ಓದುಗರೂ ಲಘು-ಗುರು ಪಥ ಸಂಚಲನ ಮಾಡಿದಾಗ…
ತಿಳಿರು ತೋರಣ
ಶ್ರೀವತ್ಸ ಜೋಶಿ
@.
ಅಬ್ಬಬ್ಬಾ ಅಂದ್ರೆ ಅಬ್ಬಾ ಅಂತಲೇ. ಎರಡು ಸಲ ಹೇಳಿದರೆ ದ್ವಿರುಕ್ತಿ, ಡಬ್ಬಲ್ ಎಫೆಕ್ಟ್ ಆದ್ದರಿಂದ ಹಾಗೆ ಹೇಳುತ್ತೇವೆ. ಮೋಹಿನಿ ದಾಮ್ಲೆ ಅವರು ಚಳಿಯ ಬಗ್ಗೆಬರೆದ ಪದ್ಯದಲ್ಲಿ ಎಷ್ಟು ಅಬ್ಬಬ್ಬಾಗಳಿವೆ ನೋಡಿ! ಇದು ತೀವ್ರವಾಗಿ ಕೊರೆಯುವ ಚಳಿ. ಈ ದಿನಗಳಲ್ಲಿ ಅಮೆರಿಕಾ, ಕೆನಡಾ, ಅಥವಾ ಉತ್ತರ ಧ್ರುವಕ್ಕೆ ಹತ್ತಿರದ ಎಲ್ಲ ಪ್ರದೇಶಗಳಲ್ಲೂ ಇರುವ ರೀತಿಯದು:
ಅಬಬ್ಬಬಬ್ಬಬಬ್ಬಬಬ್ಬಬಬ್ಬಬಬ್ಬದೇನ್ ಚಳಿ!ಡಡಬ್ಬಡಬ್ಬಡಬ್ಬಡಬ್ಬ ಡಬ್ಬಲ್ ಈಗ ಕಂಬಳಿಟಟಪ್ಪಟಪ್ಪಟಪ್ಪಟಪ್ಪ ಟಪ್ಪ ಬೀಳೊ ಮಂಜಿಗೆಕಟಕ್ಕಟಕ್ಕಟಕ್ಕಟಕ್ಕಟಕ್ಕ ಸದ್ದು ಹಲ್ಲಿಗೆ!ಸೊರಸ್ಸೊರಸ್ಸೊರಸ್ಸೊರೆಂಬ ಕಾಫಿ ಕೇಳೆ ನಾಲಿಗೆಕರುಂಕುರುಂಕರುಂಕುರುಂ ಕೊಡುತ್ತ ಚಕ್ಲಿ ಬಾಯಿಗೆಗಡಗ್ಗಡಗ್ಗಡಗ್ಗಡಗ್ಗಡೆಂದೆ ಪದ್ಯ ಗೀಚಿರೇಅಹಹ್ಹಹಹ್ಹಹಹ್ಹಹಹ್ಹಹಹ್ಹ! ಥಂಡಿ ನಾಚಿತೇ!!
ಬೆಂಗಳೂರಿನಲ್ಲಿ ಹಾಯಾಗಿರುವ ಮೋಹಿನಿಯವರಿಗೆ ಬಹುಶಃ ಇಷ್ಟು ತೀವ್ರ ಚಳಿಯ ನಿಜ ಅನುಭವವಿರಲಿಕ್ಕಿಲ್ಲ. ಆದರೆ ಕಲ್ಪನೆಯಿಂದ ಬರೆದ ಪದ್ಯ ಮಾತ್ರ ಸಕ್ಕತ್ತಾಗಿದೆ. ಇದನ್ನವರು ಕಳೆದ ವಾರದ ಅಂಕಣದಲ್ಲಿ ‘ಮುದಾಕ ರಾತ್ತ ಮೋದಕಂ’ ಧಾಟಿಯ ಪ್ರಮಾಣಿಕಾ/ಪಂಚಚಾಮರ ಪದ್ಯಗಳನ್ನೋದಿದ ಪ್ರೇರಣೆಯಿಂದ ಬರೆದದ್ದು. ಶಂಕರಾಚಾರ್ಯರು ರಚಿಸಿದ ಶಿವತಾಂಡವ ಸ್ತೋತ್ರದಲ್ಲಿ ಹೇಗೆ ‘ಡಮಡ್ಡಮಡ್ಡಮಡ್ಡಮನ್ನಿನಾದ… ಧಗದ್ಧಗದ್ಧಗಜ್ಜ್ವಲಲ್ಲಲಾಟ…’ ಮುಂತಾದ ಅನುಕರಣ ಶಬ್ದಗಳಿವೆಯೋ ಹಾಗೆಯೇ ಚಳಿಗೆ ಹೊಂದುವಂಥ ಶಬ್ದಗಳನ್ನು ಪೋಣಿಸಿ ರಚಿಸಿದ್ದು.
ಛಂದೋಬದ್ಧ ಪದ್ಯ ಬರೆಯುವ ಮೋಹಿನಿ ದಾಮ್ಲೆಯವರ ಅದ್ಭುತ ಪ್ರತಿಭೆಯನ್ನು ಈ ಹಿಂದೆಯೂ ಒಂದೆರಡು ಸಲ ಅಂಕಣದಲ್ಲಿ ಪರಿಚಯಿಸಿ ದ್ದೇನೆ. ಸದ್ಯಕ್ಕೆ ಅವರ ಚಳಿ ಪದ್ಯದ ಎರಡು ಚರಣಗಳನ್ನಷ್ಟೇ ನೋಡಿ ಈಗಿನ್ನು ಬೇರೆ ಓದುಗಮಿತ್ರರ ಕೆಲವು ರಚನೆಗಳತ್ತ ಕಣ್ಣು ಹಾಯಿಸೋಣ. ಬೆಂಗಳೂರಿನ ಲಕ್ಷ್ಮೀನರಹಿಂಹ ಪ್ರಸಾದ್ ಸಹ ಒಳ್ಳೇ ಪಂಚ್ ಕೊಟ್ಟು ಬರೆದಿದ್ದಾರೆ. ಅವರ ಪದ್ಯ ಇರುವುದೇ ಪಂಚಿಂಗ್ ಬಗ್ಗೆ. ಸೂಕ್ತವಾದ ಅನುಕರಣ ಶಬ್ದಗಳೂ ಇವೆ.
ದಬಕ್ದಬಕ್ಕೆನುತ್ತ ಗುದ್ದಿ ದೇಹಶುದ್ಧಿ ಮಾಡಿರೋತುಬುಕ್ತುಬುಕ್ಕೆನುತ್ತಲೆಂಜಲತ್ತರನ್ನು ಚೆಲ್ಲಿರೋ!ಜನಕ್ಕೆ ಮೋಸ ಮಾಡಿದಂಥ ಠಕ್ಕರಿಂಗೆ ಚಂದದಿಂಕ್ಷಣಕ್ಷಣಕ್ಕು ಗುರ್ತು ಬಪ್ಪ ಪಾಠವಿಂತು ಕಲ್ಸಿರೋ!
ಕೊಪ್ಪದಿಂದ ಧಾತ್ರೀ ಶ್ರೀಕಾಂತ್ ಅವರು ಪಂಚಚಾಮರ ವೃತ್ತದಲ್ಲಿ ಪದ್ಯ ಹೊಸೆದಿದ್ದಷ್ಟೇ ಅಲ್ಲ ಅದರಲ್ಲೇ ಒಂದು ಕುತೂಹಲಕಾರಿ ಕಥಾನಕವನ್ನೂ ಪೋಣಿಸಿ ದ್ದಾರೆ. ಹೊಲದಿಂದ ಜೋಳದ ಕುಂಡಿಗೆಗಳನ್ನು ಕದಿಯುತ್ತಿದ್ದ ಹುಡುಗರನ್ನು ಕಂಡು ಹೊಲದ ಯಜಮಾನ ಗದರಿಸುತ್ತಾನೆ. ಅಷ್ಟರೊಳಗೆ ಅವರೆಲ್ಲ ಜೋಳಿಗೆಯಲ್ಲಿ ಸಾಕಷ್ಟು ತುಂಬಿಕೊಂಡು ಮನೆಯತ್ತ ಕಾಲ್ಕಿತ್ತಿರುತ್ತಾರೆ. ಆದರೆ ಮನೆಯಲ್ಲಿ ಹೆತ್ತವರಿಂದಲೂ ಬೈಗುಳ. ಸಾಹಸ ಮಾಡಿಯೂ ಪಜೀತಿಗೊಳಗಾದ ಪರಿಸ್ಥಿತಿ.ಧಾತ್ರಿಯವರ ಪದ್ಯದ ಮೂರು ಭಾಗಗಳ ಪೈಕಿ ಒಂದು ಇಲ್ಲಿದೆ:
ಸುಮಾರು ಮಾರು ದೂರದೀ ಸುಮಾ ಮನೀಯ ಹಾದಿಲೀಸುಮಾರು ಜೋಳ ಜೋಳಿಗೀ ಸರಾಗವಾಗಿ ತುಂಬುತಾ|ಸುಮಾಳ ಭಾವ ದರ್ಪದೀ ಜಮೀನು ನೋಡ ಬಂದರೋಸಮಾಧಿ ನಿಮ್ಮದೀಗಲೇ ತಯಾರಿಯಾಯಿತೆನ್ನುತಾ||
ಛಂದೋಬದ್ಧ ಕವಿತೆಗಳನ್ನು ಬರೆಯುವ ಇನ್ನೊಂದು ಪ್ರತಿಭೆ ಹೊನ್ನಾವರದ ಅರ್ಚನಾ ಹೆಬ್ಬಾರ್. ಅವರು ಭೋಗ-ಭಾಮಿನಿ ಷಟ್ಪದಿಗಳಲ್ಲಿ ಉದ್ದುದ್ದ ಪೌರಾಣಿಕ ಕಥೆಗಳನ್ನೆಲ್ಲ ಹೆಣೆಯಬಲ್ಲರು. ಪಂಚಚಾಮರ ವೃತ್ತದಲ್ಲೂ ಒಂದು ಕೈ ನೋಡೇಬಿಡುತ್ತಾರೆಂದು ನನಗೆ ಮೊದಲೇ ಅಂದಾಜಿತ್ತು. ನಿರೀಕ್ಷಿಸಿದಂತೆಯೇ ನಾಲ್ಕೈದು ಚಂದದ ಪದ್ಯಗಳನ್ನು ಬರೆದು ಕಳಿಸಿದ್ದಾರೆ. ಅವುಗಳಲ್ಲೊಂದು:
ನಿಸರ್ಗದತ್ತ ರಂಗಿನಲ್ಲಿ ರಾಗಭಾವ ಸಿಂಚನ|ಸರಾಗವಾಗಿ ಕೇಳಿಬಂತು ಪಕ್ಷಿ ಗಾನ ಕೂಜನ|ದಿಗಂತದಲ್ಲಿ ಸೂರ್ಯ ತಾನು ಕಾಣೆಯಾಗುವಾ ಕ್ಷಣ|ಅನಂತವಾದ ಬಾನಿನಲ್ಲಿ ಸಂಜೆಯಾಗೊ ಲಕ್ಷಣ||
ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಆಗ ಸಂಜಿ ಆಗಿತ್ತ ಎಂದ ಬೇಂದ್ರೆಯವರಂತೆಯೇ ಸಂಜೆ ಬಾನಿನ ಕೆಂಪು ಮೊಗವನ್ನು ಬಣ್ಣಿಸುತ್ತ ಪದ್ಯ ಬರೆದಿರುವವರು ಕೃಪಾಲಿನಿ ಉಡುಪ. ನನಗೆ ನೇರ ಪರಿಚಯ ಇಲ್ಲ. ಫೇಸ್‌ಬುಕ್‌ನಲ್ಲಿ ಇವರ ಛಂದ-ಪ್ರತಿಭೆ ಕಾಣಲಿಕ್ಕೆ ಸಿಕ್ಕಿತು. ಸೂರ್ಯಾಸ್ತ-ಚಂದ್ರೋದಯ ಬಣ್ಣನೆಯ ಈ ಪದ್ಯ ಇಷ್ಟವಾಯ್ತು. ಸಂಸ್ಕೃತದಲ್ಲಿ ಅಷ್ಟೇನೂ ಇಲ್ಲದ, ಕನ್ನಡದ ಹೆಚ್ಚುಗಾರಿಕೆಯೆನಿಸಿದ ದ್ವಿತೀಯಾಕ್ಷರ ಪ್ರಾಸವೂ ಇರುವುದರಿಂದ ಮತ್ತಷ್ಟು ಚಂದವೆನಿಸಿತು.
ಸುಧಾಕರಂಗೆ ಮೋದವಂತಿದನ್ನು ಸಂಜೆ ನೋಡಲುಸದಾ ಮುಗುಳ್ನಗುತ್ತ ಬಂದು ನಿಲ್ವನಂತೆ ಬಾನೊಳುಇದಾವುದಾಟವಾಡ್ವರೆಂದು ಭಾನು ನಕ್ಕ ಕಾರಣಅದೆಂತು ಕೆಂಪಗಾಯ್ತು ನೋಡಿ ಬಾನದೇವಿಯಾ ಮೊಗ
ದೇವರನ್ನು ಸ್ತುತಿಸುವ ಒಂದೆರಡು ರಚನೆಗಳೂ ಬಂದಿವೆ. ಇವು ತರ್ಲೆ ಪದ್ಯಗಳಲ್ಲ, ನಿಜವಾಗಿಯೂ ಭಕ್ತಿಪರವಶವಾಗಿಸುವಂಥವು. ಮುದಾಕರಾತ್ತ ಮೋದಕಂ ಧಾಟಿಯಲ್ಲಿ ಹಾಡಿಸಿಕೊಳ್ಳಲಿಕ್ಕೆ ಪೂರ್ಣ ಅರ್ಹತೆಯುಳ್ಳವು. ಮೊದಲನೆಯದು ಸಾಗರದಿಂದ ಲಲಿತಾಲಕ್ಷ್ಮೀ ಭಟ್ ಅವರು ಬರೆದುಕಳುಹಿಸಿದ್ದು, ಶ್ರೀರಾಮನಿಗೆ ಪ್ರಾರ್ಥನೆ. ಎರಡನೆಯದು ದಶಾವತಾರ ಬಣ್ಣನೆ, ಅರಸಿನಮಕ್ಕಿ ಬೆಳ್ತಂಗಡಿಯಿಂದ ಕಾಶಿನಾಥ ದಾಮ್ಲೆ ಅವರ ರಚನೆ. ಮೂರನೆಯದು ಪಾರ್ವತೀಪರಾಕು, ವಸುಮತಿ ರಾಮಚಂದ್ರ ಅವರಿಂದ.
ಅನಂತ ನಾಮರೂಪನೇ ಭವಾಬ್ಧಿ ಪಾರು ಮಾಳ್ಪನೇಅನೇಕ ನಾಮಧಾರನೇ ಮನೋವಿಹಾರಿ ರಾಮನೇಮನೀಷಿ ಜಾನಕೀಶನೇ ಘನಾವತಾರ ದೇವನೇಹನೂಮ ಭಕ್ತಿಸೇವ್ಯನೇ ತನೋತು ಭಕ್ತಪಾಲನೇ ||೧||ದಶಾವತಾರ ರೂಪದೀ ಪದೇಪದೇ ನಿ ಕಂಡೆಯಾಅದೇನು ದೇವ ವೇಷವೋ ವರಾಹ ಮೀನು ಆಮೆಯೋಪುರಾಣ ರಾಮ-ಕೃಷ್ಣರೂ ವಿಶೇಷ ಮಾನನೀಯರೂವಿಚಿತ್ರ ನಾರಸಿಂಹನೂ ಜನಾನುರಾಗಿಯಾದನೇ! ||೨||ಸುಹಾಸದಿಂದ ರೋಷವನ್ನಶೇಷಗೈವ ಪಾರ್ವತೀಅಹೇತು ಪ್ರೇಮದಿಂದ ವಿಶ್ವಕೆಲ್ಲ ನೀಡು ಸನ್ಮತೀಮಹೇಶನರ್ಧ ದೇಹದಲ್ಲಿ ಏಕವಾದ ಶಾಶ್ವತೀಮಹಾತ್ಮರಾದ ಯೋಗಿವೃಂದಕೀವೆ ನೀನೆ ಸದ್ಗತಿ ||೩||
ಇನ್ನು ಕೆಲವು ಕಳೆದ ವಾರದ ಅಂಕಣದಲ್ಲೇ ಪ್ರಸ್ತಾವವಾಗಬೇಕಿದ್ದಂಥವು ಇವೆ. ನನ್ನ ಮಿತ್ರವರ್ಗದಲ್ಲಿರುವ ಹವ್ಯಾಸಿ ಛಂದಪದ್ಯಕೃಷಿಕರ ಫಸಲು. ಇವು ಒಂದೋ ನನ್ನ ಕಣ್ಣಿಗೆ ಈಮೊದಲು ಬಿದ್ದಿರಲಿಲ್ಲ, ಅಥವಾ ಅಂಕಣ ಬರೆಯುವ ವೇಳೆಗೆ ನೆನಪಾಗಿರಲಿಲ್ಲ. ಮೊದಲನೆಯದರ ಕವಿ ಸುಬ್ರಹ್ಮಣ್ಯ ಬರ್ವೆ. ಈತ ಮೂಲತಃ ನಮ್ಮೂರಿನ ಹುಡುಗ. ವೃತ್ತಿ ಬೆಂಗಳೂರಿನಲ್ಲಿ ಬ್ಯಾಂಕಿಂಗ್ ಕ್ಷೇತ್ರ, ಪ್ರವೃತ್ತಿ ಚಂದ-ಛಂದದ ಪದ್ಯಶಿಲ್ಪ. ಕಳೆದವರ್ಷ ಕೋವಿಡಾಯಣ ಕಾಲದಲ್ಲಿ ಲಾಕ್ ಡೌನ್ ಬಗ್ಗೆ ಬರೆದಿದ್ದರಲ್ಲಿ ಒಂದು ಚರಣವನ್ನಷ್ಟೇ ಎತ್ತಿಕೊಂಡಿದ್ದೇನೆ.
ಎರಡನೆಯದು, ಸಾಗರದ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ನಂಜುಂಡ ಭಟ್ ಅವರಿಂದ ವಸಂತ ಋತುವರ್ಣನೆ. ನಂಜುಂಡ ಭಟ್ಟರ ಕವಿತ್ವದಬಗ್ಗೆ, ಉಪ್ಪಿಟ್ಟಿನ ಕವಿತೆಯನ್ನು ಪ್ರಧಾನ ಭೂಮಿಕೆಯಲ್ಲಿಟ್ಟು ಈಹಿಂದೆ ಒಮ್ಮೆ ಅಂಕಣದಲ್ಲಿ ಬರೆದಿದ್ದೇನೆ. ಮೂರನೆಯದು ಮೈಸೂರಿನಿಂದ ಅನಂತ ತಾಮ್ಹನಕರ್ ವಿರಚಿತ ತ್ರಿಮೂರ್ತಿ ಸಹಿತ ಗಣೇಶ ವಂದನ ಸ್ತೋತ್ರದಿಂದ ಆಯ್ದ ಒಂದು ಭಾಗ. ಇವರು ಬ್ಯಾಂಕ್ ಉದ್ಯೋಗದಿಂದ ನಿವೃತ್ತ. ಹಲವಾರು ಕಲಾ ಚಟುವಟಿಕೆ ಗಳಲ್ಲಿ ಪ್ರವೃತ್ತ. ಈ ಎಲ್ಲ ಪ್ರತಿಭಾವಂತ ಕವಿಗಳ ರಚನೆಗಳನ್ನು ಈವಾರ ಸೇರಿಸಿಕೊಂಡಿರುವುದು ನನಗೆ ಖುಷಿಯ ವಿಚಾರ.
ರಜಾಮಜಾಗಳೆಲ್ಲ ದಾಟಿ ಜೂನ ಮಾಹೆಯಲ್ಲಿಯೂಸಜಾವೆ ಆಯ್ತು ಬಾಲರಿಂಗೆ ನಿತ್ಯ ಬಂದಿವಾಸವೂಪಿಜಾವು ಇಲ್ಲ ಹೋಟ್ಲು ಇಲ್ಲ ನಿತ್ಯ ಸಾರು ಅನ್ನವುಹಜಾರ ದಾಟಿ ಹೋಗದಂತೆ ತಂದೆ ತಾಯಿಯಾಜ್ಞೆಯು ||೧||ವಸಂತ ಬಂದನೆಷ್ಟು ಚಂದ ನೋಡಲಿಕ್ಕೆ ಬನ್ನಿರೇನಿಸರ್ಗಸುಂದರೀಯರೆಲ್ಲ ಷೋಡಶೀಯರಾದರೇಹಸನ್ಮುಖಾರವಿಂದಪಾಶದಿಂದ ಬಂಧಿಯಾಗಿರೇಕಷಾಯಮೂಲವೃಕ್ಷದಲ್ಲು ರಕ್ತವರ್ಣವೂಡಿರೇ ||೨||ಸದಾಶಿವಾತ್ಮಲಿಂಗವೇ ಹರೀಶ ಲಕ್ಷ್ಮಿನಾಥನೇವಿಧಾತ ನೀನು ನಾಲ್ಕು ಮೋರೆಯಿದ್ದ ದೇವನಾಗಿರೇವಿನಾಯಕಾದಿಬಾಲನೇ ಗಣಾಧಿಪಾ ಸುಶೂರನೇಪ್ರಭಾತಕಾಲದೀ ಪ್ರಣಾಮ ನಾವು ಕೂಡಿ ಮಾಡಿರೇ ||೩||
ಮತ್ತೆ ಕೆಲವು ಓದುಗಮಿತ್ರರು ಅಂಕಣಬರಹದಿಂದ ಪ್ರೇರಣೆ ಪಡೆದು ರಚಿಸಿದ ಪದ್ಯಗಳನ್ನು ಕಳುಹಿಸಿದವರಿದ್ದಾರೆ. ಬೆಂಗಳೂರಿನಿಂದ ರಂಗವಿಮರ್ಶಕ ರಂಗಸಂಗೀತ ಸಂಯೋಜಕ ನಾರಾಯಣ ರಾಯಚೂರ್, ಕೆನರಾ ಬ್ಯಾಂಕಿನ ನಿವೃತ್ತ ಅಪರಮಹಾಪ್ರಬಂಧಕ ಹಾ.ಮ.ದೇ ಕಾಮತ್ ಮುಂತಾದವರು. ಆದರೆ ಆ ಪದ್ಯಗಳಲ್ಲಿ ನನ್ನ ಬಗ್ಗೆ ಹೊಗಳಿಕೆಯ ಅಂಶಗಳು ಇವೆ. ಇಲ್ಲಿ ಪ್ರಕಟಿಸಲಿಕ್ಕೆ ಮುಜುಗರ ಆದ್ದರಿಂದ ಕೈಬಿಟ್ಟಿದ್ದೇನೆ. ಆದರೂ ಶಿವಮೊಗ್ಗದ ಪ್ರೌಢಶಾಲಾ ವಿದ್ಯಾರ್ಥಿನಿ ಪ್ರಣಮ್ಯಾಳ ರಚನೆಯೊಂದರ ಗೌರವ ಉಲ್ಲೇಖ ಮಾಡಲೇಬೇಕಿದೆ. ಪ್ರಣಮ್ಯಾ ನನಗೆ ಆನ್‌ಲೈನ್ ಭಗವದ್ಗೀತೆ ಕಲಿಕೆಯಲ್ಲಿ ಪರಿಚಿತಳಾದ ಪ್ರತಿಭಾನ್ವಿತೆ. ಚಿತ್ರಕಲೆ, ಸಂಗೀತ ಇತ್ಯಾದಿ ವಿವಿಧ ಕಲಾಪ್ರವೀಣೆ. ಈಗಷ್ಟೇ ಶಾಲೆಯಲ್ಲಿ ಛಂದಸ್ಸಿನ ಲಘು-ಗುರು ಮಾತ್ರೆಗಳ ಪರಿಚಯವಾಗಿದ್ದಾದರೂ ಭೇಷ್ ಎನ್ನುವಂತೆ, ಅದೂ ಚಿತ್ತಿಲ್ಲದ ಸುಂದರ ಕೈಬರಹದಲ್ಲಿ, ಬರೆದು ಕಳುಹಿಸಿದ್ದಾಳೆ!
ವಿದೇಶದಿಂದ ಜೋಶಿಯಾ ನವೀನ ರೀತಿ ಲೇಖನಾ|ಸದಾರಸಾನುಭಾವವೂ ಮನೋಹರಾವಿಚಾರವೂ||
ಇದಿಷ್ಟು, ಕಳೆದ ವಾರದ ಅಂಕಣದಲ್ಲಿ ವಿವರಿಸಿದ ಪ್ರಮಾಣಿಕಾ/ಪಂಚಚಾಮರ ವೃತ್ತದ ಉತ್ತರಕಾಂಡ. ಪ್ರಮಾಣಿಕಾ ವೃತ್ತದಂಥದ್ದೇ ಇನ್ನೊಂದಿದೆ, ಇದರ ಹೆಸರು ‘ಸಮಾನಿಕಾ’ ಎಂದು. ಪ್ರಮಾಣಿಕಾದಲ್ಲಿ ಎಂಟು ಅಕ್ಷರಗಳು ಲಘು-ಗುರು ಆವರ್ತನದಲ್ಲಿ ಜೋಡಣೆಯಾದರೆ ಸಮಾನಿಕಾದಲ್ಲಿ ಎಂಟು ಅಕ್ಷರಗಳು ಗುರು-ಲಘು ಆವರ್ತನದಲ್ಲಿ ಜೋಡಣೆಯಾಗುತ್ತವೆ.
ಎರಡು ಮಾಣಿಕಾಗಳು ಸೇರಿ ೧೬ ಅಕ್ಷರಗಳ ‘ಪಂಚಚಾಮರ’ ಆಗುತ್ತದೆಂದು ಕಳೆದ ವಾರ ನೋಡಿದ್ದೆವಷ್ಟೆ? ಅದೇ ರೀತಿ ಎರಡು ಸಮಾನಿಕಾಗಳನ್ನು ಜೋಡಿಸಿ (ಕೊನೆಯದೊಂದು ಲಘುವನ್ನು ಬಿಟ್ಟು) ೧೫ ಅಕ್ಷರಗಳ ಸಾಲು ಮಾಡಿದರೆ ಅದಕ್ಕೆ ‘ಚಾರುಚಾಮರ’ ಎಂದು ಹೆಸರು. ‘ಉತ್ಸಾಹವೃತ್ತ’ ಎಂದರೂ ಅದೇನೇ. ಗುರು-ಲಘು ಆವರ್ತನದಿಂದಾಗಿ ಇದು ಕೂಡ ಸೈನಿಕರ ರೈಟ್-ಲೆಫ್ಟ್ ಮಾರ್ಚ್‌ಪಾಸ್ಟ್‌ನಂತೆಯೇ.
ಕಂಪ್ಯೂಟರ್ ನಲ್ಲಿ ಒಂದು-ಸೊನ್ನೆ-ಒಂದು-ಸೊನ್ನೆ ದ್ವಿಮಾನಪದ್ಧತಿಯ ಅಂಕಿಗಳ ಸಾಲಿನಂತೆಯೇ. ನರ್ತಕಿಯ ಧಿಂತ ಧಿಂತ ಧಿಂತ ಧಿಂತ ನೃತ್ಯ ಮಟ್ಟು ಗಳಂತೆಯೇ. ಈಜುಗಾರನ ಬ್ರೆಸ್ಟ್ ಸ್ಟ್ರೋಕ್ ಶೈಲಿಯಂತೆಯೇ. ಅತ್ಯುತ್ತಮ ಅತಿಜನಪ್ರಿಯ ಉದಾಹರಣೆಯೆಂದರೆ ಶಂಕರಾಚಾರ್ಯ ವಿರಚಿತ ಕಾಲ ಭೈರವಾಷ್ಟಕಮ್ ಸ್ತೋತ್ರ. ಅದರ ಮೊದಲ ಚರಣ ಇಲ್ಲಿದೆ ನೋಡಿ:
ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಮ್|ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ||
ಕನ್ನಡದ್ದೇ ಉದಾಹರಣೆ ಬೇಕೇ? ತಗೊಳ್ಳಿ, ಹಳಗನ್ನಡದ ಕಾವ್ಯವೊಂದರ ಭಾಗ. ೧೪ನೆಯ ಶತಮಾನದವನಿರಬಹುದು ಎಂದು ಅಂದಾಜಿಸಲಾದ ಚೌಂಡರಾಜ ಕವಿಯು ಬರೆದ ಅಭಿನವ ದಶಕುಮಾರ ಚರಿತೆಯಲ್ಲಿ ಬರುವ ಒಂದು ಪದ್ಯ.
ಚೆಂದದಿಂದೆ ಚೆನ್ನ ಪೊನ್ನ ಗೆಜ್ಜೆಗಟ್ಟಿ ರಂಜೆ ಪೊಂ|ದೊಂದು ಕಾಲನಾಡಿಸೈ ಕುಮಾರ ಎಂದು ಕಾಂತೆಯರ್|ಮುಂದೆ ನಿಂದು ತಪ್ಪಳಿಕ್ಕಿಯಾಡಿಸಲ್ ವಿಲಾಸದಿಂ|ಮಂದಹಾಸಮುಣ್ಮಿ ಪೊಣ್ಮಲಾಡಿದಂ ಕುಮಾರಕಂ||
ಪ್ರೊ. ಅ.ರಾ.ಮಿತ್ರ ‘ಛಂದೋಮಿತ್ರ’ ಪುಸ್ತಕದಲ್ಲಿ ಚಾರುಚಾಮರಕ್ಕೆ ಉದಾಹರಣೆಯಾಗಿ ಭಲೇ ತಮಾಷೆ ಪದ್ಯಗಳನ್ನು ಹೆಣೆದಿದ್ದಾರೆ.
ಲಂಚವೆಂಬ ಮಂಚವೇರೆ ಕೊಂಚಕೊಂಚವಾಗಿಯೇ ಸಚ್ಚರಿತ್ರಕೆಲ್ಲ ನಿದ್ದೆ ಬಂದು ವ್ಯಕ್ತಿ ನಾಶವೈ ಹೊನ್ನ ಜಿಂಕೆ ಕಾಂತಿಯಿಂದ ಸುತ್ತಿ ಸುತ್ತಿ ಓಡಿತೇ ರಾಮಪತ್ನಿ ಸೀತೆಯಂ ಪ್ರಪಂಚಿಯಂತೆ ಮಾಡಿತೇ ||೧||
ಹೆಂಡಿರಿಬ್ಬರೇಕೆ ಬೇಕೊ ಭಿಕ್ಷಗಾರ ರುದ್ರನೇ ಚಂಡಿ ಬುದ್ಧಿ ಬಿಟ್ಟು ಬೇಗ ಒಬ್ಬಳನ್ನು ಸಾಗಿಸೋ ಚಂಡಕ್ಷಾಮದಲ್ಲಿ ಸಾಯ್ವ ಮಂದಿ ನೀರು ಕೇಳ್ವರೌ ಬಂಡೆಯಂತೆ ಏಕೆ ನಿಂತೆ ಗಂಗೆಯನ್ನು ನೀಡೆಲೌ ||೨||ಗುಟ್ಟು ಹೇಳಿ ಯಾರಿಗೂನು ಹೇಳಬೇಡ ಎಂದರೂಎಲ್ಲ ಮಂದಿಗೂನು ನೀನು ಹೇಳಿಕೊಂಡು ಬಂದೆಯಾ?ಶುದ್ಧ ಸುಳ್ಳು ಎಲ್ಲ ಮಂದಿಗೆಂತು ಪೇಳಲಾಪುದೈದಾರಿಯಲ್ಲಿ ಸಿಕ್ಕ ಮಂದಿಗಷ್ಟೆ ಪೇಳ್ದುದುಂಟು ನಾಂ ||೩||
ಇನ್ನೊಂದು, ಇದೇ ಲೇಖನದಲ್ಲಿ ಈಮೊದಲು ಪ್ರಸ್ತಾವಿಸಿದ ಯುವ ಕವಿ ಸುಬ್ರಹ್ಮಣ್ಯ ಬರ್ವೆಯವರ ರಚನೆ. ಇದನ್ನು ಕಳೆದವರ್ಷ ನಾಗರಪಂಚಮಿ ಸಂದರ್ಭದಲ್ಲಿ ಬರೆದಿದ್ದಂತೆ. ಈ ಪ್ರಪಂಚದಲ್ಲಿ ಜೈವಿಕ ಸರಪಳಿಯ ಮಹತ್ತ್ವ, ಅದನ್ನು ತುಂಡರಿಸಲೆತ್ನಿಸಿದರೆ ಆಗುವ ಅಪಾಯದ ಎಚ್ಚರಿಕೆ, ನಾಗರಪಂಚಮಿ ಮುಂತಾದ ಆಚರಣೆಗಳಿಗೂ ಇರುವ ಅರ್ಥ, ಈ ಪದ್ಯದಲ್ಲಿ ಪ್ರಬುದ್ಧ ಪದಗಳಲ್ಲಿ ವ್ಯಕ್ಯವಾಗಿದೆ. ಪದ್ಯದ ಒಂದು ಭಾಗವನ್ನಷ್ಟೇ ಇಲ್ಲಿ ಕೊಡುತ್ತಿದ್ದೇನೆ.
ಪಂಚ ಭೂತ ಪೂತವಾದ ಭೂಮಿಯಲ್ಲಿ ಆಸುರೀಸಂಚನೆಲ್ಲ ಸೋಲಿಸಲ್ಕೆ ಜೀವ ಜೀವ ವಲ್ಲರೀ|ಹೊಂಚಿನಿಂದಲೊಂದು ತಂತು ಇಲ್ಲವಾದರೀ ಮಹೀಅಂಕೆ ತಪ್ಪಿ ಒಂದನೊಂದು ಕಚ್ಚಿ ಕೊಲ್ಲುವಾ ಅಹೀ||
ಮತ್ತೊಂದು ಪದ್ಯ, ಹವ್ಯಕ ಸಮುದಾಯದ ಒಪ್ಪಣ್ಣ ಡಾಟ್ ಕಾಮ್ ತಾಣದಿಂದ ನಾನು ಹೆಕ್ಕಿದ್ದು. ಅಲ್ಲಿ ಸಮಸ್ಯಾಪೂರಣದಂತೆ ಕೊನೆಯ ಒಂದು ಸಾಲು ಕೊಟ್ಟಾಗ ಚಂಬೆತೋಟ ಪುಟ್ಟಣ್ಣ ಎಂಬುವರೊಬ್ಬರು ರಚಿಸಿದ್ದು. ಕುರ್ವೆ ಅಂದರೆ ಬೆತ್ತದ ಬುಟ್ಟಿ. ಬೀಜ ಹೆಕ್ಕುವುದು ಅಂದರೆ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಗೇರುಬೀಜ ಹೆಕ್ಕಿಕೊಂಡು ಬರುವುದಿರಬಹುದು, ಅಥವಾ ಅಡಕೆ ಹೆಕ್ಕುವುದೂ ಇರಬಹುದು. ಹವ್ಯಕ ಭಾಷೆಯ ಕೆಲ ಪದಗಳನ್ನು ಅಷ್ಟಿಷ್ಟು ಬದಲಾಯಿಸಿ ಕನ್ನಡೀಕರಿಸಿದಾಗಿನ ಆವೃತ್ತಿ ಇಲ್ಲಿದೆ:
ಮಕ್ಳು ಎಲ್ಲ ಏಳಿರೀಗ ಬಿಟ್ಟು ಬೇಗ ಹಾಸಿಗೆಸಾಕು ನಿದ್ದೆ ಓದಬೇಕು ಹೋಗಬೇಕು ಶಾಲೆಗೆಲೆಕ್ಕ ಮಾಡಿ ಕೂಡಬೇಕು ಪೈಸೆ ಐಸುಕೇಂಡಿಗೆನಾಕು ಕುರ್ವೆ ಬೀಜ ಹೆಕ್ಕಿ ಬನ್ನಿ ಬೇಗ ತಿಂಡಿಗೆ
ಕೊನೆಯಲ್ಲಿ, ಒಂದು ತರ್ಲೆ ಪದ್ಯ. ಪದ್ಯ ಅಲ್ಲ ಮದ್ಯ ಅಂದರೂ ಸರಿಯೇ. ವೈಎನ್ಕೆಯವರ ಪರ್ಮಿಷನ್ ಪಡೆದು ಶ್ರೀಮಾನ್ ‘ಘಾ’ (ಘಾ-ಜಿಎಚ್‌ಎ ಅಂದರೆ ಗುಂಡು ಹಾಕುವ ಆಸಾಮಿ) ಸ್ತುತಿ. ಮದ್ಯ ಮುಟ್ಟದೆಯೂ ರಾಜರತ್ನಂ ಹೇಗೆ ‘ಯೆಂಡ್ಕುಡ್ಕ ರತ್ನನ್ ಪದ್ಗೋಳ್’ ಬರೆದರೋ ಹಾಗೆ ಶ್ರೀವತ್ಸ ‘ಘಾ’ (ಜಿಎಚ್‌ಎ ಅಂದರೆ ಗುಂಡು ಹಾಕದ ಆಸಾಮಿ) ಬರೆದದ್ದು:
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ವೇಳೆಗೆಸೋಮಪಾನ ಮಾಡಲಿಕ್ಕೆ ಸೇರಿಕೊಳ್ವ ಮಂದಿಗೆಪಾರದರ್ಶ ಗ್ಲಾಸಿನಲ್ಲಿ ಗುಂಡು ಸೋಡ ಕೂಡಿವೆಗೇರು ಬೀಜ ಖಾರ ಕಡ್ಲೆ ತಟ್ಟೆ ತುಂಬ ಬಂದಿವೆ
ಎಂಬಲ್ಲಿಗೆ ಪ್ರಮಾಣಿಕಾ/ಪಂಚಚಾಮರ ಮತ್ತು ಸಮಾನಿಕಾ/ಚಾರುಚಾಮರ ವೃತ್ತಗಳನ್ನು ಕುರಿತ ಎರಡು ಲೇಖನಗಳ ಸರಣಿ ಮುಗಿದುದು. ಪದ್ಯೋತ್ಸಾಹ ತೋರಿದ ಎಲ್ಲರಿಗೂ ಅಭಿನಂದನೆ ಮತ್ತು ಧನ್ಯವಾದಗಳು. ಮುಂದಿನ ತಿಳಿರುತೋರಣ ಅಂಕಣಬರಹ ಹೊಸ ಕ್ಯಾಲೆಂಡರ್ ವರ್ಷದಲ್ಲಿ! ಎಲ್ಲರಿಗೂ ಮುಂಗಡ ವಾಗಿ ಶುಭಾಶಯಗಳು.