ಮಾಸ್ತರರ ಪತ್ರಕ್ಕೆ ಜೆಆರ್‌ಡಿ ಉತ್ತರ ಮತ್ತು ಟಾಟಾ ಮಾರ್ಗದರ್ಶಕ ಸೂತ್ರ
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
@.
ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿದ್ದ ಜೆಆರ್‌ಡಿ ಎಂದೇ ಖ್ಯಾತರಾದ ಜಹಾಂಗೀರ್ ರತನಜೀ ದಾದಾಭಾಯ್ ಟಾಟಾ ಅವರಿಗೆ ಯಾರೇ ಪತ್ರ ಬರೆ ದರೂ, ಅವರು ಎಷ್ಟೇ ದೊಡ್ಡವರಾಗಿರಲಿ, ಸಣ್ಣವರಾಗಿರಲಿ, ಪರಿಚಯದವರಿರಲಿ, ಅಪರಿಚಿತರಿರಲಿ, ಉತ್ತರಿಸದೇ ಇರುತ್ತಿರಲಿಲ್ಲ. ಪ್ರತಿ ದಿನ ಅವರು ನೂರಕ್ಕೂ ಹೆಚ್ಚು ಪತ್ರಗಳನ್ನು ಬರೆಯುತ್ತಿದ್ದರು. ಈ ಪತ್ರಗಳ ಪೈಕಿ ಆಯ್ದವನ್ನು ಸೇರಿಸಿ, ಪುಸ್ತಕಗಳ ರೂಪದಲ್ಲಿ ಸಹ ಪ್ರಕಟಿಸಲಾಗಿದೆ.
ಒಮ್ಮೆ ಜೆಆರ್‌ಡಿ ತಮ್ಮ ಸಮೂಹದ ಅಂಗ ಸಂಸ್ಥೆಯ ಮುಖ್ಯಸ್ಥರೊಬ್ಬರಿಗೆ ಪತ್ರ ಬರೆದಿದ್ದರು. ಅದಕ್ಕೆ ಅವರಿಂದ ಎರಡು ವಾರಗಳಾದರೂ ಉತ್ತರ ಬರದಿದ್ದಾಗ,ಉತ್ತರ ಬರೆಯದಿರುವುದಕ್ಕೆ ಕಾರಣವೇನು ಎಂದು ಮತ್ತೊಂದು ಪತ್ರವನ್ನು ಜೆಆರ್‌ಡಿ ಬರೆದಿದ್ದರು. ಇದರಿಂದ ಕಳವಳಗೊಂಡ ಆ ಆಸಾಮಿ, ನೇರವಾಗಿ ಜೆಆರ್‌ಡಿ ಅವರನ್ನು ಭೇಟಿ ಮಾಡಿ ಕ್ಷಮೆ ಯಾಚಿಸಲು ಆಗಮಿಸಿದರು.
ಆಗ ಜೆಆರ್‌ಡಿ, ‘ನಾನು ಬರೆದ ಪತ್ರಕ್ಕೆ ಯಾಕೆ ಉತ್ತರಿಸಿಲ್ಲ ಎಂದು ಬರೆದರೆ, ಅದಕ್ಕೆ ನೀವು ಇಲ್ಲಿಗೆ ಬಂದು ಸಮಜಾಯಿಶಿ ನೀಡಬೇಕಿಲ್ಲ. ಪತ್ರದಲ್ಲಿಯೇ ಉತ್ತರಿಸಿ, ಸಾಕು’ ಎಂದು ಹೇಳಿದ್ದರು. ಅದೇ ಕೊನೆ, ಯಾರೇ ಬರೆದರೂ ಅವರು ತಕ್ಷಣ ಉತ್ತರಿಸುತ್ತಿದ್ದರು. ಜೆಆರ್‌ಡಿ ಪ್ರವಾಸದಲ್ಲಿದ್ದಾಗಲೂ, ತಮಗೆ ಬಂದ ಪತ್ರಗಳಿಗೆ ಉತ್ತರಿಸುತ್ತಿದ್ದರು. ಅವರ ಜತೆ ಒಂದು ಸಣ್ಣ ರೆಮಿಂಗ್ಟನ್ ಟೈಪ್ ರೈಟರ್ ಯಾವತ್ತೂ ಇರುತ್ತಿತ್ತು.
1965ರ ಆಗಸ್ಟ್ 6 ರಂದು ಕೋಲ್ಕೊತಾದ ಕೆ.ಸಿ.ಬನ್ಸಾಲಿ ಎಂಬ ಶಾಲಾ ಮಾಸ್ತರರೊಬ್ಬರು, ಜೆಆರ್‌ಡಿ ಯವರಿಗೆ ಪತ್ರವೊಂದನ್ನು ಬರೆದು, ‘ನಿಮ್ಮ ಜೀವನದ ಮತ್ತು ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳೇನು, ತಿಳಿಸು ವಿರಾ?’ ಎಂದು ಕೇಳಿದ್ದರು. ಆಗ ಜೆಆರ್‌ಡಿಯವರಿಗೆ ಅರವತ್ತೊಂದು ವರ್ಷ ವಯಸ್ಸು. ಅವರು ಟಾಟಾ ಸಮೂಹ ಗಳ ಅಧ್ಯಕ್ಷರಾಗಿ ಇಪ್ಪತ್ತೇಳು ವರ್ಷಗಳಾಗಿದ್ದವು. ಟಾಟಾ ಸಂಸ್ಥೆಯ ಹೆಸರು ಆ ದಿನಗಳಲ್ಲಿ ದೇಶವ್ಯಾಪಿ ಪರಿಚಿತವಾಗಿತ್ತು. ಟಾಟಾ ಹೆಸರಿನಡಿಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಕಂಪನಿಗಳ ಮುಖ್ಯಸ್ಥರಾಗಿದ್ದ ಜೆಆರ್‌ಡಿ ಅವರ ಕೆಲಸದ ಒತ್ತಡಗಳನ್ನು ಅರ್ಥ ಮಾಡಿಕೊಳ್ಳಬಹುದಾಗಿತ್ತು. ಹೀಗಿರುವಾಗ, ಕೋಲ್ಕೊತಾದ ಶಾಲಾ ಮಾಸ್ತರ ರೊಬ್ಬರ ಪೋಸ್ಟ್ ಕಾರ್ಡಿಗೆ ಉತ್ತರಿಸಬೇಕಾದ ಹರಕತ್ತು ಇರಲಿಲ್ಲ.
ಆದರೆ ಜೆಆರ್ಡಿ, ಅವರಿಗೆ ಉತ್ತರ ಬರೆಯಲು ಮರೆಯಲಿಲ್ಲ. ಆತ್ಮೀಯರಾದ ಶ್ರೀ, ಬನ್ಸಾಲಿ ಅವರಿಗೆ, ಆಗಸ್ಟ್ ೬ರ ನಿಮ್ಮ ಪತ್ರ ನನ್ನ ಕೈಸೇರಿದೆ. ಅದನ್ನು ಓದಿಸಂತೋಷವಾಯಿತು. ನನ್ನ ಜೀವನವನ್ನು ಮತ್ತು ನಮ್ಮ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಮಾರ್ಗದರ್ಶಕ ಸೂತ್ರಗಳೇನು ಎಂದು ಕೇಳಿದ್ದೀರ. ಈ ಸಂಗತಿ ಗಳನ್ನು ತಿಳಿದುಕೊಳ್ಳಲು ನೀವು ಆಸಕ್ತರಾಗಿರುವುದು ಸಂತೋಷ. ನಾನು ನನ್ನನ್ನು ಅಂಥ ಮಹಾ ವ್ಯಕ್ತಿ ಎಂದು ಭಾವಿಸಿಲ್ಲ. ನಾನು ಒಬ್ಬ ಸಾಮಾನ್ಯ ಉದ್ಯಮಿ. ನಮ್ಮ ದೇಶದ ಕೈಗಾರಿಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಉತ್ತಮ ಅವಕಾಶಗಳನ್ನು ಎಲ್ಲರಿಗೂ ಲಭಿಸುವಂತೆ ಮಾಡುವ ಮತ್ತು ಹಂಚುವ ಕಾರ್ಯದಲ್ಲಿನನ್ನನ್ನು ತೊಡಗಿಸಿಕೊಂಡಿದ್ದೇನೆ. ಈ ಕಾರ್ಯದಲ್ಲಿ ನನ್ನ ತಿಳಿವಳಿಕೆಗೆ ಬಂದಿರಬಹುದಾದ ಮಾರ್ಗದರ್ಶಿ ಸೂತ್ರಗಳನ್ನು ಈ ರೀತಿ ಸಂಕ್ಷೇಪಿಸಿ ಕೊಡಬಹುದು.ಆಳವಾದ ಆಲೋಚನೆ ಮತ್ತು ಕಠಿಣ ಪರಿಶ್ರಮವಿಲ್ಲದೇ ಯಾವುದೇ ಮಹತ್ತರ ಸಾಧನೆಗಳನ್ನು ಸಾಧಿಸಲು ಸಾಧ್ಯವಿಲ್ಲ.
ಯಾರೇ ಆಗಲಿ, ತಮ್ಮ ವೈಯಕ್ತಿಕ ಸಾಧನೆ, ಏಳಿಗೆ ಬಗ್ಗೆ ಯೋಚಿಸಬೇಕು. ಯಾವುದನ್ನೂ ಪರೀಕ್ಷಿಸದೇ ತಕ್ಷಣ ಒಪ್ಪಿಕೊಳ್ಳಬಾರದು. ನಾವು ಕೈಗೆತ್ತಿಕೊಂಡ ಕಾರ್ಯ ಎಷ್ಟೇ ಸಣ್ಣದಾಗಿರಲಿ, ದೊಡ್ಡದಾಗಿರಲಿ, ಪರಿಪೂರ್ಣತೆ ಸಾಧಿಸಲು ಪ್ರಯತ್ನಿಸಬೇಕು. ನಮ್ಮ ಸಂಪೂರ್ಣ ಪ್ರಯತ್ನವನ್ನು ತೊಡಗಿಸಬೇಕು. ಯಾವತ್ತೂ ಒಂದನೇ ಸ್ಥಾನಕ್ಕಾಗಿಯೇ ಯೋಚಿಸಬೇಕು ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ನಾವು ಏನೇ ಮಾಡಿದರೂ ಅದರ ಪ್ರಯೋಜನ ನಮ್ಮೊಬ್ಬರಿಗೆಮಾತ್ರ ಅಲ್ಲ, ಬಹುಪಾಲು ಜನರಿಗೆ, ಸಮಾಜಕ್ಕೆ ಸಿಗುವಂತಿರಬೇಕು. ನ್ಯಾಯಯುತ ಮತ್ತು ಪ್ರಾಮಾಣಿಕ ಮಾರ್ಗದಲ್ಲಿಯೇ ನಮ್ಮ ಸಾಧನೆ ಇರಬೇಕು.
ಉತ್ತಮ ಮಾನವೀಯ ಸಂಬಂಧಗಳು ಸದಾ ನಮಗೆ ವೈಯಕ್ತಿಕವಾಗಿ ಅತ್ಯಂತ ಖುಷಿ ಮತ್ತು ಸಮಾಧಾನವನ್ನು ತರುತ್ತವೆ. ಯಾವುದೇ ಉದ್ಯೋಗ ಯಶಸ್ವಿ ಯಾಗಲು ಇದು ಬಹಳ ಮುಖ್ಯ.
ನಿಮ್ಮ ವಿಧೇಯಜೆ.ಆರ್.ಡಿ.ಟಾಟಾ
ಪ್ರಾಯಶಃ ಇಷ್ಟು ಸರಳವಾಗಿ ಮತ್ತು ಇದಕ್ಕಿಂತ ಪರಿಣಾಮಕಾರಿಯಾಗಿ ಟಾಟಾ ಸಂಸ್ಥೆಯಂಥ ಬೃಹತ್ ಉದ್ಯೋಗ ಸಾಮ್ರಾಜ್ಯದ ಕರ್ಮ ಸಿದ್ಧಾಂತವನ್ನು ಹೇಳಲು ಸಾಧ್ಯವೇ ಇಲ್ಲವೇನೋ. ಆದರೆ ಜೆಆರ್‌ಡಿ ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಹೇಳಿದ್ದರು.
ಒಬ್ಬ ಕ್ರಿಕೆಟ್ ಕಾಮೆಂಟರಿಕಾರನ ಕುರಿತುಎ.ಎಫ್.ಎಸ್.ಟಿ!
ಹೀಗೆಂದರೆ ನನ್ನ ವಾರಿಗೆಯ ಕ್ರಿಕೆಟ್ ಪ್ರೇಮಿಗಳಿಗೆ ಏನೆಂದು ತಕ್ಷಣ ಅರ್ಥವಾಗುತ್ತದೆ. ಅದರಲ್ಲೂ ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುವ ಜಮಾನ ದವರಿಗೆ ಅರ್ಥವಾಗುತ್ತದೆ. ಈಗಿನ ಕಾಲ ದವರಿಗೆ ಇಂಗ್ಲಿಷ್ ವರ್ಣಮಾಲೆಯ ಕೆಲವು ಅಕ್ಷರಗಳಷ್ಟೇ.
ಎಎಫ್ಎಸ್‌ಟಿ ಅಂದರೆ ಅರ್ದೆರ್ಶಿ ಫುರ್ದೊರ್ಜಿ ಸೋಹ್ರಾಬ್ಜಿ ‘ಬಾಬಿ’ ತಲ್ಯಾರಖಾನ್! ಇವರು ಭಾರತ ಕಂಡ ಅತ್ಯುತ್ತಮ ಕ್ರಿಕೆಟ್ ಕಾಮೆಂಟರಿಕಾರರಬ್ಬರು. ದೇಶದಲ್ಲಿ ರೇಡಿಯೋ ಕಾಮೆಂಟರಿ ಯುಗ ಆರಂಭವಾದಾಗ ತಲ್ಯಾರಖಾನ್ ಮುಂಚೂಣಿಯಲ್ಲಿದ್ದವರು. ನಂತರ ರೇಡಿಯೋ ಕಾಮೆಂಟರಿ ಮೂಲಕ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಿದವರು. ನಾನು ಚಿಕ್ಕವನಿದ್ದಾಗ, ಟ್ರಾನ್ಸಿಸ್ಟರ್‌ಗೆ ಕಿವಿ ಹಚ್ಚಿ ಕುಳಿತುಕೊಂಡು ಟೆಸ್ಟ್ ಪಂದ್ಯಗಳ ಕಾಮೆಂಟರಿಯನ್ನು ಕೇಳುತ್ತಿದ್ದೆ. ಆಗ ಇಂಗ್ಲಿಷ್ ಸರಿಯಾಗಿ ಅರ್ಥವಾಗುತ್ತಿರಲಿಲ್ಲ.
ಆದರೆ ತಲ್ಯಾರಖಾನ್ ಹೇಳುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಅಷ್ಟೇ ಅಲ್ಲ, ಕೇಳಲೇಬೇಕು ಎನಿಸುತ್ತಿತ್ತು. ಒಂದು ರೀತಿಯಲ್ಲಿ, ನಾನು ಕ್ರಿಕೆಟ್ ಮತ್ತು ಇಂಗ್ಲಿಷ್ ಎರಡನ್ನೂ ಅರ್ಥ ಮಾಡಿಕೊಳ್ಳುವುದರಲ್ಲಿ, ಅವೆರಡರಲ್ಲೂ ಆಸಕ್ತಿ ಬೆಳೆಸಿಕೊಳ್ಳುವುದರಲ್ಲಿ ಇಂಗ್ಲಿಷ್ ಕಾಮೆಂಟರಿಕಾರರ ಕೊಡುಗೆ ಸಣ್ಣದಲ್ಲ.
1934ರಲ್ಲಿಯೇ ತಲ್ಯಾರಖಾನ್ ಕ್ರಿಕೆಟ್ ವೀಕ್ಷಕ ವಿವರಣೆ ಹೇಳಲು ಆರಂಭಿಸಿದವರು. ಆ ದಿನಗಳಲ್ಲಿ ಬಾಂಬೇ ಜಿಮಖಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಗಳ ಕಾಮೆಂಟರಿ ಹೇಳಲು ತಲ್ಯಾರಖಾನ್ ಇರಲೇಬೇಕಿತ್ತು. ಬ್ರಿಟಿಷರೂ ಅವರ ಕಾಮೆಂಟರಿಗಳನ್ನು ಇಷ್ಟಪಡುತ್ತಿದ್ದರು. ಕಾರಣ ಅವರಿಗೆ ಇಂಗ್ಲಿಷ್ ಭಾಷೆ ಮೇಲೆ ಒಳ್ಳೆಯ ಹಿಡಿತವಿತ್ತು, ಬಾನುಲಿಗೆ ಆಪ್ತವಾಗುವ ಕಂಠವಿತ್ತು. ಕ್ರಿಕೆಟ್ ಆಟದ ಜ್ಞಾನವೂ ಇತ್ತು. ಹೀಗಾಗಿ ತಲ್ಯಾರಖಾನ್ ಬಹುಬೇಗ ಜನಪ್ರಿಯರಾದರು.
ತಲ್ಯಾರಖಾನ್ ದಿನವಿಡೀ ಒಬ್ಬರೇ ಕಾಮೆಂಟರಿ ಹೇಳುತ್ತಿದ್ದರು. ಕ್ರಿಕೆಟ್ ಮೈದಾನದಾಚಿನ ಕುತೂಹಲಕರ ಪ್ರಸಂಗಗಳನ್ನು ಹೇಳುತ್ತಿದ್ದರು. ಅಲ್ಲದೇ ಅವರಿಗೆ ಪ್ರತಿಯೊಬ್ಬ ಆಟಗಾರರ ಜತೆ ವೈಯಕ್ತಿಕ ಒಡನಾಟವಿತ್ತು. ಆಯಾ ಸಂದರ್ಭಕ್ಕೆ ನೆರವಾಗುವ ವೈಯಕ್ತಿಕ ಪ್ರಸಂಗಗಳನ್ನು ಅವರು ಹೇಳುತ್ತಿದ್ದರು. ಇದು ಆಟಗಾ ರರನ್ನು ಅರಿಯಲು ಕ್ರಿಕೆಟ್ ಪ್ರೇಮಿಗಳಿಗೆ ನೆರವಾಗುತ್ತಿತ್ತು. ಪಂದ್ಯ ಆರಂಭವಾದಂದಿನಿಂದ, ಮುಗಿಯುವವರೆಗೂ ಒಬ್ಬರೇ ಕಾಮೆಂಟರಿ ಹೇಳುತ್ತಿದ್ದ ತಲ್ಯಾರ ಖಾನ್ ಅವರಿಗೆ ದಣಿವೆಂಬುದೇ ಇರಲಿಲ್ಲ. ಎಲ್ಲಿಯೇ ಕ್ರಿಕೆಟ್ ಪಂದ್ಯ ನಡೆದರೂ ತಲ್ಯಾರಖಾನ್ ಆಕಾಶವಾಣಿಗೆ ಕಾಮೆಂಟರಿ ಹೇಳುತ್ತಿದ್ದರು. ಆ ದಿನಗಳಲ್ಲಿಇವರಿಗೆ ಸ್ಟಾರ್ ಪಟ್ಟ ಸಿಕ್ಕಿತ್ತು. ಮರ್ಫಿ ರೇಡಿಯೋ ಕಂಪನಿ ತಲ್ಯಾರಖಾನ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು.
ಒಬ್ಬ ವೀಕ್ಷಕ ವಿವರಣೆಕಾರರ ಬದಲು ಮೂವರನ್ನು ನೇಮಿಸಿ, ಒಬ್ಬರ ಏಕತಾನತೆಯನ್ನು ಮುರಿಯಲು ಆಕಾಶವಾಣಿ ನಿರ್ಧರಿಸಿತು. ಇದನ್ನು ತಲ್ಯಾರಖಾನ್ ವಿರೋಧಿಸಿದರು. ಕಾರಣ ಅವರು ಬೇರೆಯವರ ಜತೆ ಮೈಕ್ರೊಫೋನ್ ಹಂಚಿಕೊಳ್ಳುತ್ತಿರಲಿಲ್ಲ. ತಮ್ಮ ಜತೆ ಬೇರೆಯವರು ಕಾಮೆಂಟರಿ ಹೇಳುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ಈ ಷರತ್ತಿಗೆ ಆಕಾಶವಾಣಿ ಒಪ್ಪಲಿಲ್ಲ. ಆದರೂ ಅವರನ್ನು ಪ್ರಮುಖ ಪಂದ್ಯಗಳಲ್ಲಿ ವಿಶೇಷ ವೀಕ್ಷಕ ವಿವರಣಕಾರರಾಗಿ ಆಮಂತ್ರಿಸಿದಾಗ, ಅವರು ಇಲ್ಲ ಎನ್ನುತ್ತಿರಲಿಲ್ಲ.
ಕಾಮೆಂಟರಿ ಹೇಳುವುದನ್ನು ಬಿಟ್ಟ ಬಳಿಕ ಅವರು ಮುಂಬಯಿಯಿಂದ ಪ್ರಕಟವಾಗುವ ‘ಮಿಡ್ ಡೇ’ ಪತ್ರಿಕೆಗೆ ಕ್ರಿಕೆಟ್ ವರದಿ ಮತ್ತು ಅಂಕಣಗಳನ್ನು ಬರೆಯಲಾ ರಂಭಿಸಿದರು. ಅಲ್ಲಿಯೂ ಅವರು ತಮ್ಮದೇ ಛಾಪನ್ನು ಒತ್ತಿದರು. ತಲ್ಯಾರಖಾನ್ ನಿಧನರಾಗುವುದಕ್ಕಿಂತ ಎರಡು ತಿಂಗಳ ಮುಂಚೆ, ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಪತ್ರಿಕೆ ತಲ್ಯಾರಖಾನ್ ಕುರಿತು ಮುಖಪುಟ ಲೇಖನ ಪ್ರಕಟಿಸಿತ್ತು. ಕವರ್‌ ಪೇಜಿನಲ್ಲಿ :  94,   ’     ಎಂದು ಬರೆಯಲಾಗಿತ್ತು. ಇತ್ತೀಚೆಗೆ ನನ್ನ ಹಳೆ ಪತ್ರಿಕೆಗಳ ಕಡತ ನೋಡುವಾಗ, ಈ ಸಂಚಿಕೆ ಸಿಕ್ಕಿತು. ಆ ಮಹಾನುಭಾವನ ನೆನಪಾಯಿತು.
ಅವಳೆಂಥ ಸುಳ್ಳುಬುರುಕಿ ಅಂದ್ರೆ‘ದಿ ಗ್ರುಪ್’ ಎಂಬ ಕೃತಿಯಿಂದ ಜನಪ್ರಿಯಳಾದ, ಅಮೆರಿಕದ ಖ್ಯಾತ ಕಾದಂಬರಿಕಾರ್ತಿ ಮತ್ತು ವಿಮರ್ಶಕಿ ಮೇರಿ ಮ್ಯಾಕ್ ಕಾರ್ತಿ ಹೆಸರನ್ನು ಕೇಳಿರಬಹುದು. ವಿಮರ್ಶೆಯಲ್ಲಿ ಕುಟುಕುವುದರಲ್ಲಿ ಆಕೆಯದು ಎತ್ತಿದ ಕೈ. ಆಕೆ ಅತ್ಯಂತ ತೀಕ್ಷ್ಣವಾಗಿ ಕಾಲೆಳೆಯುತ್ತಿದ್ದಳು. ಅವಳ ವಿಮರ್ಶೆಯನ್ನು ಓದುವುದೆಂದರೆ ಸಾಹಿತ್ಯಾಸಕ್ತ ರಿಗೆ ರಸಗವಳ. ಒಮ್ಮೆ ಅಮೆರಿಕದ ಮತ್ತೊಬ್ಬ ಸಾಹಿತಿ ಲಿಲಿಯನ್ ಹೆಲ್ ಮನ್ ತನ್ನ ಕೃತಿಯೊಂದರಲ್ಲಿ ಬರೀ ಸುಳ್ಳುಗಳನ್ನೇ ಬರೆದಿದ್ದಾಳೆ ಎಂದು ಮೇರಿ ಮ್ಯಾಕ್ ಕಾರ್ತಿ ಆರೋಪಿಸಿದ್ದಳು. ಇದು ಸಾಹಿತ್ಯಸಾಕ್ತರಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
ಒಂದೆಡೆ ಮೇರಿ ಮ್ಯಾಕ್ ಕಾರ್ತಿ , ಲಿಲಿಯನ್ ಹೆಲ್ ಮನ್ ಕುರಿತು ತನ್ನ ಮಾತನ್ನು ಸಮರ್ಥಿಸಿಕೊಳ್ಳಲು ಹೀಗೆ ಬರೆದಿದ್ದಳು –       ,  ‘’  ‘’.. ಹಾಗೆ ಮತ್ತೊಂದೆಡೆ,    .   ಎಂದು ಮ್ಯಾಕ್ ಕಾರ್ತಿ ಬರೆದಿದ್ದಳು. ಬಿಟ್ಟು ಹೋದ ಸಂಗತಿ ಓದುಗರು ಅದೆಂಥ ಸೂಕ್ಷ್ಮಮತಿಗಳೆಂದರೆ, ಪತ್ರಿಕೆಯಲ್ಲಿ ಪ್ರಕಟವಾಗುವ ಸಣ್ಣ ಸಣ್ಣ ಸಂಗತಿಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಾರೆ. ಈ ವರ್ಷದ ಜುಲೈ/ಆಗಸ್ಟ ತಿಂಗಳ ‘ರೀಡರ್ಸ್ ಡೈಜೆಸ್ಟ್’ (ಅಮೆರಿಕ ಆವೃತ್ತಿ) ಸಂಚಿಕೆಯಲ್ಲಿ ಅಮೆರಿಕದ ಪೋಸ್ಟಲ್ ಸರ್ವಿಸ್ ಬಗ್ಗೆ ಸುದೀರ್ಘ ಲೇಖನ ಪ್ರಕಟಿಸಿತ್ತು.
ಅದರಲ್ಲಿ, ಅಂಚೆ ಇಲಾಖೆಯವರ ಕಾರ್ಯದಕ್ಷತೆಯನ್ನು ಬಣ್ಣಿಸುತ್ತ, ‘ಅಮೆರಿಕದ ಯಾವ ಮೂಲೆಯಲ್ಲಿಯೇ ನೆಲೆಸಿರಲಿ, ಅಂಚೆ ಇಲಾಖೆ ಪತ್ರವನ್ನು ತಲುಪಿ ಸುತ್ತದೆ. ಮರವೇರಿ ಕುಳಿತಿರಲಿ, ಪರ್ವತದ ತುದಿಯಲ್ಲಿ ಮನೆ ಮಾಡಿರಲಿ, ಹಿಮ ಆರಿಸಿದ ಪ್ರದೇಶಗಳಲ್ಲಿ ವಾಸಿಸುತ್ತಿರಲಿ, ಅಲ್ಲಿಗೆಲ್ಲ ಕಾರು, ಟ್ರಕ್, ಬಸ್, ರೈಲು, ವಿಮಾನ, ಸ್ಕೀ, ದೋಣಿ, ಹಡಗು, ಸ್ಟೇಜ್ ಕೋಚ್, ರೋಲರ್ ಸ್ಕೇಟ್, ಮೋಟಾರ್ ಬೈಕ್, ಸೆಗ್ ವೇ, ಟೊಬೊಗ್ಗನ್ ಮೂಲಕ ಪತ್ರಗಳನ್ನು ಬಟವಾಡೆ ಮಾಡುತ್ತದೆ’ ಎಂದು ಬರೆದಿತ್ತು.
ಇದನ್ನು ಗಮನಿಸಿದ ಓದುಗರೊಬ್ಬರು, ‘ಅಮೆರಿಕ ಅಂಚೆ ಸೇವೆ ಬಗ್ಗೆ ಬಹಳ ಉತ್ತಮ ಮಾಹಿತಿ ನೀಡಿದ್ದೀರಿ. ಯಾವ ಯಾವ ವಿಧಾನಗಳ ಮೂಲಕ ಅಂಚೆ ವಿತರಿಸಲಾಗುತ್ತದೆ ಎಂಬ ವಿವರವನ್ನೂ ನೀಡಿದ್ದೀರಿ. ಆದರೆ ಮಾಹಿತಿ ಬಿಟ್ಟಿದ್ದೀರಿ. ಅದೇನೆಂದರೆ, ಸೈಕಲ್ ಮೂಲಕ ಪತ್ರಗಳನ್ನು ವಿತರಿಸಲಾಗುತ್ತದೆ ಎಂಬುದನ್ನು ಮಾತ್ರ ಬರೆದಿಲ್ಲ’ ಎಂದು ಬರೆದಿದ್ದರು. ಇದರ ಜತೆಗೆ, ‘ಅಮೆರಿಕದ ಫ್ಲೋರಿಡಾದ ಸೇಂಟ್ ಪೀಟರ್ಸ್ ಬರ್ಗ್ ನಗರದಲ್ಲಿ ಇಂದಿಗೂ ಪೋಸ್ಟ್ ಮನ್ ಸೈಕಲಿನಲ್ಲಿ ಬಂದು ಪತ್ರ ವಿತರಿಸುತ್ತಾನೆ’ ಎಂದು ಆ ಓದುಗರು ಬರೆದಿದ್ದರು.
ನೆಗೆಟಿವ್ – ಪಾಸಿಟಿವ್ಖ್ಯಾತ ಮನೋವೈಜ್ಞಾನಿಕ ಲೇಖಕ ಡಾ. ಜೋಸೆಫ್ ಮರ್ಫಿ ನಕಾರಾತ್ಮಕ ಚಿಂತನೆಯನ್ನು ಸಕಾರಾತ್ಮಕವಾಗಿಸುವುದು ಹೇಗೆ ಎಂಬುದನ್ನು ಸರಳವಾಗಿ ಹೇಳಿzನೆ. ನನಗೆ ಈ ವಸ್ತುವನ್ನು ಖರೀದಿಸಲು ಹಣವಿಲ್ಲ ಎಂಬ ಮಾತನ್ನು ನಿಮ್ಮ ಮನಸ್ಸಿಗೆ ನೀವು ಪದೇ ಪದೆ ಹೇಳುತ್ತಲೇ ಇದ್ದರೆ, ನಿಮ್ಮೊಳಗಿನ ಸುಪ್ತ ಮನಸ್ಸುಅದನ್ನು ಒಪ್ಪಿಕೊಂಡು ಬಿಡುತ್ತದೆ. ಆಗ ಅದು ನಿಮ್ಮ ಮನಸ್ಸಿಗೆ ಸಮಾಧಾನವನ್ನು ಹೇಳುತ್ತಲೇ ನಿಮ್ಮ ಆಸೆ ಆಕಾಂಕ್ಷೆಗಳನ್ನು ಹತೋಟಿಯಲ್ಲಿಡುತ್ತದೆ.
ನೀವು ಎಷ್ಟು ಬಾರಿ ನಿಮ್ಮ ಮನಸ್ಸಿಗೆ ಇಂತಹ ಆದೇಶಗಳನ್ನು ಕೊಡುತ್ತಲೇ ಇರುತ್ತೀರೋ ಅಲ್ಲಿಯವರೆಗೂ ಅದು ನಿಮ್ಮ ಮನದ ಮಾತನ್ನು ಕೇಳುತ್ತದೆ. ನಿಮ್ಮ ಪ್ರವೃತ್ತಿ ಇದೇ ಆದಾಗ ನೀವು ಜೀವನದಲ್ಲಿ ಏನನ್ನೂ ಖರೀದಿಸಲಾಗುವುದಿಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ನಿಮಗೆ ಏನನ್ನೂ ಖರೀದಿಸಲಾಗಿಲ್ಲ ಎಂದು ನೀವು ಭಾವಿಸುತ್ತೀರಿ. ಆಗ ನಿಮ್ಮ ಅಸಹಾಯಕತೆಯನ್ನು ಒಪ್ಪಿಕೊಳ್ಳುತ್ತೀರಿ. ಅದನ್ನು ಖರೀದಿಸದೇ ಇರುವುದು ಹೇಗೆ ಎಂದು ಯೋಚಿಸಲಾರಂಭಿಸುತ್ತೀರಿ.
ಯಾವತ್ತೂ ಕೂಡ ನಕಾರಾತ್ಮಕ ಚಿಂತನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬಾರದು. ನಿಮ್ಮ ಸಾಧ್ಯತೆಯ ಅವಕಾಶಗಳಿಗೆ ಗಡಿ ಹಾಕಿಕೊಳ್ಳಬಾರದು. ಅದನ್ನು ಕೂಡಲೇ ಬದಲಾಯಿಸಿ ಸಕಾರಾತ್ಮಕವಾಗಿಸಿಕೊಳ್ಳುವುದು ಹೇಗೆ ಎಂದು ಯೋಚಿಸಬೇಕು. ನಿಮ್ಮ ಜೀವನದಲ್ಲಿ ಚಮತ್ಕಾರ ಘಟಿಸಿಬಿಡುತ್ತದೆ. ಈ ಜನ್ಮದಲ್ಲಿ ಇವೆಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸುವುದು ನಿಮ್ಮ ಮಿತಿ ಮತ್ತು ಸೋಲನ್ನು ಒಪ್ಪಿಕೊಂಡಂತೆ.
ನಿಮ್ಮ ಸುಪ್ತ ಮನಸ್ಸಿನಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ನೀವು ಅದನ್ನು ಪಳಗಿಸಿಕೊಳ್ಳುವ ಶಕ್ತಿಯನ್ನು ನಿಮ್ಮದಾಗಿಸಿಕೊಳ್ಳಬೇಕು. ಆಗ ನೀವು ಬದುಕಿನಲ್ಲಿ ಗೆಲುವು ಕಾಣುತ್ತೀರಿ. ನಿಮ್ಮೊಳಗೆ ಸುಪ್ತವಾಗಿರುವ ಚೇತನ, ಬುದ್ಧಿಮತ್ತೆ ಕೆಲಸ ಮಾಡುತ್ತದೆ. ಹೊಸ ಹೊಸ ವಿಚಾರಗಳನ್ನು ನೀವು ಗ್ರಹಿಸಿ ಅದನ್ನು ಸಾಕಾರಗೊಳಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಹೊಸ ಆವಿಷ್ಕಾರಗಳು ನಿಮ್ಮಿಂದ ಸಾಧ್ಯವಾಗುತ್ತವೆ. ಇವೆಲ್ಲವೂ ಆಗಬೇಕಾದರೆ, ಇರಬೇಕಾದಪ್ರಮುಖ ಸಂಗತಿಯೆಂದರೆ, ಅದು ಸಕಾರಾತ್ಮಕ ಚಿಂತನೆ.
ಒಬ್ಬನ ಮುಖದಲ್ಲಿ ನಗೆ ಮೂಡಿಸಿ
ಇತ್ತೀಚೆಗೆ ಜೀವನ ಕಲೆ ಕಲಿಸುವ ರಾಬಿನ್ ಶರ್ಮ ಅವರ ಮಾತುಗಳನ್ನು ಕೇಳುತ್ತಿದ್ದೆ – ನಾನಿನ್ನೂ ಬೆಳವಣಿಗೆಯ ಹಂತದಲ್ಲಿದ್ದಾಗ, ನನ್ನ ತಂದೆ ಹೇಳಿದ ಮಾತನ್ನು ನಾನಿನ್ನೂ ಮರೆತಿಲ್ಲ. ’ಮಗನೇ ನೀನು ಹುಟ್ಟಿದಾಗ ಅಳುತ್ತಿದ್ದೆ, ಆದರೆ ನಿನ್ನ ಸುತ್ತ ಇದ್ದ ಜನರೆಲ್ಲ ಸಂಭ್ರಮಿಸುತ್ತಿದ್ದರು. ನೀನು ಸಾಯುವಾಗ ನಿನ್ನನ್ನು ನೆನೆದು ಎಲ್ಲರೂ ಅಳಬೇಕು, ಆದರೆ ನೀನು ಸಾವನ್ನು ಸಂಭ್ರಮಿಸಬೇಕು. ಆ ರೀತಿಯ ಬೆಳವಣಿಗೆ ನಿನ್ನದಾಗಬೇಕು’ ಎಂದು ಅವರು ಹೇಳಿದ್ದರು.
ಇಂದು ನಾವು ಬದುಕುತ್ತಿರುವ ಕಾಲಘಟ್ಟದಲ್ಲಿ, ನಮ್ಮ ಬದುಕಿನ ಉದ್ದೇಶ ಮತ್ತು ಅರ್ಥವೇನೆಂಬುದೇ ನಮಗೆಲ್ಲ ಮರೆತು ಹೋದಂತಿದೆ. ನಾವು ಚಂದ್ರ ಮತ್ತು ಮಂಗಳನ ಅಂಗಳಕ್ಕೆ ಮಾನವನನ್ನು ಕಳಿಸಲು ಶಕ್ತರಾಗಿದ್ದೇವೆ. ಆದರೆ ರಸ್ತೆಯನ್ನು ದಾಟಿ ಇನ್ನೊಂದು ಪಕ್ಕದಲ್ಲಿರುವ ನಮ್ಮ ಮಿತ್ರನನ್ನು ಮಾತನಾಡಿಸಲು ಆಗದೇ ಪರದಾಡುತ್ತೇವೆ.
ನಮ್ಮ ಬಳಿ ಇಮೇಲ್, ಫ್ಯಾಕ್ಸ್ ಮಶೀನ್, ಡಿಜಿಟಲ್ ಫೋನ್ ಸೇರಿದಂತೆ ಎಲ್ಲ ಅನುಕೂಲಗಳಿವೆ ಮತ್ತು ನಾವು ಅವುಗಳೊಂದಿಗೇ ಬಹಳ ಕಾಲ ಕಳೆಯುತ್ತೇವೆ. ನಮ್ಮ ಆಪ್ತರೊಂದಿಗೆ ಕಾಲ ಕಳೆಯಲು ನಮಗೆ ಆಸ್ಪದವೇ ಸಿಗುತ್ತಿಲ್ಲ. ನೀವು ಪ್ರತಿದಿನ ಒಬ್ಬ ಪರಿಚಿತ ಅಥವಾ ಅಪರಿಚಿತನ ಮುಖದಲ್ಲಿ ಮಂದಹಾಸ ಮೂಡು ವಂತಹ ಕೆಲಸ ಮಾಡುವುದು ಸಾಧ್ಯವಾದರೆ, ನಿಮ್ಮ ಪಾಲಿಗೆ ಆ ದಿನ ಉಪಯುಕ್ತ ಎಂದು ಭಾವಿಸಬಹುದು. ಇದರಿಂದ ಸಿಗುವ ಸಮಾಧಾನ ಕಮ್ಮಿಯಲ್ಲ.