು ವ್ಯಾಪಾರದ ಸೋಗಿನಲ್ಲಿ ಬಂದ ಆಂಗ್ಲರು ಇಲ್ಲಿನವರ ವಿರುದ್ಧ ಭಯ ಮತ್ತು ಸೌಕರ್ಯಗಳೆಂಬ ಅಸ ಬಳಸಿ ಕ್ರಿಶ್ಚಿಯನ್ ಧರ್ಮ ಸ್ಥಾಪಿಸಿ ಹೋದರು. ಇಂದು ಭಾರತದಲ್ಲಿರುವ ಕ್ರಿಶ್ಚಿಯನ್ ಸಂತತಿಯ ಪೂರ್ವಜರೆಲ್ಲರೂ ಇಂಗ್ಲೆಂಡಿನಿಂದಲೇ ಬಂದವರೇನಲ್ಲ. ಬಹು ಪಾಲು ಅಂದಿನ ಬಿಳಿಯರ ಬೆದರಿಕೆಗೆ ಮತಾಂತರಗೊಂಡವರೇ ಆಗಿರುವುದು ಇತಿಹಾಸದ ದೊಡ್ಡ ಸತ್ಯ.
ಹೀಗೆ ಸ್ವಾತಂತ್ರ್ಯದ ನಂತರವೂ ರಾಜಕೀಯ ಗುಲಾಮಗಿರಿಯಾಗಿಯೇ ಬಂದ ಮತಾಂತರ ಪಿಡುಗು ಇಂದು ಹತ್ತಾರು ರಾಜ್ಯಗಳಲ್ಲಿ ಹಿಂದೂ ಗಳನ್ನೇ ಅಲ್ಪ ಸಂಖ್ಯಾತರನ್ನಾಗಿಸಿವೆ. ಪಕ್ಕದ ಆಂಧ್ರದಲ್ಲಿ ಮುಖ್ಯಮಂತ್ರಿಯಾಗಿದ್ದವರು ತನ್ನ ಪಕ್ಷದ ನಾಯಕಿಯ ಗುಲಾಮಗಿರಿಗಾಗಿ ತನ್ನೊಂದಿಗೆ ಇಡೀ ರಾಜ್ಯವನ್ನು ಮತಾಂತರ ಗೊಳಿಸಲು ಯತ್ನಿಸಿದ್ದು ರಹಸ್ಯವೇನಲ್ಲ. ಈಗ ಆತನ ಮಗನೂ ಅದನ್ನೇ ಮುಂದುವರಿದ್ದಾನೆ. ಪರಿಣಾಮ ಅಲ್ಲಿ ನೂರಾರು ಹಿಂದೂ ದೇವತೆಗಳಮೂರ್ತಿಗಳು ಭಗ್ನಗೊಂಡು ದೇವಾಲಯಗಳಿಗೆ ಕಂಟಕ ಎದುರಾಗಿದೆ. ಸ್ವಾಮಿವಿವೇಕಾನಂದರು ಹೇಳಿದಂತೆ ‘ಒಬ್ಬ ಹಿಂದು ಮತಾಂತರಗೊಳ್ಳುವುದರಿಂದ ಒಬ್ಬ ಹಿಂದೂವಷ್ಟೇ ಕಡಿಮೆ ಯಾಗುವುದಲ್ಲ, ಜತೆಗೆ ಒಬ್ಬ ಶತ್ರುವೂ ಹೆಚ್ಚಾಗುತ್ತಾನೆ’ ಎಂಬತೆ ಹಿಂದೂಗಳು ಅಲ್ಪಸಂಖ್ಯಾತರಾದ ಕಡೆ ಆತನಿಗೆ ನರಕ ಕಟ್ಟಿಟ್ಟ ಬುತ್ತಿ.
ಈಗ ಪಾಕಿಸ್ತಾನ, ಬಾಂಗ್ಲದೇಶದಲ್ಲಿ ಆಗುತ್ತಿರುವುದು ಅದೇ. ಆದರೆ ಎಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿ ಆತ್ಮವಿಶ್ವಾಸದಿಂದಿರುತ್ತಾರೋ ಅಲ್ಲಿನ ಅಲ್ಪ ಸಂಖ್ಯಾತರು ಹೆಚ್ಚು ಸುರಕ್ಷಿತ ಮತ್ತು ಆದರಣೀರಾಗಿರುತ್ತಾರೆ. ಇದಕ್ಕೆ ನಮ್ಮ ವಿಜಯನಗರ ಸಾಮ್ರಾಜದ ಇತಿಹಾಸವೇ ಸಾಕ್ಷಿ. ಅದೃಷ್ಟವಶಾತ್ ನಮ್ಮ ದೇಶಕ್ಕೆ ನರೇಂದ್ರ ಮೋದಿಯವರಂಥ ಪ್ರಧಾನಿಯಿರುವುದರಿಂದ ಅನ್ಯ ದೇಶಗಳಲ್ಲಿರುವ ಹಿಂದೂಗಳು ಸ್ವಲ್ಪಮಟ್ಟಿಗೆ ಸುರಕ್ಷಿತವಾಗಿದ್ದಾರೆ. ಒಂದೊಮ್ಮೆ ನಮ್ಮಲ್ಲಿನ ಈ ಡೋಂಗಿ ಜಾತ್ಯತೀತವಾದಿಗಳೇನಾದರು ದೇಶದ ಚುಕ್ಕಾಣಿ ಹಿಡಿದಿದ್ದರೆ ಇಷ್ಟರಲ್ಲೇ ದೇಶೀಯ ಹಿಂದೂಗಳೇ ಅತಂತ್ರರಾಗುತ್ತಿದ್ದುದರಲ್ಲಿ ಸಂದೇಹವೇ ಇಲ್ಲ.
ಅಷ್ಟರ ಮಟ್ಟಿಗೆ ವೋಟ್ ಬ್ಯಾಂಕ್ ಓಲೈಕೆ ನಡೆಯುತ್ತಿದೆ. ಇಂಥವರ ಭಂಡ ಧೈರ್ಯವೇನೆಂದರೆ ಹಿಂದೂಗಳಲ್ಲಿ ತಮ್ಮ ಜಾತಿಬಾಂಧವರು, ಮತವನ್ನು ಮಾರಿಕೊಳ್ಳುವವರು ನಮ್ಮ ಕೈಬಿಡುವುದಿಲ್ಲ, ಇದರ ಜತೆಗೆ ಅಲ್ಪಸಂಖ್ಯಾತರನ್ನು ಓಲೈಸಿಕೊಂಡರಷ್ಟೇ ಸಾಕು ಗೆದ್ದು ಮತ್ತೇ ಅಧಿಕಾರಕ್ಕೇರಬಹುದು ಎಂಬದುರಾಲೋಚನೆ. ಈ ಕಾಯಿದೆ ಅಸಲಿಗೆ ಮತಾಂತರ ನಿಷೇಧ ಕಾಯಿದೆಯೇ. ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-೨೦೨೧’ಎಂದು ಕರೆಯಲಾಗುವ ಈ ಕಾಯಿದೆಯಲ್ಲಿ ಮತಾಂತರವನ್ನು ನಿಷೇಧಿಸಿಯೇ ಇಲ್ಲ.
ಆದರೆ ಮತಾಂತರ ಪ್ರಕ್ರಿಯೆಗೆ ಕಾನೂನುಬದ್ಧ ಮೂಗದಾರ ಹಾಕಲಾಗಿದೆ. ಆಮಿಷ, ಬೆದರಿಗೆ, ಮಾನಸಿಕ ಪರಿವರ್ತನೆಯಂಥ ಕುತಂತ್ರದ ಮತಾಂತರ ‘ಮಾಡುವುದನ್ನು’ ತಡೆಯುವುದಿದೆಯೇ ಹೊರತು ಮತಾಂತರ ‘ಆಗುವುದನ್ನು’ ತಡೆಯವಯದಿಲ್ಲ. ಮತಾಂತರಕ್ಕೆ ನೀತಿ ಮತ್ತು ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. ಹೀಗೆ ಮತಾಂತರ ‘ಮಾಡುವ’ ಚತ್ರಿಗಳಿಗೆ ಶಿಕ್ಷೆಯನ್ನು ಮತ್ತು ‘ಆಗುವುದಕ್ಕೆ’ ಕಾನೂನು ಬದ್ಧ ‘ಚತ್ರಿ’ಯನ್ನು ಸೂಚಿಸಲಾಗಿದೆ. ಆದರೆಪ್ರತಿಪಕ್ಷದ ಸಂವಿಧಾನ ನಿಪುಣರಿಗೆ ಇದರ ಅರಿವೇ ಇಲ್ಲವೇ? ಇದನ್ನು ಪರಾಮರ್ಶಿಸಿ ಕ್ರಿಶ್ಚಿಯನ್ ಪಾದ್ರಿಗಳನ್ನು ಕರೆದು ‘ನೋಡ್ರಯ್ಯ ನೀವುಗಳು ಮತಾಂತರ ಮಾಡದೇ ಇದ್ದ ಮೇಲೆ ನಿಮಗ್ಯಾಕೆ ಇದರ ಭಯ? ಮೋಸದಿಂದ, ಆಮಿಷವೊಡ್ಡಿ ಮತಾಂತರ ಮಾಡುವವರನ್ನು ಕಾನೂನು ನೋಡಿಕೊಳ್ಳುತ್ತದೆ.
ನಿಮಗ್ಯಾಕ್ರಯ್ಯ ಇದರ ಚಿಂತೆ? ನಡೀರಯ್ಯ, ಮೊದಲು ಮಿಷನರಿಗಳಿಗೆ ಹೋಗಿ ಬುದ್ಧಿಹೇಳಿ, ಈ ಕಾಯಿದೆ ನಮಗೂ ನಿಮಗಲ್ಲ ಕಣ್ರಯ್ಯ, ಇದು ರಾಜ್ಯದಬಹುಜನರಿಗೆ. ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳೂ ನೆಮ್ಮದಿಯಿಂದ ಬದುಕಬೇಕಲ್ವಾ? ಮತ್ತೆ ನಿಮ್ಮದೇನು ಮಧ್ಯದಲ್ಲಿ? ಮಾಡಬಾರದ್ದು ಮಾಡುವವರು ಅನುಭವಿಸುತ್ತಾರೆ. ನಿಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಏನಾದರು ಕಡಿಮೆಯಾದರೆ ಹೇಳಿ ನಾವಿದ್ದೇವೆ, ಆಯ್ತು ನಡೀರಪ್ಪಾ!’ ಎಂದು ತಿಳಿಹೇಳುವುದನ್ನು ಬಿಟ್ಟು ‘ಅಯ್ಯೋ ಈ ಸರಕಾರ ಕ್ರಿಶ್ಚಿಯನ್ನರ ವಿರುದ್ಧವಾಗಿದೆ, ಅಯ್ಯೋ ಈ ಕಾಯಿದೆ ಕ್ರಿಶ್ಚಿಯನ್ನರ ಮೇಲೆ ಆಕ್ರಮಣ ಮಾಡುತ್ತದೆ, ಅಯ್ಯೋ ಇದು ಮುಸ್ಲೀಮರಹಕ್ಕುಗಳನ್ನು ನಾಶ ಮಾಡುತ್ತದೆ’ ಎಂದು ಇಲ್ಲಸಲ್ಲದ ಪುಗಸಟ್ಟೆ ಹೇಳಿಕೆಗಳನ್ನು ನೀಡಿ ಬೇರೆ ಕೋಮಿನವರ ದಾರಿತಪ್ಪಿಸಿ ಅವರ ಅನುಕಂಪ ಗಿಟ್ಟಿಸಿ ಕೊಳ್ಳುತ್ತಿರುವುದು ಪ್ರಜ್ಞಾವಂತರಿಗೆ ನರಿಗಳಂತೆ ಕಾಣುತ್ತಿದೆ.
ಅಷ್ಟೊಂದು ಭಯವಿದ್ದರೆ ವಿಧಾನಸಭೆ ಮತ್ತು ಪರಿಷತ್ತು ಜತೆಗೆ ಕೆಲ ಪ್ರಾಮಾಣಿಕೆ ಪಾದ್ರಿಗಳನ್ನೊಳಗೊಂಡಂತೆ ಸದನ ಸಮಿತಿ ರಚಿಸಿ ಮತಾಂತರ ನಡೆಯು ತ್ತಿರುವ ಬಗ್ಗೆ ಒಂದು ಪಾರದರ್ಶಕ ತನಿಖೆಮಾಡಿ ವರದಿಯೊಪ್ಪಿಸಲಿ. ರಾಜ್ಯದಲ್ಲಿ ಮತಾಂತರವೇ ನಡೆದಿಲ್ಲ ಮತ್ತು ನಡೆಯುತ್ತಿಲ್ಲವೆಂದು ಸಾಬೀತು ಪಡಿಸಲಿ. ಆಗ ಬೆತ್ತಲಾಗುತ್ತದೆ ಇವರುಗಳ ಅಸಲಿಯತ್ತು. ಇಷ್ಟಕ್ಕೂ ಈ ಕಾಯಿದೆ ಅಗತ್ಯವಿರುವುದು ಪ್ರಜಾಪ್ರಭುತ್ವದ ಸಾರ್ಥಕತೆಗೆ, ಸಂವಿಧಾನದ ಪಾಲನೆಗೆ, ಸಮಾನತೆಗೆ, ಸಮಾಜಕ್ಕೆ. ಹೊರತು ರಾಜಕಾರಣಿಗಳ ಅಜೆಂಡಾಗಳಿಗಲ್ಲ.
ಇಂಥವರಿಗೆ ಹೊರದೇಶದ ಹಿಂದೂಗಳನ್ನೊಳಗೊಂಡ ಅಸಹಾಯಕ ಅಲ್ಪಸಂಖ್ಯಾತರನ್ನು ರಕ್ಷಿಸುವ ‘ಸಿಎಎ’ ತಂದರೂ ವಿರೋಧ, ಹಿಂದೂ ಕುಟುಂಬದ ನೆಮ್ಮದಿ ಕೊಲ್ಲುವ ಲವ್ ಜೀಹಾದ್ ನಿಷೇಧಿಸಿದರೂ ವಿರೋಧ, ಗೋಹತ್ಯೆ ನಿಷೇಧ ಕಾಯಿದೆ ತಂದರೂ ವಿರೋಧ, ಗೋಕಳ್ಳರನ್ನು ಬಂಧಿಸಿದರೂ ವಿರೋಧ, ಮತಾಂತರ ತಡೆ ಕಾಯಿದೆ ತಂದರೂ ವಿರೋಧ, ದೇಶದ ವಿರುದ್ಧ ಘೋಷಣೆ ಕೂಗುವವರ ಮೇಲೆ ಕ್ರಮ ಕೈಗೊಂಡರೂ ವಿರೋಧ, ಭಯೋತ್ಪಾದಕರ ಹೆಣ ಉರುಳಿಸಿದರೂ ವಿರೋಧ. ಆದರೆ ಹಿಂದೂಗಳನ್ನು ಹತ್ತಿಕ್ಕುವ ಕಾಯಿದೆ ಗಳನ್ನು ತಂದರೆ ಮಾತ್ರ ಮೇಜನ್ನು ಕುಟ್ಟಿತಟ್ಟಿ ಸ್ವಾಗತಿಸುವ ಇಂಥ ಅಸಹ್ಯ ಮನಸ್ಥಿತಿಯ ರಾಜಕಾರಣಿ ಗಳನ್ನು ಮತದಾರರು ಇನ್ನಾದರೂ ಅರ್ಥಮಾಡಿಕೊಂಡು ಇವರಿಗೆ ಸರಿಯಾದ ಪಾಠ ಕಲಿಸಬೇಕಿದೆ.
ಈಗ ನೋಡಿ ೨೦೧೬ರ ಆಚೆಗೇ ಸ್ವತಃ ಕಾನೂನು ಅಯೋಗವೇ ಮತಾಂತರವನ್ನು ನಿಷೇಧಿಸುವ ಕರಡನ್ನು ರೂಪಿಸಿ ಸರಕಾರಕ್ಕೆ ಸಲ್ಲಿಸಿತ್ತು ಎಂದರೆಕಾರ್ಯಾಂಗ ಸರಿಯಾದ ದಿಕ್ಕಿನ ಕೆಲಸ ಮಾಡಿದೆ. ಅಂದರೆ ವಾಸ್ತವ ಸತ್ಯವನ್ನು ಎತ್ತಿಹಿಡಿದಿದೆ. ಈ ಕರಡು ಮುಂದೆ ಸಚಿವ ಆಂಜನೇಯ, ಟಿ.ಬಿ.ಜಯಚಂದ್ರ ಹಾಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೂ ತಲುಪಿ ಅವರ ಗಮನಸೆಳೆದೂ ತಿಪ್ಪೆ ಸೇರಿದೆಯೆಂದರೆ ಅದು ರಾಜಕಾರಣಿಗಳ ಮನಃಸ್ಥಿತಿಯನ್ನು ಎತ್ತಿಹಿಡಿಯುತ್ತದೆ. ಸಮಾಜವನ್ನು ತಿದ್ದುವ ಕಾನೂನು ಆಯೋಗದ ಪ್ರಾಮಾಣಿಕ ಕಾಳಜಿಯನ್ನು ಇಲ್ಲಿ ಪ್ರಶಂಸಿಸಲೇಬೇಕು.
ಹೀಗೆ ಅಂದು ಕಾಂಗ್ರೆಸ್ ಪಕ್ಷ ಪ್ರಯತ್ನಿಸಿ ಹಿಂದೆ ಸರಿದ ಕೆಲಸವನ್ನು ಇಂದು ಬಿಜೆಪಿ ಮಾಡಿದೆಯಷ್ಟೆ! ಸದ್ಯಕ್ಕೆ ಮತಾಂತರ ನಿಷೇಧ ಕಾಯಿದೆಂತೆಯೇ ಮೊನ್ನೆ ಸೇನಾ ಮುಖ್ಯಸ್ಥರಾದ ಬಿಪಿನ್‌ರಾವತ್ ಅವರ ಮರಣವನ್ನು ಸಂಭ್ರಮಿಸಿದ ದೇಶದ್ರೋಹಿಗಳನ್ನು ಮಟ್ಟಹಾಕುವ ಬಲವಾದ ಕಾಯಿದೆಯೂ ತುರ್ತಾಗಿ ಬೇಕಿದೆ.